ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪ್ರೀತಿ,ತ್ಯಾಗ ಹಾಗು ನಂಬಿಕೆಯ ಇನ್ನೊಂದು ರೂಪ ಅಪ್ಪ

ಸುಮಾ ವೀಣಾ

ಜಗತ್ತಿನಲ್ಲಿ ತಂದೆ ಹಾಗು ತಾಯಿಗೆ ಸಮಾನ ಗೌರವವಿರುವುದರಿಂದಲೇ ಭೂಮಿಯನ್ನು ತಾಯಿಗೆ ಹೋಲಿಸಿ ತಂದೆಯನ್ನು ಆಕಾಶಕ್ಕೆ ಹೋಲಿಸಿರುವುದು.ಹಾಗೆ ಮಾತೃದೇವೋಭವ, ಪಿತೃದೇವೋಭವ ಎಂದು ದೈವತ್ವಕ್ಕೆ ಏರಿಸಿರುವುದು. ಅಪ್ಪನ ದುಡ್ಡು ಎಣಿಸೋಕಾಗಲ್ಲ  ಅಮ್ಮನ ಸೀರೆ ಮಡಿಚೋಕಾಗಲ್ಲ ಎಂಬ ಒಗಟಿಗೆ ಉತ್ತರ ಭೂಮಿ(ರಸ್ತೆ), ಆಕಾಶ (ನಕ್ಷತ್ರ) ಇಲ್ಲಿಯೂ ಅಪ್ಪ ಅಮ್ಮ ಭಾನು ಹಾಗು ಭುವಿಗೆ ಹೋಲಿಸಲ್ಪಟ್ಟಿದ್ದಾರೆ. ಹಾಗಾಗಿ ಜಗತ್ತಿನ ತಾಯಿ-ತಂದೆಯೆಂದರೆ ಸೀತಾ ಮಾತೆ ಮತ್ತು  ಶ್ರೀರಾಮ ಅಂತೆಯೇ ಆಡಮ್ ಮತ್ತು ಈವ್‍ಗೂ ಇದೇ ಸ್ಥಾನವಿದೆ. ಅರ್ಥಾತ್ ಅಮ್ಮ ಅಪ್ಪ ಇಬ್ಬರೂ ಒಂದೇ ನಾಣ್ಯದ ಎರಡು ಮುಖಗಳು ಎಂದಲ್ಲವೇ? ಅಮ್ಮ ಮನಸ್ಸಿನಿಂದ ಮಾತನಾಡುತ್ತಾಳೆ ಹಾಗಾಗಿ ಆಕೆ  ಮಕ್ಕಳ ಪಾಲಿಗೆ ತುಂಬಾ ಸಾಫ್ಟ್. ಅಪ್ಪ ಬುದ್ಧಿಯಿಂದ ಸ್ವಲ್ಪ ಖಾರವಾಗಿ ಮಾತನಾಡುತ್ತಾನೆ  ಹಾಗಾಗಿ ಅಪ್ಪ  ಕೆಲವು ಮಕ್ಕಳ ಪಾಲಿಗೆ ಸ್ವಲ್ಪ ಕಿರಿಕಿರಿ, ಸ್ವಲ್ಪ ವಿಲನಿಷ್. ಆದರೆ ಈ ಮಕ್ಕಳ ಭಾವನೆ ತುಂಬಾ ತಪ್ಪು. ಮಾತುಗಳು ಅಪ್ಪ ಅಮ್ಮನಿಂದ ಹೇಗೇ ಬರಲಿ ಇಬ್ಬರ ಉದ್ದೇಶ ಮಕ್ಕಳ ಏಳಿಗೆ ಮಾತ್ರವಾಗಿರುತ್ತದೆ.

   ಅಪ್ಪನ ಪ್ರಭಾವದಿಂದ ಮಕ್ಕಳ  ಆತ್ಮಗೌರವ, ಆತ್ಮವಿಶ್ವಾಸ ಎರಡೂ ಬೆಳೆಯುತ್ತವೆ. ಅದರಲ್ಲೂ ಹೆಣ್ಣು ಮಕ್ಕಳಿಗಂತೂ ಪುರುಷರ ಮೇಲಿನ ಅಭಿಪ್ರಾಯಗಳು ತಂದೆಯ ನಡವಳಿಕೆಯನ್ನೇ ಅವಲಂಬಿಸಿರುತ್ತವೆ. ಅಪ್ಪ ಮಕ್ಕಳಿಗೆ ಬುದ್ಧಿವಾದ ಹೇಳುವಾಗ ಆ ನಿಷ್ಠುರ ಮಾತಿನಲ್ಲಿ ಮಕ್ಕಳ ಕುರಿತಾದ ತಲ್ಲಣಗಳು ಆತಂಕಗಳು ಗೋಚರವಾಗುತ್ತವೆ. ಮಕ್ಕಳ ಪಾಲಿಗೆ ನಿಜವಾದ ಹೀರೋಗಳೆಂದರೆ ಅವರ ಅಪ್ಪಂದಿರೆ.ಮಕ್ಕಳ ಪಾಲನೆ, ವಿದ್ಯಾಭ್ಯಾಸ,ಅವರ ಉದ್ಯೋಗ, ಮದುವೆ , ಮಕ್ಕಳು ಇತ್ಯಾದಿಗಳ ಬಗ್ಗೆ ಅವರ ಯೋಚನೆ ನಟ್ಟಿರುತ್ತದೆ. ಅಮ್ಮನ ಅನುಪಸ್ಥಿತಿಯಲ್ಲಿ ಅಮ್ಮನಾಗಿಯೂ ಆರೈಕೆ ಮಾಡಿ, ಗುರುವಾಗಿ, ವಿಜ್ಞಾನಿಯಾಗಿ, ಲೆಕ್ಕಿಗನಾಗಿ,ರಾಜ ಮಂತ್ರಿ ಸೇವಕನಾಗಿ ಮಕ್ಕಳನ್ನು ಸಾಕುತ್ತಾನೆ.ಅಮ್ಮನಿಂದ ಹುಟ್ಟನ್ನು ಪಡೆದ ನಂತರ ಆ ಜೀವದ ಕನಸು ಸಾಕಾರಗೊಳ್ಳುವುದು ಅಪ್ಪನ ಪರಿಶ್ರಮದಿಂದ.

             ಎಳೆ ಮಕ್ಕಳಿಗೆ ಯಾರಾದರೂ ಏನಾದರು ಹೇಳಿದರೆ “ನಮ್ಮಪ್ಪನಿಗೆ ಹೇಳುತ್ತೇನೆ, ನಮ್ಮಪ್ಪನ ಕರೆದುಕೊಂದು ಬರುತ್ತೇನೆ,”  ಇತ್ಯಾದಿ ಇತ್ಯಾದಿ ಹೇಳುತ್ತಾರೆ ಕಾರಣ ನಮ್ಮಪ್ಪ ಎಲ್ಲರಿಗಿಂತ ಸ್ಟ್ರಾಂಗ್ ಎಂದು ನಂಬಿರುತ್ತಾರೆ. “ಅಪ್ಪನ ಇನ್ನೊಂದು ಹೆಸರೇ ನಂಬಿಕೆ. ಅದರಲ್ಲೂ ಹೆಣ್ಣು ಮಕ್ಕಳ ಮೇಲೆ ಅಪ್ಪಂದಿರಿಗೆ ವಿಶೇಷ ಅಕ್ಕರೆ ಹಾಗೆ  ಹೆಣ್ಣು ಮಕ್ಕಳಿಗೂ ಅಪ್ಪಂದಿರನ್ನು ಕುರಿತು ವಿಶೇಷ ಪ್ರೀತಿ ಕಾಳಜಿ ಎಲ್ಲವೂ ಒಂದು ಮುಷ್ಟಿ ಹೆಚ್ಚೇ ಇರುತ್ತದೆ. ಕೆಲವೊಮ್ಮೆ ಅತ್ತಿಗೆ ನಾದಿನಿಯಂದಿರು ಉರಿದು ಉಪ್ಪಾಗುವುದು ಇದೇ ಅಪ್ಪ ಮಗಳ ಬಾಂಧವ್ಯದಿಂದ. ನನ್ನೊಬ್ಬ ಗೆಳತಿ ಇತ್ತೀಚೆಗೆ ಭೇಟಿಯಾದಾಗ “ನಮ್ಮಪ್ಪ ಗ್ರೇಟ್  ನಾವು ನಾಲ್ಕು  ಜನ ಅಕ್ಕ-ತಂಗಿಯರು ನಮ್ಮನ್ನು ನೋಡಿ ಒಂದೇ ಒಂದು ದಿನಾನೂ ನನಗೆ ಒಬ್ಬ ಗಂಡು ಮಗ ಇರಬೇಕಿತ್ತು ಎಂದು ಅಂದುಕೊಳ್ಳಲಿಲ್ಲ. ನಮಗೆಲ್ಲಾ ಗಂಡು ಮಕ್ಕಳ ಸ್ಥಾನ ಕೊಟ್ಟಿದ್ದರು, ಒಬ್ಬೊಬ್ಬ ಹೆಣ್ಣುಮಗಳು ಮದುವೆಯಾಗಿ ಹೋದಾಗಲೂ ಜವಾಬ್ದಾರಿ ಕಳೆಯಿತು ಅಂತ ನಿಟ್ಟುಸಿರು ಬಿಡಲಿಲ್ಲ. ಬದಲಿಗೆ ಇನ್ನು ಮುಂದೆ ಮಕ್ಕಳು ಹೇಗೆ ಹೊಂದಿಕೊಳ್ಳತ್ತಾರೋ ಎಂದು ಆತಂಕ ಪಡುತ್ತ ಇದ್ದರು ಈಗವರಿಲ್ಲ” ಎಂದು ಅವರಪ್ಪನನ್ನು ನೆನೆದು ಕಣ್ತುಂಬಿಕೊಂಡಳು. ಆಕೆ ಹೇಳಿದ್ದು ಸರಿ!   ಅಂಥ ಅನುಬಂಧ ಅಪ್ಪ ಮಗಳ ನಡುವೆ ಇರುತ್ತದೆ. 

ಇತ್ತೀಚೆಗೆ ವೃತ್ತಪತ್ರಿಕೆ ಓದುತ್ತಿದ್ದಾಗ “ಮಗಳ ಕನ್ಯಾದಾನ ಒಪ್ಪದ ಅಪ್ಪ” ಶೀರ್ಷಿಕೆಯ ಸುದ್ದಿ ವಿಶೇಷವಾಗಿತ್ತು. ವಿವರವಾಗಿ ಓದಿದೆ.ಆ ಅಪ್ಪ  ಮುದ್ದಿನ ಮಗಳನ್ನು ಅದು ಹೇಗೆ ಒಪ್ಪಿಸಲಿ, ಮದುವೆಯ ಈ ಶಾಸ್ತ್ರವೇ ಬೇಡ ಇದನ್ನು ರದ್ದು ಮಾಡೋಣ ಎಂದು ಹಠ   ಹಿಡಿದಿದ್ದನಂತೆ. ಅಪ್ಪನ ಈ ಹಠಕ್ಕೆ ಕಾರಣ ಮುದ್ದು ಮಗಳ ಪ್ರೀತಿ.ಅಂತಹ ಭಾಂದವ್ಯದ ಬೆಸುಗೆ ತಂದೆ ಮಗಳ ನಡುವಿರುತ್ತದೆ. ಇಂತಹ ತಂದೆಯಂದಿರು ಮಗಳ ಮಾತನ್ನು ಕೇಳುವುದು ಬಿಟ್ಟರೆ, ಮಗಳಿಗೆ ಹೆದರುವುದನ್ನು ಬಿಟ್ಟರೆ ಇನ್ಯಾರಿಗೂ  ಮಾನ್ಯತೆ ನೀಡುವುದಿಲ್ಲ. ಹಾಗೆ  ಹೆಣ್ಣುಮಕ್ಕಳೂ ತಮ್ಮ ಸಂಗಾತಿಯನ್ನು ತಂದೆಯ ಗುಣಗಳೊಂದಿಗೆ ತಾಳೆ ಹಾಕಿ  ನೋಡುವುದಿದೆ. 

             ಜನಕ ಮಹಾರಾಜ ಸೀತಾಮಾತೆಯನ್ನು ಮದುವೆ ಮಾಡಿ ರಾಮರ ಸಂಗಡ ಕಳುಹಿಸುವಾಗ  ಒಂದು ಕೋಣೆಯ ತುಂಬಾ ಹರಿಷಿಣ ಹರಡಿ “ಇದರ ಮೇಲೆ ನಿನ್ನ ಹೆಜ್ಜೆ ಗುರುತನ್ನು ಮೂಡಿಸಿ ಹೋಗು ಇದರ ನೆಪದಲ್ಲಿ ಮಗಳೇ ನೀನಿಲ್ಲದ ಕೊರಗನ್ನು ಮರೆಯುತ್ತೇನೆ” ಎಂದಿದ್ದನಂತೆ. ಎಂಥ ಬಾಂಧವ್ಯ ಅಲ್ಲವೇ?.  ರನ್ನನ ‘ಗದಾಯುದ್ಧದ’ ದುರ್ಯೋಧನ ಮಹಾಭಾರತ ಯುದ್ಧದ ಕಡೆಯ ಸಂದರ್ಭದಲ್ಲಿ ಭೀಷ್ಮರನ್ನು ಭೇಟಿಯಾಗಲು ಶವಗಳ ರಾಶಿಯನ್ನು ಮೆಟ್ಟಿ ಮುನ್ನಡೆಯುವ ಸಂದರ್ಭದಲ್ಲಿ ಹತನಾಗಿದ್ದ ಮಗ ಲಕ್ಷಣಕುಮಾರನ ಶವ ಕಂಡು “ ಜನಕಂಗೆ ಜಲಾಂಜಲಿಯನ್ನ ತನೂಭವನ್ ಕೊಡುವುದುಚಿತಮ್ ಅದುಗೆಟ್ಟೀಗಳ್ ತನೂಭವಂಗೆ ಜನಕನೇ ಜಲಾಂಜಲಿಯನ್ನು ಕೊಡುವಂತಾಯಿತೇ” ಎಂದು ಮರುಗುತ್ತಾನೆ. ದ್ರೋಣಾಚಾರ್ಯ ವಿಹ್ವಲನಾಗುವುದೂ ಕೂಡ “ಅಶ್ವತ್ಥಾಮೋ ಹತಃ”  ಎಂದಷ್ಟೇ ಕೇಳಿಸಿಕೊಂಡಾಗ ಇಲ್ಲೆಲ್ಲ ಪಿತೃವಾತ್ಸಲ್ಯದ ತುತ್ತತುದಿಯನ್ನೇ ಕಾಣಬಹುದು.  ಜಾನಪದ ತ್ರಿಪದಿಯ “ತೊಟ್ಟಿಲ ಹೊತ್ಕೊಂಡು  ತವರ್ಬಣ್ಣ ಉಟ್ಕೊಂಡು ಅಪ್ಪ ಕೊಟ್ಟೆಮ್ಮೆ ಹೊಡ್ಕೊಂಡು” ಸಾಲುಗಳಲ್ಲಿಯೂ ಮಗಳ ಮೇಲೆ ಅವಳ ಮಗುವಿನ ಮೇಲೆ ಅಪ್ಪ ಎಂಥ ಪ್ರೀತಿ ಹೊಂದಿದ್ದ ಎಂಬುದು ವೇದ್ಯವಾಗುತ್ತದೆ. “ ಅಪ್ಪಾ ಹಾಕಿದ ಆಲದ ಮರ” ಎಂಬ ನುಡಿಗಟ್ಟು ಅಪ್ಪನ ಮಹಿಮೆಯನ್ನೇ ಹೇಳುವಂತಹದ್ದು.   ಸಿನಿಮಾದಲ್ಲೂ “ನಿನ್ನಂಥ ಅಪ್ಪಾ ಇಲ್ಲ ನಿನ್ನಂಥಾ ಮಗಳೂ ಇಲ್ಲ” ಎಂದು ರಾಜಕುಮಾರ್ ಮತ್ತು ಸುಧಾರಾಣಿ  ಹಾಡುವುದನ್ನು ನೆನಪಿಸಿಕೊಳ್ಳಬಹುದು.’ಪುಷ್ಪಕವಿಮಾನ ಚಿತ್ರದಲ್ಲಿ ತಂದೆ ಮಗಳ ಅವಿನಾಭಾವ ಸಂಬಂಧ, ‘ದೃಶ್ಯ’ ಚಲನ ಚಿತ್ರದಲ್ಲಿ ಅಪ್ಪ ಮಗಳಿಗಾಗಿ ಆಕಸ್ಮಿಕ ಅಪರಾಧಿಯಾಗುವ ತಂದೆಯಚಿತ್ರಣ ಬಹಳ ಚೆನ್ನಾಗಿದೆ. 

  ಭಾರತದ ಮೊದಲ ಪ್ರಧಾನಿ ಜವಹರಲಾಲ ನೆಹರುರವರು ತಮ್ಮ ಹತ್ತು ವರ್ಷದ ಮಗಳು ಇಂದಿರಾ ಗಾಂಧಿಯವರಿಗೆ  ಮಾನವಿಕ ಶಾಸ್ತ್ರ, ಹಾಗು ಇತಿಹಾಸವನ್ನು ಕುರಿತ ಹಾಗೆ ಪತ್ರಗಳನ್ನು ಬರೆಯುತ್ತಾರೆ . ಇಂತಹ ಮೂವತ್ತು ಪತ್ರಗಳು ಸೇರಿ 1929ರಲ್ಲಿ ‘ಮಗಳಿಗೆ ತಂದೆಯ ಓಲೆ’ (Letter from a father to his daughter) ಎಂಬ ಹೆಸರಿನಲ್ಲಿ ಪ್ರಕಟವಾಗುತ್ತದೆ.  ಜಗತ್ತಿನ ಬಹುತೇಕ  ಭಾಷೆಗಳಿಗೆ ತರ್ಜುಮೆಗೊಂಡಿರುವ ಈ ಪುಸ್ತಕ ಪತ್ರ ಸಾಹಿತ್ಯ ಪ್ರಕಾರಕ್ಕೆ ಬಹುಮುಖ್ಯ ಕೊಡುಗೆ ಎಂದರೆ ತಪ್ಪಿಲ್ಲ.  ಈ ಕೃತಿ ನೆಹರು ಇಂದಿರಾಗಾಂಧಿಯವರಿಗೆ ಹೇಗೆ ನಾಯತ್ವದ ತರಬೇತು ನೀಡಿದ್ದರು ಎಂಬುದರ ಬಗ್ಗೆ ಬೆಳಕು ಚೆಲ್ಲುತ್ತದೆ.  

             ‘ ಕನ್ನಡದ  ಒಲುಮೆಯ ಕವಿ’, ‘ಪ್ರೇಮ ಕವಿ’  ಕೆ.ಎಸ್. ನರಸಿಂಹ ಸ್ವಾಮಿಯವರು ಬರೆದಿರುವ “ಶಾನುಭೋಗರ ಮಗಳು” ಗೀತೆಯಲ್ಲಿ  ತಂದೆಯಾದವನು  ತಾಯಿಯಿಲ್ಲದ ಮಗಳು ಸೀತೆಗೆ ಬಂದ ಕಪ್ಪು ವರನೊಂದಿಗೆ ಮದುವೆ ಮಾಡಿಸಿ ಕೈ ತೊಳೆದುಕೊಳ್ಳುವುದಿಲ್ಲ ಬದಲಾಗಿ ವೈದಿಕರ ಮನೆಗಳಲಿ ಊಟ ಹೊತ್ತಾಗುವುದು ಎಂದ ಮಗಳ ಮಾತಿನಲ್ಲಿಯೇ ಆಕೆಯ ಮನದಿಂಗಿತವನ್ನು ಅರಿತುಕೊಂಡು ಬಂದ ವರನನ್ನು ಬಂದ ದಾರಿಗೆ ಸುಂಕವಿಲ್ಲದಂತೆ ಕಳಿಸುತ್ತಾನೆ.  ಓರ್ವ ತಂದೆ ಮಗಳನ್ನು ಹೊರೆ ಎನ್ನದೆ ಅವಳ ಬದುಕಿಗಾಗಿ ತಾನೇ ಮೀಸಲಾಗಿರುವುದು ಇಲ್ಲಿ ಕಂಡುಬರುತ್ತದೆ, ತಂದೆ ಮಗಳ ಪ್ರೀತಿ ಅನುರಣಿಸುತ್ತದೆ.  ಜಿ.ಎಸ್.ಎಸ್ ರವರು ತಮ್ಮ ‘ಮುಂಬೈ ಜಾತಕ’ ಕವಿತೆಯಲ್ಲಿ ಅಪ್ಪ ಎಂದರೆ “ಬೆಳಗಿನಿಂದ ಸಂಜೆಯವರೆಗೂ ಹೊರಗಿದ್ದು ಬಟ್ಟೆಯಲ್ಲೇ ಮೈತುರುಕಿಸಿ ಓಡುವ,ತಣ್ಣಗಾದ ಕೊರೆಯುವ ಕೂಳನ್ನೇ ತಿನ್ನುವ ಆಗೊಮ್ಮೆ ಈಗೊಮ್ಮೆ ರಜೆ ಸಿಕ್ಕಾಗ ಕುಳಿತು ಕೆಮ್ಮುವ ಪ್ರಾಣಿ” ಎಂದು ಅಪ್ಪಂದಿರು ಪಡುವ ಕಷ್ಟವನ್ನು ಕುರಿತು ಬರೆಯುತ್ತಾರೆ.  ಇಲ್ಲಿ ಉದಾಹರಿಸಿದ ಜಿ .ಎಸ್. ಎಸ್, ಹಾಗು ಕೆ. ಎಸ್.ನ ರವರದ್ದು ಬರೆ ಕವಿತೆಗಳ ಸಾಲುಗಳಲ್ಲ ಅಪ್ಪಂದಿರ ತ್ಯಾಗ ಹಾಗು ಪ್ರೀತಿಯ ನಿಲುವುಗನ್ನಡಿಗಳು.  ಇನ್ನು ತಂದೆಯ ಪ್ರೀತಿಯ ಪರಾಕಾಷ್ಠತೆಯನ್ನು ಬಿಂಬಿಸಿದ  ಕವಿತೆಯ ಸಾಲು ಎಂದರೆ ಬೇಂದ್ರೆಯವರ ‘ನೀ ಹೀಂಗ ನೋಡ ಬ್ಯಾಡ ನನ್ನ’   ಈ ಗೀತೆಯನ್ನು ಯಾವಾಗ ಕೇಳಿದರೂ ಕಣ್ಣಾಲಿಗಳು ಒದ್ದೆಯಾಗುತ್ತವೆ.

            ಕುವೆಂಪುರವರು ತಮ್ಮ ಮಡದಿಯ ಸಾವಿನಲ್ಲೂ  ಮಕ್ಕಳಿಗೆ ಜೀವನ ಪಾಠ  ಹೇಳಿದ್ದರು ಎಂಬುದನ್ನು ಪೂರ್ಣ ಚಂದ್ರ ತೇಜಸ್ವಿಯವರು ತಮ್ಮ ‘ಅಣ್ಣನ ನೆನಪು’ ಪುಸ್ತಕದಲ್ಲಿ ಬರೆದುಕೊಳ್ಳುತ್ತಾರೆ. ಅಷ್ಟೇ ಏಕೆ ಸ್ವತಃ ಕುವೆಂಪುರವರು ಕಡೆಯವರಗೂ  ಮಗಳು ತಾರಿಣಿದೇವಿಯವರೊಂದಿಗೆ ಇರುತ್ತಾರೆ.’ಮಗಳು ಕಂಡ ಕುವೆಂಪು’ ಕೃತಿಯಲ್ಲಿ ತಾರಿಣಿದೇವಿಯವರು ಅಪ್ಪನ ಬಗ್ಗೆ ತಾನರಿತ ತಂದೆಯ ಬಗ್ಗೆ ವಿಶೇಷವಾಗಿ ಮಾಹಿತಿ ನೀಡಿದ್ದಾರೆ.

              ನಮ್ಮಲ್ಲಿ ಪ್ರಸಿದ್ಧ ತಂದೆ ಮಕ್ಕಳ ಜೋಡಿ ನೆನಪಿಸಿಕೊಳ್ಳಬಹುದೆಂದರೆ  ಸಾಹಿತ್ಯ ಕ್ಷೇತ್ರದಲ್ಲಿ ಡಿ.ವಿ.ಜಿ. ಮತ್ತು ಬಿ.ಜಿ.ಎಲ್ ಸ್ವಾಮಿ, ಕುವೆಂಪು ಮತ್ತು ತೇಜಸ್ವಿ, ದೇ.ಜ.ಗೌ ಮತ್ತು ಶಶಿಧರ ಪ್ರಸಾದ್, ಬೆಸಗರಹಳ್ಳಿ ರಾಮಣ್ಣ ಮತ್ತು ರವಿಕಾಂತೇಗೌಡ, ಕ್ರೀಡಾಕ್ಷೇತ್ರದಲ್ಲಿ ಸುನಿಲ್ ಗವಾಸ್ಕರ್ ಮತ್ತು ರೋಹನ್ ಗವಾಸ್ಕರ್, ಪ್ರಕಾಶ್ ಪಡುಕೋಣೆ ಮತ್ತು ದೀಪಿಕಾ ಪಡುಕೋಣೆ, ಸಿನೆಮಾದಲ್ಲಿ ಧರ್ಮೇಂದ್ರ ಮತ್ತು ಸನ್ನಿಡಿಯೋಲ್, ಬಾಬಿಡಿಯೋಲ್, ರಾಜಕೀಯದಲ್ಲಿ ಕರುಣಾನಿಧಿ ಮತ್ತು ಕನಿಮೋಳಿ, ರಾಮಲಿಂಗಾರೆಡ್ಡಿ ಮತ್ತು ಸೌಮ್ಯ ರೆಡ್ಡಿ, 2018 ಮೇ ತಿಂಗಳಲ್ಲಿ ಮೌಂಟ್ ಎವರೆಸ್ಟ್ ಏರಿದ ಅಪ್ಪ ಮಗಳ ಜೋಡಿ ಅಜೀತ್ ಬಜಾಜ್ ಮತ್ತು ದಿಯಾ ಬಜಾಜ್ ಇವರುಗಳನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು.

             ಅಪ್ಪ ಎಂದರೆನೇ ಅದ್ಭುತ. ಆ ಜೀವ ತನ್ನ ನಗು ಮುಖದಲ್ಲಿ ಅದೆಷ್ಟೋ ದುಃಖಗಳನ್ನು ಮರೆಮಾಚಿಕೊಂಡು, ಮಕ್ಕಳಿಗೆ ಬೇಕು ಅನ್ನಿಸಿದ ಎಲ್ಲವನ್ನು ಕಣ್ಮುಂದೆ ತಂದಿರಿಸಿ  ಕಪ್ಪೆ ಚಿಪ್ಪನೊಳಗೆ ಅಡಗಿರುವ ಮುತ್ತುಗಳ ಹಾಗೆ ಜೋಪಾನ ಮಾಡಿ  ಮಕ್ಕಳನ್ನು ಜಗತ್ತಿಗೆ ಹರಿಯಬಿಡುತ್ತಾನೆ. ಅಂತಹ ಬದುಕನ್ನು ರೂಪಿಸಿದ ಅಪ್ಪನಿಗೆ  ಸ್ನೇಹಿತ, ಗುರು, ಮಾರ್ಗದರ್ಶಕನಿಗೆ ಮನತುಂಬಿ  ಧನ್ಯವಾಗಳನ್ನು ಹೇಳಲೇಬೇಕು.  ತಂದೆ ತಾಯಿಗಳ ಬಗ್ಗೆ ವಿಶೇಷ ಕಾಳಜಿ ಪ್ರೀತಿ ಪ್ರತಿಯೊಬ್ಬರಲ್ಲಿಯೂ ಇದ್ದಾಗ ವೃದ್ಧಾಶ್ರಮಗಳೇ ಇರುವುದಿಲ್ಲ. ಇಂತಹ ನಿರ್ಧಾರ ಈ ಅಪ್ಪಂದಿರ ದಿನದಂದು ಆಗಲಿ ಎನ್ನೋಣ. ಅಂಗೈ ಆರೈಕೆಯ ಅಮ್ಮನಿಗೆ ಹಾಗು ಬದುಕು ಕಲಿಸಿದ ನನ್ನ ಪ್ರೀತಿಯ ಅಪ್ಪನಿಗೆ ಈ ಲೇಖನ ಸಮರ್ಪಿತ.