- ಸಮಾಧಿ ಸಡಗರ - ಜನವರಿ 22, 2022
- ನಿಬ್ಬು ಮುರಿದು ಹಾರಿತು - ಸೆಪ್ಟೆಂಬರ್ 25, 2021
- ಮತ್ತೆ ಬಂತು ಆಷಾಢ - ಜುಲೈ 21, 2021
ಮತ್ತೆ ಅದೇ ಆಷಾಢ ಅದೇ ಕಾಳ ಮೇಘ
ಉಧೋ ಎನ್ನುತ್ತಿದೆ ಬಿರುಮಳೆ
ಹುಡುಗಿ
ನೆನಪಿದೆಯೇ ಎಷ್ಟೊಂದು ದೋಣಿಗಳು
ನನ್ನೆಡೆಯಿಂದ ನಿನ್ನಡೆಗೆ ತುಳುಕುತ್ತ ನೆನೆಯುತ್ತ ನೀರಲ್ಲಿ ಆಡುತ್ತಾ
ನಿನ್ನೆಳೆಯ ಪಾದಗಳ ಮುದ್ದಿಸಿತ್ತು
ದೋಣಿಗಳ ಬಿಡಿಸಿ
‘ಏನ್ಬರ್ದಿದಿಯೋ ಒದ್ದೆಯಾಗಿದೆ’
ಅಂತ ನಗುತ್ತಿದ್ದೆಯಲ್ಲಾ
ನಿನ್ನ ಕೀಲಿಸದ ಕಣ್ಣನೋಟ
ಎನ್ನ ಸಂದೇಶದ ಹೊನ್ನಬೇಟ
ಮಳೆಯ ನಂತರ ಚಳಿ ನಂತರ ಬಿರುಬೇಗೆ
ಕಾಲದುರುಳಿಗೆ ಅದೆಷ್ಟು ವೇಗ
ಮನದ ಮೂಸೆಯಲಿಟ್ಟ ಪ್ರೇಮದ ಹರಳು
ಪುಟಿಪುಟಿದು ಶುದ್ದವಾಗಿದೆ
ಹುಡುಗಿ
ಹೇಳು ನೀನೆಲ್ಲಿರುವೆ
ಅಲ್ಲೆ ನನ್ನ ಅಲಕಾಪುರಿಯಲೊ ಮತ್ತೆಲ್ಲೊ
ಜಾಲಾಡಿ ಜಗದ ಮೂಲೆಯನೆಲ್ಲ
ಬೆವರುತಿರುವೆ ಮುಂಗಾರ ಬಿರುಹನಿಯಲ್ಲೂ
ಸಂದೇಶ ಕಳಿಸಬೇಕಿದೆ ನೀನಿರುವಲ್ಲಿಗೆ ಬಂದುಬಿಡು ನನ್ನ ಮಲ್ಲಿಗೆ
ಆನೆಯಂತಹ ಕಾಳಮೇಘವಿಂದು ಬೇಕಿಲ್ಲ
ಆ ದೂತ ಈ ದೂತ ಬೇಕಿಲ್ಲ
ಇ-ದೂತ ಇದ್ದಾನೆ ಕೈಯೊಳಗೆ
ತರತರದ ತಂತ್ರಾಂಶದಲಿ
ಅರಳುವುದು ಜಗವು ಕ್ಷಣದ ಕ್ಷಣದೊಳಗೆ ಅಂತರ್ಜಾಲಿಣಿಯ ನಿರ್ ತಂತು ಮಾಯೆ ವ್ಯೋಮದೊಳಗೆ
ಎನ್ನ ಪ್ರೀತಿಯ ತಂತು ನಿನ್ನ ಭಾವಕೋಶದೊಳಗೆ
ಆದರೆ ಹೇಳು ಎಲ್ಲಿರುವಿ
ದೂತರೆಷ್ಟಿದ್ದರೇನು ನೀ ದೂರವಿರಲು
ಹುಡುಗಿ
ನನ್ನ ಒಲವಿನ ಭಿತ್ತಿ ನಿನ್ನ ಚಿತ್ತಿಯೊಳಿಹುದೆ
ನನ್ನ ಕಾಗದದ ದೋಣಿ ಇನ್ನೂ ನಿನ್ನ ಪುಸ್ತಕದೊಳಿಹುದೆ
ಹಾಗಿದ್ದರೆ
ಒಂದಲ್ಲ ಒಂದು ದಿನ ನೀ ಸಿಕ್ಕುವೆ
ವ್ಯರ್ಥವಾಗದೀ ಸಂದೇಶ ನೀನೋದುವೆ.
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ