ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಿಬ್ಬು ಮುರಿದು ಹಾರಿತು

ಬೆಂಶ್ರೀ ರವೀಂದ್ರ
ಇತ್ತೀಚಿನ ಬರಹಗಳು: ಬೆಂಶ್ರೀ ರವೀಂದ್ರ (ಎಲ್ಲವನ್ನು ಓದಿ)

ಕಾಗೆಯೊಂದು ಹಾರಿ ಬಂದು
ಪೆನ್ನಿನಲ್ಲಿ ಸೇರಿಕೊಂಡು
ನಿಬ್ಬಿನಿಂದಾಚೆಗೆ ಕೊಕ್ಕು ಚಾಚಿತು

ತನ್ನ ಕಥೆಯ ಬರೆಯಿರೆಂದು
ಸಾಹಿತಿಯನು ಕೇಳಿಕೊಂಡು
ಜಗಕೆ ನಗುವ ತಾ ಎಂದಿತು

ಬರಹಗಾರನಕ್ಷರ ಮರುಗಿ
ನಗೆಯ ಮರೆತು ಜಗವು ಸೊರಗಿ
ಉಬ್ಬುಸವೀಲೋಕವೆಂದನು

ಚಿಂತಿಸಿದರು ಕವಿಯೆ ನೀನು
ನನ್ನ ಪಾಡು ಕೊಂಚ ನೋಡು
ನೋವಿನಲ್ಲೂ ನಗೆಯು ಇರುವುದು

ಜಗದ ಜನರು ನನ್ನ ಕಂಡು
ತಮಗೆ ತೋಚಿದಂತೆ ಆಡಿ
ಕಾಕಪಕ್ಷಿಯೆಂದೆನ್ನ ಅಲ್ಲಗೆಳೆವರು

ಒಮ್ಮೆ ಅವರ ಪಿತೃವೆಂದು
ಮತ್ತೊಮ್ಮೆ ಕೆಟ್ಟ ಶಕುನವೆಂದು
ದಡ್ಡಕಾಗೆ ಹಾಗೆಹೀಗೇನುವರು

ಮನುಜಗಿಂತ ಸ್ವಲ್ಪ ಕಮ್ಮಿ
ಜಾಣಹಕ್ಕಿ ನಾಡಪಕ್ಷಿ ಮಾಡಿರೆಂದು
ಹಾರ್ಕೆ*ಯಿಲ್ದೆ ಆರ್ಕೆ* ನುಡಿವರು

ಹಸಿವಾದರೆ ಹುಡುಕಿ ಬರುವೆ
ಬಂಧುಗಳ ಕೂಗಿ ಕರೆವೆ
ನನ್ನಪಾಡಿಗೆ ನಾನು ಇರುವೆ

ಪ್ರಕೃತಿ ಬಿಡಿಸಿದ ಚಿತ್ರದಂತೆ
ಇರುವ ನನ್ನ ಗೂಡು ಕೆಡವಿ
ಕಾಣೆಯಾದೆನೆಂದು ನುಡಿವರು

ಯಾರು ಏನೇ ಅಂದ್ರು ನಾನು
ಸಂತಸದಿ ಬದುಕುವೆ ಜಗದಿ
ನಿತ್ಯದೂಟಕಾಗಿ ತಿಣುಕುತ

ನಿಬ್ಬಿನಿಂದ ಹೊರಗೆ ಹೋಗುವೆ
ಮಬ್ಬಿನಲ್ಲಿ ನೀನು ಇರುವೆ
ಡಬ್ಬಿಯಲಿ ನಗುವ ಇಡುವೆ

‘ತೆಗೆದುಕೋ’ ಎಂದು ಹಾರಿತು
ಗಗನವೆ ತಾನಾಗಿ ಮೆರೆಯಿತು
ಪೆನ್ನು ನಿಬ್ಬು‌ ಮುರಿದು ಬಿದ್ದಿತು.



*ಹಾರ್ಕೆ= ಹಾರಿಕೆ

**ಆರ್ಕೆ= ಆರ್‌ಕೆ ಲಕ್ಷ್ಮಣ್