ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ

ದಿವಾಕರರನ್ನು ಓದುವುದೆಂದರೆ ಅದು ಅರಿವಿನ ವಿಸ್ತರಣೆ ಎನ್ನುವ ಸುಧೀಂದ್ರ ಬುಧ್ಯ, ದಿವಾಕರರ ಇತ್ತೀಚಿನ ಕವನ "ಸಂಕಲನ ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ" ದ ಬಗ್ಗೆ ಪುಸ್ತಕ ಪರಿಚಯದಲ್ಲಿ ಬರೆದಿದ್ದು ಹೀಗೆ...

ಹಿರಿಯ ಕತೆಗಾರ ಶ್ರೀ ಎಸ್ ದಿವಾಕರ್ ಅವರ ಎರಡನೆಯ ಕವನ ಸಂಕಲನ ’ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ’ ಇತ್ತೀಚೆಗೆ ಪ್ರಕಟವಾಗಿದೆ. ಇಪ್ಪತ್ತು ವರ್ಷಗಳಷ್ಟು ಹಿಂದೆ ಅಂದರೆ 1998ರಲ್ಲಿ ತಮ್ಮ ಮೊದಲ ಕವನ ಸಂಕಲನವನ್ನು ತಂದಿದ್ದ ದಿವಾಕರ್, ನಂತರ ಸಾಹಿತ್ಯದ ಇತರ ಕ್ಷೇತ್ರಗಳಲ್ಲಿ ದುಡಿಮೆಗೆ ತೊಡಗಿಕೊಂಡವರು. ಕತೆ, ಪ್ರಬಂಧ, ವ್ಯಕ್ತಿಚಿತ್ರ, ಲೇಖನ ಹೀಗೆ ಬರೆಯುತ್ತಲೇ ಬಂದಿರುವ ದಿವಾಕರ್, ತಮ್ಮ ವಿಸ್ತಾರ ಓದಿನ ಮೂಲಕ ಜಗತ್ತಿನ ಅತ್ಯುತ್ತಮ ಸಂಗತಿಗಳನ್ನು ಕಂಡುಕೊಂಡು, ಅದನ್ನು ಕನ್ನಡಿಗರಿಗೆ ಪರಿಚಯಿಸುವ ಮಹತ್ವದ ಕೆಲಸ ಮಾಡಿದವರು. ಕಥನ ಎನ್ನುವುದು ತಮ್ಮ ಬರವಣಿಗೆಯ ಮೂಲದ್ರವ್ಯವಾಗಿದ್ದರೂ ಇತರೆ ಸಾಹಿತ್ಯ ಪ್ರಕಾರಗಳಲ್ಲೂ ಅಷ್ಟೇ ನೈಪುಣ್ಯ ತೋರಿ ದೊಡ್ಡ ಓದುಗ ಬಳಗವನ್ನು ಸೃಷ್ಟಿಸಿಕೊಂಡವರು.

ಬಿಗ್ ಬಾಸ್ ನಂತಹ ಜನಪ್ರಿಯ ರಿಯಾಲಿಟಿ ಶೋ ಕನ್ನಡದಲ್ಲಿ ಆರಂಭವಾದಾಗ, ಇಂತಹದೊಂದು ಕಾರ್ಯಕ್ರಮದ ಕನಸು ಕಂಡಿದ್ದು, ರೂಪಿಸಿದ್ದು ಡಚ್ ಮಾಧ್ಯಮ ದೊರೆ ಜಾನ್ ಡಿ ಮೋಲ್. ಮೊದಲಿಗೆ ಇದು ’ಬಿಗ್ ಬ್ರದರ್’ ಎಂಬ ಹೆಸರಿನಿಂದ ’ವೆರೋನಿಕಾ’ ಎಂಬ ನೆದರ್ಲ್ಯಾಂಡ್ ದೇಶದ ವಾಹಿನಿಯಲ್ಲಿ ಪ್ರಸಾರವಾಯಿತು. ಈ ’ಬಿಗ್ ಬ್ರದರ್’ ಜಾರ್ಜ್ ಆರ್ವೆಲ್ ಬರೆದ ’ನೈನ್ ಟೀನ್ ಎಯ್ಟಿಫೋರ್’ ಕಾದಂಬರಿಯಲ್ಲಿ ಕಾಣಿಸಿಕೊಳ್ಳುವ ನಿರಂಕುಶ ನಾಯಕನೊಬ್ಬನ ಪಾತ್ರ ಎಂದು ದಿವಾಕರರು ಪ್ರಬಂಧ ಬರೆದಿದ್ದರು. ಅಷ್ಟರ ಮಟ್ಟಿಗೆ ಅವರು ಸಾಹಿತ್ಯವಷ್ಟೇ ಅಲ್ಲದೇ, ಜಗತ್ತಿನ ಆಗುಹೋಗುಗಳ ನಿತ್ಯ ಅಭ್ಯಾಸಿ.

ಈ ಕವನ ಸಂಕಲನದ ಮಟ್ಟಿಗೆ ಹೇಳುವುದಾದರೆ, ಇದರಲ್ಲಿ ಒಟ್ಟು 36 ಕವನಗಳಿವೆ. ಕವಿತೆಗಳು ಆಧುನಿಕತೆಯ ಭ್ರಮೆ, ಕ್ರೌರ್ಯ, ಹಿಂಸೆ, ನಿರುತ್ಸಾಹದ ಬಗ್ಗೆ ಮಾತನಾಡುತ್ತವೆ. ಕೆಲವು ಕವಿತೆಗಳಲ್ಲಿ ನಾಟಕಿಯ ಧಾಟಿ, ಹಿತಮಿತದ ವ್ಯಂಗ್ಯ ಇಣುಕುತ್ತವೆ. ಹಲವು ಕವಿತೆಗಳಲ್ಲಿ ರಾಜಕೀಯ ಪ್ರಜ್ಞೆ ಎದ್ದು ಕಾಣುತ್ತದೆ. ಸಂಕಲನದ ಎರಡನೇ ಕವನ ’ಎಲ್ಲಿ ಹೋಯಿತು ರುಂಡ?’ ವಿಶಿಷ್ಟವಾಗಿದೆ. ಸಾಮಾನ್ಯವಾಗಿ ಸಂಜೆ ಎಂದರೆ ನಾನಾ ಕಾರಣಗಳಿಗೆ ಅಲ್ಲೊಂದು ಸಂಚಲನ ಇರುತ್ತದೆ. ಆದರೆ ಈ ಪದ್ಯದಲ್ಲಿ ಚಿತ್ರಿತವಾಗುವ ಸಂಜೆಗೆ ಬಿಕೋ ಎನ್ನುವ ಬೀದಿ ಜೊತೆಯಾಗಿದೆ. ಅಪಶಕುನದ ಮಾರ್ದನಿ ಊಳಿಡುವ ನಾಯಿಗಳ ಮೂಲಕ ಕೇಳಿಸುತ್ತಿದೆ. ಪ್ಯಾಂಟು ಶರ್ಟು ತೊಟ್ಟ ಮುಂಡ ರುಂಡ ಕಳೆದುಕೊಂಡು ನಿಂತಿದೆ. ಇದರ ನಡುವೆ ಬರುವ ’ನಡೆಸಬಹುದೇ ಪೋಲೀಸರು ಈ ಮುಂಡದ ತನಿಖೆ ಬಟ್ಟೆಬರೆ ಬಿಚ್ಚಿ?’ ಎಂಬ ಮಾತಿನಲ್ಲಿ ಒಂದು ವ್ಯಂಗ್ಯವಿದೆ. ’ರಾತ್ರಿಯ ಬರಮಾಡಿಕೊಳ್ಳುತ್ತಿರುವ ಮುಸ್ಸಂಜೆ, ನಂಜೇರುತ್ತಿರುವ ಆಕಾಶ, ಅದರಂಚಿನ ಬಣ್ಣ ವಿಷಣ್ಣ’ ಎಂಬ ಸಾಲಿನ ಮೂಲಕ ಕವಿ ಹಿಂಸೆಯ ಭೀಕರತೆ, ವಾತಾವರಣದಲ್ಲಿ ಪ್ರತಿಫಲನಗೊಂಡಿದೆ ಎಂಬುದನ್ನು ಹೇಳುತ್ತಾರೆ.

ಈ ಸಂಕಲನದಲ್ಲಿ ನನಗೆ ಇಷ್ಟವಾದ ಪದ್ಯಗಳಲ್ಲಿ ’ಬಂಗಲೆಯೂ ಜೋಪಡಿಯೂ’ ಕೂಡ ಒಂದು. ಬಂಗಲೆಯನ್ನು ಚಿತ್ರಿಸುವಾಗ ಕವಿ, ’ಬಂಗಲೆಗೆ ಬೇಕು ಊರಿನೆಲ್ಲ ಬೆಳಕು ಹೀರಿಕೊಳ್ಳುವ ಕಿಟಕಿ; ಅಪರೂಪಕ್ಕೊಂದು ಹಲ್ಲಿ ಲೊಚಗುಟ್ಟಿದರೆ ಉಶ್ಶಪ್ಪಾ ಎನ್ನಬೇಕು ಬಂಗಲೆಯ ನಿಶ್ಯಬ್ದ.’ ಎಂದು ಅದರ ವಿಸ್ತಾರವನ್ನು ಚಿತ್ರಿಸುತ್ತಾ, ಇತ್ತ ’ಜೋಪಡಿಗಿಲ್ಲ ಕಿಟಕಿ; ಮುರುಕುಲು ತಟ್ಟಿ ಬಾಗಿಲಿಗೆ. ಮೂಲೆಯಲ್ಲೊಂದು ಒಲೆ ಇನ್ನೊಂದು ಪಕ್ಕ ನಾರುವ ಬಚ್ಚಲು” ಎಂದು ಜೋಪಡಿಯ ಮಿತಿಯನ್ನೂ ಅಲ್ಲಿನ ಸ್ಥಿತಿಯನ್ನು ವರ್ಣಿಸುತ್ತಾರೆ. ಜೊತೆಗೆ ಇನ್ನೊಂದು ತುಲನೆ ಬರುತ್ತದೆ ’ಇರುವುದೊಂದೇ ಮಾರ್ಗ ಬಂಗಲೆಗೆ ನಡೆದಾಡುವುದಕ್ಕಲ್ಲ, ಕಾರು ಬಾರಿಗೆ – ಜೋಪಡಿಗಿರುತ್ತೆ ಅಷ್ಟಾಗಿ ಯಾರೂ ತುಳಿಯದ ನೂರು ದಾರಿ ಆಪತ್ಕಾಲದಲ್ಲಿ ಬಂಗಲೆಯಿಂದ ಬೇಕಾದರೂ ಪೋಲೀಸರು ಬರುವುದಕ್ಕೆ ಬಂದು ಆರಾಮಾಗಿ ಲಾಠಿ ಬೀಸುವುದಕ್ಕೆ’ ಎಂಬುದರಲ್ಲಿ ರಾಜಕೀಯ ಪ್ರಜ್ಞೆ ಕಾಣುತ್ತದೆ.

ಕೊನೆಗೆ ಪದ್ಯ ಮುಕ್ತಾಯವಾಗುವುದು ’ವಾರ್ಧಾದಲ್ಲಿ ಗಾಂಧೀಜಿ ಕಟ್ಟಿದ್ದು ಬಂಗಲೆ ಅಲ್ಲ; ಜೋಪಡಿಯೂ ಅಲ್ಲ’ ಎಂಬ ಸಾಲಿನೊಂದಿಗೆ. ಹಾಗಾದರೆ ವಾರ್ಧಾದಲ್ಲಿ ಗಾಂಧೀ ಕಟ್ಟಿದ ಕುಟೀರ ಹೇಗಿತ್ತು? ಅದು ರಾಜಕೀಯ ಮತ್ತು ಆಧ್ಯಾತ್ಮಿಕ ಕೇಂದ್ರ ಎನಿಸಿತ್ತು. ಬಂಗಲೆಯ ಆಲಂಕಾರಿಕ ವೈಭವ ಅಲ್ಲಿರಲಿಲ್ಲ. ಮಣ್ಣಿನ ಗೋಡೆ, ಮಣ್ಣಿನ ನೆಲದ ದೇಶಿ ಸೊಗಡಿನ ಕೊಠಡಿಯಲ್ಲಿ ಜಗತ್ತನ್ನು ಕಾಣುವುದಕ್ಕೆ ಅಲ್ಲೊಂದು ’ಗ್ರಂಥಾಲಯ’ವಿತ್ತು, ಟಾಲ್ ಸ್ಟಾಯ್ ಪುಸ್ತಕವಿತ್ತು. ವಿಸ್ತಾರದ ದೃಷ್ಟಿಯಲ್ಲಿ ಕಿರಿದಾದರೂ, ಶಿಸ್ತು ಬದ್ಧ ಜೀವನ ನಡೆಸುವವರ ಆವಾಸ ಸ್ಥಾನವಾಗಿತ್ತು. ನೈರ್ಮಲ್ಯಕ್ಕೆ ಪ್ರಾಮುಖ್ಯತೆಯಿತ್ತು ಎಂಬೆಲ್ಲಾ ಸಂಗತಿಗಳನ್ನು ಓದುಗನಿಗೆ ಆ ಕೊನೆಯ ಸಾಲು ನೆನಪಿಸಿ ಬಿಡುತ್ತದೆ.

’ಬಾಗಿಲು’ ಎಂಬ ಪದ್ಯದಲ್ಲಿ ಗೋಡೆಯೇ ಇಲ್ಲದ ಬಟಾಬಯಲಿನಲ್ಲಿ ಬಾಗಿಲು ನಿರ್ಮಿಸಿದವನೊಬ್ಬ ಕೊನೆಗೆ ’ಎರಡು ಬಾಗಿಲು ತೆಗೆದು ಒಳನುಸುಳಿ ಬಾಗಿಲು ಹಾಕಿಕೊಂಡ’ ಎಂದು ಕೊನೆಯಾಗುವುದು ಪ್ರಚಲಿತ ವಿದ್ಯಮಾನಗಳಿಗೆ ಹಿಡಿದ ಕೈಗನ್ನಡಿಯಂತೆ ಕಾಣುತ್ತದೆ. ’ಅನಾಥ ದೊರೆ’ ಪದ್ಯದಲ್ಲಿ ತನ್ನ ಜನರನ್ನು ’ನಗಿಸಿ ಅಳಿಸಿ ಗೋಳಾಡಿಸಿ’ದ ದೊರೆ ಅರಮನೆಯ ಉದ್ಯಾನದಲ್ಲಿ ದಾರುಣ ಅಂತ್ಯ ಕಾಣುವ ಚಿತ್ರಣವಿದೆ. ಸ್ಯಾಂಡೋರ್ ವೋರೆ ಎಂಬ ಕವಿಯ ಪ್ರೇರಣೆಯಿಂದ ಬರೆಯಲ್ಪಟ್ಟ ’ಮಂಗದೇಶ’ ಕವಿತೆಯಲ್ಲಿ ಚಂಚಲತೆಯಿಂದ ಕೂಡಿರುವ ಸಮಾಜದ ಚಿತ್ರಣವಿದೆ. ’ಮಂಗಮಿಲಿಟರಿಯ ಭಯದ ಬಿಂಬವಿದೆ ಮಂಗಮುಖಗಳಲಿ ಯಾವತ್ತೂ; ಮಂಗಮುಷ್ಟಿಯಲಿ ಮಂಗಬಂದೂಕು; ಇದೆ ನಮ್ಮೆದುರಿಗೆ ಮಂಗ ಜಗತ್ತು;’ ಎನ್ನುವ ಸಾಲು ಓದಿದರೆ ಅಮೆರಿಕದ ಗನ್ ಕ್ರೈಮ್ಸ್ ನೆನಪಿಗೆ ಬಂದು ಹೋಗುತ್ತದೆ.

‘ಆಕಾಶಕ್ಕೆ ಏಣಿಯಿಟ್ಟ’ ಕವಿತೆ ಓದುವಾಗ ಇದು ನಮ್ಮಂತಹ ಮಧ್ಯಮ ವರ್ಗದವರನ್ನು ಕುರಿತು ಬರೆದ ಕವಿತೆ ಎನಿಸದೇ ಇರದು. ’ಆಕಾಶಕೆ ಏಣಿಯಿಟ್ಟ ಸರಸರ ಹತ್ತಿದ’ ಎನ್ನುವ ಸಾಲಿನಲ್ಲಿ ಬರುವ ’ಸರಸರ’ ಎಂಬ ಶಬ್ದ ನಮ್ಮ ಆತುರದ ಬದುಕಿನ ಸಂಕೇತವಾಗಿದೆ. ಆತ ಏರಿದ ಎತ್ತರ ಎಷ್ಟಿತ್ತು ಎಂದರೆ ’ಅವನೇರಿದ ಎತ್ತರಕ್ಕೆ ಯಾವ ಗಿರಿಯ ನೆತ್ತಿಯೂ ಏರಲಿಲ್ಲ, ಯಾವುದೊಂದು ರೆಕ್ಕೆ ಬಡವ ಹಕ್ಕಿಯೂ’ ಎನ್ನುವ ಕವಿ, ’ರವಿಯ ನೋಡಲಾಗಲಿಲ್ಲ; ಕಾಣಿಸಿದವ ಚಂದಿರ, ಅವನೊ ಕವಿತೆಯಲ್ಲಿಯಂತೆ ಕಾಣಲಿಲ್ಲ ಸುಂದರ’ ಎನ್ನುವ ಮೂಲಕ ಹೀಗೆ ’ಸರಸರ’ ಎಂದು ಎತ್ತರಕ್ಕೇರಿ ಆದ ಲಾಭವೇನು ಎನ್ನುವುದನ್ನು ಕಾಣಿಸುತ್ತಾರೆ.

‘ಮಣ್ಣಲ್ಲಿ ಹೂತರೇನು ಎದ್ದು ಬರುತ್ತೆ ಕಪ್ಪೆ ಏನೂ ಬದಲಾಗದೆ. ಮಳೆಗಾಲದಲ್ಲಿ ವಟರೆನ್ನುವುದು ಕೂಡ ಕಳೆದ ವರ್ಷದಂತೆ’ ಎಂದು ಬರುವ ’ಕಪ್ಪೆ’ ಕವಿತೆ ಸಾಲು, ಮುಂದುವರಿದು ’ವಿಜಯಪುರದಿಂದ ವಿಧಾನ ಸೌಧಕ್ಕೆ ಅದೆಷ್ಟು ದೂರ, ಕಾರು ಬಸ್ಸು ರೈಲುಗಳಲ್ಲಿ ಕ್ರಮಿಸುತ್ತ ದಣಿದರೂ ನಾವು, ದಣಿಯುವುದಿಲ್ಲ ಕುಪ್ಪಳಿಸುವ ಕಪ್ಪೆ’ ಎಂದಾಗ ’ಕಪ್ಪೆ’ ಚಿತ್ರಣಕ್ಕೆ ಹೊಸ ಅರ್ಥವೇ ಬಂದು ಬಿಡುತ್ತದೆ. ಸಾಮಾನ್ಯವಾಗಿ ದೀಪದ ಚಿತ್ರಣವನ್ನು ವಿವಿಧ ರೂಪಕಗಳನ್ನು ಬಳಸಿ ಕೊಡುವುದಿದೆ, ’ಸ್ತಬ್ಧಚಿತ್ರ’ ಕವನದಲ್ಲಿ, ’ಸಣ್ಣಗೆ ಉರಿಯುತ್ತಿರುವ ದೀಪ ತೂರಿಸುತ್ತಿದೆ ಮೂಗು ಎಲ್ಲ ಕಡೆ’ ಎಂದು ಕವಿ ದೀಪದ ವರ್ಣನೆಗೆ ಹೊಸತನ ತಂದಿದ್ದಾರೆ. ’ಪದಾರ್ಥ’ ಎಂಬ ಕವಿತೆಯಲ್ಲಿ ಒಬ್ಬ ರಾಜಕಾರಣಿ ತನ್ನ ಭಾಷಣದಲ್ಲಿ ಬಳಸಿದ ಮಾತಿನ ಅರ್ಥ ಹುಡುಕಲು ನಿಘಂಟನ್ನು ತಡಕುವ ಕವಿ, ’ಹಾಗೆಯೇ ಸುಮಾರು ಮೂರೂವರೆ ಗಂಟೆ ಅದನ್ನು ಉಚ್ಚರಿಸಿ ಉಚ್ಚರಿಸಿ ಉಚ್ಚರಿಸಿದಾಗ ಆ ಮಾತಿನ ಅರ್ಥವೆಲ್ಲ ಕರಗಿ ಸ್ವಚ್ಛವಾಯಿತು’ ಎನ್ನುವ ಮೂಲಕ ಮಾತು ಹೊಸ ಅರ್ಥಗಳಲ್ಲಿ ಬಳಕೆಯಾಗುತ್ತಾ ಅನೈತಿಕಗೊಳ್ಳುತ್ತಿದೆ ಎನ್ನುವುದನ್ನು ಹೇಳುತ್ತಾ, ನಿಘಂಟಿನ ಎಲ್ಲ ಪದಾರ್ಥಗಳನ್ನೂ ಸ್ವಚ್ಛಗೊಳಿಸಬೇಕಾದರೆ ಹತ್ತಾರು ಪೀಳಿಗೆಯೇ ಹೀಗೆ ಪ್ರಯತ್ನಿಸಬೇಕೇನೋ ಎಂಬ ಆತಂಕ ಹೊರಹಾಕುತ್ತಾರೆ.

’ಹಳದಿ’ ಕವನದಲ್ಲಿ ಸೂರ್ಯಕಾಂತಿ, ಮರಿಹಕ್ಕಿಗಳ ಕೊಕ್ಕು, ನಿಂಬೆ ಅನಾನಸ್ ಜ್ಯೂಸು, ಹೆದ್ದಾರಿಯಲ್ಲಿ ಬಿದ್ದ ಹಣ್ಣೆಲೆ ಎಂದು ಏಕಬಣ್ಣದ ವಿವಿಧ ವಸ್ತುಗಳನ್ನು ಹೆಸರಿಸುತ್ತಾ ಕೊನೆಗೆ ’ಒಂದೇ ನುಡಿಯ ಏಕತಾರಿ, ಕಾಮಾಲೆ ರಾಗದ ರಂಗು’ ಎನ್ನುವಾಗ ಪೂರ್ವಗ್ರಹದಿಂದ ಕೂಡಿದ ಮಾತು, ನೋಟ ಕೂಡ ಹಾಗೆಯೇ ಎಂಬುದನ್ನು ಸೂಚಿಸುತ್ತಾರೆ. ’ಅಂತ್ಯ ಮತ್ತು ಆದಿ’ ಕವಿತೆಯಲ್ಲಿ ಯುದ್ಧ ಮುಗಿದ ನಂತರದ ಜನಜೀವನವನ್ನು ಚಿತ್ರಿಸುವಾಗ ’ಸೇತುವೆಗಳನ್ನು ಮತ್ತೆ ಕಟ್ಟಬೇಕು, ರೈಲು ಹಳಿಗಳನ್ನೂ ಕೂಡ, ಮಡಿಸಿಕೊಳ್ಳಬೇಕು ಅಂಗಿಯ ತೋಳುಗಳನ್ನು ಹರಿದು ಚಿಂದಿಯಾಗುವವರೆಗೆ’ ಎಂದು ಕಟ್ಟುವ ಪ್ರಕ್ರಿಯೆ ಎಷ್ಟು ಯಾತನಾಮಯ, ತ್ರಾಸದಿಂದ ಕೂಡಿದ್ದು ಎಂಬುದನ್ನು ಚಿತ್ರಿಸುತ್ತಾರೆ. ’ಅವನ ಎರಡೂ ಕೈಯಿಗಳು ತೋಳುಗಳಿಂದ ಕಳಚಿಕೊಂಡು ಅವನ ಅನುಮತಿಯಿಲ್ಲದೆಯೇ ಹಾರಿಹೋಗಲಿಚ್ಛಿಸಿದುವು’ ಎಂಬ ಸಾಲು ’ಒಬ್ಬಂಟಿ’ ಕವನದಲ್ಲಿದೆ. ಒಂಟಿತನವನ್ನು ಇದಕ್ಕಿಂತ ಚೆನ್ನಾಗಿ ಚಿತ್ರಿಸಲು ಸಾಧ್ಯವೇ? ಒಟ್ಟಿನಲ್ಲಿ ಒಂದೊಂದು ಕವಿತೆಯೂ ಹತ್ತಾರು ಪ್ರತಿಮೆಗಳ ಮೂಲಕ ಓದುಗನ ಸಂವೇದನೆಯನ್ನು ಉದ್ದೀಪಿಸುತ್ತವೆ. ದಿವಕಾರರನ್ನು ಓದುವುದೆಂದರೆ ಅದು ಅರಿವಿನ ವಿಸ್ತರಣೆ ಎಂಬುದನ್ನು ಈ ಸಂಕಲನವೂ ನಿರೂಪಿಸಿದೆ.

ಪ್ರತಿ ಬಾರಿ ಓದಿದಾಗಲೂ ಹೊಸ ದಿಗ್ದರ್ಶನ ಮಾಡಿಸುವ ಎಸ್.ದಿವಾಕರ್ ಅವರ ಈ ಕವಿತೆಗಳ ಸಂಕಲನ ಬಹುರೂಪಿ ತಾಣದಲ್ಲಿ ಲಭ್ಯವಿದೆ… ಪುಸ್ತಕ ಕೊಳ್ಳಲು ಇಲ್ಲಿ ಕ್ಲಿಕ್ಕಿಸಿ..