- ಗಾಂಧಿ-ಸಿದ್ಧಾರೂಢರ ಭೇಟಿಗೆ ನೂರಾ ಮೂರು ವರ್ಷ - ನವೆಂಬರ್ 12, 2023
- ಕುವೆಂಪು ಕನಸಿನ ಸಚಿವ ಮಂಡಲ - ಡಿಸಂಬರ್ 29, 2021
- ನಕ್ಷತ್ರಗಳ ನೆಲದ ನಂಟು - ಅಕ್ಟೋಬರ್ 29, 2021
ನನ್ನ ಮಗಳು ಅನುಪಮಾ, ಶಿರಸಿಂಗಿ ಲಿಂಗರಾಜರ ವಾಡೆ ನೋಡಲು ಹೋಗೋಣ ಎಂದು ಅಗಾಗ್ಗೆ ಹೇಳುತ್ತಿದ್ದಳು.ಅವಳಿಗೆ ತ್ಯಾಗವೀರ ಶಿರಸಂಗಿ ಲಿಂಗರಾಜ ರವರ ಶೈಕ್ಷಣಿಕ ರಂಗಕ್ಕೆ ಕೊಡುಗೆ ನೀಡಿದ ವಿಚಾರಗಳು ಅವರು ನೆಲೆಸಿದ್ದ ಶಿರಸಂಗಿ ಯಲ್ಲಿ ಬಾಳಿ ಹೋದ ಮನೆಯನ್ನು ನೋಡುವ ಕುತೂಹಲವಿದ್ದಿರಬಹುದು.ಅದೂ ಅಲ್ಲದೇ ಅವಳ ಕಾಲೇಜು ಶಿಕ್ಷಣ ಬಿ ಎಸ್ ಸಿ ಯಿಂದ ಬಿ ಎಡ್ ವರೆಗೆ ಕೆ ಎಲ್ ಇ ಸಂಸ್ಥೆಯ ಮಹಾವಿದ್ಯಾಲಯದಲ್ಲಿ ಪಡೆದಿರುವದು ಕೂಡ ಕಾರಣವಾಗಿರಬಹುದು. ಅವಳು ಹೇಳಿದಂತೆ. ಕೆ ಎಲ್ ಇ ಸಂಸ್ಥೆಗೆ ಮೂಲಸಂಸ್ಥಾಪಕರಾದ ಸಪ್ತರ್ಷಿಗಳಲ್ಲಿ..ಶಿರಸಂಗಿ ಲಿಂಗರಾಜ ರವರ ಸ್ಮರಣೆ ಗಳಂತಹ ಕಾರ್ಯಕ್ರಮ ಗಳಲ್ಲಿ ಕಾಲೇಜಿನಲ್ಲಿ ಅತಿಥಿಗಳಿಂದ ಕೇಳಿದ ಅವರ ವ್ಯಕ್ತಿತ್ವ ದ ಬಹುಮುಖ ಉದಾರತೆಯನ್ನು ತಿಳಿದು, ಅವರ ಬಗೆಗೆ ವಿಶೇಷ ಅಭಿಮಾನ ಅವಳಲ್ಲಿ ಜಾಗೃತಿಯಾಗಿರಬಹುದೆಂದು ನಾನು ತಿಳಿದೆ..
ಅದರಂತೆ ಶಿರಸಂಗಿ ಊರಿಗೆ ಬಂದು..ಬಸ್ ನಿಲ್ದಾಣದಿಂದ ಕೆಲನಿಮಿಷಗಳ ಹಾದಿಯಲ್ಲಿ ಶಿರಸಂಗಿಯ ಸುಪ್ರಸಿದ್ಧ ಕಾಳಿಕಾದೇವಿಯ ಗುಡಿಗೆ ಹೋಗುವ ಹಾದಿಯಲ್ಲಿ ಶಿರಸಂಗಿ ಲಿಂಗರಾಜರವರ ವಾಡೆಯ ಬುರುಜುಗಳು ಗೋಚರಿಸುತ್ತವೆ.. ಸುತ್ತಲೂ ಗುಡ್ಡಗಳ ಆವೃತ್ತವಾದ ಭೂ ಪ್ರದೇಶವು ಕಬ್ಬಿನ ಹೊಲಗಳು,ತೋಟಪಟ್ಟಿಗಳು ಬಹಳ ಸುಂದರವಾಗಿದೆ ಶಿರಸಂಗಿ ಗ್ರಾಮದ ಪರಿಸರ. ಲಿಂಗರಾಜರ ವಾಡೆಯ ಭವ್ಯತೆ ಸಮೀಪ ಹೋಗುತ್ತಿರುವಂತೆ ನಮ್ಮ ಮನವನ್ನು ಆಕ್ರಮಿಸುತ್ತದೆ.
ವಾಡೆ ಪ್ರವೇಶದ ಮುಖ್ಯ ದ್ವಾರವು ಎತ್ತರವಾಗಿದೆ. ಅದರ ಮೇಲೆ ಶಿರಸಂಗಿ ಲಿಂಗರಾಜ ದೇಸಾಯಿಯವರ ಹೆಸರು ಬರೆಯಲಾಗಿದೆ. ಒಳಗೆ ಹೋಗಲು ಎಡ ಬಲ ಜಗಲಿಗಟ್ಟೆಗಳು. ನಂತರ ವಿಶಾಲವಾದ ವರಾಂಡ.ಅದರ ಎಡಬಲ ಐದಂಕಣಗಳ ಮಡಿಗೆಯ ಬಂಕಾ ಕಾಲದ ಹೊಡೆತಕ್ಕೆ ಸಿಕ್ಕು ಜೋತು ಬಿದ್ದು ಶಿಥಿಲವಾಗಿವೆ.ಮುಂದೆ ಅವರ ಅರಮನೆಯ ಮುಖ್ಯ ಕಟ್ಟಡ ವಿಶಾಲವಾದ ಪಡಸಾಲೆ ಪಟ್ಟ ನಡುವೆ ಶಿರಸಂಗಿ ಲಿಂಗರಾಜರವರ ವರ್ಣ ಚಿತ್ರವನ್ನು ಖುರ್ಚಿಯಲ್ಲಿ ಇಟ್ಟು ಪೂಜಿಸಿದ್ದರು.
ಎರಡಂತಸ್ಥಿನ ಕಟ್ಟಡವಿದ್ದು ಮೇಲಟ್ಟದಲ್ಲಿ ಅವರು ನಡೆಸಿದ ಸದರ ಎಂದು ಅಲ್ಲಿದ್ದ ಹಿರಿಯರಾದ ಅಮೃತಗೌಡ ಹಿರೇಗೌಡರು ಹೇಳಿದರು. ಸದರನ ಬಹು ದೊಡ್ಡ ತೊಲೆಗಳು ಪಡಿಜಂತಿ ಮಳೆ ನೀರು ಸೋರಿದ ಪರಿಣಾಮದಿಂದ ಕೊಳೆತು ಮುರಿದು ಜೋತಾಡುತ್ತಿದ್ದವು.
ಕೆಳಗಿನ ನಡುಮನೆಯ ಬಾಗಿಲ ಮೇಲೆ ಶಿರಸಂಗಿ ಕಾಳಿಕಾದೇವಿಯ ಒಡವೆಗಳನ್ನು ಇಡುವ ಕೊಠಡಿ ಎಂದು ಬರೆದ ಕೋಣೆಯನ್ನು ತೋರಿಸಿದರು. ಅದೂ ಕೂಡ ಮಡಿಗೆ ಜರುಗಿ ಬಿದ್ದು ಹೋಗಿದೆ.. ಮೊದಲು ಇಲ್ಲಿ ಕಾಳಿಕಾದೇವಿಯ ವಸ್ತ್ರ ಒಡವೆಗಳನ್ನು ಇದೇ ವಾಡೆಯಲ್ಲಿ ಲಿಂಗರಾಜರ ಉಸ್ತುವಾರಿ ಯಲ್ಲಿ ಇಡಲಾಗುತ್ತಿದ್ದುದನ್ನು ಅಲ್ಲಿನವರು ಹೇಳಿದರು. ಕಾಳಿಕಾದೇವಿಯ ದೇವಸ್ಥಾನಕ್ಕೂ ಲಿಂಗರಾಜರು ಅಪಾರವಾದ ಧನಕನಕಗಳನ್ನು ದಾನ ನೀಡಿದ್ದಾರೆ.
ನಡುಮನೆಗೆ ಎಡ ಬಲಗಳ ದ್ವಾರದಲ್ಲಿ ಹೋದರೆ ಎಡಕ್ಕೆ ಅವರ ಮನೆಯ ಗುರುಗಳಾದ ಶ್ರೀ ಕಾಡಸಿದ್ದೇಶ್ವರರ ದೇವರ ಮನೆ ಹೊಸತಾಗಿ ಕಟ್ಟಿರುವರು. ಅಲ್ಲಿ ಪುರಾತನ ಶಿವಲಿಂಗ. ಪೂಜೆಯ ಗದ್ದಗೆಯನ್ನು ಈಗಲೂ ಪೂಜಿಸುವ ಕೈಂಕರ್ಯವನ್ನು ಅಮೃತಗೌಡ ಹಿರೇಗೌಡರ ಸಂಬಂಧಿಗಳು ವ್ಯವಸ್ಥಿತವಾಗಿ ನೋಡಿಕೊಳ್ಳುತ್ತಿದ್ದಾರೆ. ಅವರ ಅರಮನೆಯ ಅಡುಗೆಮನಿ, ಉಳಿದ ಭಾಗಗಳು ಸಂಪೂರ್ಣವಾಗಿ ನಾಶವಾಗಿದೆ. ಅಲ್ಲಿ ಅವರ ಮನೆ ಇತ್ತೊ ಇಲ್ಲವೊ ಎಂಬಂತಾಗಿದೆ. ಮೆಲುಪ್ಪರಿಗೆಯ ಮಡಿಗೆಯೂ ಸೋರಿ ಸದರ ಕೂಡಾ ಬೀಳುವಂತೆ ಇದೆ.ಇಲ್ಲಿನ ಸದರು ಬೆಂಗಳೂರು ಟಿಪ್ಪು ಸುಲ್ತಾನರ ಬೇಸಿಗೆ ಅರಮನೆಯ ಸದರು, ಕಿತ್ತೂರ ಚೆನ್ನಮ್ಮನವರ ನರಗುಂದ ಬಾಬಾ ಸಾಹೇಬರ ಅರಮನೆಯ ಸದರುಗಳೆಲ್ಲಾ ಒಂದೇ ರೀತಿಯಲ್ಲಿವೆ.
ಶಾಲಿನಿ ರಜನೀಶರವರು ಬೆಳಗಾವಿ ಡಿ ಸಿ ಇದ್ದಾಗ ಈ ವಾಡೆಗೆ ಶಾಬಾದ ಕಲ್ಲು ಹೊಂದಿಸಲು ಸಹಾಯ ಮಾಡಿದ್ದನ್ನು ನಾವು ಪಡೆಸಾಲೆಯಲ್ಲಿ ಕುಳಿತ ನೆಲಹಾಸುಗೆ ತೋರಿಸಿದರು. ನಮ್ಮ ಮಗಳು ಅನುಪಮಾ ಉತ್ಸಾಹದಿಂದ ಅರಮನೆಯ ಬುರುಜಗಳ ದ್ವಾರಗಳನ್ನು ಹತ್ತಿ ಫೋಟೋ ತೆಗೆಯಲು ಓಡಾಡುತ್ತಿದ್ದಳು.
ಅವರ ಅರಮನೆಯ ಗೋಡೆಗಳ ಮೇಲೆ
ಅನೇಕ ಬರಹಗಳನ್ನು ಇತ್ತೀಚೆಗೆ ಬರೆಯಲಾಗಿದೆ
ಅಲ್ಲಿನ ಬಾಗಿಲು ಮೇಲೆ ಶಿರಸಂಗಿ ಲಿಂಗರಾಜ ರವರಿಗೆ ದತ್ತು ಪಡೆದ ಜಾಯಪ್ಪ ದೇಸಾಯಿ
ಯವರ ಕೈ ಬರಹದ ಫೋಟೋಗಳನ್ನು ತೂಗು ಬಿಡಲಾಗಿದೆ. ಮತ್ತೊಂದರಲ್ಲಿ ಲಿಂಗರಾಜರು ಕುದುರೆ ಮೇಲೆ ಕುಳಿತು ಹೊರಟಿರುವ ಫೋಟೋವಿದೆ. ಲಿಂಗರಾಜರವರಿಗೆ ಆತ್ಮೀಯರಾಗಿದ್ದ ಚಚಡಿ ದೇಸಾಯಿ ಯವರ ಮತ್ತು ಅರಟಾಳ್ ರುದ್ರಗೌಡರ ಭಾವಚಿತ್ರ ಗಳೂ ಇವೆ.
ಗೋಡೆಗಳ ಮೇಲೆ, ನೂರಾರು ವರ್ಷಗಳ ಕಳೆದರೂ ಶ್ರೀ ಲಿಂಗರಾಜ ರಂತಹ ದಾನಿಗಳೂ ಅಭಿಮಾನಿಗಳೂ ಹುಟ್ಟುವದು ವಿರಳ ಎಂದು ಆ ಕಾಲದ ಬೆಳಗಾವಿ ಬ್ರಿಟಿಷ್ ಅಧಿಕಾರಿ ಎ ಎಮ್ ಟಿ ಜಾಕ್ಸನ್ ಲಿಂಗರಾಜರ ಬಗೆಗೆ ಹೇಳಿದ ಅಭಿಮಾನದ ನುಡಿಗಳನ್ನು ಬರೆದಿರುವರು.
ನಾವು ಶಾಲೆಯಲ್ಲಿ ಪಾಠ ಓದುವಾಗ ತ್ಯಾಗವೀರ ಶಿರಸಂಗಿ ಲಿಂಗರಾಜರವರ ಪಾಠದಲ್ಲಿ ಬರುವ ಅವರು ನಮ್ಮ ನಾಡಿಗೆ ಮಾಡಿದ ತ್ಯಾಗದ ಘಟನೆಗಳು ನಮ್ಮ ಕಣ್ಮುಂದೆ ಹಾಯ್ದು ಹೋದವು.
1967ರಲ್ಲಿ ನಮ್ಮ ಏಳನೇ ತರಗತಿಯ ಗುರುಗಳು ಕಲಘಟಗಿ ಜುಂಜಪ್ಪ ಮಾಸ್ತಾರ ಇದೇ ವಾಡೆಗೆ ನಮ್ಮನ್ನು ಕರೆದುಕೊಂಡು ಅಲ್ಲಿಯೇ ಲಿಂಗರಾಜ ದೇಸಾಯಿಯವರ ಪಾಠ ಮಾಡಿದ ದಿನಗಳವು. ವಾಡೆಯ ಎಲ್ಲಾ ಭಾಗಗಳಲ್ಲಿ ತಿರುಗಾಡಿ ನಿಂತು ಅತೀವ ಅಭಿಮಾನ ದಿಂದ ಪಾಠ ಮಾಡಿದ್ದು ನನಗೆ ಈಗಲೂ ಮನದಲಿ ಇದೆ. ಆಗ ವಾಡೆ ಇನ್ನೂ ಇಷ್ಟೊಂದು ಕಿಗ್ಗಳಾಗಿರಲಿಲ್ಲ. ಈಗ ಅಲ್ಲಲ್ಲಿ ಸಿಮೆಂಟು ಪ್ಲಾಸ್ಟರ್ ಮೂಲಕ ಗೋಡೆಗಳನ್ನು ರಕ್ಷಿಸುವ ಅರ್ಧಮನಸ್ಸಿನ ಕೆಲಸ ನಡೆದಂತಿದೆ.
ಶಿರಸಂಗಿ ಲಿಂಗರಾಜ ದೇಸಾಯಿಯವರು ನಮ್ಮ ನಾಡಿನ ಹೆಮ್ಮೆಯ ಪುತ್ರರು.ಅವರು ಮೂಲತಃ ಲಕ್ಮೇಶ್ವರ ಬಳಿ ಯ ಶಿಗ್ಲಿಯವರು. ಮಡ್ಲಿ ಮನೆತನದ ಗೂಳಪ್ಪ ಮತ್ತು ಯಲ್ಲಮ್ಮನವರ ಪುತ್ರರು ಜನೇವರಿ 10 1861ರಲ್ಲಿ ಜನಿಸಿದರು. ಅವರನ್ನು ಶಿರಸಂಗಿಯ ಸಂಸ್ಥಾನಿಕರಾದ ಜಾಯಪ್ಪ ದೇಸಾಯಿಯವರು ಮತ್ತು ಗಂಗಾಬಾಯಿಯವರು ದತ್ತು ಪಡೆದರು. ಮುಂದೆ ಶಿರಸಂಗಿ ಲಿಂಗರಾಜ ದೇಸಾಯಿಯವರೆಂದು ಶಿರಸಂಗಿ ಸಂಸ್ಥಾನದ ಅಧಿಪತಿಯಾದರು.
ಅದರ ಸಂಸ್ಥಾನಿಕರಾಗಿ ಇದೇ ಅರಮನೆಯಲ್ಲಿ ಅನೇಕ ಜನಮುಖಿ ಮತ್ತು ಸಮುದಾಯಗಳ ಅಭಿವೃದ್ಧಿಗೆ ಚಿಂತನೆ ನಡೆಸಿದರು.. ಪ್ರಗತಿ ಪರ ಕೃಷಿಯಿಂದ ಪರಂಪರೆಯ ಒಕ್ಕಲುತನಕೆ ಹೊಸ ರೂಪ ಕೊಡಲು ಹಾವೇರಿ ಬಳಿಯ ದೇವಿ ಹೊಸೂರು ಬಳಿ 150 ಎಕರೆ ಭೂಮಿಯನ್ನು ಖರೀದಿಸಿ ರೈತರಿಗೆ ಅಂದಿನ ದಿನಗಳಲ್ಲಿಯ ಸುಧಾರಿತ ಕೃಷಿ ಪದ್ಧತಿಯನ್ನು ಕಲಿಸುವ ತರಬೇತಿ ಕೇಂದ್ರ ವನ್ನು ಪ್ರಾರಂಭಿಸಿದರು. ಅವರ ಆಡಳಿತದ ನವಲಗುಂದ ಮತ್ತು ಶಿರಸಂಗಿಯಲ್ಲಿ ದೊಡ್ಡ ಕೆರೆಗಳನ್ನು ಕಟ್ಟಿಸಿ ಕರೆ ನೀರಾವರಿಯ ಮೂಲಕ ರೈತರ ಆದಾಯ ದ್ವಿಗುಣಿಸುವದನ್ನು ಕಾರ್ಯ ರೂಪಕ್ಕೆ ತಂದಿದ್ದು ಅವರ ರೈತರ ಕಾಳಜಿಗಳಿಗೆ ಸಾಕ್ಷಿಯಾಗಿದೆ. ಅಂದಿನ ದಿನಗಳಲ್ಲಿ ವಿಧವಾ ವಿವಾಹಗಳನ್ನು ಪ್ರೋತ್ಸಾಹಿಸಿದ ಪ್ರಗತಿ ಪರ ಸಾಮಾಜಿಕ ಕಾರ್ಯ ಸಾಮಾಜಿಕ ಮನ್ನಣೆ ಪಡೆಯಿತು.ಅವರ ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿದ ಸೇವೆ ಅಭೂತಪೂರ್ವವಾಗಿದೆ. ಅವರು ಬೆಳಗಾವಿಯ ಕೆ ಎಲ್ ಇ ಸಂಸ್ಥೆಗೆ ಅಪಾರವಾದ ಧನ ಸಹಾಯ ಮಾಡಿದರು. ಕೆ ಎಲ್ ಇ ಸಂಸ್ಥೆಯವರೂ ಸಹ ಬೆಳಗಾವಿಯಲ್ಲಿ ಲಿಂಗರಾಜ ಕಾಲೇಜ ಎಂದು ನಾಮಕರಣ ಮಾಡಿ ಅವರಿಗೆ ಗೌರವ ಸಲ್ಲಿಸಿದೆ.
ಲಿಂಗರಾಜ ದೇಸಾಯಿಯವರು ಇಷ್ಟಕೆ ಸಮಾಧಾನವಾಗದೆ ತಮ್ಮ ಸಂಸ್ಥಾನ ಸಮಸ್ತ ಆಸ್ತಿಪಾಸ್ತಿ ಗಳನ್ನು ತ್ಯಾಗ ಮಾಡಿ ಲಿಂಗರಾಜ ದೇಸಾಯಿ ಟ್ರಸ್ಟ್ ಮಾಡಿ ವಿದ್ಯಾಭ್ಯಾಸಕ್ಕಾಗಿ ಮೀಸಲಿಟ್ಟರು..ಅಂದಿನ ಅವರ ಸಂಸ್ಥೆಯ ಒಟ್ಟು ಆದಾಯ 6ಲಕ್ಷ ರೂಪಾಯಿ.. 1930ರಿಂದ 1980ರವರೆಗೆ 22,98,320=00 ರೂಪಾಯಿಗಳಿಂದ 6925 ವಿಧ್ಯಾರ್ಥಿ ಗಳು ಪ್ರಯೋಜನ ಪಡೆದಿರುವರು. ಅವರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಿ ಸಿ ಪಾವಟೆಯವರು ಮುಖ್ಯ ಮಂತ್ರಿಯಾಗಿದ್ದಾರೆ. ಬಿ ಡಿ ಜತ್ತಿಯವರು,ಎಸ್ ಆರ್ ಕಂಠಿಯವರು,ಮಹಾರಾಷ್ಟ್ರದ ಸಹಕಾರಿರಂಗದ ನಾಯಕರಾಗಿದ್ದ ರತ್ನಪ್ಪಣ್ಣ ಕುಂಬಾರ ಇವರು ಕಾಣಬರುವ ಮುಖ್ಯರು.. ಇವರಂತೆ ಅನೇಕ ಮಹಾನ್ ಸಾಧಕರು ಶಿರಸಂಗಿ ಲಿಂಗರಾಜ ರವರ ಟ್ರಸ್ಟ್ ನ ಶೈಕ್ಷಣಿಕ ಪ್ರಯೋಜನ ಪಡೆದಿದ್ದಾರೆ.
ಅವರು ಧನ ಸಹಾಯ ಮಾಡಿದ ಅನೇಕ ಶಿಕ್ಷಣ ಸಂಸ್ಥೆಗಳು ಈಗ ಬೆಳೆದು ಹೆಮ್ಮರವಾಗಿವೆ.ಈ ಸಂಸ್ಥೆಗಳಲ್ಲಿ ಎಲ್ಲಾ ಸಮಾಜಗಳ ಸಮುದಾಯದವರೂ ಓದಿ ಉನ್ನತ ಸ್ಥಾನಗಳನ್ನು ಪಡೆದಿದ್ದಾರೆ.. ಅವರ ಶೈಕ್ಷಣಿಕ ಪ್ರಗತಿಯಿಂದ ಆರ್ಥಿಕ ಪ್ರಗತಿ ಕಂಡಿದ್ದಾರೆ. ಗೌರವದ ಸಾಮಾಜಿಕ ರಾಜಕೀಯ ಸ್ಥಾನಮಾನ ಗಳನ್ನು ಪಡೆದಿದ್ದಾರೆ .
ಇಷ್ಟಲ್ಲಾ ವಿಚಾರಗಳನ್ನು ನನ್ನ ಮಗಳು ಅನುಪಮಾ ಳೊಂದಿಗೆ ಮಾತನಾಡುತ್ತ ಶಿರಸಂಗಿ ಕಾಳಿಕಾ ದೇವಸ್ಥಾನಕೆ ನಡೆದು ಬರುವಾಗ ದಾರಿಯಲ್ಲಿ ಅವಳು ಕೇಳಿದ ಪ್ರಶ್ನೆ..ಅಪ್ಪಾಜಿ.. ಪೂಜ್ಯ ಲಿಂಗರಾಜ ದೇಸಾಯಿಯವರ ತ್ಯಾಗ ವನ್ನು ಕಂಡು ಈ ಜನರು ಅವರ ವಾಡೆಯನ್ನು ಎಷ್ಟೊಂದು ದುಸ್ಥಿತಿಯಲ್ಲಿಟ್ಟಿದ್ದಾರೆ..? ನನಗೆ ಏನು ಹೇಳಬೇಕೆಂದು ತಿಳಿಯಲಿಲ್ಲ.
ಈಗ ಸಮಾಜ ಕೃತಘ್ನವಾಗಿದೆ. ಅವರ ಉಪಕಾರದ ಸ್ಮರಣೆ ಯಾರಿಗೂ ಇಲ್ಲ. ಅವರ ವಾಸಿಸಿದ ಅರಮನೆಯ ಬುರುಜುಗಳ ಸುತ್ತಲೂ ಕಂಟಿ ಕಾಬಲು ಬೆಳೆದು ಶಿಥಿಲಾವಸ್ಥೆಯನ್ನು ಕಂಡು ಕಣ್ಣು ಗಳು ತೇವಗೊಂಡವು.. ಧಾರವಾಡದ ದಾರಿ ಹಿಡಿದ ಬಸ್ಸಿನಲ್ಲಿ ಶಿರಸಂಗಿಯಿಂದ ದಾಟಿದ ಕೆಲವೇ ಕ್ಷಣಗಳಲ್ಲಿ ನರಗುಂದ ಗುಡ್ಢ ಕಂಡು ಬಾಬಾ ಸಾಹೇಬರ ವಾಡೆಯ ನೆನಪು ಬಂದಿತು.. ಸವದತ್ತಿಯ ಲಿಂಗರಾಜ ಸರ್ಕಲ್ ನಲ್ಲಿ ಈಗಿನ ಭೃಷ್ಟ ನಾಯಕರ ಕಟ್ಟೌಟ್ ಗಳನ್ನು ಕಂಡು ಅಸಹ್ಯವೆನಿಸಿತು ..ಸವದತ್ತಿಯನ್ನು ಬಿಟ್ಟು ಎಲ್ಲಮನ ಗುಡ್ಡದ ದಾರಿಯಲ್ಲಿ ಏರುವಾಗ.. ಇದೇ ಶಿರಸಂಗಿ ಯ ಜಾಯಪ್ಪ ದೇಸಾಯಿಯವರು ಕಟ್ಟಿದ ಕೋಟೆ ಕಾಣಿಸಿತು.. ಮಲ್ಲಪ್ರಭೆಯ ನೀರ ಹರಿವಿನಲ್ಲಿ ತ್ಯಾಗವೀರ ಲಿಂಗರಾಜ ದೇಸಾಯಿಯವರ ನೆನಪುಗಳು ತಂಪಾಗಿ ಕಂಡವು.. ಆದರೆ ಅವರು ವಾಸಿಸುತ್ತಿದ್ದ ಶಿರಸಂಗಿ ವಾಡೆಯ ದುಸ್ಥಿತಿ, ಕೃತಘ್ನತೆ ಉಪಕಾರಗೇಡಿ ಜನರ ಮುಖಕ್ಕೆ ಹಿಡಿದ ಕನ್ನಡಿಯಾಗಿದೆ.ಭಾರವಾದ ಮನಸಿನೊಂದಿಗೆ ಮನೆಗೆ ಬಂದೆ…
ಹೆಚ್ಚಿನ ಬರಹಗಳಿಗಾಗಿ
ಗಣೇಶನ ಕೈಯಲ್ಲಿಯ ಲಾಡು
ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ..
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ