ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಬೀದಿ ಬದಿಯ ಬಸಿರು

ದಾರಿಹೋಕ​
ಇತ್ತೀಚಿನ ಬರಹಗಳು: ದಾರಿಹೋಕ​ (ಎಲ್ಲವನ್ನು ಓದಿ)

ದಿನಪೂರ್ತಿ ಅದೆಷ್ಟೋ ಬದುಕುಗಳನ್ನು ಕಚ್ಚಿ, ಕವರಿ ಚಿಂತೆ ಒಸರುವಂತೆ ಮಾಡಿದ ನಗರವೆಂಬ ನಾಯಿ ಈಗ ಕತ್ತಲ ಜೋಳಿಗೆಯ​ಲ್ಲಿ ಲಕ್ವ ಹೊಡೆದು ಬಿದ್ದಿದೆ. ಆದರೂ ಸುಮ್ಮನಿಲ್ಲ – ಅಷ್ಟಿಷ್ಟು ಕುಂಞ್ಗುಡುತ್ತಲೇ ಇದೆ. ಇದರ ಕುಂಞ್ಗುಡಿತಕ್ಕೆ ಪ್ರತಿಯಾಗಿ ಅತ್ತ ಮೋಡಗಳು ತಮ್ಮ ಕೋರೆಹಲ್ಲುಗಳನ್ನು ಝಳಪಿಸಿ ಬೊಗಳುತ್ತಿವೆ. ಹರಿದು ಚೆಲ್ಲಿದ ಹನಿಗಳು ರಸ್ತೆಯ ತಗ್ಗಿನಲ್ಲಿ ನಿಂತು ಏದುಸಿರಿಡುತ್ತಿವೆ. ನಡುವಲ್ಲಿ ಹಾದುಹೋದ ಮೆಟ್ರೋ ಫ್ಲೈ ಓವರ್ ಸೂರಿನ ಕೆಳಗೆ ಉದ್ದ ಗೋಣಿಚೀಲವೊಂದನ್ನು ಮಧ್ಯ ಹರಿದು ಅಡ್ಡಡ್ಡ ಹಾಸಿ ತನ್ನೈದು ಜನ ಮಕ್ಕಳೊಂದಿಗೆ ಹೊದಿಕೆಯೂ ಇಲ್ಲದೆ ತಣ್ಣನೆ ಕೊರಡಿನಂತೆ ಬಿದ್ದಿದ್ದ ಸಂಪಿಗೆಯ ದೇಹವೀಗ ಯಾಕೋ ಸಣ್ಣಗೆ ಮುಲುಕಾಡುತ್ತಿದೆ. ಉಬ್ಬಿದ ಹೊಟ್ಟೆಯ ಕೆಳಗೆ ಬೆನ್ನುಹುರಿ ಲಗಾಮು ಹಿಡಿದು ಎಳೆದಂತೆ ಸರ‍್ರನೆ ಜಗ್ಗಿದೆ. ಚಾಚಿದ ಕಾಲುಗಳು ಮೇಲಕ್ಕೆ ಮಡಚುತ್ತಿವೆ. ಕಾಲ್ಬೆರಳುಗಳು ನೆಲದ ಕಲ್ಲು ಬಗೆಯಲು ಚಡಪಡಿಸುತ್ತಿವೆ. ಕೈಬೆರಳುಗಳು ಕೆಳಗೆ ಹಾಸಿದ ಗೋಣಿಚೀಲವನ್ನು ಸುರುಳಿ ಸುರುಳಿಯಾಗಿ ಜಗ್ಗಿ ಹಿಂಡುತ್ತಿವೆ.  ಹಣೆಯಲ್ಲಿ ಬೆವರ ಮಣಿಗಳು. ಬಿಗಿದ ತುಟಿಗಳ ಬಿಲದಿಂದ “ಮ್ಮಾsss” ಎಂಬ ನರಳಾಟ ಹೊರಬೀಳಲು ಸೆರಗಲ್ಲಿ ಕಟ್ಟಿದ್ದ ಒಂದೂವರೆ ವರ್ಷದ ಮಗಳು ಬೆಚ್ಚಿ ಕಿಟಾರೆಂದಳು. ಎರಡರಲ್ಲಿ ಯಾವುದೋ ಒಂದು ಕೂಗಿಗೆ ಎಲ್ಲರ ಕಿವಿಗಳು ಎದ್ದು ಕುಳಿತಿವೆ. ರಾಚುವ ಬೀದಿ ದೀಪದ ಬೆಳಕನ್ನು ಸುಧಾರಿಸಿಕೊಂಡು ಕೆಲವು ಕಣ್ಣುಗಳು ಮಗುವನ್ನು ಮತ್ತೆ ಕೆಲವು ತಾಯಿಯನ್ನು ದೂರುತ್ತಿವೆ. ನಿದ್ದೆ ಹಾರಿದ ಹೇಸಿಗೆ ಎಲ್ಲೆಡೆ ತುಂಬಿದೆ. ಯಾವ ಮುಖದಲ್ಲೂ ಆಶ್ಚರ್ಯ, ಆತಂಕಗಳ ಛಾಯೆಯಿಲ್ಲ! ಅಲ್ಲೇ ಮಲಗಿದ್ದ ಮೂರ್ನಾಲ್ಕು ಜನ ಹೆಂಗಸರು ತಮ್ಮ ಕೊಳೆಗಂಟುಗಳಲ್ಲಿ ತಡಕಾಡಿ ಒಂದೊಂದು ಸೀರೆ ಹಿಡಿದು ನಿರ್ವಿಕಾರ ಮೂರ್ತಿಗಳಂತೆ ಸಂಪಿಗೆಯ ಬಳಿ ಸರಿಯುತ್ತಿದ್ದಾರೆ.. ಗಾಬರಿಯಾಗಿ‌ ಕುಳಿತ ಮಕ್ಕಳನ್ನು ದೂರತಳ್ಳಿ, ಸೆರಗಲ್ಲಿ ಮಲಗಿದ್ದ ಕೂಸನ್ನು ಎತ್ತಿ ಹಿರಿಮಗನ ಕೈಗಿಟ್ಟು ಸಂಪಿಗೆಯ ಸುತ್ತ ಸೀರೆ ಬಿಡಿಸಿ ಮರೆಮಾಡಿದರು. ಅರ್ಧಂಬರ್ಧ ಬಿಳಿಗೂದಲ ಹೆಂಗಸೊಬ್ಬಳು ಪಕ್ಕದಲ್ಲೇ ಕುಳಿತು “ಹೇಯ್ ತ್ಪೂ.. ಸುಮ್ಕಿರು. ಯಾಕ್ಹಿಂಗ್ ಕಿರುಚ್ತ್ಯಾ ಲೋಪರ್ಮುಂಡೆ..” ಎಂದೇನೋ ಬೈಯುತ್ತಿದ್ದಳು. ಇನ್ನೊಬ್ಬಳು ಹೋಗಿ ಅಲ್ಯೂಮಿನಿಯಂ ಬೋಸಿಯಲ್ಲಿ ಮಳೆನೀರು ಶೇಖರಿಸಿ ತಂದಳು. ಗಂಡಸರ ಬೆತ್ತಲೆ ಕಣ್ಣುಗಳು ಸೀರೆಯ ಮರೆಯಲ್ಲಿ ಕಾಣುವ ಸಂಪಿಗೆಯ ಮಾಂಸವನ್ನು ಮುಕ್ಕುತ್ತಿದ್ದವು.

ನರಳಾಟ ಹೆಚ್ಚಿದಂತೆಲ್ಲ ಸುತ್ತಲ ಮುಖಗಳು ಹಿಂಡುತ್ತಿವೆ. ದೂರ ಕಂಬವೊರಗಿ ಕುಳಿತ ಮಕ್ಕಳು ಮಿಗಿ ಮಿಗಿ ನೋಡುತ್ತಿವೆ. ದೊಡ್ಡವನಿಗೆ ಇದೆಲ್ಲಾ ಏನು ನಡೆಯುತ್ತಿದೆ ಎಂಬುದು ಗೊತ್ತು.. ಹೊಸ ತಮ್ಮನದೋ ತಂಗಿಯದೋ ನಿರೀಕ್ಷೆಯಲ್ಲಿದ್ದಾನೆ ಅವನು. ಅವನ ತೊಡೆಯ ಮೇಲೆ ಮಲಗಿರುವ ಪುಟ್ಟಿ ತಾರಕದಲ್ಲಿ ಕಿರುಚುತ್ತಿದ್ದಾಳೆ. ಅಮ್ಮನ ಎದೆಯೇ ಬಂದು ಬಾಯಿಗೆ ಬೀಳುವ ತನಕ ಅವಳು ಸುಮ್ಮನಾಗುವುದಿಲ್ಲ. ಆಕಾಶದಲ್ಲಿ ಕಲೆತ ಮೋಡಗಳ ಗುಂಪು ಒಂದರಮೇಲೊಂದು ಎರಗಿ ಬೊಗಳುತ್ತಿವೆ. ಮಳೆ ಹನಿಗಳು ಎಲ್ಲರ ಮುಖಕ್ಕೂ ರಾಚುವಷ್ಟು ಬಿರುಸಾಗಿದೆ. ಸಂಪಿಗೆಯ ಹಿಂದೆ ಮುಂದೆ ಬಿಡಿಸಿದ ಸೀರೆಗಳಾಗಲೇ ಒದ್ದೆಮುದ್ದೆಯಾಗಿವೆ. ಪಕ್ಕದಲ್ಲಿ ಕುಳಿತ ಹೆಂಗಸಿನ ಬಾಯಿ ಬೈಯುತ್ತಲೇ ಇದೆ. ಅವಳ ಬೈಗುಳವನ್ನು ತಡೆಯಲಾರದೆ ಏನೋ ಒಮ್ಮೆ ಬಿಗಿಯಾಗಿ ಮುಕ್ಕಿರಿದು “ಮ್ಮಾsss” ಎಂದು ಅರಚಿದಳು.. ಹೊಟ್ಟೆಯ ಕಸದೊಟ್ಟಿಗೆ ಆರ್ಭಟಿಸುತ್ತ ಗಂಡು ಮಗುವೊಂದು ಕೆಳಗುದುರಿತು. ಪಕ್ಕದಲ್ಲಿದ್ದ ಹೆಂಗಸು “ಚಾಕು.. ಚಾಕೂ..” ಎಂದಳು. ಎಲ್ಲರೂ “ಚಾಕು.. ಚಾಕೂ..” ಎಂದರು. ಹುಡುಗನೊಬ್ಬ ಅರ್ಧ ಮುರಿದ ಹಳೇ ಶೇವಿಂಗ್ ಬ್ಲೇಡನ್ನು ತಂದು ಕೈಗೆ ಕೊಟ್ಟ. ಅದರಲ್ಲೇ ಬಳ್ಳಿಯನ್ನು ಕಡಿದು ಗಂಟು ಹಾಕಿದರು. ಬೋಸಿಯಲ್ಲಿದ್ದ ಕೊರೆಯುವ ಹನಿಗಳೊಳಗೆ ಸೆರಗದ್ದಿ ತೆಗೆದು ಮಗುವಿನ ಮೈ ಒರೆಸಿ, ತಾಯಿಯ ಪಕ್ಕಕ್ಕೆಸೆದ ಹೆಂಗಸರು ಬಂದಷ್ಟೇ ನಿರ್ವಿಕಾರವಾಗಿ ಚದುರಿ ತಮ್ಮ ತಮ್ಮ ಗೋಣಿಚೀಲ ಸೇರಿದರು. ಇಷ್ಟೂ ಹೊತ್ತು ಪರದೆ ಹಿಂದಿನ ನೆರಳುಗಳಂತೆ ಇದ್ದ ತಾಯಿ-ಮಗು ಇಬ್ಬರೂ ಬಟಾಬಯಲಿಗೆ ಬಿದ್ದರು. ದೂರ ಕುಳಿತ ಮಕ್ಕಳು ಎದ್ದು ಅಮ್ಮನ ಹತ್ತಿರ ಬಂದರು. ಪುಟ್ಟಿ ಸುಸ್ತಾಗಿ ಮಲಗಿಬಿಟ್ಟಿದ್ದಾಳೆ. ಸುತ್ತಲೂ ಕಾಣುತ್ತಿದ್ದ ರೆಪ್ಪೆಗಳು ಒಂದೊಂದಾಗಿ ಮಗುಚಿದವು. ಎರಡು ಚಿಗುರು ಮೀಸೆಗಳು ಮಾತ್ರ ಇನ್ನೂ ಹಾಲುಣಿಸಲು ಹೊರಬಾರದ ಅವಳ ಎದೆಯ ಮಾಂಸಕ್ಕಾಗಿ ಕಾದಿವೆ. ಕೆಳಗೆ ಹರಿದ ಹೊಲಸು ಹಸಿ ಹಸಿ ನಾರುತ್ತಿದೆ.

ಇನ್ನೂ ಕತ್ತಲೆ ಆರದ ಬೆಳಗಿನಲ್ಲೇ ಎದ್ದು ಕುಳಿತಳು ಸಂಪಿಗೆ. ಮಳೆ ನಿಂತಿದೆ. ಮುಂಜಾವಿನ ಚುಮು ಚುಮು ಹೊಡೆತಕ್ಕೆ ದೇಹಗಳು ಮುದುಡಿವೆ. ಸಾವಕಾಶ ಮೇಲೆದ್ದು ರಾತ್ರೆ ಹೊಲಸಾದ ಗೋಣಿಚೀಲವನ್ನು ಗೋರಿ ಹತ್ತಿರದಲ್ಲೇ ನಿಂತ ಕಸದ ಗಾಡಿಗೆ ಎಸೆದು ಬಂದಳು. ದೊಡ್ಡವನನ್ನು ಎಬ್ಬಿಸಿ ಅವನ ತೊಡೆಯ ಮೇಲೆ ಹೊಸಾ ತಮ್ಮನನ್ನು ಹಾಕಿ, ಪಕ್ಕದಲ್ಲಿ ಮಲಗಿದ ಪುಟ್ಟಿಯನ್ನೂ ಉಳಿದ ತಮ್ಮ ತಂಗಿಯರನ್ನೂ ನೋಡಿಕೊಳ್ಳಲು ಹೇಳಿ, ಬಟ್ಟೆಗಂಟಿನಿಂದೊಂದು ಸೀರೆ ಎಳೆದು ಹೊರಟಳು.

ಎಡಗಡೆ ಬೀದಿಯ ಕೊನೆಯಲ್ಲಿ ಒಂದು ಹಳದಿ ಟ್ಯಾಂಕು. ನೆಲಕ್ಕೆ ಹತ್ತಿದಂತೆ ಒಂದಡಿ ಮೇಲೆ ನೀರಿನ ಕೊಳವೆ. ಕೊಳವೆಯ ಬಾಯಲ್ಲಿ ನಲ್ಲಿ.. ಇಲ್ಲ! ಅದನ್ಯಾರೋ ಕದ್ದಿದ್ದಾರೆ.. ಮುರಿದ ಕೋಲಿಗೆ ಬಟ್ಟೆ ಸುತ್ತಿ ತುರುಕಿದ್ದಾರೆ. ಕೊಳವೆಯ ಬಾಯಿಂದ ಕೋಲು ಕಿತ್ತು ತಣ್ಣೀರು ಮುಟ್ಟಿದಳು ಹಸಿ ಬಾಣಂತಿ.. ಸುತ್ತಲೂ ಕಣ್ಣರಳಿಸಿ ನೆರಿಗೆ ಜಾರಿಸಿದಳು.. ಭಯದಿಂದಲೋ, ಚಳಿಯಿಂದಲೋ ತರತರ ನಡುಗುತ್ತಿದ್ದಾಳೆ.. ಕತ್ತಲಿನ್ನೂ ಹೊಗೆಯಾಡುತ್ತಲೇ ಇದೆ..

ಭಿಕ್ಷೆಗೆ ಹೋಗುವಷ್ಟು ತ್ರಾಣವಿಲ್ಲ ಸಂಪಿಗೆಗೆ. ಸಂಸಾರದ ಜವಾಬ್ದಾರಿ ಸ್ವಲ್ಪ ದಿನ ದೊಡ್ಡವನೇ ನೋಡಬೇಕಿದೆ. ಅವನಿಗೆ ದುಡಿಮೆ ಗೊತ್ತು. ಬೆಳಕು ಹರಿಯುತ್ತಲೇ ಸಿಗ್ನಲ್ ಹತ್ತಿರ ಹೋಗಿ ನಿಲ್ಲುತ್ತಾನೆ. ಪ್ರತಿ ಸಿಗ್ನಲ್ ಬಿದ್ದಾಗಲೂ ಎಲ್ಲರ ಬಳಿ ನಿಂತು ತನ್ನ ದಾರಿದ್ರ್ಯ ಪ್ರದರ್ಶನ ನೀಡಿ ಚಿಲ್ಲರೆ ಕೂಲಿ ಗಿಟ್ಟಿಸುತ್ತಾನೆ. ಬಹಳಷ್ಟು ಪ್ರೇಕ್ಷಕರು ಬಿಟ್ಟಿ ಪ್ರದರ್ಶನ ಕಂಡು ಹೋಗಿ ಬಿಡುತ್ತಾರೆ.. ಮತ್ತೆ ಕೆಲವರು ಇವನಿಗಿಂತ ಹೆಚ್ಚಿನ ದೈನ್ಯವನ್ನು ಮುಖದಲ್ಲಿ ತುಂಬಿಕೊಂಡು ಕೆಳತುಟಿ ಮುಂದಕ್ಕೂದಿಸಿ ಗಾಳಿಯಲ್ಲಿ ಕೈ ಹಾರಿಸಿ ಒಂದು ಕೆಟ್ಟ ನಗೆ ನಗುತ್ತಾರೆ.. ಹಲವರು ಹಳೇ ಸಾಲಗಾರರಂತೆ ಹೆದರಿ ಎತ್ತೆತ್ತಲೋ ನೋಡುತ್ತಿರುತ್ತಾರೆ.. ಖಯಾಲಿ ಇದ್ದವರು ಕೇಳುತ್ತಾರೆ “ಹೇಯ್, ನೀನು ಶಾಲೆಗೆ ಹೋಗಲ್ವಾ?” ಅಂತವರನ್ನು ಅಲ್ಲೇ ಎಸೆದು ಪಕ್ಕದ ಗಾಡಿಗೆ ಓಡುತ್ತಾನೆ.

ಅವರ ಪುಟ್ಟಿಯೂ ಏನು ಹಿಂದೆ ಉಳಿದಿಲ್ಲ ದುಡಿಮೆಯಲ್ಲಿ. ಬೆಳಗ್ಗೆಯೇ ಮೂವತ್ತು ರೂಪಾಯಿ ದುಡಿದುಬಿಟ್ಟಳು ಅವಳು. ಬಾಕಿ ಇಪ್ಪತ್ತು ಇನ್ನೂ ಬರುವುದಿದೆ. ಅದಕ್ಕಾಗಿ ಆ ಹೆಂಗಸಿನ ಗಬ್ಬು ಜೋಳಿಗೆಯಲ್ಲಿ ಸುಮ್ಮನೆ ಕುಳಿತಿರಬೇಕು ರಾತ್ರಿಯ ತನಕ. ಅಮ್ಮ ಗಿಮ್ಮ ಎಂದು ಅಳುವಂತಿಲ್ಲ ಅಲ್ಲಿ. ಅತ್ತರೆ ತುಟಿಗಳ ಮೇಲೆ ಪಳೀರೆಂದು ಹೊಡೆಯುತ್ತಾಳೆ. ಅಯ್ಯೋ! ದೊಡ್ಡವರಂತೆ ಉಕ್ಕುವ ಅಳುವನ್ನು ಒಳಗೇ ಹೆಪ್ಪುಗಟ್ಟಿಸುವುದು ಕಲಿತಿಲ್ಲ ಆ ಹಸುಳೆ. ಬಾಯಾರಿದಾಗ ‘ಇಯ್ಯಾ’ ಎನ್ನುವಂತಿಲ್ಲ. ಗಲ್ಲಗಳ ಮೇಲೆ ಕಣ್ಣೀರ ಕೆರೆಯಿದೆ….

ನಿನ್ನೆ ಕುಡಿದು ಗಟಾರದ ಸಖ್ಯ ಬೆಳೆಸಿದ್ದ ಅಪ್ಪ ಎಚ್ಚರಾದ ಕೂಡಲೇ ತೂಗಾಡುತ್ತ ಹೆಂಡತಿ ಮಕ್ಕಳು ಇರುವಲ್ಲಿಗೆ ಬಂದಿದ್ದಾನೆ. ಮತ್ತೆ ಹಣ ಕೀಳಲು ಸಂಜೆತನಕ ಕಾಯಬೇಕಿದೆ ಅವನು. ಹೊಟ್ಟೆ ಚುರ್ ಎನ್ನುತ್ತಿದೆ.

ಹೆಂಡತಿಯನ್ನು ತಿವಿದ – “ಕಾಸ್ ಕೊಡೆ, ಊಟ ಮಾಡ್ಬೇಕು..

ಮಕ್ಕಳನ್ನು ನೋಡುತ್ತ ಹೇಳಿದಳು – “ಅವುಕ್ಕೇ ಏನಿಲ್ಲ. ನಿಂಗೆಲ್ಲಿಂದ ತರ್ಲಿ..

“ಐs, ತ್ಪೂ ನಿನ್..” – ಎಂದು ಹೋಗಿ ಫ್ಲೈ ಓವರ್ ಕಂಬವೊರಗಿ ಕುಳಿತು ಏನನ್ನೋ ಗುನುಗುಣಿಸುತ್ತಿದ್ದಾನೆ..

ಅಕ್ಕ ಪಕ್ಕ ಸಾವಿರಾರು ವಾಹನಗಳು ಅವರ ಉಸಿರಿನೊಳಗೆ ಕರಾಳ ಹೊಗೆಯನ್ನು ತುಂಬಿಸಿ ಸರಿದಾಡುತ್ತಿವೆ. ಎಲ್ಲರ ಕಣ್ಣಿಗೂ ಧೂಳಿನ ಪರದೆಯಿದೆ. ಕಿವಿಗಡಚ್ಚಿಕ್ಕುವ ಆ ಹಾರನ್ ತಮಗಲ್ಲ ಎಂಬ ಅರಿವಿದೆ. ಇದರಾಚೆಗೆ ಅವನ ಯೋಚನೆ ಆವರಿಸಿದೆ..

ತಾನಾಗಿಯೇ ಮಗುವನ್ನು ತಂದು ಮುಂದೆ ಹಿಡಿದು ನಕ್ಕಳು ಸಂಪಿಗೆ. ಅವನ ಕಣ್ಣುಗಳೊಮ್ಮೆ ಮಗುವನ್ನು ಇನ್ನೊಮ್ಮೆ ಸಂಪಿಗೆಯನ್ನು ಮೂಸಿ ಎತ್ತಲೋ ತಿರುಗಿದವು.

“ಗಂಡ್ಮಗು” ಎಂದಳು.

ನಿರ್ಲಕ್ಷ್ಯ​ದ ಹ್ಙೂಕಾರ ಮರಳಿತು.

ಅವನ ಮುಖದಲ್ಲಿ ಮಗು ಹುಟ್ಟಿದ್ದಕ್ಕೆ ಬೇಸರವೇನೂ ಇಲ್ಲ. ಸಂತೋಷ ಪಡಬೇಕೆಂಬುದು ಗೊತ್ತೇ ಇಲ್ಲ…..

ಅಸಲಿಗೆ ಈ ಗಂಡಸು ಸಂಪಿಗೆಯ ಕೊರಳಿಗೆ ತಾಳಿ ಕಟ್ಟಿದ ಗಂಡನೇನೂ ಅಲ್ಲ! ತಾಳಿ ಪೋಣಿಸುವಷ್ಟು ಮಣಿಗಳೇ ಇಲ್ಲ ಅವಳಲ್ಲಿ..ಅವೆಲ್ಲ ಮಕ್ಕಳ ದೃಷ್ಟಿದಾರದಲ್ಲಿವೆ.. ಸೈಯದ್ ಜೊತೆ ಮದುವೆಯಾದಾಗ ಅಮ್ಮ ಪೋಣಿಸಿದ ಮಣಿಗಳು.. ದೊಡ್ಡವನು ಹುಟ್ಟಿದ ಮೇಲೆ ಆ ಗಂಡ ತೀರಿದ. ಅವನ ತಮ್ಮ- ಈ ಗಂಡಸು. ಆಗಲೂ ಜೊತೆಯಲ್ಲೇ ಇದ್ದ‌.. ದೂರ ಮಲಗುತ್ತಿದ್ದ.

ಒಂದು ರಾತ್ರಿ ನೆರಿಗೆ ಜಾರಿತ್ತು..

ಕೊಸರುವ ವಯಸ್ಸೇನೂ ಆಗಿರಲಿಲ್ಲ ಅವಳಿಗೆ.

ಸಂಪಿಗೆಯ ಮೈ ಮೇಲೆ ತಿಕ್ಕಿ ತೊಳೆಯದ ಪದರವೊಂದಿದೆ. ಅವಳ ತ್ವಚೆಯ ನೈಜತೆಯನ್ನು ಕಾಪಿಟ್ಟಿದೆ ಅದು. ಅದರ ಸಲುವಾಗಿಯೇ ಅವಳು ಬಸಿರಾಗುವುದು. ಬಸಿರಾದರೆ ಎಂಟ್ಹತ್ತು ತಿಂಗಳು ಸ್ನಾನ ಮಾಡುವ ಹಿಂಸೆ ತಪ್ಪುತ್ತದೆ. ಇಲ್ಲದಿದ್ದರೆ ತಿಂಗಳಿಗೊಮ್ಮೆ ಕುಂತಲ್ಲಿ ನಿಂತಲ್ಲಿ ಅಂಟಂಟು – ಹೇಸಿಗೆ ತಡೆಯಲಾಗುವುದಿಲ್ಲ… ತುಂಬಾ ಕೊಳಕಿಯೇನೂ ಅಲ್ಲ ಅವಳು. ಎರಡು ವಾರಕ್ಕೊಮ್ಮೆ ಮುಖ ತೊಳೆಯುತ್ತಾಳೆ. ಕೆಲವು ಬಾರಿ ಮಳೆ ಹನಿಗಳು ನೆನೆಸುತ್ತವೆ.

ಬಿಡುವಿಲ್ಲದೆ ಬಸಿರಾದರೆ ಮತ್ತೊಂದು ಅನುಕೂಲವಿದೆ – ಹೊಟ್ಟೆಯ ಪ್ರದರ್ಶನಕ್ಕೆ ಜನ ಹೆಚ್ಚು ಹೆಚ್ಚು ಕೂಲಿ ಕೊಡುತ್ತಾರೆ. ಹೊಟ್ಟೆ ತುಂಬುತ್ತದೆ.

>>>

ಮಗು ಹುಟ್ಟಿ ಆಗಲೇ ತಿಂಗಳು ಕಳೆದಿವೆ. ದೊಡ್ಡವನ ದುಡಿಮೆ ಚೆನ್ನಾಗಿದೆ. ಎಲ್ಲರ ಹೊಟ್ಟೆಗೂ ಅನ್ನ ತುಂಬಿಸಿದ್ದಾನೆ. ಈಗವನು ಸಿಗ್ನಲ್ನಲ್ಲಿ ಖಾಲಿ ಕೈ ಒಡ್ಡುವುದಿಲ್ಲ. ಅವನ ಕೈಯಲ್ಲಿ ನಗುಮುಖದ ಬಲೂನ್ಗಳಿವೆ…

ಪುಟ್ಟಿ ಚೂರು ಸೊರಗಿದ್ದಾಳೆ!

ಆ ಹೆಂಗಸನ್ನು ಕಂಡ ಕೂಡಲೇ ಕಿಟಾರೆನ್ನುತ್ತಾಳೆ…

*****