- ಗ್ರಾಮೀಣ ಸೊಗಸಿನೊಂದಿಗೆ ಮಕ್ಕಳ ಪ್ರೀತಿ… - ಜನವರಿ 3, 2022
ಮಕ್ಕಳೆಂದರೆ ಪ್ರೀತಿ, ಮಕ್ಕಳೆಂದರೆ ಚೈತನ್ಯ, ಮಕ್ಕಳೆಂದರೆ ಆಟ, ನಗು, ತಿಂಡಿ, ಮುಗ್ಧತೆ ಎಂದೆಲ್ಲ ಹೇಳುತ್ತ ಹೋಗಬಹುದು. ಹೌದು ಮಕ್ಕಳ ಸಾಂಗತ್ಯವೇ ಹಾಗೆ. ಅಲ್ಲಿ ಸಿಟ್ಟು ಸಿಟ್ಟಾಗಿ ನಿಲ್ಲದು, ಅಳು ಅಳುವಾಗಿ ಉಳಿಯದು. ಮಕ್ಕಳು ಎಲ್ಲವನ್ನೂ ಪ್ರೀತಿಯಿಂದ ಗೆಲ್ಲುತ್ತಾರೆ ಮತ್ತು ತಮ್ಮ ಪರಿಸರದ ಎಲ್ಲ ವಸ್ತುಗಳಿಗೂ ಜೀವ ತುಂಬುತ್ತಾ ತಮ್ಮದೇ ಆದ ಲೋಕವನ್ನು ನಿರ್ಮಿಸಿಬಿಡುತ್ತಾರೆ. ಹಾಗಾಗಿಯೇ ಹಲವರಿಗೆ ತಮ್ಮ ಅಭಿವ್ಯಕ್ತಿ ಮಕ್ಕಳೊಂದಿಗಿರಲಿ ಎನ್ನುವ ತುಡಿತ. ಅದರಲ್ಲೂ ಶಿಕ್ಷಕರಾದವರಿಗೆ ಮಕ್ಕಳೊಂದಿಗೆ ಒಂದಾಗುತ್ತ ಅವರೊಂದಿಗೆ ಅವರದೇ ಜಗತ್ತಿನಲ್ಲಿ ಸುತ್ತಾಡುತ್ತ ಖುಷಿ ಹೊಂದುವ ಹೆಚ್ಚಿನ ಅವಕಾಶಗಳಿವೆ ಎನ್ನಬುದು. ಹಾಗಾಗಿಯೇ ಶಿಕ್ಷಕರಾದ ಬಹುಜನರು ತಮ್ಮ ಅಭಿವ್ಯಕ್ತಿಯನ್ನು ಮಕ್ಕಳ ಸಾಹಿತ್ಯ ರಚನೆಯ ಕಲೆಯಲ್ಲಿ ತೊಡಗಿಸಿದ್ದಾರೆ ಎಂದೆನಿಸುತ್ತದೆ. ಹೌದು, ಪ್ರತಿಯೊಬ್ಬರೂ ತಮ್ಮ ಅನುಭವವನ್ನು, ಅರಿವನ್ನು, ತಾನು ಕಂಡ ಸತ್ಯವನ್ನು ಸಮಾಜದೊಂದಿಗೆ ಹಂಚಿ ವಿಸ್ತರಿಸಿಕೊಳ್ಳಲು ಬಯಸುತ್ತಿರುತ್ತಾರೆ. ಆದರೆ ಈ ಅಭಿವ್ಯಕ್ತಿಯ ಮಾರ್ಗ ಬೇರೆ ಬೇರೆ ಆಗಿರುತ್ತದೆ.
ಮಕ್ಕಳಿಗಾಗಿ ಬರೆಯುವವರಿಗೆ ಆ ಕುರಿತಾಗಿ ಅಪಾರ ಶ್ರದ್ಧೆ ಹಾಗೂ ಧ್ಯಾನ, ಓದು, ಮಕ್ಕಳ ಪ್ರೀತಿ ಎಲ್ಲ ಬೇಕಾಗುತ್ತದೆ. ಅಂತಹ ಶ್ರಮ ಒಂದು ಸೃಜನಶೀಲ ಹುಟ್ಟನ್ನು ಪಡೆದು ಖುಷಿ ನೀಡುತ್ತದೆ. ಆಗಲೇ ಹೇಳಿದ ಹಾಗೆ ಮಕ್ಕಳ ಸಾಹಿತ್ಯ ರಚಿಸುವವರಿಗೆ ಮಕ್ಕಳ ಪ್ರೀತಿಯೇ ಚೈತನ್ಯ ತುಂಬುತ್ತಿರುತ್ತದೆ. ಹಾಗಾಗಿಯೇ ಮತ್ತೆ ಮತ್ತೆ ಹೊಸಬರು ನಿರಂತರವಾಗಿ ಮಕ್ಕಳ ಸಾಹಿತ್ಯ ಧಾರೆಯಲ್ಲಿ ಸೇರಿಕೊಳ್ಳುತ್ತ ಮಕ್ಕಳ ಸಾಹಿತ್ಯ ಹರಿಗಡೆಯದಂತೆ ಕಾಪಿಟ್ಟುಕೊಂಡು ಬಂದಿದ್ದಾರೆ ಅನಿಸುತ್ತದೆ. ಹೆಚ್ಚಿನವರಲ್ಲಿ ಸಾಹಿತ್ಯ ರಚನೆ ಪ್ರಾರಂಭ ಆಗುವುದು ಕವನಗಳ ಮೂಲಕವೇ. ಇಲ್ಲಿ ಕಿರಿಯ ಸ್ನೇಹಿತ ಮಲಿಕಜಾನ ಶೇಖ ತಮ್ಮ ಮೊದಲ ಕವನಸಂಕಲದ ಹಸ್ತ ಪ್ರತಿಯನ್ನು ಪ್ರೀತಿಯಿಂದ ನೀಡಿ ಅನಿಸಿಕೆ ಬರೆಯಲು ಕೇಳಿದ್ದಾರೆ.
ಮಲಿಕಜಾನ ಶೇಖ ಅವರು ಮಹಾರಾಷ್ಟದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನವರು. ಇವರು ಮಹಾರಾಷ್ಟ್ರದಲ್ಲಿ ಕನ್ನಡಕ್ಕಾಗಿ ಕೆಲಸಮಾಡುತ್ತಿರುವ ಕನ್ನಡಿಗರು ಎನ್ನುವುದು ಖುಷಿಯ ಸಂಗತಿ. ಮಲಿಕಜಾನ ಮತ್ತು ಗೆಳೆಯರೆಲ್ಲಾ ಸೇರಿ ಸ್ಥಾಪಿಸಿದ ‘ಆದರ್ಶ ಕನ್ನಡ ಬಳಗ ಮಹಾರಾಷ್ಟ’ ಸಂಸ್ಥೆಯು ಗಡಿಭಾಗದಲ್ಲಿ ಕನ್ನಡಕ್ಕಾಗಿ ಕೆಲಸ ಮಾಡುತ್ತಿದೆ. ಇವರು ಈ ಸಂಸ್ಥೆಯ ಮುಖ್ಯಸ್ಥರಾಗಿರುವುದಲ್ಲದೇ ಇಲ್ಲಿಯ ಕನ್ನಡ ಶಾಲೆಯ ಶಿಕ್ಷಕರೂ ಆಗಿದ್ದಾರೆ. ಅನುವಾದ, ಕಥೆ ಕವನಗಳನ್ನು ರಚಿಸುವುದರೊಂದಿಗೆ ಸಾಹಿತ್ತಿಕ ಕಾರ್ಯದಲ್ಲಿ ತೊಡಗಿಕೊಂಡಿರುವ ಮಲಿಕಜಾನ, ಗಿರೀಶ ಜಕಾಪುರೆ, ಶರಣಪ್ಪ ಫುಲಾರಿ ಮುಂತಾದ ಗೆಳೆಯರು ಸೇರಿ ಅಕ್ಕಲಕೋಟೆಯಲ್ಲಿ ಸಂಧ್ಯಾ ಬಳಗದ ಸಹಯೋಗದಲ್ಲಿ ಸಂಧ್ಯಾ ಸಾಹಿತ್ಯೋತ್ಸವವನ್ನು ೨೦೧೬ ರಲ್ಲಿ ಆಯೋಜಿಸಿದ್ದರು. ಅಲ್ಲಿನಿಂದಲೂ ಸ್ನೇಹಿತರಾದ ಮಲಿಕಜಾನ ಹಾಗೂ ಅವರ ಗೆಳೆಯರ ಕನ್ನಡದ ಕಾರ್ಯವನ್ನು ದೂರದಿಂದಲೇ ನೋಡುತ್ತಾ ಖುಷಿಪಟ್ಟಿದ್ದೇನೆ.
ಈಗ ಮಲಿಕಜಾನ ತಮ್ಮ ಮಕ್ಕಳ ಕವನ ಸಂಕಲನದೊಂದಿಗೆ ನಮ್ಮ ಮುಂದೆ ಬಂದಿದ್ದಾರೆ. ಮಕ್ಕಳು ಎಂದೂ ಸುಮ್ಮನೆ ಕೂತಿರಲಾರರು. ಅವರು ನಿರಂತರ ಚಟುವಟಿಕೆಯಲ್ಲಿ ತೊಡಗಿರುತ್ತಾರೆ. ಅದಕ್ಕಾಗಿ ಅವರಿಗೆ ಖುಷಿ ಕೊಡುವ ಚಟುವಟಿಕೆ ನಿರೂಪಿಸಬೇಕು, ಅದರ ಮೂಲಕ ಸಂತಸದೊಂದಿಗೆ ಅವರು ಒಳ್ಳೆಯದಕ್ಕೆ ವಿಸ್ತರಿಸಿಕೊಳ್ಳಬೇಕು ಎಂದೆಲ್ಲಾ ನಾವು ಹೇಳುತ್ತಿರುತ್ತೇವೆ. ಮಕ್ಕಳು ಹೇಗೆಲ್ಲಾ ಏನೇನೋ ತುಂಟಾಟದಲ್ಲಿ ತೊಡಗಿರುತ್ತಾರೆ… ಆಗೆಲ್ಲ ಅವರ ತುಂಟಾಟವೇ ಒಂದಿಷ್ಟು ಹಿರಿಯರಿಗೆ ಕಿರಿಕಿರಿಯನ್ನು ಉಂಟುಮಾಡುತ್ತವೆ ಎನ್ನುವುದನ್ನು ಸಹಜವಾಗಿ ಇಡುವ ಪ್ರಯತ್ನ ‘ಕಿಟ್ಟನ ಕೀಟಲೆ’ ಎನ್ನುವ ಕವನದಲ್ಲಿ ಮಲಿಕಜಾನ ಚೆನ್ನಾಗಿ ಹೇಳಿದ್ದಾರೆ.
‘ಕಿಟ್ಟಾ ಬಂದ ಕಿಟ್ಟಾ
ರಿಮೋಟ ಕೈಯಲ್ಲಿ ಹಿಡಿದಾ
ಸೌಂಡ್ ಹೆಚ್ಚಿಗೆ ಮಾಡಿದಾ
ಅಪ್ಪನ ಏಟ ತಿಂದಾ
ಸ್ಟಡಿ ರೂಮಿಗೆ ಹೋದಾ’
ಎಂಬ ಸಾಲುಗಳಿವೆ. ಹೀಗೆ ಅಕ್ಕನ ಪುಸ್ತಕ ಹರಿದ, ಏಸಿ ಹೆಚ್ಚಿಗೆ ಮಾಡಿದ, ಶವರ ಚಾಲು ಮಾಡಿದ ಎಂದೆಲ್ಲ ಹೇಳುತ್ತ ಅವನ ತುಂಟಾಟಕ್ಕೆ ಹಿರಿಯರಿಂದ ಪ್ರೀತಿಯ ಪೆಟ್ಟು ತಿನ್ನುತ್ತ ಸಾಗಿದ್ದೆಲ್ಲ… ಮಕ್ಕಳತುಂಟತನದ ವಾಸ್ತವ ಚಿತ್ರಣ ನೀಡುವುದರೊಂದಿಗೆ ಇದರ ಓದು ಮಕ್ಕಳ ಖುಷಿಯನ್ನು ಹೆಚ್ಚಿಸುವಂತಿದೆ.
ಎಲ್ಲರಿಗೂ ಸಿಹಿ ತಿಂಡಿಗಳೆಂದರೆ ಇಷ್ಟ. ದೊಡ್ಡವರಾದ ಮೇಲೆ ಏನೇನೋ ಕಾರಣಗಳಿಗಾಗಿ ಸಿಹಿ ತಿಂಡಿ ತಿನ್ನುವುದನ್ನು ಹಿರಿಯರು ತಾವೇ ನಿಯಂತ್ರಿಸಿಕೊಳ್ಳುವುದು ಕಾಣುತ್ತೇವೆ. ಆದರೆ ಮಕ್ಕಳು ಅವರಿಗೆ ಬೇಕಾದದ್ದನ್ನು ತಿನ್ನಲು ಸದಾ ತುಡಿಯುತ್ತಿರುತ್ತಾರೆ. ಹೋಳಿಗೆ ಎನ್ನುವುದು ಎಲ್ಲರಿಗೂ ಪರಿಚಿತವಾದ ಹಾಗೂ ಇಷ್ಟವಾದ ಸಿಹಿ ತಿನಿಸು. ಈ ಹೋಳಿಗೆ ಕುರಿತಾಗಿಯೇ ಇರುವ ಪದ್ಯ ತುಂಬಾ ಸೊಗಸಾಗಿದೆ. ಕಡಲೆ ಹೋಳಿಗೆ, ಶೇಂಗಾ ಕುಟ್ಟಿದ ಹೋಳಿಗೆ, ಸಜ್ಜೆ ಹೋಳಿಗೆ, ಗೆಣಸಿನ ಹೋಳಿಗೆಗಳ ಜೊತೆಗೆ ಹಾಲು, ತುಪ್ಪ, ಸಕ್ಕರೆ ಮುಂತಾದವನ್ನೆಲ್ಲಾ ಸೇರಿಸಿ ತಿನ್ನುವುದನ್ನೆಲ್ಲಾ ಹೇಳುವ ಹೋಳಿಗೆ ಪದ್ಯ..
ಕಡಲೆ ಹೂರಣ ಹೋಳಿಗೆ
ಶೇಂಗಾ ಕುಟ್ಟಿದ ಹೋಳಿಗೆ
ಸಕ್ಕರೆ ಸಜ್ಜಕ ಹೋಳಿಗೆ
ಗೆಣಸು ಮೆಣಸು ಹೋಳಿಗೆ
ಬಿಸಿ ಬಿಸಿ ಹಾಲಲಿ ಹೋಳಿಗೆ
ಘಮ ಘಮ ತುಪ್ಪದ ಹೋಳಿಗೆ
ಎಂದೆಲ್ಲಾ ಹೇಳುತ್ತ ಸಾಗುವ ಪದ್ಯ ಹೋಳಿಗೆಯಷ್ಟೇ ರುಚಿಯಾಗುತ್ತದೆ. ಕೊನೆಯಲ್ಲಿ ಗೆಳೆಯರಿಗೆ ಹಂಚುವ ಹೋಳಿಗೆ ಎಂದು ಸೇರಿಸಿರುವುದು ಮಕ್ಕಳಿಗೆ ಹಂಚಿ ತಿನ್ನಬೇಕು ಎಂಬ ಅರಿವನ್ನು ತಾನೇ ತಾನಾಗಿ ಬಿತ್ತುವಂತಿದೆ.
ಯುಗಾದಿ ಹಬ್ಬ ಬಂತು
ಬೇವಿನ ಮರ ಚಿಗಿತು
ಅವ್ವ ಕರೆದಳು ಬಸ್ಯಾಗ
ಚಿಗರ ತಗೋಂಬಾ ಕಿಶ್ಯಾಗ
ಈ ರೀತಿ ಪ್ರಾದೇಶಿಕ ಭಾಷಾ ಸೊಗಡನ್ನು ಬಳಸಿ ರಚನೆಗಿಳಿದಿರುವುದು ಇವರ ಹಾಡಿನ ವೈಶಿಷ್ಟ್ಯವೂ ಹೌದು, ಆಕರ್ಷಣೆಯೂ ಹೌದು. ಇದು ಮಕ್ಕಳಿಗೆ ಆಪ್ತವಾಗಿ ಅವರು ಗುನುಗುನುಸಿ ಆನಂದಪಡುತ್ತಾರೆ ಮತ್ತು ಭಾಷೆಯ ಸೊಗಡನ್ನು ಪರಿಚಸಿಕೊಳ್ಳುತ್ತಾರೆ.
ಭಣ ಭಣ ಮುಗಿಲು ನೋಡವ್ವ
ರಣ ರಣ ಬಿಸಿಲು ನೋಡವ್ವ
ಟರ್ ಬುರ್ ಹಾಲಾ ಕಟೆಯವ್ವ
ಚೆಕ್ ಚೆಕ್ ಬೆಣ್ಣೆ ತೆಗೆಯವ್ವಾ
ಮಜ್ಜಿಗೆ ಎನ್ನುವ ಮೇಲಿನ ಪದ್ಯ ಬರ್ ಬರ್ ಎಂದು ಮೊಸರು ಕಡೆದು ಬಿಳಿ ಬಿಳಿ ಹತ್ತಿಯಂತಹ ಬೆಣ್ಣೆ ಮೇಲೇರಿ ಬರುವಿಕೆ, ಮಜ್ಜಿಗೆಯ ರುಚಿ ಹಾಗೂ ಅಗತ್ಯತೆಯ ಚಿತ್ರವನ್ನೆಲ್ಲ ಬಹು ಸುಂದರವಾಗಿ ಇಡುತ್ತ ಗ್ರಾಮೀಣ ಬದುಕಿನ ಎಳೆಯೊಂದನ್ನು ಪರಿಚಯಿಸುತ್ತದೆ. ‘ಟ್ರಿಣ್ ಟ್ರಿಣ್’ ಎನ್ನುವ ಪದ್ಯದಲ್ಲಿ ತಾತ ತಿಂಡಿ ಚೀಲದೊಂದಿಗೆ, ಅಣ್ಣ ಚಾಕಲೇಟಿನೊಂದಿಗೆ, ಚಿಕ್ಕಪ್ಪ ಆಟಿಕೆಯೊಂದಿಗೆ ಬರುವುದು… ಕೊನೆಯಲ್ಲಿ
ಡಮ್ ಡಮ್ ಡಮ್ ಡಮ್
ಇದೇನಪ್ಪ ಇದೇನಮ್ಮಾ
ಪುಟ್ಟ ನಿನ್ನ ಹುಟ್ಟು ಹಬ್ಬ
ಅಲ್ಲಿ ನೋಡು ಕೇಕು ಕುಂದಾ
ಹ್ಹಹ್ಹ ಹ್ಹಾ ಹ್ಹಹ್ಹ ಹ್ಹಾ
ಕನ್ನಡದ ಮಕ್ಕಳ ಸಾಹಿತ್ಯದಲ್ಲಿ ಕವನಗಳು ಮೊದಲಿನಿಂದಲೂ ತುಂಬಾ ತುಂಬಾ ಬರುತ್ತಿವೆ. ರಚನೆಗಳು ಎಷ್ಟೇ ಬಂದರೂ ಅವರ ಶ್ರದ್ಧೆ ಒಲವುಗಳಿಂದ ಅವರದೇ ಆದ ವೈಶಿಷ್ಟ್ಯ ಭಿನ್ನತೆಗಳಿಂಧ ಕೂಡಿದ ರಚನೆಗಳು ಮತ್ತೆ ಮತ್ತೆ ಆಕರ್ಷಿಸುತ್ತಲೇ ಇರುತ್ತವೆ. ಅಂತಹ ಒಂದು ಪ್ರಯತ್ನ ಮಲಿಕಜಾನ ಮಾಡಿದ್ದಾರೆ ಎಂದು ನನಗೆ ಅನ್ನಿಸುತ್ತದೆ. ಈ ಪುಸ್ತಕ ಕನ್ನಡದ ಮಕ್ಕಳ ಕೈ ತಲುಪಿ ಅವರ ಸಂತಸ ಹೆಚ್ಚಿಸಲಿ, ಮುಂದಿನ ದಿನಗಳಲ್ಲಿ ಮಲಿಕಜಾನ ಅವರು ಇನ್ನೂ ಉತ್ತಮ ಗೀತೆ ರಚಿಸಲಿ ಎಂದು ಹೇಳುತ್ತ ಒಳ್ಳೆಯ ಕೃತಿ ನೀಡಿದ ಅವರಿಗೆ ಹಾಗೂ ಓದುತ್ತಿರುವ ತಮಗೆಲ್ಲಾ ವಂದಿಸುತ್ತೇನೆ.
-ತಮ್ಮಣ್ಣ ಬೀಗಾರ.
ಹೆಚ್ಚಿನ ಬರಹಗಳಿಗಾಗಿ
ಹಾಲಾಡಿಯಲ್ಲಿ ಹಾರುವ ಓತಿ
ದೂರ ಸಮೀಪಗಳ ನಡುವೆ…
ಬದುಕಿನ ನೆಲೆ ಶೋಧಿಸುವ ʼಕಡಿದ ದಾರಿʼ