ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮಹಾಪತನ – ಮೆಹೆಂದಳೆ ಪುಸ್ತಕ ಕುರಿತು

ಮೇಘನಾ ದುಶ್ಯಲಾ
ಇತ್ತೀಚಿನ ಬರಹಗಳು: ಮೇಘನಾ ದುಶ್ಯಲಾ (ಎಲ್ಲವನ್ನು ಓದಿ)

ಕೃತಿ : ಮಹಾಪತನ (ಸುಯೋಧನನ ಆತ್ಮ ಕಥಾನಕ)
ಕರ್ತೃ : ಸಂತೋಷಕುಮಾರ ಮೆಹೆಂದಳೆ
ಪ್ರಬೇಧ : ಪೌರಾಣಿಕ ಕಾದಂಬರಿ
ಮೊದಲ ಮುದ್ರಣ : ೨೦೨೦
ಪ್ರಕಾಶಕರು : ಸ್ನೇಹ ಬುಕ್ ಹೌಸ್, ಬೆಂಗಳೂರು

ಬೆಲೆ : ₹೩೮೦/-

ಮಹಾಪತನ ಓದಿ ಮುಗಿಸಿದಾಗ ಅಲ್ಲೊಂದು ನಿಟ್ಟುಸಿರು ಮತ್ತು ಗಾಢ ಮೌನ ಆವರಿಸಿತ್ತು!
ಕಾಡುವ ಚಲನಚಿತ್ರಗಳು ತಮ್ಮ ಪಾತ್ರಗಳಲ್ಲಿ ವೀಕ್ಷಕರಾದ ನಮ್ಮನ್ನು ಪರಕಾಯ ಪ್ರವೇಶ ಮಾಡಿಸುವಂತೆ, ಯಾವ ಪುಸ್ತಕವೇ ಆಗಲಿ ನಾವು ಓದಬಾರದು ಬದಲಿಗೆ ಆ ಪುಸ್ತಕವೇ ನಮ್ಮನ್ನು ಓದಿಸಿಕೊಂಡು ಹೋಗುವಂತಿರಬೇಕು. ಆ ರೀತಿಯ ಉತ್ತಮ ಪುಸ್ತಕ ನಾನು ಇದುವರೆಗೂ ಓದಿದ್ದು ನಾಡಿನ ಹೆಸರಾಂತ ಸಾಹಿತಿ ಎಸ್.ಎಲ್.ಭೈರಪ್ಪ ನವರದ್ದು, ನಂತರ ಆ ಚಾಕಚಕ್ಯತೆ ಕಂಡಿದ್ದು ದಿ.ರವಿ ಬೆಳಗೆರೆ ಯವರಲ್ಲಿ. ಈಗ ಅದೇ ತರಹದ ಮತ್ತೊಬ್ಬ ಜನಪ್ರಿಯ ಲೇಖಕ ಎಂದರೆ ಸಂತೋಷಕುಮಾರ ಮೆಹೆಂದಳೆ ಯವರು.

ರಾಮಚಂದ್ರ ಭಾವೆ ಹಾಗೂ ಇನ್ನಿತರ ಪ್ರಮುಖರು ಪ್ರೀತಿಯಿಂದ ಶುಭ ಹಾರೈಸಿದ ಮತ್ತು ಶ್ರೇಷ್ಠ ಕವಿ ಎಚ್ಎಸ್ವಿ ಯವರ ಕಿರು ವಿಮರ್ಶೆಯುಳ್ಳ ಬೆನ್ನುಡಿಯೊಂದಿಗೆ ಅಚ್ಚುಕಟ್ಟಾಗಿ ಮೂಡಿಬಂದ, ಸುಯೋಧನನ ಆತ್ಮ ಕಥಾನಕವನ್ನು ಒಳಗೊಂಡ ಕೃತಿ ‘ಮಹಾಪತನ’ ಸಂತೋಷಕುಮಾರ ಮೆಹೆಂದಳೆ ಯವರಲ್ಲಿರುವ ಎಲ್ಲ ಬಗೆಯ ಸಾಹಿತ್ಯದ ಒಲವಿಗೆ ಸಾಕ್ಷಿ.

ಅದರಲ್ಲೂ ದುರ್ಯೋಧನನ ಬಗ್ಗೆ ಸಾಕಷ್ಟು ಅಸಮಾಧಾನ, ಸಂದೇಹ, ತುಮುಲ ಇತ್ತು. ಕಾರಣ, ದುರ್ಯೋಧನನ ಜನನದ ಘಳಿಗೆಯೆ ಸೃಷ್ಟಿಯ ವಿನಾಶದ ಸಂದೇಶ ಹೊತ್ತು ತಂದಿದ್ದರೂ ಆತನ ಜೀವಮಾನದಲ್ಲಿ ಒಮ್ಮೆಯೂ ತನಗಾಗಿ ತಾನು ಬದುಕಲಿಲ್ಲ. ಆತನಲ್ಲಿ ಹುಟ್ಟಿನಿಂದ ದುಷ್ಟ ಆಲೋಚನೆ ಇರಲೇ ಇಲ್ಲ. ಆತನಲ್ಲಿ ಸ್ವಾರ್ಥವಿತ್ತು; ಆದರೆ ಅಹಂಕಾರವಿರಲಿಲ್ಲ. ಮೋಸ, ವಂಚನೆ, ಅಪಹಾಸ್ಯವನ್ನು ಸಹಿಸುತ್ತಿರಲಿಲ್ಲ. ಸ್ವಂತ ಶಕ್ತಿ ಸಾಮರ್ಥ್ಯದ ಮೇಲೆ ಅಪಾರವಾಗಿ ನಂಬಿಕೆ ಹೊಂದಿದ್ದವನು. ಆದರೂ ತನ್ನ ನೆಚ್ಚಿನ ಸಹೋದರರು, ಕುರುಡ ತಂದೆ, ಅಸಹಾಯಕ ತಾಯಿಯ ಸಲುವಾಗಿ ಕಪಟ ನಾಟಕದ ಸೂತ್ರಧಾರಿಯಾದ ಶ್ರೀಕೃಷ್ಣನ ಸಂಚಿಗೆ ಬಲಿಯಾಗುವ ಮೂಲಕ ಕೆಟ್ಟವನಾಗುತ್ತಾನೆ. ಅಥವಾ ಕೆಟ್ಟವನಾಗಿ ಕಾಣುತ್ತಾನೆ ಎಂದರೆ ಸರಿ ಹೋಗಬಹುದೇನೊ.
ಇದಕ್ಕೆ ಪ್ರತಿಯಾಗಿ ಶಸ್ತ್ರಾಸ್ತ್ರವಿಲ್ಲದೆ ಕುರುವಂಶವನ್ನು ನಿರ್ನಾಮ ಮಾಡಲು ಬಂದ ಖಾಸ ಸೋದರಮಾವ ಹೆಣೆದ ಬಲೆಯೊಳಗೆ ಬಿದ್ದು ಅರಿವಿಲ್ಲದೆಯೇ ಅನ್ಯಾಯ ಎಸಗುತ್ತ ದುಷ್ಟನಾಗುತ್ತಾನೆ. ಅಥವಾ ದುಷ್ಟನಂತೆ ಕಾಣುತ್ತಾನೆ. ಹಾಗೂ ಇಲ್ಲೆಲ್ಲೂ ಖುದ್ದು ಮಹಾರಾಣಿ ಸತ್ಯವತಿಯ ಗರ್ಭ ಸಂಜಾತ ಮಹರ್ಷಿ ವ್ಯಾಸರು ಸುಯೋಧನನ ನೈಜ ಸ್ವಭಾವವನ್ನು, ಆತನ ಉದ್ದೇಶ, ಯೋಜನೆಗಳನ್ನು ಅವನೊಳಗಿರುವ ಮಾತಾಪಿತೃರ ವಾತ್ಸಲ್ಯ, ಸಹೋದರರ ಬಗೆಗಿನ ಪ್ರೇಮ, ರಾಜ್ಯ ಅಧಿಕಾರದ ಮೋಹವನ್ನು ಅನಾವರಣ ಗೊಳಿಸದಿರುವುದು ಮತ್ತು ಕೇವಲ ದುಷ್ಟ ದುರ್ಯೋಧನನ ದುರ್ಗುಣಗಳನ್ನು ಮಾತ್ರವೇ ಜಗತ್ತಿಗೆ ಪರಿಚಯಿಸಿದ್ದು ವಿಷಾದನೀಯ.

ಯಾವೊಬ್ಬ ಮನುಷ್ಯನು ಹುಟ್ಟುತ್ತಲೇ ಕೆಟ್ಟವನಾಗಿರುವುದಿಲ್ಲ. ಆತನು ಪಡೆದುಕೊಂಡು ಬಂದಂತಹ ಕರ್ಮಗಳ ಅನುಸಾರ ಆತನ ಒಳಿತು ಕೆಡಕುಗಳ ತುಲನೆ ನಡೆಯುತ್ತದೆ ಎನ್ನುವುದು ಎಲ್ಲರೂ ಕೇಳಿರುತ್ತೇವೆ. ಆದರೆ ಇಲ್ಲಿ ಖುದ್ದು ದುರ್ಯೋಧನನ ಜನ್ಮ ವೃತ್ತಾಂತವೇ ನಿರೂಪಿಸುತ್ತಿದೆ ಅವನ ಹುಟ್ಟು ಎಂಥದ್ದೆಂದು. ಇಷ್ಟಾಗಿಯೂ ಒಂದೊಂದೇ ಪಾತ್ರವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಾ ಹೋದಾಗ ದುರ್ಯೋಧನನ ಉದ್ದೇಶದಲ್ಲಿ ಮೋಸ, ಕಪಟ, ವೈರತ್ವ, ದ್ವೇಷ ಕಾಣುವುದಿಲ್ಲ. ಒಂದೊಮ್ಮೆ ಕಂಡರೂ ಅದಾವುದೂ ಅವನ ನೈಜ ಸ್ವಭಾವವೇ ಅಲ್ಲ. ಅವೆಲ್ಲವೂ ಸಹವಾಸ ದೋಷದಿಂದ ಬಂದಿರುವುದು. ಮತ್ತು ಅವನಿಗೆದುರಾದ ಅನಿರೀಕ್ಷಿತ(?) ಸಂದರ್ಭ, ಪರಿಸ್ಥಿತಿಯ ಫಲವಾಗಿದೆ.

ಶ್ರೀಕೃಷ್ಣನ ಕೈಚಳಕವೂ ಸೇರಿದಂತೆ ಮೂಲತಃ ಕುರು ವಂಶದವರೇ ಅಲ್ಲದ ಪಾಂಡವರ ಅವಿವೇಕತನ, ಧರ್ಮರಾಯನಾದ ಯುಧಿಷ್ಠಿರನಿಗಿದ್ದ ಅತಿಯಾದ ಜೂಜಿನ ವ್ಯಾಮೋಹ, ದ್ರೌಪದಿಯ ಅಹಂಕಾರ ಮತ್ತು ಅಪಹಾಸ್ಯ ಮಾಡುವ ಗುಣ ಎಲ್ಲವೂ ಸೇರಿಕೊಂಡು ಅವನೊಳಗೆ ಸರಿ-ತಪ್ಪುಗಳ ಆತ್ಮ ವಿಮರ್ಶೆ ಮಾಡಿಕೊಳ್ಳುವ ಅವಕಾಶವನ್ನೇ ಕೊಡದೇ ಒಂದಾದ ಮೇಲೊಂದರಂತೆ ಹಂತಹಂತವಾಗಿ ಅವನ ಭಾವನೆಗಳ ಮೇಲೆ ದಾಳಿ ಮಾಡುತ್ತ ಹೋಗುತ್ತವೆ. ಆ ಸಂದರ್ಭದಲ್ಲಿ ಎಲ್ಲ ತಿಳಿದೂ ಮೂಕ ಪ್ರೇಕ್ಷಕನಂತಿದ್ದ ಭೀಷ್ಮ ಪಿತಾಮಹರು ಒಂದು ಕಡೆಯಾದರೆ ಇನ್ನೊಂದು ಕಡೆ ಕುಟಿಲ ಬುದ್ಧಿಯ ಸೋದರಮಾವ ಶಕುನಿಯ ನೀಚ ಉಪದೇಶ ದುರ್ಯೋಧನನ್ನು ದುಷ್ಟನಾಗುವಂತೆ ಪ್ರೇರೇಪಿಸುತ್ತದೆ.
ಇಷ್ಟಾದ ನಂತರವೂ ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ನಾರಾಯಣಿ ಸೇನೆಯನ್ನು ಸುಯೋಧನನ ಇಚ್ಛೆಯಂತೆ ಅವನಿಗೇ ಬಿಟ್ಟು ಕೊಟ್ಟಂತೆ ಮಾಡಿ ತಾನು ಪಾಂಡವರ ಬಳಿ ಸೇರಿ ಈ ಆಟ ನೋಡುವ ಕಪಟಿ ಶ್ರೀಕೃಷ್ಣನ ಯೋಜನೆ ಪೂರ್ವ ನಿರ್ಧಾರಿತ ಎಂದು ತಿಳಿದಾಗ ಸುಯೋಧನನ ಆತ್ಮಬಲವೇ ಉಡುಗಿ ಹೋಗುತ್ತದೆ. ಆದರೂ ಅನ್ಯಾಯವಾಗಿ ಸೋಲೊಪ್ಪಿಕೊಳ್ಳದೇ, ತಲೆ ತಗ್ಗಿಸದೆ ಒಬ್ಬನೇ ನಿಂತು ಹೋರಾಡುತ್ತಾನೆ.
ಹೌದು ಸುಯೋಧನನೊಬ್ಬ ಮಹಾ ಯೋಧನಾಗಿದ್ದ. ಇಷ್ಟೆಲ್ಲಾ ಆದ ಬಳಿಕವೂ ಕೊನೆಗೂ ತನ್ನ ಕುರು ವಂಶದ ಅವಸಾನ ಕಂಡು ನಿಷ್ಕಳಂಕದಿಂದ ಕೆಳಗುರುಳಿದ ಆಜಾನುಬಾಹು ಸುಯೋಧನನದ್ದು ಅಕ್ಷರಶಃ ಮಹಾಪತನವೇ ಆಗಿತ್ತು. ನಿಜಕ್ಕೂ ಎಂಥವರಿಗಾದರೂ ಸುಯೋಧನನಿಗಿದ್ದ ಆತ್ಮತೃಪ್ತಿ, ಜೀವನಪ್ರೀತಿಯನ್ನು ಕಂಡು ಅಸೂಯೆ ಮೂಡದಿರದು. ತಾನೊಬ್ಬ ಧೀಮಂತ ವ್ಯಕ್ತಿ ಎಂದು ಸಾಬೀತು ಮಾಡಿದವನ ಅಂತ್ಯ ಮಹಾಪತನವಲ್ಲದೇ ಇನ್ನೇನು?!

ಇದು ವ್ಯಾಸೊಚ್ಚಿಷ್ಠ ಮಹಾಭಾರತದ ಮತ್ತೊಂದು ಆಯಾಮವಲ್ಲ. ಬದಲಿಗೆ ಕೇವಲ ಲೇಖಕರ ಕಲ್ಪನೆ ಹಾಗೂ ದೃಷ್ಟಿಯಲ್ಲಿ ನಿರೂಪಿತವಾದ ಸುಯೋಧನನ ಆತ್ಮ ಕಥಾನಕ ಅಷ್ಟೆ. ಅದೂ ಮೂಲ ಮಹಾಭಾರತಕ್ಕೆ ಕಿಂಚಿತ್ತೂ ಧಕ್ಕೆಯಾಗದಂತೆ ರಚಿಸಿದ ಕೃತಿ. ಹೀಗಿರುವಾಗ ಯಾವ ಪುಸ್ತಕವೇ ಆಗಲಿ ಅದನ್ನೊಮ್ಮೆ ಬರೆದು ಪ್ರಕಟಿಸಿ ಬಿಡುಗಡೆಗೊಳಿಸಿದ ನಂತರ ಅದು ಸಂಪೂರ್ಣವಾಗಿ ಓದುಗರ ಆಸ್ತಿ. ಓದುಗನೇ ದೊರೆ ಆಗಿ ಬಿಡುತ್ತಾನೆ. ನಿಜ, ಹಾಗಂತ ಪುಸ್ತಕವನ್ನು ಓದದೇನೆ ವಿವಾದಾತ್ಮಕ ಹೇಳಿಕೆ ನೀಡುವ ಬದಲು ಒಮ್ಮೆ ಪೂರ್ವಾಗ್ರಹ ಪೀಡಿತ ಮನಸ್ಥಿತಿಯಿಂದ ಹೊರಬಂದು ಪುಸ್ತಕವನ್ನು ಓದಿ ನಂತರ ಅವಲೋಕಿಸಿ ವಿಮರ್ಶಿಸುವುದು ಉತ್ತಮವಲ್ಲವೇ?!
ಇನ್ನು ಲೇಖಕ ಸಂತೋಷಕುಮಾರ ಮೆಹೆಂದಳೆ ಯವರು ಎಂದಿನಂತೆ ಈ ಕಾದಂಬರಿಯಲ್ಲೂ ಕಥಾವಸ್ತುವಿನ ಆಯ್ಕೆಯ ಬಗೆಗೆ ತಮಗಿರುವ ವಿಭಿನ್ನ ದೃಷ್ಟಿಕೋನ, ಹೊಸಹೊಸ ಪ್ರಯೋಗಗಳ ಕುರಿತು ತಮಗಿರುವ ಅಗಾಧವಾದ ಆಸಕ್ತಿ, ಪಾತ್ರಗಳನ್ನು ದುಡಿಸಿಕೊಳ್ಳುವಲ್ಲಿ ಇರುವ ತಾಂತ್ರಿಕತೆ, ವಿಶಿಷ್ಟವಾದ ನಿರೂಪಣಾ ಶೈಲಿಯಿಂದ ಓದುಗರನ್ನು ಸಮ್ಮೋಹನಗೊಳಿಸುವ ನೈಪುಣ್ಯತೆ, ಪುಸ್ತಕದ ಗುಣಮಟ್ಟ ಮತ್ತು ಮುಖಪುಟ ವಿನ್ಯಾಸದ ಬಗ್ಗೆ ಇರುವ ಬದ್ಧತೆಯ ಕಾರಣದಿಂದ ಸಹೃದಯಿ ಓದುಗರ ಮನಸ್ಸನ್ನು ಗೆದ್ದಿದ್ದಾರೆ.
ಬಿಡುಗಡೆಯಾದ ಒಂದೇ ವರ್ಷದಲ್ಲಿ ಮರುಮುದ್ರಣ ಕಂಡು ಅಭೂತಪೂರ್ವ ಯಶಸ್ಸು ಗಳಿಸಿದ, ಈಗಾಗಲೇ ಹಲವು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡ ಅದ್ಭುತ ಪೌರಾಣಿಕ ಕಾದಂಬರಿ “ಮಹಾಪತನ” ಕ್ಕಾಗಿ ಲೇಖಕ ಸಂತೋಷಕುಮಾರ ಮೆಹೆಂದಳೆಯವರಿಗೆ ತುಂಬು ಹೃದಯದ ಅಭಿನಂದನೆಗಳು. ಮುಂಬರುವ ದಿನಗಳಲ್ಲಿ ಲೇಖಕರ ಲೇಖನಿಯಿಂದ ಇದೇ ರೀತಿ ನವನವೀನ ಪ್ರಯೋಗದೊಂದಿಗೆ ಇನ್ನೂ ಅನೇಕ ವಿಶಿಷ್ಟ ಕೃತಿಗಳು ಕನ್ನಡ ಸಾರಸ್ವತ ಲೋಕಕ್ಕೆ ದೊರೆಯಲಿ ಎಂದು ಹಾರೈಸುತ್ತಾ…
ನಿಮ್ಮ ಪ್ರೀತಿಯ,
ಮೇಘನಾ ದುಶ್ಯಲಾ