- ಕಾಡು ಗುಲಾಬಿ, ಪ್ರಯಾಣ ಸುರಕ್ಷಿತವಾಗಿರಲಿ - ಮೇ 28, 2022
- ಜೀವನ ಪ್ರೀತಿಯ ಹರಿವು - ಜನವರಿ 14, 2021
ಬೆಂಗಳೂರಿನಿಂದ ಮೈಸೂರಿನತ್ತ ಓಡ್ತಾ ಇದ್ದ ರೈಲಿನ ಬಾಗಿಲ ಬಳಿಯೇ ಕುಳಿತು ಗಾಳಿಗೆ ಮುಖವೊಡ್ಡಿ “ಆಹಾ ಎಷ್ಟು ಚೆಂದ ಇದೆ ಈ ಪ್ರಯಾಣ”, ಎನ್ನುತ್ತಾ, ಕಂಡಷ್ಟೇ ವೇಗವಾಗಿ ಕಣ್ಮರೆಯಾಗುತ್ತಿದ್ದ ಅವೆಷ್ಟೋ ಕೃಷಿಭೂಮಿಗಳನ್ನು, ನೀರಿನ ಹರಿವುಗಳನ್ನು, ಮಳೆಯ ಸವಿಯೂಟ ಸವಿದು ತುಂಬಿ ನಿಂತಿದ್ದ ಆ ಹಸಿರ ವೃಕ್ಷಗಳನ್ನು, ವಿದ್ಯುತ್ ತಂತಿಗಳ ಮೇಲೆ ಕುಳಿತು ಪಿಳಿಪಿಳಿ ನೋಡುತ್ತಿದ್ದ ಬಗೆ ಬಗೆಯ ಬಣ್ಣ ಬಣ್ಣದ ಹಕ್ಕಿಗಳನ್ನು, ಗದ್ದೆಗಳಲ್ಲಿ ನಿಂತು ರೈಲಿನತ್ತ ನೋಡುತ್ತಿದ್ದ ಆ ಕುರಿಮಂದೆಗಳನ್ನು- ಅವುಗಳನ್ನು ಮೇಯಿಸುತ್ತಿದ್ದ ಅಜ್ಜನನ್ನೂ, ತಲೆಯಲ್ಲಿ ಬುತ್ತಿಗಂಟುಗಳನ್ನು ಹೊತ್ತುಕೊಂಡು ಏರಿಯ ಮೇಲೆ ಸಾಲಾಗಿ ಸಾಗುತ್ತಿದ್ದ ಅಕ್ಕರೆಯ ಅಕ್ಕಂದಿರ ನಗುವನ್ನು ಹೀಗೆ ಅನೇಕಾನೇಕ ಜೀವನಗಳನ್ನೂ, ಅದನ್ನೇ ಬದುಕುತ್ತಿದ್ದ ಜೀವಿಗಳನ್ನೂ ನೋಡುತ್ತಾ, ಆ ಕ್ಷಣಗಳನ್ನು ತುಂಬಿಕೊಳ್ಳುತ್ತಾ ಮೈಮರೆತಿದ್ದಳು ಅವನಿ. ಮುಖದಲ್ಲಿ ಒಂದು ರೀತಿಯ ನಿರಾಳತೆ, ಸಣ್ಣ ನಗು ತುಂಬಿತ್ತು. ಬೆಂಗಳೂರಿನಲ್ಲಿ ರೈಲು ನಿಲ್ದಾಣದ ಬಳಿ ಕಾಯುತ್ತಾ ನಿಂತಿದ್ದಾಗ ಇದ್ದ ಕಸಿವಿಸಿ, ಆತಂಕ, ಗೊಂದಲ, ಮೂಡುತ್ತಿದ್ದ ಪ್ರಶ್ನೆಗಳು, ಬೇಡವೆಂದರೂ ಬಂದೂ ಬಂದೂ ಇರಿಯುತ್ತಿದ್ದ ಆ ಹಳೆಯ ನೆನಪು ಇವ್ಯಾವುದೂ ಮುಖದಲ್ಲಿ ಈಗ ಕಾಣಿಸುತ್ತಿರಲಿಲ್ಲ. ‘ಇವ್ಯಾವುದೂ ಆ ಕ್ಷಣದಲ್ಲಿ ಕಾಣಿಸುತ್ತಿರಲಿಲ್ಲ’ ಅನ್ನುವುದೇ ಹೆಚ್ಚು ಸೂಕ್ತ. ಯಾಕೆಂದರೆ, ಒಂಟಿಯಾಗಿ ಪ್ರಯಾಣಿಸುವ ಹೆಣ್ಣಿಗೆ ಈ ಎಲ್ಲಾ ಭಾವನೆಗಳು ಥಟ್ಟನೇ ಯಾವಾಗ ಬೇಕಾದರೂ ಎದುರಾಗಬಹುದಲ್ಲಾ!
ಅವನಿ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಕೊನೇ ವರ್ಷದ ವ್ಯಾಸಂಗ ಮಾಡ್ತಾ ಇದ್ದ ಹುಡುಗಿ. ಮೊದಲಿನಿಂದಲೂ ಆಕೆಗೆ ಬೆಂಗಳೂರು ಎಂದರೆ ಅದೇನೋ ಒಂದು ರೀತಿಯ ಆಕರ್ಷಣೆ. ಅಂತೂ ರೋಗಿ ಬಯಸಿದ್ದೂ ಹಾಲು ವೈದ್ಯ ಕೊಟ್ಟಿದ್ದೂ ಹಾಲು ಎನ್ನುವಂತೆ ಬೆಂಗಳೂರಿನಲ್ಲಿಯೇ ಇಂಜಿನಿಯರಿಂಗ್ ಸೀಟ್ ಸಿಕ್ಕಾಗ ಹುಡುಗಿಯ ಖುಷಿಯನ್ನು ಅಳತೆ ಮಾಡಲೂ ಸಾಧ್ಯವಿರಲಿಲ್ಲ. ಹೊರಡುವ ದಿನ ಮೊದಲ ಬಾರಿಗೆ ಅಮ್ಮನ ಕಣ್ಣುಗಳು ತೋರಿಸಲು ಹಿಂಜರಿದು ಅಲ್ಲೇ ಅವಿತು ಕುಳಿತಿದ್ದ ಕಣ್ಣೀರಿನಿಂದ ಹೊಳೆದದ್ದನ್ನು ಕಂಡು ಮನಸಿನಲ್ಲೇ ಅತ್ತಿದ್ದಳು. ಅಪ್ಪನೊಡನೆ ಸ್ಲೀಪರ್ ಕೋಚ್ ಬಸ್ಸಿನ ಮೇಲಿನ ಹಂತದ ಸೀಟ್ ಹತ್ತಿ, ತನ್ನಿಷ್ಟದ ಗೋಬಿಮಂಚೂರಿ ತಿನ್ನುತ್ತಾ ಕಿಟಕಿಯಿಂದ ಇಣುಕುತ್ತಿದ್ದರೂ, ದೇವರೇ ಕೆಳಗೆ ಬಿಟ್ಟಿರುವ ಚಪ್ಪಲಿ ಬೆಳಿಗ್ಗೆ ಇಳಿಯುವಾಗ ಬೇಗ ಸಿಗಲಿ ಎಂಬ ಪ್ರಾರ್ಥನೆ ಮುಗ್ಧವಾಗಿತ್ತು ಎನ್ನುವುದು ಸುಳ್ಳಲ್ಲ. ಒಟ್ಟಿನಲ್ಲಿ ಅಂದು ಬೆಂಗಳೂರಿನೊಡನೆ ಬೆಸೆದಕೊಂಡ ಆ ಚೆಂದದ ಸಂಬಂಧಕ್ಕೆ ಮೂರುವರೆ ವರ್ಷಗಳು ತುಂಬಿದ್ದೂ ತಿಳಿಯದಷ್ಟು ವೇಗವಾಗಿ ಸಮಯ ಸಾಗಿತ್ತು. ನಗರದ ಬದುಕಿನ ವಿವಿಧ ಆಯಾಮಗಳ ಪರಿಚಯವೂ ಹಲವಾರು ರೀತಿಯಲ್ಲಿ ಅರಿವಿಗೆ ಬಂದಿತ್ತು. ಆದರೆ ಪ್ರತಿಬಾರಿಯೂ ಅನುಭವಗಳು-ಪಾಠಗಳು ಬೇರೆ ಬೇರೆಯೇ.
ಅವನಿ ಗೆ ರೈಲು ಪ್ರಯಾಣ ಎಂದಾಗಲೆಲ್ಲಾ ತಪ್ಪಿಸಿಕೊಳ್ಳಲು ಏನಾದರೊಂದು ದಾರಿಗಳನ್ನು ಹುಡುಕುತ್ತಿದ್ದಳು. ಅದಕ್ಕೊಂದು ಕಾರಣವೂ ಇತ್ತು. ಸುಮಾರು ಹತ್ತು ವರ್ಷಗಳ ಹಿಂದೆ, ಆಕೆ ಆರನೇ ತರಗತಿಯಲ್ಲಿದ್ದಾಗ ಸಂಬಂಧಿಕರೊಬ್ಬರ ಮದುವೆಯ ಸಲುವಾಗಿ ಕುಮಟಾಕ್ಕೆ ಹೋಗಬೇಕಿತ್ತು. “ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಹಾಗೆ” ಎಂದು ಅದೆಷ್ಟೋ ಬಾರಿ ಕೇಳಿದ್ದು ಬಿಟ್ಟರೆ ಕೊಂಕಣ ರೈಲು ಹತ್ತುವ ಅವಕಾಶ ದೊರೆತದ್ದು ಆವಾಗಲೇ. ಅಂದು ಮೊದಲ ಬಾರಿಗೆ ರೈಲನ್ನು ಹತ್ತಿದ್ದು ಅವನಿ ಅಜ್ಜ ಅಜ್ಜಿಯರೊಡನೆ. ಅರಶಿನ ಬಣ್ಣದ ಜರತಾರಿ ಉದ್ದಲಂಗ ರವಿಕೆಗೆ ಕೆಂಪು ಜರಿಯ ಅಂಚು. ಉದ್ದನೆಯ ಎರಡು ಜಡೆಗಳನ್ನು ಕಟ್ಟಿಸಿಕೊಂಡು ಒಂದಕ್ಕೆ ಕಾಡು ಗುಲಾಬಿ ಹೂವು ಮತ್ತೊಂದಕ್ಕೆ ಒಂದು ಮೊಳ ಮುತ್ತು ಮಲ್ಲಿಗೆಯ ಮಾಲೆಯನ್ನು ಸಿಕ್ಕಿಸಿಕೊಂಡಿದ್ದಳು. ಲಾಲಿಗಂಧದ ಪುಟಾಣಿ ಬೊಟ್ಟೊಂದು ಹಣೆಯಲ್ಲಿ ನಗುತ್ತಿತ್ತು. ಮೊದಲ ಬಾರಿಗೆ ರೈಲಿನಲ್ಲಿ ಹೋಗುವುದು ಎಂದರೆ, ಕುತೂಹಲ, ಹುಮ್ಮಸ್ಸು, ಉತ್ಸಾಹ ಸಹಜವೇ ತಾನೇ. “ರೈಲು ಸಾಗಿದಂತೆ ಜನಜಂಗುಳಿ ಜಾಸ್ತಿ ಆಗ್ತಾ ಹೋಗ್ತದೆ, ಕೂತಕಡೆಯಿಂದ ಏಳ್ಬೇಡ, ರೈಲಿನಲ್ಲಿ ಕಳ್ಳರೂ ಇರುತ್ತಾರೆ, ಜಾಗ್ರತೆಯಿಂದ ಇರು”, ಅಮ್ಮ ಹೇಳಿ ಕಳುಹಿಸಿದ್ದಳು. ಹೇಳಿದ್ದು ಕೇಳಿದ್ದು ಎಲ್ಲವೂ ರೈಲು ಹತ್ತಿ ಕಿಟಕಿ ಪಕ್ಕ ಕೂತಾಗಲೇ ಎಲ್ಲೋ ಹಾರಿ ಹೋಗಿತ್ತು. ಪ್ರಯಾಣದ ನಡುವೆ ಮದ್ದೂರು ವಡೆ ಎಂದು ಮಾರುತ್ತಾ ಬಂದವನಿಂದ ಅಜ್ಜ ಖರೀದಿಸಿ ಕೊಟ್ಟ ವಡೆ ತಿಂದ ಮೇಲಂತೂ ಅಮ್ಮನ ಜಾಗ್ರತೆಯ ಪಾಠ ಪೂರ್ತಿ ಮರೆತು ಹೋಗಿತ್ತು. ಹನ್ನೊಂದರ ಪುಟಾಣಿಯಿಂದ ಮತ್ತೇನನ್ನು ನಿರೀಕ್ಷಿಸಬಹುದು ಹೇಳಿ! ತುಂಬಿದ ಆ ರೈಲಿನ ಅದೇ ಬೋಗಿಗೆ ಮುಂದಿನ ನಿಲ್ದಾಣದಲ್ಲಿ ಬಸುರಿ ಹೆಂಗಸೊಬ್ಬಳು ಹತ್ತಿದಾಗ, ಆಕೆಗೆ ಕುಳಿತುಕೊಳ್ಳಲೆಂದು ಎದ್ದ ಅವನಿ ಗೆ ಕುಮಟಾ ತಲುಪುವವರೆಗೂ ಮತ್ತೆ ಕೂರಲು ಅವಕಾಶವೇ ಸಿಗಲಿಲ್ಲ. ನಿಲ್ದಾಣ ತಲುಪುತ್ತಿದ್ದಂತೆಯೇ ಬಾಗಿಲ ಬಳಿ ಜನರು ಮುಗಿಬೀಳತೊಡಗಿದರು. ಅಜ್ಜಿಯ ಕೈಯನ್ನು ಅಷ್ಟು ಬಿಗಿಯಾಗಿ ಹಿಡಿದಿದ್ದರೂ ಕೂಡ ಆ ಜನಜಾತ್ರೆಯ ನಡುವೆ ಕೈತಪ್ಪಿದ್ದೇ ಅರಿವಾಗಲಿಲ್ಲ. “ಇಲ್ಲೇ ಇಳಿಲಿಕೆ, ಇಳ್ದ ಕೂಡ್ಲೇ ಅಲ್ಲೇ ನಿಲ್ಲು” ಎಂದು ಅಜ್ಜಿ ಕೈತಪ್ಪಿದ ಕೂಡಲೇ ಜೋರಾಗಿ ಹೇಳಿದ್ದು ಮಾತ್ರ ಸರಿಯಾಗಿ ಕೇಳಿಸಿಕೊಂಡಿದ್ದಳು. ರೈಲಿನಿಂದ ಹೊರನಡೆಯುವ ಜನಪ್ರವಾಹದ ಸೆಳತದ ದಿಕ್ಕಿನಲ್ಲಿಯೇ ತಾನೂ ಸಾಗುತ್ತಿದ್ದಳು ಎನ್ನುವುದಂತೂ ಅವನಿ ಗೂ ತಿಳಿದಿತ್ತು. ನಡು ನಡುವೆ ಪದೇ ಪದೇ ತನ್ನ ಕಿವಿಯೋಲೆ, ಮೂಗುತ್ತಿ, ಸರಗಳನ್ನು ಮುಟ್ಟಿ ಮುಟ್ಟಿ ಎಲ್ಲವೂ ಇವೆಯೇ, ಕಳ್ಳರು ಏನೂ ಎಳೆದೊಯ್ದಿಲ್ಲವಲ್ಲಾ ಎಂದು ಖಾತ್ರಿ ಪಡಿಸಿಕೊಳ್ಳುತ್ತಿದ್ದಳು. ಇದೆಲ್ಲದರ ನಡುವೆ ಎರಡು ರಾಕ್ಷಸ ಕೈಗಳು ಅವಳತ್ತವೇ ತೂರಿ ಬಂದದ್ದು ಪಾಪ ಅವನಿ ಗೆ ತಿಳಿದಿರಲೇ ಇಲ್ಲ. ಆ ಕೈಗಳು ಯಾರವೆಂದು ನೋಡಲು ತಲೆ ಎತ್ತುವ ಮೊದಲೇ ಅವಳ ಜಡೆಗಳೆರಡನ್ನೂ ಬಿಗಿಯಾಗಿ ಹಿಡಿದು ಆಕೆ ತಲೆಯನ್ನು ಮೇಲೆತ್ತದಂತೆ ಹಿಡಿದವು. “ಅಮ್ಮಾ”, ಎಂದು ನೋವಲ್ಲಿ ಕಿರುಚಿದ್ದು ಆ ಜನರ ಗದ್ದಲದ ನಡುವೆ ಯಾರಿಗೂ ಕೇಳಲೂ ಇಲ್ಲ. ಇಷ್ಟಕ್ಕೇ ನಿಲ್ಲದ ಆ ಕ್ರೂರ ಕೈಗಳು, ನೇರವಾಗಿ ನುಗ್ಗಿದ್ದು ಅವಳೆದೆಯತ್ತ. ಆ ರಾಕ್ಷಸ ಮನೋಭಾವದ ವ್ಯಕ್ತಿ, ಪುಟ್ಟ ಹುಡುಗಿಯ ಸ್ತನಗಳನ್ನು ಮುಟ್ಟಿ ಅಳೆದನೋ, ಎಳೆದು ತಳ್ಳಿದನೋ, ಹಿಸುಕಿ ಹಿಂಡಿದನೋ! ಅದೇನು ಮಾಡಿದ, ಆ ಕ್ಷಣದಲ್ಲಿ ಆಗಿದ್ದಾದರೂ ಏನು, ನೋವು? ಆಘಾತ? ಭಯ? ಗೊತ್ತಾಗಲೇ ಇಲ್ಲ. ಆಕೆಗೆ ಹೆಜ್ಜೆಗಳಿಡುವುದೂ ಭಾರವಾಗಿ ತೋರಿತು. ಅಂತೂ ಆತನ ಬಿಗಿ ಸಡಿಲವಾಗುತ್ತಿದ್ದಂತೆಯೇ ಜನಪ್ರವಾಹದ ಜೊತೆಯಲ್ಲೇ ರೈಲಿನಿಂದ ಇಳಿದಳು, ಅಜ್ಜಿಯನ್ನೂ ಸೇರಿದಳು ಅವನಿ. ಆದರೆ ಸುತ್ತಲಿನ ಜಗತ್ತೆಲ್ಲವೂ ಅದೇಕೋ ಸ್ತಬ್ಧವಾಗಿದ್ದಂತೆ ಭಾಸವಾಯಿತು. ಕಣ್ಕತ್ತಲೆ ಬಂದಂತೆ ಅನಿಸಿತು. ಎಲ್ಲಿಗೆ ಏಕೆ ಬಂದಿರುವೆ ಎಂಬ ಅರಿವೂ ಬಾರದಷ್ಟು, ಏನನ್ನೂ ಹೇಳದಷ್ಟು ಆಘಾತಕ್ಕೊಳಗಾಗಿದ್ದಳು. “ಜಡೆ ನೋಡು ಹೇಗೆ ಹರಡಿಕೊಂಡಿದ್ದಿ, ಬಾ ಸರಿ ಮಾಡ್ತೇನೆ”, ಅಜ್ಜಿ ಜಡೆಯನ್ನು ಅಲ್ಲಿಯೇ ಸ್ವಲ್ಪ ಬಿಡಿಸಿ ಸರಿಮಾಡಿ ಕಟ್ಟಿದರು. ಅರ್ಧ ಮಾಲೆ ಮಲ್ಲಿಗೆ ಮಾತ್ರ ಕೂದಲಿಗೆ ಸಿಕ್ಕಿಕೊಂಡು ಬಾಡಿ ನೇತಾಡುತ್ತಿತ್ತು, ಅದನ್ನು ತೆಗೆದು “ಮದುವೆ ಮನೆಯಲ್ಲಿ ಕಾಕಡ ಮಲ್ಲಿಗೆ ಮುಡಿಸ್ತೇನೆ, ಇದು ಬೇಡ ಬಾಡಿದೆ” ಎಂದು ಅಲ್ಲೇ ಬಿಸಾಕಿದರು. ಗುಲಾಬಿಯಂತೂ ಅಲ್ಲೇ ರೈಲಿನಲ್ಲೇ ಯಾರ ಕಾಲಡಿಗೋ ಬಿದ್ದು ಹೋಗಿರಬೇಕು, ಆ ಕ್ಷಣದಲ್ಲಿ ಅನಾಥವಾಗಿ ಶೋಷಣೆಗೊಳಗಾದ ಅವಳ ಪುಟ್ಟ ದೇಹ – ಮನಸ್ಸಿನಂತೆ. ಈ ಘಟನೆಯ ಬಗ್ಗೆ ಆಕೆ ಯಾರೊಂದಿಗೂ ಹೇಳಕೊಂಡಿರಲೂ ಇರಲಿಲ್ಲ, ಪೂರ್ತಿಯಾಗಿ ಹೊರಬಂದಿರಲೂ ಇರಲಿಲ್ಲ. ಅಂದು ಅತ್ತೂ ಕರೆದು ಹಿಂದೆ ಹೋಗುವಾಗ ಹೇಗೋ ರೈಲಿನ ಬದಲು ಬಸ್ಸಿನಲ್ಲಿ ಮನೆಗೆ ಬಂದಿದ್ದಳು. ಅಂದಿನಿಂದ ರೈಲೆಂದರೆ ಆಕೆಗೆ ಇದನ್ನು ಮತ್ತೆ ಮತ್ತೆ ನೆನಪಿಸಿ ಮನಸ್ಸಿಗೆ ಘಾಸಿಗೊಳಿಸುವ ವಿಷಯವಸ್ತುವಾಗಿತ್ತು.
ಸಮಯ ಸರಿದಂತೆ ಅಂದು ನಡೆದದ್ದೇನು ಎಂದು ಅರಿವಿಗೆ ಬಂದಾಗ ತನ್ನ ಬಗ್ಗೆ ಅದೇನೋ ತಪ್ಪಿತಸ್ಥ ಭಾವನೆ ಮೂಡಿತ್ತು, ಅಂದು ಅಜ್ಜಿಯ ಕೈಯನ್ನು ಇನ್ನಷ್ಟು ಬಿಗಿಯಾಗಿ ಹಿಡಿದಿದ್ದರೆ ಇಂತಹ ಘಟನೆಯೊಂದರ ಬಲಿಪಶು ತಾನಾಗುತ್ತಿರಲಿಲ್ಲವೇನೋ ಎಂದೂ, ವಸ್ತುಗಳ ಕಳ್ಳರ ಬಗ್ಗೆ ಜಾಗ್ರತೆ ಹೇಳಿದ್ದ ಅಮ್ಮ ತನ್ನ ದೇಹದ ಭಾಗ ಭಾಗಗಳನ್ನೂ ಕಿತ್ತು ತಿನ್ನುವ ಯೋಚನೆಯಲ್ಲೇ ಇರುವ ಅವೆಷ್ಟೋ ರಕ್ಕಸ ವ್ಯಕ್ತಿತ್ವದ ಕಳ್ಳರ ಬಗ್ಗೆಯೂ ಹೇಳಿರಲಿಲ್ಲವೇಕೆ ಎಂದೂ, ಹೇಳಿದ್ದರೂ ಅವನಿಂದ – ಅವನ ಆ ಬಿಗಿ ಹಿಡಿತದಿಂದ ತಾನು ಬಿಡಿಸಿಕೊಳ್ಳುತ್ತಿದ್ದೆನೋ ಎಂದೂ, ಇನ್ನೂ ಅದೆಷ್ಟೋ ಸಾಧ್ಯತೆಗಳನ್ನು- ಅಸಹಾಯಕತೆಗಳನ್ನೂ ಮತ್ತು ಕಾಡುವ-ಕೊರೆಯುವ ಮತ್ತೊಂದಷ್ಟನ್ನು ಯೋಚಿಸುತ್ತಲೇ ಬದುಕುತ್ತಿದ್ದಳು. ಆದರೆ ನಡೆದದ್ದರಲ್ಲಿ ತನ್ನ ತಪ್ಪೇನೂ ಇಲ್ಲ, ರೈಲಿನ ತಪ್ಪೂ ಇಲ್ಲ, ತಪ್ಪು ಹೆಣ್ಣನ್ನು ಕಾಮದ ವಸ್ತುವಿನಂತೆ ನೋಡುವ ಕಾಮಪಿಶಾಚಿ ಪ್ರವೃತ್ತಿಯ ಮನಸ್ಥಿತಿಯವರದ್ದು, ಇಂತಹ ಘಟನೆಗಳು ಸಮಯ, ಸಂದರ್ಭ, ಸ್ಥಳಗಳ ಆಧಾರದ ಮೇಲೆ ಅಥವಾ ತೊಟ್ಟಿರುವ ಬಟ್ಟೆಗಳನ್ನು ನೋಡಿಕೊಂಡು ನಡೆಯುವಂತದ್ದಲ್ಲ ಎಂಬ ಸೂಕ್ಷ್ಮಗಳು ಅರ್ಥವಾಗುವುದಕ್ಕೆ ಶುರುವಾದ ನಂತರ ಈ ಹಿಂದೆ ನಡೆದದ್ದರಿಂದ ನಿಧಾನವಾಗಿ ಮಾನಸಿಕವಾಗಿ ಹೊರಬರುತ್ತಿದ್ದಳು. ಮತ್ತೆ ರೈಲಿನಲ್ಲೊಂದು ಪ್ರಯಾಣವನ್ನು ಯೋಜಿಸಿಕೊಂಡು ದಸರಾದ ಕಾರಣವನ್ನು ಮುಂದಿರಿಸಿ ಮೈಸೂರಿನತ್ತ ಹೊರಟಿದ್ದಳು.
ಅವನಿಯಂತೆಯೇ ಅದೆಷ್ಟು ಹೆಣ್ಣುಮಕ್ಕಳ ಬಾಲ್ಯ ಇಂತಹ ಕಹಿಗಳಿಗೆಗಳಿಗೆ ಸಿಲುಕಿ ಒದ್ದಾಟದಲ್ಲಿ ಬಿದ್ದಿಲ್ಲಾ? ತಪ್ಪಿರದಿದ್ದರೂ ಸೋ ಕಾಲ್ಡ್ “ವಿಕ್ಟಿಮ್ ಬ್ಲೇಮಿಂಗ್”ಗೆ ಗುರಿಯಾಗಿಲ್ಲಾ? ಜೀವಗಳನ್ನೇ ಕೊನೆಗೊಳಿಸಿಲ್ಲಾ? ತನ್ನತನವನ್ನೇ ಪ್ರಶ್ನಿಸುತ್ತಾ ಬದುಕುತ್ತಿಲ್ಲಾ? ಗೊತ್ತಿಲ್ಲ! ಪ್ರಪಂಚದ ಯಾವುದೇ ದೇಶವನ್ನು ತೆಗೆದುಕೊಂಡರೂ ಎಲ್ಲಾ ಕಡೆಯೂ ಗಣನೆಗೆ ಬರುವ ವಿಷಾದ ಸತ್ಯಗಳಲ್ಲಿ ಇದೂ ಒಂದು. ಇಂತಹವುಗಳನ್ನೆಲ್ಲಾ ಸಹಿಸಕೊಂಡೇ ಒಂದೊಂದೇ ಹೆಜ್ಜೆ ಇಡುತ್ತಾ ಜಗತ್ತಿಗೇ ಆಧಾರವಾಗಿರುವ ಹೆಣ್ಣನ್ನು ಗೌರವಿಸುವ, ಕೈ ಹಿಡಿದು ಆದರಿಸುವ ಗಂಡಸರ ಸಂಖ್ಯೆ ಹೆಚ್ಚಲಿ, ಭಯದ ಪರದೆ ಸರಿದು ಪ್ರತಿ ಋತುಮಾನಗಳನ್ನು ಖುಷಿಯಿಂದ, ನಗುವಿನೊಂದಿಗೆ ಸ್ವಾಗತಿಸುತ್ತಾ ಅನುಭವಿಸುವ ಸ್ವಾತಂತ್ರ್ಯ ಆಕೆಗೂ ದೊರಕಲಿ ಎಂಬುದೇ ಸದ್ಯದ ಆಶಯ.
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ