ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅವಸ್ಥೆ ಮತ್ತು ವ್ಯವಸ್ಥೆ

ಮಹಾದೇವ ಕಾನತ್ತಿಲ
ಇತ್ತೀಚಿನ ಬರಹಗಳು: ಮಹಾದೇವ ಕಾನತ್ತಿಲ (ಎಲ್ಲವನ್ನು ಓದಿ)

.

ಇರುವೆ- ನಡಿಗೆ – ೨

ಆಹಾ! ಎಂತಹಾ ಸುಂದರ ಜಿಂಕೆ!, ಮೋಹಕ ಬಣ್ಣ, ಚಿನ್ನದ ಫಳ ಫಳ ಹೊಳಪು. ನಿಂತಲ್ಲಿ ನಿಲ್ಲಲ್ಲ!, ಮುಟ್ಟಲು ಹೋದರೆ ಛಂಗನೆ ನೆಗೆದು ಮಾಯ! ಸೀತೆಯ ಮನಸ್ಸಲ್ಲಿ ಮೋಹ ಬಿತ್ತಿ ಇಲ್ಲಿಂದಲ್ಲಿ ನೆಗೆದು ಮಾಯ!

ಆ ಜಿಂಕೆಯನ್ನು ಹಿಂಬಾಲಿಸುತ್ತಾನೆ, ರಾಮ. ಸೀತೆಯ ಆಸೆ ಅದು. ಈಗ ಸಿಕ್ಕಿತು ಎಂದರೆ ನೋಟದ ಪರಿಧಿಯ ಹೊರಗೋಡುತ್ತೆ. ನೋಟಕ್ಕೆ ಸಿಕ್ಕಿದ್ದನ್ನು ಅನುಭವಕ್ಕೆ ಇಳಿಸಬೇಕಾದರೆ ಈ ಜಿಂಕೆಯನ್ನು ಹಿಡಿಯಲೇ ಬೇಕು.
ಅರೇ! ಎಷ್ಟು ಹಿಂಬಾಲಿಸಿದರೂ ಸಿಗುತ್ತಿಲ್ಲ, ಸಿಕ್ಕಿತು ಅನ್ನುವಾಗ ದಕ್ಕುತ್ತಿಲ್ಲ?. ಇದು ನಿಜವಾದ ಜಿಂಕೆಯಂತೆ ಕಾಣುತ್ತಿಲ್ಲ,ರಾಮನಿಗೆ.

ಆ ಸಮಯದಲ್ಲಿ ರಾಮ, ಒಂದೇ ಒಂದು ಬಾಣ ಬಿಡುತ್ತಾನೆ. ರಾಘವನ ಗುರಿ ಎಂದರೆ ಗುರಿಯೇ. ಬಿಲ್ಲಿನ ಸಿಂಜಿನಿಗೆ ಬಾಣ ಸಂಧಿಸಿ , ಕಿವಿಯ ತನಕ ಎಳೆದು, ದೀರ್ಘ ಉಸಿರನ್ನು ದೇಹದಲ್ಲಿ ತುಂಬಿ ತನ್ನೆಲ್ಲಾ ಶಕ್ತಿಯನ್ನು ಅದಕ್ಕೆ ತುಂಬಿದ್ದಾನೆ. ಒಂದೇ ದೃಷ್ಟಿ, ಎತ್ತರಕ್ಕೆ ನಿಂತ ದೇಹ ಹಿಮ್ಮುಖವಾಗಿ ಬಾಗಿದೆ, ಬಿಲ್ಲು ಸಂಪೂರ್ಣ ಸೆಳೆತದಿಂದ ದೇಹವೂ, ಬಿಲ್ಲೂ, ಬಾಣವೂ ಒಂದೇ ಯಂತ್ರವಾದಂತೆ. ಕಣ್ಣು, ಸಂಪೂರ್ಣ ಬಾಣ ಮತ್ತು ಜಿಂಕೆಯ ಮೇಲಿನ ಗುರಿ, ಎಲ್ಲವೂ ಒಂದೇ ಸರಳ ರೇಖೆಯಲ್ಲಿ ಸಂಯೋಜನವಾದ ಕ್ಷಣದಲ್ಲಿ, ಬಿಟ್ಟ ಬಾಣ, ರಾಮಬಾಣ. ಕ್ಷಣ ಕ್ಷಣಕ್ಕೂ ಸ್ಥಿತಿ ಬದಲಿಸುವ ಜಿಂಕೆ, ಕಣ್ಣು ಮಿಟುಕಿಸುವ ಮೊದಲು, ಬಾಣ ಚುಚ್ಚಿತ್ತು..

ಹಾ..ಸೀತೇ…ಹಾ..ಲಕ್ಷ್ಮಣಾ….

ಬಾಣ ಚುಚ್ಚಿದ ಜಿಂಕೆ, ಈಗ ನೋಡಿದರೆ! ಜಿಂಕೆಯೇ ಅಲ್ಲ! ಅದು ಸತ್ತು ಬಿದ್ದ ರಕ್ಕಸ ದೇಹ, ಹೆಸರು ಮಾರೀಚ..

ವಿಜ್ಞಾನದಲ್ಲಿ ವಿದ್ಯಮಾನವನ್ನು ಗ್ರಹಿಸುವುದು ( ಅಬ್ಸರ್ವೇಷನ್) ಮೊದಲ ಹಂತ. ಆ ಗ್ರಹಿಕೆಯನ್ನು, ಆ ತನಕದ ತಮ್ಮ ಜ್ಞಾನದ ಬೆಳಕಲ್ಲಿ ಅವಲೋಕಿಸಿ, ಒಂದು ನಿರ್ಧಾರಕ್ಕೆ ಬರುವುದು ಎರಡನೆಯ ಹಂತ.

ಮೇಲಿನ ಉದಾಹರಣೆಯಲ್ಲಿ ಮೂರು ಕಾಲಘಟ್ಟಗಳಿವೆ. ಮೊದಲನೆಯದ್ದು, ಸೀತೆಯ ಗ್ರಹಿಕೆ, ಅದು ಅದೇ ಜಿಂಕೆ, ಸುಂದರ ಜಿಂಕೆ. ಅತ್ಯಂತ ಚುರುಕಾದ ತುಂಟ ಜಿಂಕೆ. ಗ್ರಹಿಕೆ ಮತ್ತು ಅವಲೋಕನದಿಂದ ಆಕೆಯ ವೈಜ್ಞಾನಿಕ ಕಾಣ್ಕೆ ಅದು.

ಎರಡನೆಯ ಕಾಲಘಟ್ಟದಲ್ಲಿ, ರಾಮನಿಗೆ ಇದು ಜಿಂಕೆಯ ಸಾಮರ್ಥ್ಯದ ವ್ಯಾಪ್ತಿಗೆ ಮೀರಿದ ಏನೋ ಶಕ್ತಿ ಇದೆ ಎಂದು ಗ್ರಹಿಸುತ್ತಾನೆ. ವಿಶ್ವಾಮಿತ್ರರಿಂದ ಪಡೆದ ಜ್ಞಾನ ಮತ್ತು ಅನುಭವದ ಬೆಳಕಲ್ಲಿ, ಈ ಗ್ರಹಿಕೆಯ ನಂತರದ ಅವಲೋಕನ ಆತನಿಗೆ ಇದರಲ್ಲಿ ರಾಕ್ಷಸರ ಮಾಯೆಯ ಅರಿವು ಆಗುತ್ತದೆ.

ಮೂರನೆಯ ಕಾಲಘಟ್ಟದಲ್ಲಿ, ಬಾಣ ತಗಲಿದ ನಂತರ ಸತ್ತುಬಿದ್ದ ರಾಕ್ಷಸ ದೇಹ. ಇಲ್ಲಿ ಗ್ರಹಿಕೆ ಮತ್ತು ಅವಲೋಕನಕ್ಕೆ ಅತೀವ ಬುದ್ಧಿಮತ್ತೆಯ ಅಗತ್ಯ ಇಲ್ಲ.
ವೈಜ್ಞಾನಿಕ ವಿಧಾನದಲ್ಲಿ, ಮೂರು ಕಾಲಘಟ್ಟದಲ್ಲಿ ಮೂರು ನಿರ್ಣಯಗಳು( conclusion). ಯಾವುದು ಸರಿ!?

ವಿಜ್ಞಾನದಲ್ಲಿ ಆಯಾ ಕಾಲಘಟ್ಟದಲ್ಲಿ ಅವು ಅವು ಸರಿ. ವಿಜ್ಞಾನದಿಂದ ತಿಳಿವಿಗೆ ಬರುವ ಜ್ಞಾನ, ಗ್ರಹಿಕೆಯ ಮೇಲೆ ಮತ್ತು ಆ ಹೊತ್ತಿನ ಜ್ಞಾನದ ಬೆಳಕಿನಲ್ಲಿ ಅವಲೋಕನ ಮತ್ತು ಕಲ್ಪನೆಯ ಮೂಲಕ ಪ್ರತಿಪಾದಿಸುವ ಹೈಪಾಥಿಸಿಸ್, ಮಾಡೆಲ್ ಗಳ ಮೇಲೆ ಅವಲಂಬಿತವಾಗಿರುತ್ತದೆ.

ನೀವು ಒಬ್ಬ ಭೌತಶಾಸ್ತ್ರಜ್ಞನ ಹತ್ತಿರ ಯಾವುದೋ ಒಂದು ವಿದ್ಯಮಾನದ ಬಗ್ಗೆ ಕೇಳಿದರೆ, ಆತ ಸಾಧಾರಣವಾಗಿ ಹೇಳುವ ಮಾತು ಹೀಗಿರುತ್ತದೆ.

” ಈ ವಿದ್ಯಮಾನ ಭೌತಶಾಸ್ತ್ರದ ಪ್ರಕಾರ ಹೀಗೇ ನಡೆಯಬೇಕು!” ಎಂದು.

ವಿಪರ್ಯಾಸ ಎಂದರೆ ಇದು ಅತ್ಯಂತ ಅವೈಜ್ಞಾನಿಕ ಅಭಿವ್ಯಕ್ತಿ. ಯಾವಾಗಲೂ ವಿದ್ಯಮಾನ ಅದರಷ್ಟಕ್ಕೇ ನಡೆಯುತ್ತಿರುತ್ತೆ. ಅದು ಭೌತಶಾಸ್ತ್ರದ ನಿಯಮಗಳನ್ನು ಅಧ್ಯಯನ ಮಾಡಿ ಅದನ್ನು ಅನುಸರಿಸುವುದಿಲ್ಲ!.
ಆಂಗ್ಲಭಾಷೆಯಲ್ಲಿ ಬರೆಯಲ್ಪಟ್ಟ ಸಮೀಕರಣಗಳನ್ನು ಅರ್ಥಮಾಡಿಕೊಂಡು ಇಲೆಕ್ಟ್ರಾನ್ ಗಳು ವೈರ್ ನಲ್ಲಿ ಓಡುತ್ತವೆಯೇ!. ಅವುಗಳಿಗೆ ಆಂಗ್ಲಭಾಷೆ ಕಲಿಸಿದ ಮೇಷ್ಟ್ರು ಯಾರು!?

ವಿಜ್ಞಾನದಲ್ಲಿ ಯಾವಾಗಲೂ ಪ್ರತಿಪಾದಿಸಲ್ಪಟ್ಟ ಸಿದ್ಧಾಂತಗಳು ಶಾಶ್ವತವಲ್ಲ. ಕಾಲಕ್ಕೆ ಸರಿಯಾಗಿ, ಗ್ರಹಿಕೆಗಳು ಬೆಳೆದಂತೆ, ಸಿದ್ಧಾಂತಗಳು ಬದಲಾಗುತ್ತವೆ. ಬೆಳಕಿನ ಬಗೆಗಿನ ವೈಜ್ಞಾನಿಕ ಸಿದ್ಧಾಂತಗಳು ಕಳೆದ ನಾಲಕ್ಕು ಶತಕಗಳಲ್ಲಿ ಹಲವು ಬದಲಾವಣೆ ಕಂಡಿದೆ. ಅದರ ಬಗ್ಗೆ ಮುಂದೊಮ್ಮೆ ಬರೆಯುವೆ. “A brief history of theory of light!”

ಇವಿಷ್ಟು ಸಿದ್ಧತೆಗಳೊಂದಿಗೆ ಇಂದಿನ ವಿಷಯಕ್ಕೆ ಬರೋಣ. ನೀವು ಜಗತ್ತಿನಲ್ಲಿ ಯಾವ ಕಡೆ ದೃಷ್ಟಿ ಹರಿಸಿದರೂ, ಅವಸ್ಥೆಯನ್ನೂ ವ್ಯವಸ್ಥೆಯನ್ನೂ ಕಾಣುತ್ತೀರಿ. ಅವಸ್ಥೆಯೊಳಗೂ ವ್ಯವಸ್ಥೆಯಿದೆ ಎಂಬುದನ್ನು ಅರಿಯುತ್ತೀರಿ.

ಬನ್ನಿ! ಬನ್ನಿ! ಎಷ್ಟು ದಿನದ ನಂತರ ಬಂದಿದ್ದೀರಿ!!
ಕುಳಿತುಕೊಳ್ಳಿ ಅಂತ ಮನೆಗೆ ಬಂದ ಅತಿಥಿಯನ್ನು ಕುಳ್ಳಿರಿಸಿ, ಬಿಸಿಲಿನಲ್ಲಿ ಬಂದ ಅವರಿಗೆ ಕುಡಿಯಲು ಒಂದು ಗ್ಲಾಸ್ ನೀರು ಕೊಡುತ್ತೀರಿ. ಜತೆಗೊಂದು ಬೆಲ್ಲದ ತುಂಡೂ ಕೊಡುವ ಪರಿಪಾಠವಿತ್ತು ನಮ್ಮಲ್ಲಿ. ಈ ಬೆಲ್ಲದ ಅವಸ್ಥೆ ಸ್ಥೂಲವಾಗಿ ಘನ, ನೀರಿನದ್ದು ದ್ರವಾವಸ್ಥೆ. ಉಸಿರಾಡುವ ಗಾಳಿಯದ್ದೂ ಅವಸ್ಥೆಯೇ!
ಇದೆಂತ ಅವಸ್ಥೆ ಮಾರಾಯ್ರೇ ನಿಮ್ದು! ಅಂತ ಕೇಳೋದು ಮಂಗಳೂರಿನಲ್ಲಿ ಬೇಸಗೆಯ ಬೆವರಿನ ಅವಸ್ಥೆಯಷ್ಟೇ ಸಾಮಾನ್ಯ.
ಅವಸ್ಥೆಯೊಳಗೆ ವ್ಯವಸ್ಥೆ ಇದೆ ಅಂದೆನಲ್ಲ, ಒಂದು ಚಮಚ ನೀರನ್ನು ನೆಲಕ್ಕೆ ಚೆಲ್ಲಿ, ಅದು ಹರಡುತ್ತಾ ಹೋಗುತ್ತೆ. ಚಮಚ ನೀರಲ್ಲಿ ಕೋಟಿ ಕೋಟಿ ವಾಟರ್ ಮಾಲೆಕ್ಯೂಲ್ ಗಳು, ಅವುಗಳೇನು ಸ್ವತಂತ್ರ ಅಣುಗಳೇ? ಅಲ್ಲ, ಪರಸ್ಪರ ಆಕರ್ಷಿಸಿಕೊಂಡು ಕೈ ಕೈಹಿಡಿದು ( ಹೈಡ್ರಾಜನ್ ಬಾಂಡ್ ಅಂತ ಅದಕ್ಕೆ ಹೆಸರು) ಜಿಮ್ನಾಸ್ಟಿಕ್ಸ್ ಆಡುವ ಅಣುಸಂಕುಲ ಅವುಗಳು. ಅಷ್ಟೂ ಅಣುಸಂಕುಲಗಳು ಜತೆಯಾಗಿ ನಿರ್ಧರಿಸಿದ ಅವಸ್ಥೆಯೇ ಈ ದ್ರವಾವಸ್ಥೆ.

ಸೂರ್ಯನ ಸುತ್ತ ಸುತ್ತುವ ಗ್ರಹಗಳು, ಗ್ರಹಗಳ ಸುತ್ತ ಸುತ್ತುವ ಉಪಗ್ರಹಗಳು, ಕೂಡಾ ವ್ಯವಸ್ಥೆಯೇ.

ಹಾಗೆಯೇ ನಕ್ಷತ್ರಮಂಡಲಗಳು, ಅವುಗಳೊಳಗಿನ‌ ಪರಸ್ಪರ ಆಕರ್ಷಣೆ ವಿಕರ್ಷಣೆಗಳು! ಧೂಮಕೇತುಗಳು, ಉಲ್ಕೆಗಳು. ಇವುಗಳೊಳಗೊಂದು ವ್ಯವಸ್ಥೆ, ಇವುಗಳೆಲ್ಲಾ ಸೇರಿ ಇನ್ನೂ ಹಲವು ವ್ಯವಸ್ಥೆಗಳು.

ಈವತ್ತು ಮನೆಯಲ್ಲಿ ಮನೆಯಾಕೆ ಎಷ್ಟೊಂದು ಖುಷಿಯಾಗಿದ್ದಾಳೆ! ಅದು ಮಾನಸಿಕ ಅವಸ್ಥೆ. ಆ ಖುಷಿಗೆ ಕಾರಣ, ಇಂದು ನಮ್ಮ ಮದುವೆಯ ವಾರ್ಷಿಕೋತ್ಸವ. ಎಷ್ಟೊಂದು ನೆನಪುಗಳು, ಬಣ್ಣದ ಉಡುಪುಗಳು, ಪ್ರೀತಿಯ ಕನಸುಗಳು, ಹೀಗೆ ಮನಃಪಟಲದಲ್ಲಿ ನೆನಪುಗಳ ಸರಣಿ ವ್ಯವಸ್ಥೆ. ಆ ವ್ಯವಸ್ಥೆಯೊಳಗೂ ಡೈನಾಮಿಕ್ಸ್ ಇದೆ. ಏನೋ ಸಿಹಿನೆನಪುಗಳ ನಡುವೆ, ಒಂದು ಕಹಿ ನೆನಪು, ಸಂತೋಷದ ಮನೋವ್ಯವಸ್ಥೆಗೆ ಹುಳಿಹಿಂಡಿ ಮೂಡ್ ಆಫ್ ಮಾಡಬಹುದು!

ಹಾಗೆ ನೋಡಿದರೆ, ಪರ್ಸನಾಲಿಟಿ ಎಂದು ನಾವು ಕರೆಯುವ ಸ್ವಭಾವ ಕೂಡಾ ಕಾಲಕಾಲುದಾರಿಯಲ್ಲಿ ಗ್ರಹಿಸಿ ಸಂಗ್ರಹಿಸಿ, ಪಾಕಿಸಿ, ಒಟ್ಟೂ ಒಂದು ಮಾನಸಿಕ ಪಲಾವ್ ಎಂಬ ವ್ಯವಸ್ಥೆ ತಾನೇ. ಮನಶ್ಶಾಸ್ತ್ರವೂ ಒಂದು ವಿಜ್ಞಾನ ತಾನೇ.
ಪರಮಾಣುವಿನೊಳಗಿನ ವ್ಯವಸ್ಥೆ ಬಗ್ಗೆ ಮೊನ್ನೆ ಹೇಳಿರುವೆ. ನಮ್ಮ ದೇಹದೊಳಗೆ ಉಸಿರಾಟದ ವ್ಯವಸ್ಥೆ, ರಕ್ತಸಂಚಾರದ ವ್ಯವಸ್ಥೆ, ಆಹಾರ ಪಚನ ವ್ಯವಸ್ಥೆ, ಹೀಗೇ ಹತ್ತು ಹಲವಿವೆ.
ವ್ಯಕ್ತಿ, ಕುಟುಂಬ, ಮನೆತನ, ಸಮಾಜ, ದೇಶ ಹೀಗೆ ಸಾಮಾಜಿಕ ವ್ಯವಸ್ಥೆಯನ್ನು ನಾವು ಕಾಣುತ್ತೇವಲ್ಲವೇ. ಹಾಗೆಯೇ ಬ್ಯಾಕ್ಟೀರಿಯಾ ಇತ್ಯಾದಿಗಳೂ ತಮ್ಮದೇ ಕಾಲನಿ ಕಟ್ಟಿ ಬದುಕುತ್ತವೆ. ಸಸ್ಯ ಸಾಮ್ರಾಜ್ಯದ, ಪ್ರಾಣಿಸಂಕುಲದ ಪರಸ್ಪರಾವಲಂಬನೆಯ ಒಂದು ಅತ್ಯಂತ ಸಂಕೀರ್ಣ ವ್ಯವಸ್ಥೆಯೂ ಜೀವಜಾಲದೊಳಗೆ ಮನೆಮಾಡಿದೆ.

ಚಲನಶೀಲ ಜಗತ್ತಿನಲ್ಲಿ, ಎರಡು ಅಥವಾ ಹೆಚ್ಚು ವ್ಯವಸ್ಥೆಗಳ ನಡುವೆ ತಿಕ್ಕಾಟ, ಹೊಂದಾಣಿಕೆ, ನಡೆಯುತ್ತಲೇ ಇರುತ್ತದೆ. ಉದಾಹರಣೆಗೆ, ಯುಕ್ರೇನ್ ಮತ್ತು ರಷ್ಯಾದ ನಡುವಿನ‌ ತಿಕ್ಕಾಟ. ಅದು ಎರಡೇ ದೇಶಕ್ಕೆ ಸೀಮಿತವೇ?. ಅದರಿಂದಾಗಿ, ಅಲ್ಲಿಂದ ಸಾವಿರಾರು ಕಿಲೋಮೀಟರ್ ದೂರದ ಶ್ರೀಲಂಕಾದ ಆರ್ಥಿಕ ವ್ಯವಸ್ಥೆ ಕೂಡಾ ಸಂಪೂರ್ಣ ಹದಗೆಟ್ಟಿದೆ. ಭಾರತದಲ್ಲಿ ತೈಲೋತ್ಪನ್ನದ ಬೆಲೆ ಹೆಚ್ಚುತ್ತಿದೆ. ಇಡೀ ವೈಶ್ವವಿಕ ವ್ಯವಸ್ಥೆಯ‌ ಮೇಲೆ ಅದು ಪರಿಣಾಮ ಬೀರಿದೆ. ಪ್ರಾಣಿ,ಸಸ್ಯ ಸಂಕುಲದಲ್ಲಿ ಬಯೋಡೈವರ್ಸಿಟಿ ಮತ್ತು ಪರಸ್ಪರಾವಲಂಬನೆಯನ್ನು ಕಾಣುತ್ತೇವೋ ಹಾಗೆಯೇ ಸಾಮಾಜಿಕ,ರಾಜಕೀಯ ವ್ಯವಸ್ಥೆಯಲ್ಲಿ ಕೂಡಾ ಇದನ್ನು ಕಾಣಬಹುದು.

ಒಂದು ಸಕ್ಕರೆಯ ಕಣ ಸಿಹಿ. ಕಣವನ್ನು ತುಂಡು ಮಾಡಿ, ರುಚಿ ನೋಡಿ, ಆ ತುಂಡೂ ಸಿಹಿ. ಹಾಗೆ ಅದನ್ನು ಸಾವಿರಾರು ತುಂಡುಗಳಾಗಿ ಖಂಡಿಸಿ ರುಚಿ ನೋಡಿದರೆ, ಆ ಮೈಕ್ರೋ ಕಣ ಕೂಡಾ ಅದೇ ಸಿಹಿ ಸ್ವಭಾವವನ್ನು ಪ್ರಕಟಿಸುತ್ತದೆ.

ಹಾಗೆಯೇ ಮ್ಯಾಕ್ರೊ ಮತ್ತು ಮೈಕ್ರೋ ವ್ಯವಸ್ಥೆಗಳು ಹಲವು ಸಾಮಾನ್ಯ ಸ್ವಭಾವಗಳನ್ನು ಪ್ರಕಟ ಮಾಡುತ್ತವೆ. ಅಖಂಡವಾಗಿ ನೋಡಿದರೆ ಲಕ್ಷಾಂತರ ಸಿಸ್ಟಮ್ ಗಳ ಗುಚ್ಛವಾದ ಇಡೀ ಬ್ರಹ್ಮಾಂಡವೇ ಒಂದು ಸಿಸ್ಟಮ್.

ನೀವು ಬೆಳಗ್ಗೆದ್ದು ಕಣ್ತೆರೆದು ಗುಡ್ ಮಾರ್ನಿಂಗ್ ಮಾಡುವಾಗಿಂದ ರಾತ್ರೆ ಮಲಗುವ ತನಕ ಪ್ರತೀ ವಸ್ತುವಿನಲ್ಲಿ, ಪ್ರತೀ ವಿದ್ಯಮಾನದಲ್ಲಿ, ಪ್ರತೀ ಮನಸ್ಸಲ್ಲಿ, ಮನೆಯಲ್ಲಿ, ಸಾಹಿತ್ಯ ಮಂದಿರದಲ್ಲಿ, ಒಂದಲ್ಲ ಒಂದು ರೀತಿಯ ಸಿಸ್ಟಮ್ ಕಾಣುವಿರಿ. ಈ ವ್ಯವಸ್ಥೆ ಕೂಡಾ ಒಂದು ಚಲನಶೀಲತೆಗೆ ಒಳಪಟ್ಟದ್ದೂ, ಆ ಚಲನಶೀಲತೆಯೊಳಗೊಂದು ಸಮತೋಲನವನ್ನು ಹೊಂದಿದ್ದೂ ಆಗಿದೆ. ಇಷ್ಟೂ ಓದಿದ ನಂತರ
ನನ್ನ ಮಾನಸಿಕ ವ್ಯವಸ್ಥೆಯ ಸಮತೋಲನ ತಪ್ಪಿದೆಯಾ? ಎಂಬ ಸಂಶಯ ನಿಮಗೆ ಬಂತೋ ಏನೋ!.