ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಭಾರತದಲ್ಲಿ ಕಳೆದುಹೋಗುತ್ತಿರುವ ವೈಜ್ಞಾನಿಕ ಪ್ರಜ್ಞೆ

ನಾ ದಿವಾಕರ

ಭಾರತ ಸಾರ್ವಜನಿಕರಲ್ಲಿ ಮತ್ತು ವಿಜ್ಞಾನಿಗಳಲ್ಲೂ ಸಹ ವಿಜ್ಞಾನ ಅರಿವನ್ನು ಹರಡಲಾಗುತ್ತಿಲ್ಲ

ಸಿ ಪಿ ರಾಜೇಂದ್ರನ್‌ – The case of missing scientific Indian
ದ ಹಿಂದೂ 24 ಆಗಸ್ಟ್‌ 2022
ಅನುವಾದ : ನಾ ದಿವಾಕರ

75ನೆಯ ಸ್ವಾತಂತ್ರ್ಯೋತ್ಸವ ಭಾರತದ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಕಳೆದ ಏಳು ದಶಕಗಳಲ್ಲಿ ವಿವಿಧ ವಲಯಗಳಲ್ಲಿ ಭಾರತ ನಡೆದುಬಂದ ಹಾದಿಯನ್ನು, ಬೆಳವಣಿಗೆಗಳನ್ನು ಪರಾಮರ್ಶಿಸುವ ಒಂದು ಸುಸಂದರ್ಭ. ವಿಷಾದಕರ ಸಂಗತಿ ಎಂದರೆ, ಹಿಂದೂ ಪತ್ರಿಕೆಯನ್ನೂ ಸೇರಿದಂತೆ ಕೆಲವು ಅಪವಾದಗಳನ್ನು ಹೊರತುಪಡಿಸಿದರೆ ದೇಶದ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ಈ ಅವಧಿಯಲ್ಲಿ ದೇಶದಲ್ಲಿ ವಿಜ್ಞಾನ ಶಿಕ್ಷಣದಲ್ಲಿ ನಡೆದಿರುವ ಬೆಳವಣಿಗೆಗಳ ಬಗ್ಗೆ ವಿಶ್ಲೇಷಣೆಯನ್ನು ನಡೆಸಿಲ್ಲ. ರಾಜಕಾರಣಿಗಳು, ಕಲಾವಿದರು, ಬರಹಗಾರರು, ನಟರು ಮತ್ತಿತರ ಗಣ್ಯರ ಬಗ್ಗೆ ಹೆಚ್ಚಿನ ಗಮನ ನೀಡಲಾಗಿದೆಯಾದರೂ, ವಿಜ್ಞಾನ ಮತ್ತು ವಿಜ್ಞಾನಿಗಳನ್ನು ಬಹುಮಟ್ಟಿಗೆ ನಿರ್ಲಕ್ಷಿಸಲಾಗಿದೆ. ವಿಜ್ಞಾನದ ಬಗ್ಗೆ ಸಾಮಾನ್ಯವಾಗಿ ಕಂಡುಬರುವ ನಿರ್ಲಕ್ಷ್ಯ, ಅಸಡ್ಡೆ ಮತ್ತು ಜನಸಾಮಾನ್ಯರಲ್ಲಿ ಹಾಗೂ ರಾಜಕಾರಣಿಗಳಲ್ಲಿ ವೈಜ್ಞಾನಿಕ ಪ್ರಜ್ಞೆಯ ಕೊರತೆ ಎದ್ದು ಕಾಣುತ್ತಿರುವುದು ಭಾರತೀಯ ಸಂವೇದನೆಯ ಬಗ್ಗೆ ವಿಷಾದ ಮೂಡಿಸುತ್ತದೆ.

ವೈಜ್ಞಾನಿಕ ಮನೋಭಾವದ ಕೊರತೆ

ಭಾರತ ಸಂಶೋಧನೆಯ ಕ್ಷೇತ್ರದಲ್ಲಿ, ವಿಶೇಷವಾಗಿ ಅಣು ಜೀವವಿಜ್ಞಾನ, ಕೃಷಿ ಮತ್ತು ಔಷಧೀಯ ವಿಜ್ಞಾನದಲ್ಲಿ, ಘನಸ್ಥಿತಿಯ ರಾಸಾಯನಶಾಸ್ತ್ರ ವಿಜ್ಞಾನದಲ್ಲಿ ಮಹತ್ತರವಾದ ಸಾಧನೆಯನ್ನು ಮಾಡಲು ಸಾಧ್ಯವಾಗಿದೆ. ಹಾಗೆಯೇ ಬಾಹ್ಯಾಕಾಶ ವಿಜ್ಞಾನ, ಪರಮಾಣು ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲೂ ಸಾಕಷ್ಟು ಮುನ್ನಡೆ ಸಾಧಿಸಿದೆ. ಆದಾಗ್ಯೂ ಜನಸಾಮಾನ್ಯರ ನಡುವೆ ಮಾತ್ರವೇ ಅಲ್ಲದೆ ವಿಜ್ಞಾನಿಗಳ ನಡುವೆಯೂ ವೈಜ್ಞಾನಿಕ ಅರಿವು/ಪ್ರಜ್ಞೆಯನ್ನು ಬೆಳೆಸುವುದರಲ್ಲಿ ಭಾರತ ವಿಫಲವಾಗಿದೆ. ಭಾರತದ ಸಂಸತ್ತು ನಾಗರಿಕರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ನೆರವಾಗುವ ಉದ್ದೇಶದಿಂದಲೇ 42ನೆಯ ಸಂವಿಧಾನ ತಿದ್ದುಪಡಿಯ ಮೂಲಕ ಪರಿಚ್ಚೇದ 51ಎ ಜಾರಿಗೊಳಿಸಿತ್ತು. ಸಂವಿಧಾನ ಪರಿಚ್ಚೇದ 51ಎ ಅನ್ವಯ “ ವೈಜ್ಞಾನಿಕ ಮನೋಭಾವವನ್ನು, ಮಾನವೀಯತೆಯನ್ನು, ವಿಚಾರಶೀಲತೆ ಮತ್ತು ಸುಧಾರಣೆಯನ್ನು ಬೆಳೆಸುವುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯವಾಗಿರುತ್ತದೆ. ”.

ಈ ಪ್ರಯತ್ನಗಳ ಹೊರತಾಗಿಯೂ ವೈಜ್ಞಾನಿಕ ಮನೋಭಾವ ಒಂದು ಉದಾತ್ತ ಆದರ್ಶವಾಗಿಯೇ ಉಳಿದಿದ್ದು ಸಮಾಜವನ್ನು ತಳಮಟ್ಟದವರೆಗೂ ತಲುಪಲು ಸಾಧ್ಯವಾಗಿಲ್ಲ. ಇದರಿಂದಲೇ ಭಾರತೀಯ ಸಮಾಜದ ಮನಸ್ಥಿತಿ ಅಂಧಶ್ರದ್ಧೆಯ ಕೂಪವಾಗಿದೆ. ಇದರ ಪರಿಣಾಮವಾಗಿಯೇ ಸಾಂವಿಧಾನಿಕವಾಗಿ ಪ್ರಮಾಣೀಕರಿಸಲಾದ ಜಾತ್ಯತೀತ ಮೌಲ್ಯಗಳನ್ನೂ ನಿರ್ಲಕ್ಷಿಸಿ ಹಿಂಗತಿಯ ಧರ್ಮಾಧಾರಿತ ರಾಜಕಾರಣವು ಮುನ್ನೆಲೆಗೆ ಬರುತ್ತಿದೆ. 1950 ಮತ್ತು 60ರ ದಶಕಗಳಲ್ಲಿ ಭಾರತದ ವಿಜ್ಞಾನಿಗಳು, ಅಂದಿನ ಪ್ರಧಾನಿ ಜವಹರಲಾಲ್‌ ನೆಹರೂ ಅವರ ಪ್ರೋತ್ಸಾಹದೊಂದಿಗೆ, ಆಧುನಿಕ ವಿಜ್ಞಾನದ ಬುನಾದಿಯನ್ನು ನಿರ್ಮಿಸಿದ್ದರು. ಹಾಗಾದರೆ ಎಡವಿರುವುದೆಲ್ಲಿ ?

ಈ ಸಮಸ್ಯೆಯ ಮೂಲವನ್ನು ವಿಜ್ಞಾನಿಗಳ ನಡುವೆ ಮತ್ತು ಅವರು ಪ್ರತಿನಿಧಿಸುವ ವಿಜ್ಞಾನ ಸಂಸ್ಥೆಗಳಲ್ಲಿ ಗುರುತಿಸಬಹುದು. ಕೆಲವು ಸನ್ನಿವೇಶಗಳಲ್ಲಿ, ಅತ್ಯವಶ್ಯವಾಗಿದ್ದಾಗಲೂ ಸಹ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಪ್ರಯತ್ನಗಳಿಗೆ ವಿಜ್ಞಾನಿಗಳು ಅರೆಮನಸ್ಸಿನಿಂದಲೇ ಪ್ರೋತ್ಸಾಹ ನೀಡಿದ್ದರು. ಪ್ರಖ್ಯಾತ ಅಣು ಜೀವವಿಜ್ಞಾನಿ ಪುಷ್ಪಾ ಭಾರ್ಗವ ತಮ್ಮ ಲೇಖನವೊಂದರಲ್ಲಿ ( Scientists without scientific temper ವೈಜ್ಞಾನಿಕ ಮನೋಭಾವ ಇಲ್ಲದ ವಿಜ್ಞಾನಿಗಳು- ದ ಹಿಂದೂ 17 ಜನವರಿ 2015) “ಉನ್ನತ ಹುದ್ದೆಗಳಲ್ಲಿರುವವರನ್ನೂ ಸೇರಿದಂತೆ ದೇಶದಲ್ಲಿರುವ ಬಹುತೇಕ ವಿಜ್ಞಾನಿಗಳು , ವೈಚಾರಿಕತೆ, ತರ್ಕಬದ್ಧತೆ ಇರುವಂತಹ, ಮತತತ್ವಗಳ ಚಿಂತನೆ, ಮೂಢನಂಬಿಕೆಗಳು ಮತ್ತು ಮಿಥ್ಯೆಗಳಲ್ಲಿ ನಂಬಿಕೆ ಇಲ್ಲದಂತಹ, ವೈಜ್ಞಾನಿಕ ಮನೋಭಾವಕ್ಕೆ ಬದ್ಧರಾಗಿಲ್ಲ ” ಎಂದು ಹೇಳಿದ್ದರು.

1994ರಲ್ಲಿ ಇಂಡಿಯನ್‌ ನ್ಯಾಷನಲ್‌ ಸೈನ್ಸ್‌ ಅಕಾಡೆಮಿ, ಇಂಡಿಯನ್‌ ಅಕಾಡೆಮಿ ಅಫ್‌ ಸೈನ್ಸಸ್‌ ಮತ್ತು ನ್ಯಾಷನಲ್‌ ಅಕಾಡೆಮಿ ಆಫ್‌ ಸೈನ್ಸಸ್‌, ಮೂರೂ ಅಕಾಡೆಮಿಗಳಲ್ಲಿ , ವಿಜ್ಞಾನ ಸಂಬಂಧಿತ ಸಾಮಾಜಿಕ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿಲ್ಲ ಎಂಬ ಕಾರಣಕ್ಕಾಗಿ ಪುಷ್ಪಾ ಭಾರ್ಗವ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪುಷ್ಪ ಭಾರ್ಗವ ಅವರು 2015ರಲ್ಲಿ ಬರೆದ ಒಂದು ಲೇಖನದಲ್ಲಿ 1930ರ ನಂತರ ಭಾರತ ಏಕೆ ವಿಜ್ಞಾನದ ನೋಬೆಲ್‌ ಪ್ರಶಸ್ತಿ ಗಳಿಸಿಲ್ಲ ಎನ್ನುವುದನ್ನೂ ಹೀಗೆ ವಿಶ್ಲೇಷಿಸಿದ್ದರು. “ ಇದಕ್ಕೆ ಮೂಲ ಕಾರಣವೇನೆಂದರೆ ದೇಶದಲ್ಲಿ ವೈಜ್ಞಾನಿಕ ಮನೋಭಾವವೇ ಬಹುಮುಖ್ಯ ಅಂಗವಾದ ವೈಜ್ಞಾನಿಕ ವಾತಾವರಣ ಇಲ್ಲದಿರುವುದು. ”. ಕ್ರೀಡೆಯಲ್ಲಿ ಹೇಗೆ ಕ್ರೀಡಾ ಸಂಸ್ಕೃತಿ ಮುಖ್ಯವಾಗುವುದೋ ಹಾಗೆಯೇ ವಿಜ್ಞಾನ ಬೆಳೆಯಬೇಕೆಂದರೆ ವೈಜ್ಞಾನಿಕ ಮನೋಭಾವ ದೇಶದೆಲ್ಲೆಡೆ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ವಿಜ್ಞಾನ ಸಂಸ್ಥೆಗಳು ಪ್ರಧಾನ ಪಾತ್ರ ವಹಿಸಿ ಜನಸಾಮಾನ್ಯರಲ್ಲಿ ವಿಜ್ಞಾನ ಸಾಕ್ಷರತೆ ಮತ್ತು ಅರಿವು ಮೂಡಿಸಲು ಪ್ರೋತ್ಸಾಹ ನೀಡಬೇಕು. ಆಗ ಮಾತ್ರ ಅವುಗಳ ಅಸ್ತಿತ್ವವೂ ಸಾರ್ಥಕವಾಗುತ್ತದೆ.

ಹುಸಿ ವಿಜ್ಞಾನ ಎಲ್ಲೆಡೆ ಹರಡಿದೆ

ಹಲವು ವರ್ಷಗಳ ಹಿಂದೆ ಅಮೆರಿಕದಲ್ಲಿನ ಕೆಲವು ಕ್ರೈಸ್ತ ಪುನರುಜ್ಜೀವಕ ಗುಂಪುಗಳು ದೇಶದ ವಿಜ್ಞಾನ ಪಠ್ಯಕ್ರಮದಲ್ಲಿ ಮಾನವ ಜೀವಿಯ ಉಗಮದ ವೈಜ್ಞಾನಿಕ ತತ್ವಗಳಿಗೆ ಪರ್ಯಾಯವಾಗಿ ಸೃಷ್ಟಿವಾದವನ್ನು ಅಳವಡಿಸಲು ಶತಾಯ ಗತಾಯ ಪ್ರಯತ್ನಿಸಿದ್ದವು. ಈ ಸಂದರ್ಭದಲ್ಲಿ ನ್ಯಾಷನಲ್‌ ಅಕಾಡೆಮಿ ಆಫ್‌ ಸೈನ್ಸಸ್‌ ಸಂಸ್ಥೆಯು ಒಂದು ಹೇಳಿಕೆಯನ್ನು ನೀಡುವ ಮೂಲಕ ಈ ಬೇಡಿಕೆಯನ್ನು ತಿರಸ್ಕರಿಸಿತ್ತು. ಈ ಹೇಳಿಕೆಯ ಕೊನೆಯಲ್ಲಿ

ವೈಜ್ಞಾನಿಕ ಪರಿಶೀಲನೆಯಿಂದ ಹೊರತಾದ ಯಾವುದೇ ರೀತಿಯ ತಾತ್ವಿಕ ಮೀಮಾಂಸೆಯನ್ನು, ವ್ಯಾಖ್ಯಾನಗಳನ್ನು, ಪ್ರಯೋಗಪರೀಕ್ಷೆಗಳನ್ನು ಆಧರಿಸಿದ ನಂಬಿಕೆಗಳಿಗೆ ಯಾವುದೇ ರೀತಿಯ ವಿಜ್ಞಾನ ಪಠ್ಯಕ್ರಮದಲ್ಲೂ ಬೋಧನೆಗೆ ಅವಕಾಶ ಪಡೆಯುವುದು ಸಾಧ್ಯವಿಲ್ಲ. ಈ ರೀತಿಯ ತಾತ್ವಿಕತೆಗಳನ್ನು ವಿಜ್ಞಾನ ಪಠ್ಯಕ್ರಮದಲ್ಲಿ ಅಳವಡಿಸುವುದು ಸಾರ್ವಜನಿಕ ಶಿಕ್ಷಣದ ಮೂಲ ಧ್ಯೇಯಗಳೊಂದಿಗೆ ರಾಜಿ ಮಾಡಿಕೊಂಡಂತಾಗುತ್ತದೆ . ವಿಜ್ಞಾನವು ನೈಸರ್ಗಿಕ ಪ್ರಕ್ರಿಯೆಗಳನ್ನು ವಿಶ್ಲೇಷಿಸುವುದರಲ್ಲಿ ಯಶಸ್ವಿಯಾಗಿದ್ದು ಇದರಿಂದ ಸೃಷ್ಟಿ ಪ್ರಕ್ರಿಯೆ ಮತ್ತು ಬ್ರಹ್ಮಾಂಡವನ್ನು ಅರ್ಥಮಾಡಿಕೊಳ್ಳುವುದೂ ಸಾಧ್ಯವಾಗಿದೆ. ಅಷ್ಟೇ ಅಲ್ಲದೆ ತಂತ್ರಜ್ಞಾನ, ಸಾಮಾಜಿಕ ಆರೋಗ್ಯ ಮತ್ತು ಯೋಗಕ್ಷೇಮದಲ್ಲಿ ಸಾಕಷ್ಟು ಪ್ರಗತಿಗೂ ಕಾರಣವಾಗಿದೆ. ಆಧುನಿಕ ಜನ ಜೀವನದಲ್ಲಿ ವಿಜ್ಞಾನ ನಿರ್ವಹಿಸುವ ಪಾತ್ರವನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ ಶಿಕ್ಷಣದಲ್ಲಿ ವಿಜ್ಞಾನವನ್ನು ಬೋಧಿಸಬೇಕೇ ಹೊರತು, ಮತಧರ್ಮಗಳನ್ನಲ್ಲ

ಎಂದು ಹೇಳಲಾಗಿತ್ತು.

ವಾತಾವರಣ ಬದಲಾವಣೆಯ ವಿಜ್ಞಾನವನ್ನು ನಿರಾಕರಿಸುವುದರಲ್ಲಾಗಲೀ, ನಮ್ಮ ಸುತ್ತಲಿನ ಜಗತ್ತಿನ ರಹಸ್ಯಗಳನ್ನು ಭೇದಿಸಿ, ಜೀವ ವೈವಿಧ್ಯತೆಯನ್ನು ವ್ಯಾಖ್ಯಾನಿಸುವ ಮಾನವನ ಉಗಮ ಮತ್ತು ಅಭ್ಯುದಯದ ವಿಚಾರದಲ್ಲಾಗಲೀ ಹುಸಿ ವಿಜ್ಞಾನವು ಎಲ್ಲೆಡೆ ಹರಡುತ್ತಿದೆ. ಈ ಹುಸಿ ವಿಜ್ಞಾನ ಬೇರೂರಲು ಫಲವತ್ತಾದ ಭೂಮಿಕೆಯನ್ನು ಒದಗಿಸುವಲ್ಲಿ ಭಾರತವೂ ಹಿಂದೆ ಬಿದ್ದಿಲ್ಲ. ವಿಜ್ಞಾನ ಪಠ್ಯಕ್ರಮಗಳಲ್ಲಿ ಹುಸಿ ವಿಜ್ಞಾನವನ್ನು ಅಳವಡಿಸುವ ಹಲವು ಪ್ರಯತ್ನಗಳು ನಡೆದಿವೆ. ಕಳೆದ ವರ್ಷ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ಜೋತಿಷ್ಯ ಶಾಸ್ತ್ರವನ್ನು ಅಳವಡಿಸಲಾಗಿದೆ. ಗೋವಿನ ಸಗಣಿಯಲ್ಲಿ ಚಿಕಿತ್ಸಕ ಗುಣಾಂಶಗಳಿವೆ ಎಂಬ ವಾದಕ್ಕೆ, ಇದಕ್ಕೆ ಪೂರಕವಾದ ಯಾವುದೇ ರೀತಿಯ ವೈಜ್ಞಾನಿಕ ಪ್ರಮಾಣಗಳು ಇಲ್ಲವಾದರೂ, ಅಧಿಕೃತವಾಗಿ ಮನ್ನಣೆ ನೀಡಲಾಗುತ್ತಿದೆ. ಹಸುವಿನ ಗಂಜಲದಲ್ಲಿ ಚಿಕಿತ್ಸಕ ಗುಣಗಳಿವೆ ಎಂದು ಪ್ರತಿಪಾದಿಸುವ ಪ್ರಾಚೀನ ಗ್ರಂಥಗಳನ್ನು ಅಧಿಕೃತ ಸರ್ಕಾರಿ ಸುತ್ತೋಲೆಗಳಲ್ಲೇ ಉಲ್ಲೇಖಿಸಲಾಗುತ್ತದೆ. ಇಂತಹ ಸನ್ನಿವೇಶಗಳಲ್ಲಿ ನಮ್ಮ ವಿಜ್ಞಾನ ಅಕಾಡೆಮಿಗಳು ವಿಮರ್ಶಾತ್ಮಕ ಅಭಿಪ್ರಾಯಗಳನ್ನು ಮಂಡಿಸುತ್ತಿವೆಯೇ ? ವಿಜ್ಞಾನದ ಪರಿಸರವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಕೆಲವು ದಿಟ್ಟ ಕ್ರಮಗಳನ್ನು ಕೈಗೊಂಡಿದ್ದರೂ, 1960ರ ನಂತರದಲ್ಲಿ ನಾವು ವಿಫಲವಾಗಿದ್ದೇವೆ. ಇದಕ್ಕೆ ಕಾರಣ, ನಮ್ಮ ದೇಶದ ನಾಯಕತ್ವದಲ್ಲಿ ನಿಯತಿ ಪ್ರಜ್ಞೆಯ ಕೊರತೆ ಇದೆ. ಇದು ಸಾಲದೆಂಬಂತೆ, ಭಾರತದ ವಿದ್ವತ್‌ ವಲಯವು ಆತ್ಮರತಿಯಲ್ಲೇ ಹೆಚ್ಚು ಆಸಕ್ತಿ ಹೊಂದಿರುವುದು ಮತ್ತು ನಿಯಮಬದ್ಧ ಅಧಿಕಾರಶಾಹಿಗೆ ಊಹೆಗೂ ನಿಲುಕದ ಮಟ್ಟಿಗೆ ಬದ್ಧರಾಗಿರುವುದೂ ಕಾರಣವಾಗಿದೆ.

ತಪ್ಪು ಮಾಹಿತಿಗಳ ದಾಳಿ

“ ವಿಜ್ಞಾನ ಆಲೋಚನೆಯ ಮಾರ್ಗವೇ ಹೊರತು ಜ್ಞಾನದ ರಾಶಿ ಅಲ್ಲ” ಎಂದು ಕಾರ್ಲ್‌ ಸಗನ್‌ ಹೇಳುತ್ತಾರೆ. ವಿಜ್ಞಾನದ ಜಟಿಲತೆಗಳನ್ನು ಸಾರ್ವಜನಿಕರಿಗೆ ಅರ್ಥವಾಗುವ ರೀತಿಯಲ್ಲಿ ಸರಳೀಕರಿಸಿ ಹೇಳುವುದೂ ಒಂದು ಕಲೆ. ಇದೇ ವೇಳೆ , ಸುಳ್ಳು ಸುದ್ದಿಗಳ ವಿರುದ್ಧ, ಒಳಸಂಚಿನ ತತ್ವಗಳ ವಿರುದ್ಧ, ಉತ್ಪಾದಿತ ಸತ್ಯಗಳ ವಿರುದ್ಧ ವೈಜ್ಞಾನಿಕ ನೆಲೆಯಲ್ಲಿ ಸಾಕ್ಷ್ಯಾಧಾರಗಳನ್ನು ಆಧರಿಸಿ ಜನಸಾಮಾನ್ಯರಲ್ಲಿ ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ವಿಜ್ಞಾನವು ಒಂದು ತಾರ್ಕಿಕ ಕಾರ್ಯತಂತ್ರವಾಗಿ ನೆರವಾಗುತ್ತದೆ. ಭಾರತದ ಮಾಹಿತಿ ಕ್ರಾಂತಿಯ ಸಂದರ್ಭದಲ್ಲಿ ಇವುಗಳೇ ಪ್ರಮುಖ ತೊಡಕುಗಳಾಗಿವೆ. ಜಗತ್ತನ್ನು ವಕ್ರದೃಷ್ಟಿಯಿಂದ ನೋಡುವ ಅತಾರ್ಕಿಕತೆ ಹೊಸತೇನಲ್ಲ. ಆದರೆ ಈ ರೀತಿಯ ಮಾಹಿತಿಯ ಪ್ರಸರಣ ಮತ್ತು ಹರಡುವಿಕೆ ಅತಿವೇಗವಾಗಿ ನಡೆಯುತ್ತಿದ್ದು ಮಾಹಿತಿ ತಂತ್ರಜ್ಞಾನದ ಮೂಲಕ ಕ್ಷಣಮಾತ್ರದಲ್ಲಿ ಕೋಟ್ಯಂತರ ಜನರನ್ನು ತಲುಪುತ್ತದೆ. ತಪ್ಪು ಮಾಹಿತಿಗಳು ಪ್ರಜಾತಂತ್ರದ ಹಲವು ಅಂಶಗಳನ್ನು, ವಿಶೇಷವಾಗಿ ಮಾನವ ಹಕ್ಕುಗಳ ಪರಿಕಲ್ಪನೆಯನ್ನು ಹೇಗೆ ಶಿಥಿಲಗೊಳಿಸುತ್ತದೆ ಎನ್ನುವುದನ್ನು ನಾವು ಕಂಡಿದ್ದೇವೆ.

ಹುಸಿ ವಿಜ್ಞಾನವನ್ನು ಪ್ರೋತ್ಸಾಹಿಸುವ ಮತ್ತು ಪ್ರಚೋದಿಸುವ ಅನೇಕ ಅರಿಯುವಿಕೆಯ ತಾರತಮ್ಯಗಳನ್ನು ನಾವು ಎದುರಿಸುತ್ತಿದ್ದೇವೆ. ಪಶ್ಚಿಮ ರಾಷ್ಟ್ರಗಳಲ್ಲಿ ಖ್ಯಾತ ವಿಜ್ಞಾನ ಸಂವಹನಕಾರರಾಗಿ ಪ್ರಸಿದ್ಧಿಯಾದ ಕಾರ್ಲ್‌ ಸಗನ್‌, ಸ್ಟೀಫನ್‌ ಹಾಕಿಂಗ್‌, ಸ್ಟಿವನ್‌ ವೀನ್ಬರ್ಗ್‌, ಸ್ಟೀಫನ್‌ ಜೆ ಗೋಲ್ಡ್‌, ಕಾರ್ಲೋ ರೊವೆಲ್ಲಿ, ರಿಚರ್ಡ್‌ ಡಾಕಿನ್ಸ್‌, ನೀಲ್‌ ಡಿಗ್ರಾಸ್‌ ಟೈಸನ್‌ ಮತ್ತು ಜಿಮ್‌ ಅಲ್‌ ಖಲೀಲಿ ಮುಂತಾದ ವಿಜ್ಞಾನಿಗಳು, ಭಾರತದ ಯಶ್‌ ಪಾಲ್‌, ಪುಷ್ಪಾ ಭಾರ್ಗವ, ಜಯಂತ್‌ ನಾರ್ಲಿಕರ್‌ ಮುಂತಾದ ವಿಜ್ಞಾನಿಗಳು ಒಂದೇ ಪ್ರಧಾನ ಆಲೋಚನೆಯ ಬಗ್ಗೆ ಹೆಚ್ಚು ಒತ್ತು ನೀಡುತ್ತಲೇ ಬಂದಿದ್ದಾರೆ. ವಿಜ್ಞಾನದಲ್ಲಿ ಅನುಸರಿಸಲಾಗುವ ಸಮಯ ಪ್ರಮಾಣಿತ ಮತ್ತು ಹೆಚ್ಚು ಯಶಸ್ವಿಯಾಗಿರುವ ಮಾರ್ಗಗಳನ್ನು ಬಳಸಿಕೊಂಡು ವಿಮರ್ಶಾತ್ಮಕ ಆಲೋಚನೆಯನ್ನು ಬೆಳೆಸಿಕೊಳ್ಳುವ ತಂತ್ರವನ್ನು ಅಭಿವೃದ್ಧಿಪಡಿಸುವುದರ ಬಗ್ಗೆ ಈ ವಿಜ್ಞಾನಿಗಳು ಹೆಚ್ಚು ಒತ್ತು ನೀಡುತ್ತಾರೆ.

ರಾಜಕಾರಣಿಗಳು ಮತ್ತು ಆಡಳಿತ ನಿರ್ವಹಣೆಕಾರರು ತಮ್ಮ ನಂಬಿಕೆಗಳು ವೈಜ್ಞಾನಿಕವಾಗಿ ನಿರೂಪಿತವಾದ ಸತ್ಯಕ್ಕೆ ದೂರವಾದುದು ಎಂದು ತಿಳಿದ ನಂತರವೂ ಅಂಧಶ್ರದ್ಧೆಯಿಂದ ಹೊರಬರಲು ನಿರಾಕರಿಸುವುದನ್ನು ಹೇಗೆ ಅರ್ಥಮಾಡಿಕೊಳ್ಳುವುದು ? ವಸ್ತುನಿಷ್ಠ ವಾಸ್ತವಗಳತ್ತ ನೋಡಲು ನಿರಾಕರಿಸುವುದನ್ನು ಮತ್ತು ತದ್ವಿರುದ್ಧವಾದ ಸಾಕ್ಷ್ಯಾಧಾರಗಳ ಹೊರತಾಗಿಯೂ ತಮ್ಮ ನಂಬಿಕೆಗಳಿಂದ ವಿಮುಖರಾಗದಿರುವುದನ್ನು ಹೇಗೆ ಅರ್ಥೈಸುವುದು ? ಇತ್ತೀಚಿನ ದಿನಗಳಲ್ಲಿ ಕಡಿಮೆ ತಿಳುವಳಿಕೆ ಇರುವವರೇ ತಮ್ಮನ್ನು ತಾವು ತಜ್ಞರು ಎಂದು ಭಾವಿಸುವುದು ಕಂಡುಬರುತ್ತಿದೆ. ಇದಕ್ಕೆ ಕಾರಣ ಸ್ವಯಂ ಜಾಗೃತಿಯ ಕೊರತೆ ಮತ್ತು ಕಡಿಮೆ ಅರಿವಿನ ಸಾಮರ್ಥ್ಯ. ಇದಕ್ಕೆ ವ್ಯತಿರಿಕ್ತವಾಗಿ, ಕೆಲವು ವಿಚಾರಗಳ ಬಗ್ಗೆ ಹೆಚ್ಚು ತಿಳಿದುಕೊಂಡಷ್ಟೂ ಜನರು ಅನಿಶ್ಚಿತತೆಯಿಂದ ಕೂಡಿರುವುದೇ ಅಲ್ಲದೆ ಅನುಮಾನ ಪಿಶಾಚಿಗಳಂತಾಗುತ್ತಾರೆ.

75ನೆಯ ಸ್ವಾತಂತ್ರ್ಯೋತ್ಸವವನ್ನು ನಾವು ಕೇವಲ ಧ್ವಜಾರೋಹಣಕ್ಕೆ ಸೀಮಿತಗೊಳಿಸಬಾರದು. ನಮ್ಮ ಸಾಧನೆಗಳನ್ನು ವೈಭವೀಕರಿಸುತ್ತಾ, ಆತ್ಮರತಿಯಲ್ಲಿ ಮುಳುಗಿ ಭಾರತದ ಪ್ರಾಚೀನತೆಯನ್ನು ವೈಭವೀಕರಿಸುವುದರಲ್ಲಿ ತೊಡಗಿರಬಾರದು. ಬದಲಾಗಿ, ಭಾರತದ ಯಶಸ್ಸನ್ನು ವಿಮರ್ಶಾತ್ಮಕವಾಗಿ ಪರಾಮರ್ಶಿಸುವ ಮೂಲಕ , ವೈಫಲ್ಯಗಳನ್ನು ಗುರುತಿಸುವ ಮೂಲಕ ಉಜ್ವಲ ಭವಿಷ್ಯದತ್ತ ಸಾಗಬೇಕು. ವಿಜ್ಞಾನ ಮತ್ತು ವೈಜ್ಞಾನಿಕ ಅರಿವು ಈ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ.

(ಲೇಖಕ ಸಿ ಪಿ ರಾಜೇಂದ್ರನ್‌ ಬೆಂಗಳೂರಿನ ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಅಡ್ವಾನ್ಸ್‌ಡ್‌ ಸ್ಟಟೀಸ್‌ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ).