ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ದೇಸಿ ಸೊಗಡಿನ ವಿಶಿಷ್ಟ ಸಿನಿಮಾ ಕಾಂತಾರ

ಸುಮಾ ವೀಣಾ

ಸಿನಿಮಾ ಪರದೆ ಮೇಲೆ ‘ದಂತಕಥೆ’ ಎನ್ನುವ ಪದ ಬಂದರೂ  ಸಿನಿಮಾ ವೀಕ್ಷಿಸುತ್ತಾ ಹೋದಂತೆ ಇವರೆಲ್ಲಾ ನಮ್ಮ ನಡುವೆ ಇದ್ದವರೆ, ಇನ್ನೂ ಇರಬಹುದು, ಇದ್ದರೆ ಈಗ ಹೇಗೆ ಇರಬಹುದು ಅನ್ನುವ ಯೋಚನೆಯನ್ನು ಪ್ರೇಕ್ಷಕರಲ್ಲಿ ತರಿಸುತ್ತದೆ.   ಹೀಗೊಂದು ದೇಸೀ ಸಿನಿಮಾ ಆಗಬೇಕು ಅನ್ನುವ  ನಿರ್ಧಾರಕ್ಕೆ ಬಂದಾಗಿನಿಂದ ತೆರೆಯ ಮೇಲೆ ಸಿನಿಮಾ ಮೂಡಿಬರುವವರೆಗೂ  ರಿಷಬ್ ಶೆಟ್ಟಿಯವರು ಎಷ್ಟೆಲ್ಲಾ ಕಾರ್ಯಯೋಜನೆಗಳನ್ನು ಹಾಕಿಕೊಂಡಿರಬಹುದು ,ಅನುಭವ, ಅನಾನುಭವಗಳೇನಿದ್ದಿರಬಹುದು ಎಂಬ  ಅನೇಕ ಪ್ರಶ್ನೆಗಳು ಕಾಡಿದರೂ ಕಡೆಯದಾಗಿ ಉಳಿಯುವುದು ಅವರ ಅದ್ಭುತನಟನೆ. ಮಾರ್ದನಿಸುವ ಅದೇ ಧ್ವನಿ..

  ‘ವರಾಹ ರೂಪಮ್ ದೈವ ವರಿಷ್ಟಂ’ಎನ್ನುವ ಧ್ವನಿ ಅದೆಷ್ಟು ಇಂಪಾಗಿ ಮೂಡಿಬಂದಿದೆ ‘ಕಾಂತಾರ ‘ಸಿನಿಮಾದ ಈ ನಾದವನ್ನು ಮತ್ತೊಮ್ಮೆ ಮಗದೊಮ್ಮೆ  ಕೇಳಬೇಕು ಅನ್ನಿಸುತ್ತದೆ.  ಸ್ವತಃ ನಿರ್ದೇಶಕರೆ ಹೇಳಿರುವಂತೆ ಇದೊಂದು ದಂತಕಥೆ.  ನೆಮ್ಮದಿಯನ್ನರಸುವ  ಅರಸನೊಂದಿಗೆ ಆರಂಭವಾಗುವ  ಈ ಕಥಾನಕ  ಸಹಬಾಳ್ವೆ ಅಗತ್ಯ ಎನ್ನುವ  ಸಂದೇಶದೊಂದಿಗೆ ಮುಕ್ತಾಯವಾಗುತ್ತದೆ.

ಕರಾವಳಿಯ ಭೂತಾರಾಧನೆ,ಕೋಲಗಳ ಕುರಿತು ತಿಳಿದಿದ್ದವರಿಗೂ ತಿಳಿಯದವರಿಗೂ  ವಿಶೇಷ ಅನುಭವವನ್ನು ಕಟ್ಟಿಕೊಡುವ ಸಿನಿಮಾ ‘ಕಾಂತಾರ’. ಸಿನಿಮಾದ ಮೊದಲ  ಭಾಗದಲ್ಲಿ   ಮುಂದೇನು ಅನ್ನುವ ಕುತೂಹಲವನ್ನು ತರಿಸುತ್ತದೆ ಅದರೆ ಎರಡನೆ  ಭಾಗ ಪ್ರೇಕ್ಷಕನಿಗೆ ಯೋಚಿಸಲು  ಅವಕಾಶವೆ   ಇರುವುದಿಲ್ಲ. ನಡೆಯುತ್ತಿರುವ ಸನ್ನಿವೇಶದಲ್ಲಿ ತಲ್ಲೀನನಾಗಿಬಿಡುತ್ತಾನೆ.  ಬೇರೆಯದೇ ಲೋಕದ ಅನುಭೂತಿಯಲ್ಲಿ ತೊಡಗಿಬಿಡುತ್ತಾನೆ. ‘ಕಾಂತಾರ’  ಎಂದರೆ ‘ಅಡವಿ’, ‘ಕಾಡು’ ,’ವನ’ ಎಂಬ ಸಮಾನಾರ್ಥಕಗಳ ಜೊತೆಗೆ ‘ಕಠಿಣವಾದ ದಾರಿ’,’ದುರ್ಗಮ ಕಾಡು’ ಅನ್ನುವ   ಅರ್ಥವೂ ಬರುತ್ತದೆ .  ಅಂತೆಯೇ ಅರಣ್ಯದ  ಉಳಿವು, ಜನಾಂಗದ  ಮೂಲ ಸಂಸ್ಕೃತಿಯ  ಉಳಿವು, ದೈವ ಶಕ್ತಿ,ಮನುಷ್ಯನ   ಅಸ್ತಿತ್ವ, ಇನ್ನೂ ಕೊನೆಗಾಣದ  ಸಮಾಜಬೇಧ ಇತ್ಯಾದಿ ಪದಗಳು  ಹೇಳಲು ಸುಲಭ ಬಿಡಿಸಲು ಕಠಿಣತರವಾಗಿರುವ  ಪರಿಪ್ರೇಕ್ಷಗಳು. ಈ ಕುರಿತು ಸಿನಿಮಾ ಧ್ವನಿ ಎತ್ತಿರುವ  ಕಾರಣದಿಂದ ಕಾಂತಾರ ಎಂಬ ಶೀರ್ಷಿಕೆ ಸಮರ್ಥವಾಗಿದೆ ಎನ್ನಬಹುದು.

ಅಭಿವೃದ್ಧಿಯ ನೆಪದಲ್ಲಿ  ಸಾಕಷ್ಟು ಸಂಘರ್ಷಗಳು  ಕಾಡಿನ ಜನತೆಯೊಂದಿಗೆ, ಸರಕಾರದೊಂದಿಗೆ  ಆಗಿದ್ದು ಆಗುತ್ತಿರುವುದು  ಎಲ್ಲರಿಗೂ ತಿಳಿದವಿಚಾರ.  ‘ಜೋಡಿ ಹಕ್ಕಿ’ ಅನ್ನುವ ಸಿನಿಮಾ ಕೂಡ   ಇಂಥದ್ದೆ  ವಸ್ತುವನ್ನು ಹೊಂದಿದ್ದ ಸಿನಿಮಾ. ಅದಕ್ಕಿಂತ ಭಿನ್ನವಾಗಿ ಇಲ್ಲಿ   ಸಂಸ್ಕೃತಿಯ ಮೂಲ ಬೇರಿಗೇ ಇಳಿದು  ಮನೋಜ್ಞವಾಗಿ ಚಿತ್ರಿಸಲಾಗಿದೆ. ಸರಕಾರದ ಸ್ವತ್ತನ್ನು ಉಳಿಸಿಕೊಳ್ಳಲೇ ಬೇಕು ಎಂದು ಹೋರಾಡುವ ಅರಣ್ಯ ಇಲಾಖೆ, ನಮ್ಮ ನೆಲ ನಾವು ಬಿಡೆವು ಅನ್ನುವ  ಮೂಲ ನಿವಾಸಿಗಳ ಕೆಚ್ಚು  ಜೊತೆಗೆ ದೈವದ ಅಸ್ತಿತ್ವದ ಸುತ್ತ ಹೆಣೆದ ತ್ರಿಕೋನ  ಕಥಾ ಹಂದರವಿದು. ಮೂಲನೆಲೆಯನ್ನು ಕಳೆದುಕೊಂಡು  ಕಾಡನ್ನು ಬಿಟ್ಟು ನಾಡಿಗೆ ಬಂದರೂ ಅವರ ಜೀವನ ಹಸನಾಗದೆ ಹೊಸ ಪರಿಸ್ಥಿತಿಗೆ  ಒಗ್ಗಿಕೊಳ್ಳಲಾರದೆ ಪರಿತಪಿಸುವ  ಅರಣ್ಯವಾಸಿಗಳ ಪರ ದ್ವನಿ ಎತ್ತಿರುವ  ಸಶಕ್ತ ಸಿನಿಮಾ ಕಾಂತಾರ.

 ಸದಾ ನಗುವಿನ ಮುಖವಾಡ ತೊಟ್ಟ  ಗೋಮುಖವ್ಯಾಘ್ರ ಯಜಮಾನ್ಯ ಸಂಸ್ಕೃತಿಯ  ಮುಖವಾಣಿಯಾಗಿ ಬಂದಿರುವ ಧಣಿ ಪರಂಪರೆಯ  ಆಸ್ತಿಯನ್ನುಶತಾಯಗತಾಯ ಉಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತುಗಳನ್ನು ಮಾಡುತ್ತಾನೆ ವಿಶೇಷ ಚೇತನನಾದ ಮಗುವಿಗೆ ರಕ್ತಸಿಕ್ತ ಕತೆಯನ್ನು ಹೇಳುವುದರಲ್ಲಿಯೇ ಆತನ ವಿಕೃತತೆ ತಿಳಿಯುತ್ತದೆ. ಕಟ್ಟಕಡೆಯ ಜೀವಕ್ಕೂ ಜೀವಿಸಲು ಆಸ್ಪದ ಕೊಡದಂಥ ದುಷ್ಟ ಮನಃಸ್ಥಿತಿಯವನಾಗಿರುತ್ತಾನೆ. ಮುಗ್ಧ ಜನರನ್ನು  ವಂಚಿಸಿ  ತನ್ನುದ್ದೇಶಗಳನ್ನು ಈಡೇರಿಸಿಕೊಳ್ಳುವ,ಹಣದಾಹಿ, ಸೋಗಲಾಡಿತನದ  ಬಂಡವಾಳಶಾಹಿಗಳ  ಪ್ರತಿನಿಧಿಯಾಗಿ ಚಿತ್ರಿತವಾಗಿದ್ದಾನೆ. ಅವನೊಂದಿಗೆ ಭಾಗಿಯಾಗುವ ಪಾತ್ರವೂ ನಮ್ಮ ಭ್ರಷ್ಟ ವ್ಯವಸ್ಥೆಯ ಮುಖವಾಣಿಯಾಗಿಯೇ ಮೂಡಿಬಂದಿದೆ.

ಅರಣ್ಯ ಇಲಾಖೆಯ  ಅಧಿಕಾರಿಯ ಪಾತ್ರವೂ ನಮ್ಮ ಸಮಾಜದಲ್ಲಿರುವ  ಪ್ರಾಮಾಣಿಕ    ಅಧಿಕಾರಿಗಳನ್ನು ಪ್ರತಿನಿಧಿಸುವಂತಿದೆ. ಸರಕಾರಿ ಕೆಲಸಕ್ಕೆ  ಸೇರಿದ ಮೊದಲ ದಿನವೆ ಊರವರ ವಿರುದ್ಧ ನಿಲ್ಲಬೇಕಾದ  ನಾಯಕಿಯ ಪಾತ್ರ ಚಿತ್ರಣ,ತನ್ನ ಜನ ಮತ್ತು ಅನ್ನ ನೀಡುವ  ಇಲಾಖೆ ಎರಡನ್ನೂ ಸಂಭಾಳಿಸುವ ಇಕ್ಕಟ್ಟಿನ  ಆಕೆಯ ಪರಿಸ್ಥಿತಿ ಇಲ್ಲಿ ಚೆನ್ನಾಗಿ ಚಿತ್ರಿಸಲ್ಪಟ್ಟಿದೆ. ಅಪ್ಪಟ ದೇಸೀ ಮಾತಿನ ಸೊಗಡು, ಕೃತಕವಲ್ಲದ ಸಹಜವಾಗಿ  ಬಂದಿರುವ ಹಾಸ್ಯ,ಸ್ಥಳೀಯ ಜನಾಂಗವನ್ನೆ ಪ್ರತಿನಿಧಿಸುವ ವೇಷಭೂಷಣ, ಆಹಾರ ಪದ್ಧತಿ ಕಾಂತಾರಕ್ಕೆ ಇನ್ನಷ್ಟು ಸಹಜ ಮೆರುಗನ್ನು ನೀಡಿವೆ. ಇಲ್ಲಿ ಬಂದು ಹೋಗಿರುವ ಪಾತ್ರಗಳು ಸಹಜವಾಗಿ ತಮ್ಮ ಕಾರ್ಯ ನಿರ್ವಹಿಸಿವೆ. ಈ ಸನ್ನಿವೇಶವನ್ನು ಹೀಗೆ ಚಿತ್ರಿಸಬಹುದಾಗಿತ್ತು ,ಈ ಪಾತ್ರವನ್ನು ಬೇರೆ ನಟ   ಅಥವಾ ನಟಿ ನಟಿಸಿದರೆ ಚೆನ್ನಾಗಿತ್ತು ಅನ್ನುವ  ಯೋಚನೆ ಬರುವುದೇ ಇಲ್ಲ. ಸಾಕಷ್ಟು ಆ್ಯಕ್ಷನ್ ಸಿನಿಮಾಗಳು, ಹಾರರ್ ಸಿನಿಮಾಗಳು ಬಂದಿವೆ ಅವುಗಳ ನಡುವೆ  ಇನ್ಯಾವುದೂ ರಿಪ್ಲೇಸ್ ಮಾಡಲು ಅಸಾಧ್ಯ ಅನ್ನುವ ಮಟ್ಟಿಗೆ ಕಾಂತೀಯ ಗುಣಗಳನ್ನು ಹೊಂದಿರುವುದು ಕಾಂತಾರ ಸಿನಿಮಾ.  

      ಯಾರಿಗೆ ಹೆದರದೆ ಇದ್ದರೂ ತಾವು  ನಂಬಿದ ದೈವ ಅಥವಾ ಅಗೋಚರ ಶಕ್ತಿಗೆ  ಶರಣಾಗಲೇ ಬೇಕು . ನಂಬಿದ ದೈವ ಕೈ ಬಿಡದು ಅನ್ನುವ  ನಿರ್ಧಾರ ಇಲ್ಲಿ ಸ್ಫುಟವಾಗಿದೆ.  ಕೆಲವೊಮ್ಮೆ ಖಚಿತ ನಿಲುವಿಗೆ ಬರಲಾಗದೆ ವೈಜ್ಞಾನಿಕತೆ, ವೈಚಾರಿಕತೆಗೆ, ಮನಃಶಾಸ್ತ್ರಕ್ಕೆ ಅತೀತವಾಗಿ ಮನುಷ್ಯ ಆಲೋಚನೆ ಮಾಡುವನು,“ಇಂಥ ಕಾಣಿಕೆ ಕೊಡುವೆ ನೆರವೇರಿಸಿಬಿಡು” ಎಂದು ತನ್ನ ಮಾನಸಿಕ ಒತ್ತಡವನ್ನು ದೈವಗಳ ಹೆಗಲಿಗೆ ವರ್ಗಾಯಿಸಿ ತಾನು ನಿರಾಳವಾಗುವುದು ಸಾಮಾನ್ಯ  ಅದು ಇಲ್ಲಿಯೂ ಇದೆ.  ಈ ಪರಿಪ್ರೇಕ್ಷ ಮನುಷ್ಯ ಹಾಗು ನಂಬಿದ ದೈವದ  ನಡುವಿನ ಅನನ್ಯ ಸಂಬಂಧದ ಸಂಕೇತವೂ ಹೌದು!

  ಸಿನಿಮಾ ಪರದೆ ಮೇಲೆ ‘ದಂತಕಥೆ’ ಎನ್ನುವ ಪದ ಬಂದರೂ  ಸಿನಿಮಾ ವೀಕ್ಷಿಸುತ್ತಾ ಹೋದಂತೆ ಇವರೆಲ್ಲಾ ನಮ್ಮ ನಡುವೆ ಇದ್ದವರೆ, ಇನ್ನೂ ಇರಬಹುದು, ಇದ್ದರೆ ಈಗ ಹೇಗೆ ಇರಬಹುದು ಅನ್ನುವ ಯೋಚನೆಯನ್ನು ಪ್ರೇಕ್ಷಕರಲ್ಲಿ ತರಿಸುತ್ತದೆ. ಹೀಗೊಂದು ದೇಸೀ ಸಿನಿಮಾ ಆಗಬೇಕು ಅನ್ನುವ  ನಿರ್ಧಾರಕ್ಕೆ ಬಂದಾಗಿನಿಂದ ತೆರೆಯ ಮೇಲೆ ಸಿನಿಮಾ ಮೂಡಿಬರುವವರೆಗೂ ರಿಷಬ್ ಶೆಟ್ಟಿಯವರು ಎಷ್ಟೆಲ್ಲಾ  ಕಾರ್ಯಯೋಜನೆಗಳನ್ನು ಹಾಕಿಕೊಂಡಿರಬಹುದು ,ಅನುಭವ, ಅನಾನುಭವಗಳೇನಿದ್ದಿರಬಹುದು ಎಂಬ ಅನೇಕ ಪ್ರಶ್ನೆಗಳು ಕಾಡಿದರೂ ಕಡೆಯದಾಗಿ ಉಳಿಯುವುದು ಅವರ ಅದ್ಭುತನಟನೆ. ಮಾರ್ದನಿಸುವ ಅದೇ ಧ್ವನಿ..

 ಯಾವುದೇ ಕಲಾಕೃತಿ, ಸಿನಿಮಾ ,ನಾಟಕವೆ ಆಗಲಿ ತನಗೂ ಪ್ರೇಕ್ಷಕನಿಗೂ  ಒಂದು ಅಂತರವನ್ನು ಕಾಯ್ದುಕೊಳ್ಳಬೇಕು  ಅದನ್ನು  ಬಾರತೀಯ ಕಾವ್ಯ ಮೀಮಾಂಸೆಯಲ್ಲಿ ‘ಮಾನಸಿಕ ದೂರ’ ಎನ್ನುತ್ತೇವೆ.  ಇದನ್ನು ‘ಮನೋದೂರ’, ‘ಸದೂರ’ ,’ಅಲೌಕಿಕ ಅಂತರ’ ಇತ್ಯಾದಿ ಶಬ್ದಗಳಿಂದ ಕರೆಯುವುದಿದೆ.  ಈ ಮನೋದೂರವನ್ನು ಇಲ್ಲಿ ಪ್ರೇಕ್ಷಕನಾದವನು ಕಾಯ್ದುಕೊಳ್ಳಬೇಕು ಆದರೆ  ಅದನ್ನು ಮೀರಿ ಕಾಂತಾರ ಸಿನಿಮಾದ ಕ್ಲೈಮಾಕ್ಸ್ನಲ್ಲಿ  ಕುಳಿತಲ್ಲಿ  ಚಪ್ಪಲಿ ಕಳಚಿ ನಮಸ್ಕರಿಸುವ ಅನೇಕ ಪ್ರೇಕ್ಷಕರು  ಕಾಣ ಸಿಗುತ್ತಾರೆ. ಸಿನಿಮಾ     ಅತ್ಯಂತ  ಯಶಸ್ವಿ ಅನ್ನುವುದಕ್ಕೆ ಇದಕ್ಕಿಂತ ಬೇರೆ ಪ್ರತ್ಯಯ ಬೇಕಿಲ್ಲ.   “ಕನ್ನಡ ಭಾಷೆ ಸಿನಿಮಾ ಯಾರು ನೋಡ್ತಾರೆ? ಹಿಂದಿ ಇಲ್ಲವೆ ತಮಿಳೋ,ತೆಲುಗು ಸಿನಿಮಾ ನೋಡೋಣ!”  ಅನ್ನುವವರ   ಮುಂದೆ  ಚಿತ್ರೀಕರಣ,  ತಾಂತ್ರಿಕತೆ ಸಂಭಾಷಣೆ ಹೀಗೆ ಎಲ್ಲಾ ಆಯಾಮಗಳಲ್ಲೂ  ಸಶಕ್ತವಾಗಿ ಬಂದು  ನಿಂತಿರುವ ಸಿನಿಮಾ ಕಾಂತಾರ.  ಈ  ಕಾರಣಕ್ಕೆ ಚಿತ್ರತಂಡದ ಸಮಸ್ತರೂ ಅಭಿನಂದನಾರ್ಹರು. ಇದೇ   ಮಾದರಿಯ ದೇಸಿ  ಪರಂಪರೆಯ ದೃಶ್ಯಕಾವ್ಯಗಳು   ಮತ್ತೆ ಮತ್ತೆ ಜಾಗತಿಕ ಮಟ್ಟಲ್ಲಿ ಬರಲಿ ಕನ್ನಡ ಸಂಸ್ಕೃತಿ  ಅನುರಣಿಸಲಿ ಎನ್ನುವ ಸದಾಶಯ ನನ್ನದು.