- ಅಬ್ಬೆ - ಜನವರಿ 23, 2023
ಅಬ್ಬೆ (ಕಾದಂಬರಿ)
ಲೇಖಕರು – ಶಶಿಧರ ಹಾಲಾಡಿ
ಪ್ರಕಾಶಕರು – ಅಂಕಿತ ಪುಸ್ತಕ, ಬೆಂಗಳೂರು
ಪ್ರಥಮ ಮುದ್ರಣ – ನವೆಂಬರ್, ೨೦೨೨
ಪುಟಗಳು – ೨೬೪, ಬೆಲೆ – ೨೫೦
*****
ವಿಶ್ವವಾಣಿ ಪತ್ರಿಕೆಯಲ್ಲಿ ಕಾಣುವ ಶಶಿಧರ ಹಾಲಾಡಿಯವರ ಅಂಕಣ ಬರಹಗಳಲ್ಲಿ ಪ್ರಕೃತಿಯ ವಿವಿಧ ನೋಟಗಳ ಪಾಲು ದೊಡ್ಡದು. ಕಾಡಿನ ಮಧ್ಯದಲ್ಲಿರುವ ಹಳ್ಳಿಯಲ್ಲಿ ಜನಿಸಿ ಅವರು ಬಾಲ್ಯದಿಂದ ಕಂಡಿರುವ ಕಾನನದ ಬೆಡಗು ಬಯಲುಸೀಮೆಯ ಜನರಿಗೆ ಬೆರಗು ಮೂಡಿಸುತ್ತದೆ. ನಿಂತು ನೋಡಿ ಮೆಚ್ಚಿ ಮುಂದೆ ಹೋಗುವ ಪಯಣಿಗನಂತಲ್ಲ. ಬಹುಕಾಲ ದೈನಂದಿನ ಜೀವನದಲ್ಲಿ ಒಡನಾಡಿಗಳಾಗಿದ್ದ ಸಸ್ಯ ಸಂಕುಲ, ಮನೆಯ ಒಳಗೆ – ಹೊರಗೆ ಓಡಾಡುವ, ನೆಲದ ಮೇಲೆ ಹರಿದಾಡುವ ಸರೀಸೃಪಗಳು, ಚಿಕ್ಕ – ದೊಡ್ಡ ಪ್ರಾಣಿ ಪಕ್ಷಿ, ಕ್ರಿಮಿ ಕೀಟಗಳು, ಸರ್ಪಗಳ ವೈವಿಧ್ಯಗಳನ್ನು ಹಾಲಾಡಿಯವರು ಪರಿಚಯಿಸುವ ಪರಿ ಅನನ್ಯ. ತಟಕ್ಕನೆ ನೆನಪಾಗುವುದು ಬಿ.ಜಿ.ಎಲ್.ಸ್ವಾಮಿಯವರ ʻಹಸಿರು ಹೊನ್ನುʼ ಹಾಗೂ ಪೂರ್ಣ ಚಂದ್ರ ತೇಜಸ್ವಿಯವರ ಪ್ರಕೃತಿಯೊಡನೆ ಒಡನಾಟಗಳು.
ಕರಾವಳಿಯ ಸಮೃದ್ಧ ಪ್ರಕೃತಿಯೊಂದಿಗೆ ಬೆಳೆದ ನಾಯಕ ಉದ್ಯೋಗಕ್ಕಾಗಿ ಬಯಲು ಸೀಮೆಗೆ ಬಂದಾಗ ಸಿಗುವ ಅನುಭವವೇ ಹಾಲಾಡಿಯವರ ಎರಡನೇ ಕಾದಂಬರಿ, ಅಬ್ಬೆಯ ಪ್ರಮುಖ ವಿಷಯ. ಮೈತುಂಬಾ ರೋಮ ಹೊಂದಿರುವ ದೊಡ್ಡ ಗಾತ್ರದ ಜೇಡದ ಹೆಸರು ಅಬ್ಬೆ. ಕಲ್ಕರೆಗೆ ಒಂದು ಬ್ಯಾಂಕಿನ ಉದ್ಯೋಗಿಯಾಗಿ ಬರುವ ಉತ್ಸಾಹಿ ಯುವಕ ಶಿವರಾಮನ ಸ್ವಗತದಲ್ಲಿ ಸಾಗುವ ಈ ಕಥಾನಕ ಆತ್ಮೀಯ ಸರಳ ಶೈಲಿಯಿಂದ ಓದುಗರನ್ನು ಜೊತೆಯಲ್ಲಿ ಕರೆದೊಯ್ಯುತ್ತದೆ.
ಅರಸಿಕೆರೆಯಿಂದ ಕಲ್ಕರೆಗೆ ಮೊದಲ ಬಾರಿ ಬಸ್ಸಿನಲ್ಲಿ ಬರುವಾಗಲೇ ʻಗರುಡನಗಿರಿ ರಕ್ಷಿತಾರಣ್ಯʼ ಎಂಬ ಫಲಕ ಕಾಣಿಸುತ್ತದಾದರೂ ಅಲ್ಲಿ ಅರಣ್ಯದ ಸುಳಿವಿಲ್ಲದಿರುವುದು, ಹಳ್ಳಿಯಲ್ಲಿ ಮೊದಲ ದಿನವೇ ಕಾಣುವ ಚಿಪ್ಪು ಹಂದಿ ಈ ಕಥಾನಕದಲ್ಲಿ ಹಲವೊಮ್ಮೆ ಮುನ್ನೆಲೆಗೆ ಬರುತ್ತದೆ.
ಅರಸಿಕೆರೆಯ ಪ್ರದೇಶದಲ್ಲಿ ಜನಜನಿತವಾಗಿರುವ `ಅಬ್ಬೆ ಕಚ್ಚಿದರೆ ಹೆಬ್ಬಾಗಿಲ ತನಕ ಬರುವಷ್ಟು ಸಮಯವಿಲ್ಲ’ ಎನ್ನುವ ಮಾತು ಕೇಳಿ ಶಿವರಾಮ ಅದರ ಬಗ್ಗೆ ಮತ್ತಷ್ಟು ತಿಳಿಯಲು ಪ್ರಯತ್ನಿಸಿದಷ್ಟೂ ನಿಗೂಢವಾಗುತ್ತದೆ. ಅಬ್ಬೆ ಜೇಡ ಕಚ್ಚಿ ಸತ್ತರು ಎನ್ನುವ ಮಾತು ಕೇಳಿಬಂದರೂ ಅದು ಕಚ್ಚಿರುವುದನ್ನು ವಾಸ್ತವವಾಗಿ ನೋಡಿದವರು ಯಾರೂ ಅವನಿಗೆ ಸಿಗುವುದಿಲ್ಲ. ಕಾಲೇಜಿನ ಪ್ರಿನ್ಸಿಪಾಲ್ ಡಾ. ಕಲ್ಲೂರಾಯರು, ಭಾರತದಲ್ಲಂತೂ ಅಂತಹ ಅಪಾಯಕಾರಿ ಜೇಡ ಇಲ್ಲವೆಂದೇ ಹೇಳುತ್ತಾರೆ. ಇವನ ಅತೀವ ಆಸಕ್ತಿಯನ್ನು ಕಂಡು, “ನಿಮಗೇಕೆ ಅಬ್ಬೆಯ ಉಸಾಬರಿ? ಅದು ವಿಷಕಾರಿಯೋ ಅಲ್ಲವೋ, ನಿಮಗೇಕೆ? ಇಲ್ಲೇ ಅಂದರೆ ಬ್ಯಾಂಕಿನಲ್ಲೇ ಇರುವ ವಿಷಪ್ರಾಣಿಯ ಕುರಿತು ಎಚ್ಚರವಹಿಸಿ. ಅದನ್ನು ಕಣ್ಣುಬಿಟ್ಟು ನೋಡಿ” ಎಂದು ಸಹೋದ್ಯೋಗಿ ರಾಜೇಶ ಎಚ್ಚರಿಸುತ್ತಾನೆ. ಹೀಗೆ, ಈ ಅಬ್ಬೆ ಜೇಡ ಕಾದಂಬರಿಯಲ್ಲಿ ಹಲವು ಬಾರಿ ವಾಸ್ತವ ಹಾಗೂ ಸಾಂಕೇತಿಕವಾಗಿ ಕಂಡು ಓದುಗರಲ್ಲಿಯೂ ಕುತೂಹಲ ಮುಂದುವರೆಯುವಂತೆ ಮಾಡುವ ಕಥನ ಕೌಶಲ ಮೆಚ್ಚುವಂತಹುದು.
ಕಲ್ಕರೆಯ ಬ್ಯಾಂಕಿಗೆ ಹೊಸದಾಗಿ ನೇಮಕವಾಗಿ ಬರುವ ಶಿವರಾಂಗೆ ಮೊದಲ ಆರು ತಿಂಗಳ ಪ್ರೊಬೇಷನರಿ ಅವಧಿ ಪರೀಕ್ಷಾ ಕಾಲ. ಆ ಸಮಯದಲ್ಲಿ ಬ್ಯಾಂಕ್ ಮ್ಯಾನೇಜರ್ ಪ್ರತಿ ತಿಂಗಳು ಕಳಿಸುವ ವರದಿಗಳು ಕೆಲಸ ಖಾಯಂ ಆಗುವುದರಲ್ಲಿ ನಿರ್ಣಾಯಕವಾಗಿರುತ್ತದೆ.
ಮೊದಲ ದಿನದಿಂದಲೇ ಇವನ ಬಗ್ಗೆ ಅಸಹನೆ ತೋರಿಸುವ ಮ್ಯಾನೇಜರ್ ಕೊಡುವ ಕಿರುಕುಳ ಸಹಿಸಿಕೊಳ್ಳಲು ಸಹೋದ್ಯೋಗಿಗಳು ನೆರವಾಗುತ್ತಾರೆ. ಅವರೆಲ್ಲರೂ ಬ್ಯಾಂಕ್ ಕೆಲಸದ ತರುವಾಯ ನಡೆಸುವ ಪಾನ ಗೋಷ್ಠಿಗಳಲ್ಲಿ ಸೇರದ ಶಿವರಾಂ ಅಲ್ಲಿನ ಯುವಕರೊಂದಿಗೆ ಕ್ರಿಕೆಟ್ ಆಡುವುದು, ಅವರೊಂದಿಗೆ ಬೆಟ್ಟಕ್ಕೆ ಪ್ರವಾಸ ಹೋಗುವುದು ಬ್ಯಾಂಕಿನಲ್ಲೇ ಇರುವ ವಿಷಪ್ರಾಣಿ ಅಂದರೆ, ಅಲ್ಲಿನ ಮ್ಯಾನೇಜರ್ ಗೆ ಸಹ್ಯವಾಗುವುದಿಲ್ಲ. ಇದು, ಮಹಿಳಾ ಗ್ರಾಹಕಿಯೊಬ್ಬರು ಇವನ ಮೇಲೆ ಸುಳ್ಳು ದೂರು ಕೊಡುವವರೆಗೂ ಮುಂದುವರೆಯುತ್ತದೆ. ಕೊನೆಗೆ ಇವನನ್ನು ದೂರದ ಅಂಡಮಾನ್ ಶಾಖೆಗೆ ವರ್ಗಮಾಡಿಸುವ ಮ್ಯಾನೇಜರ್ ತಾನೂ ಒಂದು ಹಗರಣದಲ್ಲಿ ಸಿಕ್ಕಿಹಾಕಿಕೊಂಡು ಕಲಕತ್ತೆಗೆ ವರ್ಗವಾಗಿ ಹೋಗಬೇಕಾಗುತ್ತದೆ.
ಇದು ಶಿವರಾಮನ ಬ್ಯಾಂಕಿನ ಜೀವನವಾದರೆ, ಅವನು ಕಲ್ಕರೆಯಲ್ಲಿ ಪಡೆಯುವ ಜೀವನಾನುಭವ ಸಮೀಪದ ಗರುಡನಗಿರಿ ಬೆಟ್ಟ, ಹಿರೇಕಲ್ಲು ಗುಡ್ಡಗಳ ಸುತ್ತಲೂ ಹರಡಿರುತ್ತದೆ. ಇದರಲ್ಲಿ, ಮೇಲುನೋಟಕ್ಕೆ ಮುಗ್ಧರಂತೆ ಕಾಣುವ ಕಲ್ಕೆರೆಯ ಜನರು ನಡೆಸುವ ನ್ಯಾಯಬಾಹಿರ ಕೃತ್ಯಗಳೊಂದಿಗೆ ನಿಗೂಢ ಅಬ್ಬೆ ಜೇಡವೂ ಸೇರಿದೆ. ಅವನು ಅಲ್ಲಿಗೆ ಹೋದ ಮೊದಲ ದಿನವೇ ದಾರದಿಂದ ಕಟ್ಟಿದ್ದ ಚಿಪ್ಪು ಹಂದಿಯನ್ನು ಹಿಡಿದಿರುವ ಹಳ್ಳಿಗನೊಬ್ಬ ಕಾಣುತ್ತಾನೆ. ಅದರ ಮಾರಾಟದ ಜಾಲ, ನಿಬಿಡ ಕಾನನವನ್ನು ಕಡಿದು ಶ್ರೀಮಂತರಾದವರು, ಅಸಹಜ ಸಾವನ್ನು ತನಿಖೆಯಾಗದೆ, ʻಅಬ್ಬೆ ಜೇಡದ ಕಡಿತʼ ಎಂದು ನಂಬಿಸುವುದು – ಹೀಗೆ ಹಲವು ಸಂಗತಿಗಳು ಶಿವರಾಮನಿಗೆ ಪೂರ್ಣ ಸತ್ಯ ತಿಳಿಯಲಾಗದೆ ಅಚ್ಚರಿಯಾಗಿಯೇ ಉಳಿಯುತ್ತವೆ.
ಮೂಲತಃ ಕರಾವಳಿಯ ಪ್ರದೇಶದಿಂದ ಬಂದ, ಸಹಜವಾಗಿ ಪರಿಸರ ಪ್ರೇಮಿಯಾದ ಶಿವರಾಮನಿಗೆ ಸಂಶೋಧಕ ಪ್ರವೃತ್ತಿಯ ಕಾಲೇಜಿನ ಪ್ರಿನ್ಸಿಪಾಲ್ ಡಾ. ಕಲ್ಲೂರಾಯರ ಸಹಾಯ ದೊರೆತು ಅಲ್ಲಿನ ಮತ್ತಷ್ಟು ಐತಿಹಾಸಿಕ ವಿಚಾರಗಳು ಬೆಳಕಿಗೆ ಬರುತ್ತವೆ. ಅವರ ಪ್ರೇರಣೆಯಿಂದ ಇವನು ಅಲ್ಲಿ ತೆಗೆದ ಫೋಟೋ ಪತ್ರಿಕೆಯಲ್ಲಿ ಪ್ರಕಟವಾಗಿ ಖ್ಯಾತಿ ತಂದು ಕೊಡುತ್ತದೆ. ಅದು, ಅವನತಿಯನ್ನು ಹೊಂದಿದ್ದ ಕಾಡನ್ನು ಪುನರುಜ್ಜೀವಗೊಳಿಸಲು ಅರಣ್ಯಾಧಿಕಾರಿಗಳು ಕ್ರಮ ತೆಗೆದುಕೊಳ್ಳುವಂತೆ ಮಾಡಿರುವುದು ಶಿವರಾಂ ಅಲ್ಲಿಂದ ಹೊರಡುವಾಗ ತಿಳಿದು ಅವನೊಂದಿಗೆ ಓದುಗರಿಗೂ ಧನ್ಯಭಾವ ಮೂಡಿಸುವಲ್ಲಿ ಲೇಖಕರು ಯಶಸ್ವಿಯಾಗುತ್ತಾರೆ.
ಒಟ್ಟಿನಲ್ಲಿ ಕೇವಲ ನಾಲ್ಕು ತಿಂಗಳು ಕಲ್ಕರೆಯಲ್ಲಿದ್ದ ಶಿವರಾಂ ಬ್ಯಾಂಕ್ ಕೆಲಸದಲ್ಲಿ ಅವನ ಮ್ಯಾನೇಜರ್ ನಿಂದ ಪಡುವ ಕಿರುಕುಳದೊಂದಿಗೆ ಅಲ್ಲಿ ದೊರೆತ ಅಪರೂಪದ ಅನುಭವಗಳೊಂದಿಗೆ ದೂರದ ಅಂಡಮಾನ್ಗೆ ಹೋಗುವಾಗ, ಅಲ್ಲಿ ದೊರೆಯುವ ಅನುಭವವನ್ನು ಎದುರು ನೋಡುವುದು ಬಹುಶಃ ಶಶಿಧರ ಹಾಲಾಡಿಯವರ ಮನಸ್ಸಿನಲ್ಲಿ ʻಅಬ್ಬೆಯ ಉತ್ತರಭಾಗʼ ಮೂಡುತ್ತಿದೆ ಎನಿಸುತ್ತದೆ. ಅವರ ಅನುಭವ ಮೂಸೆಯಲ್ಲಿರುವ ಇನ್ನಷ್ಟು ಕಥಾನಕಗಳು ಶೀಘ್ರದಲ್ಲೇ ಹೊರಬರುವುದರಲ್ಲಿ ಸಂಶಯವಿಲ್ಲ.
ಹೆಚ್ಚಿನ ಬರಹಗಳಿಗಾಗಿ
ಹಾಲಾಡಿಯಲ್ಲಿ ಹಾರುವ ಓತಿ
ದೂರ ಸಮೀಪಗಳ ನಡುವೆ…
ಬದುಕಿನ ನೆಲೆ ಶೋಧಿಸುವ ʼಕಡಿದ ದಾರಿʼ