- ರೇಡಿಯೋ - ಏಪ್ರಿಲ್ 16, 2023
“ಕರಿಯತ್ತ ಕಾಳಿಂಗ ಬೀಳಿಯತ್ತ ಮಾನಿಂಗ” ಎಂದು ಕೃಷಿ ರಂಗ ಕಾರ್ಯಕ್ರಮ ಶುರುವಾಗುವ ಹೊತ್ತಿಗೆ ಅಮ್ಮ ಎಲ್ಲ ಕೆಲಸ ಮುಗಿಸಿ ಕಟ್ಟೆಗೆ ಬಂದು ಕೂತಿರುತ್ತಿದ್ದಳು. ಅದು ಅವಳ ಇಷ್ಟದ ಕಾರ್ಯಕ್ರಮ. ಆ ಕಾರ್ಯಕ್ರಮದ ಕೊನೆಯಲ್ಲಿ ಪ್ರಸಾರವಾಗುತ್ತಿದ್ದ ಡೊಳ್ಳಿನ ಪದಗಳು, ಲಾವಣಿ ಪದಗಳು, ಗೀ ಗೀ ಪದಗಳು, ಕರಡಿ ಮಜಲು, ಸಣ್ಣ ನಾಟಕದ ಪ್ರಸಂಗಗಗಳು ಅಮ್ಮನಿಗೆ ಅಚ್ಚು ಮೆಚ್ಚು. ಆ ಸಮಯದಲ್ಲಿ ಅವಳು ಬೇರೆ ಯಾವುದೇ ಬಾನುಲಿಯನ್ನು ಹಚ್ಚಲು ಬಿಡುತ್ತಿರಲಿಲ್ಲ. ಮುಂಜಾನೆಯಿಂದ ದುಡಿದು ಬಸವಳಿದ ಅವಳ ದೇಹ ಮತ್ತು ಮನಸಿಗೆ ಅದೊಂದು ಕಾರ್ಯಕ್ರಮ ಅವಳಿಗೆ ಬಹಳ ಮುದ ಕೊಡುತ್ತಿತ್ತು. ಆ ಕಾರ್ಯಕ್ರಮ ಮುಗಿದ ನಂತರವೇ ನಾವು ಊಟಕ್ಕೆ ಕೂರುತ್ತಿದ್ದೆವು.
ನಾನು ಆಗ ಐದನೇ ತರಗತಿಯಲ್ಲಿದ್ದೆ. ಆಗ ನಮ್ಮ ಮನೆಗೆ ಮೊದಲ ರೇಡಿಯೋ ಬಂದಿತ್ತು. ಅಪರ್ಣಾ ಕಂಪನಿಯದು. ನಮ್ಮ ಜೀವನದಲ್ಲಿ ಕಾಲಿಟ್ಟ ಮೊದಲ ಮನರಂಜನಾ ವಸ್ತು ಅದು. ಬೇಸಿಗೆಯ ದಿನಗಳಲ್ಲಿ ಮನೆಯ ಮುಂದಿನ ಬಯಲು ಅಂಗಳದಲ್ಲಿ ಒಂದು ತಟ್ಟು ಹಾಸಿಕೊಂಡು ಮಲಗಿ ತಾರೆಗಳೇ ತುಂಬಿಹೋದ ಆಕಾಶವನ್ನು ನೋಡುತ್ತಾ ರೇಡಿಯೋ ಕೇಳುತ್ತಿದ್ದೆವು. ಮೊದ ಮೊದಲು ಬಾನುಲಿ ಕೇಂದ್ರ ಪ್ರಸಾರ ನಿಲ್ಲಿಸುವವರೆಗೂ ಕೇಳುತ್ತಿದ್ದೆವು. ಕೊನೆಯ ಪ್ರಸಾರವಾಗಿ ಸಿನಿಮಾ ಹಾಡುಗಳನ್ನು ಹಾಕುತ್ತಿದ್ದರು. ನಮ್ಮ ಕಡೆ ಧಾರವಾಡ ಬಾನುಲಿಯೊಂದೇ ಸರಿಯಾಗಿ ಬರುತ್ತಿತ್ತು. ಅದರ ಎಲ್ಲ ಕಾರ್ಯಕ್ರಮಗಳು ನಮಗೆ ಬಾಯಿಪಾಠವಾಗಿದ್ದವು. ಅಮ್ಮನಿಗಂತೂ ಗಡಿಯಾರ ನೋಡದೆ “ಈಗ ನಾಟಕ ಅಯ್ತಿ ರೇಡಿಯೋ ಹಚ್ಚ” ಎನ್ನುವಷ್ಟರ ಮಟ್ಟಿಗೆ ರೇಡಿಯೋ ಹತ್ತಿರವಾಗಿತ್ತು.
ಮುಂಜಾನೆ ಬೇಗ ಎದ್ದು ನಮ್ಮ ಅಮ್ಮ ಮಾಡುತ್ತಿದ್ದ ಮೊದಲ ಕೆಲಸವೆಂದರೆ ರೇಡಿಯೋ ಹಚ್ಚುವುದು. ಬಾನುಲಿಯ ಕಾರ್ಯಕ್ರಮಗಳು ಶುರುವಾಗಿರುತ್ತಿರಲಿಲ್ಲ, ಆದರೂ ಅದನ್ನು ಹಚ್ಚಿಯೇ ಇಡುತ್ತಿದ್ದಳು. ಅವಳ ದಿನ ಶುರುವಾಗುತ್ತಿದ್ದದ್ದೇ ಅದರಿಂದ. ಮುಂಜಾನೆಯ ವೇಳೆ ಆರೋಗ್ಯ ಸಂಬಂಧಿತ ಸಲಹೆಗಳು ಮತ್ತು ಜಾನಪದ ಪದಗಳನ್ನು ಪ್ರಸಾರ ಮಾಡುತಿದ್ದರು. ಅಮ್ಮನಿಗೆ ಜಾನಪದ ಎಷ್ಟು ನೆನಪಿದ್ದವೋ ಗೊತ್ತಿಲ್ಲ; ಆದರೆ ಆರೋಗ್ಯ ಸಲಹೆಗಳು ಮಾತ್ರ ಅಚ್ಚಳಿಯದಂತೆ ನೆನಪಿರುತಿದ್ದವು. ಯಾರಿಗೆ ಏನೇ ಆದರೂ ಸರಿ ಅವಳ ಬಳಿ ಮನೆ ಮದ್ದು ಸಿದ್ಧವಿರುತ್ತಿತ್ತು. ನಿಂಗ್ ಹೆಂಗ್ ಗೊತ್ತ್ ಅಂತ ಕೇಳಿದ್ರ “ಮೊನ್ನಿ ರೇಡಿಯೋದಾಗ್ ಹೇಳಿದಾರ್ ತಗೋ” ಎನ್ನುತ್ತಿದ್ದಳು. ಅವ್ವನ ದಿನ ಜಾನಪದ ಮತ್ತು ಆರೋಗ್ಯ ಸಲಹೆಗಳಿಂದ ಶುರುವಾದರೆ ನಮ್ಮ ದಿನ ಸಂಸ್ಕೃತ ವಾರ್ತೆಯಿಂದ ಶುರುವಾಗುತ್ತಿತ್ತು. ನಮಗೆ ಅಷ್ಟೇನೂ ತಿಳಿಯದಿದ್ದರೂ ಸಂಸ್ಕೃತ ವಾರ್ತೆ ಕೇಳಲು ಮಜಾ ಬರುತ್ತಿತ್ತು. ಮೊದಲು ಸಂಸ್ಕೃತ ಪಾಠ ಶಾಲೆಯೂ ಪ್ರಸಾರವಾಗುತ್ತಿತ್ತು, ಆಮೇಲೆ ನಿಂತುಹೋಯಿತು. ‘ಇಯಂ ಆಕಾಶವಾಣಿ ಸಂಪ್ರತಿ ವಾರ್ತಾಃ ಶ್ರೂಯಂತಾಮ್… ಪ್ರವಾಚಕಃ ಬಲದೇವಾನಂದ ಸಾಗರಃ…’ ಎಂಬುದು ಬಾಯಿಪಾಠ ಆಗಿಹೋಗಿತ್ತು.
ಆಮೇಲೆ ಬರುವ ಕಾರ್ಯಕ್ರಮಗಳು ಅಮ್ಮನಿಗೆ ಬೇಕಾಗಿರಲಿಲ್ಲ. ಆಗ ನಾವು ಶಾಲೆಗೆ ಹೋಗುವವರೆಗೂ ಅದನ್ನು ಹಿಡಿದು ಕುಳಿತಿರುತ್ತಿದ್ದೆವು. ಮುಂಜಾನೆ ಏಳು ಗಂಟೆಗೆ ಕನ್ನಡ ವಾರ್ತೆಗಳು ಮುಗಿದ ನಂತರ ಎಂಟು ಗಂಟೆಗೆ ಇಂಗ್ಲೀಷ ವಾರ್ತೆ ಶುರುವಾಗುವ ಮುಂಚೆ ಪ್ರಸಾರವಾಗುತ್ತಿದ್ದ ಕಾರ್ಯಕ್ರಮಗಳು ನಮಗೆ ಅಚ್ಚು ಮೆಚ್ಚು. ಬಹಳಷ್ಟು ಸಲ ವಿಜ್ಞಾನದ ಸರಣಿಗಳು ಪ್ರಸಾರವಾಗುತ್ತಿದ್ದವು. ಸುಮಂಗಲ ಮುಮ್ಮಿಗಟ್ಟಿ ಅಂತ ತುಂಬಾ ಚೆನ್ನಾಗಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಬಾಹ್ಯಾಕಾಶ, ಅರಣ್ಯ, ಸಂರಕ್ಷಣೆ, ಹವಾಮಾನ ವೈಪರೀತ್ಯ ಇತ್ಯಾದಿ ವಿಷಯಗಳ ಮೇಲೆ ಅದ್ಭುತ ಕಾರ್ಯಕ್ರಮಗಳು ಬರುತ್ತಿದ್ದವು. ಈ ಎಲ್ಲ ಕಾರ್ಯಕ್ರಮಗಳ ಕೊನೆಯಲ್ಲಿ ಕೇಳುಗರಿಗೆ ಪ್ರಶ್ನೆಗಳಿರುತ್ತಿದ್ದವು. ಸರಿಯಾಗಿ ಉತ್ತರ ಬರೆದು ಕಳಿಸಿದವರಿಗೆ ಬಹುಮಾನವಿರುತ್ತಿತ್ತು. ರೇಡಿಯೋದಲ್ಲಿ ನಮ್ಮ ಹೆಸರು ಓದುವುದನ್ನು ಕೇಳುವುದೇ ಒಂದು ರೋಮಾಂಚನ. ಒಂದು ಸಲ ನನಗೆ ಆ ತರಹದ ಬಹುಮಾನ ಬಂದಿತ್ತು. ಈಗಲೂ ಆ ಬಹುಮಾನ ನೋಡಿದಾಗಲೆಲ್ಲ ಹಳೆಯ ನೆನಪುಗಳೆಲ್ಲ ತೇಲಿ ಬಂದು ಬೆಚ್ಚಗಿನ ಬಿಗಿ ಅಪ್ಪುಗೆ ಸಿಕ್ಕಂತಾಗುತ್ತದೆ.
ಮೊದ ಮೊದಲು ಇಂಗ್ಲಿಷ್ ವಾರ್ತೆ ಶುರುವಾಗುತ್ತಿದ್ದಂತೆ ರೇಡಿಯೋ ಬಂದ್ ಮಾಡಿ ಬಿಡುತ್ತಿದ್ದೆವು. ಅಮ್ಮ “ಸುಮ್ಮ್ ಯಾಕ್ ಶೆಲ್ ಸುಡತೇರಿ ಬಂದ್ ಮಾಡ್ರಿ ಇನ್ ಸಾಕ್” ಎನ್ನುತಿದ್ದಳು. ನಂತರ ನಾನು ಹೈಸ್ಕೂಲಿಗೆ ಬಂದಾಗ ಇಂಗ್ಲಿಷ್ ವಾರ್ತೆ ತಪ್ಪದೆ ಕೇಳತೊಡಗಿದೆ, ಇಂಗ್ಲಿಷ್ ಕಲಿಯಲು. ನಾನಿರುವ ಹಳ್ಳಿಗೆ ಯಾವ ಇಂಗ್ಲಿಷ್ ಪೇಪರ್ ಕೂಡ ಬರುತ್ತಿರಲಿಲ್ಲ. ಇಂಗ್ಲಿಷ್ ಕಲಿಯಲು ಅದೊಂದು ಹೇಳಿ ಮಾಡಿಸಿದ ಕಾರ್ಯಕ್ರಮವಾಗಿತ್ತು. ಅಮ್ಮನಿಗೆ ಅದು ಕಿರಿಕಿರಿ ಅನಿಸುತಿದ್ದರಿಂದ ನಾನು ರೇಡಿಯೋ ತೆಗೆದುಕೊಂಡು ಹೊರಗಡೆ ಹೋಗುತ್ತಿದ್ದೆ. ಅದಾದ ಮೇಲೆ ರೆಡಿಯಾಗಿ ಶಾಲೆಗೆ ಹೋಗುತ್ತಿದ್ದೆ.
ದಿನದ ಉಳಿದ ಸಮಯದಲ್ಲಿ ರೇಡಿಯೋ ಅಮ್ಮನ ಹತ್ತಿರವೇ ಇರುತ್ತಿತ್ತು. ಅವಳಿಗೆ ವಿಶೇಷ ಕಾರ್ಯಕ್ರಮಗಳ ಪ್ರಸಾರದ ಬಗ್ಗೆ ಮೊದಲೇ ಗೊತ್ತಿರುತ್ತಿತ್ತು. ಸಂಗ್ಯಾ ಬಾಳ್ಯಾ ನಾಟಕ, ಶ್ರೀ ಕೃಷ್ಣ ಪರಮಾತ್ಮ ನಾಟಕ ಹೀಗೆ ಯಾವುದಾದರೂ ವಿಶೇಷ ಪ್ರಸಾರವಿದ್ದರೆ ಅವಳು ರೇಡಿಯೋವನ್ನು ತನ್ನ ಜೊತೆ ಹೊಲಕ್ಕೆ ಒಯ್ಯುತ್ತಿದ್ದಳು. ಕೆಲಸ ಮಾಡುತ್ತಾ ನಾಟಕ ಕೇಳುವುದು ಅವಳ ಇಷ್ಟದ ಸಂಗತಿಯಾಗಿತ್ತು. ಕೆಲವೊಮ್ಮೆ ನಾಟಕದ ಜೊತೆಗೆ ಇತರ ಕಾರ್ಯಕ್ರಮಗಳನ್ನು ಅವಳು ಆಕಸ್ಮಿಕವಾಗಿ ಕೇಳುತ್ತಿದ್ದಳು. ಆಗೆಲ್ಲ ಅವಳು ನಾವು ಶಾಲೆಯಿಂದ ಬಂದ ಮೇಲೆ ನಮಗೆ ಹೇಳುತ್ತಿದ್ದಳು. ನಾವು ಅದೇ ಕಾರ್ಯಕ್ರಮದ ಮರು ಪ್ರಸಾರಕ್ಕೆ ಬಕ ಪಕ್ಷಿಯಂತೆ ಕಾಯುತ್ತಿದ್ದೆವು.
ರೇಡಿಯೋ ಬಂದ ಕೆಲ ತಿಂಗಳುಗಳ ನಂತರ ನಮಗೆ ಅದರಲ್ಲಿ ಇತರ ಬಾನುಲಿ ಕೇಂದ್ರಗಳನ್ನು ಹುಡುಕಿ ಹಚ್ಚುವುದು ಹೇಗೆ ಅಂತ ಗೊತ್ತಾಯಿತು. ಆಗಾಗ ಬೆಂಗಳೂರು, ಭದ್ರಾವತಿ ಮತ್ತು ಇತರೆ ಬಾನುಲಿ ಕೇಂದ್ರಗಳ ಕಾರ್ಯಕ್ರಮ ಕೇಳುತ್ತಿದ್ದೆವು. ಅದೊಂಥರ ಕದ್ದು ಆಲಿಸುವ ಅನುಭವ ಖುಷಿ ಕೊಡುತ್ತಿತ್ತು. ಧಾರವಾಡ ಕೇಂದ್ರಕ್ಕೆ ಮೋಸ ಮಾಡುತ್ತಿದ್ದೇವೆ ಎಂಬ ಸಣ್ಣ ಅಳುಕು ಇರುತ್ತಿತ್ತು. ನಮಗೆ ಹೆಚ್ಚು ಖುಷಿ ಕೊಡುತ್ತಿದ್ದದ್ದು ಆಗಿನ ಕಾಲದ ಸ್ಪಾಟಿಫೈ ಎನ್ನಬಹುದಾದ ಎಫ್ ಎಂ. ರೇಡಿಯೋದ ಆಂಟೆನಾಗೆ ಉದ್ದದ ತಂತಿ ಜೋಡಿಸಿ ಏನೇನೋ ಸರ್ಕಸ್ ಮಾಡಿ ಬಾನುಲಿ ಕೇಂದ್ರ ೧೦೩ ರ ಫ್ರೀಕ್ವೆನ್ಸಿ ಹಿಡಿಯುತ್ತಿದ್ದೆವು. “ಇದು ವಿವಿಧ ಭಾರತಿ” ಅಂತ ಅವರು ಸ್ಟೈಲ್ ಆಗಿ ಹೇಳುವುದನ್ನು ಕೇಳುವುದಕ್ಕೇನೆ ಮಜಾ ಬರ್ತಿತ್ತು. ಅದರಲ್ಲೇ ನಾನು ಬಹಳಷ್ಟು ಕನ್ನಡ ಹಾಡುಗಳನ್ನು ಮೊದಲ ಬಾರಿಗೆ ಕೇಳಿದ್ದು. “ಪ್ರೀತ್ಸೇ ಅಂತ ಪ್ರಾಣ ತಿನ್ನೋ ಪ್ರೇಮಿ ನೀನು ಯಾರು” ಹಾಡು ನನಗೆ ಬಾಯಿಪಾಠವಾಗಿ ಹೋಗಿತ್ತು.
ಪ್ರತಿ ಭಾನುವಾರ ಮಧ್ಯಾಹ್ನ ಧ್ವನಿ ಸಿನೆಮಾವನ್ನು ಪ್ರಸಾರ ಮಾಡುತಿದ್ದರು. ಆಗ ಕೇಳಿದ ಹೃದಯವಂತ ಮತ್ತು ಪಡುವಾರಳ್ಳಿ ಪಾಂಡವರು ಸಿನೆಮಾಗಳು ಈಗಲೂ ನೆನಪಿವೆ. ಸಿನಿಮಾ ಪ್ರಸಾರ ಆಗುತ್ತಿದ್ದಾಗ ನಡುವೆ ಧ್ವನಿ ಮಾಧ್ಯಮದಲ್ಲಿ ಪ್ರಸಾರ ಮಾಡಲು ಆಗದ ಸಿನಿಮಾದ ದೃಶ್ಯಗಳನ್ನು ನಿರೂಪಕರು ವಿವರಿಸಿ ಹೇಳುತ್ತಿದ್ದರು. “ಸಿಲಿಂಡರ್ ಸ್ಪೋಟದಿಂದ ಅಂಜಲಿ ತೀರಿಕೊಂಡಳು” ಅಂತ. ಎರಡು ಗಂಟೆಗಳ ಕಾಲ ಎಲ್ಲಿಯೂ ಅಲುಗಾಡದಂತೆ ಉಸಿರು ಬಿಗಿ ಹಿಡಿದು ಸಿನಿಮಾ ಕೇಳುತ್ತಿದ್ದೆವು ಮತ್ತು ಅದು ನಮ್ಮ ಮುಂದೆ ನಡೆದಂತೆ ಕಲ್ಪಿಸಿಕೊಳ್ಳುತ್ತಿದ್ದೆವು. ಕೆಲ ಕಾಲದ ನಂತರ ಆ ಪ್ರಸಾರವನ್ನು ನಿಲ್ಲಿಸಿದರು. ಅದರ ಬೇಜಾರು ನನಗೆ ಇನ್ನೂ ಇದೆ.
ಎಸ್ ಡಿ ಎಂ ಡಾಕ್ಟರ್, ಐಡಿಯಾ ಪಾಠ ಶಾಲಾ, ಶಾಸ್ತ್ರೀಯ ಸಂಗೀತ, ಯುವವಾಣಿ, ಸಾಧಕರ ಜೊತೆಗಿನ ಸಂದರ್ಶನಗಳು ಮೇಲು ಕೀಳು ಎನ್ನದಂತೆ ಎಲ್ಲ ಕಾರ್ಯಕ್ರಮಗಳನ್ನೂ ಕೇಳುತ್ತಿದ್ದೆವು. ವರ್ಷದಲ್ಲಿ ಒಂದು ಸಲ ಕರ್ನಾಟಕದ ಎಲ್ಲ ಬಾನುಲಿ ಕೇಂದ್ರಗಳು ಸೇರಿ ರಸ ಪ್ರಶ್ನೆ ಕಾರ್ಯಕ್ರಮ ನಡೆಸುತ್ತಿದ್ದರು. ನಮಗಂತೂ ಅದು ಅಪರೂಪದ ಕಾರ್ಯಕ್ರಮವಾಗಿತ್ತು. ಅಲ್ಲಿ ಕೇಳುವ ಪ್ರಶ್ನೆ ಮತ್ತು ಅದರ ಉತ್ತರಗಳನ್ನು ಒಂದು ನೋಟಬುಕ್ಕಿನಲ್ಲಿ ಬರೆದಿಟ್ಟುಕೊಳ್ಳುತ್ತಿದ್ದೆವು. ನನಗೆ ಆಶ್ಚರ್ಯವಾಗುವುದು ಸಂಗೀತದ ಗಂಧ ಗಾಳಿ ಇರದಿದ್ದರೂ ನಾನು ಕೇಳುತ್ತಿದ್ದ ಶಾಸ್ತ್ರೀಯ ಸಂಗೀತ. ಅದೇನೋ ಗೊತ್ತಿಲ್ಲ, ಅದೇನೋ ಆಕರ್ಷಣೆ. ಮಲ್ಲಿಕಾರ್ಜುನ್ ಮನ್ಸೂರ್ ಮತ್ತು ಇತರೆ ಪ್ರಸಿದ್ಧರ ಸಂಗೀತವನ್ನು ನಾನು ಕೇಳಿದ್ದು ಆಗಲೇ. ನನಗೆ ಅವರು ಯಾರು ಅಂತ ಆಗ ಗೊತ್ತಿರಲಿಲ್ಲ, ದೊಡ್ಡವನಾದ ಮೇಲೆ ಅವರ ಬಗ್ಗೆ ತಿಳಿದುಕೊಂಡಾಗ ನನ್ನೊಳಗೇ ಸಣ್ಣ ಖುಷಿ , ತೃಪ್ತ ಭಾವ.
ಅಮ್ಮ ಯಾವಾಗಲೂ ರೇಡಿಯೋ ಬಂದ್ ಆಗಲು ಬಿಡುತ್ತಿರಲಿಲ್ಲ. ರೇಡಿಯೋದ ಧ್ವನಿ ಸ್ವಲ್ಪ ಎಳೆದಂತೆ ಭಾಸವಾದರೂ ಅವಳು ನಮ್ಮನ್ನು ಹೊಸ ಶೆಲ್ ತರಲು ಅಟ್ಟುತ್ತಿದ್ದಳು. ರೇಡಿಯೋದ ಅತೀ ಬಳಕೆಯಿಂದ ಕೆಲವೊಮ್ಮೆ ಅದನ್ನು ಆನ್ ಆಫ್ ಮಾಡುವ ಬಟನ್ ಮುರಿದು ಹೋಗುತಿತ್ತು. ಇನ್ನೇನು ಈ ರೇಡಿಯೋದ ಕಥೆ ಮುಗಿದೇ ಹೋಯಿತು ಎನ್ನುವಾಗ ಹೊಸ ರೇಡಿಯೋ ತರುತ್ತಿದ್ದೆವು. ಬರೀ ಶೆಲ್ ಮೇಲಿನ ರೇಡಿಯೋ ತಂದರೆ ನಡುವೆ ತೊಂದರೆ ಆಗುತ್ತದೆಂದು ಶೆಲ್ ಮತ್ತು ಚಾರ್ಜಿಂಗ್ ಸೌಲಭ್ಯ ಇರುವ ರೇಡಿಯೋ ತರಲು ಶುರು ಮಾಡಿದೆವು. ಪ್ರತಿ ರೇಡಿಯೋ ಒಂದು ಮೂರು ವರ್ಷ ಬಾಳಿಕೆ ಬರುತ್ತಿತ್ತು. ಆಮೇಲೆ ಅದು ಅಡುಗೋಡೆಯ ಮೇಲಿಂದ ಬಿದ್ದೋ , ಬಟನ್ ಮುರಿದೋ ಇಲ್ಲವೇ ನಮ್ಮ ಕಿವಿ ಹಿಂಡುವಿಕೆಗೆ ಬೇಸತ್ತೋ ಕೆಟ್ಟು ಹೋಗುತಿತ್ತು. (ರೇಡಿಯೋ ಆನ್ ಆಫ್ ಮಾಡುವುದಕ್ಕೆ ನಾವು ಕಿವಿ ಹಿಂಡುವುದು ಎನ್ನುತಿದ್ದೆವು. ನೀವು ರೇಡಿಯೋ ಬಳಸಿದ್ದರೆ ನಿಮಗಿದು ಅರ್ಥವಾಗುತ್ತದೆ. ರೇಡಿಯೋ ಆನ್ ಇಲ್ಲವೇ ಆಫ್ ಮಾಡಲು ಅದರ ಬಟನ್ ಗಳನ್ನು ವೃತ್ತಾಕಾರವಾಗಿ ತಿರುವಬೇಕಿತ್ತು.)
ಕಾಲ ಬದಲಾದಂತೆ ರೇಡಿಯೋಗಳು ಬದಲಾದವೇ ಹೊರತು ನಮ್ಮ ಮನೆಗೆ ಟಿವಿ ಬರಲಿಲ್ಲ. ರೇಡಿಯೋ ಒಂದೇ ಆಪ್ತವಾಗಿ ಉಳಿಯಿತು ನಮಗೆ. ಟಿವಿ ತಂದರೆ ನಮ್ಮ ಓದಿನ ಮೇಲೆ ಪರಿಣಾಮ ಉಂಟಾಗುತ್ತದೆ ಎಂಬುದು ಇನ್ನೊಂದು ಕಾರಣ ಮತ್ತು ಕಲ್ಪನೆ. ಈಗಲೂ ನಮ್ಮ ಮನೆಯಲ್ಲಿ ಟಿವಿ ಇಲ್ಲ. ನಮ್ಮ ಮನೆಗೆ ಟಿವಿ ಬರದಿದ್ದರೂ ನಮ್ಮ ಪಕ್ಕದ ಮನೆಗಳಿಗೆ ಟಿವಿಗಳು ಬಂದಿದ್ದವು. ನಾವು ಅಲ್ಲಿ ಟಿವಿ ನೋಡಲು ಹೋಗಲು ಶುರು ಮಾಡಿದೆವು. ರೇಡಿಯೋದ ಬಳಕೆ ಬರ ಬರುತ್ತಾ ತಗ್ಗಿತು. ನಮ್ಮ ಮನೆಯ ನಾಲ್ಕನೆಯ ರೇಡಿಯೋ ಕೆಟ್ಟಾಗ ಮತ್ತೊಂದು ಹೊಸ ರೇಡಿಯೋ ನಮ್ಮ ಮನೆಗೆ ಬರಲಿಲ್ಲ. ಅಮ್ಮನೂ ಕೇಳಲಿಲ್ಲ. ರೇಡಿಯೋದ ಯುಗವೊಂದು ಹಾಗೆ ಸದ್ದಿಲ್ಲದೇ ಅಂತ್ಯಗೊಂಡಿತ್ತು.
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ