- ಮಗುವಿನ ಪ್ರಶ್ನೆಗಳು ಮತ್ತು ನಾವು! - ಜೂನ್ 10, 2023
- ಪು.ತಿ.ನ.ರಿಗೆ ನುಡಿ ನಮನ - ಮೇ 10, 2023
- ಕೇಳು ಕತೆಯಾ, ಮಗುವೇ! - ಏಪ್ರಿಲ್ 17, 2023
ಅಂದು ನನ್ನ ಮತ್ತು ಮಗಳ ಸಂಭಾಷಣೆ ಸೌರಮಂಡಲದ ಬಗ್ಗೆ ಸಾಗಿತ್ತು. ಸೌರಮಂಡಲವನ್ನು ಪರಿಚಯಿಸುವುದು ನನ್ನ ಉದ್ದೇಶವಾಗಿತ್ತು. “ಸೂರ್ಯನ ಸುತ್ತಾ ಎಲ್ಲಾ ಗ್ರಹಗಳು ಸುತ್ತುತ್ತವೆ, ನಾವು ಭೂಮಿ ಮೇಲೆ ಇದೀವಲ್ಲಾ ಇದೂನೂ ಗ್ರಹನೇ. ಇದು ಸೂರ್ಯನ ಸುತ್ತಾ ಸುತ್ತುತ್ತೆ” ಎಂದು ಸಂಕ್ಷಿಪ್ತವಾಗಿ ಹೇಳಿ ಮಾತು ಮುಗಿಸಿದೆ. ತಕ್ಷಣ ಅವಳು “ಅಮ್ಮಾ , ಭೂಮಿ ಸೂರ್ಯನ ಸುತ್ತಾ ಸುತ್ತುತ್ತಲ್ಲ ಅದಕ್ಕೇನೂ ತಲೆ ಸುತ್ತಲ್ವಾ?” ಅಂದಳು. ನನಗೆ ನಗು ತಡೆಯಲಾಗಲಿಲ್ಲ. ಯಾಕೆ ಅಮ್ಮ ಎಲ್ಲಾ ಪ್ಲಾನೆಟ್ಸ್ ಸೂರ್ಯನ ಸುತ್ತಾನೇ ಸುತ್ತುತ್ತೆ? ಚಂದ್ರನ ಸುತ್ತಾ ಸುತ್ತಲ್ಲಾ ಅಂದಳು. ಅವಳಿಗೆ ಸಮಾಧಾನವಾಗುವ ರೀತಿ ಉತ್ತರಿಸಿದೆ. ಮುಂದೆ ; ನಾವು ಯಾಕೆ ಸೂರ್ಯ ಮಾಮಿನ ಮುಟ್ಟಕ್ಕೆ ಆಗಲ್ಲ? ತುಂಬಾ ತುಂಬಾ ದೂರ ಇದೆ ಪುಟಾಣಿ ಅದುಕ್ಕೆ ಆಗಲ್ಲ. ಅಮ್ಮ, ಚಂದ್ರ ಲಿವಿಂಗ್ ಥಿಂಗ್ ಆ? ಅಥವಾ ನಾನ್ ಲಿವಿಂಗ್ ಥಿಂಗ್ ಅಂದಳು .. ಈ ಪ್ರಶ್ನೆ ಕೇಳಿದಾಗ ಪರವಾಗಿಲ್ಲ ಪುಟ್ಟಕ್ಕ ನಿಂಗೆ ಬುದ್ಧಿ ಬೆಳೀತಿದೆ ಅಂತ ಬೆನ್ನು ತಟ್ಟಿ ಉತ್ತರಿಸಿದೆ. ಮಕ್ಕಳ ಮೆದುಳಿನ ಬೆಳವಣಿಗೆ ೫ ವರ್ಷದವರೆಗೆ ತೀವ್ರವಾಗಿರುತ್ತದೆ . ಈ ಹಂತದಲ್ಲಿ ಪ್ರಶ್ನೆಗಳು ಸಹಜ. ಎಲ್ಲವನ್ನೂ ಮಕ್ಕಳೂ ಕುತೂಹಲವಾಗಿ ನೋಡುತ್ತಾರೆ, ಕೇಳುತ್ತಾರೆ.
ಸಂಜೆಯಾದಾಗ ಅವಳನ್ನು ಕೂರಿಸಿಕೊಂಡು ಶ್ಲೋಕ ಹೇಳಿಕೊಂಡು ದೇವರ ದೀಪ ಹಚ್ಚುವುದು ನನ್ನ ರೂಢಿ. “ಶಾಂತಾಕರಂ ಭುಜಗಶಯನಂ” ವಿಷ್ಣು ಶ್ಲೋಕ ಹೇಳುತ್ತಿದ್ದೆವು . ತಕ್ಷಣ ಕೈ ಹಿಡಿದು ಅರ್ಧಕ್ಕೆ ನಿಲ್ಲಿಸಿದಳು, ಯಾಕೆ ಪುಟ್ಟ ಎಂದಾಗ ಅಮ್ಮಾ ಎರಡು ಸಹಾರ ಇದೆ. ಒಂದು ಸಹಾರ ಡೆಸರ್ಟ್, ಇನ್ನೊಂದು ಈ ಶ್ಲೋಕದಲ್ಲಿ ಬರುತ್ತಲ್ಲ ಸಹಾರ ವಕ್ಷ ಸ್ಥಳ ಅಂತ ಅದು ಅಂದಳು. ಮತ್ತೊಮ್ಮೆ ನಗು ತಡೆಯಲಾಗಲಿಲ್ಲ. ಸಹರ ಮರುಭೂಮಿ .. ಸಹಾರ ಈ ಶ್ಲೋಕ ಅಂತ ಹೇಳಿ ಮುಂದುವರೆಸಿದೆವು . ಯಾಕೆ ಎಲ್ಲಾ ವಸ್ತುಗಳು ಕಲರ್ ಫುಲ್ ಆಗಿದೆ ಅಜ್ಜಿ ಅಂತ ಅವರಿಜ್ಜಿಗೆ ಫೋನ್ ಮಾಡಿದಾಗ ಕೇಳಿದಳು . ನೋಡಕ್ಕೆ ಚೆನ್ನಾಗಿ ಕಾಣಿಸಲಿ ಅಂತ ದೇವ್ರು ಮಾಡಿದೆ ..ನೀನು ಗೂಗಲ್ ಮಗು ಅಂತ ಅಂದ್ರು . ಅಮ್ಮಾ ದೇವ್ರಿಗೆ ಗ್ರೇ ಕಲರ್ ಇಷ್ಟ ಇಲ್ವಾ ಅಂದಳು. ಇಷ್ಟ ಕಣೆ ಯಾಕೆ? ಅಂದೆ. ಮತ್ತೆ ಯಾಕೆ ಯಾವ ಹೂವು , ಹಣ್ಣು , ತರ್ಕಾರಿನೂ ಗ್ರೇ ಕಲರ್ ಮಾಡೇ ಇಲ್ಲ ಮಾಮಿ ಅಂದಾಗ ಉತ್ತರಿಸುವುದಕ್ಕೆ ಕಂದು ಬಣ್ಣದ ಆನೆ, ಘೇಂಡಾಮೃಗಕ್ಕೆ ಬರಬೇಕಾಯಿತು.
ಅಣ್ಣಾ ಕೈಲಾಸದಲ್ಲಿ ಟಾಯ್ಲೆಟ್ ಇರುತ್ತಾ? ಮಾಮಿ ಉಚ್ಚೆ, ಕಕ್ಕ ಮಾಡುತ್ತಾ, ಅಣ್ಣ ನಿಮ್ಗೆ ಯಾಕೆ ಮೀಸೆ ಇದೆ, ನಮ್ಗೆಲ್ಲಾ ಇಲ್ಲ, ಬೇಬಿಸ್ ಯಾಕೆ ಯಾವಾಗ್ಲೂ ಅಳ್ತಾ ಇರುತ್ತ್ವೆ, ಯಾಕೆ ನಂಗೆ ಕರಿ ಕೂದ್ಲು ನನ್ನ ಫ್ರೆಂಡ್ಸಗೆ ಬೇರೆ, ರಕ್ತ ಚಂದನ ಯಾಕೆ ಕೆಂಪಗಿರುತ್ತೆ , ನೈವೇದ್ಯ ಮಾಡುವಾಗ ಯಾಕೆ ಫಸ್ಟ್ ನೀರು ಹಾಕಿ ಮಂಡಲ ಮಾಡ್ಕೋಬೇಕು, ನೀವು ಅಮ್ಮ ಯಾಕೆ ಯಾವಾಗ್ಲೂ ಗುಡ್ ಮನ್ನಾರ್ಸ್ ಮಾಡ್ತೀರಾ , ಭಕ್ತಿ ಅಂದ್ರೆ ಏನು ಅಣ್ಣ , ಕ್ಲಬ್ ಹೌಸ್ ಅಲ್ಲಿ ಯಾಕೆ ಯಾರನ್ನೂ ನೋಡಕ್ಕೆ ಆಗಲ್ಲ, ವೆಧರ್ ಅಂದ್ರೆ ಏನಣ್ಣ, ಬೀಚ್ ಅಲ್ಲಿ ಅಲೆ ಯಾಕೆ ಬರುತ್ತೆ, ವಾಲ್ಕೆನೊ ಯಾಕೆ ಆಗುತ್ತೆ, ಡೈನೋಸಾರ್ ಈಗ ಯಾಕಿಲ್ಲ ಹೀಗೆ ಹತ್ತು ಹಲವಾರು ಪ್ರಶ್ನೆಗಳನ್ನು ಅಪ್ಪನಿಗೆ ಕೇಳಿದಾಗ ಅವರು ಉತ್ತರಿಸಿ ನಾನು ನಿನಗೊಂದು ಪ್ರಶ್ನೆ ಕೇಳ್ತೀನಿ ಅಂತ ಕೇಳಿದ್ರು. ಗಡಿಯಾರದಲ್ಲಿ ಯಾಕೆ ೧೨ ರವರಗೆ ಮಾತ್ರ ಇದೆ ಅಂತ. ಇವಳು ತಕ್ಷಣ ಅದರಲ್ಲಿ ಅಷ್ಟೇ ಜಾಗ ಇರೋದು ಅನ್ನೋದಾ! ಇನ್ನೊಮ್ಮೆ ಅಜ್ಜಿ ಯಾಕೆ ನೀವು ದೊಡ್ದು ಮಾಮ ಇಟ್ಕೋತೀರಾ ಅಂದಳು. ನಾನಾಗ ಅವ್ರು ದೊಡ್ಡವರು ಪುಟ್ಟ ಅದಕ್ಕೇ ದೊಡ್ಡದು ಇಟ್ಕೋತಾರೆ ಅಂದೆ. ಅವ್ಳು, ಅಮ್ಮ ನೀನು ದೊಡ್ಡವಳು ಅಲ್ವಾ ನೀನು ಯಾಕೆ ಅಜ್ಜಿ ಥರ ಇಟ್ಕೊಳಲ್ಲ ಅಂದಾಗ ಪೇಚಿಗೆ ಸಿಲುಕಿದ ಪರಿಸ್ಥಿತಿ ನನ್ನದಾಗಿತ್ತು.
ಕಾಮನಬಿಲ್ಲಲ್ಲಿ ಪಿಂಕ್ ಕಲರ್, ಗ್ರೇ ಕಲರ್ ಯಾಕಿಲ್ಲ, ಯಾಕೆ ಮನುಷ್ಯ ಸತ್ತು ಹೋಗ್ತಾನೆ, ಯಾಕೆ ಅಮ್ಮಾ ಯೂನಿಕಾರ್ನ್ ನ ಮಾಮಿ ನಿಜ್ವಾಗ್ಲೂ ಮಾಡಿಲ್ಲ, ರೆಡ್ ಮತ್ತೆ ವೈಟ್ ಮಿಕ್ಸ್ ಮಾಡಿದ್ರೆ ಪಿಂಕ್ ಕಲರ್ ಆಗತ್ತೆ ಯಾಕೆ ಗ್ರೀನ್ ಆಗಲ್ಲ, ಯಾಕೆ ಮಂಡಿ ಮೂಳೆ ತುಂಬಾ ದೊಡ್ಡದಾಗಿದೆ, ಯಾಕೆ ನಮಗೆ ಪಿಂಕ್ ರಕ್ತ ಇಲ್ಲ ಕೆಂಪು ರಕ್ತ, ಕುಕ್ಕೀ(Cookie) ಯಾಕೆ C ಇಂದ ಶುರು ಆಗತ್ತೆ, ಸೇಮ್ ಸೌಂಡ್ ಇದ್ರು ಕಾಂಗೂರು K ಇಂದ ಶುರು ಆಗತ್ತೆ, ನಮ್ಮನೇಲಿ ಯಾಕೆ ಕೊಡ ಇಲ್ಲ, ಕುಂಕುಮ ಕೊಟ್ಟಾಗ ಯಾಕೆ ಬ್ಲೌಸ್ ಪೀಸ್ ಕೊಡ್ತಾರೆ? ಬ್ಲೌಸ್ ಹೊಲಿಸ್ಕೋಬೇಕಾ, ಲೇಡಿ ಬಗ್ ಮೇಲೆ ಯಾಕೆ ಡಾಟ್ ಡಾಟ್ ಇರುತ್ತೆ, ಎಣ್ಣೆ ಹಚ್ಚಿಕೊಂಡಾಗ ತಲೆ ಕೂದ್ಲು ಯಾಕೆ ಬೆಳೆಯುತ್ತೆ, ಬುದ್ಧಿ ಅಂದ್ರೆ ಏನಮ್ಮ? ಅದು ಹೇಗೆ ತಲೆಗೆ ಹೋಗತ್ತೆ, ಆಕಾಶ ಮುಟ್ಟಕ್ಕೆ ಪಕ್ಷಿಗೆ ಯಾಕೆ ಆಗಲ್ಲ, ನೀನು ಯಾಕೆ ಇಷ್ಟು ದೊಡ್ಡವ್ಳಾಗಿದೀಯಾ , ಮಾನ್ಸ್ಟರ್ ಈಗ ಇದ್ಯಾ , ಕಚಗುಳಿ ಕೊಟ್ಟಾಗ ಯಾಕೆ ನಗು ಬರುತ್ತೆ, ಕುರುಡರಿಗೆ ಯಾಕೆ ಕಣ್ಣು ಕಾಣಲ್ಲ, ಮಾಮಿ ಯಾವಾಗ್ಲೂ ಕಿರೀಟ ಹಾಕ್ಕೊಂಡಿರತ್ತಾ? ಅದಕ್ಕೆ ಭಾರ ಆಗಲ್ವಾ, ಮನಸ್ಸು ಎಲ್ಲಿ ಇರುತ್ತಮ್ಮಾ, ಹೀಗೆ ಹತ್ತು ಹಲವಾರು ಪ್ರಶ್ನೆಗಳನ್ನು ೩-೫ ವರ್ಷದ ಮಕ್ಕಳು ಕೇಳುತ್ತಾರೆ. ಉತ್ತರಿಸುವಾಗ ತಾಳ್ಮೆ, ಜಾಣ್ಮೆ ನಮಗಿರಬೇಕು. ಕೆಲವೊಮ್ಮೆ ಅದೇ ಪ್ರಶ್ನೆಗಳು ಪುನರಾವರ್ತನೆಯಾಗುತ್ತವೆ. ಉದಾಹರಣೆಗೆ ನಾವು ಯಾಕೆ ಊಟ ಮಾಡ್ಬೇಕು, ಶಕ್ತಿ ಯಾಕೆ ಬೇಕು, ಇಂತಹ ಪ್ರಶ್ನೆಗಳು ಸಹನೆ ಪರೀಕ್ಷಿಸುತ್ತವೆ. ಆಗ ನಾವು ಬೈಯಬಾರದು. ಪ್ರಶ್ನೆ ಕೇಳುವಾಗ ಅವರಲ್ಲಿ ಕುತೂಹಲ, ನಿರೀಕ್ಷೆಗಳಿರುತ್ತವೆ. ಉತ್ತರ ಸಮರ್ಪಕವಾಗಿದ್ದಾಗ ಮಗುವನ್ನು ಒಂದು ಲೆವೆಲ್ ಮೇಲೆ ಯೋಚಿಸುವಂತೆ ಮಾಡುತ್ತದೆ. ಚಿಯರ್ಸ್ ಟು ಆಲ್ ಕಿಡ್ಡೋಸ್!
ಹೆಚ್ಚಿನ ಬರಹಗಳಿಗಾಗಿ
ಸ್ನೇಹ ಸೌರಭ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ