- ವಿನಾಯಕರ ಪ್ರತಿಜ್ಞೆ ಎಂಬ ಕವಿತೆ - ಆಗಸ್ಟ್ 9, 2021
- ಒಲವಿಲ್ಲದ ಪೂಜೆ - ಮೇ 14, 2021
- ಪರಿವಾರ ಪ್ರಿಯನಲ್ವೆ ಇಕ್ಷ್ವಾಕು ಸಂಜಾತ? - ಏಪ್ರಿಲ್ 20, 2021
ಜಯಂತ ಕಾಯ್ಕಿಣಿಯವರ ಕವಿತೆಯೊಂದರ ಸಾಲಿನೊಂದಿಗೆ ನಾನು ನನ್ನ ಬರಹವನ್ನು ಆರಂಭಿಸಲು ಇಚ್ಛಿಸುತ್ತೇನೆ.
“ಪ್ರೀತಿ ಇರುತ್ತದೆ ಅಥವಾ
ಜಯಂತ ಕಾಯ್ಕಿಣಿ
ಇರುವುದಿಲ್ಲ ಅಷ್ಟೆ
ಇದ್ದರೆ ಎಲ್ಲರ ಮೇಲೂ ಇರುತ್ತದೆ
ಇಲ್ಲದಿದ್ದರೆ ಯಾರ ಮೇಲೂ ಇಲ್ಲ ಅಷ್ಟೆ.
ಜಯಂತರ ಬಣ್ಣದ ಕಾಲು ಕತೆ ಓದಿದೊಡನೆ ಅನ್ನಿಸುವುದೇ ಹೀಗೆ. ಮನುಷ್ಯನಲ್ಲಿ ಮುಗ್ಧತೆಯ ಪ್ರಮಾಣ ಜಾಸ್ತಿಯಿದ್ದಷ್ಟು ಈ ಮಾತಿಗೆ ನಾವು ನಿಕಟವರ್ತಿಗಳಾಗಿರುತ್ತೇವೆ. ಯಾವಾಗ ನಾವು ನಾಜೂಕಿನ ನಾಗರೀಕರಣ ಪ್ರಕ್ರಿಯೆಗೆ ಒಳಗಾಗುತ್ತೇವೆಯೊ ಆಗ ಬೂಟಾಟಿಕೆಯ ನಡವಳಿಕೆಗಳನ್ನು ವ್ಯಕ್ತಿತ್ವದೊಳಗೆ ಬಿಟ್ಟುಕೊಳ್ಳುತ್ತೇವೆ. ಆಗ ಪ್ರೀತಿಯೂ ಲೆಕ್ಕಾಚಾರದ ಮೂಲಕ ಇಂತಿಂಥವರಿಗೆ ಇಷ್ಟಿಷ್ಟು ಎಂದು ಹಂಚುವ ರೇಷನ್ ಅಕ್ಕಿಯಂತೆ ಆಗಿಬಿಡುತ್ತದೆ. ಬಣ್ಣದ ಕಾಲು ಕತೆಯಲ್ಲಿ ನರಸಿಂಹ ಮತ್ತು ಮೀರಾ ಕೆಳ ಮಧ್ಯಮವರ್ಗದ ದಂಪತಿಗಳು. ಫರ್ಮಾಗುಡಿ ಕತ್ರಿ ಎಂಬ ಪುಟ್ಟ ಊರಿನಲ್ಲಿ ಬದುಕುವ ಇವರು ಸಮಾಜದ ಒಪ್ಪಿತ ಮೌಲ್ಯಗಳನ್ನು ಪರಿಪಾಲಿಸುವುದರಲ್ಲಿಯೇ ಜೀವನ ಕಳೆಯುವವರು.
ಆದ್ದರಿಂದ ಎಲ್ಲ ಮಧ್ಯಮವರ್ಗದವರಂತೆಯೇ ಅವರಿಗೂ ಊರ ಜನರಿಂದ ಶಾಭಾಸಗಿರಿ ಪಡೆಯುವುದೇ ಜೀವನದ ಪರಮ ಧ್ಯೇಯ. ಈ ಸಂಗತಿಯನ್ನು ಯಾವುದೇ ಸಣ್ಣ ಊರಿನ ಸಣ್ಣ ಆದಾಯದ ಜನ ವಾಸಿಸುವ ಬೀದಿಗಳಲ್ಲಿ ನಾವು ಕಾಣಬಹುದು. ಅಲ್ಲಿನ ಜನರಿಗೆ ಪ್ರತಿ ವಿಷಯದಲ್ಲಿಯೂ ನೆರೆ-ಹೊರೆಯವರ, ಓಣಿಯವರ ಅಭಿಪ್ರಾಯದ ಬಗ್ಗೆಯೇ ಹಗಲಿರುಳೂ ಚಿಂತೆಯಿರುತ್ತದೆ. ನರಸಿಂಹ-ಮೀರಾ ಕೂಡ ಹಾಗೆಯೇ ಊರವರ ಕಣ್ಣಿನಲ್ಲಿ ಒಳ್ಳೆಯವರಾಗುವುದಕ್ಕಾಗಿ ಮಗನನ್ನು ಸುಧಾರಿಸುವ ಪ್ರಯತ್ನವನ್ನು ಆರಂಭಿಸುತ್ತಾರೆ. ಅಲ್ಲದೇ ಈ ಪ್ರಕ್ರಿಯೆಯಲ್ಲಿ ಆತನ ಭವಿಷ್ಯದ ಒಳಿತೂ ಇದೆ ಎಂದು ಅವರು ತಮ್ಮನ್ನು ತಾವು ನಂಬಿಸಿಕೊಂಡಿರುತ್ತಾರೆ.
ಪ್ರತಿ ದಿನ ಸಂಜೆ ದೀಪ ಹಚ್ಚುವ ಹೊತ್ತಿಗೆ ನರಸಿಂಹ ಮತ್ತು ಮೀರಾ ಶಿಕ್ಷೆಗೆ ಕಾದವರಂತೆ ನಿಂತಿರುತ್ತಿದ್ದರು ಎಂಬ ವಾಕ್ಯದ ಮೂಲಕ ಲೇಖಕರು ಅವರು ಅನುಭವಿಸುತ್ತಿದ್ದ ಮೂಜುಗರವನ್ನು ಕಟ್ಟಿಕೊಡುತ್ತಾರೆ. ಕೆಲವರಂತೂ ಅವನಲ್ಲಿ ಕಲಿ ಹೊಕ್ಕಿದೆ ಅವನೊಬ್ಬ ರಾಕ್ಷಸ ಹೀಗೇ ಬಿಟ್ಟರೆ ಏನಾಗುತ್ತಾನೋ ಎಂದು ಹೇಳಿ ನರಸಿಂಹನನ್ನು ಹೆದರಿಸುತ್ತಾರೆ. ಹೀಗೆ ಇನ್ನೊಬ್ಬರ ಮನೆಯ ವಿಷಯದಲ್ಲಿ ಮೂಗು ತೂರಿಸಿ ತಮ್ಮ ಸಲಹೆ-ಸೂಚನೆಗಳನ್ನು ಕೇಳದಿದ್ದರೂ ಕೊಡುವವರು, ತಮ್ಮ ನಂಬಿಕೆ-ಅನಿಸಿಕೆಗಳನ್ನು ಅನಂತ ಸತ್ಯವೆಂಬಂತೆ ಎಲ್ಲರ ಮೇಲೆ ಹೇರುವವರು ಕೂಡ ನಮ್ಮ ನಡುವೆ ಸಾಕಷ್ಟು ಜನ ಇದ್ದಾರೆ.
ದೊಡ್ಡವರ ಈ ಭಯ ಹುಟ್ಟಿಸುವ ಪ್ರಪಂಚಕ್ಕೆ ತದ್ವಿರುದ್ಧವಾದ ಜೀವಂತಿಕೆಯ ಪ್ರಪಂಚವೊಂದು ಚಂದೂ, ಚಾ ಮಾರುವ ಪೋಪಟ್, ಕುಂಟ ಮಂಗೇಶಿ ಮುಂತಾದವರನ್ನೊಳಗೊಂಡ ಮಕ್ಕಳ ನಡುವೆ ಇದೆ. ಅದು ಅತ್ಯಂತ ಸಹಜ, ಸಮೃದ್ಧ, ಸುಂದರ ಪ್ರಪಂಚವೆಂಬುದನ್ನು ಲೇಖಕರೂ ಇಶಾರೆಯಲ್ಲಿಯೇ ತಿಳಿಸುತ್ತಾರೆ.
ಹಾಗೆ ಎರಡು ಪರಸ್ಪರ ಹಾಸುಹೊಕ್ಕಾದ ಸಂಬಂಧಗಳನ್ನು ಹೊಂದಿರುವ ಹಿರಿಯರು ಮತ್ತು ಮಕ್ಕಳು ಇದೇ ಮಾನವ ಸಮುದಾಯದಲ್ಲಿ ಎಷ್ಟು ಬೇರೆ ಬೇರೆಯಾಗಿ ಯೋಚಿಸುತ್ತಾರೆ ಮತ್ತು ಎಷ್ಟು ಬೇರೆ ಬೇರೆಯಾಗಿ ಪ್ರತಿಕ್ರಿಯಿಸುತ್ತಾರೆ ಎಂದು ನಿರೂಪಿಸುವಲ್ಲಿಯೇ ಕತೆಯ ಮಾನವೀಯ ಮುಖವು ಅನಾವರಣಗೊಳ್ಳುತ್ತದೆ.
ಜೀವ, ತನ್ನ ದಾಹಗಳಿಗೆ ಶರಣಾಗಿರುತ್ತದೆ. ತನ್ನ ದಾಹಕ್ಕೆ ಸಂಬಂಧಪಟ್ಟ ಯಾವುದೇ ಚಟುವಟಿಕೆಗಳಲ್ಲಿ ಅದು ತನ್ನ ಶೋಧವನ್ನು ನಿಲುಕುಗಳನ್ನು ನಡೆಸುತ್ತಲೇ ಇರುತ್ತದೆ. ಬದುಕು ಎನ್ನುವುದು ಅವರವರು ಹೊಂದಿರುವ ವ್ಯಕ್ತಿತ್ವ ಎನ್ನುವ ಕನ್ನಡಿಯಲ್ಲಿ ಅವರವರು ಮುಖ ನೋಡಿಕೊಂಡು ತಯಾರಾಗುವ ಚೌಕಿಮನೆಯಿದ್ದ ಹಾಗೆ. ಆದ್ದರಿಂದಲೇ ಮುಂಬಯಿಯ ಬದುಕು ನರಸಿಂಹನನ್ನು ಹೆದರಿಸಿದರೆ ಅದೇ ಬದುಕು ಚಂದೂನ ಕಣ್ಣುಗಳಿಗೆ ಆಕರ್ಷಕವಾಗಿ ಕಾಣುತ್ತದೆ. ಸರಿಯಾಗಿ ಶಾಲೆಗೆ ಹೋಗದ ಮಕ್ಕಳಿಗೆ ಯಾವ ಗತಿ ಬಂದಿದೆ ಎಂದು ನರಸಿಂಹ ಉದ್ಘರಿಸುತ್ತಾನೆ. ಆದರೆ ಅದೇ ಮಕ್ಕಳು ಚಂದೂನ ಕಣ್ಣಿಗೆ ದೊಡ್ಡ ಹಿರೋಗಳ ತರಹ ಕಂಡು ಮೆಚ್ಚುಗೆ ಹುಟ್ಟಿಸಿರುತ್ತಾರೆ. ಕಾಲಿಗೆ ಚಪ್ಪಲಿಯಿರದೆ ಪೇಪರು ಮಾರುವ ಪುಟ್ಟ ಮಕ್ಕಳು, ಕಿಟ್ಟಲಿಗೆ ನಾಣ್ಯ ಕುಟ್ಟುತ್ತ ಚಾಯ್ ಎಂದು ಮಾರುವ ಹುಡುಗ ಇವರೆಲ್ಲ ಚಂದೂಗೆ ಇಷ್ಟವಾಗಿರುತ್ತಾರೆ. ಬೂಟ್ ಪಾಲಿಶ್ ಮಾಡುವವರು, ಕಾರಿನ ಗಾಜು ಹಳದಿ ವಸ್ತ್ರದಿಂದ ಉಜ್ಜುವವರು, ಇಲಿ ಪಾಶಾಣ ಮಾರುವವರು, ಪೋಸ್ಟರ್ ಹಚ್ಚುವವನ ಏಣಿ ಹಿಡಿದವರು, ಭೇಲಪುರಿ ಆಮ್ಲೆಟ್ ಗಾಡಿಗಳಿಗೆ ಕೂಗಿ ಕರೆಯುವವರು ತನ್ನದೇ ವಯಸ್ಸಿನ ಮಕ್ಕಳು ಅವನ ಕಣ್ಣಿಗೆ ಧೀರರಾಗಿ ಕಾಣುತ್ತಾರೆ. ತನ್ನ ಶಾಲೆಯ ಮಾಸ್ತರು ಬಂದು ಇವರನ್ನು ನೋಡಬೇಕಿತ್ತು ಎಂದು ಅಂದುಕೊಳ್ಳುತ್ತಾನೆ.
ಬಣ್ಣದ ಕಾಲು ಕತೆಯಲ್ಲಿ ಓದುಗನೆದುರು ಅನಾವರಣಗೊಳ್ಳುವ ಇನ್ನೊಂದು ಅಂಶವೆಂದರೆ ಫರ್ಮಾಗುಡಿ ಕತ್ರಿ ಎಂಬ ಪುಟ್ಟ ಊರಿನ ಅನೂಹ್ಯ ಜಗತ್ತು ಹಾಗೂ ಮುಂಬೈ ಮಹಾನಗರಿಯ ಮಾಯಾ ಜಗತ್ತು. ಇವೆರಡನ್ನೂ ಚಿತ್ರಿಸುವಾಗ ಲೇಖಕರು ಅಷ್ಟೇ ಪ್ರಮಾಣದಲ್ಲಿ ಅವುಗಳೊಂದಿಗೆ ಆತ್ಮಸಾಥ್ ನಡೆಸುವುದರಿಂದಾಗಿ ಓದುಗನಿಗೆ ತಾನೇ ಖುದ್ದಾಗಿ ಗೋವೆಯ ಫರ್ಮಾಗುಡಿಗೆ ಹೋಗಿ ಬಂದಂತೆ ಮತ್ತು ಮುಂಬೈಗೆ ಭೆಟ್ಟಿ ಇತ್ತಂತೆ ಭಾಸವಾಗುತ್ತದೆ. ದೇವಸ್ಥಾನದ ಎದುರು ಸಾಲಾಗಿ ಕೂತು ಹೂವು ಮಾರುವವರು, ಮದುವೆ ಮಂಟಪದ ಊಟದ ಪಂಕ್ತಿಗಳು, ಮೀಸೆ ಪೋಲಿಸ್, ಕೇಸರ್ ಕರ್ ಇವೆಲ್ಲವೂ ನಮ್ಮನ್ನು ಗೋವೆಗೆ ಕರೆದೊಯ್ದು ನಿಲ್ಲಿಸಿಬಿಡುತ್ತವೆ. ಪೊಂಡಾ ಬಸ್ ಸ್ಟಾಂಡಿನಲ್ಲಿ ಲೆಮೆನ್ ಸೋಡಾ ಕುಡಿದಿದ್ದು ನಾವೇ ಇರಬೇಕು ಅನ್ನಿಸುತ್ತದೆ. ಇದೇ ಬಗೆಯಲ್ಲಿ ನಮ್ಮನ್ನು ತನ್ನೊಳಗೆ ಎಳೆದುಕೊಳ್ಳುವುದು ಮುಂಬೈ. ಸಾವಿರಾರು ಗಂಡಸರು ಇಕ್ಕೆಲದಲ್ಲಿ ಬಹಿರ್ದೆಶೆಗೆ ಕೂತ ದೃಶ್ಯದಿಂದ ಶುರುವಾಗುವ ಈ ಯಾತ್ರೆಯಲ್ಲಿ ಪರೇಲಿನ ದಿವಾಳಿಯೆದ್ದ ಗಿರಣಿಗಳು ಬರುತ್ತವೆ. ಕಪ್ಪುಗಟ್ಟಿದ ಚಿಮಣಿಗಳು ಆಕಾಶದೆಡೆ ಕೈಯೆತ್ತಿ ರೋಧಿಸುತ್ತಿರುವಂತೆ ಕಾಣುತ್ತವೆ. ಸಣ್ಣ ಪಾಮ್ ಆಯಿಲ್ ಡಬ್ಬಿಗಳಲ್ಲಿ ತುಳಸಿ ಗಿಡ, ಬೆರಳಿಗೆ ಸುತ್ತಿದ ಬಾಚಣಿಕೆಯ ಕೂದಲು ಹವೆಯಲ್ಲಿ ತೆವಳಿ ಬಂದು ನಿಂತಿದ್ದು ನಮ್ಮ ಕಾಲೆದುರಿಗೇ ಎಂಬಂತೆ ಭಾಸವಾಗುತ್ತದೆ.
ಈ ಕತೆಯಲ್ಲಿ ಅಂತಸ್ರೋತವಾಗಿ ಹರಿಯುತ್ತಿರುವುದು ಮಾನವೀಯ ಸಂವೇದನೆಯ ಅಮೃತಮಯಧಾರೆ. ಅದು ಜಯಂತ ಕಾಯ್ಕಿಣಿಯವರ ಎಲ್ಲ ಕತೆಗಳಲ್ಲೂ, ಬರವಣಿಗೆಯಲ್ಲಿಯೂ ಇರುವ ಬಹುಮುಖ್ಯ ಸೂತ್ರ. ಅವರ ಲೇಖನಿಯ ಕಣ್ಣಿಗೆ ಬೀಳುವುದು ಬೇರೆಯವರು ಹುಲು ಬದುಕಿನ ನಿಕೃಷ್ಟ ಸಂಗತಿಗಳೆಂದು ತಿಳಿದು ಬೀಸಾಕುವ ವಿವರಗಳು. ಜಯಂತರ ಅಮೃತಬಳ್ಳಿ ಕಷಾಯ ಕುಡಿದು ಈ ದೈನಿಕದ ವಿವರಗಳು ಓದುಗನನ್ನು ಸುಪ್ತ ಸಾಗರ ದಾಟಿಸುತ್ತವೆ. ಅದೇ ಕಾರಣದಿಂದ ಅವರ ಕತೆಯ ಪಾತ್ರಗಳೂ ಸಹ ತುಂಬಾ ಸಹಜವಾಗಿ ವರ್ತಿಸುತ್ತಲೇ ಅಮೂರ್ತವಾದ ಸತ್ಯವನ್ನು ಓದುಗನಿಗೆ ವರ್ಗಾಯಿಸುತ್ತವೆ. ಕುಂಟ ಮಂಗೇಶಿ, ಕಾಟಕರ್ ಕಾಕಾ, ಅವನಿಲ್ಲದಿದ್ದಾಗ ಸಿಕ್ಕಿದ್ದೇ ಚಾನ್ಸು ಎಂದು ತಾಸುಗಟ್ಟಲೆ ಗ್ಯಾಸು ಉರಿಸಿಕೊಳ್ಳುವ ನೆರೆಮನೆಯಾಕೆ, ಕೈಯಲ್ಲಿ ಮಗನ ಚಪ್ಪಲಿಯ ಅಳತೆ ನಕ್ಷೆ ಹಿಡಿದು ಬಿದ್ದ ಫಿಟ್ಸ ರೋಗಿ ಹೀಗೆ ಪ್ರತಿಯೊಬ್ಬರೂ ಓದುಗನ ಸ್ಮøತಿಯಲ್ಲಿ ಶಾಶ್ವತವಾಗಿ ಕೂತುಬಿಡುತ್ತಾರೆ. ಅದಕ್ಕೆ ಕಾರಣವೆಂದರೆ ಬದುಕಿನ ಕ್ಷಣಗಳಿಂದ ಇವರೆಲ್ಲ ಎದ್ದ ಲೇಖಕರ ಸ್ಮøತಿಯಲ್ಲಿ ಶಾಶ್ವತವಾಗಿ ಕೂತಿದ್ದಾರೆ. ಆದ್ದರಿಂದಲೇ ಜಯಂತರ ಕವಿತೆಯಲ್ಲಿ ಬಸ್ ಡ್ರೈವರ್ ಚೆನ್ನಪ್ಪನ ಮಕ್ಕಳು, ರಾತ್ರಿ ಪಾಳಿಯ ದಾದಿಯರು, ಅಮ್ಮನ ಲಂಗದ ಮೇಲೆ ತಮ್ಮನ ಅಂಗಿ ಹಾಕಿಕೊಂಡು ಬಟನ್ ಮೊಲ ಹೆಣೆಯುವ ಹುಡುಗಿಯರು ಹೀಗೆ ಸಾಲು ಸಾಲಾಗಿ ಮಾನವೀಯತೆಯ ಅಂತ:ಕರಣದ ದೀಪಗಳು ಉರಿಯುತ್ತವೆ.
ಕೇಸರ್ ಕರ್ ಮದುವೆ ಮನೆಯಲ್ಲಿ ಸಾರಿನ ಪಾತ್ರೆಗೆ ಉಚ್ಚೆ ಹೊಯ್ದು ಎಲ್ಲರಿಂದ ರಾಕ್ಷಸ ಎಂದು ಕರೆಸಿಕೊಳ್ಳುವ ಚಂದೂ ಕುಂಟ ಮಂಗೇಶನಿಗೆ ಬಣ್ಣದ ಕಾಲನ್ನು ತೆಗೆದುಕೊಂಡು ಹೋಗಲೇಬೇಕೆಂದು ರಾತ್ರಿಯೆಲ್ಲ ಕನವರಿಸುತ್ತ ಇಲ್ಲವಾದರೆ ತಾನು ಊರಿಗೆ ಬರುವುದೇ ಇಲ್ಲವೆಂದು ರಗಳೆ ಮಾಡುವಾಗ ಅವನಲ್ಲಿನ ಮಾನವೀಯತೆಗೆ ತಲೆ ಬಾಗಲೇಬೇಕಾಗುತ್ತದೆ. ಹೀಗೆ ಕತೆ ನಮ್ಮೊಳಗಿನ ಕಾಟ್ಕರ ಕಾಕಾನ ಜಾಣತನದ ಚೌಕಾಶಿಗಳನ್ನು, ನರಸಿಂಹನ ಸಮಾಜಭೀರುತನವನ್ನು ಎತ್ತಿ ತೋರಿಸುತ್ತ ಅನ್ನಿಸಿದ್ದನ್ನು ಮಾಡಿಬಿಡುವ ಚಂದೂನನ್ನು ಹುಡುಕಿಕೊಳ್ಳಲು ಹಚ್ಚುತ್ತದೆ.
ಜಯಂತರ ಕವಿತೆಯೊಂದು ಹೇಳುತ್ತದೆ-
ಪದವಿಲ್ಲದಾಗಲೇ ಕದವಿಲ್ಲದಾಗಲೇ
ಒಂದಾಗಿದ್ದೇವೆ ಎಲ್ಲ…!
ಹೆಚ್ಚಿನ ಬರಹಗಳಿಗಾಗಿ
ಹಾಲಾಡಿಯಲ್ಲಿ ಹಾರುವ ಓತಿ
ದೂರ ಸಮೀಪಗಳ ನಡುವೆ…
ಬದುಕಿನ ನೆಲೆ ಶೋಧಿಸುವ ʼಕಡಿದ ದಾರಿʼ