ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ದಿ ಬ್ಯಾಂಕಿಂಗ್ ವಾರಿಯರ್ಸ್..

ತಳುಕು ಶ್ರೀನಿವಾಸ
ಇತ್ತೀಚಿನ ಬರಹಗಳು: ತಳುಕು ಶ್ರೀನಿವಾಸ (ಎಲ್ಲವನ್ನು ಓದಿ)

ಶ್ರೀಲಕ್ಷ್ಮಿ ಚಿಕ್ಕಂದಿನಿಂದಲೂ ಬಹಳ ಜಾಣೆ. ಆಟ, ಪಾಠ, ಇತರರೊಡನೆ ಬೆರೆಯುವುದು, ಸ್ಪರ್ಧೆಗಳಲ್ಲಿ ಭಾಗವಹಿಸುವುದು ಹೀಗೆ ಎಲ್ಲದರಲ್ಲೂ ಅವಳು ಮುಂದು. ಹಾಗೆಯೇ ಅವೆಲ್ಲದರಲ್ಲೂ ಪ್ರಾವೀಣ್ಯತೆ ಪಡೆದಿದ್ದಳು. 10 ವರ್ಷಗಳ ಹಿಂದೆ, ಉತ್ತಮ ದರ್ಜೆಯಲ್ಲಿ ಪದವಿ ಪಡೆದ ಆಕೆ ಒಂದು ಪ್ರತಿಷ್ಠಿತ ಬ್ಯಾಂಕಿನಲ್ಲಿ ಅಧಿಕಾರಿಣಿಯಾಗಿ ಸೇರಿದಳು. ತನ್ನ ಊರಲ್ಲೇ ಅವಳಿಗೆ ಪೋಸ್ಟಿಂಗ್ ಆಗಿತ್ತು. ಅವಳ ಓದಿಗೆ ಮತ್ತು ಬುದ್ಧಿಶಕ್ತಿಗೆ ಬೇರೆ ಕಡೆಯಲ್ಲಿಯೂ ಒಳ್ಳೆಯ ಮತ್ತು ಹೆಚ್ಚು ಸಂಬಳ ದೊರೆಯುವ ಕೆಲಸ ಸಿಗುತ್ತಿತ್ತು. ಬ್ಯಾಂಕಿನ ಕೆಲಸವಾದರೆ, ನಿಯಮಿತ ಕಾಲಕ್ಕೆ ಹೋಗಿ ಬರುವುದು, ನಿಯಮಿತ ಕಾಲದಲ್ಲಿ ವರಮಾನ ಬರುವುದು, ಬೆಲೆ ಸೂಚ್ಯಂಕದ ಮೇರೆಗೆ ಮೂರು ತಿಂಗಳಿಗೊಮ್ಮೆ ತುಟ್ಟಿಭತ್ಯೆ ಏರುವುದು, ಐದು ವರುಷಗಳಿಗೊಮ್ಮೆ ವೇತನ ಪರಿಷ್ಕರಣೆ ಆಗುವುದು, ದೈಹಿಕ ಶ್ರಮವೂ ಹೆಚ್ಚಿನದಾಗಿರದು, ಇತ್ಯಾದಿ ಸಕಾರಾತ್ಮಕ ವೈಶಿಷ್ಟ್ಯತೆಗಳಿಗಾಗಿ ಬ್ಯಾಂಕ್ ನೌಕರಿಯನ್ನೇ ಆರಿಸಿಕೊಂಡಿದ್ದ್ದಳು.
ಯಾವುದೇ ಕೆಲಸ ಕೊಟ್ಟರೂ ಅಚ್ಚುಕಟ್ಟಾಗಿ, ಹಿರಿಯ ಅಧಿಕಾರಿಗಳಿಗೆ ಸಮಾಧಾನಕರವಾಗಿ ಮಾಡುತ್ತಿದ್ದಳು. ಅಂದಿನ ಕೆಲಸಗಳನ್ನು ಅಂದೇ ಮುಗಿಸಿಯೇ ಮನೆಗೆ ತೆರಳುವುದು ಅವಳ ಪರಿಪಾಠ. ಅದಾದ ಒಂದು ವರ್ಷದಲ್ಲಿ ಮದುವೆಯೂ ಆಗಿ, ನಂತರದ ಎರಡು ವರುಷಗಳಲ್ಲಿ ಒಬ್ಬ ಮಗಳೂ ಹುಟ್ಟಿದಳು.

ಕ್ರಮೇಣ ಬ್ಯಾಂಕಿನಲ್ಲಿ ಕೆಲಸವೂ ಜಾಸ್ತಿ ಆಗುತ್ತಾ ಇತ್ತು, ಹಾಗೆಯೇ ಸರಕಾರದ ನಿಯಮದಂತೆ ನೇಮಕಾತಿ ಆಗುತ್ತಲೇ ಇರಲಿಲ್ಲ ಮತ್ತು ಹೆಚ್ಚು ಹೆಚ್ಚು ಜನರು ವಯೋಗುಣದ ಅನುವಾಗಿ ಮತ್ತು ಸ್ವ-ಇಚ್ಛೆಯಿಂದ ನಿವೃತ್ತರಾಗುತ್ತಿದ್ದರು. ಶ್ರೀಲಕ್ಷ್ಮಿ ತನ್ನ ನಿಯಮದಂತೆ ಪ್ರತಿನಿತ್ಯವೂ ಎಲ್ಲ ಕೆಲಸ ಮುಗಿಸಿಯೇ ಮನೆಗೆ ತೆರಳುತ್ತಿದ್ದಳು. ಅಧಿಕಾರಿಣಿ ಆಗಿ ಸೇರಿದವಳಿಗೆ, ಇನ್ನೂ ಹೆಚ್ಚು ಹೆಚ್ಚು ಪದೋನ್ನತಿ ಪಡೆಯಬೇಕೆಂಬ ಹಂಬಲ ಸ್ವಾಭಾವಿಕವಾಗಿಯೇ ಇತ್ತು. ಹಾಗಾಗಿ, ಬ್ಯಾಂಕಿನಲ್ಲಿ ಹೆಚ್ಚು ಹೆಚ್ಚು ಪ್ರಗತಿ ತೋರಿಸಬೇಕಿತ್ತು. ಪ್ರಗತಿಯನ್ನು ಬ್ಯಾಂಕಿಗೆ ಹೆಚ್ಚಿನ ಲಾಭ ಗಳಿಸುವುದರಲ್ಲಿ ಮತ್ತು ಖರ್ಚು ಕಡಿಮೆ ಮಾಡುವುದರ ಮುಖೇನ ತೋರಿಸಬೇಕಿತ್ತು. ಜಾಣೆ ಬುದ್ಧಿವಂತೆಯಾದ್ದರಿಂದ ಮನೆಯ ಕಡೆಯ ಮತ್ತು ಕೆಲಸದ ಕಡೆಯ ಜೀವನವನ್ನು ಸಮಾನವಾಗಿ ತೂಗಿಸಿಕೊಂಡು ಹೋಗುತ್ತಿದ್ದಳು.

ಯಾರಿಗೂ ಯಾವಾಗಲೂ ಸುಭಿಕ್ಷ ಕಾಲವೇ ಇರೋದಿಲ್ಲ. ಪ್ರಕೃತಿಯ ನಿಯಮದಂತೆ ಒಮ್ಮೆ ಸುಭಿಕ್ಷ ಎದುರಿಸಿದರೆ ಮತ್ತೊಮ್ಮೆ ದುರ್ಭಿಕ್ಷವನ್ನು ಎದುರಿಸಲೇಬೇಕು. ಹಾಗೆಯೇ ನಮ್ಮ ನಾಯಕಿಯಲ್ಲಿಯೂ ದುರ್ಭಿಕ್ಷದ ಕಾಲ ಎದುರಾಯಿತು. ಮೊತ್ತ ಮೊದಲಿಗೆ ಅವಳಿಗೆ ಪ್ರಬಂಧಕಳಾಗಿ (ಮ್ಯಾನೇಜರ್) ಪದೋನ್ನತಿಯಾಗಿದ್ದರಿಂದ, ಬೇರೆ ರಾಜ್ಯದ ಊರಿಗೆ ವರ್ಗಾವಣೆ ಆಯಿತು. ಪತಿಗೂ ಅಲ್ಲಿಗೇ ವರ್ಗ ಮಾಡಿಸಿಕೊಂಡು, ಮಗಳನ್ನೂ ಅಲ್ಲಿಯೇ ಶಾಲೆಗೆ ಸೇರಿಸಿದ್ದಾಯಿತು. ಅಲ್ಲಿಯವರೆವಿಗೆ ಅವಳಿಗೆ ತಿಳಿಯದ, ಶನಿಕಾಟ ಇನ್ನು ಮುಂದೆ ಶುರುವಾಯಿತು.

ಹೊಸ ಜಾಗ, ಹೊಸ ಸಹೋದ್ಯೋಗಿಗಳು, ಹೊಸ ಗ್ರಾಹಕರನ್ನು ಎದುರಿಸಬೇಕಾಯಿತು. ಹೊಸ ಹೊಸದರಲ್ಲಿ ಯಾರೂ ಇನ್ನೊಬ್ಬರನ್ನು ನಂಬುವುದಿಲ್ಲ. ಇದು ಮಾನವ ಸಹಜ ಗುಣ. ಕ್ರಮೇಣ ನಾವೇ ಅವರೊಂದಿಗೆ ಒಗ್ಗಿಕೊಂಡು ಹೋಗಬೇಕು. ಹಾಗೆಯೇ ಇವಳಲ್ಲೂ ಆಗಿತ್ತು.

ಈ ಮೊದಲು ಅಲ್ಲಿದ್ದ ಪ್ರಬಂಧಕ ಕೆಲವು ಅವ್ಯವಹಾರ ಮಾಡಿದ್ದರಿಂದ ಆ ಶಾಖೆಯು ನಷ್ಟ ಅನುಭವಿಸುತ್ತಿತ್ತು. ಹಾಗೆಯೇ ನಿಷ್ಪ್ರಯೋಜಕ ಆಸ್ತಿಗಳೂ (ನಾನ್ ಪರ‍್ಫಾರ‍್ಮಿಂಗ್ ಅಸೆಟ್ಸ್) ಜಾಸ್ತಿ ಆಗುತ್ತಿತ್ತು. ಇಂತಹ ಆಸ್ತಿಗಳಿಂದ ಬ್ಯಾಂಕಿಗೆ ವರಮಾನವೂ ಬರುವುದಿಲ್ಲ ಹಾಗೆಯೇ ಆ ಆಸ್ತಿಗಳಿಗಾಗಿ ಪ್ರಾವಧಾನವನ್ನೂ (ಪ್ರಾವಿಷನ್ಸ್) ಕೂಡಾ ಮಾಡಬೇಕಿತ್ತು. ಹೀಗಾಗಿ ಆ ಶಾಖೆಯು ಲಾಭ ಗಳಿಸುವುದಲ್ಲದೇ ನಷ್ಟವನ್ನೇ ಹೆಚ್ಚು ಹೆಚ್ಚು ಎದುರಿಸಿತ್ತಿತ್ತು. ಈಕೆಗೆ ಇದೆಲ್ಲದರಿಂದ ಹೊರ ಬಂದು ಲಾಭ ಮಾಡುವುದು ಒಂದು ದೊಡ್ಡ ಸವಾಲಾಗಿತ್ತು. ಇದೇ ಸಮಯದಲ್ಲಿ ವಿಶ್ವಕ್ಕೇ ಬಡಿದ ಮಹಾಮಾರಿ ಕೊರೊನಾದ ಕಾಟ ತಟ್ಟುತ್ತಿದೆ. ಸರ್ಕಾರದ ಆಜ್ಞೆಯಂತೆ ಪ್ರತಿನಿತ್ಯವೂ ಬ್ಯಾಂಕಿನ ಶಾಖೆ ಕಾರ್ಯ ನಿರ್ವಹಿಸಬೇಕು. ಈಕೆ ಪ್ರಬಂಧಕಳಾದ್ದರಿಂದ ಪ್ರತಿನಿತ್ಯವೂ ಶಾಖೆಗೆ ಹೋಗಬೇಕು. ಇತರೆ ಅಧಿಕಾರಿ ಯಾ ನೌಕರರು ಕೆಲವೊಮ್ಮೆ ಅನಾರೋಗ್ಯದ ನಿಮಿತ್ತ ರಜೆಯ ಮೇಲೆ ಹೋಗುತ್ತಿದ್ದರು, ಆದರೆ ಈಕೆ ಮಾತ್ರ ಅನಾರೋಗ್ಯವಿದ್ದರೂ ಕೆಲಸಕ್ಕೆ ಹೋಗಲೇಬೇಕಿತ್ತು. ಆ ಶಾಖೆ ಇದ್ದ ಸ್ಥಳದಲ್ಲಿ ಹೆಚ್ಚಿನದಾಗಿ ವಯಸ್ಸಾದವರೇ ವಾಸಿಸುತ್ತಿದ್ದರು. ಅವರಿಗೆಲ್ಲರಿಗೂ ಅದೇ ಶಾಖೆಯಲ್ಲಿ ಪಿಂಚಣಿ ಕೊಡುವ ವ್ಯವಸ್ಥೆ ಆಗಿತ್ತು. ಅವರಲ್ಲಿ ಕೆಲವರಿಗೆ ಮನೆಯಲ್ಲಿ ಕುಳಿತು ಬೇಜಾರೆಂದೂ, ಶಾಖೆಯಲ್ಲಿ ಹವಾನಿಯಂತ್ರಿತ ಮತ್ತು ದಿನಪತ್ರಿಕೆ ಓದುವ ವ್ಯವಸ್ಥೆ ಇದ್ದುದರಿಂದ, ಹೆಚ್ಚಿನ ಸಮಯವನ್ನೆಲ್ಲಾ ಶಾಖೆಯಲ್ಲಿಯೇ ಕಳೆಯುತ್ತಿದ್ದರು. ಸರಕಾರವು ಆಗಾಗ್ಯೆ ಲಾಕ್‍ಡೌನ್ ಮಾಡುತ್ತಿದ್ದುದರಿಂದ ಶಾಖೆಗೆ ಬಂದು ಹೋಗಲು ಸಾರಿಗೆ ವ್ಯವಸ್ಥೆಯೂ ದುಸ್ತರವಾಗಿತ್ತು. ಅದಲ್ಲದೇ ಪೊಲೀಸರ ಕಾಟವೂ ಇಲ್ಲದಿಲ್ಲ. ಮತ್ತೂ ಹೆಚ್ಚಿನದಾಗಿ ಶಾಖೆಯನ್ನು ಪ್ರತಿನಿತ್ಯ ಸ್ಯಾನಿಟೈಸ್ ಮಾಡಬೇಕು, ಬರುವ ಗ್ರಾಹಕರಲ್ಲಿ ಕೆಲವರು ಕೊರೊನಾ ರೋಗ ಪೀಡಿತರಿರಬಹುದು ಮತ್ತು ಅವರು ಶಾಖೆಯ ಸಿಬ್ಬಂದಿಗೆ ರೋಗ ತಗುಲಿಸದಂತೆ ಅವರಿಗೆ ದೂರದಿಂದಲೇ ವ್ಯವಹರಿಸುವಂತೆ ಮನದಟ್ಟು ಮಾಡಿಕೊಡಬೇಕು. ಅದೂ ಅಲ್ಲದೇ ಸರಕಾರವು ಘೋಷಿಸಿದ ಹೆಚ್ಚುವರಿ ಸಾಲಗಳನ್ನು ಗ್ರಾಹಕರಿಗೆ ಕೊಡಲು, ಅವರ ಅರ್ಜಿಗಳನ್ನು ಕೂಲಂಕುಷವಾಗಿ ಪರೀಕ್ಷಿಸಬೇಕು. ಕೆಲವು ಸಲ ಸಾಲ ತೆಗೆದುಕೊಂಡವರು ಸಾಂಕ್ರಾಮಿಕ ರೋಗದ ಹೆಸರಿನಲ್ಲಿ ಮರುಪಾವತಿ ಮಾಡದೆಯೂ ಇದ್ದು ಬ್ಯಾಂಕಿನ ಲಾಭಾಂಶಕ್ಕೆ ಹೊಡೆತ ಉಂಟು ಮಾಡಬಹುದು. ಇಂತಹ ಹಲವು ನಿದರ್ಶನಗಳೂ ಇವೆ.

ಯಾವತ್ತಾದ್ರೂ ಬ್ಯಾಂಕ್ ಮುಚ್ಚಿದೆಯಾ? ಅವರಿಗೆ ವರ್ಕ್ ಫ್ರಂ ಹೋಂ ಸೌಲಭ್ಯ ಕೊಡಬಹುದಾ, ಕೊಟ್ಟಿದ್ದೀವಾ? ಅದನ್ನು ಹೇಗೆ ಮಾಡಬಹುದು ಎಂದರೆ, ಎಲ್ಲಿಯವರೆವಿಗೆ ಬ್ಯಾಂಕಿಗೆ ಹೋಗಿ ಮಾಡುತ್ತಿದ್ದ ಕೆಲಸವನ್ನು ನಾವುಗಳು ಮನೆಯಲ್ಲಿಯೇ ಡಿಜಿಟಲ್ ಬ್ಯಾಂಕಿಂಗ್ ಮೂಲಕ ಯಾಕೆ ಮಾಡಬಾರದು. ಸರಕಾರವೂ ಇದಕ್ಕೆ ಹೆಚ್ಚು ಒತ್ತು ಕೊಡುತ್ತಿದೆ. ಇದು ಸಮಾಜದಲ್ಲಿ ಬಾಳುವ ನಮ್ಮ ಕರ್ತವ್ಯ ಅಲ್ಲವೇ!? ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಆನ್‍ಲೈನ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಇತ್ಯಾದಿಗಳ ಮೂಲಕ ಹಣಕಾಸಿನ ವ್ಯವಹಾರವನ್ನು ಬ್ಯಾಂಕಿನ ಶಾಖೆಗೆ ಹೋಗದೆಯೇ ಮಾಡಬಹುದು. ಬ್ಯಾಂಕಿನ ಆಡಳಿತ ಮಂಡಳಿ ಶಾಖೆಗಳನ್ನು ವಿಲೀನಗೊಳಿಸಿ ಕಡಿಮೆ ಸಂಖ್ಯೆಯಲ್ಲಿ ಶಾಖೆಗಳು ವ್ಯವಹಾರ ಮಾಡುವಂತೆ ಮಾಡಬಹುದು. ಇದರಿಂದ ನೌಕರರಿಗೂ ಅನುಕೂಲವಾಗುವುದು.

ಈಗ ಹೇಳಿ, ವೈದ್ಯರು ದಾದಿಯರು ಮತ್ತು ಕೊರೊನಾ ವಿರುದ್ಧ ಹೋರಾಡುತ್ತಿರುವ ಎಲ್ಲರನ್ನೂ ಮೊದಲ ಹಂತದ ಹೋರಾಟಗಾರರು (ಫ್ರಂಟ್ ಲೈನ್ ವಾರಿಯರ್ಸ್) ಎಂದು ಕರೆಯಬಹುದಾದರೆ, ಅವರಂತೆಯೇ ಸೇವೆ ಸಲ್ಲಿಸುತ್ತಿರುವ ಬ್ಯಾಂಕಿನ ಅಧಿಕಾರಿ ಮತ್ತು ನೌಕರರೂ ಕೊರೊನಾ ವಾರಿಯರ್ಸ್ ಅಲ್ಲವೇ? ಫ್ರಂಟ್ ಲೈನ್ ಅಲ್ಲದಿದ್ದರೂ ಸೆಕೆಂಡ್ ಲೈನ್‍ನಲ್ಲಿ ಆದರೂ ಇವರನ್ನು ಇರಿಸಬಹುದಲ್ಲವೇ? ವ್ಯವಹಾರ ಜಗತ್ತಿನಲ್ಲಿ ಅವರ ಪಾತ್ರ ಗಣನೀಯ.

ತಳುಕು ಶ್ರೀನಿವಾಸ ಅವರ ಅಂಕಣ ಬರಹ