ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ತಿರುಮಲೇಶರ ವಾಗರ್ಥವಿಲಾಸ

ಕೊಯ್ಲು ಮುಗಿದ ವಿಶಾಲವಾಗಿ ಹಬ್ಬಿ ಮಲಗಿದ್ದ ಗದ್ದೆಯ ನಡುವಿನಲ್ಲಿ ಏನೋ ಗಜಿಬಿಜಿ ಶುರುವಾಗಿತ್ತು. ಅದೇನೆಂದು ಕುತೂಹಲ ತಡೆಯದೆ ಹೋಗಿ ನೋಡಿದರೆ ಇನ್ನೆರೆಡು ದಿನದಲ್ಲಿ ಅಲ್ಲಿ ಯಕ್ಷಗಾನ ಎನ್ನುವ ಸುದ್ದಿ ಕೇಳಿ ಸಂಭ್ರಮ. ರಂಗ ಸಿದ್ಧವಾಗುವ ಮೊದಲೇ ನಾವೆಲ್ಲಿ ಕೂರುವುದು ಎನ್ನುವ ಕಿತ್ತಾಟ, ಇದು ನನ್ನ ಜಾಗ ಎಂದು ಗಡಿ ನಿರ್ಮಿಸುವ ಕೆಲಸ ಆಗಿಬಿಟ್ಟಿತ್ತು. ಆದಿನ ಬೆಳಿಗ್ಗೆಯಿಂದಲೇ ಕಣ್ಣು ಗಡಿಯಾರದ ಕಡೆ, ಯಾವಾಗ ರಾತ್ರಿ ಆಗುವುದೋ ಎನ್ನುವ ಕಾತುರ. ಏನು ತಿಂದೆವು ಎನ್ನುವುದೂ ಗೊತ್ತಾಗದ ಹಾಗೆ ನುಂಗಿ ನಮ್ಮ ಜಾಗಕ್ಕೆ ಓಡುವ ಹೊತ್ತಿಗೆ ರಂಗ ಪ್ರವೇಶ ಆಗಿ ಹೋಗಿತ್ತು. ನಮ್ಮದೆನ್ನುವ ಜಾಗ ಕಷ್ಟಪಟ್ಟು ಗುರುತಿಸಿ ತೆಗೆದುಕೊಂಡು ಹೋಗಿದ್ದ ಕಂಬಳಿ ಹಾಸಿ ಕುಳಿತರೆ ಇಡೀ ಜಗತ್ತೇ ಮರೆಯಾಗಿ ಹೊಸದೊಂದು ಲೋಕ ಕಣ್ಣೆದೆರು ಇಳಿದಂತೆ. ಯಕ್ಷ, ಗಂಧರ್ವ, ದೇವತೆ, ರಾಕ್ಷಸರು ಎಲ್ಲರೂ ಆ ಪುಟ್ಟ ರಂಗದಲ್ಲಿ ಬಂದು ಕುಣಿದು ಮೂರು ಲೋಕಗಳು ಒಂದೆಡೆ ಮೇಳೈಸಿ ಆ ವೈಭವಕ್ಕೆ ಕಣ್ಣು ಮುಚ್ಚಿ ಹೋಗುವಾಗ ಬಡಿಯುವ ಚೆಂಡೆ, ಏರುವ ಭಾಗವತರ ಸ್ವರ. ಅದೊಂದು ವಿಸ್ಮಯ ಲೋಕ. ಆ ವಿಸ್ಮಯ ಲೋಕದಲ್ಲಿ ಕತೆ ದಾರಿ ತಪ್ಪದ ಹಾಗೆ ಸರಿಯಾಗಿ ಕರೆದೊಯ್ಯುವವರು ಭಾಗವತರು. ಕತೆಯ ಲೋಕ ಬಿಚ್ಚಿಡುತ್ತಾ ಒಳ ನೋಟ ನಮಗೆ ಬಿಡುತ್ತಾ ಅಲ್ಲಲ್ಲಿ ದಾರಿ ತೋರಿಸುತ್ತಾ ಇಡೀ ಪ್ರಸಂಗದ ದರ್ಶನ ಮಾಡಿಸುವವರು ಅವರು. ಅಷ್ಟೇ ವಿಸ್ಮಯವಾದ ಸಾಹಿತ್ಯ ಲೋಕದ ಭಾಗವತರು ಕೆ.ವಿ ತಿರುಮಲೇಶ್ ಸರ್. ಅಂತದೊಂದು ಪ್ರಸಂಗ ವಾಗರ್ಥವಿಲಾಸ.

ಕಣ್ಣ ಮುಂದೆ ದಿವ್ಯಲೋಕ.”ವಾಗರ್ಥವಿವ ಸಂಪೃಕ್ತೌ, ವಾಗರ್ಥ ಪ್ರತಿಪತ್ತಯೇ..ವಾಕ್ ಮತ್ತು ಅರ್ಥ ಒಂದಕ್ಕೊಂದು ಪೂರಕ. ಅವೆರೆಡರ ನಡುವಿನ ಸಂಬಂಧ ಅರ್ಥವಾಗಬೇಕಾದರೆ ಭಾಷೆಯ ಬೆಳವಣಿಗೆ ತಿಳಿಯಬೇಕು. ಅದರ ವಿಸ್ತಾರ ತುಸುವಾದರೂ ತಿಳಿಯಬೇಕು. ಹಾಗಾದಾಗ ಮಾತ್ರ ಅದರ ಸರಿಯಾದ ಬಳಕೆ, ಅಗಾಧತೆ ಅರಿವಿಗೆ ಬರುತ್ತದೆ. ಅದನ್ನು ತಿಳಿಯುವ ಬಗೆ ಹೇಗೆ? ನೀರಿಳಿಯದ ಗಂಟಲಿಗೆ ಕಡುಬು ತುರುಕಿದ ಹಾಗಾಗಬಾರದು ಎಂದರೆ ಏನು ಮಾಡಬೇಕು? ಎನ್ನುವ ಪ್ರಶ್ನೆ ಸಹಜವಾಗಿಯೇ ಎದುರಾಗುತ್ತದೆ. ಭಾಷೆಯನ್ನು ಅರಿಯಲು ಸಾಹಿತ್ಯ ಕೀಲಿಕೈ. ಇದು ಕೂಡ ಬದುಕಿನ ಸತ್ಯದ ಹಾಗೆ ಒಬ್ಬೊಬ್ಬರಿಗೆ ಒಂದೊಂದು ಅರ್ಥ. ಆದರೆ ಸರ್ವ ದೇವ ನಮಸ್ಕಾರಃ ಕೇಶವಂ ಪ್ರತಿ ಗಚ್ಚತಿ ಅನ್ನುವ ಹಾಗೆ ಇವೆಲ್ಲವೂ ಅರಿವು ಮೂಡಿಸುವುದು ಮಾತ್ರ ನಿಜ. ಮೈಯಿಲ್ಲದ ಜೀವ ಹೇಗಿಲ್ಲವೋ ಹಾಗೆಯೇ ಶಬ್ದವಿಲ್ಲದೆ ಅರ್ಥವಿಲ್ಲ ಎನ್ನುತ್ತಾರೆ. ಎಲ್ಲವನ್ನೂ ವಿವರಿಸಲು ಸಾಧ್ಯವೇ? ಕೆಲವು ಅರ್ಥವನ್ನು ಮನಸ್ಸು ಗ್ರಹಿಸಬೇಕು. ವಿವರಿಸಿದರೆ ಅದರ ಸೊಬಗು ಕಳೆದುಹೋಗುತ್ತದೇನೋ ಅನ್ನಿಸುತ್ತದೆ.

ಉದಾ ಕದ್ದಿನ್ಗಳ , ಕಗ್ಗತ್ತಲ, ಕಾರ್ಗಾಲದ ರಾತ್ರಿ.. ಎನ್ನುವ ಪದ್ಯವನ್ನುವಿವರಿಸಿದರೆ ಇಲ್ಲಿ ಎಲ್ಲವೂ ಕತ್ತಲನ್ನು ವರ್ಣಿಸುವ ಶಬ್ದಗಳೇ ಆದರೆ ಒಂದೇ ಅರ್ಥವಾ.. ಇದೊಂದು ತರಹ ಮಂಜನ್ನು ಹಿಡಿಯಲು ಹೋದಂತೆ ಎನ್ನುತ್ತಾರೆ ತಿರುಮಲೇಶ್ ಸರ್.

ಯಾವುದು ಓದಬೇಕು? ಹೇಗೆ ಓದಬೇಕು? ಹೇಗೆ ಗ್ರಹಿಸಬೇಕು ಎನ್ನುವುದಕ್ಕೆ ಅದ್ಭುತ ಮಾರ್ಗದರ್ಶಿ ಮಾತ್ರ ವಾಗರ್ಥವಿಲಾಸ. ಭಾಗವತರು ಎಲ್ಲವನ್ನೂ ವಿವರಿಸಿದರೂ ಕೆಲವಷ್ಟು ನಮ್ಮ ಗ್ರಹಿಕೆಗೆ ಬಿಡುವ ಹಾಗೆ.ಓದುವುದು ಹೇಗೆ? ಕೈ ಸಿಕ್ಕ ಪುಸ್ತಕವನ್ನು ಒಂದೇ ಉಸಿರಿಗೆ ಓದಿಕೊಂಡು ಹೋಗುವುದು ಸಹಜವಾಗಿ ಎಲ್ಲರೂ ಮಾಡುತ್ತೇವೆ. ಕೊಂಚ ಆಳಕ್ಕೆ ಇಳಿದರೆ ತುಲನಾತ್ಮಕ ಅಧ್ಯಯನದ ಹೊಳವು ಸಿಗುತ್ತದೆ. ಇದು ಹೇಗೆ ಭಿನ್ನ, ಭಾಷೆಯ ಬಳಕೆ, ಮನೋಧರ್ಮ, ಸಾಮ್ಯತೆ, ವೈವಿದ್ಯತೆ ಎಲ್ಲವೂ ಅರ್ಥವಾಗುತ್ತದೆ. ಉದಾ : ಗೋರೂರರ ನಮ್ಮ ಊರಿನ ರಸಿಕರು, ಹಾಗೂ ಯು.ಆರ್ ಅನಂತ ಮೂರ್ತಿ ಅವರ ಸಂಸ್ಕಾರ ಇವೆರೆಡು ಸೇರುವ ಸ್ಥಳ ಆಂಜನೇಯನ ಗುಡಿ ಎಂದು ಓದುವಾಗ ಒಮ್ಮೆ ಮೈ ನವಿರೇಳುತ್ತದೆ. ಮಧ್ಯದಲ್ಲೆಲ್ಲೋ ಯಕ್ಷಗಾನ ನೋಡುತ್ತಲೇ ನಿದ್ದೆ ಹೋದವರನ್ನು ಚೆಂಡೆಯ ಸದ್ದು ಬಡಿದೆಬ್ಬಿಸುವ ಹಾಗೆ ಈ ಸಾಲು ನಮ್ಮನ್ನು ಎಚ್ಚರಿಸುತ್ತದೆ. ಅರೆ ಹೌದಲ್ವಾ ಅನ್ನಿಸುತ್ತದೆ. ಅಲ್ಲಿಂದ ಹೊಸದೊಂದು ಹೊಳವು ಹೊಳೆಯುತ್ತದೆ. ಕಣ್ಣುಜ್ಜಿಕೊಂಡು ಯಕ್ಷಗಾನ ನೋಡುವುದು ಮುಂದುವರೆಸುವ ಹಾಗೆ ಓದುವಾಗ ಎಚ್ಚರ.

ಸುಮ್ಮನೆ ಓದುವುದಕ್ಕೂ ಹೀಗೆ ಓದುವುದಕ್ಕೂ ಇರುವ ಅಗಾಧ ವ್ಯತ್ಯಾಸ ಅದರ ಪರಿಣಾಮ ಎಲ್ಲವೂ ಹೊಸ ಹುಮ್ಮಸ್ಸು ನೀಡುವುದರಲ್ಲಿ ಆಶ್ಚರ್ಯವಿಲ್ಲ. ನೋಟ ಭಾವ ಎರಡೂ ಬದಲಾದಾಗ ಗಮ್ಯದಲ್ಲಿ ಮತ್ತೇನೋ ಹೊಸತು. ಕತೆ ಇನ್ನಷ್ಟು ಅರ್ಥವಾದ ಹಾಗೆ ಓದು ಮತ್ತಷ್ಟು ದಕ್ಕುತ್ತದೆ. ಇಂಥದೊಂದು ಕಾಣ್ಕೆ ವಾಗರ್ಥವಿಲಾಸದಲ್ಲಿದೆ.ಈ ಜಗತ್ತಿನ ಯಾವ ಮೂಲೆಯಲ್ಲಾದರೂ ವಾಸಿಸುವ, ದೇಶ, ಭಾಷೆ, ಸಂಸ್ಕೃತಿ ಜೀವನ ಪದ್ಧತಿಗಳೆಲ್ಲವೂ ಬೇರೆಯಾದರೂ ಕೆಲವಷ್ಟು ವಿಷಯಗಳಲ್ಲಿ ಎಲ್ಲರ ಭಾವ ಒಂದೇ. ಮನುಕುಲ ಒಂದೇ. ವರ್ಡ್ಸ್ ವರ್ಥ್ ಕವನಗಳನ್ನು ಅವರು ವಿವರಿಸುತ್ತಾ ಅಮೃತವಾಹಿನಿಯೊಂದು ಹರಿಯುತಿದೆ ಎದೆಯಿಂದ ಎದೆಗೆ ಸತತ ಎನ್ನುತ್ತಾರೆ. ಅವನ ಮೈಖೇಲ್ ಕವನದ ಬಗ್ಗೆ ಬರೆದದ್ದು ಓದುವಾಗ, ಪ್ರಕೃತಿಯ ವರ್ಣಿಸುವುದು ನೋಡಿದಾಗ ಮನಸ್ಸು ಅನಾಯಾಸವಾಗಿ ಸದ್ದಿರದ ಪಸುರೆಡೆಯ ಮಲೆನಾಡ ಬನಗಳಲ್ಲಿ ಎನ್ನುವ ಸಾಲು ಗುನುಗುನಿಸುತ್ತದೆ. ಪೇಟೆಗೆ ಹೋದ ಮಗ ಬಾರದೆ ಹೋದದ್ದು ಓದುವಾಗ ನಮ್ಮ ಊರು ನೆನಪಾಗುತ್ತದೆ. ಮಕ್ಕಳ ಬರುವಿಗಾಗಿ ಕಾಯುವ ತಾವು ಹುಟ್ಟಿ ಬೆಳೆದ ಜಾಗ ಕೃಷಿ, ಕೆಲಸ ಬಿಡಲಾಗದ ವೃದ್ಧರು ನೆನಪಾಗುತ್ತಾರೆ. ಪ್ರಸಂಗ ಬೇರೆಯಾದರೂ ಕತೆ ಉಪಕಥೆಗಳು ನೂರಾರು ಇದ್ದರೂ ಯಕ್ಷಗಾನದ ಉದ್ದೇಶ ಮೌಲ್ಯಗಳನ್ನು ಎತ್ತಿ ಹಿಡಿಯುವುದೇ.ಎಂದು ಅರಿವಾದಾಗ ಅಮೃತದ ಸಿಹಿ ಅರ್ಥವಾಗುತ್ತದೆ. ಶರ್ಮರ ಕವನ ಓದುವಾಗ ಗ್ರೀಕ್ ಪುರಾಣ ಅರ್ಥವಾಗುತ್ತದೆ ಎನ್ನುವುದು ನೋಡಿದಾಗ ಸಾಹಿತ್ಯ ಅಧ್ಯಯನ ಎಂದರೆ ಇಡೀ ಮನುಕುಲದ ಅಧ್ಯಯನವಲ್ಲವೇ ಎನ್ನಿಸಿ ಅಚ್ಚರಿ ಆವರಿಸಿಕೊಳ್ಳುತ್ತದೆ.

“ಆ ನೋ ಭದ್ರಾ ಕೃತವೋ ಯಂತು ವಿಶ್ವತಃ ” ಒಳ್ಳೆಯದು ಜಗತ್ತಿನ ಎಲ್ಲೆಡೆಯಿಂದ ಹರಿದು ಬರಲಿ ಎನ್ನುವುದು ಹಿರಿಯರ ಬಯಕೆ. ಬದುಕಿನ ರೀತಿ ಕೂಡ. ಬೇರೆಡೆಯಿಂದ ಬಂದ ಒಳ್ಳೆಯದು ನಮ್ಮ ಬೆಳವಣಿಗೆಗೆ ಪೂರಕವಾದರೆ ಒಪ್ಪಿಕೊಳ್ಳಬೇಕು ಎನ್ನುವ ಬಿ ಎಂ ಶ್ರೀ ಅವರ ಭಾವ, ಅದರ ಫಲವಾಗಿ ಬಂದ ಅವರ ಸಾಹಿತ್ಯ ಕನ್ನಡದ ಬೆಳವಣಿಗೆಗೆ ಹೇಗೆ ಸಹಾಯ ಮಾಡಿತು ಎನ್ನುವುದರ ಬಗ್ಗೆ, ನಮ್ಮ ಭಾಷೆ ಇಷ್ಟು ಶ್ರೀಮಂತವಾಗಲು ಯಾರ್ಯಾರ ಕೊಡುಗೆ ಹೇಗಿತ್ತು ಎಷ್ಟಿತ್ತು ಎನ್ನುವುದರ ಬಗ್ಗೆ ಚೆಂದವಾಗಿ ಹೇಳುತ್ತಲೇ ನಮ್ಮ ದಾರಿಯನ್ನು ಓದುವ ಬಗೆಯನ್ನು ನಿಚ್ಚಳಗೊಳಿಸುತ್ತಾರೆ. ಕತೆಯ ಒಳಗೆ ಬರುವ ಉಪಕಥೆಗಳು, ಹೊಸ ಹೊಸ ಪಾತ್ರಗಳು, ಆ ಕ್ಷಣಕ್ಕೆ ಬರುವ ಆಶುಕವಿತೆಗಳು ಎಲ್ಲವೂ ಪ್ರಸಂಗವನ್ನು ಇನ್ನಷ್ಟು ಶ್ರೀಮಂತಗೊಳಿಸುವ ಹಾಗೆ. ಯಾವುದರ ಬಗ್ಗೆಯೂ ಉತ್ಪ್ರೇಕ್ಷೆಯಿಲ್ಲ. ಏನೋ ಗಹನವಾದದ್ದು ಹೇಳುತ್ತಿದ್ದೇನೆ ಎಂಬ ಗರ್ವವಿಲ್ಲ. ತನ್ನ ಅಧ್ಯಯನದ ವಿಸ್ತಾರ ತಿಳಿಸುವ ಪಾಂಡಿತ್ಯದ ಪದಗಳಿಲ್ಲ. ಸರಳವಾಗಿ ಸ್ಪುಟವಾಗಿ ಎದುರಿಗೆ ಕುಳಿತು ಹಿರಿಯರೊಬ್ಬರು ಮಾತಾಡುವ ಹಾಗಿದೆ. ಇದೆ ಸರಿ ಎನ್ನುವ ಅಹಂ ಆಗಲಿ, ಒಪ್ಪಲೇ ಬೇಕು ಎನ್ನುವ ಬಲವಂತವಾಗಲಿ ಯಾವುದೂ ಇಲ್ಲದೆ ಸಹಜವಾಗಿ ಹೇಳುತ್ತಾ ಹೋದ ಹಾಗಿದೆ. ಕೇಳಿಸಿಕೊಳ್ಳುವ ನಮಗೆ ನಮ್ಮ ಅರಿವಿನ ವಿಸ್ತಾರ ಹೇಗೆ ವಿಸ್ತರಿಸಿಕೊಳ್ಳಬೇಕು ಎನ್ನುವ ಮಾರ್ಗಸೂಚಿ ಮಾತ್ರ ಸಿಕ್ಕುತ್ತಾ ಹೋಗುತ್ತದೆ. ಹೇಗೆ ಗ್ರಹಿಸಬೇಕು ಎನ್ನುವುದು ಅರಿವಿಗೆ ಬಾರದಂತೆ ದಕ್ಕುತ್ತಾ ಹೋಗುತ್ತದೆ. ಅವರೇ ಹೇಳಿದ ಹಾಗೆ ಒಂದು ಕೃತಿಯನ್ನು ಗಮನವಿಟ್ಟು ಓದಿ ಅದರ ಕುರಿತು ಇತರರಿಗೆ ಮನದಟ್ಟಾಗುವಂತೆ ಬರೆಯುವುದೆಂದರೆ ಅದೊಂದು ಸ್ವಯಂ ಶಿಕ್ಷಣ. ಹಾಗಾಗಿ ಇದು ಕೆರೆಯ ನೀರನು ಕೆರೆಗೆ ಚೆಲ್ಲುವ ಪ್ರಯತ್ನ ಅಷ್ಟೇ. ಆದರೆ ಇದು ಖಂಡಿತ ಕೆರೆಯಲ್ಲ. ವಿಸ್ತಾರ ಸಾಗರವನ್ನು ಪರಿಚಯಿಸುತ್ತಾ ಸುರಕ್ಷಿತವಾಗಿ ದಾಟಿಸುವ ಹಾಯಿದೋಣಿ. ಪ್ರತಿಯೊಂದಕ್ಕೂ ಪ್ರವೇಶಿಕೆ ಮುಖ್ಯ. ಸರಿಯಾದ ದಾರಿಯಲ್ಲಿ ಸಾಗಿದರೆ ಮಾತ್ರ ಚಕ್ರವ್ಯೂಹ ಭೇಧಿಸಲು ಸಾಧ್ಯ. ಗಂಭೀರ ಸಾಹಿತ್ಯವೂ ಚಕ್ರವ್ಯೂಹದ ತರಹವೇ. ಸೂಕ್ತ ಪ್ರವೇಶಿಕ ಸಿಗದೇ ಹೋದರೆ ದಾರಿ ತಪ್ಪುವ ಅಥವಾ ದಾರಿಯೇ ತಿಳಿಯದ ಪರಿಸ್ಥಿತಿ. ಅವರೇ ಒಂದು ಕಡೆ ಉಲ್ಲೇಖಿಸಿದ ಹಾಗೆ ಅರ್ಧ ದೃಷ್ಟಿ ಅನರ್ಥಕಾರಿ. ಪೂರ್ಣದೃಷ್ಟಿ ಶ್ರೇಯಸ್ಸು. ಹಾಗಾಗಿ ವಾಗಾರ್ಥವಿಲಾಸ ಚಕ್ರವ್ಯೂಹ ಭೇಧಿಸುವ ಕಲೆ ಹೇಳಿಕೊಡುತ್ತದೆ. ಅಗಾಧ ಪಾಂಡಿತ್ಯ, ವಿಸ್ತಾರವಾದ ಅಧ್ಯಯನ, ಸಾಹಿತ್ಯದ ಆಲ್ಮೋಸ್ಟ್ ಎಲ್ಲಾ ಪ್ರಕಾರಗಳ್ಲಲೂ ಬರವಣಿಗೆ, ಭಾಷಾ ಜ್ಞಾನ ಎಲ್ಲವೂ ಇದ್ದರೂ ಕವಿತೆ ಹೇಗೆ ಬರೆಯಬೇಕು? ನಿಜಕ್ಕೂ ಕವಿತೆ ಎಂದರೇನು? ಅದು ಹೇಗೆ ಬರುತ್ತದೆ, ಓದುಗರು ಯಾಕೆ ಸ್ವೀಕರಿಸುತ್ತಾರೆ? ಯಾಕೆ ತಿರಸ್ಕರಿಸುತ್ತಾರೆ ಎನ್ನುವುದು ನನಗೆ ಗೊತ್ತಿಲ್ಲ. ಗೊತ್ತಿರುತ್ತಿದ್ದರೆ ಬಹುಶಃ ನಾನು ಬರೆಯಲು ಹೊರಡುತ್ತಿರಲಿಲ್ಲ. ಯಾಕೆಂದರೆ ಆಮೇಲೆ ಕವಿತೆ ಮರುಕಳಿಸುತ್ತದೆ ವಿನಃ ಸೃಷ್ಟಿಯಾಗುವುದಿಲ್ಲ. ಎನ್ನುವಲ್ಲಿನ ಅವರ ವಿನಯ ಇರಬೇಕಾಗಿದ್ದು ಹೇಗೆ ಎನ್ನುವುದನ್ನು ಹೇಳದೆಯೇ ಕಲಿಸುತ್ತದೆ. ಸಾಹಿತ್ಯಲೋಕದಲ್ಲೊಂದು ವಾಚನಶಾಲೆಯನ್ನು ಕಟ್ಟಿದವರು ಅವರು. ಬಂದವರಿಗೆಲ್ಲರಿಗೂ ಗುರುವಾದವರು, ಮಾರ್ಗ ತೋರಿದವರು ಅವರು. ನಾವೆಷ್ಟು ಕಲಿಯುತ್ತೇವೆ ಅನ್ನುವುದು ಮಾತ್ರ ನಮ್ಮ ನಮ್ಮ ಬುದ್ಧಿಮತ್ತೆಗೆ ಬಿಟ್ಟದ್ದು. “ಯಾವುದೂ ಪರಿಪೂರ್ಣವಾಗಿ ಇರಬಾರದು ಹಾಗೆ ಕಾಣಿಸಲೂ ಬಾರದು” ಎನ್ನುವ ಅವರದೊಂದು ಸಾಲು ಹಿಡಿದು ಕುಳಿತಿದ್ದೇನೆ. ಎಷ್ಟೊಂದು ಅರ್ಥ ಎಷ್ಟು ನಿಗೂಢ. ತಿರುಮಲೇಶರು ಕವಿತೆಯಿದ್ದ ಹಾಗೆ. ಬಿಡಿಯಾಗಿ ಕಂಡರೂ ಇಡಿಯಾಗಿ ಒಳಗೊಳ್ಳುವ ವ್ಯಕ್ತಿತ್ವ ಉಳ್ಳವರು. ಯಕ್ಷಗಾನ ಮುಗಿಸಿ ಕನಸಿನಲೋಕದಿಂದ ಹೊರಬರುವಾಗ ಕಾಣಿಸುವ ಬೆಳ್ಳಿರೇಖೆಯಂತೆ, ಯಾವುದೋ ಲೋಕದಿಂದ ಇಳಿದುಬಂದಹಾಗೆ, ಹೊಸ ಹೊಳವು ತಿಳಿದ ಉಲ್ಲಾಸದದಂತೆ ನೋಡಿದ ಪ್ರಸಂಗ ಹೇಗೆ ಮನಸ್ಸಿನಲ್ಲಿ ಬಹುಕಾಲ ಉಳಿದುಬಿಡುತ್ತದೋ ಹಾಗೆಯೇ ವಾಗರ್ಥವಿಲಾಸ ಅಚ್ಚಳಿಯದೆ ಉಳಿದುಬಿಡುತ್ತದೆ.