- ಚಾಚಾ ನೆಹರು ಮತ್ತು ನಮ್ಮ ಮಕ್ಕಳು - ನವೆಂಬರ್ 14, 2023
- ಮಾನವತಾವಾದಿಯ ಹೆಜ್ಜೆಗಳು……. - ಏಪ್ರಿಲ್ 14, 2021
- ಯುಗಾದಿ – ಎರಡು ಹಾದಿ… - ಏಪ್ರಿಲ್ 13, 2021
ಭಾವನೆಗಳು ಅಕ್ಷರ ರೂಪದ ಸಾಹಿತ್ಯವಾಗಿ ಮೂಡಿದ ಮೇಲೆ ಆ ಅಕ್ಷರಗಳು ಮತ್ತೆ ಭಾವನೆಗಳಾಗಿ ಹಾಡಿನ ಮೂಲಕ ಪರಿವರ್ತನೆ ಹೊಂದಿ ಕೆಲವೊಮ್ಮೆ ಮತ್ತೆ ಅಕ್ಷರಗಳಾಗಿ ಮತ್ತೆ ಭಾವನೆಗಳಾಗುವ ಸರಪಳಿಯ ಕೊಂಡಿಯೊಂದು ಕಳಚಿದೆ……
ಸುಮಾರು ಅರ್ಧ ಶತಮಾನಗಳ ಮನರಂಜನಾ ಮಾಧ್ಯಮದ ಲೋಕದಲ್ಲಿ ಮಿನುಗಿ ಜನಪ್ರಿಯರಾಗಿದ್ದ , ಎಷ್ಟೋ ಜನರ ಪಾಲಿನ ನೋವು ನಲಿವುಗಳ, ನೀರವ ರಾತ್ರಿಗಳ, ಬೆಳದಿಂಗಳ ಕಲರವದ, ಪ್ರೀತಿ ಪ್ರೇಮ ಪ್ರಣಯ ವಿರಹಗಳಲ್ಲಿ , ಕೆಲವೊಮ್ಮೆ ಭಕ್ತಿ ವೈರಾಗ್ಯಗಳೊಂದಿಗೆ ಸದಾ ಜೊತೆಯಾಗಿದ್ದ ಧ್ವನಿಯೊಂದು ಹಾಡುವುದನ್ನು ನಿಲ್ಲಿಸಿದೆ….
ಕೆಲವು ಅಪರೂಪದ ಸ್ವಾಭಾವಿಕ ಪ್ರತಿಭೆಗಳು ಎಲ್ಲಾ ಕ್ಷೇತ್ರಗಳಲ್ಲೂ ಉದಯಿಸಿವೆ. ಹೆಚ್ಚು ಶ್ರಮವಿಲ್ಲದೆ, ( ಅವರ ಪ್ರತಿಭೆಯ ಕಾರಣದಿಂದಾಗಿ ) ಆದರೆ ಶ್ರದ್ಧೆ ಮತ್ತು ಸಮರ್ಪಣಾ ಮನೋಭಾವದಿಂದ ತುಂಬಾ ಸರಳವಾಗಿ ಆ ಪ್ರತಿಭೆಯನ್ನು ದುಡಿಸಿಕೊಂಡಿದ್ದಾರೆ.
ಅಂತಹವರಲ್ಲಿ ಒಬ್ಬರು ಎಸ್. ಪಿ. ಬಾಲಸುಬ್ರಹ್ಮಣ್ಯಂ.
ಎಲ್ಲಾ ಮಾಧ್ಯಮಗಳಲ್ಲಿ ಜಾಲತಾಣಗಳಲ್ಲಿ ಅವರ ಬಗ್ಗೆ ಸಾಕಷ್ಟು ವಿಷಯಗಳು ಚರ್ಚಿತವಾಗುತ್ತಿದೆ. ಆದ್ದರಿಂದ ಈ ಸಂದರ್ಭದಲ್ಲಿ ಇದಕ್ಕಿಂತ ಹೆಚ್ಚಿಗೆ ಹೇಳಲು ಮತ್ತೇನು ಉಳಿದಿಲ್ಲ.
ಆದರೆ ಇದೇ ಸಂದರ್ಭದಲ್ಲಿ ಮಾಧ್ಯಮಗಳು ಮತ್ತು ಜನರು 2020 ಎಂಬ ವರ್ಷವನ್ನು ಅತ್ಯಂತ ಕೆಟ್ಟ ವರ್ಷ ಎಂಬುದಾಗಿ ಹೇಳುತ್ತಿದ್ದಾರೆ.
ಇದು ನಿಜವೇ ? ಹಾಗೆ ಪರಿಗಣಿಸಬಹುದೆ ? ಕೊರೋನಾ ಎಂಬ ವೈರಸ್ ಮತ್ತು ಅದರ ಆಕ್ರಮಣದಿಂದ ಆಗುತ್ತಿರುವ ಪರಿಣಾಮಗಳನ್ನು ಗಮನಿಸಿ ಹೀಗೆ ಹೇಳಬಹುದೆ ? ಪ್ರಕೃತಿ ಮುನಿದಿದೆಯೇ ?
ಸೃಷ್ಟಿಯ ಇತಿಹಾಸ ತಿಳಿಯದ ಅಥವಾ ಅದರ ಬಗ್ಗೆ ಯೋಚಿಸದ ಜನರ ಭಾವನಾತ್ಮಕ ಅಭಿಪ್ರಾಯ 2020 ಅತ್ಯಂತ ಕಠಿಣ ವರ್ಷ ಎಂಬುದು.
ಆದರೆ ಸಾವಿರಾರು ವರ್ಷಗಳ ಇತಿಹಾಸವಿರುವ ಈ ಭೂಮಿಯ ಮೇಲೆ ಇಂತಹ ಲಕ್ಷಾಂತರ ಘಟನೆಗಳು ಕಾಲಕಾಲಕ್ಕೆ ನಡೆಯುತ್ತಲೇ ಇದೆ. ಪ್ರವಾಹ, ಸುನಾಮಿ, ಭೂಕಂಪ, ಬಿರುಗಾಳಿ, ಬರಗಾಲ, ಮೇಘ ಸ್ಪೋಟ, ಪ್ಲೇಗು, ಕಾಲರ, ಸಿಡುಬು, ಫೋಲಿಯೋ, ಏಡ್ಸ್, ಭೀಕರ ಯುದ್ದಗಳು, ದಾಳಿಗಳು ಆಗಾಗ ನಡೆಯುತ್ತಲೇ ಇರುತ್ತದೆ. ಇದೇನು ಹೊಸದಲ್ಲ. ರಾಜ ಮಹಾರಾಜರ ಕಾಲದಲ್ಲಿ ಯಾವುದೋ ರಾಜನೊಬ್ಬ ಕಾರಣವೇ ಇಲ್ಲದೆ ಇನ್ನೊಂದು ರಾಜ್ಯಕ್ಕೆ ನುಗ್ಗಿ ರಕ್ತ ಪಾತಗಳನ್ನು ಮಾಡುತ್ತಿದ್ದುದು ಇದಕ್ಕಿಂತ ಭಯಂಕರ ವರ್ಷಗಳಲ್ಲವೇ…….
ಕಾಡು ಪ್ರಾಣಿಗಳು ದಿಢೀರನೆ ನುಗ್ಗಿ ಮನುಷ್ಯರನ್ನು ಕೊಂದು ತಿನ್ನುತ್ತಿರಲಿಲ್ಲವೇ ಹಾಗೆ ಕೊರೋನಾ ವೈರಸ್ ಈಗ ಸ್ವಲ್ಪ ಹೆಚ್ಚಿನ ಹಾನಿ ಮಾಡುತ್ತಿದೆ. ಮುಖ್ಯವಾಗಿ ಬಡವ ಶ್ರೀಮಂತ ಸಾಧಕ ಸೋಮಾರಿ ಜಾತಿ ಧರ್ಮ ಭಾಷೆ ಎನ್ನದೆ ಬಹುತೇಕ ದುರ್ಬಲ ದೇಹಗಳ ಮೇಲೆ ದಾಳಿ ಮಾಡುತ್ತಿದೆ. ಒಟ್ಟು ಜನಸಂಖ್ಯೆಯಲ್ಲಿ ಸುಮಾರು ಶೇಕಡ 2% ಸಾವನ್ನು ಉಂಟುಮಾಡುತ್ತಿದೆ ಮತ್ತು ಅದಕ್ಕೆ ಔಷಧಿ ಸಹ ಇನ್ನೂ ಸಿಗುತ್ತಿಲ್ಲ. ಇದು ಸೃಷ್ಟಿಯ ಒಂದು ಸಹಜ ಸ್ವಭಾವ ಮತ್ತು ಬದುಕಿನ ಭಾಗ. ಲಾಕ್ ಡೌನ್ ಮತ್ತು ಅದರಿಂದಾಗಿ ಮನುಷ್ಯ ಹೇರಿಕೊಂಡ ನಿಯಮಗಳು ಸಾವಿನ ಭಯದಿಂದ ಮನುಷ್ಯ ಮಾಡಿಕೊಂಡ ಎಡವಟ್ಟುಗಳು ಮಾತ್ರ. ಇದರಿಂದಾಗಿ ಸಾಕಷ್ಟು ಆರ್ಥಿಕ ತೊಂದರೆಗಳು ಸಹ ಸೃಷ್ಟಿಯಾಗಿದೆ.
ಒಂದು ನೆನಪಿಡಿ, ಸೃಷ್ಟಿಯ ಯಾವುದೇ ಮೂಲಗಳು ಸಹ ನಮಗೆ ಹೀಗೆ ಹೀಗೆ ನಿಶ್ಚಿತವಾಗಿ ನಮ್ಮ ಬದುಕುಗಳು ಇರುತ್ತವೆ, ವಾಸಿಸಲು ಬಂಗಲೆಗಳು, ಊಟ ಮಾಡಲು ಭಕ್ಷ್ಯ ಭೋಜನಗಳು, ತಿರುಗಾಡಲು ವಾಹನಗಳು, ಮನರಂಜನೆಗೆ ಮಾಲು ಥಿಯೇಟರ್ ಗಳು, ರಕ್ಷಣೆಗೆ ಮಿಲಿಟರಿ ಪೋಲೀಸರು ಮುಂತಾದ ಒಪ್ಪಂದ ಮಾಡಿಕೊಂಡಿಲ್ಲ. ಏನೋ ನಾವೇ ಒಂದಷ್ಟು ಅನುಭವದಿಂದ ಪಾಠ ಕಲಿತು ಸುಖಮಯ ಜೀವನಕ್ಕಾಗಿ ಕೆಲವು ಸೌಕರ್ಯಗಳನ್ನು ಮಾಡಿಕೊಂಡಿದ್ದೇವೆ. ಅದು ತಾತ್ಕಾಲಿಕ ಎಂಬುದನ್ನು ಮರೆತು ಶಾಶ್ವತ ಎಂದು ಪರಿಗಣಿಸಿದ ಪರಿಣಾಮ ಈಗ ಬಹಳಷ್ಟು ಜನರಿಗೆ ತುಂಬಾ ಕೆಟ್ಟ ವರ್ಷ ಎಂಬ ಭಯ ಮತ್ತು ಭ್ರಮೆ ಸೃಷ್ಟಿಯಾಗಿದೆ.
ಯಾರು ಆತಂಕ ಪಡುವ ಅಗತ್ಯವಿಲ್ಲ. ನಮ್ಮ ಜೀವನ ಇಂತಿಷ್ಟು ವರ್ಷಗಳ ಪಯಣ ಎಂದು ಯಾರು ಖಚಿತವಾಗಿ ಭರವಸೆ ನೀಡಿಲ್ಲ. ಅದು ಇದೇ ರೀತಿ ಇರುತ್ತದೆ ಎಂದೂ ಹೇಳಿಲ್ಲ. ತಾಯಿಯ ಹೊಟ್ಟೆಯಲ್ಲಿ ಭ್ರೂಣದ ರೂಪ ಪಡೆದ ಮೇಲೆ ಅಲ್ಲಿಂದ ಸುಮಾರು 100 ವರ್ಷಗಳು ಜೀವಿಸಬಹುದು ಎಂದು ಅನುಭವದ ಇತಿಹಾಸ ಹೇಳುತ್ತದೆ ಮತ್ತು ಅದೇ ಇತಿಹಾಸ ಭ್ರೂಣದಿಂದ ನೂರು ವರ್ಷಗಳ ಒಳಗೆ ಯಾವಾಗ ಬೇಕಾದರು, ಯಾವ ರೂಪದಲ್ಲಿ ಬೇಕಾದರು, ಯಾವ ಕಾರಣದಿಂದ ಬೇಕಾದರೂ ದೇಹ ಸಾವನ್ನಪ್ಪಿ ಪ್ರಕೃತಿಯಲ್ಲಿ ಲೀನವಾಗಬಹುದು ಎಂದು ತಿಳಿಸಿಕೊಟ್ಟದೆ.
ಆದ್ದರಿಂದ ಯಾರೋ ಏನೋ ಕಲ್ಪಿಸಿಕೊಂಡು ಸಾವುಗಳನ್ನು ನೋಡಿ ಭಯದಿಂದ ಕೆಟ್ಟ ವರ್ಷ ಎನ್ನುವುದಕ್ಕೆ ಮಹತ್ವ ಕೊಡಬೇಕಾಗಿಲ್ಲ. ಹುಟ್ಟಿದ ತಕ್ಷಣ ಪ್ರತಿ ಜೀವಿ ಸಾಗುವುದು ಸಾವಿನ ಕಡೆಗೆ. ಅದು ಎಂದು ಹೇಗೆ ಯಾವಾಗ ಬರಬಹುದು ಎಂದು ಸಾಮಾನ್ಯವಾಗಿ ಊಹಿಸುವುದು ಕಷ್ಟ. ಆದರೆ ಕೆಲವು ದುರ್ಘಟನೆಗಳನ್ನು ಹೊರತುಪಡಿಸಿ ಮನುಷ್ಯ ಪ್ರಾಣಿಗಳಲ್ಲಿ ಬಹುತೇಕ ಜನರ ಆಯಸ್ಸು ಸುಮಾರು 60 ರಿಂದ 80 ವರ್ಷಗಳು. ಆ ಭರವಸೆಯೊಂದಿಗೆ ಉಳಿದ ಬದುಕನ್ನು ಮುನ್ನಡೆಸೋಣ. ನಮ್ಮೆಲ್ಲರ ಎಚ್ಚರಿಕೆ, ಪ್ರಯತ್ನದ ನಡುವೆಯೂ ಸಾವು ಬಂದರೆ ಅದನ್ನು ತಡೆಯಲು ಸಾಧ್ಯವಿಲ್ಲ.
ದಯವಿಟ್ಟು ಯಾರು ಅನವಶ್ಯಕ ಆತಂಕಗೊಂಡು ಮುಂದಿರುವ ದಿನಗಳನ್ನು ಸಹ ವ್ಯರ್ಥ ಮಾಡಿಕೊಳ್ಳದಿರಿ. ಹುಟ್ಟು ಆಕಸ್ಮಿಕ ಸಾವು ಅನಿವಾರ್ಯ. ಇದನ್ನು ಸ್ವೀಕರಿಸುವುದು ಅಷ್ಟು ಸುಲಭವಲ್ಲ ನಿಜ. ಆದರೆ ಅನಿವಾರ್ಯ. ತೀರಾ ಹತ್ತಿರದವರು, ನಮ್ಮ ಪ್ರೀತಿ ಪಾತ್ರರು ಸತ್ತಾಗ ದುಃಖವಾಗುತ್ತದೆ. ಅದನ್ನು ಅನುಭವಿಸೋಣ. ಹಾಗೆಯೇ ಸೃಷ್ಟಿಯ ಸಹಜ ನಿಯಮವನ್ನು ಒಪ್ಪಿಕೊಂಡು ಮುನ್ನಡೆಯೋಣ.
ಕೊರೋನಾ ಅಥವಾ ಇನ್ನಾವುದೇ ಶತ್ರುಗಳು ಅಥವಾ ಪರಿಸ್ಥಿತಿ ಬರಲಿ ಕೊನೆ ಉಸಿರಿನ ತನಕ ಹೋರಾಡುತ್ತಲೇ ಇರೋಣ ಅದರ ಮಧ್ಯೆ ಬದುಕಿನ ಸವಿಯನ್ನು ಅನುಭವಿಸೋಣ……
ಸುಖದ ಅನುಭವ ನಮಗೆ ಆಗಬೇಕಾದರೆ ಕಷ್ಟದ ಅರಿವು ಸಹ ಇರಲೇಬೇಕು ಎಂಬ ಸಮಧಾನದೊಂದಿಗೆ……….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ವಿವೇಕಾನಂದ. ಹೆಚ್.ಕೆ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ