- ಸುಬ್ಬಕ್ಕ - ಡಿಸಂಬರ್ 1, 2020
ಸುಬ್ಬಿ ಏಯ್ ಸುಬಮ್ಮ.. ಇನ್ನೂ ಮುಗಿದಿಲ್ವಾ ನಿನ್ನ ಕೆಲಸ.. ಅದೆಷ್ಟೊತ್ತೂಂತ ಅಲ್ಲೇ ಅಗಿತಿರ್ತೀಯಾ? ಸ್ವಲ್ಪ ಇತ್ತ ಕಡೆಯೂ ಗಮನ ಕೊಡಬಾರದಾ? ಬೇಗ ಬಾರೆ.. ಹೊತ್ತಿಲ್ಲ ಗೊತ್ತಿಲ್ಲ.. ಒಂದು ಹಿಡಿದರೆ ಅದೇ ಇಡೀ ದಿನ ಮಾಡುತ್ತಿರುತ್ತಾಳೆ..ಎಂದು ಗೊಣಗುತ್ತಲೇ ಸ್ವಲ್ಪ ಗಡುಸಾಗಿಯೇ ಸುಬ್ಬಕ್ಕನ್ನ ಕೂಗಿದಳು ಇಂದಿರಾ.. ಹಾಗೆ ಸುಬ್ಬಕ್ಕನನ್ನ ಅವಳು ಕರೆಯುತ್ತಿದ್ದಿದ್ದು ಇಂದು ಮೂರನೇ ಬಾರಿ. ಆಗಲಿನಿಂದ ಹಿತ್ತಲಲ್ಲಿ ಕಳೆ ಕೀಳುತ್ತಿದ್ದ ಸುಬ್ಬಕ್ಕನಿಗೆ ಅವಳ ಕರೆ ಕೇಳಿಸದೇನಿರಲಿಲ್ಲ. ಆದರೂ ಅವಳು ಮಾಡುತ್ತಿದ್ದ ಕೆಲಸವನ್ನ ಅರ್ಧಕ್ಕೆ ಬಿಟ್ಟು ಹೋಗಲಾರಳು ಅವಳು.. ಸುಬ್ಬಕ್ಕನ ಚೊಕ್ಕು ಇಡೀ ಊರಿಗೇ ಗೊತ್ತು. ಆ ಒಂದು ವಿಷಯದಲ್ಲಿ ಎಲ್ಲರೂ ಅವಳನ್ನು ಮೆಚ್ಚುವವರೇ..ಅವಳ ಅಚ್ಚುಕಟ್ಟುತನ , ತನ್ಮಯತೆ ಇಡೀ ಮೂಡಲೂರಿನಲ್ಲಿ ಯಾರೂ ಇದ್ದಿಲ್ಲ. ಹಾಗಂತ ಸುಬ್ಬಕ್ಕನೇನು ಯಾರಿಗೂ ಆದರ್ಶವಾಗಲಿ, ಮಾದರಿಯಾಗಲಿ ಆಗಲಿಲ್ಲ. ಅವಳನ್ನ ಕಂಡರೆ ಅಸಡ್ಡೆಯಿಂದ , ಅಯ್ಯೋ ಸುಬ್ಬಕ್ಕನಾ ಎಂದು ಮುಖ ತಿರುಗಿಸುವವರೋ, ಇಲ್ಲ, ನಕ್ಕು ಲೇವಡಿ ಮಾಡುವವರೋ, ವಿನಾ ಕಾರಣ ಅವಳನ್ನು ಗೋಳು ಹುಯ್ದುಕೊಳ್ಳುವವರಿಗೇನು ಕಮ್ಮಿಯಿರಲಿಲ್ಲ. ಒಂದೇ ಮಾತಲ್ಲಿ ಹೇಳಬೇಕೆಂದರೆ ನಮ್ಮ ಸುಬ್ಬಿ “ಆಟಕ್ಕುಂಟು ಲೆಕ್ಕಕಿಲ್ಲ” ಎನ್ನುವಂತಾಗಿತ್ತು. ಹಾಗಂತ ಸುಬ್ಬಕ್ಕನೇನೂ ಕಮ್ಮಿಯಿದ್ದಿತ್ತಿಲ್ಲ. ಯಾರಿಗೂ ಕೇರ್ ಮಾಡದ, ಯಾವುದಕ್ಕೂ ಹೆದರದ ಒಂದುರೀತಿಯ ಖಡ್ಡತನ ಅವಳಲ್ಲಿ ಮನೆ ಮಾಡಿತ್ತು. ಅದು ಹುಟ್ಟುಗುಣವಾ? ಅಥವಾ ಬದುಕು ಅವಳನ್ನ ಆ ರೀತಿಯಾಗಿಸಿತ್ತಾ ಗೊತ್ತಿಲ್ಲ. ಅದು ಗೊತ್ತಾಗಬೇಕೆಂದರೆ ಅವಳ ಬದುಕಲ್ಲಿ ಒಮ್ಮೆ ಹಾದು ಬರಬೇಕಷ್ಟೇ!
*****
ಸುಬ್ಬಕ್ಕ .. ಈಗ ಊರಲ್ಲೆಲ್ಲ ಸುಬ್ಬಕ್ಕ ಎಂದು ಕರೆಯಿಸಿಕೊಳ್ಳುತ್ತಿದ್ದರೂ ಅವಳ ಮೂಲ ಹೆಸರು ಸುಬ್ಬಿ. ಮೂಡಲೂರಿನ ಅನಂತರಾಯರ ಹಿರೇ ಮಗಳು. ಅನಂತರಾಯ ಹಾಗೂ ಲಕ್ಷ್ಮಮ್ಮನಿಗೆ ಮದುವೆಯಾಗಿ ಎಷ್ಟೋ ವರುಷ ಮಕ್ಕಳೇ ಹುಟ್ಟಿರಲಿಲ್ಲವಂತೆ. ಇದ್ದ ಬದ್ದ ದೇವರಿಗೆಲ್ಲ ಹರಕೆ ಹೊತ್ತಿದ್ದರ ಫಲವಾಗಿ ಮೊದಲು ಹುಟ್ಟಿದ್ದು ಈ ಸುಬ್ಬಿ. ಅವಳ ಮೇಲೆ ಇಬ್ಬರು ಗಂಡುಮಕ್ಕಳಂತೆ. ಹರಕೆ ಹೊತ್ತು ಹರಕೆ ತೀರಿಸಲಿಲ್ಲವೆಂದು ಅವಳಿಗೆ ದೇವರು ಕೊಟ್ಟ ಶಿಕ್ಷೆಯಂತೆ ಅವಳ ಪೆದ್ದುತನ. .. ಹಾಗಂತ ಇಡೀ ಊರವರ ಅಂಬೋಣ. ಚಿಕ್ಕಂದಿನಿಂದಲೂ ಸುಬ್ಬಿ ಹೀಗೆ ಖಡ್ಡಳೇನಾ ಎಂದು ಕೇಳಿದರೆ ಯಾರೂ ಸ್ಪಷ್ಟವಾಗಿ ಹೇಳುವವರಿಲ್ಲ. ಒಬ್ಬೊಬ್ಬರದು ಒಂದೊಂದು ಹೇಳಿಕೆ. ಹೀಗೆ ಎಂದು ಅವಳ ಬಗ್ಗೆ ನಿರ್ಧರಿಸುವುದು ಕಷ್ಟವಿತ್ತು. ಒಮ್ಮೊಮ್ಮೆ ಒಂದೊಂದು ಥರ ಇರುತ್ತಿದ್ದ ಸುಬ್ಬಿ ಯಾರಿಗೂ ಅರ್ಥವಾದವಳೂ ಅಲ್ಲ. ಮಳ್ ಸುಬ್ಬಿ ಎಂದೇ ಎಲ್ಲರೂ ಅವಳನ್ನು ಅಳೆದಿದ್ದು. ಅಪರೂಪಕ್ಕೆ ಹುಟ್ಟಿದ ಮಗಳು ಎಂದು ಅನಂತರಾಯ ದಂಪತಿಗಳಿಗೇನು ಸಂತೋಷವಾಗಿರಲಿಲ್ಲವಂತೆ. ಹೆಣ್ಣೇ ಆಗಬೇಕಿತ್ತಾ ಎಂಬ ಕನಿಷ್ಠ ಭಾವನೆ ಅವರನ್ನ ಕಾಡುತ್ತಿತ್ತಂತೆ. . ಸುಬ್ಬಿಯೂ ನೋಡಲು ಕಪ್ಪು. ಪೀಚು ಪೀಚಾಗಿದ್ದಳಂತೆ. ನಂತರ ಗಂಡಾದ ಮೇಲಂತೂ ಅವಳನ್ನು ಹೆತ್ತವರೇ ನಿರ್ಲಕ್ಷ ಮಾಡುತ್ತಿದ್ದರು.. ಎನ್ನುವುದು ಅವಳ ಬಗ್ಗೆ ಅಲ್ಪ ಸ್ವಲ್ಪ ತಿಳಿದಿದ್ದ ಊರ ಹಿರಿಯರ ಹೇಳಿಕೆ.. ಸುಬ್ಬಿ ಆರು ವರ್ಷದವಿಳದ್ದಾಗಲೇ ಲಕ್ಷ್ಮಮ್ಮ ಹಾಸಿಗೆ ಹಿಡಿದರಂತೆ. ಇಬ್ಬರ ತಮ್ಮಂದಿರ ಆರೈಕೆ, ಮನೆಗೆಲಸ, ತಾಯಿಯ ಅನಾರೊಗ್ಯ;ಎಲ್ಲವೂ ಸುಬ್ಬಿಯ ತಲೆಮೇಲೆಯೇ. ಪರಿಣಾಮವಾಗಿ ಶಾಲೆಯ ಮೆಟ್ಟಿಲೇ ಹತ್ತದೆ ಹರೆಯಕ್ಕೆ ಬಂದ ಮಗಳಿಗೆ ಮದುವೆ ತಯಾರಿ ಮಾಡತೊಡಗಿದರಂತೆ ರಾಯರು. ಓದು ಎಂದರೇನು ಅಂತಲೇ ಗೊತ್ತಿರದ, ಕಪ್ಪು ಮುಖದ, ಬಡಕಲು ಶರೀರದ ಸುಬ್ಬಿಯ ಮದುವೆ ಆಗಿನ ಕಾಲದಲ್ಲಿ ಸುಲಭದ್ದಲ್ಲ ಎನ್ನುವ ಚಿಂತೆ ರಾಯರಿಗೆ ನಿತ್ಯದ ಕೊರಗು ಶುರುವಾಗಿದ್ದು ಬಂದ ಸಂಬಂಧಗಳೆಲ್ಲ ಅವಳನ್ನು ತಿರಸ್ಕರಿಸಿ ಹೋದಾಗಲೇ.. ಅಂತೂ ಇಂತು ಭಗೀರಥ ಪ್ರಯತ್ನದಂತೆ ಸುಬ್ಬಿಗೆ ಕಂಕಣ ಕೂಡಿ ಬಂದಿದ್ದು ಅವಳ ೨೮ರ ಪ್ರಾಯದಲ್ಲಿ. ಅದೂ ಎರಡನೆಯ ಸಂಬಂಧದ ೪೦ರ ಪ್ರಾಯದವನು. ೨೮ ಎಂದರೆ ಕಮ್ಮಿಯೇನಲ್ಲ ಎಲ್ಲರಿಗೂ ೧೪ರಲ್ಲೇ ಮದುವೆಯಾಗುತ್ತಿದ್ದ ಆಗಿನಕಾಲದಲ್ಲಿ. ಎಲ್ಲರೂ ಅತ್ತೆಯಾಗುವ ವಯಸ್ಸಲ್ಲಿ ಸುಬ್ಬಿ ಅತ್ತೆ ಮನೆಗೆ ಹೋಗುತ್ತಿದ್ದಾಳೆ ಎಂದು ಜನ ಅಣಕವಾಡಿದ್ದೂ ಉಂಟು.
ಚಿಕ್ಕಂದಿನಿಂದಲೂ ಗಾಣದೆತ್ತಿನಂತೆ ಕೆಲಸವೊಂದನ್ನೇ ಮಾಡಿ ಬೆಳೆದ ಸುಬ್ಬಿಯ ಜೀವನದಲ್ಲಿ ಮೊದಲ ಬಾರಿ ಬದಲಾವಣೆಯ ಖುಷಿ. ಊರವರು ಎಷ್ಟೇ ಅಣಕವಾಡಿದರೂ ಅವಳು ತಲೆಕೆಡಿಸಿಕೊಂಡವಳಲ್ಲ. “ಆದರೇನಂತೆ ಎಲ್ಲರಿಗೂ ಒಂದೇರೀತಿಯ ಹಣೆಬರಹ ಬರೆದಿಡೋಲ್ಲ ದೇವರು..” ಎನ್ನುತ್ತಿದ್ದಳು ಸುಬ್ಬಿ. ನನ್ನ ಪಾಲಿಗಿದ್ದಿದ್ದು ಇದೇ . ಇದೇ ನನಗೆ ಸರಿಯಾದುದು ಎಂದು ಅದೆಂಥದ್ದೋ ನಿರ್ಲಿಪ್ತತೆಯಲ್ಲಿ ಹೇಳುತ್ತಿದ್ದಳು ಸುಬ್ಬಿ.. ಆಗ ಅವಳ ಕಣ್ಣಲ್ಲಿ ಮೂಡುತ್ತಿದ್ದ ವೈರಾಗ್ಯ ಯಾರಿಗೂ ಗೋಚರಿಸದಿದ್ದುದು ನಿರ್ವಿವಾದ.
ಹುಡುಗ ಅಲ್ಲಲ್ಲ ನಿನ್ನ ಮದುವೆಯಾಗುವವಗೆ ೪೦ರ ಪ್ರಾಯವಂತೆ ಕಣೇ.. ಹೆಚ್ಚು ಕಮ್ಮಿ ನಿನ್ನ ವಯಸ್ಸಿನ ಮಕ್ಕಳಿದ್ದಾರಂತೆ. ಆದರೂ ನಿನಗೀ ಮದುವೆ ಬೇಕಾ ಎಂದು ಅವಳದೇ ಓರಿಗೆಯ ಅವಳ ಏಕೈಕ ಗೆಳತಿ ಗೋದಾ ತೌರಿಗೆ ಬಂದಾಗ ಕೇಳಿದಾಗಲೂ ಅವಳದು ಅದೇ ನಿರ್ವಿಕಾರದ ಪೆದ್ದು ನಗುವಂತೆ.
ಅಂದರೆ ಸುಬ್ಬಿಗೆ ಭಾವನೆಗಳೇ ಇರಲಿಲ್ಲವಾ? ತನ್ನ ಬುದ್ಧಿಗೆ ,ರೂಪಿಗೆ ದಕ್ಕುವುದು ಇಷ್ಟೆಯಾ ಎನ್ನುವ ಭಾವವಾ? ಅಥವಾ ಅವಳಲ್ಲಿ ಯಾವ ಭಾವನೆಗಳೂ ಇರಲಿಲ್ಲವಾ ? ಅವಳ ಪೆದ್ದುತನ ದಡ್ಡಿ ಎನ್ನುವ ಹಣೆಪಟ್ಟಿಗೆ ಇವೆಲ್ಲ ಅರ್ಥವಾಗದ ಭಾವನೆಗಳಾ? ಗೊತ್ತಿಲ್ಲ. ಉತ್ತರಿಸಬೇಕಾದ್ದು ಸುಬ್ಬಿಯೇ ಆಗಿತ್ತು.
*****
ಇಂದಿರಾಳ ಕರೆಗೆ ಸುಬ್ಬಿ ಒಳಗೆ ಬಂದದ್ದು, ಕರೆದ ಕಾಲು ಗಂಟೆಯ ನಂತರವೇ.. ಒಳಗೆ ಬರುವಷ್ಟರಲ್ಲಿ ಅಡುಗೆ ಮನೆಯ ಕೆಲಸ ಅವಳಿಗಾಗಿ ಕಾಯುತಿತ್ತು. ಬಚ್ಚಲಲ್ಲಿ ತುಂಬಿದ್ದ ಪಾತ್ರೆ, ಒಲೆ ಮುಂದೆ ಕೆದರಿದ ಬೂದಿಯ ರಾಡಿ, ಅರ್ಧ ಉರಿದು ನಂದಿದ ಸೌದೆ, ಅರ್ಧಂಬರ್ದ ಆಗಿದ್ದ ಅಡುಗೆ.. ಎಲ್ಲ ಅವಳ ಬರುವನ್ನೇ ಕಾಯುತ್ತಿದ್ದವು.. ಸುಬ್ಬಿಗೇನೂ ಇದು ಹೊಸತಲ್ಲ. ದಿನನಿತ್ಯದ ಕೆಲಸ.. ನಿರ್ಲಿಪ್ತವಾಗಿ ಎಲ್ಲವನ್ನೂ ಮಾಡಿ ಮುಗಿಸುತ್ತಿದ್ದಳು.. ಚಿಕ್ಕಂದಿನಿಂದ ಮಾಡಿಕೊಂಡು ಬಂದಿದ್ದು ಅದೇ ತಾನೇ?
ಅವಳನ್ನು ನೋಡಿದ ಇಂದಿರಾ , ಸುಬ್ಬಮ್ಮಾ ಇವತ್ತು ಹಬ್ಬದಡುಗೆಯಾಗಬೇಕು. ಇವರಿಗೆ ಬೇಕಾದವರೊಬ್ಬರು ಊಟಕ್ಕೆ ಬರುತ್ತಿದ್ದಾರೆ. ಬೇಗ ಬೇಗ ಎಲ್ಲ ಮುಗಿಸಿಬಿಡು ಎಂದು ಅವಳಿಗೆ ಆದೇಶಿಸಿ ಹೊರ ನಡೆದಳು ಇಂದಿರಾ.
ಇಂದಿರಾ ಸುಬ್ಬಮ್ಮನ ತಮ್ಮನ ಸೊಸೆ.. ಒಳ್ಳೆವಳೂ ಅಲ್ಲದ, ಕೆಟ್ಟವಳೂ ಅಲ್ಲದ ಒಂದು ಥರದ ಹೆಣ್ಣು. ಸುಬ್ಬಮ್ಮನ ಕಂಡರೆ ಅಂತಹ ಅಕ್ಕರೆ ಆದರತೆ ಇದ್ದಿತ್ತಿಲ್ಲ. ಹಾಗಂತ ಅದು ಉದಾಸೀನವೂ ಅಲ್ಲ.. ಒಂದು ರೀತಿಯಲ್ಲಿ ಸುಬ್ಬಿಯನ್ನ ಅವಳು ಅವಲಂಬಿಸಿದ್ದಳು. ಎಲ್ಲವನ್ನ ಮಾಡುತ್ತಿದ್ದ ಸುಬ್ಬಮ್ಮ ಇಲ್ಲದಿದ್ದರೆ ಅವಳ ಕೈಯಾಡುತ್ತಿರಲಿಲ್ಲ. ಹಾಗಂತ ಅವಳನ್ನು ಆದರಿಸುತ್ತಲೂ ಇರಲಿಲ್ಲ. ಅವಳ ಕೆಲಸವೊಂದಾದರಾಯಿತವಳಿಗೆ.. ಮಿಕ್ಕಿದ್ದು ತನಗೆ ಸಂಬಂಧವಿಲ್ಲದ್ದು ಎನ್ನುವ ಜಡತ್ವ ಭಾವ. ಅವಳ ಮಕ್ಕಳು ಸುಬ್ಬಮ್ಮನನ್ನು ಗೋಳು ಹುಯ್ದುಕೊಂಡರೂ ಅವಳು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಅಂಥವರ ಮಧ್ಯೆಯೇ ಸುಬ್ಬಮ್ಮ ಇಷ್ಟುವರುಷ ಕಳೆದುಬಿಟ್ಟಿದ್ದಳು. ಒಂದೇ ರೀತಿಯ ಬದುಕನ್ನ.. ಯಾವ ಬದಲಾವಣೆಯಿಲ್ಲದೆ. ..
ಬಂದ ಅತಿಥಿಗಳದು ಊಟವಾಯಿತು..ಹಜಾರದಲ್ಲಿ ವಿಶ್ರಮಿಸಲು ಹೋದದ್ದೂ ಆಯಿತು.. ಎಲ್ಲ ಕೆಲಸ ಮುಗಿಸಿ ಬಂದ ಸುಬ್ಬಮ್ಮನಿಗೆ ಒಳ ಮನೆಯಲ್ಲಿ ವಿಶ್ರಮಿಸುತ್ತಿರುವಾಗ ಬೇಡವೆಂದರೂ ಹಜಾರದಲ್ಲಿದ್ದವರ ಮಾತು ಕಿವಿಯ ಮೇಲೆ ಬೀಳುತಿತ್ತು. “ಅವಳಾ..?ನಮ್ಮಪ್ಪನ ಅಕ್ಕ. ಸ್ವಲ್ಪ ಪಿರ್ಕಿಯೇ ಅನ್ನಿ.. ಹೇಗೋ ಸಂಬಾಳಿಸಿಕೊಂಡು ಹೋಗ್ತಿದ್ದೇವೆ.. ಪಾಪ ಎಷ್ಟಾದರೂ ರಕ್ತಕ್ಕಂಟಿದ ಬಂಧುವಲ್ಲವೆ..?ಆ ಅರೆಹುಚ್ಚಿಯ ಕಥೆಯೇನು ಕೇಳ್ತೀರಿ ಬಿಡಿ..! ಅಂದ್ಹಾಗೆ ಅದೇನೋ ಹೇಳುತ್ತಿದ್ದಿರಲ್ಲ.. ಶೇಷಗಿರಿರಾಯರ ಮೊಮ್ಮಗನೆ…? ಇಂದಿರಳ ತಂಗಿಗೆ ಆಗಲೆ 20 ತುಂಬಿತು. ಎಲ್ಲ ಕೂಡಿ ಬಂದರೆ ಶುಭಸ್ಯ ಶೀಘ್ರಂ! ನಮ್ಮದೇನೂ ಅಭ್ಯಂತರವಿಲ್ಲ. ದಿಬ್ಬಣೂರು ಅಷ್ಟೇನು ದೂರವೂ ಅಲ್ಲ.. ಬಿಡಿ. ಅವರ ಮಾತು ಇನ್ನೂ ಮುಂದುವರಿಯುತ್ತಲೇ ಇತ್ತು. ಕೇಳುತ್ತಿದ್ದ ಸುಬ್ಬಮ್ಮಂಗೆ ವಿಚಿತ್ರಸಂಕಟದಂತಾಗಿ “ದಿಬ್ಬಣೂರು ದಿಬ್ಬಣೂರು ” ಎಂದು ಜೋರಾಗಿ ಹೇಳಿಕೊಳ್ಳುತ್ತಲೇ ತನ್ನ ಹಾಸಿಗೆಯಿಂದ ದಿಗ್ಗನೆದ್ದು ಹೊರಗೋಡಿದಳು.
*****
ಕೆಂಪಾದ ಬಾನು.. ಸುತ್ತಲೂ ಹಸಿರು. ದೂರದಲ್ಲಿ ಯಾವುದೂ ಹಕ್ಕಿ ಒಂದೇ ಸಮ ಕೂಗುತ್ತಲೇ ಇದೆ.. ಸಂತಸಕ್ಕಾ..? ದುಃಖಕ್ಕಾ? ದಿಕ್ಕುಕಾಣದಾ ಆಕ್ರಂದನವಾ ? ಅವರವರ ಭಾವಕ್ಕೆ ಬಿಟ್ಟಿದ್ದು. ಅಲ್ಲಿಯೇ ಅರಳಿಮರದ ಕಟ್ಟೆಯಮೇಲೆ ಕುಳಿತು ಎತ್ತಲೋ ದೃಷ್ಟಿನೆಟ್ಟು ತನ್ನ ಪಾಡಿಗೆ ತಾನು ಲೊಚಗುಟ್ಟುತ್ತಿದ್ದ ಸುಬ್ಬಕ್ಕನಿಗೆ ಇದಾವುದರ ಪರಿವೆಯೂ ಇದ್ದಂತಿಲ್ಲ. ಅವಳ ಅಂತರಂಗ ಯಾವುದೋ ಉದ್ವೇಗಕ್ಕೆ ಒಳಗಾದಂತಿತ್ತು.. ಅವಳೊಂದಿಗೆ ಅವಳೇ ಮಾತನಾಡಿಕೊಂಡಂತಿತ್ತು.
“ಹೌದು ತಾನು ಮಳ್ ಸುಬ್ಬಿಯೇ.. ತನಗೇನು ಗೊತ್ತಾಗುವುದೇ ಇಲ್ಲ. ಅದಕ್ಕೆ ತಾನೆ ತನ್ನ ಬದುಕು ಹೀಗಿದ್ದಿದ್ದು..! ತಾನು ಬಯಸಿದ್ದ ಜೀವನವಾ ಇದು..?ಗಾಣದೆತ್ತಿನಂತಹ ಜೀವನ ಬೇಕಿತ್ತಾ ತನಗೆ? ಎಲ್ಲರೂ ಆಡಿಕೊಳ್ಳುತ್ತಾರಲ್ಲ, ತನ್ನನ್ನು.. ದುಡಿಸಿಕೊಳ್ಳುತ್ತಾರಲ್ಲ. ಆಗ ತಾನು ಅರೆಹುಚ್ಚಿ ಎಂಬುದು ಮರೆತು ಬಿಡುತ್ತಾರಲ್ಲ..ಹುಂ .. ನನ್ನ ಭಾವನೆ ಕಟ್ಟಿಕೊಂಡು ಇವರಿಗೇನು..?
ಯಾಕೆ ಹರೆಯದಲ್ಲಿ ತಾನು ಹಾಗಿದ್ದರೆ ಚೆನ್ನ, ಹೀಗಿದ್ದರೆ ಸುಖ ಎಂದುಕೊಳ್ಳುತ್ತಿರಲಿಲ್ಲವೆ..? ತನಗೂ ಬಯಕೆಗಳಿರಲಿಲ್ಲವೆ..? ತನಗಿನ್ನೂ ಯಾವುದೂ ಮರೆತಿಲ್ಲ. ವಯಸ್ಸು ಮಾಗಿ ದೇಹ ಮುಪ್ಪಾದರೇನು..?ಮನಸ್ಸು..!ಅದಿನ್ನೂ ಹಾಗೇ ಇದೆ. ಎಲ್ಲವನ್ನೂ ತನ್ನಲ್ಲೇ ಹುದುಗಿಸಿಕೊಂಡು.. ಬಿಚ್ಚಿಡಲಾದರೂ ಯಾರಿದ್ದರು ತನಗೆ? ಎಲ್ಲ ಇದ್ದೂ ಅನಾಥಳಂತೆಯೇ ಬದುಕಿಬಿಟ್ಟೆ ನಾನು.. ಎಲ್ಲ ಸರಿಯಿದ್ದರೆ ಇವತ್ತು ತಾನು ಇವರಂತೆಯೇ ಸಂಸಾರಿಯಾಗಿ ತನ್ನದೇ ಮನೆಯಲ್ಲಿರುತ್ತರಲಿಲ್ಲವೆ?ಅದೇ ಅಪ್ಪ ಕಾಣಿಸಿದ ಹುಡುಗ.. ಅಲ್ಲಲ್ಲ..ಗಂಡಸೊಂದಿಗೆ. ವಯಸ್ಸಿನಂತರ ಎಷ್ಟಿದ್ದರೇನಿತ್ತು..? ಹೆಸರಿಗೆ ತಾನು ಅವನ ಹೆಂಡತಿಯಾಗಿರುತ್ತಿದ್ದೆ. ಒಂದು ಮನೆಯ ಸೊಸೆಯಾಗಿರುತ್ತಿದ್ದೆ. ಎಲ್ಲ ತನ್ನ ಹಣೆಯಬರಹ.. ತಾನು ರೂಪವತಿಯಲ್ಲ.. ಯಾವ ಆಕರ್ಷಣೆಯೂ ತನ್ನಲಿಲ್ಲ..ಹೆಣ್ಣು ಎನ್ನುವದ ಬಿಟ್ಟು..!ಶಾಲೆಯ ಮೆಟ್ಟಿಲು ಹತ್ತಿದವಳೂ ಅಲ್ಲ.. ತಾನು ದಡ್ಡಿಯೇ ಇರಬಹುದು.. ಆದರೂ ಒಂದು ಮನೆ ತೂಗಿಸಿಕೊಂಡು ಹೋಗುವ ಶಾಣ್ಯಾತನವಿತ್ತಲ್ಲವೆ ತನ್ನಲ್ಲಿ..?
ಆವತ್ತು ಬೆಳಿಗ್ಗೆ ಎದ್ದಾಗಿಂದಲೂ ತನಗೊಳಗೊಳಗೆ ಖುಷಿ. ಸಂಭ್ರಮ. ಯಾರೂ ಹೇಳಿಕೊಡದಿದ್ದರೂ ಯಾವಾಗಲೂ ಜಿಡ್ಡಾಗಿರುತ್ತಿದ್ದ ತನ್ನ ಕೂದಲನ್ನು ಅಂಟುವಾಳ ಪುಡಿಯಿಂದ ತಿಕ್ಕಿ ತಿಕ್ಕಿ ತೊಳೆದಿದ್ದೆ. ತನಗೆ ತಾನೆ ಎಣ್ಣೆ ಎರೆದುಕೊಂಡು ಸ್ನಾನ ಮಾಡಿರಲಿಲ್ಲವೇ?” ಅಮ್ಮ ಇದ್ದರೆ ಇಷ್ಟನ್ನಾದರೂ ಹೇಳಿರುತ್ತಿದ್ದಳು ಎಂದು ನೆನಹುತ್ತ.”ತಾನೂ ಗೋದಾಳನ್ನು ನೋಡಿರಲಿಲ್ಲವೇ? ಹೀಗೆ ಒಪ್ಪ ಓರಣವಾಗಿ ಸಿಂಗರಿಸಿಕೊಂಡಿದ್ದಳು. ಅವಳನ್ನು ನೋಡಲು ಗಂಡಿನವರು ಬಂದಾಗ . ಎಲ್ಲವೂ ನೆನಪಿತ್ತು ತನಗೆ.. ಥೇಟ್ ಗೋದಾನಂತೆಯೇ ಅಲಂಕರಿಸಿಕೊಂಡಿದ್ದೆ. ಬಿಂಬದಲ್ಲಿ ತನ್ನೇ ತಾನು ನೋಡಿ ಕಣ್ಣರಳಿಸಿರಲಿಲ್ಲವಾ ಪೆದ್ದಿಯಾದರೂ ಕುರೂಪಿಯಲ್ಲ ಅಷ್ಟು ಅಸಹ್ಯವಾಗಿಯೂ ಇಲ್ಲ ಎಂದು ನನ್ನ ಬಗ್ಗೆ ನಾನೇ ಹೆಮ್ಮೆ ಪಟ್ಟುಕೊಂಡಿದ್ದೆ.. ಬಹುಷಃ ಅದೇ ಕೊನೆ ಮೊದಲು ತನ್ನ ಸಂಭ್ರಮ. ಎಲ್ಲವೂ ಮುಗಿದಿತ್ತು ಆ ದಿನ. ಎಲ್ಲವೂ… ಯಾರೂ ಊಹಿಸಲಾರದ್ದೊಂದು ಘಟಿಸಿಬಿಟ್ಟಿತ್ತು. ತಾನೂ ಪೆದ್ದಿಯೇ.. ಜನ ಹೇಳುವುದು ಸುಳ್ಳಲ್ಲ. ಬಂದವರು ತನ್ನ ಮೆಚ್ಚಿಕೊಂಡಿದ್ದರು. ಎಲ್ಲವೂ ಅಂದುಕೊಂಡಂತೆ ನಿಷ್ಕರ್ಷೆಯಾಯಿತು. ಮುಂದಿನ ೨ ತಿಂಗಳಲ್ಲಿ ತನ್ನ ಮದುವೆ.. ಎಂದೂ ನಿಗದಿಯಾಗಿತ್ತಲ್ಲ.. ತನ್ನಲ್ಲಿ ಅದೇನೋ ಭಯ ಮಿಶ್ರಿತ ಸಂಭ್ರಮ.. ಏನೇನೋ ಆಸೆಗಳು.. ತಮ್ಮನ ಸಂಸಾರವನ್ನ ದಿನ ಬೆಳಗಾದರೆ ನೋಡುತ್ತಿದ್ದೆನಲ್ಲ.. ಹಾಗಾಗಿಯೇ ಏನೋ, ಏನೇನೋ ಹುಚ್ಚು ಕಲ್ಪನೆಗಳು ನನ್ನಲ್ಲಿ ಮೇಳೈಸಿದ್ದವಲ್ಲ. ಹಾಗಿದ್ದಾಗ ಒಂದಿನ .. ಮನೆಯಲ್ಲಿ ತನ್ನ ಬಿಟ್ಟರೆ ಯಾರಿಲ್ಲ.. ಎಲ್ಲರೂ ಯಾವ್ಯಾವುದೋ ಕೆಲಸದ ಮೇಲೆ ಹಂಚಿ ಹೋದ ದಿನ.. ಆ ರಾತ್ರಿ ಕರಾಳವಾಗಿರಲಿಲ್ಲವೆ? ಅದ್ಯಾರೋ ಮನೆಗೆ ಬಂದರು.. ತನ್ನ ಬಾಯಿ ಕಟ್ಟಿ, ತನ್ನನ್ನು ಏನೇನೋ ಮಾಡಿ ಹೋದರು. ತನಗೇನೂ ತಿಳಿಯದು.. ಏನೋ ಮಂಪರು.. ಅರೆ ಎಚ್ಚರ.. ಹೌದು ತನ್ನ ಯಾರೋ ಅನುಭವಿಸಿ ಹೋಗಿದ್ದರು.. ಈ ಪೆದ್ದಿ ಒಬ್ಬಳೇ ಇರುವುದನ್ನ ನೋಡಿ. ತಮ್ಮ ತೃಷೆ ತೀರಿಸಿಕೊಂಡಿದ್ದರು. ಬಾಲ್ಯದಲ್ಲಿಯೂ ಒಮ್ಮೆ ಹೀಗೇ ಆಗಿತ್ತಲ್ಲ..! ಅದು ತನ್ನ ಹಾಗೂ ಆಯಿಯ ಬಿಟ್ಟರೆ ಬೇರೆ ಯಾರಿಗೂ ತಿಳಿದಿರಲಿಲ್ಲ. ಯಾರೊಂದಿಗೂ ಹೇಳಿಕೊಳ್ಳುವಂಥದ್ದಲ್ಲವಲ್ಲ. ಹಾಗಂತ ಅಮ್ಮನೇ ಹೇಳಿದ್ದಳು.. ದೇವರ ಮುಂದೆ ಪ್ರಮಾಣವಿರಿಸಿದ್ದಳು.. ಮತ್ತೆ ಅದೇ ಪುನರಾವರ್ತನೆ. . “ಅಯ್ಯೋ ದೇವರೆ”…ಎಂದು ಕೂಗಲೂ ತಂಗೆ ಶಕ್ತಿಯಿಲ್ಲ. ದೇಹದ ಚೈತನ್ಯವೆಲ್ಲ ಉಡುಗಿದ ಭಾವ. ತಾನು ಪೆದ್ದಿಯಾಗಿದ್ದಕ್ಕೆ ತನಗಿಂಥ ಶಿಕ್ಷೆಯೇ?..ಯಾಕೆ ಭಗವಂತ..?ಆ ಘಟನೆ .. ಅದ್ಹೇಗೋ ಇಡೀ ಊರಿಗೇ ಗುಲ್ಲಾಯಿತಲ್ಲ..ಹೇಗೆ..? ಮಾಡಿದವನೆ ಗುಲ್ಲಾಯಿಸಿದನಾ? ಯಾರು ಅಂತ ಹೇಗೆ ಹೇಳಲಿ? ಯಾರು ಎಂದು ತಿಳಿಯುವ ಕುತೂಹಲಕ್ಕಿಂತ ತನ್ನನ್ನು ಅಣಕವಾಡುವುದರಲ್ಲೇ ಕಳೆದು ಬಿಟ್ಟರಲ್ಲ ಜನ..ತಡವಾಗಲಿಲ್ಲ ತನ್ನ ಮದುವೆಯಾಗುವವನವರೆಗೆ ಸುದ್ದಿ ಮುಟ್ಟಲು. ಅಲ್ಲಿಗೆ ಮದುವೆ ಎನ್ನುವ ನಾಟಕದ ತಯಾರಿಯೂ ಮುಗಿಯಿತು. ತನ್ನ ಭಾವನೆಗಳಂತೆಯೇ.. ತಪ್ಪು ತನ್ನದಿತ್ತಾ? ಅದು ಹೇಗಾಗುತ್ತೆ?ಆಗ ಏನೊಂದೂ ಅರಿಯದವಳು.. ಮನೆಬಿಟ್ಟು ಆಚೀಚೆ ಹೋಗುತ್ತಿದ್ದುದೇ ಕಮ್ಮಿ. ಗೋದಾನ ಬಿಟ್ಟರೆ ಯಾರೊಂದಿಗೂ ಅಷ್ಟಾಗಿ ಬೆರೆತವಳಲ್ಲ.. ಮಾತೂ ಕಮ್ಮಿ ಆಡುವವಳು ತಾನು. ಹೇಗಾಡುತ್ತೇನೆ..?ಪೆದ್ದಿಯಾಗಿಯೇ ಬೆಳೆದುಬಿಟ್ಟೆನಲ್ಲ..! ಕೆಲವು ಸೂಕ್ಷ್ಮತೆ, ಚುರುಕುತನ ಇಲ್ಲದ್ದಕ್ಕೆ ತಾನು ಪೆದ್ದಿಯಾಗಿಬಿಟ್ಟೆ. ತನಗಾದ ಅನ್ಯಾಯಕ್ಕೆ ಯಾರು ಕಾರಣ ಎಂದು ಹುಡುಕುವದಬಿಟ್ಟು ಈ ಜನ, “ಪೆದ್ದುತನಕ್ಕೆ ಏನೆನ್ನಬೇಕು..?ಇವಳು ಪೆದ್ದಿಯಾ?ನಮ್ಮನ್ನು ಪೆದ್ದು ಮಾಡ್ತಾಳೆ, ಏನೂ ಗೊತ್ತಿಲ್ಲದ್ದಿಲ್ಲ ಇವಳಿಗೆ.. ಪಾಪ.”.ಎಂದೆಲ್ಲ ಮನಕಂಡಂತೆ ಆಡಿಕೊಂಡರು ..ಅಷ್ಟಲ್ಲದೆ ತನ್ನ ನೋಡುವ ನೆಪದಲ್ಲಿ ಬಂದು ಚಿತ್ರ ವಿಚಿತ್ರ ಪ್ರಶ್ನೆಗಳು.. ಬೇಕೇ? ಪೆದ್ದಿಯನ್ನ ಕೆದಕಿ ಕೆದಕಿ ಕೇಳುವ ಚಪಲವಲ್ಲದೆ ಮತ್ತೇನು?ದಡ್ಡಿಯಾದರೂ ನನಗೊಂದು ಭಾವನೆ ಇದೆ.. ಅಲ್ಲಿ ಮಡುಗಟ್ಟಿದ ದುಃಖವಿದೆ ಎಂದು ಯಾರಿಗೂ ಅನಿಸಲಿಲ್ಲ.. ತನ್ನ ಪ್ರತಿ ನಡಾವಳಿಗೂ ಒಂದೊಂದು ಹೆಸರು ಕೊಡುತ್ತ, ಎಲ್ಲಕ್ಕೂ ತನ್ನ ಉದಾರಣಿಸುತ್ತ ಹಾಸ್ಯಮಡಿಕೊಂಡುಬಿಟ್ಟರು ತನ್ನ. ಇದೇ ಕೊರಗಲ್ಲಿ ಅಪ್ಪಯ್ಯನೂ ಸತ್ತ.. ಅದಕ್ಕೂ ತನ್ನೇ ಜರಿದರು.. ಈ ಶನಿ ಕಟ್ಟಿಕೊಂಡು ಹೇಗೆ ಬಾಳ್ತೀರಪ್ಪ ಎಂದು ತಮ್ಮಂದಿರನ್ನೂ ಕೇಳಿದರು. ಅವರಿಗೂ ಇದೇ ಭಾವನೆಯಿತ್ತಾ ಅನಿಸುತ್ತೆ..
ಎಲ್ಲವನ್ನೂ ತುಟಿಗಚ್ಚಿ ನುಂಗಿದೆ. ಪರಿಣಾಮ ಅರೆಹುಚ್ಚಿಯಂತಾದೆ. ರಾತ್ರಿಗಳಲ್ಲಿ ಎಂಥದ್ದೋ ಕನಸುಗಳು.. ಭಯ ನಡುಕ..ಹಗಲೆಲ್ಲ ಕತ್ತೆ ದುಡಿತ..ತನ್ನದೂ ಒಂದು ಜೀವವಾ ಅನಿಸುವಷ್ಟು ರೇಜಿಗೆ.. ಮನೆಯವರಿಗೆಲ್ಲ ತಾನು ನಿಕೃಷ್ಟವಾದರೂ ತನಗೆ ಬಾಧೆ ಅಂಥನಿಸಲೇ ಇಲ್ಲ. ನಾನು ಬೆಳೆದಿದ್ದೇ ಅಂತಹ ವಾತಾವರಣದಲ್ಲಿ. ಯಾರೂ ತನ್ನ ಮಾತನಾಡಿಸದಿರುವಾಗ ತನ್ನೊಳಗೇ ತಾನು ಮಾತನಾಡತೊಡಗಿದೆ. ನಗಿಸುವವರಿಲ್ಲದಾಗ ಒಬ್ಬಳೇ ನಗತೊಡಗಿದೆ. ಅದೇ ಅಭ್ಯಾಸವಾಗಿಬಿಟ್ಟಿತು ತನಗೆ.. ಹೇಗಾದರೂ ನನ್ನ ಭಾವನೆ ಹೊರಹಾಕಬೇಕಿತ್ತಲ್ಲ.. ! ಭಾವನೆಗಳನ್ನು ಹೊರ ಹಾಕಲು ಜೊತೆಯಾಕೆ ಬೇಕೋ… ಅರ್ಥವಾಗದ್ದು..! ಓಹೋ ಅದಕ್ಕೇ ತನ್ನ ಹುಚ್ಚಿ ಅರೆಹುಚ್ಚಿ ಎನ್ನುತ್ತಾರಲ್ಲ..! ಹುಂ ಅರೆಹುಚ್ಚಿಯೇ..ಬೆಳಗಿಂದ ಇವರ ಚಾಕರಿ ಮಾಡುವಾಗ ಹೀಗನಿಸುವುದಿಲ್ಲ..ನನ್ನ ಅಡುಗೆ ಉಣ್ಣುವಾಗ ಮುಜುಗರವಿದ್ದಿಲ್ಲ . ಮಹಾ! ನೆಂಟರು ಬಂದಾಗ ತಾನು ಒಳಮನೆಯಲ್ಲಿರಬೇಕಂತೆ.. ಮರ್ಯಾದಿಯಂತೆ..ಇಷ್ಟು ದಿನದಿಂದ ಇದ್ದ ಹುಚ್ಚಿ ಪಟ್ಟಕ್ಕೆ ಬೇಜಾರಾಗದ ತಾನು ,ಇವತ್ತಿನ ಮೊಮ್ಮಾಣಿಯ ಮಾತಿಗೇಕೆ ಬೇಸರವಾಗ್ತಿದೆ? ಅವನಿಗೆಂಥಾ ನಾ ಕೊಟ್ಟ ಕೈ ತುತ್ತು ನೆನಪಿರ್ತದಾ? ಆಗಿನ್ನು ಅದು ಚಿಕ್ಕದು.. ಆದರೂ ಅವ ಹಾಗಂದಿದ್ದು ಸರಿಯಾ?ಅವನಾಗಿದ್ದಕ್ಕೆ ಸಂಭಾಳಿಸೋದಂತೆ.. ಇವನಮ್ಮ ಸತ್ತಾಗ ಇವನ ಗೊಣ್ಣೆವರೆಸಿದ್ದು ಇದೇ ಪಿರುಕಿಯಲ್ಲವಾ? ಸಂಬಾಳಿಸ್ತಾನಂತೆ.. ಹೇಗೋ..?ಈ ಜಮೀನು ಮುಕ್ಕಾಲು ಭಾಗ ನನ್ನ ಹೆಸರಲ್ಲಿದ್ದಕ್ಕಲ್ಲವಾ ?ಅವನ ಮುಖ. ಸಂಬಾಳಿಸ್ತಾನಂತೆ.. ಅಪ್ಪ ಸಾಯುವ ಹೊತ್ತಲ್ಲಿ ಹೇಳಿರಲಿಲ್ಲವಾ? ಯಾವ ಪತ್ರ ತೋರಿಸಿದರೂ ಹೆಬ್ಬೆಟ್ಟೊತ್ತಬೇಡ ಅಂತ..ಎಷ್ಟು ಪುಸಲಾಯಿಸಿದರೂ .. ಸಂಬಾಳಿಸ್ತಾನಂತೆ…
ಅದ್ಯಾರು ಶೇಷಗಿರಿರಾಯ..ಅವನ ಮೊಮ್ಮಾಣಿಯಂತೆ.. ಯಾವ ಸೀಮೆಯವ ಅಂವ..!ಹಾಂ. ದಿಬ್ಬಣೂರು.. ತಾನು ಮದುವೆಯಾಗಬೇಕಿದ್ದವ, ಶೇಷಗಿರಿರಾಯ.. ಸುಬ್ಬಮ್ಮ ಕಟಕಟನೆ ಹಲ್ಲು ಕಡಿದರು. ಶೇಷಗಿರಿ.. ಅವನ ಮಗ ಥೂ ಅವನ ಮುಖ. ಹಾಳಾಗಿ ಹೋಗಲಿ . ಎಲ್ಲ ಹಾಳಾಗಲಿ.. ನನ್ನ ಬದುಕು ಹಾಳಾದಂತೆ. .ಅಂದು ಅದ್ಯಾವುದೋ ನೆಪ ಮಾಡಿ ಬಂದವ.. ಸುಮ್ಮನೆ ಹೋಗಲಿಲ್ಲ. ಒಬ್ಬಳೇ ಇದ್ದಿದ್ದು ನೋಡಿ.. ಅಯ್ಯಪ್ಪಾ..ತನ್ನ ಬದುಕನ್ನೇ ನಾಶ ಮಾಡಿಬಿಟ್ಟ.. ಅವನ ತಾಯಿಯಾಗಿ ಹೋಗಬೇಕಿತ್ತಲ್ಲವೆ.. ತಾನು..? ಆದರವನು.. ತನ್ನನ್ನು.. ಛಿ..! ಅದೇನು ರಾಕ್ಷಸತನ.!. .ಅವನ ವಂಶ ಹಾಳಾಗ… .ಹೇಗೆ ಹೇಳಬೇಕಿತ್ತು ತಾನು.. ? ಹೇಳಿದರೂ ನಂಬುವವರಾರಿದ್ದರು ತನ್ನ..?..ಅದೂ ತಾನು ಮದುವೆಯಾಗಬೇಕಿದ್ದವನ ಮಗನೇ ತನಗೀ ಗತಿ ತಂದದ್ದು ಎಂದರೆ..ಛೀ !..ಸುಬ್ಬಮ್ಮ ಒಂದೇ ಸಮ ಶಪಿಸುತ್ತಲೇ ಇದ್ದರು. ಕಣ್ಣಲ್ಲಿ ಗಳಗಳನೆ ನೀರು;ಕೆನ್ನೆ ತೋಯಿಸುತಿತ್ತು. ಆಕ್ರೋಶ, ಅಸಹಾಯಕತೆಯ ಮಿಶ್ರ ಭಾವ. ಅವನಿಗೆ ಶಾಪ ಹಾಕುತ್ತಲೇ ಕಟ್ಟೆಯ ಮೇಲಿದ್ದ ಮಣ್ಣನ್ನು ಕೆದರುತ್ತಿದ್ದುಬಿಟ್ಟರು. ವಿಚಿತ್ರ ರೀತಿಯ ಆಕ್ರೋಶ ದುಃಖ ಅವರಲ್ಲಿ ಸಮ್ಮಿಳಿತವಾಗಿತ್ತು. ನಿಧಾನವಾಗಿ ಮೂಡಣದಲ್ಲಿ ಸೂರ್ಯ ಮುಳುಗುತ್ತಿದ್ದ. ಒಂದೇ ಸಮ ಕೂಗುತ್ತಿದ್ದ ಹಕ್ಕಿಯೂ ನೀರವವಾಗಿತ್ತು. ಸಂಜೆಗೆಂಪಿನ ವಾತಾವರಣದಲ್ಲಿ ಎಲ್ಲವೂ ಮೌನವಾಗಿತ್ತು.. ಅಂಥ ನಿಶ್ಶಬ್ದದಲ್ಲಿ ಸುಬ್ಬಮ್ಮನ ಧ್ವನಿ ಕರ್ಕಶವಾಗಿ ಕೂಗಿ ಕೂಗಿ ಹೇಳುತಿತ್ತು.. “ಹೌದು ನಾನು ಹುಚ್ಚಿ. ..ಅರೆಹುಚ್ಚಿ.. ಅಲ್ಲಲ್ಲ ಪಿರುಕಿ..ಹ್ಹಾ ಹ್ಹಾ ಹ್ಹಾ.. ನಾನು ಪೆದ್ದಿ.. ಕೆಟ್ಟಳು ಪೆದ್ದಿ .ಅವ ಬಂದ… ನಾನು ಕೆಟ್ಟೆ.. ನಾನು ಪೆದ್ದಿ.” ಅವಳ ಬಡಬಡಿಕೆ ಆ ಮುಸ್ಸಂಜೆಯನ್ನೂ ತಲ್ಲಣಗೊಳಿಸುವಂತೆ ಪ್ರತಿಧ್ವನಿಸುತ್ತಿತ್ತು.
ಹೆಚ್ಚಿನ ಬರಹಗಳಿಗಾಗಿ
ಮಗುಚಿತೊಂದು ಮೀನು ಬುಟ್ಟಿ
ಶೂಟಿಂಗ್ ಅನ್ಯಾಯ
ಕಾಸಿಲ್ ಆಫ್ ಆಲ್ಬಕರ್ಕೀ