ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವಿದ್ಯಾರ್ಥಿಗಳಲ್ಲಿ ಕುಂದುತ್ತಿರುವ ಬರವಣಿಗಾ ಸಾಮರ್ಥ್ಯ

ಸುಮಾ ವೀಣಾ

ಮಗುವಿಗೆ ಅಕ್ಷರಭ್ಯಾಸ ಮಾಡಿಸುವುದೆಂದರೆ, ಆ ದಿನ ನಿಗದಿ ಮಾಡುವುದೆಂದರೆ ಅಪ್ಪ ಅಮ್ಮಂದಿರಿಗೆ , ಅಜ್ಜಿ ತಾತಂದಿರಿಗೆ ಎಲ್ಲಿಲ್ಲದ ಸಂಭ್ರಮ. ಆ ವಿಶೇಷ ಅಸ್ಥೆ ಈಗಿಲ್ಲ! ಅಂದಿನ ಸಂಭ್ರಮ ಈಗ ಕೇವಲ ಸಾಂಕೇತಿಕ ಆಚರಣೆಯಾಗಿದೆ. ಆಧುನಿಕ ತಂತ್ರಜ್ಞಾನದ ಜಾಲಕ್ಕೆ ಸಿಕ್ಕಿರುವ ನಾವುಗಳು ನಮ್ಮ ಮಕ್ಕಳಿಗೆ ಸರಿಯಾಗಿ ಅಕ್ಷರಾಭ್ಯಾಸ ಮಾಡಿಸುತ್ತಿಲ್ಲ. ಕೆಲ ಮಕ್ಕಳಿಗೆ ಸ್ಲೇಟು ಬಳಪಗಳ ಪರಿಚಯವೇ ಇಲ್ಲ. ಮರಳಿನ ಮೇಲೆ ಅಕ್ಷರ ಬರೆಸುವ ಪರಿಪಾಠ ನೇಪಥ್ಯಕ್ಕೆ ಸರಿದು ಎಷ್ಟೋ ದಶಕಗಳೇ ಕಳೆದಿವೆ. ನಾವು ನಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ಅಳವಡಿಸಿಕೊಂಡಿರುವ ಆ್ಯಪ್ ಮೂಲಕ ಅಕ್ಷರ ತಿದ್ದಿಸುತಿದ್ದೇವೆ. ಹಿಂದಿನ ಅಧ್ಯಾಪಕರುಗಳು ಕಾಗುಣಿತ ಹೇಳಿಕೊಡುವಾಗ ಕೊಟ್ಟು, ಇಳಿ, ಗುಣಿಸು, ದೀರ್ಘ ಹೇಳಿಕೊಡುತ್ತಿದ್ದರು. ಈಗ ಕೇವಲ ಕ, ಕಾ, ಕಿ, ಕೀ ಎಂದು ಹೇಳಿಕೊಡುತ್ತಿದ್ದೇವೆ. ಇದು ತಪ್ಪುಕ್ರಮ ಹಾಗಾಗಿ ಮಕ್ಕಳ ಬರವಣಿಗೆಯ ಸಾಮರ್ಥ್ಯಕ್ಕೆ ನಾವೇ ಮೊದಲ ವಿಘ್ನ ಎಂದರೆ ತಪ್ಪಾಗುವುದಿಲ್ಲ. ಮಕ್ಕಳಿಗೆ ‘ಕಾಗುಣಿತ’ ಎಂದು ಉಚ್ಛರಿಸಲೂ ಇಂದು ಬರುತ್ತಿಲ್ಲ ‘ಕಾಕುಣಿತ’ ಎಂದು ಹೇಳುತ್ತಿವೆ. ಕಾಪಿ ಬರೆಸುವಾಗ ಹಿಂದೆ ಮೊದಲ ಸಾಲನ್ನು ಅಧ್ಯಾಪಕರುಗಳು ಬರೆದರೆ ಆ ಹಾಳೆಯ ಕಡೆಯ ಸಾಲಿನಿಂದ ಕಾಫಿ ಬರೆಯಬೇಕಾಗಿತ್ತು ಹಾಗಾಗಿ ತಪ್ಪುಗಳಾಗುತ್ತಿರಲಿಲ್ಲ. ಈಗೆಲ್ಲಾ ಕಾಪಿ ಪುಸ್ತಕದ ಮೇಲೇಯೇ ಮೊದಲೆ ಅಚ್ಚಾಗಿರುತ್ತದೆ. ಮೇಲಿನ ಸಾಲನ್ನು ನೋಡಿ ಕೆಳಸಾಲನ್ನು ಬರೆಯುವುದು ಕಣ್ತಪ್ಪು,ಕೈತಪ್ಪು ಆದಲ್ಲಿ ಆ ಹಾಳೆಯ ತುಂಬೆಲ್ಲಾ ತಪ್ಪುಗಳು ಪುನರಾವರ್ತಿಸುತ್ತವೆ.

ಉದಾಹರಣೆಗೆ ಶಕುಂತಲೆ ಬರೆಯುವಾಗ ಅನುಸ್ವಾರವನ್ನು ಒಂದು ಸಾಲಿನಲ್ಲಿ ‘ಶ’ ಅಕ್ಷರದ ನಂತರ ಬರೆದರೆ ‘ಶಂಕುತಲೆ’ ಆಗುತ್ತದೆ ಮುಂದಿನ ಸಾಲನ್ನೂ ಹಾಗೆ ಬರೆದರೆ ತಪ್ಪನ್ನು ಮತ್ತೆ ಮತ್ತೆ ಬರೆದಂತಾಗುತ್ತದೆ ಅಲ್ಲವೇ! ಅಲ್ಲಿಗೆ ಇದು ಎರಡನೆ ವಿಘ್ನ. ಬರವಣಿಗಾ ಸಾಮರ್ಥ್ಯದಲ್ಲಿ ಹಿಂದಿನ ಟೀಚರ್‍ಗಳು ಮೊದಲು ಸಿಲಬಸ್ ಎಂದು ಕಲಿಸುತ್ತಿರಲಿಲ್ಲ. ಮಕ್ಕಳು ಚೆನ್ನಾಗಿ ಅಕ್ಷರಗಳನ್ನು ಸ್ವತಂತ್ರವಾಗಿ ಬರೆಯುವವರೆಗೂ ತಿದ್ದಿಸುತ್ತಿದ್ದರು. ಆದರೆ ಈಗ ಸಿಲಬಸ್! ಮಂತ್ಲಿ ಟೆಸ್ಟ್, ಯುಟಿ ಟೆಸ್ಟ್ ಕೊಡಬೇಕು ನೋಟ್ ಪುಸ್ತಕಗಳಲ್ಲಿ ಬರೆಸಿ ಖಾಲಿ ಮಾಡಿಸಿ ಪೋಷಕರಿಗೆ ಬರೆ ಬರೆಸಿದ ಪ್ರೋಗ್ರೆಸ್ ತೋರಿಸಬೇಕಷ್ಟೆ. ಪೂರ್ವ ಅಭ್ಯಾಸವಿಲ್ಲದೆ ನೇರವಾಗಿ ಅಕ್ಷರಗಳನ್ನೇ ಬರೆಸುವ ಕ್ರಮ. ಇವೆಲ್ಲ ಭಾಷಾಶಿಕ್ಷಕರಿಗೆ ಪ್ರೌಢಶಿಕ್ಷಣದ ಹಂತದಲ್ಲಿ ಮಕ್ಕಳಿಗೆ ಭೋದಿಸಲು ಕಷ್ಟವಾಗುತ್ತಿದೆ. ಕಾಗುಣಿತ ಎಂದರೆ ಸ್ಪೆಲಿಂಗಾ………………………………?? ಎಂದು ನಮ್ಮ ಮಕ್ಕಳು ಕೇಳುವಮತಾಗಿದೆ.

50% ಭಾರತೀಯ ಮಕ್ಕಳು ಸ್ಕ್ರೀನ್ ಅಡಿಕ್ಟ ಆಗಿದ್ದಾರೆ.

ನಾವೆಲ್ಲಾ ಶಾಲೆ ಹೋಗುವಾಗ ದಿನದ ಕಡೆಯ ಅವಧಿಯಲ್ಲೋ ಯಾರಾದರೂ ಶಿಕ್ಷಕರು ರಜೆಯಲ್ಲಿದ್ದರೆ ಅವರ ತರಗತಿಗಳಲ್ಲಿ ಉಕ್ತಲೇಖನ ಬರೆಸುತ್ತಿದ್ದರು ಈಗಿಲ್ಲ ಇಂಗ್ಲೀಷ್‍ನಲ್ಲಿ ಮಾತ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪೆಲ್ಲಿಂಗ್ ಹೇಳುವ ಸ್ಪರ್ಧೆಗಳು ಆಯೋಜಿಸಲ್ಪಡುತ್ತಿವೆ. ಹಾಗೆ ಕನ್ನಡದಲ್ಲಿಯೂ ‘ಕಾಗುಣಿತ ಶಿರೋಮಣಿ’ ಎಂಬ ಶೀರ್ಷಿಕೆಯಡಿ ಕಾಗುಣಿತ ಸ್ಪರ್ಧೆಗಳನ್ನು ಏರ್ಪಡಿಸಿದರೆ ಚೆನ್ನಾಗಿರುತ್ತದೆ. ಹಲವರ್ಷಗಳ ಹಿಂದೆ ಪಾಠಗಳು ಮುಗಿದ ನಂತರ ಅದಕ್ಕೆ ಸಂಬಂಧಿಸಿದ ಟಿಪ್ಪಣಿಗಳಲ್ಲಿ ತರಗತಿಗಳಲ್ಲಿ ಹೇಳಿ ಬರೆಸುತ್ತಿದ್ದರು.

Little schoolboys and schoolgirls in uniform writing on slate

ಈಗ ವಿದ್ಯಾರ್ಥಿಗಳಲ್ಲಿ ನೋಟ್ಸ್ ಮಾಡುವ ಕ್ರಮ ತಪ್ಪುತ್ತಿದೆ. ಮಿಸ್ ಗೈಡ್ ಮಾಡುವ ಗೈಡ್‍ಗಳ ಮೊರೆ ಹೋಗುವಿಕೆ ಬರವಣಿಗೆಯ ಸಾಮಥ್ರ್ಯದ ಮುಂದಿನ ವಿಘ್ನ. ಜೆóರಾಕ್ಸ್ ನೋಟ್ಸ್, ನೆಟ್ ಬ್ರೌಸಿಂಗ್, ಆನ್ಲೈನ್ ಕೋಚಿಂಗ್ ನಂತರ ವಿಘ್ನಗಳು. ಕಾಲದ ನಿರಂತರತೆಯಲ್ಲಿ ಪ್ರಶ್ನೆಪತ್ರಿಕೆ ಸಂಯೋಜನೆಯಲ್ಲಿ ಅನೇಕ ಬದಲಾವಣೆಗಳಾಗಿವೆ. ವಾಕ್ಯಗಳಲ್ಲ ಅಲ್ಲ ಪದಗಳ ಸಂಖ್ಯೆಯಲ್ಲಿ ಉತ್ತರ ನಿರೀಕ್ಷಿಸುವುದು, ಬಹುಆಯ್ಕೆ ಮಾದರಿಯ ಪ್ರಶ್ನೆ ಪತ್ರಿಕೆ ನೀಡುವುದು ಮಕ್ಕಳ ಲೇಖನ ಸಾಮಥ್ರ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿವೆ. ಧ್ವನಿ ಲಿಪ್ಯಂತರ ತಂತ್ರಾಂಶ ಬಂದಿರುವುದು ವಿದ್ಯಾರ್ಥಿಗಳ ಕಲಿಕಾ ದೃಷ್ಠಿಯಿಂದ ಅತ್ಯಂತ ದೊಡ್ಡ ವಿಘ್ನ ಎನ್ನಬಹುದು. ಆಧುನಿಕ ತಂತ್ರಜ್ಞಾನದ ಕಾಲವೆಂದು ಬೀಗುವ ನಾವು ನಮ್ಮ ಮಕ್ಕಳಿಗೆ ಶಬ್ದಕೋಶ ನೋಡುವ ಕ್ರಮ ಹೇಳಿಕೊಟ್ಟಿಲ್ಲ. “google search” ಕೊಡು ಎಂದು ಸುಲಭವಾಗಿ ಹೇಳಿದ್ದೇವೆ. ಪದಬಂಧಗಳನ್ನು ವಾಕ್ಯಸರಿಪಡಿಸುವಿಕೆಯಂತಹ ಚಟುವಟಿಕೆಗಳ ಪರಿಚಯ ಮಾಡಿಸಿಲ್ಲ. ಶಬ್ದದಾರಿದ್ರ್ಯ ನಮ್ಮ ವಿದ್ಯಾರ್ಥಿಗಳನ್ನು ಭಾದಿಸುತ್ತಿದೆ ಅದೂ ಇದೂ, ಹಾಗೆ, ಹೀಗೆ ಎಂದು ಶಬ್ದಕ್ಕೆ ಚಡಪಡಿಸುತ್ತಿದ್ದಾರೆ. “ಅರ್ಥಗಳಲ್ವ! ಪರೀಕ್ಷಾ ಹಾಲ್‍ನಲ್ಲೇ ಕೇಳಿ, ನೋಡಿ ಬರೆದರಾಯ್ತು” ಎಂಬ ಹುಂಬತನವಿದೆ.

ಗ್ರಂಥಸ್ಥ ಭಾಷೆ ಗೂ ಅಡು ಭಾಷೆಗೂ ಇರುವ ವ್ಯತ್ಯಾಸವೇ ತಿಳಿದಿಲ್ಲ. ‘ಭಗವಂತ’ ಬರೆಯಲು ‘ಬೆಗ್‍ವಂತ’ ಎಂದು ಬರೆಯುತ್ತಾರೆ. ವಾಮನ (ಕಾವ್ಯ ಮೀಮಾಂಸಕರಲ್ಲಿ ಒಬ್ಬ) ಬರೆಯಲು ವಮನ (ವಾಂತಿ) ಎಂದು ಬರೆಯುತ್ತಾರೆ. ದೂರಾಲೋಚನಗೆ ದುರಾಲೋಚನೆ ಎಂದು ಬರೆಯುತ್ತಾರೆ. ಮಳೆ ಧಾರಕಾರವಾಗಿ ಬರುತ್ತಿದೆ ಎಂದು ಬರೆಯಲು ಮಳೆ ನೀರು ಧಾರಾಕಾರ (ದಾರದ ಆಕಾರ) ಬರುತ್ತಿದೆ ಎಂದು ಬರೆದು ನಮ್ಮ ವ್ಯವಸ್ಥೆಯನ್ನು ಅಣಕಿಸುತ್ತಿದ್ದಾರೆ. ಯಾವುದನ್ನೂ ಬರೆದು ಕಲಿಯಲು ಹೋಗದ ಇವರು ಬಾಯಿಪಾಠಮಾಡುತ್ತಾರೆ ಪರೀಕ್ಷೆಯಲ್ಲಿ ಸಮಯ ಸಾಕಾಗಲ್ಲ ಎಂಬ ಸಾರ್ವಕಾಲಿಕ ದೂರನ್ನು ಒಕ್ಕೊರಲಿನಿಂದ ಹೇಳುತ್ತಾರೆ. ಪೂರ್ವಾಭ್ಯಾಸವಿಲ್ಲದೆ ನೇರವಾಗಿ ಪರೀಕ್ಷೆಯಲ್ಲಿ ಬರೆಯತೊಡಗಿದರೆ ಇನ್ನೇನಾಗುತ್ತದೆ……………..? ಒಂದಷ್ಟು ತಪ್ಪುಗಳಾಗುತ್ತವೆ.

ಉದಾಹರಣೆಗೆಂದು ಕೆಲವು ಪದಗಳ ಪಟ್ಟಿನೋಡೋಣ.

ಅಲ್ಲಿದ್ದವರು>ಅಳಿದವರು, ಅಭಿನವ>ಅಭಿನಯ, ಅವಮಾನ>ಹವಮಾನ, ಅನುಮಾನ>ಹನುಮಾನ, ಅನುಯಾಯಿ>ಅನುನಾಯಿ, ಅಧ್ಯಕ್ಷ>ಅದಕ್ಷ, ಆರೋಗ್ಯ>ಅಯೋಗ್ಯ, ಅಯ್ಯೋ ನಿಜ>ಅಯೋನಿಜ, ಅಲೆ>ಅಳೆ, ಆಸ್ಪತ್ರೆ>ಅಪ್ಪಸತ್ರೆ, ಆಗಲಿ>ಅಗಲಿ, ಅಲ್ಲಿ>ಹಲ್ಲಿ, ಆವು>ಹಾವು, ಆದರ>ಹಾದರ, ಇಲ್ಲಿ>ಇಲಿ, ಇತಿಹಾಸ>ಹಿತಿಹಾಸ, ಎದೆ>ಹೆದೆ, ಓಲೆ>ಒಲೆ, ಕದಡು>ಕಾದಾಡು, ಕಡುಪಾಪ>ಕಾಡುಪಾಪ, ಕಾಲಿಗೆ>ಕಾಳಿಗೆ, ಕಳಿತ>ಕೊಳೆತ, ಕುಂತಿ>ಕುಂಠಿ, ಕೈಮುಗಿ>ಕೈಮುರಿ, ಕೊಳೆ>ಕೊಲೆ, ಕೋಟಿ>ಕೋತಿ, ಖಚರ>ಖಚಡ, ಗದ್ದೆ>ಗೆದ್ದೆ, ಜಗ>ಜಾಗ, ಜಾಮೀನು>ಜಾಮೂನು, ಜಾಗ್ರತೆ>ಜಾತ್ರೆಗೆ, ತಪ್ಪು>ತುಪ್ಪ, ದುಃಖಿತನಾಗುತ್ತಾನೆ>ದುಃಖಿತ ನಗುತ್ತಾನೆ, ದಾನ>ದನ, ಧೀಮಂತ>ದಿವಂಗತ, ನಲಿ>ನುಲಿ, ನಾರಿ>ನರಿ, ನಲ್ಲಿ>ನಳ್ಳಿ, ಬಲೆ>ಬಳೆ, ಬಾಲೆ>ಬಾಳೆ, ಬಹುಜನ>ಭೋಜನ, ಭಕ್ತಿ>ಬತ್ತಿ, ಬಿಡಿ>ಬೀಡಿ, ಭರಿತ>ಬೆರೆತ, ಮಾನವ>ಮಾವನ, ಮುಂದಿನ>ಮುದಿಯ, ಮೆಲು>ಮೇಲು, ಮೊರೆ>ಮರೆ, ಮೆಲ್ಲುತ್ತಿದ್ದನು>ಮೇಯುತ್ತಿದ್ದನು, ಮೇಲಿನವಾಕ್ಯ>ಮಲಿನವಾಕ್ಯ, ಮುಸುಕು> ಮಸುಕು, ಯಜಮಾನ>ಯಮಾನ, ರಮಣ>ರಾವಣ, ಶೀತ>ಸೀತ, ಹುಲ್ಲು>ಹಲ್ಲು, ಹಕ್ಕಿ>ಅಕ್ಕಿ, ಹೋಗೇಬಿಟ್ಟರು>ಹೊಗೆಬಿಟ್ಟರು, ಹುಳಿ>ಉಳಿ, ಸರಿ>ನರಿ, ಸ್ವಾಗತಿಸಿದ>ಸ್ವ ಗತಿಸಿದ, ಸೂಕ್ಷ್ಮ>ಸುಷ್ಮ

ಹೀಗೆ.. ಓದುಗರು ತಮ್ಮ ಅನುಭವಕ್ಕೆ ಬಂದ ಇಂಥ ಪದಗಳ ಪಟ್ಟಿ ಇದ್ದರೆ ಅವಶ್ಯ ಸೇರಿಸಿಕೊಳ್ಳಿ.

ಆಧುನಿಕತೆ ಎಂಬಂತೆ ಶಿಕ್ಷಕರೂ ಸಹ ಬ್ಲಾಕ್‍ಬೋರ್ಡ್‍ಗಳಲ್ಲಿ ಬರೆದು ಪಾಠ ಮಾಡುವುದು ಟೈಪ್ ಎಡಿಟ್ ಗಳಿಂದ ಕಡಿಮೆಯಾಗಿದೆ. ಪೇಪರ್ ಓದಿ ಪೇಪರ್ ಕಟ್ಟಿಂಗ್ಸ್ ಇಡುತ್ತಿದ್ದ ಕಾಲವಲ್ಲ ಈಗ ಸ್ಮಾರ್ಟ್ ಕ್ಲಾಸ್ ಗಳ ಮೂಲಕ ಶಿಕ್ಷಣ ನೀಡುವುದು ಖಾಸಗಿ ವಿದ್ಯಾಸಂಸ್ಥೆಗಳ ಹೆಚ್ಚುಗಾರಿಕೆಯಾಗಿದೆ. ಎಲೆಕ್ಟ್ರಾನಿಕ್ ಉಪಕರಣಗಳ ಮೂಲಕ ಸಾಕಷ್ಟನ್ನು ನಮ್ಮ ಮಕ್ಕಳು ಕಲಿಯುತ್ತಾರೆ ನಿಜ ಆದರೆ ಸೃಜನಶೀಲತೆಯನ್ನು ಕಳೆದುಕೊಳ್ಳುತ್ತಾರೆ. ನುಡಿಭಾಷೆ , ನೋಡುಭಾಷೆ ಚೆನ್ನಾಗಿಯೇ ಇವೆ ಆದರೆ ಬರಹದ ಭಾಷೆ ತನ್ನ ಘನತೆಯನ್ನು ಕಳೆದುಕೊಳ್ಳುತ್ತಿದೆ.

ಶಿಕ್ಷಣತಜ್ಞರು, ಶಿಕ್ಷಕರು, ಪೋಷಕರು ಇತ್ತ ಗಮನ ಹರಿಸಬೇಕಾಗಿದೆ. ಇಂದಿನ ಮಾರುಕಟ್ಟೆಯಲ್ಲಿ ಲೇಖನ ಸಾಮಗ್ರಿಗಳು ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯವಿವೆ. ಆದರೆ ಅದರ ಉಪಯೋಗ ನಮಗೆ ಬೇಕಿಲ್ಲ. ಕಂಪ್ಯೂಟರ್ ನಲ್ಲಿ ಟೈಪ್ ಮಾಡಿ ಎಡಿಟ್ ಮಾಡಿ PPTಮಾಡಿ ಮಕ್ಕಳಿಗೆ ಪಾಠ ಮಾಡುತ್ತಿದೇವೆ. ಆಧುನಿಕ ತಂತ್ರಜ್ಞಾನದ ವಿರೋಧಿಯಾಗಿ ಈ ಮಾತನ್ನು ಹೇಳುತ್ತಿಲ್ಲ ಕಲಿಕಾಸಾಮಗ್ರಿಗಳನ್ನು ಬಳಸಿಕೊಂಡು ಅವನ್ನೇ ಬರವಣಿಗೆಗೆ ಅಳವಡಿಸಿಕೊಂಡು sಛಿಚಿಟಿ ಮಾಡಿ ಮತ್ತೆ P.P.T. Work ಕೂಡ ಮಾಡಬಹುದಲ್ಲ ಒಂದೇ ರೀತಿಯ ಕಂಪ್ಯೂಟರೀಕೃತ ಅಕ್ಷರಗಳನ್ನು ನೀಡಿ ನಮ್ಮ ವಿದ್ಯಾರ್ಥಿಗಳು ಏಕತಾನತೆಗೆ ಒಳಗಾಗಿದ್ದಾರೆ. ದುರಂತವೆಂತರೂ ಸರಿ, ಅದೃಷ್ಟವೆಂದರೂ ಸರಿ ನಮ್ಮ ಮಕ್ಕಳನ್ನು ಅವರ ಬರವಣಿಗಾ ಸಾಮಥ್ರ್ಯ ಹೆಚ್ಚಿಸಲು ವಾರಾಂತ್ಯ ತರಗತಿಗಳು ನಮ್ಮ ನಡುವೆ ಬರುತ್ತಿವೆ. ಒಂದು ಕಾಲದಲ್ಲಿ ಅಕ್ಷರಸ್ಥರ ಸಂಖ್ಯೆ ಕಡಿಮೆ ಇತ್ತು ಬೋರ್ಡ್‍ಗಳನ್ನು ಓದಲು ಕಷ್ಟಪಡುತ್ತಿದ್ದರೂ. ಈಗ ಅಕ್ಷರಸ್ಥರು ಇದ್ದರೂ ತಪ್ಪಾಗಿ ಓದುತ್ತಾರೆ. ‘ಉದ್ದೂರು’ ಎಂದಿದ್ದರೆ, ‘ಊದೂರ್’ ಎಂದು ಮುಲ್ಕಿ ಎಂದಿದ್ದರೆ ‘ಮುಲಿ’ ಬಸ್ ಎಂದು ಓದುವ ಕೆಲಸ. ‘ಹುಬ್ಬಳ್ಳಿ’ ಇದ್ದದ್ದನ್ನ ‘ಹುಬಳಿ’ ಎಂದು ಓದುತ್ತಾರೆ ಇದಕ್ಕೆ ಕಾರಣ ಕಾಗುಣಿತದ ಸಮಗ್ರ ಪರಿಚಯವಿಲ್ಲದೆ ಇರುವುದು. ಬರವಣಿಗೆಯ ಸಾಮರ್ಥ್ಯ ಇಲ್ಲದೆ ಇರುವುದು. ಸರಳವಾದ ಪದಗಳನ್ನು ಹೀಗೆ ಓದಿದರೆ ಇನ್ನು ಗಂಭೀರ ಓದನ್ನು ಹೇಗೆ ನಿರೀಕ್ಷಿಸುವುದು? ನಡೆ-ನುಡಿಯನ್ನು ಹೇಗೆ ಜೊತೆಗೆ ಹೇಳುತ್ತೇವೆಯೋ ಹಾಗೆ ಬರೆಹವನ್ನು ಸೇರಿಸಿಕೊಂಡು ಕೈಬರೆವಣಿಗೆಗೆ ಆದ್ಯತೆ ನೀಡಿದರೆ ನಮ್ಮ ಮಕ್ಕಳಲ್ಲಿ ಇನ್ನಷ್ಟು ಸೃಜನಶೀಲತೆಯನ್ನು ಬೆಳೆಸಿದಂತಾಗುತ್ತದೆ.