- ಸಮಾಧಿ ಸಡಗರ - ಜನವರಿ 22, 2022
- ನಿಬ್ಬು ಮುರಿದು ಹಾರಿತು - ಸೆಪ್ಟೆಂಬರ್ 25, 2021
- ಮತ್ತೆ ಬಂತು ಆಷಾಢ - ಜುಲೈ 21, 2021
ಮೊಬೈಲು ರಿಂಗಣಿಸುತ್ತಲೇ ಇತ್ತು
ಪ್ರಶ್ನೆಯೊಂದೇ, ಸಹಸ್ರಾಬ್ದಿ
ಆ ಊರು ಯಾವಾಗ ಬಿಡುತ್ತದೆ.
ಅಷ್ಟು ಅವಸರವಿತ್ತು
ಮನದ ತುಮುಲಕ್ಕೆ ಆವರಿಸಿತ್ತು ಮಂಜುತೆರೆ,
ಅದರಾಚೆ ಬರೀ ಗಾಢಾಂಧಕಾರ
ಕಾರ್ಗತ್ತಲ ಕತ್ತರಿಸದ ಬೆಳಕು,
ಹಗಲ ಮಂಜಿಗೆ ಬಾಗಿ
ತತ್ತರಿಸುವ ಬೆಳಕ ರೇಖೆ ; ಹಿಮಕುರುಡು
ಹೀಗಾಗಬಾರದಿತ್ತು
ಕೊರಗಿತ್ತು ಕಾಡುಹಕ್ಕಿ
ನೀತಿ ನಿಯಮದ ಹಾದಿಯನಗೆದು
ಮುಳ್ಳು ಕಂಟಿಯನಿಟ್ಟು
ದಿಕ್ಕು ಬದಲಿಸುವ ಯತ್ನ ಮಾಡಬಾರದಿತ್ತು
ಯಾರೋ ಹೆಣೆದ ತಂತ್ರದ ನೊಗವು
ಕುತ್ತಿಗೆಯನೇರಲು ಬಿಡಬಾರದಿತ್ತು
ಅಯ್ಯೋ
ಅಮುಕುತ್ತಿದೆ ಕೊರಲು ಬಿಗಿಯುತ್ತಿದೆ
ಗಂಟಲಿಂದ ದನಿಯೇಳದಾಗಿದೆ
ಕಾಲುಗಳು ಕುಸಿಯುತ್ತಿವೆ ;
ಮನಸು ಅದಕಿಂತ ಭಾರ ;
ಕುಸಿತ ಕುಸಿತ
ಯಾರೂ ತಡೆವಂತೆ ಕಾಣುತ್ತಿಲ್ಲ
ತಂತ್ರ ಹೆಣದ ಮನಸುಗಳು ಬಾಯಾಗಿ
ಮಂತ್ರ ಮಣಮಣಿಸುತ್ತಿವೆ
ಅವು ಮಣಿಗಳ ಎಣಿಸುತ್ತಿವೆ.. ಒಂದು..ಎರಡು…ಓಹೋ
ಸಭೆಯ ಅರ್ಧಕ್ಕಿಂತ ಹೆಚ್ಚು
ಇನ್ನು ನಮ್ಮದೇ ಅಧಿಕಾರ
ಅಲ್ಲಿ ಕೂತವರ ದಬ್ಬಿಬಿಡಿ
ಅಂತೂ ತೆರೆಯಿತು
ಸಭಾಪರ್ವದ ಹೊಸ ಆವೃತ್ತಿ
ಪ್ರಜಾಪ್ರಭುತ್ವಕೆ ನೀಡಿ ನಿವೃತ್ತಿ
ದ್ರೌಪದಿಯ ಮುಡಿಗೆ ಕೈಯಿಕ್ಕಿ
ವಸ್ತ್ರಾಪಹರಣವಾಗಿತ್ತು
ಭೀಷ್ಮ ದ್ರೋಣ ಕೃಪರು ಇಲ್ಲೂ ಇದ್ದರು
ದುರ್ಯೋಧನ, ದುಶ್ಶಾಸನ ಶಕುನಿ ಕರ್ಣ
ಹಕ್ಕಿ ಹಾಡುತ್ತಿತ್ತು ಅಯ್ಯೋ
ಹೀಗಾಗಬಾರದಿತ್ತು
ಎಲ್ಲಿದ್ದಾನೆ ಕೃಷ್ಣ
ರಣಾಂಗಣದ ನಡುವೆ ಚಾಟಿಯ ಹಿಡಿದು
ಅಭಯವನಿತ್ತವನು
ಬಾಗಿದ ಗಾಂಡೀವವ ಹೆದೆಯೇರಿಸಲು
ಮನಕೆ ಕುಮ್ಮಕ್ಕು ಕೊಟ್ಟವನು
ಹೌದು
ಇಲ್ಲಿ ಅವನ ಬಿಟ್ಟು ಎಲ್ಲರಿದ್ದಾರೆ
ಕುರ್ಚಿಯ ಕಸಬುದಾರರು.
ಏನು ಗಳಿಸಿದೆ ನಾನು ಬರಿಯ ಆಪತ್ತು
ಯಾರಿಗೆ ಯಾರೋ ಕೊಡುವ ಸಂಪತ್ತು
ಹೀಗಾಗಬಾರದಿತ್ತು
ಕಾಡಲ್ಲಿ ಗೂಡು ಕಟ್ಟಿದ್ದ ಹಕ್ಕಿ
ತನ್ನ ಪಾಡಿಗೆ ತಾನು ಬೆಚ್ಚಗೆ
ರೆಂಬೆಕೊಂಬೆಗಳ ಹಣ್ಣು ಹಂಪಲ ತಿಂದು
ತನ್ನ ಪಾಡಿಗೆ ತಾನು ಹಾಡುವ ಹಕ್ಕಿ
ತೃಪ್ತಿಯಲಿ ಜೂಗರಿಸುವ ಹಕ್ಕಿ
ನಾಡಿಗೆ ಬಂದಿತ್ತು
ಹೊಸ ಹಣ್ಣನ್ನುಣ್ಣುವ ಬಯಕೆಯು ಬಲಿತಿತ್ತು
ಪಾಪ ಹಕ್ಕಿಯ ರೆಕ್ಕೆಯ ಕತ್ತರಿಸಿ
ಕೊಕ್ಕಿಗೆ ತಂತಿ ಬಿಗಿದು ಒಳಗೆ ಬಿಟ್ಟರು
ಅಲ್ಲಿ ಹ್ಞು ಅನ್ನಿಸಹೊರಟವರು
ಹೊರಗೆ ಊಹ್ಞು ಅಂದುಬಿಟ್ಟರು
ಹೀಗಾಗಬಾರದಿತ್ತು
ಸಂಕೋಲೆಯ ಕಲೆಯು ಹೀಗೇ ಉಳಿದುಬಿಡುತ್ತದೆ
ಶಾಲು ಹೊದ್ದರೂ ಕಾಣುತ್ತದೆ
ಆತ್ಮಸಾಕ್ಷಿಯ ಕನಲು
ಆತ್ಮನಿರ್ಭರದ ಹೊಸಬಿರಸು
ಆತ್ಮ ಸ್ಥೈರ್ಯವ ಕದಡಿ
ಬಲಿದಾನಕ್ಕೆ ಸಿದ್ದವಾಗಿತ್ತು ಹಕ್ಕಿ
ಓಹ್..
ಬಂದೇ ಬಿಟ್ಟಿತು ರಭಸದಲಿ ಸಹಸ್ರಾಬ್ದಿ
ಗುಡು..ಗುಡು.. ಗುಢಾರ್….
ಮತ್ತೆ
ಚುಕು ಬುಕು ಅನ್ನುತ್ತಾ ರಾಜಧಾನಿಯ ಕಡೆಗೆ
ಹಕ್ಕಿಯ ಹೆಣವು ಗುರುತು ಸಿಗದಂತೆ
ಚೂರು ಚೂರಾಗಿತ್ತು.
ಪ್ರಜಾಪ್ರಭುತ್ವವೆಂಬ ದ್ರೌಪದಿ
ದುಶ್ಶಾಸನನ ರಕುತದಲಿ ಮುಡಿಯನದ್ದುವೆನೆಂದು
ಶಪಥ ಮಾಡಿದಳೋ ಇಲ್ಲವೋ ತಿಳಿಯದು
ಯಾಕೆಂದರೆ ಎಲ್ಲರೂ ದುಶ್ಶಾಸನರೇ ಇದ್ದರು
ಮುಡಿಗೆ ಉಡಿಗೆ ಕೈಯಿಟ್ಟವನಾರೋ ತಿಳಿಯದಾಗಿತ್ತು
ಅಂತೂ
ಬೆಚ್ಚನೆ ಗೂಡಲಿದ್ದ ಕಾಡು ಹಕ್ಕಿಯ
ದೇಹ ಛಿದ್ರವಾಗಿತ್ತು.
ಆತ್ಮಸಾಕ್ಷಿಯ ಆತ್ಮಹತ್ಯೆಯಾಗಿತ್ತು.
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ