ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಡೆಯಲಾರದ ನಾಣ್ಯಗಳು…?

ರಜನಿ ಗರುಡ
ಇತ್ತೀಚಿನ ಬರಹಗಳು: ರಜನಿ ಗರುಡ (ಎಲ್ಲವನ್ನು ಓದಿ)

“ಓಂ ಭೂರ್ಭುವಃ ಸ್ವಃ|| ತತ್ಸವಿತುವರೇಣ್ಯಂ|| ಭರ್ಗೋ…ಎಂದು ಮೂರು ಗಂಟೆ ಬೆಳಗಿನ ಜಾವದಲ್ಲಿ ನನ್ನ ಮಾವ ಶ್ರೀಪಾದ ರಾಯರು ಮಂತ್ರ ಪ್ರಾರಂಭಿಸಿದರೆಂದರೆ ಇಡೀ ಮನೆ ಏನು ಕೆ.ಸಿ. ರಾಣಿ ರಸ್ತೆಯಲ್ಲಿರುವ ಎಲ್ಲ ಮನೆಯವರೂ ಎದ್ದು ಕೂಡಬೇಕು ಅಷ್ಟು ಜೋರಾಗಿ , ಉಚ್ಛ ಕಂಠದಲ್ಲಿ ಹೇಳುತ್ತಿದ್ದರು. ಹೊರಗಿನ ರೂಮಿನಲ್ಲಿ ಮಲಗಿರುತ್ತಿದ್ದ ನಾನು ಮತ್ತು ಪ್ರಕಾಶ ‘ಥೂ’ ಅಂತೊಮ್ಮೆ, ‘ಪ್ಚ್’ ಅಂತ​ ಇನ್ನೊಮ್ಮೆ ಎನ್ನುತ್ತಾ ಮಗ್ಗಲು ಬದಲಿಸುತ್ತಾ ನಿದ್ದೆ ಇಲ್ಲದೆ ಸಿಡುಕುತ್ತಿದ್ದೆವು. ಪಡಸಾಲೆಯಲ್ಲಿ ಮಲಗುವ ನನ್ನತ್ತೆ ಮಾತ್ರ ಗಾಢವಾದ ನಿದ್ದೆಯಲ್ಲಿರುತ್ತಿದ್ದರು. ಐದು ಗಂಟೆಯಾಯಿತೆಂದರೆ ‘ಕುಂಕುಮಾ ಏ ಕುಂಕುಮಾ ಯೋಳ„, ಎಷ್ಟು ಹೊತ್ತಾತು, ನಳಾ ಬರೋದದ.’ ಅವರು ಏನೂ ಹೇಳದೆ ಮಗ್ಗಲು ಬದಲಿಸಿ ಮಲಗಿ ಬಿಡುತ್ತದ್ದರು. ಮತ್ತೂ ಸ್ವಲ್ಪ ಸಮಯ ಬಿಟ್ಟು ‘ಏ ಪ್ರಕಾಶ, ಛಾ ಆಗೇದ’ ಎಂದು ಪ್ರಾರಂಭಿಸುತ್ತಿದ್ದರು. ಇವೆಲ್ಲ ಶ್ರೀ ಸೂಕ್ತ, ಪುರುಷ ಸೂಕ್ತಗಳ ಜೊತೆಯಲ್ಲಿ ಅವ್ಯಾಹತವಾಗಿ ನಡೆದಿರುತ್ತಿತ್ತು. ನನ್ನತ್ತೆ ಕುಂಕುಮ ಬಾಯಿ ಎದ್ದು ‘ಛಾ ಎಲ್ಲದ?’ ಎನ್ನುತ್ತಿದ್ದಂತೆ ಆದಿನದ ವೇಳಾಪಟ್ಟಿ ಪ್ರಾರಂಭ ಮಾಡಿದರೆ ನಾವಿಬ್ಬರು ಏಳಲೇಬೇಕು. ಶ್ರೀಪಾದರಾಯರು ಕೆಂಪನೆಯ ಅಂಡರ್‍ವೇರ್ ಹಾಕಿಕೊಂಡು ಕೂತಲ್ಲೇ ತೆವಳುತ್ತ ಇಡೀ ಮನೆಯನ್ನು ಕಸ ಹೊಡೆದು ನೆಲವರೆಸುತ್ತಿದ್ದರು. ಆಗಂತೂ ನಾವು ಏಳಲೇ ಬೇಕಾಗುತ್ತಿತ್ತು.

ನಂತರ ‘ನಳಾ’ ಬಂದರಂತೂ ಮುಗಿದೇ ಹೋಯಿತು. ದೊಡ್ಡ ದೊಡ್ಡ ತಾಮ್ರದ ಕಡಾಯಿಗಳನ್ನು ಖಾಲಿ ಮಾಡಿ ಹುಣಸೆ ಹಣ್ಣು, ನಿಂಬೆಹಣ್ಣು ಹಾಕಿ ತಿಕ್ಕಿ ಸಣ್ಣ ಬಿಂದಿಗೆಯಲ್ಲಿ ತುಂಬಿಸಿ ತುಂಬಿಸಿ ಇವುಗಳನ್ನೆಲ್ಲ ತುಂಬಬೇಕು. ನೀರು ಜೋರಿಲ್ಲದೆ ಸಣ್ಣಗೆ ಬೀಳುತ್ತಿದ್ದರಂತೂ ಮುಗಿದೆ ಹೋಯಿತು. ಹೊರಗಿನ ಟ್ಯಾಂಕಿನಿಂದ ತಂದು ಹಾಕಬೇಕಾಗುತ್ತಿತ್ತು. ನೀರು ಇರುವಾಗಲೇ ದಿನದ ಬಳಕೆಯದ್ದಲ್ಲದೆ ಬೇರೆ ಬಟ್ಟೆಗಳನ್ನು ಮತ್ತು ಪಾತ್ರೆಗಳನ್ನೆಲ್ಲ ತೊಳೆದು ಮುಗಿಸಬೇಕು. ನೀರು ಬಂದ ದಿನ ನೀರಿನ ಸುದ್ದಿಯಲ್ಲದೇ ಇನ್ನೇನು ಇರುತ್ತಿರಲಿಲ್ಲ. ಇಡೀ ಮನೆಯು ನೀರಿನಿಂದ ರಾಡಿಯಾಗುತ್ತಿತ್ತು. ಇಷ್ಟರ ಮಧ್ಯೆ ಮಡಿ ನೀರು ತುಂಬುವುದಿರುತ್ತಿತ್ತು. ಅತ್ತೆಯವರು ಎರಡು ತಂಬಿಗೆ ಸ್ನಾನ ಮಾಡಿ ಮಡಿ ನೀರನ್ನು ದೇವರಗೂಡಿನ ಪಕ್ಕ ಮೂಲೆಯಲ್ಲಿ ತುಂಬಿಡುತ್ತಿದ್ದರು. ಇನ್ನೂ ನೀರಿದ್ದರೆ ತಂಬಿಗೆ-ಲೋಟದಲ್ಲೂ ನೀರು ತುಂಬಿಡಲಾಗುತ್ತಿತ್ತು. ಇಷ್ಟರಲ್ಲಿ “ನೀರು ಹ್ಯಾಂಗದ?” ಎಂದು ಅಕ್ಕ ಪಕ್ಕದವರು ಬಂದು ವಿಚಾರಿಸಿಕೊಂಡು ಹೋಗುತ್ತಿದ್ದರು. ಇದು ನೀರು ಬರುವ ದಿನದ ದಿನಚರಿಯಾದರೆ ನೀರು ಬರಲಾರದ ದಿನ ಆ ದಿನದ ಅಡುಗೆ ತಿಂಡಿಯ ಆಯ್ಕೆಯಲ್ಲಿ ಇಬ್ಬರೂ ತೊಡಗುತ್ತಿದ್ದರು. ಅದರ ಕುರಿತು ಇಬ್ಬರೂ ಜೋರಾಗಿ ಮಾತಾಡಿಕೊಳ್ಳುತ್ತಿದ್ದರು. ನನ್ನತ್ತೆಗೆ ಬಾಲ್ಯದಲ್ಲೇ ಬಲ ಕಿವಿಗೆ ಪೆಟ್ಟಾಗಿದ್ದರಿಂದ ಕಿವಿ ಕೇಳುತ್ತಿರಲಿಲ್ಲ. ಎದುರು ನಿಂತು ಜೋರಾಗಿ ಕೂಗಿ ಕೊಳ್ಳಬೇಕಿತ್ತು. ಶ್ರೀಪಾದ ರಾಯರಿಗೆ ವೃದ್ಧಾಪ್ಯದಿಂದಾಗಿ ಕೇಳುತ್ತಿರಲಿಲ್ಲ. ಇಬ್ಬರೂ ಮಾತಾಡಿಕೊಳ್ಳಲು ಪ್ರಾರಂಭಿಸಿದರೆ ಜೋರಾಗಿ ಜಗಳಾಡುತ್ತಿದ್ದಂತೆನಿಸುತ್ತಿತ್ತು. ನಾವು ಐದು ನಿಮಿಷ ಇವರ ಜೊತೆಯಲ್ಲಿ ಕಿರುಚಿ ಮಾತಾಡುವುದರಲ್ಲಿ ಸುಸ್ತಾಗಿ ಬಿಡುತ್ತಿದ್ದೆವು. ಆದ್ದರಿಂದ ಇವರ ಮುಂದೆ ಯಾವ ಸುದ್ದಿಯನ್ನು ಹೇಳದೆ ಬರಿಯ ನೋಡುಗರಾಗಿದ್ದು ಬಿಡುತ್ತಿದ್ದೆವು.

ಮನೆದೇವರು ದತ್ತಾತ್ರಯನಿಗೆ ಗುರುವಾರದಂದು ವಿಶೇಷ ಪೂಜೆ ಇರುತ್ತಿತ್ತು. ಅಂದು ಪಂಚಾಮೃತದ ಅಭಿಷೇಕ ಮಾಡಲು ಭಟ್ಟರಿಗೆ ಹೇಳುತ್ತಿದ್ದರು. ಅವರು ಬೆಳಿಗ್ಗೆ ೮ ಗಂಟೆಗೆ ಪೂಜೆಗೆ ಬರುತ್ತಾರೆಂದರೆ ೫ ಗಂಟೆಗೆ ಸಿದ್ಧತೆ ಪ್ರಾರಂಭವಾಗಿ ಬಿಡುತ್ತಿತ್ತು. “ಬಾಳಿಹಣ್ಣು ಇಟ್ಟೀಯೇನು?” “ಹೂಂ, ತೆಂಗಿನಕಾಯಿ ಸುಲಸ್ರಿ” “ಮಡಿ ನೀರು ನಿನ„ ತಗದ ಕೊಡು” ‘ಹೌದ, ಅಷ್ಟ್ರಾಗ ನಂದ ಜಳಕಾ ಆಗಬೇಕು’. ಹೀಗೆ ಸಂಭಾಷಣೆ ಜೋರಾಗಿ ನಡೆಯುತ್ತಿತ್ತು. ಭಟ್ಟರು ಬಂದ ನಂತರ ಅವರು ಮಾಡುವ ಗುಡಿ ಪೂಜೆಯ ವಿವರ, ಮನೆಯ ಕಷ್ಟ-ಸುಖ, ಪೇಟೆಯಲ್ಲಿ ತರಕಾರಿ-ದಿನಸಿಗಳ ಧಾರಣೆಗಳು, ಗದುಗಿನ ನೀರಿನ ಸಂಕಷ್ಟ ಹೀಗೆ ಪೂಜೆ ಮಾಡುತ್ತಲೇ ಎಲ್ಲಾ ವಿದ್ಯಮಾನಗಳ ಬಗೆಗೂ ಮಾತುಕತೆ ಆಗುತ್ತಿತ್ತು. ಪೂಜೆಯ ನಂತರ ಅವಲಕ್ಕಿ ಉಂಡೆ ತಿಂದು ದಕ್ಷಿಣೆ ಪಡೆದು ಹೋಗುತ್ತಿದ್ದರು. ಶ್ರಾವಣ ಮಾಸ ಅಥವಾ ಹಬ್ಬವಿದ್ದರೆ ಮಧ್ಯಾಹ್ನದ ಊಟಕ್ಕೆ ಆ ಬಡ ಬ್ರಾಹ್ಮಣ ಬರುತ್ತಿದ್ದ.

ಮಧ್ಯಾಹ್ನದ ಊಟಕ್ಕೆ ವಿಶೇಷ ಪ್ರಾಮುಖ್ಯತೆ ಇರುತ್ತಿತ್ತು. ಎರಡು ಚಟ್ನೀಪುಡಿ, ಚಟ್ನಿ, ಸಾಂಬಾರು, ಎರಡು ಪಲ್ಲೆ, ರೊಟ್ಟಿ ಅಥವಾ ಚಪಾತಿಗಳಲ್ಲದೆ ಮೇಲೆ ಹಾಕಿಕೊಳ್ಳಲು ಮೊಸರು, ಎಣ್ಣೆ, ಬೆಲ್ಲ, ತುಪ್ಪ, ನಿಂಬೆಹಣ್ಣು ಜೊತೆಗೆ ಹಸಿ ತರಕಾರಿಯ ಸಲಾಡ್‍ಗಳು ಸಿದ್ಧವಾಗಿರುತ್ತಿದ್ದವು. ಊಟಕ್ಕೆ ಕುಳಿತೆವೆಂದರೆ ಅಡಿಗೆ ಮನೆಯ ಮಾಡಿನಲ್ಲಿದ್ದ ಡಬ್ಬಗಳೆಲ್ಲ ನಮ್ಮ ಸುತ್ತಲೂ ಇರುತ್ತಿದ್ದವು. ನಾವೇನಾದರೂ ಹಾಕಿಕೊಳ್ಳಲು ಕೈ ಹಾಕಿದರೆ “ಮುಸರಿ ಕೈಯಾಗ ಮುಟ್ಟಬ್ಯಾಡಾ.” ಎಂದು ಕುಂಕುಮಬಾಯರು ಡಬ್ಬವನ್ನು ತಮ್ಮ ಬಳಿ ಎಳೆದುಕೊಳ್ಳುತ್ತಿದ್ದರು. ಹಬ್ಬದ ದಿನ ಮಡಿ ಅಡಿಗೆ ಇರುವಾಗ ನಾವಿಬ್ಬರು ಅಸ್ಪೃಶ್ಯರಂತೆ ಹೊರಗೆ ಇರಬೇಕಾಗುತ್ತಿತ್ತು . ಎಲ್ಲಾ ಅಡಿಗೆ-ಪೂಜೆ, ನೈವೇದ್ಯ ಮುಗಿದ ಮೇಲೆ “ಇನ್ನು ಊಟಕ್ಕ ಬರ‍್ರೀ” ಎಂದು ಕರೆಯುತ್ತಿದ್ದರು.

ಮಧ್ಯಾಹ್ನದ ಊಟದ ನಂತರದ ಕೆಲಸವೆಲ್ಲ ಮುಗಿಸಿ ಹೀಗೆ ಮಲಗುತ್ತಿದ್ದಂತೆ ಶ್ರೀಪಾದರಾಯರು ಎದ್ದು ಹಾಲು ಕಾಸಿ “ಛಾ ತಗೊಳ್ರಿ.” ಎನ್ನುತ್ತಿದ್ದರು. ಹಾಲು ಕಾಸಿದ್ದು , ಕೆನೆ ತೆಗೆದು ಹೆಪ್ಪಾಕಿದ್ದು, ಬೆಣ್ಣೆ ಕಾಸಿದ್ದು, ತುಪ್ಪ ಸ್ವಲ್ಪ ಕೆಂಪಾಗಿದ್ದು ಅವೆಲ್ಲವನ್ನು ಇಬ್ಬರೂ ಕೂತು ಮಾತಾಡಿ ಮುಂದಿನ ಕೆಲವು ಹಾಲು-ತುಪ್ಪದ ವಿಷಯ ಮಾತಾಡಿ ಪಡಸಾಲೆಗೆ ಟಿ.ವಿ. ನೋಡಲು ಬರುತ್ತಿದ್ದರು. ಅದಾಗಲೇ ಅಕ್ಕ-ಪಕ್ಕದ ಮನೆಯ ಕೆಲವು ಹೆಂಗಸರು, ಮಕ್ಕಳು ಬಂದು ಟಿ.ವಿ. ಯ ಮುಂದೆ ಜಮಾಯಿಸುತ್ತಿದ್ದರು.

ಕನ್ನಡ-ಹಿಂದಿ ಸಿನಿಮಾಗಳು, ಧಾರಾವಾಹಿಗಳು, ನೃತ್ಯ-ಸಂಗೀತ ಕಾರ್ಯಕ್ರಮ, ನಾಟಕ ಯಾವುದನ್ನೇ ಆದರೂ ತನ್ಮಯತೆಯಿಂದ ನೋಡುತ್ತಿದ್ದರು. ಹೊರಗಿನಿಂದ ಕೇಳಿದರೆ ಸಿನೆಮಾ ಟಾಕೀಸ್‍ನಲ್ಲಿ ಇದ್ದಂತೆ ಜೋರಾಗಿ ಕೇಳುತ್ತಿತ್ತು. “ಈಗ ವಾರ್ತಾ ಪ್ರಸಾರ” ಎಂದ ತಕ್ಷಣ ಕುಂಕುಮ ಬಾಯರಿಗೆ ಶ್ರೀಪಾದ ರಾಯರು “ಮಂಡಾಳ ಮಾಡ„” ಅನ್ನುತ್ತಿದ್ದರು.

ಹಚ್ಚಿದ ಮಂಡಕ್ಕಿ, ತೋಯಿಸಿದ ಮಂಡಕ್ಕಿ, ಜೊತೆಯಲ್ಲಿ ಮಿರ್ಚಿ ಹೀಗೆ ದಿನಕ್ಕೊಂದು ಬಗೆ ಸಿದ್ಧವಾಗಿರುತ್ತಿತ್ತು. ಆಗಲೇ ಅಡಿಗೆಯನ್ನು ನೋಡಿ “ರಾತ್ರಿಗ ಅನ್ನಾ ಕಡಿಮೆ ಮಾಡು.” ಎಂದು ಆದೇಶ ಹೆಂಡತಿಗೆ ಇತ್ತೇ ಹೊರಬರುತ್ತಿದ್ದರು. ಅವರು ರಾತ್ರಿಯ ಊಟಕ್ಕೆ ಮೆಂತೆ ಸೊಪ್ಪಿನದೋ ಅಥವಾ ಸವತೆಕಾಯಿಯದೋ ಕೋಸಂಬರಿ ಮಾಡಿಯೇ ಹೊರಬರುತ್ತಿದ್ದರು. ರಾತ್ರಿಯ ಹಿಂದಿ ವಾರ್ತೆಗೆ ಮತ್ತೆ ಸಂಭ್ರಮದ ಊಟವಾಗುತ್ತಿತ್ತು. ಊಟದ ನಂತರ ಬಾಳೆಹಣ್ಣು ತಿನ್ನಲೇಬೇಕಿತ್ತು.

ಪ್ರತಿ ದಿನವೂ ಈ ವೃದ್ಧ​ರಿಬ್ಬರ ದಿನಚರಿ ಹೀಗೆ ಇರುತ್ತಿತ್ತು. ದಿನ ಬೆಳಗಾದರೆ ಹೊಸ ಬಗೆಯ ಊಟ ತಿಂಡಿಯನ್ನು ಮಾಡಿ ಸವಿಯುತ್ತಿದ್ದರು. ಮದುವೆಯಾದ ಹೊಸದರಲ್ಲಿ ಗಂಡ-ಹೆಂಡತಿಯರಿಬ್ಬರಿಗೂ ಹೊಸ ಸಂಸಾರ ಮಾಡಲಾಗಿರಲಿಲ್ಲ. ಅವಿಭಕ್ತ ಕುಟುಂಬದಲ್ಲಿ ೪೦-೫೦ ಜನರಿರುವಾಗ ಪ್ರತ್ಯೇಕ ಮಲಗುವ ವ್ಯವಸ್ಥೆಯೂ ಇಲ್ಲದ ಈ ದಂಪತಿಗಳಿಗೆ ತಮ್ಮ ವೃದ್ಧಾಪ್ಯದ ದಿನಗಳಲ್ಲಿ ಹೂಡಿದ ಸಂಸಾರ, ಹೊಸ ಸಂಸಾರವಾಗಿತ್ತು. ಇಬ್ಬರಿಗೂ ಕಿವಿ ಕೇಳದ್ದರಿಂದ ಗುಟ್ಟು ಎನ್ನುವದಿರಲೇ ಇಲ್ಲ. ನಾನು ಅನೇಕ ಬಾರಿ ಶ್ರೀಪಾದ ರಾಯರ ಬಳಿ ‘ಎಂದೂ ಕಿವಿ ಕೇಳದ ಹೆಂಡತಿಯೊಂದಿಗೆ ನೀವು ಒಮ್ಮೆಯೂ ಸರಸ ಸಲ್ಲಾಪ ಮಾಡಿಲ್ಲವೇ?’ ಎಂದು ನಾನು ಕೇಳಿದರೆ ತಮ್ಮ ೭೫ ರ ಹರೆಯದಲ್ಲೂ ಕೆಂಪಾಗಿ ಬಿಡುತ್ತಿದ್ದರು.

ತಿಂಗಳ ಮೊದಲಲ್ಲಿ ದಿನಸಿ ಸಾಮಾನು ತರುವಾಗಲೂ ಇದೇ ಗದ್ದಲ. ಹೆಂಡತಿ ಬೇಕಾದ ಸಾಮಾನು ಹೇಳಿದರೆ, ಗಂಡ ಹಾಳೆ ಹಿಡಿದು ಅವರ ಮುಂದೆ ಕುಳಿತು ಬರೆಯುತ್ತಿದ್ದರು. “ತೋಗರಿ„ ಬ್ಯಾಳಿ ದೀಡ ಕಿಲೋ. ಕಾಮತ್ತಂಗ ಹಿಂದಿನ ತಿಂಗಳ ಕೊಟ್ಟ ಬ್ಯಾಳಿ ಬ್ಯಾಡಾ ಹೇಳ್ರಿ. ಕುಕ್ಕರನಾಗ ಮೂರು ಸೀಟಿಗಳಾದರೂ ಬೇಯ್ಯಾಂಗಿಲ್ಲ”. “ಹೂಂ, ಅಕ್ಕಿ ಎಷ್ಟ ಬೇಕ ಹೇಳು”. “ಸಾಬಾಣ ರಿನ್ ತರಬ್ಯಾಡ್ರಿ. ಭಾಳಾ ದುಬಾರ್ಯದ. ಸಾದಾ ತರ್ರೀ”. “ಬ್ಯಾಡಾ ನಂದು ಬಿಳಿ„ ವಸ್ತ್ರ ಇರ್ತದ​, ಉಳದ್ಯಾವ ಸಾಬಾಣದಾಗೂ ಬೆಳ್ಳಗಾಗಂಗಿಲ್ಲ”. “ಈ ಸಾರೀ ಹಾಲಿನ ಪುಡಿ ಬೇಕೇನು?” “ಬ್ಯಾಡಾ ಹಾಲಿನಂವಾ ಲಗೂನ ಬರ್ತಾನ”. ಹೀಗೆಯೇ ಈ ಸಂಭಾಷಣೆ ಮುಂದುವರೆಯುತ್ತಿತ್ತು.

ಶ್ರಾದ್ಧ ಬಂತೆಂದರೆ ಭಟ್ಟರಿಗೆ ಹೇಳುವ ಗದ್ದಲ, ಅಡುಗೆಯ ಸಾಮಾನುಗಳ ಸಿದ್ಧತೆ ಒಂದು ವಾರದ ಮೊದಲೇ ಪ್ರಾರಂಭವಾಗಿ ಬಿಡುತ್ತಿತ್ತು. ಶ್ರಾವಣ ಮಾಸದಲ್ಲಂತೂ ದಿನವೂ ಹಬ್ಬವೇ! ಹೂರಣ ಕಡಬು, ಹೋಳಿಗೆ ದಿನವು ಇರುತ್ತಿತ್ತು. ವರ್ಷದ ಉಪ್ಪಿನಕಾಯಿ ಹಾಕುವುದಕ್ಕೆ ಇಬ್ಬರೂ ತೊಳೆದ ಬಟ್ಟೆ ಉಟ್ಟು ನಡುಮನೆಯಲ್ಲಿ ಕಸ ಹೊಡೆದು ನೆಲ ಒರೆಸಿ ಕೂರುತ್ತಿದ್ದರು, ಉಪ್ಪಿನಕಾಯಿ ಜಾಡಿಗಳು ಅದಕ್ಕೆ ಪ್ರತ್ಯೇಕವಾದ ಗ್ಯಾಸ್‍ಒಲೆ, ಪ್ರತ್ಯೇಕವಾದ ಮಸಾಲೆ ಸಾಮಾನು ಎಲ್ಲವನ್ನೂ ಸುತ್ತಲೂ ಇರಿಸಿಕೊಳ್ಳುತ್ತಿದ್ದರು. ನಾವೇನಾದರು ಮಧ್ಯ ಹೋದರೆ “ನೀರ ಕೈ ಝಾಡಿಸಬ್ಯಾಡ್ರಿ. ಉಪ್ಪಿನಕಾಯಿ ಕೆಡ್ತದ„” ಎನ್ನುತ್ತಿದ್ದರು. ಬರಿಯ ಉಪ್ಪು-ಮಸಾಲೆಹಾಕಿದ್ದು, ಬೆಲ್ಲ ಅಥವಾ ಸಕ್ಕರೆ ಹಾಕಿದ್ದು, ಹೈದ್ರಾಬಾದಿನ ರೀತಿಯದು, ಮಿಡಿ ಉಪ್ಪಿನಕಾಯಿ, ನಿಂಬೆಹಣ್ಣು, ಮಾವಿನಕಾಯಿ, ಕವಳಿಕಾಯಿ, ನೆಲ್ಲಿಕಾಯಿ, ಮಿಕ್ಸ್ ತರಕಾರಿಗಳ ಉಪ್ಪಿನಕಾಯಿಗಳ ಜೊತೆಯಲ್ಲಿ ನೆಲ್ಲಿಪಾಕ, ನಿಂಬೆಪಾಕ, ಮಾವಿನಕಾಯಿ ಗುಳುಂಬಗಳು ಸಿದ್ಧವಾಗುತ್ತಿದ್ದವು. ನಡುಮನೆಯ ಗೂಡಿನ ತುಂಬ ಹತ್ತಾರು ಡಬ್ಬಗಳು ಬಾಯಿ ಕಟ್ಟಿಸಿಕೊಂಡು ಕೂತಿರುತ್ತಿದ್ದವು. ಆಮೇಲೆ ತಿಂಗಳ ಗಟ್ಟಲೆ ಉಪ್ಪಿನಕಾಯಿ ಕೈಯಾಡಿಸುವ ಕಾರ್ಯಕ್ರಮವಿರುತ್ತಿತ್ತು. ದಿನವೂ ಎರಡು ಮೂರು ಉಪ್ಪಿನಕಾಯಿಗಳ ರುಚಿ ನೋಡಿ ಅದರ ಬಗೆಗೆ ನಾವು ವಿವರಿಸಬೇಕಾಗುತ್ತಿತ್ತು. ರುಚಿಯಾಗಿದ್ದರೆ ತಮ್ಮ ತಮ್ಮಲ್ಲೇ ಶಹಬ್ಬಾಸಗಿರಿಯನ್ನು ಕೇಳಿ ಪಡೆಯುತ್ತಿದ್ದರು.ಹೇಳದಿದ್ದರೆ ‘ಸ್ವಾದಗೇಡಿ’ ಎಂದು ಬಯ್ಯುತ್ತಿದ್ದರು.

ಇವರಿಬ್ಬರ ಇನ್ನೊಂದು ದೊಡ್ಡ ಕಾರ್ಯಕ್ರಮವೆಂದರೆ ಪಡಸಾಲೆಯ ಮತ್ತು ಹಿತ್ತಲ ಬಾಗಿಲನ್ನು ಹಾಕುವುದು-ತೆಗೆಯುವುದು, ಬೆಳಗ್ಗೆ ತಂಪಾದ ಗಾಳಿ ಬರಲು ಎರಡೂ ಬಾಗಿಲು ತೆರೆಯಬೇಕು, ಬಿಸಿಲು ಬಂದರೆ ಹೊರಗಿನ ಒಂದು ಬಾಗಿಲು ತೆಗೆಯುವುದು, ಟಿವಿ ನೋಡುವಾಗ ಎರಡೂ ಬಾಗಿಲನ್ನು ಹಾಕುವುದು ಹೀಗೆ ದಿನದಲ್ಲಿ ಅದೆಷ್ಟು ಬಾರಿ ಬಾಗಿಲನ್ನು ಹಾಕುವುದು, ತೆಗೆಯುವುದು ನಡೆಯುತ್ತಿತ್ತೇನೋ! ಅಲ್ಲದೇ ಇಬ್ಬರಿಗೂ ಅಷ್ಟಷ್ಟು ಸಮಯಕ್ಕೆ ಯಾರೋ ಬಾಗಿಲು ಬಡಿದಂತೆ ಕೇಳುತ್ತಿತ್ತು. ನಾವು ಯಾರು ಇಲ್ಲವೆಂದರೂ ಕೇಳುತ್ತಿರಲಿಲ್ಲ. “ಯಾರೋ ಬಾಗ್ಲಾ ಬಡಿಯಾಕ ಹತ್ತಾರ” ಎಂದು ಕುಂಟುತ್ತ ಎದ್ದು ಹೋಗಿ ನೋಡುತ್ತಿದ್ದರು. ನಾವು ಓದಲು-ಬರೆಯಲು ತೊಡಗಿದಾಗ ‘ಟಿ.ವಿ. ಹಚ್ಚಬೇಡಿ, ಜೋರು ಮಾತಾಡಬೇಡಿ’ ಎಂದು ಅವರಿಗೆ ಹೇಳುವುದು ದಿನಗಳೆದಂತೆ ಕಿರಿ ಕಿರಿಯಾಗಲು ಪ್ರಾರಂಭಿಸಿತು. ನಾವು ಮಹಡಿಯ ಮೇಲಿನ ಕೋಣೆಯನ್ನು ಸ್ವಚ್ಛ ಮಾಡಿಕೊಂಡು ಅಲ್ಲಿರಲು ಪ್ರಾರಂಭಿಸಿದೆವು. ಊಟಕ್ಕೆ, ತಿಂಡಿಗೆ ಹೊರಗಿನ ಬಾಗಿಲಲ್ಲಿ ನಿಂತು ಒಬ್ಬರಾದ ನಂತರ ಒಬ್ಬರು ಜೋರಾಗಿ ಕರೆಯುತ್ತಿದ್ದರು. ನಾವು ಅಲ್ಲಿಂದ ‘ಓ’ ಎಂದರೆ ಕೇಳಿಸುತ್ತಿರಲಿಲ್ಲ. ಎದುರು ಬಂದು ನಿಂತಾಗಲೇ ಸುಮ್ಮನಾಗುತ್ತಿದ್ದರು. ಇವರ ಊಟ ತಿಂಡಿಯ ವಿಷಯ ಕೇಳಿ ಕೇಳಿ ಬೇಸತ್ತ ನಾವು ತಟ್ಟೆಗೆ ಹಾಕಿಕೊಂಡು ಮೇಲೆ ಹೋಗಿ ಓದುತ್ತ ತಿನ್ನಲು ಪ್ರಾರಂಭಿಸಿದೆವು. ನಾವು ಕಣ್ಣಿಗೆ ಕಾಣದಂತಾದಾಗ ಬೇಸರಿಸಿದರು. “ಮ್ಯಾಲ ಇದ್ದು ಏನ ಮಾಡ್ತೀರಿ? ಟಿ.ವಿ. ಹಚ್ಚಾಂಗಿಲ್ಲಾ ಕೆಳಗ ಬರ‍್ರಿ. ಸಂಜೀಗಷ್ಟ​ ನೋಡ್ತೀವಿ”. ಎಂದು ರಾಜಿ ಮಾಡಿಕೊಳ್ಳಲು ಮುಂದಾದರು. ನಾವು ಮೇಲೆ ಹತ್ತಿದವರು ಕೆಳಗೆ ಇಳಿಯಲೇ ಇಲ್ಲ. ಮುಂದೆ ಕೆಲದಿನಗಳಲ್ಲಿ ನಮ್ಮ ಉದ್ಯೋಗ ಎನ್ನುತ್ತ ಊರು ಬಿಟ್ಟೆವು.

ಮುಂದಿನ ದಿನಗಳಲ್ಲಿ ನಾನು ಮೊದಲಿನಂತೆ ಅಡಿಗೆ, ಊಟ, ಉಪ್ಪಿನಕಾಯಿ, ಶ್ರಾದ್ಧ, ಹಬ್ಬಗಳ ಸಂಭ್ರಮ ನೋಡಲಿಲ್ಲ. ಅವರ ವೃದ್ಧಾಪ್ಯದ ಯಾತನೆಗಳು ಹೆಚ್ಚಾದಂತೆ ನಾವು ನಮ್ಮ ಕರ್ತವ್ಯವೆಂಬಂತೆ ಅವರ ಪಾಲನೆ ಮಾಡಿ ನಮ್ಮ ಕೆಲಸಗಳಿಗೆ ಓಡುತ್ತಿದ್ದೆವು. ಅವರು ನಮ್ಮ ಮುಖ ನೋಡಿ ಮಾತಾಡಲೋ-ಬೇಡವೋ ಎಂದು ನಿರ್ಧರಿಸುವ ದಿನ ಬಂತು. ನಮ್ಮ ಜೊತೆ ಜೋರಾಗಿ ಮಾತಾಡಿದರೆ ನಾವು ಕೈಸನ್ನೆ ಮಾಡುತ್ತಿದ್ದೆವು, ಎದುರು ನಿಂತು ಕಿರುಚಿ ಮಾತಾಡಲು ಸಾಧ್ಯ​ವಿಲ್ಲದೆ ಸುಮ್ಮನಾಗುತ್ತಿದ್ದೆವು. ನಮ್ಮ ಮಕ್ಕಳ ನಿದ್ದೆ, ಊಟ, ಸ್ನಾನ ಮುಂತಾದ ಜವಾಬ್ದಾರಿಗಳಲ್ಲಿ ಈ ವೃದ್ಧ ದಂಪತಿಗಳು ಕೆಟ್ಟು ಕೂತ ಮಷಿನ್‍ನಂತೆ ನೋಡುತ್ತ ಕೂರುತ್ತಿದ್ದರು. ಆದರೆ ಮೊದಲಿನಂತೆಯೇ ಒಬ್ಬರನ್ನೊಬ್ಬರು ಆರೈಕೆ ಮಾಡಿಕೊಳ್ಳುತ್ತಿದ್ದರು. ನಾವು ಹೊರ ಹೊರಟರೆ ‘ಆಕೀದು ಗುಳ್ಗಿ ಖಾಲಿ ಆದಾಂಗ್ಹದ, ಕಿವಿ ಮಷಿನ್ ಸೆಲ್ ಖಾಲಿ ಆಗೇದ’ ಎಂದು ಶ್ರೀಪಾದ ರಾಯರು ಹೇಳಿದರೆ, ಕುಂಕುಮ ಬಾಯಿಯವರು “ಅವ್ರಿಗ ಬಾಳೀಹಣ್ಣು ಬೇಕಾಗೇದ, ಸಂಜೀಗಷ್ಟ​ ಖಾರಾ-ಚುಮ್ಮರಿ ತಂದಿಡು” ಎನ್ನುತ್ತಿದ್ದರು. ದಿನಗಳೆದಂತೆ ಇಬ್ಬರೂ ಮೌನವಾಗಿರತೊಡಗಿದರು.ಇವರು ಮೌನವಾದಾಗ ನಾವು ಗಾಬರಿಗೊಂಡೆವು. ಹೀಗೆಯೆ ಒಂದು ದಿನ ಶಾಶ್ವತ ಮೌನವಹಿಸಿದರು. ೬೫ ವರ್ಷಗಳ ತುಂಬು ಸಂಸಾರ ನಡೆಸಿದ ಈ ದಂಪತಿಗಳು ತಮಗೆ ದೊರೆತ ಅಲ್ಪ ಸ್ವಲ್ಪ ಸುಖದಲ್ಲೇ ಬದುಕನ್ನು ಸಂಭ್ರಮಗೊಳಿಸಿಕೊಂಡರು. ಇವರ ನೆನೆದಾಗ ಕಂಬಾರರ ಈ ಸಾಲು ನೆನಪಾಗುತ್ತದೆ.

ಎಷ್ಟು ಗಡಿಬಿಡಿ ಗೌಜು ಕಾಂಪೌಂಡಿನಾಚೆಯಲಿ
ವ್ಯವಹಾರ ವಂಚಿತರು ಅದರೊಂದಿಗೆ
ಎಲ್ಲ ವಿದಾಯಗಳ ಹೇಳಿಯೇ ಬಂದವರು
ನಡೆಯಲಾರದ ನಾಣ್ಯ ಆ ಲೋಕಕೆ

ಇಂತಹ ದಾಂಪತ್ಯ ನನ್ನಕಾಲದಲ್ಲಿ ಸಾಧ್ಯವಿಲ್ಲ. ಆದರೆ ಹಗಲು ರಾತ್ರಿ ಬದುಕ ರಥ ಎಳೆಯಲು ದುಡಿಯುವ ನಾವು, ನಾವು ದುಡಿದ ಅನ್ನವನ್ನೇ ಸಂಭ್ರಮದಿಂದ ಉಣ್ಣಲಾರೆವು, ನಮ್ಮದೇ ಮಕ್ಕಳ ಆಟ-ಪಾಠ ನೋಡಿ ಸಂತಸ ಪಡಲಾರೆವು. ಕನಸುಗಳನ್ನೆಲ್ಲ ಕಳೆದುಕೊಂಡ ಸ್ವಾದವಿಲ್ಲದ ಬದುಕು ನಮ್ಮದಾಗುತ್ತಿದೆ.