- ಕೇಳು - ಜನವರಿ 31, 2021
ನನಗೆ ಕನಸ ಮಾರಲು ಬರಬೇಡ, ನಿನಗೆ ಬಿಟ್ಟಿಯಾಗಿ ಕೊಡುವಷ್ಟು ರಾಶಿ ಕನಸಿವೆ ನನ್ನ ಹತ್ತಿರ.. ಬೇಕೆಂದರೆ ಹೇಳು ಕಳಿಸಿ ಕೊಡುವೆ||
ನನಗೆ ಒಲವ ಮಾರಲು ಬರಬೇಡ, ಒಲವ ಒರತೆಯಲೇ ಹಿತ್ತಲ ಮಲ್ಲಿಗೆ ಅರಳಿವೆ, ಬೇಕಿದ್ದರೆ ಹೇಳು
ದಂಡೆ ಹೆಣೆದು ಕಳಿಸುವೆ||
ನನಗೆ ಅನ್ನದ ಆಮಿಷ ಒಡ್ಡಬೇಡ, ಬದುಕಬುತ್ತಿ ಹದವಾಗಿ ಕಲಸಿ , ಹಸಿದವರಿಗೆ ಉಣಬಡಿಸಿದ್ದೇನೆ, ಬೇಕೆಂದರೆ ಹೇಳು
ಕೈತುತ್ತು ಕೊಡುವೆ||
ನನಗೆ ನೆರಳ ಕೊಡುವ ಮಾತಾಡಬೇಡ, ಹೊಂಗೆಯ ತಂಪಲ್ಲೆ ಗುಡಿಸಲ ಕಟ್ಟಿದ್ದೇನೆ, ನೆರಳ ಮಾತಾಡಿ ದಣಿವಾದರೆ ಹೇಳು ,
ಚಾಪೆ ಹಾಸಿ ಲಾಲಿಯೂ ಹಾಡುವೆ||
ನನಗೆ ನಗುವ ಹಂಚಲು ಬರಬೇಡ, ಬತ್ತದ ಚೈತನ್ಯವನು ಬಳುವಳಿಯಾಗಿ ಪಡೆದಿದ್ದೇನೆ,
ಬೇಕಾದರೆ ಹೇಳು ಕೊಡುವೆ ನಿನಗೂ ಒಂದಷ್ಟು ನಗುವ ಸಾಲ ಬಡ್ಡಿಯಿಲ್ಲದೆ||
ನನಗೆ ಬದುಕ ಪಾಠ ಹೇಳಿಕೊಡಲು ಬರಬೇಡ, ನಾನೇ ಕಲಿಯುತ್ತೇನೆ|
ಬದುಕು ಕಲಿಸುತ್ತದೆ, ಏಳುತ್ತೇನೆ, ಬೀಳುತ್ತೇನೆ ಮತ್ತೆ ಕಲಿಯುತ್ತೇನೆ, ಅವರವರ ಬದುಕು ,ಅವರವರ ಪಾತ್ರ
ಅವರಿಗೇ ಬಿಟ್ಟು ಬಿಡು,
ಬೆಳೆಯಲು ಬಿಡು, ಬೆಳಗಲು ಬಿಡು.
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ