- ಕನ್ನಡ ಕವಿಗಳಲ್ಲಿ ಪ್ರಜ್ವಲಿಸುತ್ತಿರುವ ದೀಪಮಾಲೆ - ಅಕ್ಟೋಬರ್ 27, 2024
- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
“ಈ ವಿಶ್ವ ದಿನದಂದು ವೈವಿಧ್ಯತೆಯನ್ನು ಅದರ ಎಲ್ಲಾ ಪ್ರಕಾರಗಳಲ್ಲಿ ಪ್ರತಿಬಿಂಬಿಸುವ ಮತ್ತು ಉತ್ತೇಜಿಸುವ ರೇಡಿಯೋದ ಶಕ್ತಿಯನ್ನು ನಾವು ಆಚರಿಸುತ್ತೇವೆ” ಎಂಬುದಾಗಿ “ವಿಶ್ವ ರೇಡಿಯೋ ದಿನಾಚರಣೆ” ನಿಮಿತ್ತ ಯುನೆಸ್ಕೋದ ಮಹಾನಿರ್ದೇಶಕ ಆಡ್ರೆ ಅಜೌಲೆ ಹೇಳಿರುವ ಮಾತುಗಳಿವು. “ಹೊಸ ವಿಶ್ವ ಹೊಸ ರೇಡಿಯೋ” ಎಂಬ ಘೋಷವಾಕ್ಯದ ಜೊತೆಗೆ ವಿಕಸನ, ನಾವೀನ್ಯತೆ ಮತ್ತು ಸಂಪರ್ಕ ಎಂಬ ಉಪ ಶೀರ್ಷಿಕೆಯೊಂದಿಗೆ ಯುನೆಸ್ಕೋ ವಿಶ್ವ ರೇಡಿಯೋ ದಿನವನ್ನು ಆಚರಿಸಲು ನಿರ್ಧರಿಸಿದೆ. ಜಾಗತಿಕ ಮಟ್ಟದಲ್ಲಿ ರೇಡಿಯೋ ಸತ್ವಶಾಲಿ ಎಂಬ ವಿಷಯವನ್ನು ಸ್ಪ್ಯಾನಿಷ್ ರೇಡಿಯೋ ಅಕಾಡೆಮಿ ಯುನೆಸ್ಕೋದ ಮುಂದೆ ಸೆಪ್ಟೆಂಬರ್ ೨೯, ೨೦೧೦ ರಂದು ಇಡುತ್ತದೆ. ಸಾಕಷ್ಟು ಪರಾಮರ್ಶೆಗಳ ನಂತರ ಸೆಪ್ಟೆಂಬರ್ ೨೯, ೨೦೧೧ ರಲ್ಲಿ ಯುನೆಸ್ಕೋ ಅಧಿಕೃತವಾಗಿ ಫೆಬ್ರವರಿಯಲ್ಲಿ “ವಿಶ್ವರೇಡಿಯೋ ದಿನ” ಆಚರಿಸಲು ನಿರ್ಧರಿಸುತ್ತದೆ. ತದನಂತರ ಕೇಳುಗರನ್ನು ತಲುಪುವ ಸಮರ್ಥ ಮಾದ್ಯಮ ಎಂಬ ಆಶಯದೊಂದಿಗೆ ಫೆಬ್ರವರಿ ೧೩, ೨೦೧೨ ರಿಂದ ಹೊಸ ಹೊಸ ಘೋಷಣೆಗಳೊಂದಿಗೆ “ವಿಶ್ವ ರೇಡಿಯೋ” ದಿನವನ್ನು ಪ್ರತಿವರ್ಷ ಆಚರಿಸಿಕೊಂಡು ಬರಲಾಗುತ್ತಿದೆ. ಈಗ ೨೦೧೨ ಫೆಬ್ರವರಿ ೧೩ ರ ವಿಶ್ವ ರೇಡಿಯೋ ದಿನದ ಆಚರಣೆಗೆ ನಾವೆಲ್ಲಾ ಸಜ್ಜಾಗಿದ್ದೇವೆ.
ಸಂವಹನಕ್ಕಾಗಿ ಇರುವ ಶಕ್ತಿಶಾಲಿ ಮಾಧ್ಯಮ ಎಂದರೆ ರೇಡಿಯೋನೆ. ನಮ್ಮ ಅಂಗೈಯ್ಯಲ್ಲಿರುವ ಮನೋರಂಜನೆ ಮತ್ತು ತಿಳಿವಳಿಕೆಯ ಭಂಡಾರ ಎಂದೂ ಇದನ್ನು ಕರೆಯಬಹುದು. ದೃಷ್ಟಿ ಮಟ್ಟದ ಬೆಳಕಿಗಿಂತ ಹೆಚ್ಚಿನ ತರಂಗಾಂತರದ ವಿದ್ಯುತ್ಕಾಂತೀಯ ತರಂಗಗಳಲ್ಲಿ ಸಂಜ್ಞೆಗಳನ್ನು ಪ್ರಸರಿಸುವ ತಂತ್ರಜ್ಞಾನವೇ ರೇಡಿಯೋ. ರೇಡಿಯೋವನ್ನು ಆಕಾಶವಾಣಿ, ಬಾನ್ನುಡಿ, ಬಾನುಲಿ, ನಿಸ್ತಂತು ಪ್ರಸಾರಣ ಎಂಬ ಹೆಸರುಗಳಿಂದಲೂ ಕರೆಯಬಹುದು. ಭಾರತದ ಪುರಾಣ,ಕಾವ್ಯ, ದಂತಕಥೆಗಳಲ್ಲಿ, ಐತಿಹ್ಯಗಳಲ್ಲಿ ಸಾಮಾನ್ಯವಾಗಿ ದೇವರುಗಳು ಧ್ವನಿಯ ಮೂಲಕ ಕೊಡುವ ಸೂಚನೆಗಳು ಅಥವಾ ಘೋಷಣೆಗಳನ್ನು “ಆಕಾಶವಾಣಿ” ಎನ್ನುತ್ತಿದ್ದರು. ಧ್ವನಿಸುವವರ ಶರೀರ ಕಣ್ಣಿಗೆ ಕಾಣದೆ ಇದ್ದ ಕಾರಣ, ಶರೀರವಿಲ್ಲದೆ ಬಂದ ಮಾತು ಎಂಬ ಕಾರಣಕ್ಕೆ, ಆಕಾಶವಾಣಿ ಎಂಬ ಶಬ್ದ ಅಸ್ತಿತ್ವದಲ್ಲಿದೆ ಎಂದು ಹೇಳಬಹುದು. ಭಾರತ ಸರಕಾರ ರೇಡಿಯೋ ವ್ಯವಸ್ಥೆಯನ್ನು ಸೂಚಿಸಲು ಆಕಾಶವಾಣಿ ಪದ ಬಳಕೆ ಮಾಡಿಕೊಂಡಿದೆ. ಬಾನ್ನುಡಿ,ಬಾನುಲಿ ಎಂಬ ಪದಗಳು ಆಕಾಶರ್ಮಾಗದಲ್ಲಿ ನುಡಿಯುವ,ಹಾಡುವ ಏಂಬ ಅರ್ಥವನ್ನು ಹೊಂದಿದೆ.ತಂತುವಿನ ಸಂಪರ್ಕವಿಲ್ಲದೆ ಪ್ರಸಾರವಾಗುವ ಧ್ವನಿಗೆ ನಿಸ್ತಂತು ಪ್ರಸಾರಣ ಎಂಬ ಹೆಸರಿದೆ. ಬಾನುಲಿಯಲ್ಲಿ ಮಾತನಾಡುವವರಿಗೆ ಬಾನುಲಿಗ (ಆರ್.ಜೆ ) ಎಂದೂ ಕರೆಯುವುದಿದೆ.
ವಿಶ್ವ ಮಟ್ಟದಲ್ಲಿ ರೇಡಿಯೋ ಇತಿಹಾಸ
ವಿಶ್ವ ಇತಿಹಾಸದ ಅತ್ಯಂತ ಮಹತ್ವದ ಆವಿಷ್ಕಾರವೆಂದರೆ ರೇಡಿಯೋ. ಮಾನವ ನಾಗರೀಕತೆಯ ಬೆಳವಣಿಗೆಯ ಉತ್ತುಂಗ ಕಾಲವೆಂದು ಇದನ್ನು ಕರೆದರೂ ತಪ್ಪಾಗದು. ಜೇಮ್ಸ ಕ್ಲಾರ್ಕವೆಲ್, ಹೆನ್ರಿರುಡಾಲ್ಫ್, ಮಾರ್ಕೋನಿ ಮುಂತಾದವರ ಅಹರ್ನಿಶಿ ಶ್ರಮದ ಕೈಗೂಸು ರೇಡಿಯೋ ಎನ್ನಬಹುದು. ಜಾಗತಿಕ ಮಟ್ಟದಲ್ಲಿ ರೇಡಿಯೋ ಕುರಿತಂತೆ ಪ್ರಥಮ ಮೈಲಿಗಲ್ಲು ೧೮೯೬ರಲ್ಲಿ ಮಾರ್ಕೋನಿಯ ಮೂಲಕ ಹಾಕಲ್ಪಡುತ್ತದೆ. ಕೇವಲ ೧.೬ಕಿ.ಮೀ ಅಂತರದಲ್ಲಿ ರೇಡಿಯೋ ತರಂಗಗಳನ್ನು ತಲುಪಿಸುವುದರ ಮೂಲಕ ಧ್ವನಿ ಮಾಹಿತಿ ಯುಗಕ್ಕೆ ನಾಂದಿ ಹಾಡುತ್ತಾನೆ. ೧೮೯೬ರಲ್ಲಿ ಇಂಗ್ಲೆಂಡ್ ಹಾಗು ಫ್ರಾನ್ಸ್ ನಡುವೆ ವ್ಯವಹಾರದ ಉದ್ದೇಶಕ್ಕೆ ರೇಡಿಯೋ ತರಂಗ ವ್ವವಸ್ಥೆಯನ್ನು ಬಳಸಿಕೊಳ್ಳಲಾಗುತ್ತದೆ. ನಂತರ ೧೯೦೧ರ ವೇಳೆಗೆ ಅಟ್ಲಾಂಟಿಕ್ ತೀರಕ್ಕೂ ವಿಸ್ತರಿಸುತ್ತಾರೆ. ಮೊದಲ ಬಾರಿಗೆ ಎರಡು ಸಾವಿರ ಮೈಲುಗಳಷ್ಟು ದೂರ ಅಟ್ಲಾಂಟಿಕ್ ಸಾಗರವನ್ನು ಪ್ರಸರಿಸಿ ನಂತರ ಸ್ವೀಕರಿಸಲು ಉಪಯೋಗಿಸಿದ್ದು ಜೆ.ಸಿ. ಬೋಸ್ರವರು ಕಂಡು ಹಿಡಿದ ರಿಸೀವರ್ಗಳನ್ನು. ಈ ರೆಡಿಯೋ ತಂತ್ರಜ್ಙಾನದ ಬೆಳವಣಿಗೆಯಲ್ಲಿ ಭಾರತೀಯ ವಿಜ್ಙಾನಿ ಸರ್ ಜಗದೀಶ ಚಂದ್ರ ಬೋಸ್ರವರ ಕಾಣಿಕೆಯೂ ಇದೆ.
ಭಾರತದಲ್ಲಿ ರೇಡಿಯೋ ಇತಿಹಾಸ
ಭಾರತೀಯ ಇತಿಹಾಸದಲ್ಲಿ 1927ಮತ್ತು1935 ರಕಾಲ ಬಹಳ ಮಹತ್ವದ್ದು. ಮೊದಲಿಗೆ ಇಂಡಿಯನ್ ರೇಡಿಯೋ ಬ್ರಾಡ್ಕಾಸ್ಟಿಂಗ್ ಹೆಸರಿನಲ್ಲಿ ಕಾರ್ಯಾರಂಭ ಮಾಡುತ್ತದೆ. ಭಾರತದ ಮಟ್ಟಿಗೆ ಡಾ. ಎಂ.ವಿ. ಗೋಪಾಲಸ್ವಾಮಿಯವರನ್ನು” ಆಕಾಶವಾಣಿಯ ಪಿತಾಮಹಾ” ಎಂದು ಕರೆಯುತ್ತೇವೆ. ಮೈಸೂರಿನಲ್ಲಿ ಕುವೆಂಪುರವರ ಕವನ ವಾಚನದೊಂದಿಗೆ ಬಾನುಲಿ ಪ್ರಸಾರ ಆರಂಭವಾಗುತ್ತದೆ. ತಮ್ಮದೇ ಧ್ವನಿ ಕೇಳಿದ ಕುವೆಂಪುರವರು “ಇದು ಆಕಾಶವಾಣಿಯಲ್ಲ ಪಿಶಾಚವಾಣಿ” ಎಂದು ಹಾಸ್ಯ ಮಾಡಿದ್ದರಂತೆ. ಈ ಚಾರಿತ್ರಿಕ ಘಟನೆಗೆ ಅಂದಿನ ಮೈಸೂರು ಮಹಾರಾಜರೇ ಖುದ್ದಾಗಿ ಹಾಜರಿದ್ದು ಶುಭಕೋರುತ್ತಾರೆ’.ಆಕಾಶವಾಣಿ’ ಎನ್ನುವ ಹೆಸರನು ಅಂದಿನ ಪೂರ್ಣಾವಧಿಯ ಸಹಾಯಕ ನಿರ್ದೇಶಕರಾಗಿದ್ದ ನಾ. ಕಸ್ತೂರಿಯವರ ತಾಯಿಯವರು ಸೂಚಿಸುತ್ತಾರೆ. ಈ ವಿಚಾರವನ್ನು ಎಂ.ವಿ ಗೋಪಾಲಸ್ವಾಮಿಯವರ ಗಮನಕ್ಕೆ ನಾ.ಕಸ್ತೂರಿಯವರು ತಂದಾಗ ಅದು ಅನುಮೋದನೆಗೊಂಡು ರೇಡಿಯೋ ಇತಿಹಾಸದಲ್ಲೇ ಮೈಸೂರು ಬಾನುಲಿ ಕೇಂದ್ರ ಆಕಾಶವಾಣಿ ಪದದಿಂದ ಅನನ್ಯವಾಗುತ್ತದೆ. ೧೯೫೦ರಲ್ಲಿ ಸಂವಿಧಾನ ಅಳವಡಿಕೆಯೊಂದಿಗೆ ದೇಶದ ಎಲ್ಲಾ ಪ್ರಸಾರ ಸೇವೆಗಳನ್ನು ಕೇಂದ್ರ ಸರಕಾರದ ಆಡಳಿತಕ್ಕೆ ಒಳಪಡಿಸಲಾಗುತ್ತದೆ. “ಆಲ್ ಇಂಡಿಯಾ ರೇಡಿಯೋ” ಎಂದೇ ಕರೆಸಿಕೊಳ್ಳುತ್ತಿದ್ದ ಭರತದ ರೇಡಿಯೋ ಸೇವೆ ೧೯೫೭ರಲ್ಲಿ ಆಕಾಶವಾಣಿ ಎಂಬ ಅಧಿಕೃತ ಹೆಸರನ್ನು ಪಡೆದುಕೊಳ್ಳುತ್ತದೆ. ಎಫ್.ಎಂ. ತಂತ್ರಜ್ಞಾನದ ಮೂಲಕ ರೇಡಿಯೋ ಯುವಜನತೆಯನ್ನು ಸೆಳೆದಿದೆ. ಎ.ಎಂ.ಗಿಂತ ಎಫ್.ಎಂ.ನಲ್ಲಿ ಸಂದೇಶದ ಫ್ರೀಕ್ವೆನ್ಸಿಗೆ ಅನುಗುಣವಾಗಿ ಮಾರ್ಪಾಡು ಮಾಡಿ ತಾಳೆಮಾಡಿ ಪಸರಿಸಲಾಗುತ್ತದೆ. ಇದು ಹೆಚ್ಚಿಗೆ ದೂರ ಕ್ರಮಿಸುವುದಿಲ್ಲ ಆದರೆ ಕ್ರಮಿಸಿದಷ್ಡು ದೂರ ಉತ್ತಮ ಗುಣಮಟ್ಟದ ಧ್ವನಿ ಹೊಂದಿರುತ್ತದೆ. ಎಫ್.ಎಂ. ಭಾರತದಲ್ಲಿ ಮೊದಲ ದನಿ ಹೊರಡಿಸಿದ್ದು ಚೆನ್ನೈನಲ್ಲಿ೧೯೭೭ರ ಜುಲೈ ಮೂರರಂದು. ೨೦೦೧ರ ನಂತರ ಭಾರತದಲ್ಲಿ ಮೊದಲ ಖಾಸಗಿ ಎಫ್.ಎಂ. ಕೇಂದ್ರ ಆರಂಭವಾಗುತ್ತದೆ. ೨೦೦೨ರಲ್ಲಿ ಸರಕಾರಿ ಸ್ವಾಮ್ಯದ ಎಫ್.ಎಂ. ಮೆಟ್ರೋ ಎಫ್.ಎಂ ರೇನ್ಬೋ ಆಗಿ ಮರುನಾಮಕರನಗೊಂಡು ಖಾಸಗಿಯವರಿಗೆ ಪೈಪೋಟಿ ನೀಡುತ್ತದೆ. ಆಕಾಶವಾಣಿಯ ಸಂಪೂರ್ಣ ನಿಯಂತ್ರಣ ಈಗ ಪ್ರಸಾರ ಭರತಿಯ ಕೈಯಲ್ಲಿದೆ. ಇಲ್ಲಿ ನಾಟಕ ವಿಭಾಗ,ಎಫ್.ಎಂ., ರಾಷ್ಟ್ರೀಯ ಸೇವೆಗಳಿಗೆ ಎಡೆಮಾಡಿಕೊಟ್ಟಿದೆ. ಮೊದಲಿಗೆ ಆಂಪ್ಲಿಟ್ಯೂಡ್ ಮಾಡ್ಯೂಲೇಷನ್ ಇದ್ದದ್ದು ಈಗ ಫ್ರೀಕ್ವೆನ್ಸಿ ಮಾಡ್ಯೂಲೇಷನ್ ಆಗಿದೆ. ಎಫ್.ಎಂ. ನ ತರಂಗಾಂತರ ೮೮ರಿಂದ ೧೦೮ ಮೆಗಾಹರ್ಟ್ಸ್ ವರೆಗೆ ಇದೆ. ಇದಲ್ಲದೆ ನಮ್ಮಲ್ಲಿ ಸಮುದಾಯ ರೇಡಿಯೋ ಪ್ರಸಾರ ಕೇಂದ್ರಗಳೂ ಇವೆ. “ಆಕಾಶವಾಣಿ” ಎಂದರೆ ಭಾರತೀಯರಿಗೆ ಆತ್ಮೀಯತೆಯ ಅನುಭೂತಿ. ಭಾರತದಲ್ಲಿ ಈಗ ೪೦೦ಕ್ಕೂ ಹೆಚ್ಚು ರೇಡಿಯೋ ಸ್ಟೇಶನ್ಗಳಿವೆ.
ಆಕಾಶವಾಣಿಯ ಪಿತಾಮಹಾ ಡಾ.ಎಂ.ವಿ. ಗೋಪಾಲಸ್ವಾಮಿಯವರು ಲಂಡನ್ನಿಗೆ ಹೋಗಿದ್ದಾಗ ಟಾಲ್ ಎಂಬ ಟ್ರಾನ್ಸಸ್ಮೀಟರ್ ತಂದು ಕೆ.ಆರ್ ರಸ್ತೆಯ ವಿಠಲ ವಿಹಾರದಲ್ಲಿ ಮೊದಲು ಸ್ಥಾಪಿಸಿ ೩೧೦ಮೀಟರ್ ಮೀಡಿಯಂ ವೇವ್ ತರಂಗಾಂತರಗಳಲ್ಲಿ ಸಾಯಂಕಾಲ ಆರರಿಂದ ಎಂಟು ಮೂವತ್ತರವರೆಗೆ ಸಂಗೀತ, ಸಾಹಿತ್ಯಕ್ಕೆ ಸಂಬಂಧಿಸಿದ ಭಾಷಣಗಳನ್ನು ಮಾಡಿಸುವ ಮೂಲಕ ರೇಡಿಯೋ ಕೇಂದ್ರವನ್ನು ಸ್ವಂತ ಹಣದಲ್ಲಿ ಮುನ್ನಡೆಸುತ್ತಾರೆ.ಗ್ರಾಮಫೋನ್ನಿಂದ ಹಿಡಿದು ಆಯತಾಕಾರದ ದೊಡ್ದಪೆಟ್ಟಿಗೆ ರೂಪದಲ್ಲಿ ಇದ್ದ ರೇಡಿಯೋ ನಂತರ ತನ್ನ ಗಾತ್ರವನ್ನು ಕುಗ್ಗಿಸಿಕೊಂಡಿದೆ. ವಿದ್ಯುತ್‌ಚಾಲಿತ,ಬ್ಯಾಟರಿ ಚಾಲಿತ ರೇಡಿಯೋಗಳನ್ನು ಕಳೆದು ಈಗ ಮೊಬೈಲೇ ರೇಡಿಯೋವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಫೇಸ್ ಬುಕ್‌ನಲ್ಲಿ ಆಕಾಶವಾಣಿಯ ಕಾರ್ಯಕ್ರಮದ ಮಾಹಿತಿ ಹಾಗು ಪಟ್ಟಿಗಳು ಲಭ್ಯವಿವೆ. ಅಂತರ್ಜಾಲದಲ್ಲೂ ನಿರಂತರವಾಗಿ ಕಾರ್ಯಕ್ರಮಗಳನ್ನು ಆಲಿಸಬಹುದು. ಮುಂದುವರೆದಂತೆ ರೇಡಿಯೋ ಕೇಳುಗರಿಗೆ ಆಪ್ಗಳು ಬಂದಿವೆ. ನಾವು ಹೋದಲ್ಲೇ ನಿರಂತರವಾಗಿ ರೇಡಿಯೋ ಆಲಿಸಬಹುದು. ಆಧುನಿಕ ತಂತ್ರಜ್ಞಾನದ ಉತ್ತುಂಗದ ಈ ಕಾಲದಲ್ಲೂ ಆಕಾಶವಾಣಿ ಉನ್ನತ ಕೇಳುಗ ವರ್ಗವನ್ನು ಹೊಂದಿದೆ. ಭಾರತದ ಮಾನ್ಯ ಪ್ರಧಾನಮಂತ್ರಿ ಮೋದಿಯವರ ’ಮನ್ ಕೀ ಬಾತ್’ ಭಾರತದಲ್ಲಿ ಅಲ್ಲದೆ ವಿದೇಶಗಳಲ್ಲಿಯೂ ಕೂಡ ಕೇಳುಗರನ್ನು ಸೂಜಿಗಲ್ಲಿನಂತೆ ಸೆಳೆದಿದೆ. ಎಲೆಕ್ಟ್ರಾನಿಕ್ ಮಾಧ್ಯಮಗಳು ಇಲ್ದೇ ಇದ್ದಾಗಲೂ ಕೇಳುಗರಿಗೆ ಆಶಾದಾಯಕವಾಗಿದ್ದು ಆಕಾಶವಾಣಿಯೇ. ಆಕಾಶವಾಣಿಯಲ್ಲಿ ಭಿತ್ತರವಾಗುವ ಹಾಡುಗಳನ್ನೇ ಆತುರ ಆತುರವಾಗಿ ಬರೆದುಕೊಂಡು ಕೇಳಿಸಿಕೊಂಡು ಅಭ್ಯಾಸ ಮಾಡಿ ಇಂದಿಗೆ ಶ್ರೇಷ್ಠ ಗಾಯಕಿಯರಾಗಿರುವ ಉದಾಹರಣೆಗಳು ಇವೆ. ಖಾಸಗಿ ವಾಹಿನಿಗಳಿಗಿಂತಲೂ ಮುನ್ನುಗ್ಗಿ ಶಿಕ್ಷಣ, ಕ್ರೀಡೆ, ಮನರಂಜನೆ ಮುಂತಾದ ಎಲ್ಲಾ ಕ್ಷೇತ್ರಗಳ ಸಮಗ್ರ ಮಾಹಿತಿ ನೀಡುತ್ತಿರುವ ಹೆಗ್ಗಳಿಕೆ ಆಕಾಶವಾಣಿಗೆ ಸಲ್ಲುತ್ತದೆ.
ಆಕಾಶವಾಣಿಯ ಅನನ್ಯತೆ
ರಾಷ್ಟ್ರಮಟ್ಟದ ಕಾರ್ಯಕ್ರಮಗಳಿಂದ ಪ್ರಾದೇಶಿಕ ಪ್ರಸಾರದವರೆಗೂ ಉತ್ತಮ ಗುಣಮಟ್ಟದ ಕಾರ್ಯಕ್ರಮಗಳನ್ನು ಆಕಾಶವಾಣಿ ಪ್ರಸಾರ ಮಾಡುತ್ತಾ ವಸ್ತುನಿಷ್ಟತೆಗೆ, ನಿಖರತೆಗೆ,ಸರಳತೆಗೆ ಇರುವ ಇನ್ನೊಂದು ಹೆಸರೇ ಆಕಾಶವಾಣಿ. ರಾಷ್ಟ್ರೀಯ ಹಬ್ಬ, ರಾಷ್ಟ್ರಪತಿಗಳ, ಪ್ರಧಾನಮಂತ್ರಿಗಳ ಭಾಷಣ ಇವುಗಳನ್ನು ಅಧಿಕೃತವಾಗಿ ಆಕಾಶವಾಣಿ ಬಿತ್ತರಿಸುತ್ತದೆ. ತಣ್ಣನೆಯ ನಿರೂಪಣೆ ಔಚಿತ್ಯಪೂರ್ಣ ಮಾಹಿತಿ, ಸ್ಪಷ್ಟ ಉಚ್ಛಾರಣೆ ಇದರ ವಿಶೇಷತೆ.ಆಧುನಿಕ ತಂತ್ರಾಂಶಗಳನ್ನು ಮೈಗೂಡಿಸಿಕೊಂಡಿರುವ ಆಕಾಶವಾಣಿ ಸುಶಿಕ್ಷಿತ ವರ್ಗದಿಂದ ಮೊದಲ್ಗೊಂಡು ಅನಕ್ಷರಸ್ಥ ಸಮುದಾಯಗಳನ್ನು ಯಶಸ್ವಿಯಾಗಿ ಸೆಳೆದಿದೆ. ಶಾಲಾ ಮಕ್ಕಳಿಗೆ ರೇಡಿಯೋ ಪಾಠಗಳು, ಯುವಕರಿಗಾಗೇ ಇರುವ ಯುವವಾಣಿಯಲ್ಲಿ ಯುವ ಸಾಧಕರ,ಯುವ ಸಂಶೋಧಕರ ಪರಿಚಯವನ್ನು ಮಾಡಿಕೊಡುವುದು, ಯುವಜನತೆಯ ಪ್ರತಿಭೆಯನ್ನು ಸಾದರ ಪಡಿಸಲು ಈ ಮಾಧ್ಯಮ ಸಮರ್ಥವಾಗಿದೆ.
ಮಹಿಳೆಯರಿಗಾಗಿ ಲಲನಾಲೋಕ, ವನಿತಾವಿಹಾರ ಕಾರ್ಯಕ್ರಮಗಳಿದ್ದರೆ, ಸಾಹಿತ್ಯಕ್ಕೆ ಸಂಬಂಧಿಸಿದಂತೆ ಪದಸಂಸ್ಕೃತಿ,ಕಥಾಕಣಜ, ಕನ್ನಡಭಾರತಿ, ಪ್ರಸಾರವಾಗುತ್ತವೆ. ಚಲನಚಿತ್ರಧ್ವನಿವಾಹಿನಿ, ಚಲನಚಿತ್ರಗೀತೆಗಳು, ಕೇಳುಗರ ಅಭಿರುಚಿಗೆ ತಕ್ಕಂತೆ ಮೂಡಿ ಬರುತ್ತವೆ.ರೈತರಿಗೆ ಸಲಹೆ, ಕೃಷಿರಂಗ ಕಾರ್ಯಕ್ರಮಗಳು ರೈತರ ಜೀವನಾಡಿ ಎಂದೇ ಹೇಳಬಹುದು.ಕೇಳುಗರು ತಮ್ಮ ನೆಚ್ಚಿನ ಗೀತೆಗಳನ್ನು, ಕಾರ್ಯಕ್ರಮಗಳನ್ನು ಪತ್ರ,ಎಸ್.ಎಂ.ಎಸ್, ಮಿಂಚಂಚೆ ಮೂಲಕ ಕೇಳಿ ತಮ್ಮ ಅಭಿಪ್ರಾಯ ಮತ್ತೆ ಹಂಚಿಕೊಳ್ಳಬಹುದು. ಕೇಳುಗವರ್ಗ ನಿರೂಪಕರ ಇಂಪಾದ ಧ್ವನಿಗೆ ಮಾರು ಹೋಗಿ ಅವರನ್ನೇ ಅನುಕರಣೆ ಮಾಡುವದೂ ಇದೆ. ನೇರ ಪ್ರಸಾರದಂತಹ ಕಾರ್ಯಕ್ರಮಗಳಲ್ಲಿ ನಿರೂಪಕರ ಸಮಯಪ್ರಜ್ಞೆ, ಸಮಯಸ್ಫೂರ್ತಿಯನ್ನ ಕಾಣಬಹುದು.
ಗೃಹಿಣಿಯರಿಗೆ ಇದೊಂದು ಧ್ವನಿ ಗಡಿಯಾರ ಎಂದರೆ ತಪ್ಪಿಲ್ಲ.ಬೆಳಿಗ್ಗೆ ೬.೫ರಇಂಗ್ಲೀಷ್ ಸಮಾಚಾರದೊಂದಿಗೆ ದಿನಚರಿ ಆರಂಭವಾದರೆ ಮತ್ತೆ ಮುಗಿಯುವುದು ರಾತ್ರಿ ಹನ್ನೊಂದರ ಇಂಗ್ಲೀಷ್ ವಾರ್ತೆಯೊಂದಿಗೆ. ಪ್ರದೇಶ ಸಮಾಚಾರ ಕೇಳುತ್ತ ಕೇಳುತ್ತ ಕೆಲಸದ ವೇಗ ಹೆಚ್ಚಿಸಿಕೊಂಡು ಎಂಟು ಗಂಟೆಯ ಹಿಂದಿ ಹಾಗು ಇಂಗ್ಲೀಷ್ ಸಮಾಚಾರ ಮುಗಿದು ರೇಡಿಯೋ ಡಾಕ್ಟರ್ ಬರುವ ವೇಳೆಗೆ ಮನೆ ಬಿಟ್ಟು ಸಾಯಂಕಾಲ ಪ್ರಸಾರವಾಗುವ ಎಸ್.ಎಂ.ಎಸ್ ಚಿತ್ರಗೀತೆಗಳನ್ನು ಕೇಳುವುದರೊಂದಿಗೆ ಮತ್ತೆ ಮನೆಗೆ ಸೇರುವ ಅನೇಕ ಹೆಣ್ಣುಮಕ್ಕಳಿದ್ದಾರೆ. ಜನಹಿತಕ್ಕಾಗಿ ಜಾರಿ ಜಾಹೀರಾತುಗಳು ನಿಜಕ್ಕೂ ಸಮಾಜವನ್ನು ತಿದ್ದುತ್ತಿವೆ. ಒಟ್ಟಾರೆಯಾಗಿ ಎಲ್ಲಾ ವರ್ಗದವರಿಗೂ, ಎಲ್ಲಾ ವಯೋಮಾನದವರಿಗೂ ಬೇಕಾದ ಪರಿಪೂರ್ಣ ಪ್ಯಾಕೇಜ್ ಆಕಾಶವಾಣಿ ನೀಡುತ್ತಾ ಬಂದಿದೆ.
ಕೊರೊನಾದಂಥ ಸಾಂಕ್ರಾಮಿಕ ಕಾಲದಲ್ಲಿ ರೇಡಿಯೋ ತನ್ನ ವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಸಾಧ್ಯವಾಯಿತು. ಆರೋಗ್ಯ ಇಲಾಖೆ ಹೊರಡಿಸುವ ಜಾಹಿರಾತುಗಳು ರಾಷ್ಟ್ರನಾಯಕರ ಸಂದೇಶಗಳನ್ನು ವ್ಯಾಪಕವಾಗಿ ಭಿತ್ತರಿಸಿದ ಕೀರ್ತಿ ಆಕಾಶವಾಣಿಗೇ ಸಲ್ಲುತ್ತದೆ. ಇನ್ನೊಂದು ಪ್ರಮುಖ ವಿಚಾರವೆಂದರೆ ತಪ್ಪು ,ಮಾಹಿತಿ ವಿರುದ್ಧ ಹೋರಾಡಲು ಸಮರ್ಥ ಮಾಧ್ಯಮವಾಗಿತ್ತು. ಮಕ್ಕಳಿಗೆ ಆಕಾಶವಾಣಿಯ ಮೂಲಕವೇ ಪಾಠಗಳನ್ನು ಧ್ವನಿ ಮುದ್ರಿಸಿ ಪ್ರಸಾರ ಮಾಡಲಾಯಿತು. ಆ ಕಾರಣದಿಂದ ಶಿಕ್ಷಣದ ಸಾಂಪ್ರದಾಯಿಕ ಸಾಧನವಾಗಿ ತನ್ನತನವನ್ನು ಉಳಿಸಿಕೊಂಡಿದೆ ಎನ್ನಬಹುದು.
ಸ್ಥಳೀಯಭಾಷೆ, ಸೊಗಡು, ಪ್ರತಿಭೆಗಳಿಗೆ ಮತ್ತೆ ಹೆಚ್ಚಿನ ಅವಕಾಶದ ನಿರೀಕ್ಷೆಯಲ್ಲಿ
“ALL INDIA RADIO” ಪದದಲ್ಲಿ ಅದೇನೋ ಸೆಳೆತ. ಆದರೆ ಆಕಾಶವಾಣಿ ಕಾರ್ಯಕ್ರಮದ ರೂಪರೇಷೆಗಳಲ್ಲಿ ಆಮೂಲಾಗ್ರ ಬದಲಾವಣೆಗಳಾಗುತ್ತಿವೆ ಎಂಬ ಸುದ್ದಿ ಬೇಸರ ತರಿಸಿದೆ. ೨೦೨೦ ಡಿಸೆಂಬರ್ ೧೭ರ ಪ್ರಜಾವಾಣಿ ಪುಟ ಸಂಖ್ಯೆ 3A ನಲ್ಲಿ ಆಕಾಶವಾಣಿ ಕುರಿತು ಪ್ರಕಟವಾದ ಸುದ್ದಿ ಓದಿ ಬಹಳ ಖೇದವೆನಿಸಿತು.ಸ್ಥಳೀಯ ಆಕಾಶವಾಣಿ ಯೊಂದಿಗೆ ಬೆಳಗಾಗುತ್ತಿದ್ದ ದಿನಗಳು ಇನ್ಮುಂದೆ ಮರೆಯಾಗುತ್ತವೆಯೇನೋ ಎಂಬ ಬೇಸರವಾಯಿತು . ಸಾರ್ವಜನಿಕ ಹಿತಾಸಕ್ತಿಯಿಂದ ಪ್ರಾರಂಭವಾದ ಸಂಸ್ಥೆ ಹೀಗೆ ಮಾಡಲು ಸಾಧ್ಯವೇ ಅನ್ನುವ ಭಾವನೆಯೂ ಮೂಡಿತು. ಆದರೆ ಸ್ವಲ್ಪ ಹೊತ್ತಿನಲ್ಲೇ ಆಕಾಶವಾಣಿ ಪ್ರದೇಶ ಸಮಾಚಾರದಲ್ಲಿ “ಆಕಾಶವಾಣಿಯ ಯಾವುದೇ ಕೇಂದ್ರಗಳನ್ನು ಮುಚ್ಚುತ್ತಿಲ್ಲ. ಕೆಳದರ್ಜೆಗೆ ಇಳಿಸುತ್ತಿಲ್ಲ, ರೇಡಿಯೋ ವ್ಯವಸ್ಥೆಯನ್ನು ಇನ್ನಷ್ಟು ಬಲ ಪಡಿಸುತ್ತೇವೆ” ಎಂದು ಕೇಂದ್ರ ಸರಕಾರ ಹೇಳಿರುವ ಸುದ್ದಿ ಕೇಳಿ ನಿರಾಳವೆನಿಸಿತು. ಈಗ್ಗೆ ೨೫ ವರ್ಷಗಳ ಹಿಂದೆ ಪ್ರಾರಂಭವಾದ ಪ್ರಾದೇಶಿಕ ಆಕಾಶವಾಣಿಗಳು ನಿಜ ಅರ್ಥದಲ್ಲಿ ಸ್ಥಳಿಯ ಭಾಷಾಸೊಗಡು, ಆಚರಣೆಗಳು. ಮುಖ್ಯವಾಗಿ ಸ್ಥಳಿಯ ಪ್ರತಿಭೆಗಳಿಗೆ (ಯುವವಾಣಿ, ಮಕ್ಕಳಕಾರ್ಯಕ್ರಮ, ಜಾನಪದ ಹಾಡುಗಾರರು….) ಅವಕಾಶ ಕೊಡುತ್ತಿದ್ದವು. ಆದರೆ ನವೆಂಬರ್ ೨೦೧೮ ನಂತರ ವಾರಕ್ಕೆಮೂರು ಬಾರಿ ಪ್ರಸಾರವಾಗುತ್ತಿದ್ದ ‘ಮಹಿಳಾವಾಣಿ’ ಕಾರ್ಯಕ್ರಮ ನಿಂತು ರಾಜ್ಯವಾಪಿ ‘ವನಿತಾವಿಹಾರ’ ಎಂದು ಪ್ರಸಾರವಾಗಲು ಪ್ರಾರಂಭವಾಯಿತು. ಮೌಲ್ವಿಕ ಕಾರ್ಯಕ್ರಮ ಪ್ರಸಾರವಾದದ್ದಕ್ಕೆ ಬಹಳ ಖುಷಿ ಅನ್ನಿಸಿತು. ಆದರೆ ಸ್ಥಳಿಯ ಪ್ರತಿಭೆಗಳಿಗೆ ಈ ಹಿಂದೆ ಇರುತ್ತಿದ್ದ ಅವಕಾಶಗಳು ಕಡಿಮೆಯಾಗಿದ್ದು ಅಷ್ಟೇ ಸತ್ಯ. ಇದು ಉದಾಹರೆಣೆ ಅಷ್ಟೇ . ಡಿಜಿಟಲ್ ಯುಗ ಎಂದು ಎಷ್ಟೇ ಹೇಳಿದರೂ ಸ್ಥಳೀಯ ಆಕಾಶವಾಣೀ ಕೇಳುಗರ ಸಂಖ್ಯೆ ಖಂಡಿತ ಕಡಿಮೆಯಾಗಿಲ್ಲ ಎಂಬುದು ನನ್ನನಿಸಿಕೆ. ಇವತ್ತಿಗೂ ಆಕಾಶವಾಣಿಯ ಬೆಳಗ್ಗಿನ ವಂದೇಮಾತರಂನೊಂದಿಗೆ ಎದ್ದು ಆಫೀಸಿಗೆ ಹೋಗುವವರೆಗೂ ಗೃಹಕೃತ್ಯಗಳ ನಡುವೆ ಕಾರ್ಯಕ್ರಮ ಆಲಿಸುವ ಎಷ್ಟೋ ಶ್ರೋತೃಗಳಿದ್ದಾರೆ. ಈ ನಡುವೆ ಸ್ಥಳೀಯ ಸೊಗಡನ್ನು ಪ್ರಸಾರಮಾಡುವ, ಸ್ಥಳೀಯ ಪ್ರತಿಭೆಗಳಿಗಾಗಿ ಇದ್ದ ಅವಕಾಶಗಳು ಕಡಿಮೆಯಾಗಿವೆ. ಪ್ರಾದೇಶಿಕತೆಯ ಹೆಸರಲ್ಲಿ ಪ್ರಾರಂಭವಾದ ಸಂಸ್ಥೆ ಮತ್ತೆ ಮೈದುಂಬುವುದನ್ನು ನೋಡುವ ಹೆಬ್ಬಯಕೆ ಒಬ್ಬ ಕೇಳುಗಳಾಗಿ ನನ್ನಲ್ಲಿದೆ. ಸಮುದಾಯಗಳನ್ನು ಒಗ್ಗೂಡಿಸುವ ಮತ್ತು ಬಲಾವಣೆಗಳೊಂದಿಗೆ ಹೆಜ್ಜೆ ಹಾಕಬೇಕಿರುವ ಆಕಾಶವಾಣಿ ಕೇಳುಗರನ್ನೂ ಅವರ ಭರವಸೆಗಳನ್ನು ಗೌರವಿಸುತ್ತದೆ ಎಂದಿದ್ದೇನೆ.
ವಸ್ತುನಿಷ್ಠತೆಗೆ ಅನ್ವರ್ಥವೆಂದರೆ ಆಕಾಶವಾಣಿ. ಆಕಾಶವಾಣಿ ಸಂವಹನಕ್ಕಾಗಿ ಇರುವ ಶಕ್ತಿಶಾಲಿ ಮಾಧ್ಯಮ. ಕೇಳುಗರನ್ನು ಜೊತೆಯಾಗಿರಿಸಿಕೊಂಡು ಅವರನ್ನೂ ಬೆಳೆಸುವ ಕಾರಣದಿಂದ ಇದನ್ನು ಅವಕಾಶವಾಣಿ ಎಂದೂ ಕರೆಯಬಹುದು. ಇಂತಹ ಸ್ಮಾರ್ಟ್ಫೋನ್ ಯುಗದಲ್ಲೂ ಸ್ಮಾರ್ಟ್ ಆಗಿ ಕೇಳುಗರನ್ನು ಸೂಜಿಗಲ್ಲಿನಂತೆ ಆಕರ್ಷಿಸಿರುವುದು ಆಕಾಶವಾಣಿಯ ಹೆಗ್ಗಳಿಕೆಯಲ್ಲದೆ ಮತ್ತೇನಲ್ಲ. “ನ್ಯೂವರ್ಲ್ಡ್,ನ್ಯೂ ರೇಡಿಯೋ” ಎಂಬ ಘೋಷಣೆಯೊಂದಿಗೆ ಈ ವರ್ಷ ಕೇಳುಗರ ಅಗತ್ಯವನ್ನು ಪೂರೈಸಲು ಸನ್ನದ್ದಾಗಿದೆ ಅನ್ನಿಸುತ್ತಿದೆ. ಆ ಪರಿಪ್ರೇಕ್ಷಗಳೆಂದರೆ ತನ್ನ ಕಾರ್ಯವ್ಯಾಪ್ತಿಯನ್ನು ಹಿಗ್ಗಿಸಿಕೊಂಡು ‘ವಿಕಸನ’ ಆಗುವುದು., ನವೀನ ತಂತ್ರಜ್ಞಾನವನ್ನು ಅಳವಡಿಸಿಕೊಂಡು ‘ನಾವೀನ್ಯತೆ’ಯೆಡೆಗೆ ಕಾಲಿಡುತ್ತಿರುವುದು. ನೈಸರ್ಗಿಕ ವಿಕೋಪ, ಸಾಮಾಜಿಕ-ಆರ್ಥಿಕ ಬಿಕ್ಕಟ್ಟುಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುವಂಥ ಕಷ್ಟಕಾಲದಲ್ಲಿ ಇನ್ನಷ್ಟು ಅಗತ್ಯ ಸೇವೆ ಒದಗಿಸುವುದರ ಮೂಲಕ ‘ಸಂಪರ್ಕ’ ಸಾಧಿಸುವುದು ಇತ್ಯಾದಿ. ಅರ್ಥಾತ್ ಇನ್ನಷ್ಟು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲಿದೆ ಎಂದು ಇಲ್ಲಿ ತಿಳಿಯಬಹುದು. ಅತ್ಯಂತ ಕಡಿಮೆ ಖರ್ಚಿನಲ್ಲಿ ದೂರ ಮತ್ತು ದುರ್ಬಲ ಸಮುದಾಯಗಳನ್ನು ತಲುಪುತಿರುವುದು ಆಕಾಶವಾಣಿಗಳೇ.. ಶತಮಾನಕ್ಕಿಂತಲೂ ಹಳೆಯದಾಗಿರುವ ಈ ಧ್ವನಿ ಮಾದ್ಯಮ ಇನ್ನಷ್ಟು ಸಶಕ್ತ ಮಾಧ್ಯಮವಾಗಲೆಂದು ಈ ಮೂಲಕ ಆಶಿಸುತ್ತೇನೆ.
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ