- ಸಾಧಕರು ಸಾಮ್ರಾಜ್ಯ ಕಟ್ಟಬಾರದು- ವೈಲ್ಡ್ ವೈಲ್ಡ್ ಕಂಟ್ರಿ - ನವೆಂಬರ್ 5, 2022
- ವ್ಹಾ ರಿಷಭ್ ವ್ಹಾ – ಕಾಂತಾರಕೆ ವ್ಹಾ ವ್ಹಾ - ಅಕ್ಟೋಬರ್ 8, 2022
- ಚೇರ್ಮನ್ ಅವರ ಕುರಿತ ಪುಸ್ತಕ ಮತ್ತು ನಾನು - ಆಗಸ್ಟ್ 22, 2022
ಮನಸಿನ ಕುರಿತು ಎಷ್ಟು ಆಲೋಚಿಸಿದರೂ ಮುಗಿಯುವುದಿಲ್ಲ.
ನಮ್ಮ ನಡೆ,ನುಡಿ,ಆಲೋಚನಾ ಕ್ರಮ ಎಲ್ಲದರ ಮೇಲೂ ಈ ಮನಸು ತನ್ನ ಕರಾಮತ್ತು ತೋರಿಸುತ್ತದೆ.
ಓದಿನ ತಿಳುವಳಿಕೆ ಬಂದಾಗಿನಿಂದ ಈ ಕುರಿತು ಆಲೋಚನೆ ಮಾಡಿದಂತೆ ಹೊಸ ಹೊಳವುಗಳು.
ಅನೇಕ ಚರ್ಚೆಗಳಲ್ಲಿ ಗೆಳೆಯರು ಮನಸಿನ ಮಂಗಾಟ ಮತ್ತು ವಿಕ್ಷಿಪ್ತತೆ ಬಗ್ಗೆ ಹೇಳಿದಾಗಲೆಲ್ಲ ಸೋಜಿಗವಾಗುತ್ತದೆ.
ವ್ಯಕ್ತಿಯ ಮನಸ್ಥಿತಿ ಮತ್ತು ದುಗುಡಗಳಿಗೆ ಕಾರಣ ಹುಡುಕುವ ಭರದಲ್ಲಿ ಅರ್ಧ ಆಯುಷ್ಯ ಮುಗಿದು ಹೋಗಿರುತ್ತದೆ.
“ಇವರು ಏಕೆ ವಿನಾಕಾರಣ ಸಂಶಯ ಪಡುತ್ತಾರೆ? ಇವರಿಗೆ ಏಕೆ ನನ್ನ ಮೇಲೆ ಇಷ್ಟೊಂದು ಸಿಟ್ಟು?” ಹೀಗೆ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ತುಂಬಾ ಕಷ್ಟ.
ಗಂಡು, ಹೆಣ್ಣಿನ ವಿಷಯ ಬಂದಾಗ ಅನೇಕ ಪ್ರಶ್ನೆಗಳು ಹುಟ್ಟಿಕೊಂಡು ಬಿಡುತ್ತವೆ.
ನಂಬಿಕೆ ವಿಷಯದಲ್ಲಿ ಗಂಡಸು ಸದಾ ಪ್ರಶ್ನಾರ್ಹ.
ಹೆಣ್ಣಿನ ವಿಷಯವಾಗಿ ಅವನು ತುಂಬಾ ಸರಳವಾಗಿ ಪ್ರಾಮಾಣಿಕವಾಗಿ ನಡೆದುಕೊಂಡರೂ ನಂಬುವುದು ಕಷ್ಟ.
ತನ್ನ ಮನದ ಮೂಲೆಯಲ್ಲಿ ಅಡಗಿರುವ ಕೊಳಕುತನ ಮರೆ ಮಾಚಿ ಆಸೆ ಪಡುವ ಮನಸ್ಥಿತಿ ಮಾತ್ರ ತುಂಬಾ ವಿಚಿತ್ರ.
ಬಹಿರಂಗಗೊಳಿಸುವ ಸಮಯಕ್ಕೆ ಕಾಯುತ್ತ ಇರುತ್ತಾನೆ.
ಮನು,ಚಾಣಕ್ಯ ಗಂಡಿನ ದೌರ್ಬಲ್ಯ ಮತ್ತು ಮಿತಿಯ ಕುರಿತು ಹೇಳದೇ ವಿನಾಕಾರಣ ಹೆಣ್ಣನ್ನು ದುರ್ಬಲ ಎಂದು ಹೇಳಿರಬಹುದೆಂಬ ಸಂಶಯ ಬರುತ್ತದೆ.
ಗಂಡಿನ ಸಣ್ಣತನ ಮತ್ತು ದೌರ್ಬಲ್ಯ ಒಪ್ಪಿಕೊಳ್ಳದ ಪುರುಷ ಪ್ರಧಾನ ಆಲೋಚನೆ ಇಂತಹ ನೂರಾರು ನಿಯಮಗಳನ್ನು ಹುಟ್ಟು ಹಾಕಿವೆ.
ಕುರೂಪಿ ಅಷ್ಟಾ ವಕ್ರನಿಗೆ ಒಲಿದ ಮಹಾರಾಣಿ ಕತೆ ಕೂಡ ಪರೋಕ್ಷವಾಗಿ ಹೆಣ್ಣಿಗೆ ಇರುವ ಸಹನೆ ಮತ್ತು ತಾಕತ್ತನ್ನು ಹೇಳುತ್ತದೆ.
ತನ್ನನ್ನು ನಂಬಿ ಬಂದ ಮಹಾರಾಣಿ ವಿಷಯವಾಗಿ ಅಕ್ರಾವಷ್ಟ ನಡೆದುಕೊಳ್ಳುವ ರೀತಿ ಅಕ್ಷಮ್ಯ.
ಎಷ್ಟೋ ಅನೈತಿಕ ಸಂಬಂಧಗಳ ಸುಳಿಯಲ್ಲಿ ಸಿಕ್ಕ ನತದೃಷ್ಟ ಮಹಿಳೆಯರ ಬದುಕನ್ನು ಪುರುಷ ನರಕ ಮಾಡಿ ಬಿಡುತ್ತಾನೆ.
ಏನೋ ಸೆಳೆತದಿಂದ,ಯಾವುದೋ ಕ್ಷಣದಲ್ಲಿ ತನಗೆ ಒಲಿದ ಹೆಣ್ಣನ್ನು ವಿನಾಕಾರಣ ಹಿಂಸಿಸುತ್ತಾನೆ. ಆಗ ಅವಳಿಗೆ ಈ ಗಂಡಸರ ಸಹವಾಸವೇ ಸಾಕು ಎನಿಸುತ್ತದೆ.
ಮೇಲ್ನೋಟಕ್ಕೆ ತುಂಬಾ ಗಾಢವಾದ ದಾಂಪತ್ಯ ಎನಿಸುವಾಗ ಗಂಡ ತೀರಿ ಹೋದರೆ ಹೆಂಡತಿ ನಿಶ್ಚಿಂತವಾದ ಅನೇಕ ಪ್ರಸಂಗಗಳನ್ನು ನೋಡಿದ್ದೇನೆ ಆದರೆ ಅವರು ಹಾಗಂತ ಬಾಯಿ ಬಿಟ್ಟು ಹೇಳದೇ ಆ ಸ್ವಾತಂತ್ರ್ಯವನ್ನು ಸಂಭ್ರಮಿಸುತ್ತಾರೆ.
ಇದು ಅವಳ ತಪ್ಪಲ್ಲ, ಪುರುಷ ಕೊಟ್ಟಿರಬಹುದಾದ ಅಗೋಚರ ಮಾನಸಿಕ ಹಿಂಸೆಯೇ ಕಾರಣ.
ಇವೆಲ್ಲ ಸಂಗತಿಗಳು ಗೊತ್ತಿದ್ದೂ ಮನು ಮತ್ತು ಚಾಣಕ್ಯ ಉದ್ದೇಶ ಪೂರ್ವಕವಾಗಿ ಹೆಣ್ಣಿಗೆ ಎಚ್ಚರಿಕೆ ನೀಡಿ ನೂರಾರು ಕರಾರುಗಳನ್ನು ಹೇರಿದ್ದಾರೆ.
‘ಪರ ಪುರುಷರ ಜೊತೆಗೆ ವಿನಾಕಾರಣ ಸಲಿಗೆ ಸಲ್ಲದು, ಏಕಾಂತದಲಿ ಅಪರಿಚಿತ ಪುರುಷರೊಂದಿಗೆ ಇರಲೇ ಬಾರದು’ ಹೌದು ನಿಜ ಒಪ್ಪಿಕೊಳ್ಳೋಣ ಇಂತಹ ಏಕಾಂತವನ್ನು ದುರುಪಯೋಗ ಪಡಿಸಿಕೊಳ್ಳುವ ದುರಾಲೋಚನೆ ಖಂಡಿತವಾಗಿ ಮಹಿಳೆಯರ ತಲೆಯಲ್ಲಿ ಸುಳಿಯುವುದಿಲ್ಲ ಎಂಬುದು ಅಷ್ಟೇ ಸತ್ಯ.
ಕಾಮ ನಿಗ್ರಹದಲ್ಲಿ ಗಂಡು ದುರ್ಬಲ ಎಂದು ಹೇಳುವ ಬದಲಾಗಿ ಇಂತಹ ನಿಯಮಗಳನ್ನು ಹೆಣ್ಣಿಗೆ ಹಾಕುವುದು ಯಾವ ನ್ಯಾಯ? ಎಂದು ಪ್ರಶ್ನೆ ಮಾಡಲಾಗದ ಹಂತ ತಲುಪಿಬಿಟ್ಟಿದ್ದೇವೆ.
ಈ ತರಹದ ಮಾತುಗಳನ್ನು ಹೆಂಡತಿ, ಮಕ್ಕಳು, ಸಹೋದರಿಯರಿಗೆ, ಆಪ್ತ ಮಹಿಳೆಯರಿಗೆ ಎಚ್ಚರಿಸುವಾಗ ಗಂಡಸಿನ ವಿಕೃತ ದೌರ್ಬಲ್ಯ ಮನಸಿಗೆ ರಾಚುತ್ತದೆ.
ನನ್ನ ಆತ್ಮೀಯ ಹೆಣ್ಣು ಮಗಳೊಬ್ಬರ ಜೊತೆಗೆ ಎಚ್ಚರಿಕೆಯ ಮಾತುಗಳನ್ನು ಹೇಳುವಾಗ ನನಗೆ ಜುಗುಪ್ಸೆ ಉಂಟಾಗಿ ಮನಸು ಮುದುಡಿ ಹೋಯಿತು.
‘ಅಯ್ಯೋ ಬಿಡಿ ಗಂಡು ಎಷ್ಟೇ ನಾಜೂಕಾಗಿ ವರ್ತಿಸಿದರೂ ಅವನ ಮೂಲ ಉದ್ದೇಶ ಅರ್ಥ ಮಾಡಿಕೊಳ್ಳುವಷ್ಟು ಹೆಣ್ಣು ಜಾಣೆ ಇರುತ್ತಾಳೆ, ಅಂತಹ ಗಂಡಸರನ್ನು ಎಪ್ಪಾ,ಎಣ್ಣಾ ಎಂದು ಸಾಗ ಹಾಕುತ್ತಾಳೆ ಎಂಬ ವಿಶ್ವಾಸ ಇಟ್ಟುಕೊಳ್ಳಬೇಕು’ ಎಂದಾಗ ಪೆಚ್ಚಾಗಿ ಹೋದೆ.
ಮನಸಿನ ವಿಷಯವೇ ಹೀಗೆ, ಒಂದೊಂದು ಘಟನೆಗೆ ಒಂದೊಂದು ವ್ಯಾಖ್ಯಾನ.
ಅವಳು ತೆಗೆದುಕೊಳ್ಳುವ ನಿರ್ಣಯ ತುಂಬಾ ಗಟ್ಟಿಯಾಗಿರುತ್ತದೆ.
ಒಮ್ಮೆ ಮನಸು ಮಾಡಿದರೆ ಇಡೀ ಜಗತ್ತನ್ನು ಎದುರಿಸುವ ಶಕ್ತಿ ಅವಳಿಗಿದೆ ಎಂಬ ಮರು ವ್ಯಾಖ್ಯಾನ ಇಂದಿನ ಅಗತ್ಯವಾಗಿದೆ.
ಹೆಣ್ಣು ದುರ್ಬಲ ಎಂಬುದನ್ನು ಒಪ್ಪಿಕೊಂಡಂತೆ ನಟಿಸದೇ ಹೋದರೆ ಅನೇಕ ಗಂಡಸರು ಹುಚ್ಚು ಹಿಡಿಸಿಕೊಂಡು ಸತ್ತೇ ಹೋಗುತ್ತಾರೆ.
ತಮ್ಮ ದರ್ಪ,ದುರಹಂಕಾರ ಮತ್ತು ಅನುಮಾನದ ಅನಗತ್ಯ ಎಚ್ಚರಿಕೆಗಳಿಂದ ಹೆಣ್ಣನ್ನು ನಿಯಂತ್ರಣ ಮಾಡುವ ನಾಟಕ ಮಾತ್ರ ನಡದೇ ಇರುತ್ತದೆ.
ಇಂದು ಸಂಜೆ ಆಟೋದಲ್ಲಿ ಹಾಸ್ಟೆಲ್ ಹೊರಟಿದ್ದ ಮಗಳಿಗೆ ಪದೇ ಪದೇ ಫೋನ್ ಮಾಡಿದಾಗ ‘ಇರಲಿ ಬಿಡು ಪಪ್ಪಾ ಐ ಕ್ಯಾನ್ ಮ್ಯಾನೇಜ್, ನಿನ್ನ ಟೆನ್ಷನ್ ಏನು ಅಂತ ಗೊತ್ತು’ ಎಂದು ನಕ್ಕಳು.
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ