- ಕವಿಗಳು ಕಂಡ ಸಂಭ್ರಮದ ಯುಗಾದಿ. - ಏಪ್ರಿಲ್ 9, 2024
- ವಿಜಯದಶಮಿ ರೈತರ “ಬನ್ನಿ ಹಬ್ಬ” - ಅಕ್ಟೋಬರ್ 24, 2023
- ಮುನ್ನಡೆಯುವ ಹಕ್ಕು ಮಹಿಳೆಯರಿಗೂ ಇದೆ - ಮಾರ್ಚ್ 8, 2023
ಅರಣ್ಯ ಸಂರಕ್ಷಿಸಿದರೆ ನಾವೇ ಸಂರಕ್ಷಿಸಿ ಕೊಂಡಂತೆ.
ಇತ್ತೀಚಿನ ದಿನಗಳಲ್ಲಿ ಅರಣ್ಯಗಳು ನಾಶವಾಗಿ ಬಯಲು ಪ್ರದೇಶ ವಾಗುತ್ತಿದೆ.ಆದರೆ ಅರಣ್ಯದಿಂದಲೇ ಎಷ್ಟೊಂದು ಉಪಯೋಗ! ಅದು ನಮ್ಮನ್ನು ಹೇಗೆ ಕಾಪಾಡುತ್ತಿದೆ ಎಂದು ತಿಳಿದುಕೊಂಡರೆ ನಾವು ಅರಣ್ಯವನ್ನು ಉಳಿಸಿಕೊಳ್ಳಲು ಭವಿಷ್ಯದ ದೃಷ್ಟಿಯಿಂದ ಸಂರಕ್ಷಣೆ ಮಾಡುತ್ತೇವೆ.ಅವುಗಳನ್ನು ಸಂರಕ್ಷಿಸುವುದು ಎಂದರೆ ಬೆಂಕಿಯಿಡುವುದು,ಮರ ಕಡಿಯುವುದರಿಂದ ಕಾಪಾಡುವುದೇ ಆಗಿದೆ.
ಅರಣ್ಯ ಸಂಪತ್ತು ಅಮೂಲ್ಯ.
ಹಿಂದೆ ಹಿರಿಯರು ಹೇಳುತ್ತಿದ್ದ ಪ್ರಕಾರ ಭೂಮಿಯಲ್ಲಿ ಜಲ ಸಂಪತ್ತು ಯಥೇಚ್ಛವಾಗಿತ್ತು. ಮಳೆ ಬೆಳೆಗಳು ಚೆನ್ನಾಗಿದ್ದವು. ಆದರೆ ಈಗ ಮಳೆ ಪ್ರಮಾಣ ಕಡಿಮೆಯಾಗಿದೆ. ರೈತರ ಬದುಕು ಹದಗೆಟ್ಟಿದೆ. ಅದಕ್ಕೆ ಕಾರಣ ದಿನ ದಿನೇ ಅರಣ್ಯ ಸಂಪತ್ತು ನಾಶವಾಗುತ್ತಿದೇ ಆಗಿದೆ.ಇಂಥಹ ಪರಿಸ್ಥಿತಿಯಲ್ಲಿ ಅರಣ್ಯಗಳ ನೆಲೆ ಬೆಲೆಯ ಸಹಿತ ನಮ್ಮ ಯುವಜನತೆಗೆ ತಿಳಿಸುವುದೇ ಈ ಬರಹದ ಉದ್ದೇಶ. ಹಾಗಾಗಿ ಅರಣ್ಯ ಸಂಪತ್ತು ಎಷ್ಟು ಅಮೂಲ್ಯವಾದುದು ಎಂಬ ವಿಷಯ ತಿಳಿದುಕೊಂಡರೆ ಅರಣ್ಯ ಸಂಪತ್ತು ಉಳಿಸಲು ಸಾಧ್ಯವಾಗುತ್ತದೆ.
ಬಿಡಿಸಲಾರದ ನಂಟು.
ಕಾಡಿಲ್ಲದೆ ನಾಡಿಲ್ಲ, ಕಾಡು ಬೆಳೆಸಿ ನಾಡು ಉಳಿಸಿ,ಹಸಿರೇ ಉಸಿರು ಇವೆಲ್ಲ ಹಳೆಯ ಮಾತಾದರೂ ಈ ಮಾತುಗಳ ಅರ್ಥ ಇವತ್ತಿಗೂ ಹೊಸದೇ. ಅರಣ್ಯವಿಲ್ಲದೆ ಮಾನವನ ಬದುಕು ಊಹಿಸಲು ಸಾಧ್ಯವಿಲ್ಲ. ಅವುಗಳ ಮೇಲಿನ ಅವಲಂಬನೆ ನಿರಂತರ. ಅರಣ್ಯಗಳು ಮಾನವನಿಗಿಂತಲೂ ಮೊದಲು ರೂಪುಗೊಂಡು ವಿಕಸನಗೊಂಡವು. ಮಾನವ ಕಲ್ಯಾಣಕ್ಕಾಗಿ ಪ್ರಕೃತಿ ಕರುಣಿಸಿರುವ ಅಮೂಲ್ಯವಾದ ಕೊಡುಗೆ. ಇದು ಅರಣ್ಯ ಮತ್ತು ಮಾನವನ ಮಧ್ಯ ಬಿಡಿಸಲಾರದ ನಂಟು.
ಮರಗಳನ್ನು ಬೆಳೆಸಬೇಕು.
ಅರಣ್ಯ,ಗಿಡ,ಮರ,ಬಳ್ಳಿ, ಪೊದೆಗಳು ಜೀವಿ ಜಂತುಗಳಿಗೂ ನೆಲೆ. ಮಾನವನ ಮೊದಲ ಮನೆಯೇ ಅರಣ್ಯ. ಅರಣ್ಯ ಒಂದು ಪುಟ್ಟ ಪ್ರಪಂಚವೇ ಆಗಿದೆ. ಹಿಂದೆ ಭಾರತ ದೇಶದ ತುಂಬಾ ಅರಣ್ಯಗಳಿದ್ದವು ಎಂಬುದಕ್ಕೆ ರಾಮಾಯಣ,ಮಹಾಭಾರತ ಕಥೆಗಳೇ ಸಾಕ್ಷಿಯಾಗಿದೆ. ಅರಣ್ಯ ತನಗಾಗಿ ಏನನ್ನೂ ಬೇಡದೆ, ಬೇಡಿ ಬಂದ ಎಲ್ಲರಿಗೂ ತನ್ನ ಅಸ್ತಿತ್ವವನ್ನೇ ಧಾರೆಯೆರೆಯುತ್ತದೆ. ದಣಿದು ಬಂದಾಗ ಮರದ ನೆರಳೇ ಆಶ್ರಯ. ಹಸಿರೆಲೆಗಳನ್ನು ಹೊತ್ತು ನೆರಳು ನೀಡುವ ಮರ ಮಾನವನ ಆರ್ಥಿಕ ಪ್ರಗತಿಗೆ ನೆರವಾಗಿದೆ. ಉಪನಿಷತ್ತಿನಲ್ಲಿ ಹೇಳುವಂತೆ “ಹತ್ತು ಬಾವಿಗಳು ಒಂದು ಕೆರೆಗೆ ಸಮ, ಹತ್ತು ಕೆರೆಗಳು ಒಂದು ಸರೋವರಕ್ಕೆ ಸಮ.ಹತ್ತು ಸರೋವರಗಳು ಒಬ್ಬ ಮಗನಿಗೆ ಸಮ. ಹತ್ತು ಮಕ್ಕಳು ಒಂದು ಮರಕ್ಕೆ ಸಮ”. ಇದರಿಂದ ಮರಗಳನ್ನು ಬೆಳೆಸುವುದರ ಅಗತ್ಯ ಎಷ್ಟೊಂದು ತಿಳಿಯುತ್ತದೆ.
ಅರಣ್ಯದ ಮಹತ್ವ ತಿಳಿದಿತ್ತು.
ಹಿಂದಿನ ಕಾಲದಲ್ಲಿ ರಾಜ-ಮಹಾರಾಜರೂ ಅರಣ್ಯಗಳ ಮಹತ್ವವನ್ನರಿಯುತ್ತಿದ್ದರು. ಅಶೋಕ ಚಕ್ರವರ್ತಿ ಸಾಲು ಮರಗಳನ್ನು ಬೆಳೆಸಿ ಎಂದು ಘೋಷಿಸಿದನು. ಅರಣ್ಯಗಳನ್ನು ಹಿಂದೆ ಶ್ರೀಮಂತವರ್ಗದ ಜನ ತಮ್ಮ ಸ್ವಂತ ಸೊತ್ತು ಎಂದು ಉಪಯೋಗಿಸುತ್ತಿದ್ದರು. ಗಂಧ ಮತ್ತು ತೇಗದ ಮರಗಳ ರಾಜ್ಯದಲ್ಲಿ ಎಲ್ಲಿದ್ದರೂ ರಾಜನಿಗೆ ಸೇರಿದ್ದಾಗಿತ್ತು. ತೇಗದ ಮರವನ್ನು ರಾಜ್ಯ ವೃಕ್ಷ ಎಂದು ಘೋಷಿಸಲಾಯಿತು.ಹಳೆಯ ಮೈಸೂರು ಆಳಿದ ಟಿಪ್ಪು ಸುಲ್ತಾನನ ಕಾಲದಲ್ಲಿ ಮೊಟ್ಟಮೊದಲಿಗೆ ಅರಣ್ಯವನ್ನು ಸರ್ಕಾರದ ಸೊತ್ತೆಂದು ಸಾರಲಾಯಿತು. ಮುಂದೆ ಸರ್ಕಾರ ಅರಣ್ಯದ ಅಧಿಕಾರ ಪಡೆದುಕೊಂಡು ರಕ್ಷಣೆಯ ಕಾರ್ಯವನ್ನು ಕೈಗೊಂಡವು.
ಮರದಿಂದ ಆಮ್ಲಜನಕ.
ಅರಣ್ಯಗಳು ದೇಶದ ಸಂಪತ್ತನ್ನು ಹೆಚ್ಚಿಸುತ್ತದೆ. ಅರಣ್ಯ ಉತ್ಪನ್ನಗಳು ಎಷ್ಟು ಕೈಗಾರಿಕೆಗಳ ಕಚ್ಛಾ ವಸ್ತುಗಳಾಗಿವೆ.ಹೀಗಾಗಿ ಎಲ್ಲಾ ದೇಶಗಳು ಅರಣ್ಯಗಳನ್ನು ಕಾಯ್ದುಕೊಳ್ಳುವಲ್ಲಿ ಗಮನ ಹರಿಸಿವೆ.”ಧರ್ಮೋ ರಕ್ಷತಿ ರಕ್ಷಿತಃ”ಎನ್ನುತ್ತಾರೆ. ಹಾಗೆಯೇ ಯಾರು ವೃಕ್ಷಗಳನ್ನು ರಕ್ಷಿಸುತ್ತಾರೋ ಅವರನ್ನು ವೃಕ್ಷಗಳು ರಕ್ಷಿಸುತ್ತೇವೆ. ಚೆನ್ನಾಗಿ ಬೆಳೆದ ಒಂದು ಮರ ಇನ್ನೂರು ಜನರಿಗೆ ಸಾಕಾಗುವಷ್ಟು ಆಮ್ಲಜನಕವನ್ನು ಉತ್ಪಾದಿಸುತ್ತದೆ ಎಂಬ ಅಭಿಪ್ರಾಯವಿದೆ.ಇತ್ತೀಚಿನ ದಿನಗಳಲ್ಲಿ ಜನಸಂಖ್ಯೆ ಹೆಚ್ಚಿರುವ ಕಾರಣ ಆಮ್ಲಜನಕದ ಕೊರತೆಯನ್ನು ನೀಗಿಸಲು ಸಹ ಮರಗಳ ಅವಶ್ಯಕತೆ ಎಷ್ಟು ಮುಖ್ಯ ಎಂಬುದರ ಅರಿವಾಗುತ್ತಿದೆ. ಹಾಗೆಯೇ ನಮ್ಮ ಆಹಾರ ಉತ್ಪಾದನೆಯ ವ್ಯವಸ್ಥೆ ಫಲವತ್ತಾದ ಮೇಲ್ಮಣ್ಣಿನ ಮೇಲೆ ಅವಲಂಬಿಸಿರುತ್ತದೆ. ಇಂತಹ ಮೇಲ್ಮಣ್ಣನ್ನು ರಕ್ಷಿಸಿ, ಹೊಸ ಪದರಗಳನ್ನು ಸೃಷ್ಟಿಸುವುದು ಅರಣ್ಯಗಳು. ಅರಣ್ಯಗಳಲ್ಲಿ ಮರಗಳಿಂದ ಉದುರಿ, ಕೊಳೆತು ನೆಲೆಕ್ಕೆ ಸೇರುವ ಎಲೆಗಳು ಮಣ್ಣಿಗೆ ಬೇಕಾದ ಪೋಷಕಾಂಶವನ್ನು ಒದಗಿಸುತ್ತದೆ. ಭೂಮಿಯ ಮೇಲಿನ ಅರಣ್ಯಗಳು ಹೆಚ್ಚಾದಷ್ಟು ನೆಲದ ಸಾರವೂ ಹೆಚ್ಚುತ್ತದೆ.
ಅರಣ್ಯಗಳ ನಿರ್ವಹಣೆ ಬೇಕು.
ಮಾನವನಿಗೆ ಅರಣ್ಯ ಹಲವು ವಿಧದಲ್ಲಿ ಉಪಯುಕ್ತ.ದಿನನಿತ್ಯದ ಆಹಾರ, ಸೊಪ್ಪು, ಹಣ್ಣು-ಹಂಪಲು,ಹಸಿರೆಲೆ, ಗೊಬ್ಬರ, ದಿಮ್ಮಿ, ಸೌದೆ, ಮೇವು, ಉರುವಲು, ಪೀಠೋಪಕರಣಕ್ಕೆ ಬೇಕಾದ ಮರ, ಜೇನು,ನಾರು,ಮಡ್ಡಿ, ರೇಷ್ಮೆ, ಎಣ್ಣೆಬೀಜಗಳು,ಕೊಡುವುದರ ಜೊತೆಗೆ ಆರೋಗ್ಯಕರವಾದ ಗಾಳಿ ಮತ್ತು ಔಷಧಿ ಸಸ್ಯಗಳನ್ನು ನೀಡುತ್ತವೆ . ಹೀಗೆ ಒಂದಲ್ಲ ಒಂದು ರೀತಿ ಪ್ರತಿನಿತ್ಯದ ಜೀವನದಲ್ಲಿ ಸಸ್ಯಗಳು ಉಪಯೋಗವಾಗುತ್ತಿವೆ. ಹಾಗಾಗಿ ಅರಣ್ಯ ಉತ್ಪನ್ನಗಳಿಗೆ ವಿಶ್ವ ವಾಣಿಜ್ಯ ಮಾರುಕಟ್ಟೆಯಲ್ಲಿ ಅಪಾರಬೇಡಿಕೆ. ಹೀಗೆ ನಮ್ಮ ಅರಣ್ಯ ಮಣ್ಣು, ನೀರು,ವನ್ಯ ಜೀವಗಳೊಂದಿಗೆ ಆತ್ಮೀಯವಾಗಿ ಬೆಸೆದುಕೊಂಡಿದೆ. ಅರಣ್ಯಗಳನ್ನು ಚೆನ್ನಾಗಿ ನಿರ್ವಹಿಸಿದರೆ ಅವು ಉತ್ತಮ ಪರಿಸರ ನಿರ್ಮಾಣಕ್ಕೆ ನೆರವಾಗುವುದು.
ಶಾಪದಿಂದ ತಪ್ಪಿಸಿಕೊಳ್ಳಿ.
ಮಾನವ ಕಲ್ಯಾಣದಲ್ಲಿ ವನ್ಯ ಜೀವಿಗಳ ಪಾತ್ರ ಅಪಾರ. ವನ್ಯಜೀವಿಗಳ ಪೈಕಿ ಹೊಸ ಜಾತಿಯ ಪ್ರಾಣಿಗಳು, ಸಸ್ಯಾಹಾರಿ,ಮಾಂಸಾಹಾರಿ ಪ್ರಾಣಿಗಳು ಇವೆ. ಭಾರತ ಹುಲಿಗಳಿಗೆ ಹೆಸರುವಾಸಿ. ಭಾರತದ ರಾಷ್ಟ್ರೀಯ ಮೃಗವೂ ಹುಲಿಯೇ. ಅರಣ್ಯಗಳ ನಾಶ, ವನ್ಯಜೀವಿಗಳ ನಾಶ ನಮ್ಮ ವಿನಾಶದ ಆರಂಭವಷ್ಟೇ. ಮಾನವನ ದುರಾಸೆಯ ಫಲವಾಗಿ 20ನೇ ಶತಮಾನದಲ್ಲಿ ವಿವಿಧ ಬಗೆಯ ಪ್ರಾಣಿಗಳು ಕಣ್ಮರೆಯಾಗಿರುವ ಹಾಗೆ ಬಹು ಬಹುಪಯೋಗಿ ಮರಗಳಾದ ಗಂಧ, ತೇಗ ಇವೆಲ್ಲವೂ ಕಣ್ಮರೆಯಾಗಿವೆ. ಜಗತ್ತಿನ ಉಳಿವಿಗೆ ಅರಣ್ಯಗಳೇ ಅಂದರೆ ಸಸ್ಯಜಾತಿಯ ಕಾರಣ. ಅರಣ್ಯ ರಕ್ಷಣೆಯ ಮಹತ್ವವೇನೆಂಬುದನ್ನು ತಿಳಿದಾಗ ಪರಿಸರ ಪ್ರಜ್ಞೆ ಮೂಡುವುದು. ಇಂದು ಅರಣ್ಯಗಳನ್ನು ಉಳಿಸಿ ಬೆಳೆಸುವ ಬಗ್ಗೆ ಜಾಗೃತಿ ಉಂಟು ಮಾಡಬೇಕಾಗಿದೆ. ಮಾನವ ಇನ್ನಾದರೂ ಅರಣ್ಯಗಳನ್ನು ಉಳಿಸದಿದ್ದರೆ ಮುಂದಿನ ಪೀಳಿಗೆ ಅವನನ್ನು ಶಪಿಸದೇ ಇರದು.
ನಾಶಕ್ಕೆ ಮನುಷ್ಯನೇ ಕಾರಣ.
ಅರಣ್ಯದ ಉಳಿವಿಗೆ ನೈಸರ್ಗಿಕ ಕಾರಣಗಳನ್ನು ಕೊಡಲಾಗದು. ಏನಿದ್ದರೂ ಮಾನವನೇ ಅರಣ್ಯಗಳ ನಾಶಕ್ಕೆ ಮೂಲ ಕಾರಣವಾಗುತ್ತಿದ್ದಾನೆ. ಕಳ್ಳಸಾಗಣೆ ಒಂದು ಪಿಡುಗು ಆಗಿದೆ. ಕಾಡುಗಳನ್ನು ಕಡಿಯುವುದು, ಶ್ರೀಗಂಧ ಮರ,ತೇಗದ ಮರಗಳನ್ನು ಕಡಿದು ಕಳ್ಳಸಾಗಣೆ ಮಾಡುವುದು, ಪ್ರಾಣಿಗಳ ಬೇಟೆ, ಪ್ರಾಣಿಗಳ ಚರ್ಮ, ಕೊಂಬು, ಉಗುರು ಮೊದಲಾದವುಗಳಿಗೆ ದುಬಾರಿ ಬೆಲೆ ಗಾಗಿಯೇ ಪ್ರಾಣಿಗಳ ಬೇಟೆ ಮಾಡಿ ಬದುಕುವ ಜನರಿದ್ದಾರೆ.
ಕಾಡಿನೊಂದಿಗೆ ಬದುಕು.
ಹಿಂದೆ ಬ್ರಿಟಿಷರ ಕಾಲದಲ್ಲೇ ಟಿಪ್ಪುಸುಲ್ತಾನು ಕಾಡುಗಳನ್ನು ರಕ್ಷಿಸುವ ಕಾರ್ಯದಲ್ಲಿ ಮುಂದಾಗಿದ್ದನು. ಕಾಡಿನ ಸಂಸ್ಕೃತಿಯನ್ನು ಉಳಿಸಿ ಕಾಡಿನೊಂದಿಗೆ ಬದುಕುವ ಸಾಧ್ಯತೆಯನ್ನು ಆಗಿನ ಜನ ಕಂಡುಕೊಂಡಿದ್ದರು. ಕಳ್ಳಸಾಗಣೆಗೆ ಅವಕಾಶವಿರಲಿಲ್ಲ. ಮೂಲತಃ ಅರಣ್ಯಗಳನ್ನು ನಿಜವಾದ ಜೈವಿಕ ಕಾಳಜಿಯಿಂದ ಉಳಿಸುವಲ್ಲಿ ನಾವು ಕಾರ್ಯ ಪ್ರವೃತ್ತರಾಗಬೇಕು. ಅರಣ್ಯವನ್ನು ಸ್ವಾಭಾವಿಕವಾಗಿಯೇ ಉಳಿಸಿ ಬೆಳೆಸುವ ಪರಿಸ್ಥಿತಿ ನಿರ್ಮಾಣವಾಗಬೇಕು.
ಅರಣ್ಯ ನೀತಿ ಮಾರ್ಪಾಡು.
ಭಾರತ ಸರ್ಕಾರವು 1894ರಲ್ಲಿ ರಾಷ್ಟ್ರೀಯ ಅರಣ್ಯ ನೀತಿಯನ್ನು ಮೊಟ್ಟಮೊದಲ ಬಾರಿಗೆ ಪ್ರಚುರಪಡಿಸಿತು.1952ರಲ್ಲಿಅರಣ್ಯ ನೀತಿಯಲ್ಲಿ ಒಂದಿಷ್ಟು ಮಾರ್ಪಾಡುಗಳನ್ನು ಮಾಡಿಕೊಂಡು ಹೊಸ ಅರಣ್ಯ ನೀತಿಯಲ್ಲಿ ಅರಣ್ಯ ಗಳನ್ನು ರಕ್ಷಿಸುವ ಉದ್ದೇಶ ಹಾಗೂ ಜನರಲ್ಲಿ ಅರಣ್ಯಗಳ ಬಗೆಗೆ ಜಾಗೃತಿ ಉಂಟು ಮಾಡುವಂತಹ ಅಂಶಗಳನ್ನು ಸೇರಿಸಲಾಯಿತು. ಅವು ಅರಣ್ಯ ಸಂಸ್ಥೆಯ ಪುನರ್ ರಚನೆ, ಅರಣ್ಯಗಳ ಬಗ್ಗೆ ಶಿಕ್ಷಣ, ಸಸಿ ನೆಡುವ ಕಾರ್ಯಕ್ರಮ ಗಳು, ಒಂದಾದರೂ ಸಸಿ ನೆಟ್ಟು ಮನೆಗೊಂದು ಮರ ಬೆಳೆಸಿ, ಅರಣ್ಯಗಳಲ್ಲಿ ಬೀಳುವ ಕಾಡ್ಗಿಚ್ಚುಗಳನ್ನು ತಡೆಗಟ್ಟಲು ಸಾಕಷ್ಟು ಸಿಬ್ಬಂದಿಯನ್ನು ನೇಮಿಸುವುದು, ವನ್ಯಜೀವಿ ಸಂರಕ್ಷಣೆ, ಪ್ರಾಣಿಗಳನ್ನು, ಪಕ್ಷಿಗಳನ್ನು ಕೊಲ್ಲುವುದು, ನಿಷೇಧಿಸುವುದು ಹೇಗೆ ಅರಣ್ಯಗಳ ಬಗೆಗೆ ಜಾಗೃತಿ ಉಂಟುಮಾಡುವಂತಹ ಅಂಶಗಳನ್ನು ಯೋಜನೆಗಳಿಗೆ ಸೇರಿಸಲಾಯಿತು.
ಭಾರತದ ವೃಕ್ಷ ಸಂಪತ್ತನ್ನು ಹೆಚ್ಚಿಸಲು ಮತ್ತು ಪ್ರಜೆಗಳಲ್ಲಿ ಮರ ಬೆಳೆಸುವ ಮನೋಭಾವ ಉಂಟು ಮಾಡುವ ಸಲುವಾಗಿ ವನ ಮಹೋತ್ಸವವನ್ನು ಆರಂಭಿಸಿದರು. ಹಾಗೆಯೇ ಪರಿಸರ ಸಂರಕ್ಷಣೆ ಜೊತೆಗೆ ರಸ್ತೆಯ ಅಂದವನ್ನು ಹೆಚ್ಚಿಸಲು ಸಾಲುಮರಗಳು ಸಹಕಾರಿ. ಮೌರ್ಯ ಚಕ್ರವರ್ತಿ, ಅಶೋಕನ ಕಾಲದಿಂದಲೂ ಸಾಲುಮರಗಳನ್ನು ಬೆಳೆಸುವ ಪರಿಪಾಠವಿದೆ. ಕರ್ನಾಟಕದಲ್ಲಿ ಸಾಲುಮರದ ತಿಮ್ಮಕ್ಕನೆಂದೇ ಖ್ಯಾತರಾದ ತಿಮ್ಮಕ್ಕ ಸಾಲು ಮರಗಳನ್ನು ಬೆಳೆಸಿ ರಾಷ್ಟ್ರದ ಗಮನವನ್ನೇ ಸೆಳೆದಿದ್ದಾರೆ. ರಸ್ತೆಯ ಬದಿಗಳಲ್ಲಿ ಸಾಲುಮರಗಳನ್ನು ಬೆಳೆಸುವುದರಿಂದ ನೈಸರ್ಗಿಕ ಸೌಂದರ್ಯವೂ ಹೆಚ್ಚಿ ಪ್ರಮಾಣ ಉಲ್ಲಾಸಕರವಾಗಿರುತ್ತದೆ. ರಸ್ತೆಗಳೂ ಹದಗೆಡವುದಿಲ್ಲ.
ಪ್ರಕೃತಿದತ್ತ ವರ.
ಅರಣ್ಯ, ಸರೋವರ, ನದಿ ಮತ್ತು ವನ್ಯಮೃಗಗಳನ್ನು ಒಳಗೊಂಡಂತೆ ನೈಸರ್ಗಿಕ ಪರಿಸರವನ್ನು ರಕ್ಷಿಸುವುದು, ಅದಕ್ಕೆ ಸುಧಾರಣೆ ತರುವುದು ಮತ್ತು ಜೀವಿಗಳ ಬಗ್ಗೆ ಅನುಕಂಪ ಹೊಂದಿರುವುದು ಪ್ರತಿ ಭಾರತೀಯ ಪ್ರಜೆಯ ಮೂಲಭೂತ ಕರ್ತವ್ಯ. ಹಾಗಾಗಿ ಜನರಲ್ಲಿ ಮರ ಬೆಳೆಸುವ ಪರಿಸರವನ್ನು ಸಂರಕ್ಷಿಸುವ ಭಾವನೆ ಬರಬೇಕು. ಈ ಭೂಮಿ,ಈ ನಾಡು, ಈ ಬೆಟ್ಟ, ಈ ನದಿ ಇವೆಲ್ಲ ಮಾನವನಿಗೆ ಪ್ರಕೃತಿದತ್ತ ವರ. ಇವುಗಳನ್ನು ಬಳಸಿಕೊಳ್ಳಲು ನಾವೆಷ್ಟೇ ಅಲ್ಲ ಮುಂದಿನ ಪೀಳಿಗೆಗೂ ಹಕ್ಕಿದೆ ಎಂಬುದನ್ನು ನೆನಪಿಸಿಕೊಳ್ಳಬೇಕು.
ಜಾಗೃತಿ ಅಗತ್ಯ.
ಅರಣ್ಯಗಳ ಮಹತ್ವ ಅರಿತುಕೊಂಡು ವನ್ಯಮೃಗಗಳು, ಅರಣ್ಯ ಹಾಳಾಗದಂತೆ ಉಳಿಸಿಕೊಂಡು, ಬೆಳೆಸಿಕೊಂಡು ಹೋಗುವುದು ನಮ್ಮ ಕರ್ತವ್ಯ. ಹಾಗಾಗಿ ಪ್ರತಿವರ್ಷ ಮಾರ್ಚ್ 21 ರಂದು ವಿಶ್ವ ಅರಣ್ಯ ದಿನ ಆಚರಿಸಿ ಸಾರ್ವಜನಿಕರಲ್ಲಿ ಅರಣ್ಯಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಬೇಕಿದೆ. ಇನ್ನಾದರೂ ನಾವು ಅರಣ್ಯವನ್ನು ಕಾಪಾಡಿಕೊಂಡು ಬರೋಣ. ವೃಕ್ಷಗಳನ್ನು ಆರಾಧಿಸೋಣ. ಮನೆಯ ಮುಂದೆ ಗಿಡಮರಗಳನ್ನು ಬೆಳೆಸೋಣ. ಅರಣ್ಯಗಳನ್ನು ನಾವು ಸಂರಕ್ಷಿಸಿದರೆ ಅದು ನಮ್ಮನ್ನು ನಾವೇ ಸಂರಕ್ಷಿಸಿ ಕೊಂಡಂತೆ.
ಹೆಚ್ಚಿನ ಬರಹಗಳಿಗಾಗಿ
ಹಿಂದಿ ಹೇರಿಕೆ ಸರಿಯೇ?
ಸ್ವೀಡನ್ ಚುನಾವಣಾ ಸಮರ ೨೦೨೨
ಸ್ವಾತಂತ್ರ್ಯದ ಅಮೃತೋತ್ಸವ – ೭೫ ರ ಭಾರತ