ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

"ಅದೇನೋ ನಮ್ಮ ಕನ್ನಡ ಓದುಗರಿಗೆ ಅಮೆರಿಕಾದಲ್ಲಿ ನೆಲೆಸಿರುವ ಕನ್ನಡ ಲೇಖಕರ ಪುಸ್ತಕ ಅದೆಷ್ಟೇ ಮಹತ್ತರವಾಗಿದ್ದರೂ ಅನಿವಾಸಿ ಕನ್ನಡಿಗರು ಏನು ಬರೆದಾರು ಎಂಬ ತಾತ್ಸಾರ ಇನ್ನೂ ಹೋಗಿಲ್ಲ. ..." ಪ್ರಸನ್ನ ಸಂತೇಕಡೂರು ಅವರು ಬರೆದ ಕುತೂಹಲಕಾರಿ ಪುಸ್ತಕಾಲೊಚನೆ.

ರವಿ ಹಂಜ್ ರವರ “ಹುಯೆನ್ ತ್ಸಾಂಗನ ಮಹಾಪಯಣ”ದ ಬಗ್ಗೆ ಕೆಲವು ಮಾತುಗಳು.

ನಾವೆಲ್ಲರೂ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಪಠ್ಯದಲ್ಲಿನ ಇಮ್ಮಡಿ ಪುಲಿಕೇಶಿಯ ಕತೆಯಲ್ಲಿಯೋ ಅಥವಾ ಮುಂದೆ ಪ್ರೌಢಶಾಲೆಯ ಇತಿಹಾಸ ಪಠ್ಯದಲ್ಲಿದ್ದ ಬಾದಾಮಿಯ( ವಾತಾಪಿ) ಚಾಲುಕ್ಯರ ಆಸ್ಥಾನಕ್ಕೆ ಬಂದಿದ್ದ ಚೀನಿ ಯಾತ್ರಿಕ “ಹುಯೆನ್ ತ್ಸಾಂಗ್” ಎಂಬ ಬೌದ್ಧಭಿಕ್ಷುವಿನ ಬಗ್ಗೆ ಕೇಳಿರುತ್ತೇವೆ. ತನ್ನ ವಿಚಿತ್ರ ಹೆಸರಿನಿಂದ ಇಂದಿಗೂ ನಮ್ಮ ನೆನಪಿನಲ್ಲಿ ಉಳಿದಿರುವ ಈ ವ್ಯಕ್ತಿ ಜಗತ್ತಿನ ಇತಿಹಾಸದಲ್ಲಿ ಬರುವ ಮಹಾಯಾತ್ರಿಕರಲ್ಲಿ ಮುಂಚೂಣಿಯಲ್ಲಿಯೇ ನಿಲ್ಲುವ ಅಪೂರ್ವ ಸಾಧಕ. ಅವನ ಹತ್ತು ಸಾವಿರ ಮೈಲುಗಳ ಮಹಾಯಾತ್ರೆ ಸಾಮಾನ್ಯ ಯಾತ್ರೆಯಾಗಿರಲಿಲ್ಲ. ಅದು ಏಳನೇ ಶತಮಾನದ ಏಷ್ಯಾದ ಇತಿಹಾಸವನ್ನ ಜಗತ್ತಿಗೆ ತಿಳಿಸಲು ಇರುವ ಸಾಕ್ಷಿ ಕೂಡ ಆಯಿತು. ಜೊತೆಗೆ ಏಷ್ಯಾದಲ್ಲಿ ಬೌದ್ಧ ಧರ್ಮ ಹೆಚ್ಚು ಪ್ರಚಾರವಾಗಲೂ ಕಾರಣವಾದ ಯಾತ್ರೆ ಕೂಡ ಆಯಿತು. ಹುಯೆನ್ ತ್ಸಾಂಗನ ಇಂತಹ ರೋಮಾಂಚಕಾರಿ ಪಯಣವನ್ನ ಈಗ ರವಿ ಹಂಜ್ ಅವರು “ಹುಯೆನ್ ತ್ಸಾಂಗನ ಮಹಾಪಯಣ” ಎಂಬ ಪುಸ್ತಕ ರೂಪದಲ್ಲಿ ಕನ್ನಡಿಗರ ಮುಂದಿಟ್ಟಿರುವುದು ನಮ್ಮೆಲ್ಲರ ಭಾಗ್ಯ ಕೂಡ.

ಚೀನಾದ ಕನಪ್ಯೂಷಿಯಸನ ಪರಂಪರೆಯಲ್ಲಿ ಹುಟ್ಟಿ ಹದಿಹರೆಯದಲ್ಲಿಯೇ ಸನ್ಯಾಸತ್ವ ಸ್ವೀಕರಿಸಿ ಬೌದ್ಧ ಭಿಕ್ಷುವಾದ ಹುಯೆನ್ ತ್ಸಾಂಗನಿಗೆ ಆ ಕಾಲದಲ್ಲಿನ ಚೀನಾದಲ್ಲಿದ್ದ ಬೌದ್ದ ಸಂಪ್ರದಾಯಗಳನ್ನೆಲ್ಲ ಅಭ್ಯಸಿಸಿದರೂ ಅಲ್ಲಿ ಲಭ್ಯವಿರುವ ಜ್ಞಾನ ಅಪೂರ್ಣವೆನಿಸಿ ಅವನಿಗೆ ತೃಪ್ತಿ ಮೂಡಲಿಲ್ಲ. ಆ ಕಾರಣದಿಂದ ಅವನು ಭಾರತಕ್ಕೆ ಒಂದು ಮಹಾಯಾತ್ರೆ ಕೈಗೊಂಡ. ಅಪರಿಪೂರ್ಣತೆಯಿಂದ ಪರಿಪೂರ್ಣದೆಡೆಗೆ ಸಾಗಲು ಸಿದ್ದನಾದ ಅವನು ಸುಮಾರು 630 ರಿಂದ 644 ರವರೆಗೆ ಭಾರತದಲ್ಲಿ ತನ್ನ ಜೀವನದ ಬಹುಮುಖ್ಯ ಯವ್ವನವನ್ನೆಲ್ಲಾ ಜ್ಞಾನಯಾತ್ರೆಗೆ ವ್ಯಯಿಸಿದ. ಅವನ ಆ ಯಾತ್ರೆ ಮರುಭೂಮಿ, ಕಾಡುಗಳು, ಹಿಮಪರ್ವತಗಳು, ಬೆಟ್ಟ, ಗುಡ್ಡ, ಮಹಾನದಿಗಳು, ಬಯಲುಪ್ರದೇಶ ಕೊನೆಗೆ ಸಿಂಹಳಕ್ಕೆ ಹೋಗುವಾಗ ಸಾಗರವನ್ನ ಕೂಡ ದಾಟುವಂತೆ ಮಾಡಿತು. ಇಂತಹ ದುರ್ಗಮವಾದ ದಾರಿಗಳಲ್ಲಿ ಕಳ್ಳರು, ಢಕಾಯಿತರು, ಕ್ರೂರ ಮೃಗಗಳು ಯಾವುದನ್ನು ಲೆಕ್ಕಿಸದೆ ಸಾಗಿತ್ತು.
ಚೈನಾದ ಪೂರ್ವಭಾಗದಿಂದ ಹೊರಟ ಇವನು ರೇಷ್ಮೆ ಹೆದ್ದಾರಿಯಲ್ಲಿ ಸಾಗಿ ಹಿಂದಿನ ಸೋವಿಯತ್ ಯೂನಿಯನ್ ದೇಶಗಳಾದ ಕಿರ್ಜಿಕಿಸ್ತಾನ, ತಜಕಿಸ್ತಾನ, ಉಜಬೆಕಿಸ್ತಾನ, ಟರ್ಕ್ಮೆನಿಸ್ತಾನ, ಅಫ್ಘಾನಿಸ್ತಾನ( ಅಂದಿನ ಗಾಂಧಾರ ದೇಶ) ಪಾಕಿಸ್ತಾನದ ಮೂಲಕ ಕಾಶ್ಮೀರ ಪ್ರವೇಶ ಮಾಡಿರುತ್ತಾನೆ.
ಇವನು ಬಂದ ಕಾಲಕ್ಕೆ ಉತ್ತರಭಾರತವನ್ನ ಆಳುತ್ತಿದ್ದ ಉತ್ತರಾಪಥೇಶ್ವರ ಶ್ರೀಹರ್ಷ ಇವನಿಗೆ ಅಪಾರವಾದ ಸಹಾಯ ಮಾಡುತ್ತಾನೆ. ಕಾಮರೂಪದ ರಾಜಕುಮಾರ ಕೂಡ ಇವನ ಜ್ಞಾನಕ್ಕೆ ತಲೆಬಾಗಿ ಸನ್ಮಾನ ಮಾಡುತ್ತಾನೆ. ಈ ರೀತಿ ಹುಯೆನ್ ತ್ಸಾಂಗ್ ಇಂದಿನ ಉತ್ತರ ಪ್ರದೇಶ, ಬಿಹಾರ, ಬಂಗಾಳ, ಅಸ್ಸಾಮ್, ಒರಿಸ್ಸಾ, ಆಂಧ್ರ, ತಮಿಳುನಾಡುಗಳ ಮೂಲಕ ಶ್ರೀಲಂಕಾಕ್ಕೆ ಹೋಗುತ್ತಾನೆ.

ಈ ರೀತಿ ಸುತ್ತುವಾಗ ಬುದ್ಧನ ಜೀವನಕ್ಕೆ ಸಂಬಂಧ ಪಟ್ಟ ಊರುಗಳಾದ, ಗಯಾ, ಳುಂಬಿನಿ, ಸಾರಾನಾಥ, ಬುದ್ಧ ಗಯಾ, ಕಪಿಲವಸ್ತು, ಶ್ರಾವಸ್ತಿ ಮುಂತಾದ ಪ್ರದೇಶಗಳಿಗೆ ಹೋಗಿ ಆಗಿನ ಪ್ರಖ್ಯಾತ ವಿಶ್ವವಿದ್ಯಾನಿಲಯ ನಳಂದಾಕ್ಕೆ ಭೇಟಿಕೊಟ್ಟು ಅಲ್ಲಿನ ವಿಹಾರಗಳಲ್ಲಿದ್ದ ಹೆಸರಾಂತ ಬೌದ್ದಗುರುಗಳ ಮಾರ್ಗದರ್ಶನದಲ್ಲಿ ಶಾಸ್ತ್ರಾಭ್ಯಾಸ ಮಾಡಿ ಜ್ಞಾನವನ್ನ ಪಡೆಯುತ್ತಾನೆ. ಆ ಧರ್ಮಕ್ಕೆ ಸೇರಿದ ಜ್ಞಾನ, ಗ್ರಂಥಗಳು, ಬುದ್ಧನ ಮರದ ಮತ್ತು ಲೋಹದ ವಿಗ್ರಹಗಳನ್ನ ಸಂಗ್ರಹಿಸಿಕೊಂಡು ದಕ್ಷಿಣಕ್ಕೆ ಹೊರಡುತ್ತಾನೆ.
ಸಿಂಹಳದಿಂದ ಪಲ್ಲವರ ಕಾಂಚಿಪುರಕ್ಕೆ ಬಂದು ಅಲ್ಲಿಂದ ಇಮ್ಮಡಿ ಪುಲಿಕೇಶಿಯ ಮಹಾರಾಷ್ಟ್ರ(ಕನ್ನಡನಾಡು ಆಗಿನ ಇಂದಿನ ಮಹಾರಾಷ್ಟ್ರವನ್ನೆಲ್ಲಾ ಒಳಗೊಂಡು ಗೋದಾವರಿ ತೀರವನ್ನ ದಾಟಿ ನರ್ಮದಾ ನದಿ ತೀರದ ವರೆಗೂ ಹಬ್ಬಿತ್ತು). ಅಲ್ಲಿಂದ ಮುಂದೆ ಮಾಳ್ವ, ಗುಜರಾತುಗಳಲೆಲ್ಲಾ ಯಾತ್ರೆ ಮಾಡಿ ಮತ್ತೇ ಶ್ರೀಹರ್ಷನ ಸಹಾಯದಿಂದ ಬಂದ ದಾರಿಯಲ್ಲಿಯೇ ಹುಯೆನ್ ತ್ಸಾಂಗ್ ಮರಳುತ್ತಾನೆ.
ಈ ರೀತಿ ಭಾರತಕ್ಕೆ ಬಂದು ಬೌದ್ಧ ಧರ್ಮದ ಎಲ್ಲಾ ಶಾಖೆಗಳನ್ನು ಅದರಲ್ಲೂ ಮುಖ್ಯವಾಗಿ ಮಹಾಯಾನವನ್ನ ಅಭ್ಯಸಿಸಿ ಅದರ ಸಂಪೂರ್ಣ ಜ್ಞಾನವನ್ನು ಚೀನೀಯರಿಗೆ, ಅವರ ಮೂಲಕ ಪಾಶ್ಚಾತ್ಯ ಜಗತ್ತಿಗೆ ಆ ಜ್ಞಾನ ಲಭ್ಯವಾಗುವಂತೆ ಮಾಡುತ್ತಾನೆ. ಈ ಹುಯೆನ್ ತ್ಸಾಂಗ್ ನ ಮಹಾಪಯಣದಿಂದಲೇ ಬುದ್ಧನ ಸಂದೇಶ ಜಗತ್ತಿಗೆಲ್ಲಾ ತಲುಪಲೂ ಕಾರಣವಾಗಿದ್ದು ಕೂಡ.
ರವಿಯವರೂ ಸುಧೀರ್ಘ ಕಾಲ ಆಳವಾದ ಅಧ್ಯಯನ ಮಾಡಿ ಅತ್ಯಂತ ನಿಖರವಾದ ಮಾಹಿತಿಗಳನ್ನ ಸಂಗ್ರಹಿಸಿ, ಕೃತಿಯೂ ತೀವ್ರ ಕುತೂಹಲದಿಂದ ಓದಿಸಿಕೊಂಡು ಹೋಗುವ ರೀತಿ ಕಥೆಯನ್ನ ಹೆಣೆದು ತಮ್ಮ ಮೊದಲ ಪ್ರಯತ್ನದಲ್ಲಿಯೇ ಸಫಲರಾಗಿದ್ದಾರೆ.
ಈ ಕೃತಿ ಅದ್ಭುತವಾಗಿದ್ದರೂ ಕೂಡ ರವಿಯವರೂ ಕೃತಿಯನ್ನ ಪ್ರಕಟಿಸುವಲ್ಲಿ ಸ್ವಲ್ಪ ಆತುರ ಮಾಡಿರುವಂತೆ ಕಾಣುತ್ತದೆ. ಅವರ ಆತುರದ ಕಾರಣದಿಂದ ಕನ್ನಡಿಗರಿಗೆ ಬಹುಮುಖ್ಯವಾದ ಒಂದು ಐತಿಹಾಸಿಕ ಘಟನೆಯನ್ನೇತಿಳಿಸುವುದನ್ನ ಮರೆತುಬಿಟ್ಟಿದ್ದಾರೆ. ಕಾರಣ ಇಷ್ಟೇ ಹುಯೆನ್ ತ್ಸಾಂಗ್ ತನ್ನ ಮಹಾಪಯಣದಲ್ಲಿ ಸಿಂಹಳದಿಂದ ಕಾಂಚೀಪುರದ ಮೂಲಕ ಬನವಾಸಿ ಪ್ರಾಂತ್ಯದ ಬಳ್ಳಿಗಾವಿಗೆ ಬರುತ್ತಾನೆ. ಬನವಾಸಿ ಪ್ರಾಂತ್ಯಕ್ಕೆ ಅವನು ಕೊಂಕಣಪುರ( ಕಿನ್ ನಾ ಪೋ ಲೋ ) ಎಂದು ವರ್ಣಿಸುತ್ತಾನೆ. ಪುಲಿಕೇಶಿಯ ಕಾಲದಲ್ಲಿ ಬಳ್ಳಿಗಾವಿಯಲ್ಲಿ ನೂರಾರು ಬೌದ್ಧವಿಹಾರಗಳು (ಹತ್ತು ಸಾವಿರ ಬೌದ್ಧ ಭಿಕ್ಷುಗಳು ಇದ್ದರು), ಜೈನರ ಬಸದಿಗಳು, ಕಾಳಾಮುಖ ಶೈವರ ಮಠಗಳು, ಅಲ್ಲೊಂದು ಬೃಹತ್ ವಿಶ್ವವಿದ್ಯಾನಿಲಯವಿತ್ತೆಂದು ಇತಿಹಾಸ ಹೇಳುತ್ತದೆ. ಹುಯೆನ್ ತ್ಸಾಂಗ್ ಕೂಡ ಅದನ್ನೇ ಹೇಳುತ್ತಾನೆ.
ಅಲ್ಲಿ ಕೇದಿಗೆಯ ವನವಿತ್ತೆಂದು ಮತ್ತು ಅದರಿಂದ ಬರುವ ತಾಳೇಗರಿಗಳನ್ನ ಗ್ರಂಥಗಳನ್ನ ಬರೆಯಲು ಉಪಯೋಗಿಸುತ್ತಿದ್ದರೆಂದು ಅವನು ಹೇಳುತ್ತಾನೆ. ಇದನ್ನ ಶಮನ್ ಹ್ವುಇ ಲಿ ( The life of Hiuen Tsiang) ಹುಯಿಲಿ ಹುಯೆನ್ ತ್ಸಾಂಗನ ಮೂಲ ಕೃತಿಯ ಆಧಾರದ ಮೇಲೆಯೇ ಬರೆದಿರುವ ಕೃತಿಯಲ್ಲಿ ನೋಡಬಹುದು. ಇದಕ್ಕೆ ಪೂರಕವಾದ ಮಾಹಿತಿಯನ್ನ ಇಲ್ಲಿ ಚಿತ್ರಗಳ ರೂಪದಲ್ಲಿ ಹಾಕಿದ್ದೇನೆ.
ರವಿಯವರು ನಮ್ಮ ಬನವಾಸಿ-ಬಳ್ಳಿಗಾವಿಯ ವಿಷಯವನ್ನ ಬಿಟ್ಟು ಇಲ್ಲಿಂದ ಮುಂದೆ ಪುಲಿಕೇಶಿಯ ಆಸ್ಥಾನಕ್ಕೆ ಹೋಗುವ ವಿಷಯವನ್ನ ಪ್ರಸ್ತಾಪಿಸುತ್ತಾರೆ. ಇಲ್ಲಿ ಇನ್ನೊಂದು ವಿಷಯವನ್ನ ಗಮನಿಸಬೇಕು. ಆ ಕಾಲಕ್ಕೆ ಬಳ್ಳಿಗಾವಿ ಪುಲಿಕೇಶಿಗೆ (ಚಾಲುಕ್ಯರ) ಬಾದಾಮಿ ನಂತರ ಎರಡನೇ ಆಡಳಿತದ ರಾಜಧಾನಿಯಾಗಿರುತ್ತದೆ ಕೂಡ. ಇದು ಕಳಚೂರಿ ಬಿಜ್ಜಳ-ಬಸವಣ್ಣನವರ ಕಾಲಕ್ಕೂ ಎರಡನೇ ರಾಜಧಾನಿಯಾಗಿರುತ್ತದೆ.
ಆ ಕಾರಣದಿಂದ ಹುಯೆನ್ ತ್ಸಾಂಗ್ ಪುಲಿಕೇಶಿಯನ್ನ ಭೇಟಿಯಾದಾಗ ಬೌದ್ದಧರ್ಮವನ್ನ ಅಭ್ಯಾಸ ಮಾಡಲು ಬಳ್ಳಿಗಾವಿಗೆ ಕಳಿಸಿರುವ ಸಂಭವ ಕೂಡ ಇರುತ್ತದೆ.

ಮೇಲಿನ ಒಂದು ವಿಷಯವನ್ನ ಬಿಟ್ಟರೆ ಇದೊಂದು ಪರಿಪೂರ್ಣ ಕೃತಿ. ಅದೇನೋ ನಮ್ಮ ಕನ್ನಡ ಓದುಗರಿಗೆ ಅಮೆರಿಕಾದಲ್ಲಿ ನೆಲೆಸಿರುವ ಕನ್ನಡ ಲೇಖಕರ ಪುಸ್ತಕ ಅದೆಷ್ಟೇ ಮಹತ್ತರವಾಗಿದ್ದರೂ ಅನಿವಾಸಿ ಕನ್ನಡಿಗರು ಏನು ಬರೆದಾರು ಎಂಬ ತಾತ್ಸಾರ ಇನ್ನೂ ಹೋಗಿಲ್ಲ. ಆ ತಾತ್ಸಾರವನ್ನ ಬಿಟ್ಟು ಇನ್ನಾದರೂ ಅನಿವಾಸಿ ಕನ್ನಡಿಗರು ಬರೆದ ಉತ್ತಮ ಕೃತಿಗಳನ್ನ ಹೆಚ್ಚು ಪ್ರೋತ್ಸಾಹಿಸಿ ಕನ್ನಡವನ್ನ ವಿಶ್ವದೆಲ್ಲೆಡೆ ಪಸರಿಸುವಂತಾಗಲು ಕೈಜೋಡಿಸಬೇಕು.
ಈ ಕೃತಿಯಿಂದ ರವಿಯವರ ಮೇಲೆ ಹೆಚ್ಚಿನ ನೀರಿಕ್ಷೆ ಮೂಡಿದೆ. ಅವರಿಂದ ಇನ್ನೂ ಹೆಚ್ಚು ಕೃತಿಗಳು ಮೂಡಿಬರಲಿ ಎಂದು ಆಶಿಸುತ್ತಾ
ಧನ್ಯವಾದಗಳೊಂದಿಗೆ.