ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ರಾಮಾಯಣ ಯುದ್ಧ ಸೀನ್ ಇನ್ ಇಸವಿ 2020

ರಾಮಾಯಣ ಇವತ್ತಿನ ಪರಿಸ್ಥಿತಿಯಲ್ಲಿ ನಡೆದಿದ್ರೆ ಸಿಚುವೇಶನ್ ಹೀಗಿರ್ತಿತ್ತಾ? ವಿಶ್ವಾಸ್ ಭಾರದ್ವಾಜ್ ಅವರ ಕಲ್ಪನೆಯಲ್ಲಿ ಮೂಡಿದ ಹಿಲೆರಿಯಸ್ ಹಾಸ್ಯ ಲೇಖನ...
ವಿಶ್ವಾಸ್ ಭಾರದ್ವಾಜ್
ಇತ್ತೀಚಿನ ಬರಹಗಳು: ವಿಶ್ವಾಸ್ ಭಾರದ್ವಾಜ್ (ಎಲ್ಲವನ್ನು ಓದಿ)

ರಾಮಾಯಣ ಇವತ್ತಿನ ಪರಿಸ್ಥಿತಿಯಲ್ಲಿ ನಡೆದಿದ್ರೆ ಸಿಚುವೇಶನ್ ಹೀಗಿರ್ತಿತ್ತಾ?

ಪ್ರಸಂಗ : ರಾಮ ರಾವಣರ ಯುದ್ಧ

ದೃಶ್ಯ: ಅಂತಿಮ ಕದನದ ನಿರ್ಣಾಯಕ ದಿನದ ಮುಂಜಾನೆ ರಾವಣ ಬೆಳಿಗ್ಗೆ ಎದ್ದವನೇ ನಿತ್ಯ ಕರ್ಮಗಳನ್ನು ಮುಗಿಸಿ, ಸ್ನಾನ ಮಾಡಿ ಶುಭ್ರವಾಗಿ ಐರೆನ್ ಮಾಡಿದ ಫಾರ್ಮಲ್ ಡ್ರೆಸ್ ಧರಿಸಿ ಬೂಟು ತೊಟ್ಟು ಲೇಸು ಕಟ್ಟಿ ಡೈನಿಂಗ್ ಟೇಬಲ್ ಗೆ ಬರುತ್ತಾನೆ. ಅಲ್ಲಿ ಮಂಡೋದರಿ ಬೆಳಗಿನ ಬ್ರೇಕ್ ಫಾಸ್ಟ್ ಇಡ್ಲಿ,ವಡೆ, ಚಟ್ನಿ, ಸಾಂಬಾರ್, ಉಪ್ಮಾ, ಅವಲಕ್ಕಿ ಬಾತ್, ಮಸಾಲೆ ದೋಸೆ, ಬ್ರೆಡ್ ಜಾಮ್, ಆಮ್ಲೆಟ್ ಎಲ್ಲವನ್ನೂ ರೆಡಿ ಮಾಡಿಟ್ಟು ಒಂದೊಂದಾಗಿ ಬಡಿಸುತ್ತಾಳೆ. ರಾವಣ ಪಾಂಗಿತವಾಗಿ ಎಲ್ಲವನ್ನೂ ತಿನ್ನುತ್ತಾ ಮಂಡೋದರಿಯನ್ನು ಕೇಳುತ್ತಾನೆ.

ರಾವಣ: “ಯಾಕೆ ಡಾರ್ಲಿಂಗ್ ಸಪ್ಪಗಿದ್ದೀಯಾ? ರಾತ್ರಿ ನಿದ್ರೆ ಮಾಡಿಲ್ವಾ ಹನಿ?”

ಮಂಡೋದರಿ: “ಏನು ಹೇಳಲಿ ಪ್ರಾಣಕಾಂತ? ಇದೊಂದು ವಾರ್ ನಲ್ಲಿ ಮೈ ಸನ್ ಇಂದ್ರಜಿತ್ ಶಹೀದ್ ಹೋಗಯಾ! ಧಾನ್ಯ ಮಾಲಿನಿಗೂ ಮೊನ್ನೆಯಿಂದ ಅಳು ನಿಂತಿಲ್ಲ. ಅವಳ ಮಗ ಅತಿಕಾಯನೂ ಬ್ರೂಟಲಿ ಮರ್ಡರ್ಡ್”

ರಾವಣ: “ಪ್ರಿಯೆ, ಅವರು ನನಗೂ ಮಕ್ಳೇ ಅಲ್ವಾ? ಪುತ್ರ ಶೋಕ ನಿರಂತರ ನಂಗೂ ದುಃಖ ಇದೆ. ಹಾಗಂತ ಅಳ್ತಾ ಕೂತ್ರೆ ಆ ಲೆಫ್ಟಿನೆಂಟ್ ಕರ್ನಲ್ ಲಕ್ಷ್ಮಣ್, ಕ್ಯಾಪ್ಟನ್ ಹನುಮಂತ, ಮೇಜರ್ ಅಂಗದ, ಮೇಜರ್ ಜಾಂಬವಂತ, ಮೇಜರ್ ಸುಗ್ರೀವ, ಸುಬೇದಾರ್ ನಳ, ಸುಬೇದಾರ್ ನೀಲ, ಸುಬೇದಾರ್ ಶ್ವೇತ ಇವರೆಲ್ಲರ ಜೊತೆ ಆ ಬ್ರಿಗೇಡಿಯರ್ ಶ್ರೀರಾಮ ಇವರನ್ನೆಲ್ಲಾ ಸುಮ್ನೆ ಬಿಟ್ಟು ಬಿಡೋಕ್ಕಾಗತ್ತಾ? ರಿವೇಂಜ್ ತೀರಿಸ್ಕೋಬೇಕು. ಈಗ ವೆಂಜಿನ್ಸ್ ತೀರಿಸಿಕೊಳ್ಳಬೇಕಾದ ಟೈಂ ಬಂದಿದೆ. ನನ್ ಆರ್ಮಿ ನನ್ ಆರ್ಡರ್ ಗೆ ಕಾಯ್ತಿದೆ. ವಿ ವಿಲ್ ಡೆಸ್ಟ್ರಾಯ್ ದ ಮಂಕೀಸ್ ಬೆಟಾಲಿಯನ್; ಯು ಡೋಂಟ್ ವರಿ ಸ್ವೀಟಿ. ನೀನು ಟೆನ್ಷನ್ ಆಗಬೇಡ! “


ಮಂಡೋದರಿ: “ಪ್ರಭು, ಹುಡುಗಾಟ ಆಡಬೇಡಿ. ನೀವಂದುಕೊಂಡಷ್ಟು ಈಸಿ ಅಲ್ಲ ಕಿಷ್ಕಿಂದೆ ಕಂಟ್ರಿ ಮಂಕಿ ಆರ್ಮಿನ ಫೇಸ್ ಮಾಡೋದು. ನಮ್ಮ ಎಷ್ಟೆಲ್ಲಾ ಬ್ರೇವ್ ಆರ್ಮಿ ಕಮ್ಯಾಂಡೋಸ್ ಹೀಗೆ ಲೈಟ್ ಆಗಿ ತಗೊಂಡೆ ಹೊಗೆ ಹಾಕಿಸ್ಕೊಂಡ್ರು. ಮೇಜರ್ ವಜ್ರಮುಷ್ಟಿ, ಲೆಫ್ಟಿನೆಂಟ್ ಕರ್ನಲ್ ದೇವಾಂತಕ, ಲೆಫ್ಟಿನೆಂಟ್ ಕರ್ನಲ್ ನರಾಂತಕ, ಮೇಜರ್ ತ್ರಿಶಿರ,
ಸಿಪಾಯಿ ನಿಕುಂಬ ಅಷ್ಟೆಲ್ಲಾ ಯಾಕೆ ನಿಮ್ಮ ತಮ್ಮ ಜನರಲ್ ಕುಂಭಕರ್ಣ ಕೂಡಾ ಹೀಗೆ ನೆಗ್ಲೆಕ್ಟ್ ಮಾಡಿ ಪರಂಧಾಮಕ್ಕೆ ಹೋದ್ರು. ಪ್ಲೀಸ್ ಡಿಯರ್ ಇನ್ನೊಂದು ಸಲ ಯೋಚನೆ ಮಾಡಿ”

ರಾವಣ: “ನನ್ನಿಡೀ ರಾಕ್ಷಸ ಬೆಟಾಲಿಯನ್ ನಾಶವಾದರೂ ಸರಿ ನಾನು ಈ ವಾರ್ ನ ಹೋಲ್ಡ್ ಮಾಡಲ್ಲ ಡಾರ್ಲಿಂಗ್; ಆ ರಾಮನ ಹತ್ರ ಕಾಂಪ್ರೊಮೈಸ್ ಕೂಡಾ ಇಲ್ಲ. ನಮ್ಮ ಲಂಕೆಯ ಬ್ರೇವ್ ಆಫೀಸರ್ಸ್ ಮಾತೃಭೂಮಿಗಾಗಿ ಪ್ರಾಣತ್ಯಾಗ ಮಾಡಿದ್ದಾರೆ. ಈಗ ನಾನು ಹಿಂಜರಿದ್ರೆ ನನ್ನ ಪ್ರಸ್ಟೀಜ್ ಏನಾಗಬೇಡ. ನಾನು ಈ ಹಿಂದೆ ವಾರ್ ಮಾಡಿ ಸೋಲಿಸಿದ ಜನರಲ್ ಇಂದ್ರ, ಜನರಲ್ ಯಮ, ಅಂಡು ತಟ್ಟಿಕೊಂಡು ನಕ್ಕುಬಿಡ್ತಾರೆ. ನಂಗೆ ಗಾಡ್ ಫಾದರ್ ಶಿವ ಎಂಡ್ ಬ್ರಹ್ಮನ ಬ್ಲೆಸ್ಸಿಂಗ್ಸ್ ಇದೆ. ಸೂಪರ್ ಪವರ್ ಮಿಲಿಟರಿ ತಾಕತ್ತಿದೆ. ಈ ಮರ್ಕಟ ಸೋಲ್ಜರ್ಸ್ ನ ಬಡಿದು ಹಾಕ್ತೀನಿ ನೋಡ್ತಿರು”

ಮಂಡೋದರಿ: “ಇಷ್ಟಕ್ಕೆಲ್ಲ ಕಾರಣ ಆ ಮಿಸ್ ವರ್ಲ್ಡ್ ಸೀತಾ. ಅವಳನ್ನು ನೀವು ಕಿಡ್ನಾಪ್ ಮಾಡದೇ ಇದ್ದಿದ್ರೆ ನಮ್ಮ ಮಕ್ಕಳು ಸಾಯ್ತಿರಲಿಲ್ಲ. ಯಾವ ಲವರ್ ತಾನೆ ತನ್ನ ಆಶಿಕ್ ನ ಇನ್ನೊಬ್ಬ ಹಾರಿಸ್ಕೊಂಡು ಹೋದ್ರೆ ಸುಮ್ನಿರ್ತಾನೆ. ಪ್ಲೀಸ್ ಯಜಮಾನಪ್ಪ ಬಿಟ್ಟು ಕಳಿಸು ಅವಳನ್ನ”

ರಾವಣ: (ತಿಂಡಿ ಮುಗಿಸಿದವನೇ ಸಿಟ್ಟಿನಿಂದ ಮೇಲೆದ್ದ ರಭಸಕ್ಕೆ ಅವನು ಕೂತ ಚೇರ್ ಹಿಂದಕ್ಕೆ ಉರುಳಿ ಬೀಳತ್ತೆ) “ಏನು ಆ ಬ್ಯೂಟಿನಾ ಬಿಡೋದಾ? ನೆವರ್. ಅವಳಿಂದಾಗೆ ಇಷ್ಟೆಲ್ಲಾ ಆಗಿರೋದು ಅಂದೆ ಅಲ್ಲ. ನೋಡ್ತಿರು ಅವಳ ಲವಿಂಗ್ ಹಬ್ಬಿ ಆ ರಾಮನ್ನ ಬಡಿದು ಬಾಯಿಗಾಕ್ಕಂಡು ಅವಳನ್ನು ಪಡ್ಕೋತೀನಿ” (ಮಂಡೋದರಿ ಅಸೂಯೆಯಿಂದ ನೆಟಿಕೆ ಮುರಿಯುತ್ತಾಳೆ)

ಬಿರಬಿರನೆ ಹೆಜ್ಜೆ ಹಾಕುತ್ತಾ ಹೊರ ನಡೆಯುವ ರಾವಣ, ಕಾರಿಡಾರ್ ನಲ್ಲಿ ನಿಂತು ಸಾಲಾಗಿ ವಿಶ್ರಂನಲ್ಲಿ ನಿಂತ ತನ್ನ ಸೋಲ್ಜರ್ಸ್ ನ ನೋಡ್ತಾನೆ.

ರಾವಣ: “ಯಾರಲ್ಲಿ?”

ಸೇವಕ: (ಓಡಿ ಬಂದು ಬಗ್ಗಿ ನಿಂತು) “ಯೆಸ್ ಯುವರ್ ಎಕ್ಸಲೆನ್ಸಿ!”

ರಾವಣ: “ಎಸ್ಕಾರ್ಟ್ ರೆಡಿ ಇದ್ಯಾ? ಹಾಂ ವಾರ್ ರೂಂನಲ್ಲಿರೋ ನಮ್ ಎಕ್ಸಪರ್ಟ್ ಗಳಿಗೆ ಸ್ಟ್ರಾಟೆಜಿಕ್ ಪ್ಲಾನಿಂಗ್ ಕಮಿಟಿ ಮೀಟಿಂಗ್ ಕ್ಯಾನ್ಸಲ್ ಮಾಡೋಕೆ ಹೇಳು. ಜೊತೆಗೆ ನಮ್ ಆರ್ಮಿನಲ್ಲಿರುವ ಟಾಟಾ ಮರ್ಲಿನ್, ರೆನಾಲ್ಟ್ ಶೆರ್ಪಾ, ಮಹೀಂದ್ರಾ ಮಾರ್ಕ್ಸ್ ಮ್ಯಾನ್, ವೈಪರ್ ಸೇರಿ ಎಲ್ಲಾ ಮಿಲಿಟರಿ ವೆಹಿಕಲ್ ಗಳು ಇವತ್ತು ಫೀಲ್ಡ್ ಗೆ ಹೋಗಬೇಕು ಅಂತ ಹೇಳು. ಇಟ್ಸ್ ಮೈ ಆರ್ಡರ್”

ಸೇವಕ: “ಒಕೆ ಯುವರ್ ಎಕ್ಸಲೆನ್ಸಿ. ಹೊಸ ಡಿಫೆನ್ಸ್ ಮಿನಿಸ್ಟರ್ ಮೇಜರ್ ಪ್ರಹಸ್ತ ಅವರು ನಿಮ್ಮನ್ನು ಮೀಟ್ ಮಾಡೋಕೆ ಪರ್ಮಿಷನ್ ಕೇಳಿದ್ದಾರೆ”

ರಾವಣ: “ಸೆಂಡ್ ಹಿಮ್ ಇನ್”

ಸೇವಕ ಸೆಲ್ಯೂಟ್ ಹೊಡೆದು ಹೊರಡುತ್ತಾನೆ. ಪ್ರಹಸ್ತ ಒಳಬರುತ್ತಾನೆ.

ಪ್ರಹಸ್ತ: “ಗುಡ್ ಮಾರ್ನಿಂಗ್ ಯುವರ್ ಎಕ್ಸಲೆನ್ಸಿ”

ರಾವಣ: (ಸಿಡಿಮಿಡಿ ಅನ್ನುತ್ತಲೇ) “ಎಂತ ಸಾವು ನಿಮ್ಮದು. ಹೊಸದಾಗಿ ಪೋರ್ಟ್ ಫೋಲಿಯೋಗೆ ಬಂದಿದಿರಿ ಉತ್ಸಾಹನೇ ಇಲ್ವಲ್ರಿ ನಿಮಗೆ. ನಿಮಗಿಂತ ಮೊದಲು ಈ ಪೋರ್ಟ್ ಫೋಲಿಯೋದಲ್ಲಿದ್ದ ನನ್ನ ಮಗ ಮೇಘನಾದನಿಂದ ನೀವೇನೂ ಕಲಿತಿಲ್ವಾ? ಹಾಳಗ್ ಹೋಗಲಿ ವಾರ್ ಪ್ರಿಪರೇಷನ್ ಬ್ರೀಫ್ ಮಾಡಿ. ಲೇಟ್ ಆಗ್ತಿದೆ”

ಪ್ರಹಸ್ತ: (ಪೆಚ್ಚಾದವನು ಸುಧಾರಿಸಿಕೊಂಡು) “ಯುವರ್ ಎಕ್ಸಲೆನ್ಸಿ ನಮ್ ಆರ್ಮಿಯ ಎಲ್ಲಾ ಬೆಟಾಲಿಯನ್ ಸೋಲ್ಜರ್ಸ್ ಹತ್ರ ಎಕೆ 47, ಎಂ 16 ರೈಫಲ್ಸ್, ಹ್ಯಾಕ್ಲರ್, ಬೆರ್ರೇಟ್ ಕಾರ್ಬೈನ್ಸ್ ಇದೆ. ಮೇಡ್ ಇನ್ ಜಪಾನ್ ಸಿಸು ನಸು ಸೇರಿದಂಗೆ ಪಜೆರೋ, ವೋಲ್ವೋ, ಲಯ್ಲೆಂಡ್, ಬಿಇಎಂಎಲ್ ತತ್ರಾ ಮಿಲಿಟರಿ ವೆಹಿಕಲ್ಸ್ ರೆಡಿ ಇದೆ. ಟ್ಯಾಂಕರ್ಸ್, ಮಿಸೈಲ್ ಲಾಂಚರ್ಸ್, ಆರ್ಟಿಲರಿಸಿ ರೆಡಿ ಟು ಮೂವ್ ಸರ್. ಇನ್ನು ಏರ್ ಫೋರ್ಸ್ ಅಗತ್ಯ ಬಿದ್ರೆ ನಿಮ್ಮ ಪುಷ್ಪಕ ವಿಮಾನಕ್ಕೂ ಫ್ಯೂಯಲ್ ಫುಲ್ ಮಾಡಿಸಿ ಇಟ್ಟಿದ್ದೀವಿ ಸರ್”

ರಾವಣ: “ನಮ್ ಇಂಟೆಲಿಜೆನ್ಸಿ ರಿಪೋರ್ಟ್ ಏನು?”

ಪ್ರಹಸ್ತ: “ಯುವರ್ ಎಕ್ಸಲೆನ್ಸಿ ಎನಿಮೀಸ್ ಹತ್ರ ಮೇಡ್ ಇನ್ ಇಂಡಿಯಾ ಕಿಷ್ಕಿಂದಾ ಮಿಲಿಟರಿ ಫ್ಯಾಕ್ಟರಿಯ ವೆಪೆನ್ಸ್ ಮಾತ್ರ ಇರೋದು. ಮಿಲಿಟರಿ ಸ್ಟ್ರಾಟೆಜಿಸ್ಟ್ ಆಚಾರ್ಯ ಅಗಸ್ತ್ಯರು ನಿನ್ನೆ ರಾತ್ರಿ ರಾಮನ ಜೊತೆ ತುರ್ತು ಸಭೆ ನಡೆಸಿ ರಫೆಲ್ ಬಳಸೋ ಟೆಕ್ನಿಕ್ ಹೇಳಿಕೊಟ್ಟಿದ್ದಾರಂತೆ. ಇಂದ್ರ ರಫೆಲ್ ಕಳಿಸ್ತಾನಂತೆ ಇವತ್ತು, ಇಂದ್ರನ ಪರ್ಸನಲ್ ಡ್ರೈವರ್ ಮಾತಲಿಯೇ ಡೆಲಿವರಿ ಕೊಟ್ಟು ಹೋಗ್ತಾನಂತೆ”

ರಾವಣ: “ವಾಟ್ ನಾನ್ಸೆನ್ಸ್. ಬೊಫೋರ್ಸ್ ಗತಿ ಇಲ್ಲದ ಆ ಬಡಪಾಯಿ ರಾಮನಿಗೆ ಅಂಬಾನಿಗಳ ರಫೇಲ್ ಸಿಗತ್ತಾ? ಇದು ಫೇಕ್ ನ್ಯೂಸ್. ಹಾಗೇನಾದ್ರೂ ಇಂದ್ರ ರಫೇಲ್ ಕಳಿಸಿದ್ದೇ ನಿಜವಾದ್ರೆ ಮೊದಲು ಈ ವಾರ್ ಮುಗಿಸಿ ನಮ್ ಬೆಟಾಲಿಯನ್ ನ ಅಮರಾವತಿಗೆ ಮೂವ್ ಮಾಡಿ. ಇಂದ್ರಂದು ಇತ್ತೀಚೆಗೆ ಜಾಸ್ತಿ ಆಗ್ತಿದೆ. ಹಳೆ ಪೆಟ್ಟು ಮರ್ತೋಗಿರಬೇಕು”

(ಮಿಲಿಟರಿ ಸಿದ್ಧತೆಗಳನ್ನು ಕೇಳಿ ಸಂತೃಪ್ತನಾಗೋ ಲಂಕೇಶ)

“ಒಕೆ ನವ್ ಲೆಟ್ಸ್ ಮೂವ್ ನನ್ನ ಮರ್ಸಿಡಿಸ್ ಬೆಂಝ್ ರೆಡಿ ಮಾಡಿ, ಡಿಫೆನ್ಸ್ ಎಸ್ಕಾರ್ಟ್ ಗೆ ಅಲರ್ಟ್ ಆಗಿರೋಕೆ ಹೇಳಿ. ಮಂಡೋದರಿಗೆ ಒಂದು ಬೈ ಹೇಳಿ ಜಾಯಿನ್ ಆಗ್ತೀನಿ. ಯು ಕ್ಯಾನ್ ಗೋ ನವ್”

ಪ್ರಹಸ್ತ: “ಒಕೆ ಯುವರ್ ಎಕ್ಸಲೆನ್ಸಿ” (ಸೆಲ್ಯೂಟ್ ಹೊಡೆದು ನಿರ್ಗಮನ)

ಸೀನ್ ಎಂಡ್
ದೃಶ್ಯ ಮುಗಿಯುತ್ತದೆ; ಪರದೆ ಸರಿಯುತ್ತದೆ..