ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಮ್ಮ ಹುಟ್ಟುವ ಗಳಿಗೆ

ಡಾ. ಪ್ರೀತಿ ಕೆ.ಎ.
ಇತ್ತೀಚಿನ ಬರಹಗಳು: ಡಾ. ಪ್ರೀತಿ ಕೆ.ಎ. (ಎಲ್ಲವನ್ನು ಓದಿ)

ಅವಳಿಗೆ ಸಿಹಿಯೆಂದರೆ ಪ್ರಾಣ. ಶುಗರ್ ಲೆವೆಲ್ ಜಾಸ್ತಿಯಾದರೆ ಮುಂದೆ ಹೊಟ್ಟೆಯಲ್ಲಿರುವ ಮಗುವಿಗೂ, ಹೆರಿಗೆಗೂ ತೊಂದರೆ ಎಂದಿದ್ದಾರೆ ಅವಳ ಡಾಕ್ಟರ್. ಗುಲಾಬ್ ಜಾಮೂನು, ಕ್ಯಾರಟ್ ಹಲ್ವಾ, ಮೈಸೂರುಪಾಕು, ಜಿಲೇಬಿಗಳೆಲ್ಲ ಕನಸಲ್ಲೂ ಅವಳನ್ನೇ ಕರೆದಂತಾದರೂ ತಿನ್ನಬೇಕೆಂಬ ಆಸೆಯನ್ನು ಒಳಗೊಳಗೇ ಒತ್ತಿಟ್ಟುಕೊಂಡು ಕೂತಿದ್ದಾಳೆ.

ಅವಳಿಗೆ ಈಗೀಗ ಯಾವ ಭಂಗಿಯಲ್ಲಿ ಮಲಗಿದರೂ ಸರಿಯಾಗುತ್ತಿಲ್ಲ. ಹಾಗೆಂದು ಬೇಕೆಂದ ಹಾಗೆ ಮಗ್ಗುಲು ಬದಲಿಸುವಂತೆಯೂ ಇಲ್ಲ. ಆಗಾಗ್ಗೆ ಹೊಟ್ಟೆಯೊಳಗಿಂದ ಮಗು ಒದೆಯುವಾಗಲೆಲ್ಲ ಪುಳಕಗೊಳ್ಳುತ್ತಿದ್ದರೂ ಬೆಳಗ್ಗೆ ಏಳುವಾಗ ನಿದ್ದೆಯಿಲ್ಲದೆ ತಲೆ ಭಾರ.

ಹೌದು. ಅವಳ ಹೊಸದೊಂದು ಪಯಣ ಅದಾಗಲೇ ಶುರುವಾಗಿದೆ. ಮುಂದೆ ಸಿಗಲಿರುವ ತ್ಯಾಗಮಯಿ, ಸಹನಾಮೂರ್ತಿ ಎಂಬೆಲ್ಲ ಬಿರುದುಗಳನ್ನು ಸ್ವೀಕರಿಸಲು ರಂಗವೇದಿಕೆಯೊಂದು ಸದ್ದಿಲ್ಲದೇ ಸಜ್ಜಾಗುತ್ತಿದೆ!

ಮಗುವಿನ ಮುಖ ಕಂಡ ಕೂಡಲೇ ಅವಳ ನೋವುಗಳೆಲ್ಲವೂ ಮಾಯ. ಅಮ್ಮನಾದ ಸಂಭ್ರಮದ ಮುಂದೆ ಮಿಕ್ಕೆಲ್ಲವೂ ಗೌಣ. ಕಣ್ಣಲ್ಲಿ ಸಣ್ಣ ಜಿನುಗು. ದೇಹವೆಲ್ಲ ಹತ್ತಿಯಂತೆ ಹಗುರಾದ ಭಾವ.

ಪುಟ್ಟ ಕಿನ್ನರನಂತಿರುವ ಮಗುವನ್ನು ಕಣ್ತುಂಬಿಕೊಂಡು ಇನ್ನೇನು ಕಣ್ಮುಚ್ಚಿ ನಿದ್ರಿಸಬೇಕೆನ್ನುವಷ್ಟರಲ್ಲೇ ಮಗು ಅಳಲು ಶುರುವಿಡುತ್ತದೆ. ಅಮ್ಮನ ನಿದ್ದೆ ಕಸಿಯುವುದರಲ್ಲೇ ಮಗುವಿಗೆ ಅದೇನು ಸುಖವೋ. ಆಗಾಗ್ಗೆ ಎದ್ದು ರಚ್ಚೆ ಹಿಡಿದರಷ್ಟೇ ಹಸುಗೂಸಿಗೆ ಸಮಾಧಾನ. ಮಗುವನ್ನು ಅನುನಯಿಸಿ ಸುಮ್ಮನಾಗಿಸುವಷ್ಟರಲ್ಲಿ ಇನ್ನೂ ವಾರ ತುಂಬದ ಹೊಸ ಅಮ್ಮ ತಬ್ಬಿಬ್ಬು.

ಅವಳು ತಟ್ಟೆ ಎತ್ತಿಕೊಂಡು ಎರಡು ತುತ್ತು ಬಾಯಿಗಿಟ್ಟಳೋ ಇಲ್ಲವೋ ಮಗುವಿನ ಕೂಗು ಮುಗಿಲು ಮುಟ್ಟುತ್ತದೆ. ತಾನೇನಿದ್ದರೂ ಬಿಸಿ ಬಿಸಿಯಿದ್ದರಷ್ಟೇ ತಿನ್ನುವವಳು ಎಂದದ್ದು ಮರೆತೇ ಹೋಗುತ್ತದೆ. ಆರಿ ಹೋದ ಕಾಫಿ ಅವಳಿಗಾಗಿ ಮರುಗುತ್ತದೆ!

ಅದು ತಿಂದರೆ ಎದೆಹಾಲು ಕುಡಿಯುವ ಮಗುವಿಗೆ ಶೀತವಾದೀತು , ಇದು ತಿಂದರೆ ಭೇದಿಯಾದೀತು ಎಂದು ಇಷ್ಟವಾದದ್ದೆಲ್ಲ ಸರಿಸಿ ಕೆಲವಾರು ಸೊಪ್ಪಿನ ಸಪ್ಪೆ ಪಲ್ಯ ತಿನ್ನುತ್ತಾಳೆ ದಿನವೂ ಎದೆ ಹಾಲೆಂಬ ಅಮೃತದ ಬಟ್ಟಲು ತುಂಬುತ್ತಿರಲೆಂದು.

ಇಷ್ಟು ದಿನ ತೆಳುವಾದ ಮೇಕಪ್ಪಿಲ್ಲದೆ ಹೊರಹೋಗಲೇ ಒಲ್ಲದವಳು ಕೆದರಿದ ತಲೆಗೂದಲಲ್ಲೇ, ಹಾಕಿದ ಹಳೇ ನೈಟಿಯಲ್ಲಿಯೇ ಓಡುತ್ತಾಳೆ ಮೆಡಿಕಲ್ ಶಾಪಿಗೆ ಡೈಪರ್ ತರಲು. ಗುಂಪಿನಲ್ಲೆಲ್ಲಾ ಮಹಾ ಕ್ಲೀನು, ನೀಟು ಎಂದೆಲ್ಲಾ ಕರೆಸಿಕೊಳ್ಳುತ್ತಿದ್ದ ಹುಡುಗಿ ಯಾವ ಹೇವರಿಕೆಯೂ ಇಲ್ಲದೆಯೇ ಮಗುವಿನ ಅಂಡು ತೊಳೆಯುತ್ತಾಳೆ.

ಇದುವರೆಗೂ ತಾನು daddy’s little princess ಎಂದು ಗಂಡನೆದುರು ಕೆನ್ನೆಯುಬ್ಬಿಸಿ ಹೇಳುತ್ತಿದ್ದ, ಅಪ್ಪ, ಅಣ್ಣಂದಿರಿಂದ ಮುದ್ದು ಮಾಡಿಸಿಕೊಳ್ಳುತ್ತಿದ್ದ ಹುಡುಗಿಗೆ ತವರು ಮನೆಯಿಂದ ಫೋನು ಬಂದಾಗಲೂ ಹೇಗಿದ್ದಿ ಹುಡುಗಿ? ಎಂದು ಕೇಳುವವರಿಲ್ಲ. ಎಲ್ಲರ ಪ್ರಶ್ನೆಗಳೂ ಮಗುವಿನ ಸುತ್ತಲೇ ಗಿರಕಿ ಹೊಡೆಯುವುದನ್ನು ಕಂಡು ಹುಡುಗಿಗೆ ಒಳಗೊಳಗೇ ಏನನ್ನೋ ಕಳೆದುಕೊಂಡ ಭಾವ..ಕಣ್ಣಲ್ಲಿ ಕಂಡೂ ಕಾಣದಂತೆ ತೆಳುವಾದ ನೀರ ಪಸೆ!

ಹಿಂದೆಲ್ಲಾ ಸಣ್ಣ ಪುಟ್ಟ ಸಂಗತಿಗಳಿಗೂ ನಾಲ್ಕೂ ಮನೆಗಳಿಗೆ ಕೇಳುವಂತೆ ನಗುತ್ತಿದ್ದ, ಗಂಡ ಹೇಳಿದ ಪೋಲಿ ಜೋಕುಗಳಿಗೆ ತುಂಟ ನಗೆ ಬೀರುತ್ತಿದ್ದ, ಗೆಳೆಯ ಗೆಳತಿಯರನ್ನು ಕಾಲೆಳೆಯುತ್ತಿದ್ದ, ಒಡಹುಟ್ಟಿದವರು ಸಿಕ್ಕಾಗ ಶರಂಪರ ಕಿತ್ತಾಡುತ್ತಿದ್ದ ಹುಡುಗಿ ಈಗ ತುಂಬ ಗಂಭೀರ. ಅವಳೀಗ ಅಮ್ಮ ಮತ್ತು ಅಮ್ಮ ಮಾತ್ರ! ಅರೇ..ಎಲ್ಲಿ ಕಳೆದು ಹೋದಳು ಆ ಪುಟ್ಟ ಹುಡುಗಿ?

ಅವಳೀಗ ವಾರಾಂತ್ಯಗಳಲ್ಲೂ ಅಲಾರಾಂ ಇಟ್ಟಂತೆ ಬೇಗನೆ ಏಳುತ್ತಾಳೆ. ಅವರಿವರಿಂದ ಕೇಳಿಯೋ, ಯೂಟ್ಯೂಬಿನಲ್ಲಿ ನೋಡಿಯೋ ಮಕ್ಕಳಿಗೋಸ್ಕರ ಥರಹೇವಾರಿ ಅಡುಗೆ ಮಾಡುತ್ತಾಳೆ. ಆಫೀಸಿನಲ್ಲಿ ಸಹೋದ್ಯೋಗಿಗಳ್ಯಾರೋ ಕೊಟ್ಟ ಕೇಕಿನ ತುಂಡನ್ನೋ, ಜಿಲೇಬಿಯನ್ನೋ ಮಗನಿಗಿಷ್ಟವೆಂದು ಎತ್ತಿಡುತ್ತಾಳೆ. ಅವಳಿಗಿಷ್ಟವಾದ ಪ್ರೋಗ್ರಾಮು ಟಿವಿಯಲ್ಲಿ ಬಂದಾಗ ಮಕ್ಕಳು ಕಾರ್ಟೂನು ಹಾಕೆಂದು ಗೋಗರೆಯುತ್ತವೆ. ಮಧ್ಯಾಹ್ನ ಅರೆ ಗಳಿಗೆ ನಿದ್ದೆ ಮಾಡೋಣ ಅಂದುಕೊಂಡರೆ ಬಾ ಅಮ್ಮ ಆಟ ಆಡೋಣ ಪ್ಲೀಸ್ ಅನ್ನುತ್ತವೆ. ಎರಡು ತಿಂಗಳ ಹಿಂದೆ ಕೊಂಡು ತಂದ ಪುಸ್ತಕವನ್ನು ಇವತ್ತಾದರೂ ಓದಲು ಶುರುಮಾಡಬೇಕೆಂದು ಅಂದುಕೊಳ್ಳುತ್ತಿರುವಾಗಲೇ ಮಕ್ಕಳು ಅವಳನ್ನು ಹೋಂವರ್ಕು ಮಾಡಿಸೆಂದು ದುಂಬಾಲು ಬೀಳುತ್ತವೆ. ಹೌದು…ಅಮ್ಮನಿಗೀಗ ಪ್ರಾಯ ಹತ್ತು !

ಮಕ್ಕಳು ದೊಡ್ಡವರಾಗಿ ಕಾಲೇಜು ಮೆಟ್ಟಿಲು ಹತ್ತಿದ್ದರೂ ಅವಳ ಕಣ್ಣಿಗೆ ಇನ್ನೂ ಪುಟ್ಟ ಮಕ್ಕಳಂತೇ ಕಾಣುತ್ತಾರೆ. ಮಗಳು ನೀರಿನ ಬಾಟಲಿ ಮರೆತದ್ದಕ್ಕೆ ಅವಳು ಕೂತಲ್ಲೇ ಚಡಪಡಿಸುತ್ತಾಳೆ. ಸಂಜೆ ಏಳಾದರೂ ಮಗಳು ಮನೆಗೆ ಮುಟ್ಟಿಲ್ಲವೆಂದರೆ ಎದೆ ಢವಢವಗುಟ್ಟುತ್ತದೆ. ಮಗ ತಾನಿವತ್ತು ರಾತ್ರಿ ಊಟಕ್ಕಿಲ್ಲವೆಂದಾಗ ಅಡುಗೆ ಮಾಡಿಟ್ಟು ಕಾಯುತ್ತಿದ್ದವಳ ಕಣ್ಣು ಚುಳ್ಳೆನ್ನುತ್ತದೆ. ಅಮ್ಮನಿಗೀಗ ಇಪ್ಪತ್ತು !

ಅವಳು ತುತ್ತುಣಿಸಿ ಬೆಳೆಸಿದ ಹಕ್ಕಿ ಮರಿಗಳು ಹಾರಿವೆ ಗಾವುದ ದೂರ. ಅವಳ ಗೂಡೀಗ ಖಾಲಿ ಖಾಲಿ ಥೇಟ್ ಅವಳ ಕಂಗಳಂತೆ ! ಹೊಸ ಕನಸುಗಳು ಯಾಕೋ ಹುಟ್ಟುವುದೇ ಇಲ್ಲ. ಅದನ್ನು ಹೇಳಿಕೊಂಡರೆ ಸಾವಿರಾರು ಮೈಲುಗಳಾಚೆ ಇರುವ ಮಗ ಸಿಡುಕುತ್ತಾನೆ -” ತುಂಬ ಎಮೋಷನಲ್ ಆಗಿ ಮಾತಾಡಬೇಡಮ್ಮ..ನೀನ್ಯಾಕೆ ಮಕ್ಕಳನ್ನೇ ನಿನ್ನ ಜಗತ್ತು ಅಂತ ಅಂದುಕೊಳ್ಳುತ್ತಿ? ನಿನ್ನದೇ ಜಗತ್ತನ್ನು ಯಾಕೆ ಸೃಷ್ಟಿಸಿಕೊಳ್ಳಲಿಲ್ಲ? “. ಮತ್ತೆ ಇವನು ಯಾವ ಜಗತ್ತಿಗೆ ಸೇರಿದವನು ಎಂದು ಹಳೇ ಅಮ್ಮ ತಬ್ಬಿಬ್ಬು. ‘ಕಮ್ ಆನ್ ಮಾಮ್.. ನೀನು ನಿನ್ನದೇ ಆದ ಹವ್ಯಾಸಗಳನ್ನು ಬೆಳೆಸಿಕೋ..ಈಗ ನನ್ನನ್ನೇ ನೋಡು.ಒಮ್ಮೆಯೂ ನಾನು ಖಾಲಿ ಕುಳಿತದ್ದೇ ಇಲ್ಲ..ನಾನು ನಿನ್ನ ವಯಸ್ಸಲ್ಲಿ ಖಂಡಿತಾ ನಿನ್ನಂತೆ ಕೊರಗೋಲ್ಲ ‘. ಮಗಳು ತಾನು ಕಾಣದ ನಾಳೆಗಳ ಬಗ್ಗೆ ಎಷ್ಟು ಧೈರ್ಯದಿಂದ ಮಾತಾಡುತ್ತಾಳೆ. ನಾನೂ ನಿನ್ನಂತೆಯೇ ಅಂದುಕೊಂಡಿದ್ದೆ ಮಗಳೇ ಎಂದೇನೋ ಹೇಳಹೊರಡುತ್ತಾಳೆ. ಮಾತು ತುಟಿಯಾಚೆಗೆ ಹೊರಳುವುದಿಲ್ಲ. ಅಮ್ಮನಿಗೀಗ ಮೂವತ್ತು!

ಫೋನಿನಲ್ಲಿ ಈಗ ಎಲ್ಲರೂ ಕೇಳುತ್ತಾರೆ ನೀನು ಹೇಗಿದ್ದಿ ಎಂದು. ‘ಏನೋ ಇದ್ದೇನೆ ಹೀಗೇ…’ ಅನ್ನಲು ಮನಸ್ಸಾಗದೆ ‘ಹೂಂ..ನನಗೇನು…ಆರಾಮ’ ಎನ್ನುತ್ತಾ ಹುಸಿ ನಗು ನಗುತ್ತಾಳೆ. ಅಮ್ಮನಿಗೀಗ ನಲವತ್ತು..ಇನ್ನೇನು ಆಟ ಮುಗಿಯುವ ಹೊತ್ತು !

ಒಲೆಯ ಮುಂದೆ ಮುಕ್ಕಾಲು ಆಯಸ್ಸು ಕಳೆದ ಅಮ್ಮನದ್ದೂ, ಆಫೀಸು ಮತ್ತು ಅಡುಗೆಮನೆಯ ನಡುವೆ ಹೈರಾಣಾಗುತ್ತಾ ಅರ್ಧ ಬದುಕು ಸವೆಸಿದ ಅಮ್ಮನದ್ದೂ ಹೆಚ್ಚು ಕಮ್ಮಿ ಇದೇ ಕಥೆ. ಅಲ್ಪ ಸ್ವಲ್ಪ ವ್ಯತ್ಯಾಸವಿರಬಹುದಾದರೂ ಅವು ಪೂರ್ತಿ ಭಿನ್ನವೇನಲ್ಲ. ಪಯಣದ ಹಾದಿಗಳು ಬದಲಾಗಿರಬಹುದಾದರೂ ಗಮ್ಯವೊಂದೇ. ಮಕ್ಕಳ ಸುಖವನ್ನೇ ತನ್ನ ಸುಖವೆಂದುಕೊಳ್ಳುವುದು. ಸುಖದ ಈ ಪರಿಕಲ್ಪನೆಯನ್ನು ವರ್ಷಗಳ ಹಿಂದೆಯೇ ಅವಳ ಪುಟ್ಟ ತಲೆಯಲ್ಲಿ ತುಂಬಿದವರಾರು? ಅದನ್ನೇ ಅವಳು ಗಟ್ಟಿಯಾಗಿ ತಬ್ಬಿ ಹಿಡಿಯುವಂತೆ ಮಾಡಿದವರಾರು?

ಅಮ್ಮಾ ಎಂದರೆ ಏನೋ ಹರುಷವೂ..
ಕಣ್ಣಿಗೆ ಕಾಣುವ ದೇವರು ಅಂದರೆ ಅಮ್ಮನು ತಾನೇ..
ಅಮ್ಮಾ ನಿನ್ನ ತೋಳಿನಲ್ಲಿ ಕಂದಾ ನಾನು..
ಅಮ್ಮಾ ಎನ್ನಲು ಕೋಟಿ ಪುಣ್ಯವೋ..
ಅಮ್ಮಾ ಅಮ್ಮಾ ಎನ್ನುವ ಮಾತು ಬಂತು ಎಲ್ಲಿಂದ..
ಬೇಡುವೆನು ವರವನ್ನು ಕೊಡು ತಾಯ ಜನುಮವನು..

ಅಮ್ಮ, ಆಯಿ, ತಾಯಿ, ಅಬ್ಬೆ, ಜನನಿ, ಮಾ, ಮಮ್ಮಿ ಎಂದೆಲ್ಲಾ ಕರೆಯುವ ಆಕೆಯನ್ನು ಹೇಗೆಲ್ಲಾ ಹಾಡಿ ಹೊಗಳುತ್ತೇವೆ. ವಾತ್ಸಲ್ಯಮೂರ್ತಿ, ತ್ಯಾಗಮಯಿ, ಕರುಣಾಮಯಿ, ಮಮತಾಮಯಿ, ಸಹನಾಮಯಿ, ಕ್ಷಮಯಾ ಧರಿತ್ರಿ, ನಡೆದಾಡುವ ದೇವರು……..ಓಹ್..ಅವಳನ್ನು ವರ್ಣಿಸಲು ಎಷ್ಟೆಲ್ಲ ವಿಶೇಷಣಗಳು, ಉಪಮೆಗಳು, ರೂಪಕಗಳು! ಅಮ್ಮನೆಂದರೆ ಹಾಗೆಲ್ಲ ಇರಬೇಕು ಎಂದು ಬಿಂಬಿಸುವ ಯತ್ನವೇ? ಅಲ್ಲ.. ಆ ಚೌಕಟ್ಟಿನಾಚೆಗೆ ಅವಳು ಎಂದಿಗೂ ಹೊರಬರದಿರಲಿ ಎಂಬ ನಿರೀಕ್ಷೆಯೇ? ಅವಳನ್ನು ದೈವತ್ವಕ್ಕೆ ಏರಿಸಿ ಎಂದಿಗೂ ಗರ್ಭಗುಡಿ ದಾಟದಂತೆ ನೋಡಿಕೊಳ್ಳುವ ಜಾಣತನವೇ? ಅವಳ ಮೂಲ ವ್ಯಕ್ತಿತ್ವದ ಬಣ್ಣವನ್ನೇ ಬದಲಿಸುವ ಉಪಾಯವೇ?

ಇವತ್ತು (ಮೇ ಎರಡನೇ ಭಾನುವಾರ) ಜಗತ್ತಿಗೇ ಅಮ್ಮಂದಿರ ದಿನವಂತೆ. ಶುಭಾಶಯಗಳ ಸರಮಾಲೆಯನ್ನು ಕೊರಳಿಗೆ ಹಾಕುವ ಮೊದಲು ಅವಳ ಜಗತ್ತಿಗೂ ಒಮ್ಮೆ ಹೊಕ್ಕಿ ಬನ್ನಿ. ಕೇಕು ಕಟ್ಟು ಮಾಡಿ, ಹತ್ತಾರು ಸೆಲ್ಫಿ ಕ್ಲಿಕ್ಕಿಸಿ, ಚೆನ್ನಾಗಿರುವುದನ್ನು ಆರಿಸಿ, ವಾಟ್ಸಾಪು ಡಿಪಿ ಮಾಡಿ, ದೊಡ್ಡದೊಂದು ವಿಡಿಯೋವನ್ನು ಸ್ಟೇಟಸ್ನಲ್ಲಿ ಹರಿಯ ಬಿಡುವ ಮುನ್ನ ಅವಳ ನಿಜವಾದ ಸ್ಟೇಟಸ್ಸು ಈಗ ಹೇಗಿದೆ ಎಂದೂ ದಯವಿಟ್ಟು ಒಮ್ಮೆ ಇಣುಕಿ ನೋಡಿ. ಅವಳಿಗೆ ನಿಜವಾಗಲೂ ಏನು ಬೇಕೆಂದು ಕೇಳಿ. ಅವಳ ಉತ್ತರ ನೀವು ಉಡುಗೊರೆಯ ಹೆಸರಲ್ಲಿ ಇಂದು ಕೊಡಲಿರುವ ದುಬಾರಿ ಫೋನೋ, ಒಡವೆಯೋ, ಸೀರೆಯೋ ಖಂಡಿತಾ ಆಗಿರುವುದಿಲ್ಲ! ಮಕ್ಕಳೊಂದಿಗೆ ಚೂರೇ ಚೂರು ಕಾಲ ಕಳೆಯುವ, ಮನ ಬಿಚ್ಚಿ ಮಾತಾಡುವ ದಿನಕ್ಕೆ ಅವಳು ಎಷ್ಟೋ ದಿನಗಳಿಂದ, ತಿಂಗಳುಗಳಿಂದ, ವರ್ಷಗಳಿಂದ ಕಾಯುತ್ತಿರಬಹುದು. ಅಂದು ಕಳೆದುಹೋದ ಪುಟ್ಟ ಹುಡುಗಿ ಅವಳೊಳಗೇ ಎಲ್ಲೋ ಜೀವಂತವಾಗಿರಬಹುದು! ಮತ್ತೆ ಒಡಹುಟ್ಟಿದವರೊಡನೆ ಹುಸಿ ಜಗಳ, ಬಾಲ್ಯಸ್ನೇಹಿತರ ಭೇಟಿ, ಜೊತೆಯಲ್ಲಿ ಕೂತು ತಿನ್ನುವ ಐಸ್ ಕ್ರೀಮು, ಯಾವುದೋ ಪುಟ್ಟ ಊರಿಗೆ ಪಯಣ, ವರ್ಷಗಳಿಂದ ಓದಲೇಬೇಕೆಂದಿದ್ದ ಪುಸ್ತಕ, ಹೃದಯ ಅರಳಿಸುವ ಕವಿತೆ…..ಇತ್ಯಾದಿಗಳು ಅವಳಲ್ಲಿ ಒಂದಿಷ್ಟು ಜೀವಸೆಲೆಯನ್ನು ಉಕ್ಕಿಸಬಹುದು.

ಅವಳ ಕಣ್ಣಲ್ಲಿ ನಕ್ಷತ್ರ ಮಿರಿ ಮಿರಿ ಮಿನುಗಲಿ
ಅವಳೊಳಗಿನ ಪುಟ್ಟ ಹುಡುಗಿ ಮತ್ತೆ ನಗಲಿ…

ಕೊನೆಯದೊಂದು ಮಾತು. ಅಮ್ಮನಂತಹಾ ಅಕ್ಕ, ಅತ್ತಿಗೆ, ಅತ್ತೆ, ಅಜ್ಜಿ, ಆಂಟಿ, ಗೆಳತಿ, ಅಪ್ಪ…ಎಲ್ಲ ಸಿಗಬಹುದು. ಅವರೆಲ್ಲ ಅಮ್ಮನಂತೆ ಆಗಬಹುದೇ ಹೊರತು ಅಮ್ಮನೇ ಆಗಲಾರರು. ಅಮ್ಮನೆಂಬ ಬಿಟ್ಟ ಸ್ಥಳವನ್ನು ಬೇರೆ ಯಾರೂ ತುಂಬಲಾರರು!