- ಜಾತಕ - ಏಪ್ರಿಲ್ 11, 2026
- ಅಯ್ಯೋ ರಾಮ..!! - ಮಾರ್ಚ್ 31, 2023
- ನೀನೇ ಅಪ್ಪ.. - ಜೂನ್ 19, 2022
ಅವನಿಗೆ ಎಲ್ಲ ಕನಸಿನಂತೆ ಭಾಸವಾಗುತಿತ್ತು. ಯಾರನ್ನು ಜನುಮದಲ್ಲಿ ಮತ್ತೆ ನೋಡಲು ಅಸಾಧ್ಯ ಎಂದುಕೊಂಡಿದ್ದನೋ ಅವಳು ತನ್ನ ಮನೆಯಲ್ಲಿ ತನ್ನೆದುರಿನಲ್ಲೆ ಕೂತು ನಗುನಗುತ್ತ ಊಟ ಮಾಡುವುದನ್ನು ಇನ್ನೂ ನಂಬುವ ಮನಸ್ಥಿತಿಯಲ್ಲಿ ಇರಲಿಲ್ಲ ಅವನು.
ಹೇಗಿದ್ದೀಯ ವೈಷು…? ತೀರ ಹತ್ತಿರದಂದ ಬಂದ ದನಿ..ತೀರ ಪರಿಚಿತ..ಆತ್ಮೀಯ ಎನಿಸುವ ಕಂಠ..ತಟ್ಟನೆ ತಿರುಗಿದಳು ವೈಷ್ಣವಿ. ದನಿಯ ಒಡೆಯ ಪಕ್ಕದಲ್ಲೇ ಇದ್ದ…ತನ್ನನ್ನೇ ದಿಟ್ಟಿಸುತ್ತಿದ್ದ…ಆ ನೋಟ..!! ಮರೆಯಲು ಸಾಧ್ಯವೇ..?ಹೃದಯದಲ್ಲಿನ ಪ್ರೀತಿಯನ್ನೆಲ್ಲಾ ಮೊಗೆ ಮೊಗೆದು ಕಣ್ಣಲ್ಲಿ ತುಂಬಿದಂತೆ..ಅತಿ ತಂಪಾದ ಭಾವವೊಂದು ಮೈಯೆಲ್ಲಾ ಆವರಿಸದಂತೆ ಒಮ್ಮೆ ಸಣ್ಣಗೆ ನಡುಗಿದಲು ವೈಷ್ಣವಿ. ಅವನ ಕಣ್ಣಿಂದ ದೃಷ್ಟಿ ಸರಿಸಿ ಒಮ್ಮೆ ಅವನನ್ನು ಪೂರ್ತಿಯಾಗಿ ನೋಡುತ್ತಾ…ವಿಕ್ಕಿ…!! ಎಂದು ಉದ್ಗರಿಸಿದಳು.
ಹಾ..ವಿಕ್ಕಿ..ನೇ..ಸಾಕ್ಷಾತ್..ಎನ್ನುತ್ತಾ ಎಂದಿನ ನಗೆ ಬೀರಿದ ವಿಕ್ರಮ.
ನೀನು..ಇಲ್ಲಿ….?
ಯಾಕೆ ಎಲ್ಲಾ ಮರೆತುಬಿಟ್ಯಾ..ನಾನು ನಿನ್ನ ಕಸಿನ್..ನಾವು ಬಂದಿರೋದು ನಮ್ಮ ಕ್ಲೋಸ್ ರಿಲೇಟಿವ್ ಮದ್ವೆಗೆ…ನಿಂಗೆ..ನಂಗೆ..ಇಬ್ಬರಿಗೂ..ಕ್ಲೋಸ್..ಛೇಡಿಸುವಂತೆ ಮತ್ತೆ ನಕ್ಕ.
ಅಯ್ಯೊ ಹೌದಲ್ವಾ…? ನನ್ ಬುದ್ಧಿಗಷ್ಟು..ಎನ್ನುತ್ತಾ ತನ್ನ ತಲೆಯ ಮೇಲೆ ತಾನೇ ಮೊಟಕಿಕೊಳ್ಳುತ್ತಾ.. ಮತ್ತೆ ಹೇಗಿದ್ದೀಯ..?


ನೋಡು..ಹೀಗೇ..ಹೆಚ್ಚು ಕಡಿಮೆ..ನಿನ್ನ ಅಪ್ಪ ಅಂದರೆ ಯಾರಾದ್ರೂ ನಂಬೋ ಹಾಗೆ..ನೀನಂತೂ ಇದ್ದ ಹಾಗೇ ಇದ್ದೀಯ..ಏನು ಸೀಕ್ರೆಟ್..? ಗಹಗಹಿಸಿ ನಕ್ಕ ವಿಕ್ರಂ..ಅಬ್ಬಬ್ಬಾ ಅಂದರೆ ೩೫ ಇರಬಹುದು ಎಂದರೆ ನಂಬುವ ಹಾಗಿದ್ದ ಅವಳನ್ನು ಕಣ್ ತುಂಬಿಕೊಳ್ಳುತ್ತಾ…
೪೭ಕ್ಕೆ ೬೦ರಂತೆ ಕಾಣುತ್ತಿದ್ದ ಅವನನ್ನು ಕನಿಕರದಿಂದ ನೋಡುತ್ತಾ ಸ್ವಲ್ಪ ನಾಚಿ…ನೀನೂ ಸರಿ..ಬಾ..ಇಲ್ಲಿ ನಾದ ಸ್ವರದ ಶಬ್ಧ ತುಂಬಾ ಇದೆ..ಅಲ್ಲಿ ಕೂರೋಣ..ಎನ್ನುತ್ತಾ ಆಸನಗಳನ್ನು ಹಾಕಿದ್ದ ಕಡೆ ನಡೆದಳು. ವಿಕ್ರಂ ಹಿಂಬಾಲಿಸಿದ. ಸಮೀಪದ ಬಂಧುವೊಬ್ಬರ ಮದುವೆಗೆ ದೆಹಲಿಯಿಂದ ಬಂದಿದ್ದ ವೈಷ್ನವಿ ಮತ್ತು ಅದೇ ಊರಿನಲ್ಲಿದ್ದ ವಿಕ್ರಂ ೧೮ ವರ್ಷಗಳ ನಂತರ ಭೇಟಿಯಾಗಿದ್ದರು.
ಎಷ್ಟು ಮಾತನಾಡಿದರೂ ಮುಗಿಯದಷ್ಟು ವಿಷಯ ಇದ್ದರೂ ಒಂದು ನಿಮಿಷ ಇಬ್ಬರೂ ಮೌನವಾಗಿ ಕೂತರು.
ಅರ್ಜುನ್ ವಿಷ್ಯ ಕೇಳಿ ಬೇಜಾರಾಯ್ತು…ವಿಕ್ರಂ ಮಾತಿಗೆ ಮೊದಲು ಮಾಡಿದ.
ಹುಂ..ಎಂದಷ್ಟೇ ಅಂದವಳ ಕಣ್ಣು ತೇವವಾದದ್ದು ಕಂಡು ಅವಳ ಕೈ ಹಿಡಿದು…ಐ ಯಾಮ್ ಸಾರಿ…ಎಂದ
ಅರ್ಜುನ್ ಪತಿಯಷ್ಟೇ ಅಲ್ಲ..ಸ್ನೇಹಿತನೂ ಆಗಿದ್ದ..ತನ್ನನ್ನು ಪ್ರಾಮಾಣಿಕವಾಗಿ ಪ್ರೀತಿಸುತ್ತಿದ್ದ. ದೆಹಲಿಯ ಪ್ರತಿಷ್ಟಿತ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಅವನನ್ನು ಹಿರಿಯರ ಇಚ್ಛೆಗೆ ತಲೆ ಬಾಗಿ ಮದುವೆಯಾಗಿದ್ದರೂ ಅವನನ್ನು ಪ್ರೀತಿಸದೇ ಇರಲು ಸಾಧ್ಯವಾಗಲಿಲ್ಲ ವೈಷ್ಣವಿಗೆ. ಚೈತನ್ಯದ ಚಿಲುಮೆಯಾಗಿದ್ದ ಅರ್ಜುನ್ ಒಂದು ವರ್ಷದ ಹಿಂದೆ ವಿಮಾನ ಅಪಘಾತದಲ್ಲಿ ತನ್ನನ್ನೂ ಅಕ್ಕರೆಯ ಮಗಳನ್ನೂ ಒಂಟಿ ಮಾಡಿ ಹೋಗಿದ್ದ. ಸಾವರಿಸಿಕೊಂದು ವೈಷ್ಣವಿಯೇ “ಪುಟ್ಟು ಕನ್ನಿಕಾ ಬಾ ಇಲ್ಲಿ”.. ಎಂದು ಜಿಂಕೆಯಂತೆ ಜಿಗಿಯುತ್ತಾ ಓಡಾಡುತ್ತಿದ್ದ ಮಗಳನ್ನು ಕರೆದಳು.
ಕ್ಯಾ ಹೈ ಮಮ್ಮಿ..ದೆಹಲಿಯ ಶೈಲಿಯಲ್ಲಿ ಹತ್ತಿರ ಬಂದು ಕೇಳಿದಳು ವೈನ್ ಕಲರ್ ಲೆಹೆಂಗಾದಲ್ಲಿ ದೃಷ್ಟಿ ತಾಕುವಂತಿದ್ದ ಕನ್ನಿಕಾ..
“ನೋಡು ಇವ್ರು ವಿಕ್ರಂ ಅಂಕಲ್ ನಿನ್ನ ನೋಡ್ಬೇಕು ಅಂದ್ರು..”
ಹಾಯ್ ಅಂಕಲ್ ಎಂದು ಕೈ ನೀಡಿದಳು.. ಹಾಯ್ ಮಗು..ಸೋ ಸ್ವೀಟ್.. ಗಾಡ್ ಬ್ಲೆಸ್..ಕೈ ಕುಲುಕುತ್ತಾ ಮತ್ತೊಂದು ಕೈಯಿಂದ ಅವಳ ತಲೆ ತಡವಿದ.
ಥ್ಯಾಂಕ್ಸ್ ಅಂಕಲ್ ಎನ್ನುತ್ತಾ ಮತ್ತೆ ಮಂಟಪದ ಕಡೆ ಓಡಿದಳು ಮಗು. ಒಂದು ಕ್ಷಣ ಅವಳು ಹೋದ ಕಡೆಯೇ ನೋಡುತ್ತಾ… “ಹುಂ ಸರಿ ನೀನ್ ಹೇಳು ಏನ್ ಸಮಾಚಾರ..? ಅತ್ತೆ ಹೇಗಿದಾರೆ..ಮತ್ತೆ ಮಾವ….?” ಅನುಮಾನದಲ್ಲಿ ನಿಲ್ಲಿಸಿದಳು.
ಅಮ್ಮ ಚೆನ್ನಾಗಿದಾರೆ..ಆದ್ರೆ ಮಂಡಿ ನೋವು..ಛತ್ರದಲ್ಲಿ ಹತ್ತಿ ಇಳಿಯಕ್ಕೆ ಆಗಲ್ಲ ನೀನಾದ್ರೂ ಹೋಗ್ಬಾ ಅಂತ ನನ್ನನ್ನ ಸಾಗ್ ಹಾಕಿದ್ರು..ಅಪ್ಪಾ….”ಎಂದು ರಾಗ ಎಳೆಯುತ್ತಾ ನಿಂಗೇ ಗೊತ್ತಲ್ಲಾ..ಇರೋರ‍್ಗೂ ಶಾಸ್ತ್ರ ಸಂಪ್ರದಾಯ, ಪೂಜೆ, ಜಾತಕ ಅಂತಾನೆ ಬದುಕಿದ್ರು..ಚೆನ್ನಾಗೇ ಇದ್ರು.. ಈಗ ಎರಡು ವರ್ಷದ ಹಿಂದೆ ಇದ್ದಕ್ಕಿದ್ದ ಹಾಗೆ ಹಾರ್ಟ್ ಫೆಯಿಲ್ ಆಗಿ ಹೋಗ್ಬಿಟ್ರು.
ನಾನು ಕೇಳಿದ ವಿಷ್ಯ ನಿಜ ಹೌದೋ ಅಲ್ವೋ ಅಂತ ಕೇಳ್ದೆ..ನಿಂಗೊತ್ತಿದ್ಯೋ ಇಲ್ವೋ ನಿಮ್ಮನೆ ವಿಚಾರ ಏನೂ ಹೇಳಲ್ಲ ಅಮ್ಮ ನನ್ ಹತ್ರ.. ಸೋದರ ಮಾವನನ್ನು ನೆನೆದು ಬೇಸರದಲ್ಲಿ ಹೇಳಿದಳು…ಎಷ್ಟೆಲ್ಲಾ ಪ್ರೀತಿಯಿಂದ ಮಾತಾಡ್ಸತಿದ್ರು..ನೀನೆ ನಮಗೆ ಮಗಳು ಸೊಸೆ ಎಲ್ಲ ಅಂತ ಉಬ್ಬಿಸುತ್ತಿದ್ದರು..ಛೆ ಅಂದುಕೊಂಡಳು.
“ಈಗ ಹೇಳಿ ಏನ್ ಪ್ರಯೋಜ್ನ ಬಿಡು..ಹೇಳೋದಕ್ಕೆ ಅಪ್ಪ ಏನೂ ಉಳಿಸಿರಲಿಲ್ಲ..” ಹಳೆಯದೆಲ್ಲವೂ ನೆನಪಾಗಿ ವಿಷಾದದ ನಗೆ ಸುಳಿಯಿತು ವಿಕ್ರಮನ ತುಟಿಯಂಚಿನಲ್ಲಿ.
ಎಷ್ಟು ಸುಂದರವಾದ ದಿನಗಳು ಅವು..ಉಲ್ಲಾಸ ಉತ್ಸಾಹ..ಒಮ್ಮೆಗೇ ಬರ ಸಿಡಿಲು ಬಡಿದಂತೆ ೨೨ ವರ್ಷಗಳ, ಎರಡು ಮನೆಗಳ ಮನಸ್ಸುಗಳ ಕನಸುಗಳೆಲ್ಲ ಕಮರಿ ಹೋಗಬಹುದೆನ್ನುವ ಕಲ್ಪನೆಯಾದರೂ ಇತ್ತೇ ಪರಸ್ಪರರಲ್ಲಿ ಜೀವವನ್ನೇ ಇಟ್ಟಿದ್ದ ತಮ್ಮಿಬ್ಬರಿಗೆ?? ತೆರೆಯ ಮೇಲಿನ ಚಿತ್ರದಂತೆ ವೈಷ್ಣವಿಯ ಕಣ್ಣ ಮುಂದೆ ಹಳೆಯ ನೆನಪುಗಳೆಲ್ಲ ಹಾದುಹೋದವು.
“ಇಗೊ ನಿನ್ ಸೊಸೆ ಬಂದಿದಾಳೆ ನೋಡು ಎತ್ಕೊ ಎನ್ನುತಾ ್ತಆಗ ತಾನೇ ಹುಟ್ಟಿದ ಮುದ್ದಾದ ಎಳೆಯ ಬೊಮ್ಮಟೆಯನ್ನು ಅಣ್ಣ ಆನಂದ ಕೈಲಿಟ್ಟಾಗ ಸುಮಿತ್ರ ಮಗುವನ್ನು ಎದೆಗವುಚಿಕೊಂಡಳು. ಗಂಡನ ಆನಂದಕ್ಕೆ ಪಾರವೇ ಇಲ್ಲ ಎಂದುಕೊಂಡಳು ಆಸ್ಪತ್ರೆಯಲ್ಲಿ ಸುಸ್ತಾಗಿ ಮಲಗಿದ್ದ ಶಾಂಭವಿ.
ನೋಡೋ ವಿಕ್ಕಿ ನಿನ್ ಹೆಂಡತಿ” ಎಂದು ಸುಮಿತ್ರ ಮೂರು ವರ್ಷದ ಮಗ ವಿಕ್ರಮನಿಗೆ ಮಗುವನ್ನು ತೋರಿಸಿದಾಗ ಏನೂ ಅರ್ಥವಾಗದ ವಿಕ್ರಮ ಅದರ ಮೃದುವಾದ ಕೈ ಹಿಡಿದು ಅಲ್ಲಾಡಿಸಿದ. ಅಲ್ಲಿಂದಲೇ ಪ್ರಾರಂಭವಾಗಿತ್ತು ಅವರಿಬ್ಬರ ಒಡನಾಟ.
ಒಟ್ಟಿಗೆ ಆಡುತಾ,್ತ ಬೆಳೆಯುತ್ತಾ, ಒಟ್ಟಿಗೆ ಓದುತ್ತಾ ತಾವಿಬ್ಬರೂ ಗಂಡ ಹೆಂಡತಿ ಎಂದು ಏನೂ ತಿಳಿಯದ ವಯಸ್ಸಿನಿಂದ ಹೇಳಿಕೊಳ್ಳುತ್ತ ಬಂದ ಅವರು ಹರೆಯಕ್ಕೆ ಕಾಲಿಟ್ಟ ಮೇಲೆ ಹೆಮ್ಮರವಾದ ಪ್ರೀತಿಯನ್ನು ಇಪ್ಪತ್ತು ವರ್ಷಗಳ ಕಾಲ ಪೋಷಿಸುತ್ತ ಬಂದರು ಎರಡೂ ಮನೆಯವರು.
ವಿಕ್ರಮನ ನಂತರ ಮತ್ತೆ ಮಗುವಾಗಲಿಲ್ಲ ಸುಮಿತ್ರಳಿಗೆ. ವಿಪರೀತ ಶಾಸ್ತ್ರ ಸಂಪ್ರದಾಯದ ಜಗದೀಶನ ಮನೆಗೆ ಸೊಸೆಯಾಗಿ ಬಂದವಳಿಗೆ ಹೊಂದಿಕೊಳ್ಳುವುದು ಸುಲಭವಾಗಿರಲಿಲ.್ಲ ಆದರೆ ಪ್ರತಿಯೊಂದಕ್ಕೂ ವೈಜ್ಞಾನಿಕ ವಿವರಣೆ ಹೇಳಿ “ಹಿರಿಯರ ಆಚರಣೆಯಲ್ಲಿ ತಪ್ಪಿಲ್ಲ ಸಂಪ್ರದಾಯ ಏನಾದರೂ ಅದು ಒಳ್ಳೆಯದಕ್ಕೆ ಕುರುಡು ಕುರುಡಾಗಿ ಫಾಲೋ ಮಾಡ್ಬರ‍್ದು ಅಷ್ಟೇ” ಎಂದು ಮಗುವಿಗೆ ತಿಳಿ ಹೇಳುವಂತೆ ಹೇಳುತ್ತಿದ್ದ ಜಗದೀಶನ ಮಾತುಗಳಿಗೆ ಸೋಲುತ್ತಿದ್ದಳು ಸುಮಿತ್ರ. ನಿಧಾನವಾಗಿ ಆ ಜೀವನಕ್ಕೆ ಹೊಂದಿಕೊಂಡಳು. ವಿಕ್ರಮನಿಗೆ ಹತ್ತು ತುಂಬುವಷ್ಟರಲ್ಲಿ ಹಳ್ಳಿಯಲ್ಲಿ ಜಮೀನು ನೋಡಿಕೊಳುತ್ತಿದ್ದ ರಂಗಜ್ಜ ಇನ್ನಿಲ್ಲವಾದಾಗ ಮನೆ ಜಮೀನು ನೋಡುವವರಲಿಲ್ಲ ಎಂದು ಅತ್ತೆ ಮಾವ ಹಳ್ಳಿಗೆ ವಾಸ್ತವ್ಯ ಬದಲಿಸಿದಾಗ ಮೂರೇ ಜನರ ಚಿಕ್ಕ ಸಂಸಾರವಾಗಿತ್ತು. ಜಗದೀಶ ಮಾತ್ರ ಅಪ್ಪನ ಹಾಗೆಯೇ ಶಾಸ್ತ್ರ, ಸಂಪ್ರದಾಯ ಆಚರಣೆ ವಿಷಯ ಬಂದರೆ ಯಾರ ಮಾತೂ ಕೇಳುವನಲ್ಲ. ಅಷ್ಟು ಕಟ್ಟು ನಿಟ್ಟು.
ಎರಡು ಬೀದಿಯಾಚೆ ಅಷ್ಟೆ ಇದ್ದ ಅಣ್ಣನ ಮನೆಗೆ ಆಗಾಗ ಹೋಗಿ ಬರುವುದು ಮಾತ್ರ ಸುಮಿತ್ರಳ ಅಚ್ಚುಮೆಚ್ಚಿನ ಹವ್ಯಾಸವಾಗಿತ್ತು.
ವಿಕ್ರಮ ಹುಟ್ಟಿದಾಗ ಅವಳಿಗಿಂತ ಹೆಚ್ಚಿಗೆ ಸಂಭ್ರಮಿಸಿದ್ದು ಅಣ್ಣ ಆನಂದ. ಅಳಿಯ ಹುಟ್ಟಿದಾನೆ ನೋಡು ನೀನು ಮಾತ್ರ ಹೆಣ್ಣೇ ಹರ‍್ಬೇಕು ಅವಳೇ ಸುಮಿತ್ರನ ಸೊಸೆ ಆಗ್ಬೇಕು ಎಂದು ಹೆಂಡತಿಯನ್ನು ಛೇಡಿಸುತ್ತಿದ್ದ. “ಅಪ್ಪಿ ತಪ್ಪಿ ಗಂಡಾದ್ರೆ ಇನ್ನೊಂದು ಹೆಣ್ಣು ಹೆರ‍್ತಾಳೆ ಬಿಡಿ ಸುಮಿತ್ರ ಎಂದು ಪ್ರತಿಯಾಗಿ ರೇಗಿಸುತ್ತಿದ್ದಳು ಶಾಂಭವಿ ಗಂಡನನ್ನು. ಅದೂ ಸರಿ.. ಅಲ್ವ ಸುಮಿ? ಎಂದು ಅಕ್ಕರೆಯಿಂದ ಅವಳ ತಲೆ ತಡವುತ್ತಿದ್ದ ಆನಂದ.
“ಮತ್ತೆ ನೀವಿಬ್ರೂ ಅತ್ತೆ, ಮಾವ ಆಗ್ತೀನಿ ಅದ್ರೆ ಎಷ್ಟು ಬೇಕಾದ್ರೂ ಹೆರ‍್ತೀನಿ” ಎನ್ನುತ್ತಾ ಎದೆ ಉಬ್ಬಿಸುತ್ತಿದ್ದಳು ಸುಮಿತ್ರ. ಮೂರು ವರ್ಷಗಳ ನಂತರ ಶಾಂಭವಿಗೆ ಹೆಣ್ಣೇ ಆದಾಗ ಹಿರಿ ಹಿರಿ ಹಿಗ್ಗಿದಳು ಸುಮಿತ್ರ.. ಎರಡೂ ಮನೆಗಳಲ್ಲಿ ಸಂತಸ ಇಮ್ಮಡಿಯಾಗಿತ್ತು.
ಹಬ್ಬ ಹರಿದಿನ ಯಾವುದೇ ಸಂಭ್ರಮವಾಗಲಿ ಎರಡೂ ಮನೆಯವರೂ ಸೇರಿಯೇ ಆಚರಣೆ. ಎರಡೂ ಸಂಸಾರ ಸೇರಲು ಕಾರಣವೇ ಬೇಕಿಲ್ಲ. ವಿಕ್ರಮ, ವೈಷ್ಣವಿಗೆ ಯಾರ ಅಂಕೆ ಶಂಕೆಯೂ ಇಲ್ಲ. ನಾಳೆ ಮದುವೆಯಾಗುವವರು, ಎಲ್ಲೆ ಮೀರಿ ಹೋಗುವಂತಹ ಸಂಸ್ಕಾರ ಅವರಿಗೆ ನಾವು ಕೊಟ್ಟಿಲ್ಲ ಎಂಬ ನಂಬಿಕೆಯಲ್ಲಿ ಅವರಿಬ್ಬರ ಒಡನಾಟಕ್ಕೆ ಯಾರೂ ಅಡ್ಡಿ ಮಾಡುತ್ತಲೇ ಇರಲಿಲ್ಲ.
“ಕಣ್ಣು ಕಣ್ಣು ಕಲೆತಾಗ…….” ರಾಜ್‌ಕುಮಾರ್ ಕಂಠದಲ್ಲಿ ಕಾರಿನ ಸ್ಟೀರಿಯೋದಲ್ಲಿ ತೇಲಿ ಬರುತ್ತಿದ್ದ ಇಂಪಾದ ಗೀತೆ ಇಬ್ಬರಿಗೂ ಹೇಳಿ ಮಾಡಿಸಿದಂತಿತ್ತು. ಎರಡು ದಿನದ ಪ್ರವಾಸಕ್ಕಾಗಿ ಅಂದು ಮಡಿಕೇರಿಗೆ ಹೊರಟಿತ್ತು ಅಣ್ಣ ತಂಗಿಯರ ಸಂಸಾರ. ಕಾರಿನಲಿ ್ಲನಗು, ಹಾಸ್ಯ, ಸಂತಸದ ಬುಗ್ಗೆ ಹರಡಿತ್ತು. ಒಬ್ಬರ ಪಕ್ಕ ಒಬ್ಬರು ಕುಳಿತಿದ್ದ ವಿಕ್ರಮ ವೈಷ್ಣವಿಗೆ ಯಾರ ಮಾತೂ ಕೇಳುತ್ತಿಲ್ಲ. ಹಾಡಿನ ಗುಂಗಿನಲ್ಲಿ ಒಬ್ಬರನೊಬ್ಬರು ನೋಡುತ್ತ ಮೈ ಮರೆತಿದ್ದರು. ವಿಕ್ರಮನಿಗೆ ಕೇಂದ್ರ ಸರ್ಕಾರದ ನೌಕರಿ ಸಿಕ್ಕ ಖುಷಿಯಲ್ಲಿ ಪ್ರವಾಸ ಹೊರಟಿದ್ದರು ಎಲ್ಲರೂ. ಮಡಿಕೇರಿಯ ಸುಂದರ ಪರಿಸರದಲ್ಲಿ, ತಂಪಾದ ವಾತಾವರಣದಲ್ಲಿ ಎಲ್ಲರೂ ಎರಡು ದಿನ ನಕ್ಕು ನಲಿದರು. ಎರಡನೇ ದಿನ ಒಂಕಾರೇಶ್ವರನ ದೇವಸ್ಥಾನ, ರಾಜ ಸೀಟ್, ನೋಡಿಕೊಂಡು ಅಬ್ಬಿ ಜಲಪಾತಕ್ಕೆ ಬಂದರು. ಜಲಪಾತದ ರಮಣೀಯತೆ ನೋಡಿ ವೈ಼಼ಷ್ಣವಿ ಮೈ ಮರೆತಿದ್ದಳು. ಜಲಪಾತದಿಂದ ಸಿಡಿಯುತ್ತಿದ್ದ ನೀರ ಹನಿಗಳು ಅವಳ ಮುಖದ ಮೇಲೆ ಬೆವರ ಹನಿಯಂತೆ ಮುತ್ತಾಗಿ ಕುಳಿತಿದ್ದವು. ತಂಗಾಳಿಗೆ ಹಾರುತ್ತಿದ್ದ ಮುಂಗುರುಳು, ಆನಂದ, ಅಚ್ಚರಿಯಿಂದ ಅರಳಿದ ಕಂಗಳು…ಅವಳನ್ನೆ ನೋಡುತ್ತಿದ್ದ ವಿಕ್ರಂ ಮೆಲ್ಲಗೆ ಅವಳ ಕಿವಿಯಲ್ಲಿ ವೈಷು..ನಾವು ಹನಿಮೂನ್ಗೆ ಇಲ್ಲಿಗೇ ಬರೋಣವಾ..ಎಂದುಸುರಿದಾಗ ಬೆಚ್ಚಿದ ವೈಷ್ಣವಿ..ತಿರುಗಿ ಅವನನ್ನು ನೋಡಿ ಸಾವರಿಸಿಕೊಂಡು..ಏ..ಹೋಗೋ..ಹನಿಮೂನ್‌ಗೆ ಸ್ವಿಟ್ಸರ್ ಲ್ಯಾಂಡ್‌ಗೋ, ಕಾಶ್ಮೀರಕ್ಕೋ ಕರ‍್ಕೊಂಡು ಹೋಗ್ತೀಯ ಅನ್ಕೊಂಡ್ರೆ ಮಡಿಕೇರಿಗೆ ಬರ‍್ಬೇಕಂತೆ..ಕಂಜೂಸ್..ಎಂದು ಹೆಬ್ಬೆರಳಾಡಿಸುತ್ತಾ ಅವನನ್ನ ಅಣಕಿಸಿ ಓಡಿದಳು. “ಏ ಏ ವೈಷು…ಸಿಲ್ಲಿ ಗರ‍್ಲ್” ಎಂದು ನಗುತ್ತಾ, ಎಲ್ಲರೂ ಇರುವಲ್ಲಿಗೆ ಬಂದು ಅವರ ಹರಟೆಗೆ ಬ್ರೇಕ್ ಹಾಕಿ ಮುಗೀತಾ ನಿಮ್ ಮಾತು ಕಥೆ ಎಲ್ಲಾ ..ಹೊರೊಡೊಣ ಘಂಟೆ ಐದಾಯ್ತು ರೂಮಿಗೆ ಹೋಗಿ ಪ್ಯಾಕ್ ಮಾಡಿ ಹೊರಡಕ್ಕೆ ಇನ್ನೂ ಒಂದು ಘಂಟೆ ಆಗುತ್ತೆ ರಾತ್ರಿ ಆದ್ರೆ ಡ್ರೆೈವಿಂಗ್ ಕಷ್ಟ ..ನಡೀರಿ ಎಂದು ಎಬ್ಬಿಸಿದ.
ಹೇಳಿದಂತೆ ಹೊರಡುವಷ್ಟರಲ್ಲಿ ಏಳರ ಹತ್ತಿರವಾಗಿತ್ತು. ಹೆಚ್ಚು ಕಡಿಮೆ ಐದು ಘಂಟೆ ಪ್ರಯಾಣ ದಾರಿಯಲ್ಲಿ ಎಲ್ಲಾದರೂ ಊಟ ಮಾಡೋಣ ಎಂದುಕೊಳ್ಳುತ್ತಾ ಹೊರಟರು.
ಅರ್ಧ ದಾರಿಯಲ್ಲಿ ಒಂಭತ್ತಾಗುತ್ತಾ ಬಂದಾಗ ಎರಡು ದಿನದಿಂದ ಅಲೆದು ಸುಸ್ತಾಗಿದ್ದ ಎಲ್ಲರಿಗೂ ತೂಕಡಿಕೆ ಆರಂಭವಾಯಿತು. ವಿಕ್ರಮ ವೈಷ್ಣವಿ ಮಾತ್ರ ಪಿಸುಮಾತಿನಲ್ಲಿ ಹರಟೆ ಮುಂದುವರೆಸಿದ್ದರು. ಎಷ್ಟೂ ಮಾತಾಡಿದರೂ ಮುಗಿಯದಂತೆ. ಇದ್ದಕ್ಕಿದ್ದಂತೆ ಕ್ರೀಂಚ್…. ಎಂಬ ಎಂಬ ದೊಡ್ಡ ಶಬ್ಧದೊಂದಿಗೆ ಬ್ರೇಕ್ ಹಾಕಿ ಕಾರು ನಿಲ್ಲಿಸಿದ ಡ್ರೆೈವರ್..ಹಿಂದೆ ಕುಳಿತವರು ಮುಂದಕ್ಕೆ ವಾಲಿ ಸೀಟ್ ಹಿಡಿದು ಸಾವರಿಸಿಕೊಂಡರೆ ಮುಂದೆ ಕುಳಿತ ವೈಷ್ಣವಿಯನ್ನು ಗಟ್ಟಿಯಾಗಿ ಹಿಡಿದುಕೊಂಡ ವಿಕ್ರಮ ತಾನು ಮಾತ್ರ ಮುಂದಕ್ಕೆ ಮುಗ್ಗರಿಸಿ ಗಾಜಿಗೆ ತಲೆ ಒಡೆಸಿಕೊಂಡ. ಗಾಭರಿಯಿಂದ ಎಲ್ಲರೂ ಅಯ್ಯೊ ವಿಕ್ಕಿ..ಎಂದು ಕೂಗಿದರು..ಏನಾಯ್ತು ಯಾಕೆ ಎನ್ನುತ್ತಾ ಹೊರಗೆ ನೋಡಿದಾಗ ಬೃಹದಾಕಾರದ ಲಾರಿಯೊಂದು ಇದ್ದಕ್ಕಿದ್ದಂತೆ ಬಲಗಡೆಗೆ ತಿರುಗಿ ತೀರ ಒಂದು ಅಡಿ ಅಂತರದಲ್ಲಿ ಮುಖಾಮುಖಿಯಾಗಿ ಕೆಟ್ಟ ಶಬ್ಧ ಮಾಡುತ್ತಾ ನಿಂತಿತ್ತು. ಇನ್ನೊಂದು ಕ್ಷಣವಾಗಿದ್ದರೆ ಕಾರಿಗೆ ಡಿಕ್ಕಿ ಹೊಡೆದು ಎಲ್ಲರನ್ನೂ ಬಲಿ ತೆಗೆದುಕೊಳ್ಳುತ್ತಿತ್ತು. ಆ ಕಲ್ಪನೆಯಿಂದಲೇ ಎಲ್ಲರ ಮೈ ನಡುಗಿತು. ಅತೀವ ಆಘಾತಕ್ಕೆ ಒಳಗಾದಂತೆ ಡ್ರೆೈವರ್ ಸ್ಟೀರೀಂಗ್ ಮೇಲೆ ತಲೆ ಇಟ್ಟು ಒಂದು ನಿಮಿಷ ಎರಡೂ ಕೈಯಿಂದ ಕಣ್ಣು ಮುಚ್ಚಿದ. ತಲೆ ಸವರಿಕೊಳ್ಳುತ್ತಾ ವಿಕ್ರಮ ಹೊರಗೆ ಇಳಿದು ಹೇ..ಕಣ್ ಕಾಣಲ್ವೇನೋ ರಾಸ್ಕಲ್ ..ಎಂದು ರಭಸದಿಂದ ಕೆಳಗೆ ಇಳಿದು ಬಂದ ಲಾರಿ ಡ್ರೆೈವರ‍್ನ ಕತ್ತಿನ ಪಟ್ಟಿ ಹಿಡಿದ…ಇತ್ತ ಕಡೆಯಿಂದ ಇಳಿದ ಕಾರ್ ಚಾಲಕ ಅವನನ್ನು ಹೊಡೆಯಲು ಕೈ ಎತ್ತಿದ. ಅವನಿಂದ ತಪ್ಪಿಸಿಕೊಂಡವನು ಕೈ ಮುಗಿಯುತ್ತ “ಮಾಫ್ ಕರೋ ಸಾಬ್ ಟೈರ್ ಬರ‍್ಸ್ಟ್ ಆಗಿ ಸಡನ್ ಆಗಿ ಗಾಡಿ ರೈಟ್ಗೆ ಬಂದ್ಬಿಡ್ತು..ಕಂಟ್ರೋಲ್ಗೆ ಸಿಗ್ಲಿಲ್ಲ..ಅಲ್ಲಾ ಕ ಶುಕರ್ ಹೈ..ಯಾರ್ಗೆ ಏನೂ ಆಗಿಲ್ಲ.”. ಮೇಲೆ ನೋಡುತ್ತ ಕೈ ಮುಗಿದ. ವಿಕ್ರಮ ಗಮನಿಸಿ ನೋಡಿದ..ಅವನು ಹೇಳಿದ್ದು ನಿಜ..ಲಾರಿಯ ಬಲಗಡೆ ಮುಂದಿನ ಚಕ್ರ ಒಡೆದು ಹೋಗಿತ್ತು….


ಕ್ಷಮಿಸ್ಬಿಡಿ ಸಾಬ್ ಮತ್ತೊಮ್ಮೆ ದೀನನಾಗಿ ಕೈ ಮುಗಿದ…. ಅವನದೇನೂ ತಪ್ಪಿಲ್ಲವೆಂದರಿತ ವಿಕ್ರಮ ಮತ್ತೇನೂ ಮಾತಾಡದೇ ಮತ್ತೆ ಒಳಗೆ ಬಂದು ಕೂತ..ಡ್ರೆೈವರ‍್ಗೂ ಬರುವಂತೆ ಸನ್ನೆ ಮಾಡಿದ… ಕೆಳಗಿಳಿದಿದ್ದ ಎಲ್ಲರನ್ನೂ ಬನ್ನಿ ಕೂತ್ಕೊಳಿ ಎನ್ನುತ್ತ ಕರೆದ. ಅಯ್ಯೋ ದೇವ್ರೇ ಬಲಗಡೆ ಎದ್ದಿರ‍್ಬೇಕು ಇವತ್ತು ಯಾರ ಪುಣ್ಯಾನೋ ಎನ್ನುತ್ತಾ ಇನ್ನೂ ಶಾಕಿನಿಂದ ಚೇತರಿಸಿಕೊಳ್ಳುತ್ತಿದ್ದ ಎಲ್ಲರೂ ಕಾಣದ ದೇವರಿಗೆ ಕೈ ಮುಗಿದರು. “ಎಲ್ಲಿ ಏನು ತಪ್ಪಾಯ್ತು..ಸರಿಯಾಗಿ ರಾಹುಕಾಲ ಎಲ್ಲಾ ನೋಡಿ ದೇವರಿಗೆ ಕೈ ಮುಗಿದೇ ಹೊರಟಿದ್ದೆವಲ್ಲ..”ಎನ್ನುತ್ತಾ ಜಗದೀಶ ಕೈ ಹಿಸುಕಿಕೊಂಡ. “ಅದಕ್ಕೆ ದೊಡ್ಡ ಅನಾಹುತ ತಪ್ಪಿತಲ್ಲ ಅಪ್ಪ” ಎನ್ನುತ್ತಾ ಸಮಾಧಾನ ಮಾಡಿದ ವಿಕ್ರಮ.. ಮುಂದಾಗಬಹುದಾಗಿದ್ದ ಅನಾಹುತವನ್ನು ನೆನೆ ನೆನೆದು ಅಳುತ್ತಿದ್ದ ವೈಷ್ಣವಿಯ ಕೈ ಹಿಡಿದು ಮೌನವಾಗಿ ಅವಳ ತಲೆಯನ್ನು ಎದೆಗೊರಗಿಸಿಕೊಂಡ. ಕೈ ಗಡಿಯಾರ ಒಂಭತ್ತು ತೋರಿಸುತ್ತಿತ್ತು. ಆಯ್ತು ಈಗ ಎಲ್ಲಾದ್ರೂ ಊಟ ಮಾಡೋಣ ತಾನೇ ಎನ್ನುತ್ತಾ ಪ್ರಶ್ನಾರ್ಥಕವಾಗಿ ಎಲ್ಲರ ಕಡೆ ನೋಡಿದ. ಬೇಡ ಮೊದ್ಲು ಮನೆಗೆ ಹೋಗಿ ದೇವರಿಗೆ ತುಪ್ಪದ ದೀಪ ಹಚ್ಚೋಣ ಎಂದಳು ಸುಮಿತ್ರ…ಹೌದು..ಮನೆಗೇ ಹೋಗ್ಬಿಡೋಣ..ಈಗ ಯಾರಿಗೂ ಹಸಿವಿಲ್ಲ…ಎನ್ನುತ್ತ ಎಲ್ಲರೂ ಸಮ್ಮತಿ ಸೂಚಿಸಿದರು.
ಹೊರೊಡೋಣ್ವಾ ನೀವು ಸ್ವಲ್ಪ ಸುಧಾರ‍್ಸಿಕೊಳ್ತೀರ….ಕಂಗೆಟ್ಟಂತೆ ಕೂತಿದ್ದ ಡ್ರೆೈವರ್ ಕಡೆ ನೋಡಿದ ವಿಕ್ರಮ.
ಹೊರೊಡೋಣ ಸರ್ ಎಂದವನೇ ಮೆಲ್ಲನೆ ಕಾರು ಚಲಿಸಿದ. ಎಲ್ಲರನ್ನೂ ಅವರವರ ಮನೆಗೆ ಇಳಿಸಿ ಹೊರಟಾಗ ಪುನರ‍್ಜನ್ಮ ಪಡೆದಂತೆ ಎಲ್ಲರೂ ನಿಡುಸುಯ್ದರು. ಆ ಘಟನೆಯ ಆಘಾತದಿಂದ ಹೊರಗೆ ಬರಲು ಎಲ್ಲರಿಗೂ ಸುಮಾರು ದಿನಗಳು ಹಿಡಿದವು.
ವಿಕ್ರಮ ಹೊಸ ಕೆಲಸ ರೂಢಿಸಿಕೊಂಡ. ವೈಷ್ಣವಿಗೆ ಸರ‍್ಕಾರಿ ನೌಕರಿ ಸಿಕ್ಕಾಗ ಕುಣಿ ಕುಣಿಯುತ್ತ ಸೇರಿಕೊಂಡಳು. ಪ್ರತಿದಿನ ಬೆಳಿಗ್ಗೆ ವಿಕ್ರಮ ಅವಳನ್ನು ಕಛೇರಿಗೆ ಬಿಟ್ಟು ಬರುವಾಗ ವಾಪಸ್ ಕರೆ ತರುತ್ತಿದ್ದ. ಈಗಲೇ ಗಂಡನ ಕರ್ತವ್ಯ ಶುರು ಮಾಡ್ಬಿಟ್ಟ ಎಂದು ಎಲ್ಲರೂ ರೇಗಿಸಿದರೆ ನಗುತ್ತ ಸುಮ್ಮನಾಗುತ್ತಿದ್ದ
ಹೀಗೆ ಒಂದು ಹಬ್ಬದ ದಿನ ಎಲ್ಲ ಸೇರಿದಾಗ ಸುಮಿತ್ರ “ಇನ್ನೇನು ವಿಕ್ರಮ್ ವೈಷ್ಣವಿ ಸೆಟಲ್ ಆದ್ರಲ್ಲ ಮದುವೆ ಮಾಡಿ ಮುಗಿಸ್ಬಿಡೋಣ ಮತ್ಯಾಕೆ ತಡ..ಅವರಿಬ್ಬರೂ ಪಾಪ ಯಾವಾಗ ಮದುವೆ ಆಗುತ್ತೋ ಅಂತ ಕಾಯ್ತಾ ಇದಾರೆ” ಎಂದಳು ಛೇಡಿಸುವಂತೆ. “ಅಯ್ಯೋ ಹೋಗಿ ಅತ್ತೆ” ಎನ್ನುತ್ತಾ ವೈಷ್ಣವಿ ನಾಚಿಕೆಯಿಂದ ಹುಸಿಮುನಿಸು ತೋರಿದಳು. ಜಗದೀಶ, ಆನಂದರೂ ಹೌದಲ್ಲ.. ಇದು ಸರಿಯಾದ ಸಮಯ..ವಾಲಗ ಊದಿಸಿಬಿಡೋಣ ಎಂದು ಸರ‍್ಥಿಸಿದರು. ಪ್ರೇಮಿಗಳಿಬ್ಬರೂ ಆಗಲೇ ತಮ್ಮ ವಿವಾಹದ ಕನಸು ಕಾಣತೊಡಗಿದರು. ಸರಿ ಶುಭಸ್ಯ ಶೀಘ್ರಂ ವೈಷ್ಣವಿ ಜಾತಕ ಇದ್ರೆ ಕೊಡಿ ನಾಳೇನೇ ಜೊಯಿಸರಿಗೆ ತೋರಿಸ್ಬಿಡೋಣ ಎಂದ ಜಗದೀಶ..
ಜಾತಕ ತೋರಿಸ್ಬೇಕಾ ಅವರಿಬ್ರೂ ಗಂಡ ಹೆಂಡತಿ ಅಂತ ಯಾವಾಗ್ಲೋ ತೀರ‍್ಮಾನ ಆಗಿದೆ ಈಗ ಜಾತಕ ಯಾಕೆ..?” ಎಂದಳು ಸುಮಿತ್ರ ಗಂಡನನ್ನು ತಡೆಯುತ್ತ…
ಅಯ್ಯೋ ಹಾಗಂದ್ರೆ ಹೇಗೆ..? ಜಾತಕ ತೋರಿಸದೆ ಮದುವೆ ಮಾಡಿದರೆ ನಾಳೆ ಅವರಿಬ್ಬರಿಗೇ ತೊಂದರೆ..ನಮ್ಮ ಮಕ್ಕಳ ಜಾತಕ ಚೆನ್ನಾಗೇ ಇರುತ್ತೆ ಅದೊಂದು ಮನಸಿಗೆ ಕೊರಗು ಯಾಕೆ ತೋರಿಸ್ಬಿಡೋಣ..ಎಂದ ಸಂಪ್ರದಾಯ ಬಿಡಲೊಪ್ಪದ ಜಗದೀಶ.
“ಹೌದೌದು ಅನುಮಾನ ಯಾಕೆ ತರ‍್ಸೋಣ ಅದ್ರಲ್ಲೇನು ತಪ್ಪು ಅವರವರ ನಂಬಿಕೆ ಅವರಿಗೆ” ತನಗೇನೂ ಅಭ್ಯಂತರ ಇಲ್ಲವೆನ್ನುವಂತೆ ಹೇಳಿದ ಆನಂದ.
ಸರಿ ಎಂದು ಶಾಂಭವಿ ವೈಷ್ಣವಿಯ ಜಾತಕ ತಂದು ಜಗದೀಶನ ಕೈಲಿಟ್ಟಳು. ನಾಳೆಯೇ ಮದುವೆ ಎಂಬಂತೆ ಎರಡೂ ಮನೆಯವರು ಸಂಭ್ರಮಿಸಿದರು.
ಮಂದೆ ನಡೆದದ್ದು ಯಾರೂ ಕನಸಿನಲ್ಲೂ ಊಹಿಸದ ಪ್ರಸಂಗ. ಜಗದೀಶ ತಾನು ತುಂಬಾ ನಂಬುವ ಜೋಯಿಸರ ಬಳಿ ಇಬ್ಬರ ಜಾತಕ ತೋರಿಸಿ ಮುಹೂರ್ತ ನೋಡಿಕೊಡಿ ಅಂದಾಗ ಅಳೆದೂ ಸುರಿದೂ ಜೋಯಿಸರು “ನಿಮಗೆ ಈ ಸಂಗತಿ ಹೇಳಲು ನನಗೆ ಬಾಯೇ ಬರುತ್ತಿಲ್ಲ..ನೀವುಗಳು ಈಗಾಗಲೇ ಅವರಿಬ್ಬರ ಮದುವೆಗೆೆ ಮಾನಸಿಕವಾಗಿ ತಯಾರಾಗಿದ್ದೀರಿ..ಈ ಜಾತಕಗಳು ಹೊಂದುವುದಿಲ್ಲ..ಬಹಳ ತೊಂದರೆ ಆಗುತ್ತೆ..ಅದರ ಸೂಚನೆ ನಿಮಗಾಗಲೇ ಸಿಕ್ಕಿರಬಹುದು..ಇತ್ತೀಚೆಗೆ ಏನಾದರೂ ದುರ್ಘಟನೆ ನಡೆಯಿತೇ ನಿಮ್ಮನೇಲಿ..?” ಏನೋ ಲೆಕ್ಕಾಚಾರ ಹಾಕುತ್ತಾ ಪ್ರಶ್ನಿಸಿದರು.


ನಂಬಲಸಾಧ್ಯವಾದಂತೆ ಜಗದೀಶ ಇದೇನು ಜೋಯಿಸರೇ ಹೀಗಂದರೆ..ದಯವಿಟ್ಟು ಇನ್ನೊಮ್ಮೆ ನೋಡಿ..ಮಕ್ಕಳು ತುಂಬಾ ಆಸೆ ಇಟ್ಕೊಂಡಿದಾರೆ…ನಾವುಗಳು ಅಷ್ಟೇ..ನಡುಗುವ ಕಂಠದಲ್ಲಿ ಹೇಳಿದ ಜಗದೀಶ.
ನಾನು ಕೇಳಿದ ಪ್ರಶ್ನೆಗೆ ಉತ್ತರ ಕೊಡಲಿಲ್ಲ ನೀವು …ಕನ್ನಡಕದ ಅಂಚಿನಿಂದ ಅವನನ್ನೇ ಮತ್ತೊಮ್ಮೆ ದಿಟ್ಟಿಸಿದರು ಜೋಯಿಸರು.
ದುರ್ಘಟನೆ…? ತಟ್ಟನೆ ಅಂದು ಕೂದಲೆಳೆಯಲ್ಲಿ ತಪ್ಪಿದ ಅಪಘಾತದ ನೆನಪಾಗಿ ಜಗದೀಶ ಅವರಿಗೆ ಆ ಘಟನೆಯ ವಿವರ ನೀಡಿದ.
ನೋಡಿದ್ರಾ..ಭಗವಂತನ ಸೂಚನೆ ಅದು..ನೀವು ಎಚ್ಚೆತ್ತುಕೊಳ್ಳಿ ಅಂತ..ಇದರ ಮೇಲೆ ನಿಮ್ಮ ಧೈರ್ಯ..ಕೈ ಚೆಲ್ಲಿದರು ಜೋಯಿಸರು.
ತೊಂದರೆ ಅಂದ್ರೆ ಏನು..ಏನಾದ್ರೂ ಶಾಂತಿ…? ಅನುಮಾನದಿಂದ ಹೇಗಾದರೂ ಅವರಿಂದ ಸಮಾಧಾನ ಸಿಗಬಹುದು ಎನ್ನುವ ಆಸೆಯಲ್ಲಿ ತಡವರಿಸಿದ.
ನನ್ನ ಪ್ರಕಾರ ಯಾವುದೂ ಪರಿಹಾರ ಇಲ್ಲ…ತೊಂದರೆ ಬಗ್ಗೆ ತಿಳಿದುಕೊಳ್ದಿದ್ರೆ ಒಳ್ಳೇದು..ಪಾಪ ಆ ಹೆಣ್ಣು ಮಗು ಮನಸ್ಸು ಒಡೆಯುತ್ತೆ..ಒಟ್ಟಿನಲ್ಲಿ ಅವರಿಬ್ಬರೂ ಒಟ್ಟಿಗೇ ಬಾಳೋದು ಬರೆದಿಲ್ಲ ಭಗವಂತ ಅಷ್ಟೇ” ಎನ್ನುತ್ತಾ ಎದ್ದರು ಇನ್ನು ಚರ್ಚೆಯ ಅವಶ್ಯಕತೆ ಇಲ್ಲ ಎಂಬಂತೆ.
ಚೈತನ್ಯವೆಲ್ಲ ಸೋರಿ ಹೋದಂತೆ ಜಗದೀಶ ಜಾತಕ ಹಿಡಿದು ಮನೆಗೆ ಬಂದು ಕುಸಿದು ತಲೆಯ ಮೇಲೆ ಕೈ ಹೊತ್ತು ಕುಳಿತ. ಅವನಿಗರಿವಿಲ್ಲದೇ ಕಣ್ಣು ಒದ್ದೆಯಾಗಿತ್ತು. ಯಾರಿಗೆ ಏನು.. ಹೇಗೆ ಹೇಳುವುದು..ಅತಿಯಾದ ಆಸೆಪಟ್ಟು ನಾವು ಆ ಮಕ್ಕಳ ಮನಸ್ಸಿಗೆ ನೋವು ಕೊಟ್ಟು ಬಿಟ್ಟೆವೇ…ಅವರ ಆಸೆಗೆ ನೀರೆರೆದು ತಪ್ಪು ಮಾಡಿದೆವೇ…ಜಾತಕದ ವಿಷಯದ ಬಗ್ಗೆ ಯೋಚಿಸದೇ ದುಡುಕಿದೆವೇ..?
ಇದುವರೆಗೂ ಯಾವುದೆ ವಿಷಯ ಸಣ್ಣದಿರಲಿ ದೊಡ್ಡದಿರಲಿ ಅವರ ಸಲಹೆ ಸೂಚನೆಯನ್ನೇ ಅಪ್ಪನ ಕಾಲದಿಂದ ಪಾಲಿಸುತ್ತಾ ಬಂದಿರುವ ತಾವು ಈಗ ಅವರು ಹೇಳಿದ ವಿಷಯವನ್ನು ನಿರ್ಲಕ್ಷಿಸಲು ಸಾಧ್ಯವೇ….? ಕೊನೆ ಮೊದಲಿಲ್ಲದ ಯೋಚನೆಯಲ್ಲಿ ಏನೂ ಮಾಡಲೂ ತೋಚದೇ ಕಂಗೆಟ್ಟ…
ಅವನು ಬರುವುದನ್ನೇ ಉತ್ಸಾಹದಿಂದ ಕಾಯುತ್ತಿದ್ದ ಸುಮಿತ್ರ. .. ಅವನ ಬಾಡಿದ ಮುಖ ನೋಡಿ ದೇವರೇ ಯಾವುದೇ ಕೆಟ್ಟ ಸುದ್ದಿ ಇಲ್ಲದಿರಲಿ ಎಂದು ಕೈ ಮಗಿಯುತ್ತ “ಏನಾಯ್ತು…ಜೋಯಿಸ್ರು ಏನಂದ್ರು…..? ಎಂದಳು ಆತಂಕದಿಂದ..
ಸ್ವಲ್ಪ ಇರು ಎನ್ನುವಂತೆ ಕೈ ಸನ್ನೆ ಮಾಡಿದ ಜಗದೀಶ “ನೀರು…” ಎಂದ.
ಸ್ವಲ್ಪ ಸುಧಾರಿಸಿಕೊಂಡ ಜಗದೀಶ ಎಲ್ಲವನ್ನೂ ವಿವರಿಸಿ ಈ ಮದುವೆ ಸಾಧ್ಯವಿಲ್ಲ ಸುಮಿತ್ರ ಎಂದು ಕೈ ಆಡಿಸಿದ.
ಅವನ ಮಾತನ್ನು ಅರಗಿಸಿಕೊಳ್ಳಲು ಅಸಾಧ್ಯವೆನಿಸಿ ಸುಮಿತ್ರ ಕುಸಿದು ಕುಳಿತಳು. “ಅಲ್ಲಾಂದ್ರೆ..ಹೀಗನ್ಬಿಟ್ರೆ ಹೇಗೆ..ಆ ಮಕ್ಕಳ ಗತಿ.?.ಹುಟ್ಟಿದಾಗಿಂದ ಅವ್ರಿಬ್ರನ್ನ ಗಂಡ ಹೆಂಡ್ತಿ ಅಂತ ಕರೆದ್ಬಿಟ್ಟು ಈಗ..? ನಾವ್ಯಾಕೆ ಜಾತಕದ ಬಗ್ಗೆ ಅಷ್ಟು ತಲೆ ಕೆಡಿಸ್ಕೋಬೇಕು ನಮ್ ಮಕ್ಕಳು ನಾವು ಜೋಪಾನವಾಗಿ ನೋಡ್ಕೊಳೋಣ ಏನೂ ಆಗಲ್ಲ ದಯವಿಟ್ಟು ನೀವು ಇಷ್ಟು ಖಡಾಖಂಡಿತವಾಗಿ ಹೇಳ್ಬೇಡಿ…” ಅಂಗಲಾಚುವಂತೆ ಕೇಳಿದಳು.
ಗೊತ್ತಿದ್ದೂ ಗೊತ್ತಿದ್ದೂ ಮಕ್ಕಳನ್ನು ಹಳ್ಳಕ್ಕೆ ತಳ್ಬೇಕಾ ಏನ್ ಮಾತೂಂತ ಆಡ್ತೀಯ ಸುಮಿತ್ರ…? ದೃಢ ನಿರ‍್ಧಾರ ಮಾಡಿದವನಂತೆ ಹೇಳಿದ
ಶಾಸ್ತ್ರ ಸಂಪ್ರದಾಯ ಬಿಟ್ಟು ಒಂದಿಂಚೂ ಆಚೀಚೆ ಅಲ್ಲಾಡದ ಅವರ ಮನೆಯ ಆಚಾರದ ಪರಿಚಯವಿದ್ದ ಸುಮಿತ್ರ ಮುಂದೆ ಎದುರಿಸಬೇಕಾದ ಸನ್ನಿವೇಷ, ಎಲ್ಲರಿಗಾಗಬಹುದಾದ ನೋವು, ಸಂಕಟ ನೆನೆದು ದಿಕ್ಕು ತೋಚದೇ ಒತ್ತರಿಸಿ ಬರುತ್ತಿದ್ದ ಅಳು ತಡೆಯುತ್ತ ಹಾಗೆಯೇ ಬೊಂಬೆಯಂತೆ ಎಷ್ಟೋ ಹೊತ್ತು ಗರ ಬಡಿದಂತೆ ಕುಳಿತಿದ್ದಳು.
ಆ ನಂತರ ಸುಮಿತ್ರ ಅಣ್ಣನಿಗಾಗಲಿ ವೈಷ್ಣವಿಗಾಗಲಿ ಏನೂ ಹೇಳುವ ಧ್ಯರ್ಯ ಸಾಲದೇ ನಡುಗುವ ಕೈಗಳಿಂದ ಅಣ್ಣನಿಗೆ ಒಂದು ಧೀರ್ಘವಾದ ಪತ್ರ ಬರೆದಳು. ಆನಂದನ ಮನೆಗೆ ಹೋಗಿ “ಅಣ್ಣ ….ಎನ್ನುತ್ತಾ ಬಾಗಿಲಲ್ಲೆ ನಿಂತಳು. ಯಾರು….ಎಂದು ಹೊರಗೆ ಬಂದ ಆನಂದ “ ಅರೆ ಸುಮಿ ಯಾಕಮ್ಮ ಬಾಗಿಲ ಹತ್ರ ನಿಂತೆ ಒಳಗೆ ಬಾ….ಎಂದೂ ಕಂಡರಿಯದ ಅವಳ ಪರಿಗೆ ಅಚ್ಚರಿಯಿಂದ ಕೇಳಿದ…
“ಇಲ್ಲ ಅಣ್ಣ ಇದು ತೊಗೊ ನಾನು ಆಮೇಲೆ ಬರ‍್ತೀನಿ “ಎನ್ನುತ್ತಾ ಲಕೋಟೆಗೆ ಹಾಕಿದ್ದ ಪತ್ರ ಅವನ ಮುಂದೆ ಹಿಡಿದಳು. ಇದೇನಿದು ತಮಾಷೆ..ಎನ್ನುತ್ತಾ ಕೈ ಚಾಚಿದ ಆನಂದನ ಕೈಗೆ ಪತ್ರ ತಾಗಿಸಿ ಬಿರಬಿರನೆ ಹಿಂದಿರುಗಿ ನೋಡದೇ ಹೊರಟೇಬಿಟ್ಟಳು. ಗರ ಬಡಿದಂತೆ ನಿಂತಿದ್ದ ಆನಂದ ಸಾವರಿಸಿಕೊಂಡು ಪತ್ರ ಬಿಡಿಸಿದ. ಓದುತ್ತಾ ಹೋದಂತೆ ಮೈ ನರವೆಲ್ಲ ಹಿಂಡಿದಂತಾಗಿ ಅಲ್ಲಿಯೇ ಕುಸಿದು ಕುಳಿತ. ಒಳಗಿಂದ ಬಂದ ಶಾಂಭವಿ ಯಾರೊ ಬಂದ್ಹಾಗಿತ್ತು..ಎಂದವಳು ಅವನ ಸ್ಥಿತಿ ನೋಡಿ ಇದೇನಾಯ್ತು ಎಂದವಳಿಗೆ ಆನಂದ ಪತ್ರ ರವಾನಿಸಿದ.
ಹೇಳುವ ಕೇಳುವ ಮಾತಾಡುವ ಎಲ್ಲ ಬಾಗಿಲುಗಳೂ ಮುಚ್ಚಾಗಿದೆ ಎಂಬ ಸತ್ಯ ಎರಡೂ ಕುಟುಂಬಕ್ಕೆ ಅರಿವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಹೃದಯ ಒಡೆದ ವೈಷ್ಣವಿ , ವಿಕ್ರಮ ಕಹಿ ನುಂಗಿದ ವಿಷಕಂಠನಂತೆ ಮೌನವಾಗಿ ಎಲ್ಲವನ್ನೂ ಸಹಿಸಿದರು.
ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಜಗದೀಶ ಆದಷ್ಟು ಬೇಗ ಮಗನ ಮದುವೆ ಮಾಡಿ ಮುಗಿಸಬೇಕೆಂದು ಓಡಾಡತೊಡಗಿದ. ನಾಲ್ಕಾರು ಜಾತಕ ಕೊಂಡು ಹೋಗಿ ಜೋಯಿಸರೊಂದಿಗೆ ಚರ‍್ಚಿಸಿ ಒಂದನ್ನು ಅಂತಿಮವಾಗಿ ತೀರ‍್ಮಾನಿಸಿ ವಿಕ್ರಮನಿಗೆ ತಿಳಿಸಿದಾಗ ವೈಷು ತನ್ನ ಬಾಳಿನಲ್ಲಿ ಇಲ್ಲ ಅಂದ್ಮೇಲೆ ಯಾರಾದ್ರೆ ಏನು ಎಂಬ ವೈರಾಗ್ಯ ತಲುಪಿದ್ದ ವಿಕ್ರಮ ಕನಿಷ್ಟ ಪಕ್ಷ ಅಪ್ಪನಾದರೂ ಖುಶಿಯಾಗಿರಲಿ ಎಂಬಂತೆ “ನಿಮ್ಮಿಷ್ಟ ಅಪ್ಪ ಎಂದುಬಿಟ್ಟ. ತಿಂಗಳೊಪ್ಪತ್ತಿಗೆ ಅವನ ಮಡದಿಯಾಗಿ ವೀಣಾ ಅವನ ಮನೆ ಪ್ರವೇಶಿಸಿದಳು. ಪೋಸ್ಟಿನಲ್ಲಿ ಬಂದ ಆಹ್ವಾನ ಪತ್ರಿಕೆಯನ್ನು ಬಿಡಿಸಿ ಕೂಡ ನೋಡಲಿಲ್ಲ ಆನಂದನ ಮನೆಯವರು. ಒಮ್ಮೊಮ್ಮೆ ವೈಷ್ಣವಿಗೆ ಸತ್ತು ಹೋಗಲೇ ಅನಿಸುತಿತ್ತು. ಇಲ್ಲ ಜೀವನವನ್ನು ಅತಿಯಾಗಿ ಪ್ರೀತಿಸುತ್ತಿದ್ದ ಅವಳಿಗೆ ಸಾಯುವ ಮನಸ್ಸಿರಲಿಲ್ಲ. ಆದರೆ ಬದುಕಿನಲ್ಲಿ ಉಳಿದಿದ್ದಾದರೂ ಏನು ಅನಿಸುತ್ತಿದ್ದಿದ್ದು ನಿಜ. ಹಾಗೆಯೇ ಎಲ್ಲಾ ಬಿಟ್ಟು ಎಲ್ಲರಿಂದ ದೂರ ಹೋಗಬೇಕು ಅನಿಸಿದ್ದೂ ಸತ್ಯ. ಅವಳ ಮನ ಅರಿತವನಂತೆ ಭಗವಂತ ಅವಳಿಗಾಗಿ ಒಂದು ಅವಕಾಶ ಕಲ್ಪಿಸಿದ. ಎಷ್ಟು ದಿನ ಹೀಗೇ ಇರುವುದು. ಮಗಳಿಗೆ ಆದಷ್ಟು ಈ ವಾತಾವರಣದಿಂದ ಮುಕ್ತಿ ಬೇಕು ಎಂದು ಓಡಾಡುತ್ತಿದ್ದ ಆನಂದನ ಪ್ರಯತ್ನಕ್ಕೆ ಫಲ ಸಿಕ್ಕಿತು. ದೂರದ ದೆಹಲಿಯಲ್ಲಿ ದೊಡ್ಡ ಕೆಲಸದಲ್ಲಿದ್ದ ಅರ್ಜುನನ ಸಂಬಂಧ ಕುದುರಿತು. ಆದರೆ ಅಷ್ಟು ದೂರ ಮಗಳನ್ನು ಕಳಿಸುವುದೋ ಬೇಡವೋ ಎಂದು ಅನುಮಾನಿಸುತ್ತಿದ್ದ ಅಪ್ಪ ಅಮ್ಮನಿಗೆ ತಾನೇ ಸಮಾಧಾನ ಹೇಳಿದ ವೈಷ್ಣವಿ ಹಿಂದೆ ಮುಂದೆ ಯೋಚಿಸದೇ ತಾನು ಅವನನ್ನೇ ಮದುವೆಯಾಗುತ್ತೇನೆಂದು ಹಠ ಹಿಡಿದಳು. ವಿಕ್ರಮನಿಂದ ಅವನ ನೆನಪಿನಿಂದ ಈ ಊರಿನಿಂದ ದೂರ ಹೋಗುವುದಷ್ಟೇ ಸಧ್ಯಕ್ಕೆ ಅವಳ ಉದ್ದೇಶವಾಗಿತ್ತು. ಅವಳ ಅಂದಿನ ನಿರ‍್ಧಾರಕ್ಕೆ ಪಶ್ಚಾತ್ತಾಪ ಪಡುವ ಪ್ರಮೇಯ ಮುಂದೆಂದೂ ಬರಲಿಲ್ಲ.
ಅರ್ಜುನ ಅರುಂಧತಿ ಸದಾಶಿವ ದಂಪತಿಗಳ ಒಬ್ಬನೇ ಮಗ. ಹೆಣ್ಣು ಮಗು ಬೇಕೆಂಬ ಅವನ ಹೆತ್ತವರ ಹಂಬಲ ಈಡೇರಲೇ ಇಲ್ಲ. ಅರ್ಜುನನ ನಂತರ ಎರಡು ಬಾರಿ ಗರ‍್ಭಪಾತವಾದಮೇಲೆ ವೈದ್ಯರ ಸಲಹೆಯ ಮೇರೆಗೆ ಎರಡನೇ ಮಗುವಿನ ಆಸೆ ಬಿಟ್ಟು ತಮ್ಮೆಲ್ಲಾ ಪ್ರೀತಿಯನ್ನು ಮಗನಿಗೆ ಧಾರೆಯೆರೆದರು. ಮೃದು ಸ್ವಭಾವದ ಅಪ್ಪ, ಅಮ್ಮನ ಪ್ರೀತಿಯಲ್ಲಿ ಹೆಂಗರುಳಿನ, ಸೌಮ್ಯ ವ್ಯಕ್ತಿಯಾಗಿ ಬೆಳೆದ ಅರ‍್ಜುನ ತನ್ನ ಬಾಳಿಗೆ ಬಂದದ್ದು ತನ್ನ ಅದೃಷ್ಟ ಎಂದುಕೊಳ್ಳುವಷ್ಟರ ಮಟ್ಟಿಗೆ ವೈಷ್ಣವಿ ಅವನನ್ನು ಹಚ್ಚಿಕೊಂಡಳು. ಎಲ್ಲವನ್ನೂ ಮರೆತು ಅವನ ನಿಷ್ಕಲ್ಮಷ ಪ್ರೀತಿಗೆ ತನ್ನನ್ನು ತೆರೆದುಕೊಂಡಳು. ಕನ್ನಿಕ ಹುಟ್ಟಿದಾಗ ಅಜ್ಜಿ ತಾತನಿಗಾದ ಸಂಭ್ರಮಕ್ಕೆ ಮಿತಿಯೇ ಇಲ್ಲ. ಒಂದು ಹೆಣ್ನು ಮಗುವಿಗಾಗಿ ಆಸೆ ಪಟ್ಟ ಜೀವಗಳಿಗೆ ಸೊಸೆಯ ರೂಪದಲ್ಲಿ ಮತ್ತು ಮೊಮ್ಮಗುವಿನ ರೂಪದಲ್ಲಿ ಎರೆಡೆರಡು ಹೆಣ್ನು ಮಕ್ಕಳು ಮನೆಯನ್ನು ತುಂಬಿದಾಗ ತುಂಬು ಹೃದಯದಿಂದ ದೇವರಿಗೆ ಕೃತಜ್ನತೆ ಸಲ್ಲಿಸಿದ್ದರು. ಹೆಂಡತಿ ಮಗಳ ಮೇಲೆ ಅರ್ಜುನ ಪ್ರೀತಿ ವರ್ಷಧಾರೆಯನ್ನೆ ಹರಿಸುತ್ತಿದ್ದ. ಕೈ ತುಂಬಾ ಸಂಪಾದಿಸುತ್ತಿದ್ದ ಅರ್ಜುನ ಮನೆಯಲ್ಲಿ ಯಾವುದಕ್ಕೂ ಕೊರತೆ ಮಾಡಿರಲಿಲ್ಲ. ಒಬ್ಬಳೇ ಮಗಳಾದ ಕನ್ನಿಕಾಳನ್ನು ಎಲ್ಲರೂ ಕಣ್ಣಲ್ಲಿ ಕಣ್ನಿಟ್ಟು ಕಾಯುತ್ತಿದ್ದರು.
ಅರ್ಜುನ್ ಮಗಳಿಗೆ ೫ ತುಂಬುತ್ತಿದ್ದಂತೆ ಅವಳದೇ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ತಿಂಗಳಿಗೊಮ್ಮೆ ಖಾತೆಗೆ ಸಾಕಷ್ಡು ಹಣ ಹೂಡಿಕೆ ಮಾಡುತ್ತಿದ್ದ. ವೈಷ್ಣವಿ ಈಗಲೇ ಏಕೆ ಅವಳ ಹೆಸರಿನಲ್ಲಿ ಅಕೌಂಟ್ ಬೇಕಿತ್ತು ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಳು. ನಾವೆಲ್ಲಾ ಇಲ್ಲವೇ ಅವಳನ್ನು ನೋಡಿಕೊಳ್ಳಲು ಈ ವಯಸ್ಸಿನಲ್ಲಿ ಏಕೆ ಅವಳ ಹೆಸರಿನಲ್ಲಿ ವ್ಯವಹಾರ ಎಂದಾಗ ಅರೆ ಅದಕ್ಕೆಲ್ಲ್ಲ ವಯಸ್ಸೇನು..ಹುಟ್ಟಿದ ಮಗುವಿಗೆ ಅಕೌಂಟ್ ಮಾಡುವ ಕಾಲ ಇದು ಯಾರಿಗೆ ಗೊತ್ತು ಯಾವಾಗ ಏನು ಎಂದು ಅಕಸ್ಮಾತ್ ನನಗೆ ನಾಳೆ ಏನಾದ್ರೂ …ಅವನ ಬಾಯಿ ಮುಚ್ಚಿ ಸುಮ್ನಿರಿ ಸಾಕು ಎನ್ನುತ್ತಾ ಮಾತು ಮುಗಿಸಿದ್ದಳು. ಅವನಿಗೆ ಮುಂಚೆಯೇ ತನ್ನ ಅಕಾಲ ಸಾವಿನ ಬಗ್ಗೆ ಮಾಹಿತಿ ಇತ್ತೋ ಎಂಬಂತೆ ಎಲ್ಲರ ಜೀವನಕ್ಕೂ ಸಾಕಷ್ಟು ಅನುಕೂಲ ಮಾಡಿಯೇ ಎಲ್ಲರನ್ನೂ ಬಿಟ್ಟು ಹೊಗಿದ್ದ. ವಿಮಾನದ ಅಪಘಾತದಲ್ಲಿ ಜೀವ ಕಳೆದುಕೊಂಡವರಿಗೆ ಸಾಕಷ್ಡು ಪರಿಹಾರ ದೊರಕ್ಕಿದ್ದಲ್ಲದೇ ಅರ್ಜುನ ತನ್ನ ಹೆಸರಿನಲ್ಲಿ ಮಾಡಿದ್ದ ೧೦ ಕೋಟಿ ಇನ್ಶೂರೆನ್ಸ್ ಸಹ ಬಂದಿತ್ತು. ಮಗನ ಮುಂದಾಲೋಚನೆಗೆ ಖುಷಿ ಪಡಬೇಕೋ ಬಾಳಿ ಬದುಕುವ ಕಾಲಕ್ಕೆ ಅಗಲಿದ ಜೀವಕ್ಕೆ ಸಂಕಟ ಪಡಬೇಕೋ ತಿಳಿಯದೇ ಹಿರಿಯ ಜೀವಗಳು ಒದ್ದಾಡಿದ್ದೆಷ್ಟೋ.
ಇತ್ತ ವಿಕ್ರಮ ವೀಣಾ ಸಂಸಾರ ಶುರುವಾಗುವ ಮೊದಲೇ ಮುಗಿದು ಹೊಗಿತ್ತು. ಸರ‍್ಕಾರಿ ನೌಕರಿ ಮಾಡುತ್ತಿದ್ದ ವೀಣಾ ಪ್ರತಿದಿನ ಬಸ್ಸಿನಲ್ಲಿ ಕಛೇರಿಗೆ ಹೋಗಿ ಬಂದು ಮಾಡುತ್ತಿದ್ದಳು. ಯೌವಾಗಲೂ ಆತುರದಲ್ಲೇ ಬಸ್ ಹತ್ತುತ್ತಿದ್ದ ವೀಣಾ ಒಂದು ದಿನ ಇನ್ನೇನು ಹೊರಡಲು ತಯಾರಾಗಿ ಚಲಿಸಲು ಶುರುವಾದ ಬಸ್ ಹತ್ತಲು ಹೋಗಿ ಆಯ ತಪ್ಪಿ ಕೆಳಗೆ ಬಿದ್ದು ಚಕ್ರ ಅವಳ ಮೇಲೆ ಹರಿದು ದಾರುಣ ಸಾವನ್ನಪ್ಪಿದ್ದಳು. ಯಾರೆಷ್ಟೇ ಹೇಳಿದರೂ ಮತ್ತೊಂದು ಮದುವೆಯಾಗದೆ ವಿರಾಗಿಯಂತೆ ಜೀವನ ಸವೆಸುತ್ತಿದ್ದ ವಿಕ್ರಂ.
ಈ ವಿಷಯ ಯಾವುದೂ ಅರಿಯದ ವೈಷ್ಣವಿಗೆ ನಿರ್ವಿಕಾರವಾಗಿ ಏನೂ ಆಗದವನಂತೆ ಎಲ್ಲಾ ಹೇಳಿ ಮುಗಿಸಿದಾಗ ಆಕೆ ಗರ ಬಡಿದವಳಂತೆ ಕುಳಿತಳು. ತಾನೇ ಎಲ್ಲವನ್ನು ನುಂಗಿಕೊಂಡು ಹೊಸ ಜೀವನಕ್ಕೆ ಹೊಂದಿಕೊಂಡೆ ತನ್ನ ದುಃಖವೇ ಹೆಚ್ಚು ಎಂದುಕೊಂಡವಳಿಗೆ ವಿಕ್ರಮನ ಜೀವನದ ದುರಂತ ಕೇಳಿ ಮಾತೇ ಹೊರಡಲಿಲ್ಲ. ನಿನ್ನ ಜಾತಕ ನನಗೆ ಹೊಂದಲಿಲ್ಲ ಅಂದ ಜೋಯಿಸರಿಗೆ ನನ್ನನ್ನು ಮದುವೆಯಾದರೆ ವೀಣಾಳ ಬಲಿಯಾಗುತ್ತೆ ಎನ್ನುವ ಸತ್ಯ ತಿಳಿಯಲಿಲ್ಲವೇ? ಯಾರನ್ನು ಯಾವುದನ್ನು ನಂಬುವುದು ವೈಷು..ಜಾತಕ ನೋಡುವ ಮೊದಲು ಗಂಡು ಹೆಣ್ಣಿನ ಬ್ಲಡ್ ಮ್ಯಾಚ್ ಮಾಡಿ ಮದುವೆ ಮಾಡಬೇಕು ಎನ್ನುವ ರೂಲ್ ಬರಬೇಕು ಅನ್ಸುತ್ತೆ. ಹಾಗಂತ ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ನನಗೆ ಅಪನಂಬಿಕೆ ಇಲ್ಲಾ..ಅದಕ್ಕೆ ಅದರದೇ ಆದ ಪ್ರಾಮುಖ್ಯತೆ ಇದೆ. ಎಲ್ಲವನ್ನು ಮೀರಿದ ಹಣೆಬರಹ ಇದೆಯಲ್ಲಾ ಅದು ಯಾರಿಗೂ ಕಾಣದ ಸತ್ಯ. ಅಪ್ಪ ಅಂತು ಬದುಕಿರುವವರೆಗೂ ನನ್ನಿಂದ ನಿನ್ನ ಬಾಳು ಹಾಳಾಯಿತು. ಎಂದೂ ಜೋಯಿಸರು ಹೇಳಿದ ಭವಿಷ್ಯ ಸುಳ್ಳಾಗಿಲ್ಲ ಇದು ಹೇಗೆ ಸಾಧ್ಯ ನಿಮ್ಮತ್ತೆ ಮನೆಯವರು ನಮಗೆ ಮೋಸ ಮಾಡಿದರು ಸುಳ್ಳು ಜಾತಕ ಕೊಟ್ಟು ನಮಗೆ ಮೋಸ ಮಾಡಿದರು ಎಂದು ಇದ್ದಷ್ಟೂ ದಿನ ಅವರಿಗೆ ಹಿಡಿ ಶಾಪ ಹಾಕುತ್ತಾ ಅವರ ಸಂಪರ್ಕನ್ನೂ ಕಡಿದುಕೊಂಡು ಕೊರಗಿ ಸತ್ತರು. ಯಾವುದಕ್ಕೂ ಪ್ರತಿಕ್ರಿಯಿಸುವ ಮನಸ್ಥಿತಿಯಲ್ಲಿ ಇಲ್ಲದ ನಾನು ಹೀಗೆ ಒಬ್ಬನೇ ಆರಾಮಾಗಿ ಇದ್ದೀನಿ ನೋಡು ಎಂದು ವಿಷಣ್ಣ ನಗೆ ನಕ್ಕ ವಿಕ್ರಮ್.
ಏನೂ ಮಾತನಾಡಲು ತೋಚದೇ ವೈಷ್ಣವಿ ಸಮಾಧಾನ ಮಾಡುವಂತೆ ಅವನ ಕೈ ಹಿಡಿದು ಒಮ್ಮೆ ಅದುಮಿದಳು.
ಅವರನ್ನು ಒಮ್ಮೆ ಗಮನಿಸಿದ ಕನ್ನಿಕ ಮಮ್ಮಿಯ ಕ್ಲೋಸ್ ಫ್ರೆಂಡ್ ತುಂಬಾ ಕ್ಲೋಸ್ ಫ್ರೆಂಡ್ ರ‍್ಬೇಕು ಈ ಅಂಕಲ್ ಎಂದುಕೊಂಡಳು.
ಸರಿ ನನ್ ವಿಷ್ಯ ಹಾಗರ‍್ಲಿ ನೀನು ಹೇಳು ಸ್ವಲ್ಪ ದಿನ ರ‍್ತೀಯ ವಿಕ್ರಮನ ಪ್ರಶ್ನೆಗೆ
ಹುಂ ತುಂಬಾ ದಿನ ಆಯ್ತು ಇಲ್ಲಿ ಬಂದು ಒಂದು ವಾರ ಇರಣ ಅನ್ಕೊಂಡಿದ್ದೀನಿ ..ಸರಿ ಊಟಕ್ಕೆ ಹೋಗೋಣ್ವ ಎನ್ನುತ ಎದ್ದಳು ವೈಷ್ಣವಿ.
ಮದುವೆ ಮುಗಿಸಿ ನಾಲ್ಕು ದಿನ ಗೆಳತಿಯರ ಮನೆ ನೆಂಟರ ಮನೆ ಎನ್ನುತ್ತಾ ತಾಯಿ ಮಗಳು ಸುತ್ತಿದರು. ಹೊರಡಲು ಎರಡು ದಿನ ಮುಂಚೆ ಅಮ್ಮನ ಮುಂದೆ ನಿಂತ ವೈಷು ಅಮ್ಮ ನಾನು ಸುಮಿ ಅತ್ತೆ ಮನೆಗೆ ಹೋಗ್ಗ್ಬರ್ತಿನಿ ಕನ್ನಿಕ ಇಲ್ಲೆ ಇರಲಿ ಎಂದು ಹೊರಟು ನಿಂತಳು. ಏನು ಅತ್ತೆ ಮನೇಗಾ ಉದ್ಗಾರ ತೆಗೆದಳು ಶಾಂಭವಿ , ಅಯ್ಯೋ ಅದ್ಯಾಕೆ ಹಾವು ತುಳಿದ ಹಾಗೆ ಹೆರ‍್ತಾ ಇದೀಯ ಎಂದಳು ನಗುತ್ತಾ ವೈಷ್ಣವಿ. ಸುಮ್ನೆ ತಮಾಷೆ ಮಾಡ್ಬೇಢ ನೀನೇನು ಅಲ್ಲಿಗೆ ಹೋಗೋದು ಬೇಡ ,,
ಯಾಕೆ ಹೋಗ್ಗ್ಬಾರ‍್ದು ಎಷ್ಟು ವರ್ಷ ಆಯ್ತು ಅವ್ರನ್ನ ನೋಡಿ ಮಾವ ಹೋಗಿದ್ ವಿಷ್ಯ ಕೂಡ ಹೇಳ್ಲಿಲ್ಲ ನೀನ್ ನಂಗೆ ಯಾವ್ ಸಂಬಂಧ ಇತ್ತು ಅಂತ ಹೇಳ್ಬೇಕಿತ್ತು ವೈಷು ನಿನ್ ಬದುಕಲ್ಲಿ ಜಾತಕದ ನೆಪ ಹೇಳಿ ನಮ್ಮೆಲ್ಲರ ಆಸೆ ಕನಸು ಸುಟ್ಟು ಹಾಕಿದವ್ರ ಮನೆಗೆ ಹೋಗ್ಬೇಕಾ ನೀನು.. ಕಣ್ಣಲ್ಲಿ ನೀರು ತುಂಬಿತು ಶಾಂಭವಿಗೆ.
ಯಾರು ಯಾಕೆ ಏನ್ ಮಾಡಿದ್ರೋ ಗೊತ್ತಿಲ್ಲಾ ಅಮ್ಮಾ ಆದ್ರೆ ಸುಟ್ಟು ಹೋಗಿದ್ದು ಮಾತ್ರ ವಿಕ್ಕಿ ಬದುಕು.. ನಾವೆಲ್ಲ ಹಾಗೋ ಹೀಗೋ ಚೆನ್ನಾಗೇ ಇದ್ದೀವಿ. ಈಗ ಹಳೇ ಮಾತು ಯಾವ್ದೂ ಬೇಡ ಒಂದ್ಸಲ ಅವರನ್ನ ನೋಡ್ಕೊಂಡ್ ಬರ‍್ತೀನಿ ಅಷ್ಟೇ .
ಅಲ್ಲ ಅದೂ..ಎಂದು ಶಾಂಭವಿ ರಾಗ ಎಳೆಯುವಷ್ಟರಲ್ಲಿ ವೈಷ್ಣವಿ ಹೊಸಿಲು ದಾಟಿದ್ದಳು.
ಕಾಲಿಂಗ್ ಬೆಲ್ ಕೇಳಿ ಬಾಗಿಲು ತೆಗೆದ ವಿಕ್ಕಿ ನಂಬಲಾರದವನಂತೆ ಮಾತು ಬರದೇ ಬಾಗಿಲಲ್ಲೇ ನಿಂತ. ಒಳಗೆ ಬರ‍್ಲಾ ಬೇಡ್ವಾ ನಸು ನಕ್ಕ ವೈಷ್ಣವಿಗೆ ಜಾಗ ಬಿಟ್ಟು ತಾನು ಅಲ್ಲೇ ನಿಂತ. ವಿಕ್ಕಿ ಯಾರದು..? ಒಳಗಿನಿಂದ ಸುಮಿತ್ರಳ ದನಿ ಕೇಳಿ ಸಾವರಿಸಿಕೊಂಡು
ಅದೂ ಎಂದು ಉತ್ತರ ಕೊಡುವ಼ಷ್ಟರಲ್ಲಿ ವೈಷ್ಣವಿ ಒಳಗೆ ಹೋಗಿ ನಾನು ಅತ್ತೆ ಹೇಗಿದ್ದೀರ ಎಂದು ಅವಳ ಮುಂದೆ ನಿಂತಳು. ಕನ್ನಡಕ ಹಾಕುತ್ತ ಅವಳ ಕಡೆ ನೋಡಿ ಯಾರೂ ಎಂದು ಒಮ್ಮೆ ಅವಳನ್ನುಆಪಾದಮಸ್ತಕ ಅಳೆದು ಕುರ‍್ಚಿಯಿಂದ ಎದ್ದು ವೈಷು ಎನ್ನುತ್ಥಾ ಆವೇಶದಿಂದ ಅವಳನ್ನು ಗಟ್ಟಿಯಾಗಿ ತಬ್ಬಿ ಬಿಕ್ಕಳಿಸಿದಳು ಸುಮಿತ್ರ. ಸಮಾಧಾನ ಮಾಡುವಂತೆ ಅವಳನ್ನು ಮತ್ತಷ್ಟು ಬಿಗಿಯಾಗಿ ತಬ್ಬುತ್ತಾ ವೈಷ್ಣವಿ ಅಳೋದು ಯಾಕೆ ಅತ್ತೆ ಸುಮ್ನಿರಿ ನಿಮ್ಮನ್ನಾ ನೋಡ್ಲೇಬೇಕು ಅಂತ ಅನ್ನಿಸ್ತು ಅದಕ್ಕೆ ಬಂದೆ..ಬನ್ನಿ ಕೂತ್ಕೋಳಿ ಎನ್ನುತ್ತಾ ಅವಳನ್ನು ಕೂರಿಸಿ ತಾನೂ ಕುಳಿತಳು. ಮುಂದಿನ ಅರ‍್ಧ ಘಂಟೆಯಲ್ಲಿ ಅವರಿಬ್ಬರೂ ಮುಂಚಿನ ಅತ್ತೆ ಸೋದರ ಸೊಸೆ ಆಗಿದ್ದರು. ಅರ‍್ಜುನನ ವಿಷಯ ಕೇಳಿ ಮಮ್ಮಲ ಮರುಗಿದರು. ಏನೆಲ್ಲಾ ನಡೆದುಹೋಯಿತು ಎಂದು ಕೊರಗಿದರು. ಕನ್ನಿಕಳ ಫೋಟೋ ನೋಡಿ ಮಗುವಿನಂತೆ ಸಂಭ್ರಮ ಪಟ್ಟಳು.
ಸರಿ ಏಳು ಊಟ ಮಾಡುವೆಯಂತೆ ನಿಂಗಿಷ್ಟವಾದ ಅಕ್ಕಿ ರೊಟ್ಟಿ ಮಾವಿನಕಾಯಿ ಚಟ್ನಿ ಮಾಡ್ತೀನಿ ಹತ್ತು ವರ‍್ಷ ಚಿಕ್ಕವಳಾದಂತೆ ಲಗುಬಗೆಯಿಂದ ಎದ್ದಳು ಶಾಂಭವಿ.
ಹೆಚ್ಚು ಹೇಳಿಸಿ ಕೊಳ್ಳದೇ ವೈಷ್ಣವಿ ಅವಳು ಬಡಿಸಿದ್ದೆಲ್ಲಾ ತಿಂದಳು. ಅವರಿಬ್ಬರ ಒಡನಾಟವನ್ನು ಬಿಟ್ಟ ಕಣ್ಣಿಂದ ನೋಡುತ್ತಾ ವಿಕ್ರಮ ಮೌನವಾಗಿ ಊಟ ಮಾಡುತ್ತಿದ್ದ.
ಅವನಿಗೆ ಎಲ್ಲ ಕನಸಿನಂತೆ ಭಾಸವಾಗುತಿತ್ತು. ಯಾರನ್ನು ಜನುಮದಲ್ಲಿ ಮತ್ತೆ ನೋಡಲು ಅಸಾಧ್ಯ ಎಂದುಕೊಂಡಿದ್ದನೋ ಅವಳು ತನ್ನ ಮನೆಯಲ್ಲಿ ತನ್ನೆದುರಿನಲ್ಲೆ ಕೂತು ನಗುನಗುತ್ತ ಊಟ ಮಾಡುವುದನ್ನು ಇನ್ನೂ ನಂಬುವ ಮನಸ್ಥಿತಿಯಲ್ಲಿ ಇರಲಿಲ್ಲ ಅವನು.
ಅಕ್ಕ ಪಕ್ಕ ಕುಳಿತು ಅವರಿಬ್ಬರೂ ಊಟ ಮಾಡುವುದನ್ನು ನೋಡುತ್ತಿದ್ದ ಸುಮಿತ್ರಳಿಗೆ ಯಾವುದೋ ದೂರದ ಆಸೆಯೊಂದು ಮನದಲ್ಲಿ ಸುಳಿಯಿತು..ತಕ್ಷಣ ಛೆ ಇದೆಂತ ಯೋಚನೆ ಎನ್ನುತ್ತಾ ಮರೆಯಲು ಯತ್ನಿಸಿದಷ್ಟೂ ಹೆಚ್ಚು ಕಾಡಲು ಆರಂಭಿಸಿತು.
ಹೊರಟು ನಿಂತ ವೈಷ್ಣವಿಯ ಬಿಡಲಾರದವಳಂತೆ ಮರೀಬೇಡ ವೈಷು ಆಗಾಗ ಫೋನ್ ಮಾಡ್ತಾ ಇರು ಎಂದು ಅವಳ ಕೈ ಹಿಡಿದು ಬಾಗಿಲವರೆಗೂ ಬಂದು ಬಲವಂತಕ್ಕೆಂಬಂತೆ ಕೈ ಬಿಟ್ಟಳು. ವೈಷು ಹುಷಾರು ತಲುಪಿದ್ ತಕ್ಷಣ ತಿಳಿಸು ಹಾಗೇ…ಹೇಳಲೋ ಬೇಡವೋ ಎಂಬಂತೆ ಅನುಮಾನಿಸಿದಾಗ ಹೇಳಿ ಅತ್ತೆ ಏನು ಅವರ ಕೈ ಅದುಮಿದಳು ವೈಷು.
ಅದೂ ಮತ್ತೆ ನೀನು ನಿನ್ ಮುಂದಿನ ಜೀವನದ್ ಬಗ್ಗೆನೂ ಯೋಚ್ನೆ ಮಾಡು ಎಂದಳು.
ಮುಂದಿನ ಜೀವನ ಏನಿದೆ ಅತ್ತೆ ನನ್ ಮಗಳಿಗೆ ಒಂದು ದಡ ಮುಟ್ಸೋದು ಅಷ್ಟೇ ಇದ್ದಕ್ಕಿದ್ದಂತೆ ಜೀವನದ ಬಗ್ಗೆ ಮಾತಾಡಿದ ಅತ್ತೆಯನ್ನು ಅಚ್ಚರಿಯಲ್ಲಿ ನೋಡಿದಳು ವೈಷ್ಣವಿ. ನೀನಿನ್ನು ಚಿಕ್ಕವಳು ವೈಷು ಜೀವ್ನ ಇನ್ನೂ ತುಂಬ ಇದೆ ಒಂಟಿತನ ಕಷ್ಟ ಯೋಚ್ನೆ ಮಾಡು ಎಂದಾಗ ವಿಕ್ರಮ ಅಮ್ಮ ನಿಂಗೆ ಯಾವಾಗ್ ಏನ್ ಮಾತಾಡ್ಬೇಕು ಗೊತ್ತಾಗಲ್ವ ಅವಳೇನೂ ಚಿಕ್ಕ ಮಗು ಅಲ್ಲಾ ಸುಮ್ನಿರು ಎಂದು ಗದರಿದ. ಏನೋ ಅನ್ಸಿದ್ದು ಹೇಳ್ದೆ ಕಣೋ ನಾನು ಎತ್ತಿ ಆಡಿಸಿದ ಮಗು ಅಂತ ಸಲಿಗೆ.. ತಪ್ಪು ಮಾಡಿದವಳಂತೆ ಮುಖ ಚಿಕ್ಕದಾಯಿತು ಅವಳಿಗೆ.
ಪಾಪ ಎನಿಸಿತು ವೈಷ್ಣವಿಗೆ ಹೋಗ್ಲಿ ಬಿಡು ವಿಕ್ಕಿ ನಾನು ಹೊರಡ್ತೀನಿ ನೀವಿಬ್ರೂ ಆರೋಗ್ಯ ನೋಡ್ಕೊಳಿ ಕಸಿವಿಸಿಯಾದರೂ ತೋರಿಸಿಕೊಳ್ಳದೇ ಹೊರಗಡಿಯಿಟ್ಟಳು.
ದಿನವೆಲ್ಲಾ ಅತ್ತೆ ಕೊನೆಯಲ್ಲಿ ಹೇಳಿದ ಮಾತೇ ಗುಯ್ಗುಡುತ್ತಿತ್ತು ವೈಷ್ಣವಿಯ ಕಿವಿಯಲ್ಲಿ. ಯಾಕೆ ಹಾಗಂದ್ರು ಅತ್ತೆ ಏನ್ ಇರ‍್ಬಹುದು ಅವ್ರ ಮನ್ಸಲ್ಲಿ ಬಹುಷಃ ಅವ್ರಿಗೆ ಮತ್ತೆ.. ಯಾಕೋ ಸುಮಿತ್ರ ಹೇಳಿದ ಮಾತಿನ ಉದ್ದೇಶ ಊಹಿಸಿ ಒಮ್ಮೆ ಮೈ ಎಲ್ಲಾ ನಡುಗಿದಂತೆ ಆಯ್ತು. ವಿಕ್ರಮನ ಅಸಹಾಯಕ ಮುಖ ಜೀವನವೇ ಬೇಡ ಎಂಬಂತೆ ಇರುವ ಅವನ ನಿರುತ್ಸಾಹದ ನಡವಳಿಕೆ ಕಣ್ಮುಂದೆ ಬಂದಾಗ ಒಮ್ಮೆ ಯಾಕಾಗಬಾರದು ಎಂದುಕೊಂಡಳು ನಂತರ ಛೇ ನನಗೇನಾಗಿದೆ ೧೬ ವರ‍್ಷದ ಮಗಳನ್ನು ಮುಂದಿಟ್ಟುಕೊಂಡು ಮಾಡುವ ಯೋಚನೆಯೇ ಇದು ಒಮ್ಮೆ ತಲೆ ಕೊಡವಿದಳು.
ಫೋನ್ ರಿಂಗ್ ಆದ ದನಿ ಕೇಳಿ ಎದ್ದಳು. ಕನ್ನಿಕಳ ಗೆಳತಿಯ ಹೆಸರು ನೋಡಿ ಪುಟ್ಟು ನೋಡು ನಿನ್ ಫ್ರೆಂಡ್ ಫೋನ್ ಎಂದು ಮಗಳ ಕೈಗೆ ಫೋನ್ ಕೊಟ್ಟು ಏಕೋ ಒಂಟಿಯಾಗಿರಬೇಕೆನಿಸಿ ಕೋಣೆಗೆ ಹೋಗಿ ಬಾಗಿಲು ಮುಚ್ಚಿದಳು.
ಎಷ್ಟೋ ಹೊತ್ತಿನವರೆಗೂ ಮಗಳು ಏನೋ ಸಮಾಧಾನ ಮಾಡುವಂತೆ ಮಾತನಾಡುತ್ತಲೇ ಇದ್ದಾಳೆ ಎನಿಸಿ ಕೇಳೋಣವೇ ಎನಿಸಿದರೂ ಹೇಳುವಂತಿದ್ದರೆ ಹೇಳುತ್ತಾಳೆ ಎನಿಸಿ ಸುಮ್ಮನಾದಳು.
ಮಲಗಿದರೂ ನಿದ್ರೆ ಹತ್ತಿರ ಸುಳಿಯುತ್ತಿಲ್ಲ. ಏಕೊ ಅತ್ತೆ ಹೇಳಿದ ಮಾತು ಕಿವಿಯಲ್ಲಿ ಗುಯ್ಗುಡುತ್ತಿದೆ. ೧೮ ವರ‍್ಷದಿಂದ ಮುಚ್ಚಿಡಲು ಬಚ್ಚಿಡಲು ಅದುಮಿಡಲು ಹರಸಾಹಸ ಪಡುತ್ತಿದ್ದ ಪ್ರೀತಿ ಈಗ ಧುತ್ತೆಂದು ಎದುರಿಗೆ ಬಂದು ನಿಂತಿದೆ, ಮೊದಲ ಪ್ರೀತಿ ಜೀವನದಲ್ಲಿ ಕೆಲವರಿಗೆ ಮಾತ್ರ ಸಿಗುವುದೆಂದು ಕೇಳಿದ್ದೆ ಬಹುಷಃ ಆ ಕೆಲವರಲ್ಲಿ ನಾನೂ ಒಬ್ಬಳು ಎಂದು ಬೀಗಿದ್ದೆ. ಕಳೆದುಕೊಂಡಾಗ ಜೀವನ ಬೇಡ ಎನಿಸಿದ್ದು ನಿಜ, ಹಾಗೇ ಅಪ್ಪ ಅಮ್ಮನ ನೆನಪಾಗಿ ಅಂತಹ ಹುಚ್ಚು ಯೋಚನೆ ಕೈ ಬಿಟ್ಟಿದ್ದೆ ತಾನು. ಈಗ ವಿಕ್ಕಿನೂ ಒಂಟಿ ನಾನೂ ಸಹ. ವಿಕ್ಕಿಯ ಕಣ್ಣಲ್ಲಿ ತನ್ನ ಬಗ್ಗೆ ಈಗಲೂ ಅಮಿತ ಪ್ರೀತಿ ಇರುವುದು ಸ್ಪಷ್ಟವಾಗಿ ಕಾಣುತ್ತದೆ. ಹಾಗಂತ ಈಗ ೪೨ರ ಹರೆಯದಲ್ಲಿ ಎರಡನೇ ಮದುವೆ.. ನೋಡಿದವರು ಏನಂದಾರು..ಮತ್ತೆ ಕನ್ನಿಕ ..ತನ್ನ ಸ್ಕೂಲ್ ಬ್ಯಾಗ್ನ್ಲಲ್ಲಿ ತನ್ನಪ್ಪನ ಫೋಟೋ ಇಟ್ಟು ದಿನಕ್ಕೆ ನಾಲ್ಕು ಬಾರಿ ಪಪ್ಪ ಐ ಲವ್ ಯು ಐ ಮಿಸ್ ಯು ಎನ್ನುವ ಮಗಳು ಇದುವರೆಗೂ ಒಮ್ಮೆಯೂ ನೋಡದ ಯಾರೆಂದೇ ಪರಿಚಯವಿರದ ವಿಕ್ಕಿ ಯನ್ನು ಒಪ್ಪಿಕೊಂಡಾಳಯೇ..ಮತ್ತೆ ಅಪ್ಪ ಅಮ್ಮ..? ನಾನೇಕೆ ಇಷ್ಟು ಬಲಹೀನಳಾಗುತ್ತಿದ್ದೇನೆ..ಎಲ್ಲವನ್ನು ಮರೆತು ಅರ‍್ಜುನನೊಂದಿಗೆ ಖುಷಿಯಗಿದ್ದ ನನ್ನಿಂದ ಅವನ್ನು ದೂರ ಮಾಡಿ ವಿಧಿ ಮತ್ತೆ ನನ್ನ ಬಾಳಿನಲ್ಲಿ ಆಟ ಆಡಿದೆ. ಈಗ ನನ್ನ ಕಲ್ಪನೆಗೂ ಮೀರಿದ ಈ ಯೋಚನೆ..ತಲೆ ಚಿಟ್ಟು ಹಿಡಿದಂತೆ ಎನಿಸಿದರೂ ಬೇಡವೆಂದರೂ ವಿಕ್ಕಿಯ ಮುಖ ಕಣ್ಣ ಮುಂದಿನಿಂದ ಹೋಗುತ್ತಲೇ ಇಲ್ಲ. ಅರ‍್ಜುನನ ಸಾವನ್ನು ನಾನು ನನ್ನ ಸುಖಕ್ಕೆ ಉಪಯೋಗಿಸಿಕೊಳ್ಳುತ್ತಿದ್ದೇನೇಯೇ ಎನಿಸಿ ಏಕೋ ಪಾಪಪ್ರಜ್ಞೆ ಕಾಡಿದಂತೆನಿಸಿತು. ಈ ಮಧ್ಯೆ ಯಾವಾಗ ಕನ್ನಿಕ ಪಕ್ಕದಲ್ಲಿ ಬಂದು ಮಲಗಿದಳು ಯಾವಾಗ ನಿದ್ದೆ ಹತ್ತಿತ್ತು ತಿಳಿಯಲಿಲ್ಲ. ಮಗಳೇಕೋ ನಿದ್ದೆ ಮಾಡದೇ ಒದ್ದಾಡುತ್ತಿದ್ದಾಳೆ ಎಂದೂ ಅನ್ನಿಸಿತ್ತು.
ಬೆಳಿಗ್ಗೆ ಯಾರೇನೇ ಅಂದುಕೊಂಡರೂ ಕನ್ನಿಕಳ ಅಭಿಪ್ರಾಯದ ಮೇಲೆ ತನ್ನ ನಿರ‍್ಧಾರ ನಿಂತಿದೆ ಎಂದುಕೊಂಡಳು. ನಾಳೆ ನಾವು ವಾಪಸ್ ಹೊರಡಬೇಕು ಅಷ್ಟರಲ್ಲಿ ಇದಕ್ಕೊಂದು ಮುಕ್ತಾಯ ಕಾಣಿಸಬೇಕು ಎಂದುಕೊಂಡಳು.
ಕಾತರ ತಾಳದೇ ಬೆಳಿಗ್ಗೆ ಎದ್ದ ಕೂಡಲೇ ವಿಕ್ಕಿಗೆ ಫೋನ್ ಮಾಡಿ ಅತ್ತೆ ಹೇಳಿದ್ ವಿಷ್ಯದ ಬಗ್ಗೆ ಯೋಚ್ನೆ ಮಾಡ್ತಿದ್ದೆ ನೀನೂ ಯೋಚ್ನೆ ಮಾಡು ಎಂದಷ್ಟೇ ಹೇಳಿ ಇಟ್ಟವಳ ಮನಸ್ಸು ಏಕೋ ಹದಿನಾರರ ಹುಡುಗಿಯಂತೆ ಹಾರಾಡಿತ್ತು. ಕನ್ನಿಕಳ ನೆನಪಾಗಿ ಏಳದೇ ಇನ್ನು ಹಾಸಿಗೆಯಲ್ಲೇ ಹೊರಳಾಡುತ್ತಿದ್ದ ಮಗಳ ತಲೆ ನೇವರಿಸುತ್ತ ಏಳು ಮಗು ಯಾಕೆ ಇನ್ನು ಮಲಗಿದ್ದೀಯೆಂದಳು. ಅವಳ ಧ್ವನಿ ಕೇಳಿ ಎದ್ದು ಅವಳ ತೊಡೆಯ ಮೇಲೆ ಮಲಗಿ …ಮಮ್ಮೀ ಎನ್ನುತ್ತ ಬಿಕ್ಕತೊಡಗಿದಳು
ಗಾಭರಿಯಿಂದ ಅವಳನ್ನು ಅಪ್ಪಿ ಅಯ್ಯೊ ಯಾಕೆ ಕಂದ ಏನಾಯ್ತು ಹುಷಾರಿಲ್ವ ಎಂದು ಅವಳ ಹಣೆ ಮುಟ್ಟಿ ನೋಡಿದಳು.
ನೋ ಮಮ್ಮಿ ಐ ಯಾಮ್ ಫೈನ್ ಆದ್ರೆ ನಿಂಗೆ ಕೃತಿ ಗೊತ್ತಲ್ವ ಅವ್ರ ಮಮ್ಮಿ ಈಗ ಇಲ್ವಲ್ಲ ಯು ನೊ ಮಮ್ಮಿ ..ಹು ಚಿನ್ನ ಹೇಳಿದ್ಯಲ್ಲ ಅವ್ರಿಗೆ ಕ್ಯಾನ್ಸರ್ ಆಗಿ ಹೋಗ್ಬಿಟ್ರು ಅಂತ.ಈಗ ಏನಾಯ್ತು..ಈಗ ಅವರ ಪಪ್ಪ ಬೇರೆ ಮದ್ವೆ ಮಾಡ್ಕೊಳ್ತಾ ಇದಾರಂತೆ ಕೃತಿಗೆ ಇಷ್ಟ ಇಲ್ವಂತೆ ತುಂಬಾ ಅಳ್ತಾ ಇದ್ಳು ಮಮ್ಮಿ ಹೋದಾಗ ಪಪ್ಪ ಅವರ ಫೋಟೋ ಇಟ್ಕೊಂಡು ನನ್ನ ಯಾಕೆ ಬಿಟ್ಟು ಹೋದೆ ನೀನಿಲ್ದೇ ನಾನು ಹೇಗೆ ಇರ‍್ಲಿ ಅಂತ ರೂಮಲ್ಲಿ ಅಳ್ತಾ ಇರ‍್ತಿದ್ರು ಈಗ ಇಷ್ಟು ಬೇಗ ಮರ‍್ತು ಬಿಟ್ರಾ ಅಂತ ನಂಗೆ ಈ ಹೊಸ ಆಂಟಿ ಇಷ್ಟ ಇಲ್ಲ ಪಪ್ಪ ಅವ್ರನ್ನ ಮಮ್ಮಿ ಅಂತ ಕರಿ ಅಂತಾರೆ ನಾನು ಈ ಮನೇಲೇ ಇರಲ್ಲ ನಾನಿ ಮನೆಗೆ ಹೊಗ್ತೀನಿ ಅಂತ ತುಂಬಾ ಅಳ್ತಾ ಇದ್ಳು..ಸೋ ಬ್ಯಾಡ್ ಅಲ್ವ ಮಮ್ಮಿ ಇಷ್ಟು ದೊಡ್ಡವರಾದ ಮೇಲೆ ಯಾರಾದ್ರೂ ಮದ್ವೆ ಮಾಡ್ಕೊಳ್ತಾರ ಅವ್ಳು ಹೋದ್ರೆ ನಂಗೆ ಯಾರೂ ಬೆಸ್ಟ್ ಫ್ರೆಂಡ್ ಇರಲ್ಲ ಗೊತ್ತಾ ಅವಳು ತೂಂಬಾ ಅಳ್ತಾ ಇದ್ಳು ನಂಗೂ ಅಳು ರ‍್ತಾ ಇದೆ..ಬಿಕ್ಕಳಿಸುತ್ತಾ ಹೇಳಿದ ಮಗಳ ಮಾತು ಕೇಳಿ ಯಾರೋ ಚಾಟಿಯಲ್ಲಿ ಹೊಡೆದಂತೆ ಬೆಚ್ಚಿ ಬಿದ್ದಳು ವೈಷ್ಣವಿ..ಚಿಯರ್ ಅಪ್ ಬಂಗಾರ ಅಳ್ಬೇಡ ಎನ್ನುತ್ತಾ ಮಗಳನ್ನು ಎಬ್ಬಿಸಿದಳು. ಗೆಳತಿಗಾದ ನೋವಿಗೆ ಇಷ್ಟು ಸಂಕಟ ಪಡುತ್ತಿರುವ ಮಗಳು ಇನ್ನು ತನ್ನಮ್ಮನ ಯೋಚನೆಯ ಬಗ್ಗೆ ತಿಳಿದರೆ..ಒಮ್ಮೆ ಬೆಚ್ಚಿದಳು..


ಇದು ಪರೋಕ್ಷವಾಗಿ ವಿಧಿ ತನಗೆ ಕೊಡುತ್ತಿರುವ ಸೂಚನೆಯೇ ತನ್ನ ಆಸೆ ಅಸಾಧುವೇ..?ಎಂದುಕೊಂಡಳು. ಛೆ ಛೆ ಮಗಳೊಂದಿಗೆ ಮಾತನಾಡಿ ನೋಡೋಣ ಎಂದು ತನಗೆ ತಾನೆ ಸಮಾಧಾನ ಮಾಡಿಕೊಂಡಳು. ಏನೇ ಸಮಾಧಾನ ಮಾಡಿದರೂ ಊಟ ತಿಂಡಿ ಏನನ್ನೂ ಸರಿಯಾಗಿ ಮಾಡದ ಕನ್ನಿಕ ಹೋಗಣ ನಾನು ಕೃತಿನಾ ನೊಡ್ಬೇಕು ಎಂದು ಹಠ ಮಾಡತೊಡಗಿದಳು. ಅವಳ ಹಠಕ್ಕೆ ಬಾಗಿ ಯಾವುದೋ ನಿರ‍್ಧಾರಕ್ಕೆ ಬಂದಂತೆ ಅಂದೇ ಸಂಜೆಗೆ ಫ್ಲೈಟ್ ಬುಕ್ ಮಾಡಿ ಹೊರಡುವ ತಯಾರಿ ನಡೆಸಿದಳು ವೈಷ್ಣವಿ. ಊಟ ಮುಗಿಸಿ ಮಧ್ಯಾಹ್ನ ಹೊರಟು ನಿಂತಿದ್ದವರು ಕರೆಘಂಟೆಯ ಸದ್ದಾಗಿ ಬಾಗಿಲು ತೆಗೆದಾಗ ಎದುರಿಗೆ ನಿಂತಿದ್ದ ವಿಕ್ರಮನನ್ನು ನೋಡಿ ಏನೂ ತೋಚದೇಒಂದು ಹೆಜ್ಜೆ ಹಿಂದೆ ಬಂದಳು. ಅರೇ ವೈಷು ಇದೇನು ಲಗ್ಗೇಜ್ ನೀನು ನಾಳೆ ಹೊರಡೋದು ಅಲ್ವ ನಿನ್ನ ಫೋನ್ ಬಂದಮೇಲೆ ನಂಗೆ ನಿನ್ನ ನೋಡ್ದೇ ಇರಕ್ಕೆ ಅಗಲ್ಲಾ ಅನ್ನಿಸ್ತು ಅದಕ್ಕೆ ಬಂದ್ಬಿಟ್ಟೆ ..ಹೊಸ ಉತ್ಸಾಹದಿಂದ ಹತ್ತು ವರ‍್ಷ ಚಿಕ್ಕವನಾದಂತೆ ಮೈ ಮನದಲ್ಲಿ ಸಂತಸ ಹರಡಿಕೊಂಡಂತೆ ಕಾಣುತ್ತಿದ್ದ ಅವನನ್ನು ನೋಡಿ..ಮತ್ತೊಮ್ಮೆ ನನ್ನ ಬಾಳಲ್ಲಿ ವಿಧಿ ಆಟವಾಡುತ್ತಿದೆ ಎನ್ನಿಸಿ ಉಕ್ಕಿ ಬರುತ್ತಿದ್ದ ಸಂಕಟ ತಡೆದು ಅಪರಿಚಿತಳಂತೆ ಇಲ್ಲ ವಿಕ್ರಮ್ ನಾವ್ ಈಗ್ಲೇ ಹೊರಟ್ವಿ ನೆಕ್ಷ್ಟ್ ಟೈಮ್ ಸಿಗಣ ಎನ್ನುತ್ತಾ ಮಗಳ ಕೈ ಹಿಡಿದು ಅಪ್ಪ ಅಮ್ಮನಿಗೆ ಕೈ ಬೀಸಿ ಕಾಯುತ್ತಿದ್ದ ಕ್ಯಾಬ್ ಹತ್ತಿದಳು. ಏನೂ ಅರ್ಥವಾಗದವನಂತೆ ಕಕ್ಕಾಬಿಕ್ಕಿಯಾಗಿ ನಿಂತಿದ್ದ ಸೋದರಳಿಯನ ಧಿಢೀರ್ ಅಗಮನ ನೋಡಿ ಆನಂದ ಶಾಂಭವಿಯೂ ಸಹ ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದರು.




ಹೆಚ್ಚಿನ ಬರಹಗಳಿಗಾಗಿ
ಮಗುಚಿತೊಂದು ಮೀನು ಬುಟ್ಟಿ
ಶೂಟಿಂಗ್ ಅನ್ಯಾಯ
ಕಾಸಿಲ್ ಆಫ್ ಆಲ್ಬಕರ್ಕೀ