ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

MCMXIV ಸಹಿತ ಚಂಪೋ ಅನುವಾದಿಸಿದ ೪ ಕವಿತೆಗಳು

ಚಂಪೋ

೧. ಅದು ಏನೋ ಅದೇ

ತಾರ್ಕಿಕವಾದ ಹೇಳಿತು
ಅದೊಂದು ಹುಚ್ಚುತನ
“ಅದು ಏನೋ ಅದೇ”
ಎಂದಿತು ಪ್ರೀತಿ

ಅದು ಸಂತೋಷ
ಅಂದಿತು ಲೆಕ್ಕಾಚಾರ
ನೋವಲ್ಲದೇ ಮತ್ತೇನು?
ಎಂದುಲಿಯಿತು ಭಯ
ಭವಿಷ್ಯವೇ ಇಲ್ಲ
ಎಂದುಸುರಿತು ಅರಿವು
“ಅದು ಏನೋ ಅದೇ”
ಎಂದಿತು ಪ್ರೀತಿ

ಅದು ಅಸಂಬದ್ಧ
ಎಂದಿತು ಅಹಂಕಾರ
ಮೂರ್ಖತನವದು
ಎಚ್ಟರಿಕೆ ತಿಳಿ ಹೇಳಿತು
ಅದು ಅಸಾಧ್ಯವೆಂದು
ಅನುಭವ ತೀರ್ಪಿತ್ತಿತು
“ಅದು ಏನೋ ಅದೇ”
ಎಂದಿತು ಪ್ರೀತಿ

ಮೂಲ : ಎರಿಕ್ ಫ್ರೀಡ್

ಆಂಗ್ಲ ಅನುವಾದ: ಸ್ಟುವರ್ಟ ಹುಡ್

ಕನ್ನಡಕ್ಕೆ: ಚಂಪೋ

. ಪ್ರೇಮಿ

ನಾವೆಲ್ಲ,
ಒಂದು ದುರ್ಘಟನೆ,
ಯಾವುದೋ ಅನ್ವೇಷಣೆ,
ಹೊಸದಾಗಿ ಚಿಗುರೊಡೆದ ಪ್ರೀತಿ,
ಅಥವಾ, ಚೂರು ಚೂರೇ
ಒಡೆದುಹೋಗುತ್ತಿರುವ ಹೃದಯ
ವಿಭಿನ್ನ ವ್ಯಕ್ತಿಯಾಗಿಸಿ!

ನಾವೆಲ್ಲ,
ಅದ್ಭುತವಾದ ದುರ್ಬಲರು!
ಒಂದೇ ಒಂದು ಕ್ಷಣ ಸಾಕು
ನಮ್ಮೆಲ್ಲ ಆಗು ಹೋಗುಗಳಿಗೆ,
ನಮ್ಮನ್ನ ಬದಲಿಸಿಬಿಡಲು,
ಶಾಶ್ವತವಾಗಿ!

ಮೂಲ: ಸ್ಯಾಮುವೆಲ್ ಡೆಕ್ಕರ್ ಥಾಮ್ಸನ್
ಕನ್ನಡಕ್ಕೆ: ಚಂಪೋ

.ಹೆದರಿಕೆ
ಯಾವುದಕ್ಕೆ ಹೆದರ್ತೀರಿ ಅಂತ
ಯಾರಾದ್ರು ನನ್ನ ಕೇಳಿದ್ರು ಅನ್ನಿ

ಸುಮ್ನೆ ಯಾಕೆ ಅಂತ ಅನ್ಕಂಡು
ಸರಾಗವಾಗಿ ಕತ್ತಲೇ ಅಂತೇಳ್ತಿನಿ

ಒಮ್ಮೊಮ್ಮೆ ಎತ್ತರ ಅಂತೀನಿ
ಮತ್ತೆ ಸೂಜಿ ಹಾಗೇ ಶಾರ್ಕಗಳು

ಮತ್ಯಾವಾಗೋ ಜೇಡ ಅಂತೀನಿ
ಅಥವಾ ಭೂಮಿ ಮೇಲೆ ಹಾರೋದು

ಒಮ್ಮೊಮ್ಮೆ ಉಸಿರುಗಟ್ಟಿಸೋ ಜಾಗ
ನೋವು ಅಥವಾ ಚೀರಾಟ ಅಂತೇಳ್ತಿನಿ

ನಿಜ ಕಾರಣನ ಒಳಗಡೆ ಯಾವುದೋ
ಮೂಲೇಲಿ ಹುಷಾರಾಗಿ ಮುಚ್ಚಿಟ್ಟಿರ್ತೀನಿ

ಯಾಕಂದ್ರೆ ನನಗೆ ಅತೀ ಹೆಚ್ಚಿನ ಭಯವಿರೋದು
ಎಲ್ಲಿ ನೀ ನನ್ನನ್ನ ನಾ ನೋಡೋ ಹಾಗೆ ನೋಡ್ತಿ ಅಂತ

೪.MCMXIV (ರೋಮನ್ ನಲ್ಲಿ ಬರೆದ ಇಸವಿ ೧೯೧೪)

ಫಿಲಿಪ್ ಲಾರ್ಕಿನ್ ಆಗಸ್ಟ್ ೧೯೧೪ ರ ಮೊದಲ ಜಾಗತಿಕ ಯುದ್ಧದ ಕುರಿತು ಬರೆದ ಖ್ಯಾತ ಕವಿತೆ

ಓವಲ್ ವಿಲ್ಲಾಪಾರ್ಕ ಮೀರಿ
ಸಹನಾ ಮೂರ್ತಿಯಂತೆ
ತಾಳ್ಮೆಯಿಂದ ಹೊರಚಾಚಿ ನಿಂತ
ಆ ಉದ್ದದ ಅಡ್ಡಾದಿಡ್ಡಿ ಸಾಲುಗಳು,
ಕಿರೀಟದಂತೆ ಟೋಪಿಯುಟ್ಟು,
ಬ್ಯಾಂಕ್ ರಜೆಯ ಮೋಜಲ್ಲಿರುವಂತೆ
ಹಲ್ಕಿಸಿಯುತ್ತ ನಿಂತ, ಹೂಬಿಸಿಲಿಗೆ
ಹೊಳೆವ ಮಿಸೆಹೊತ್ತ ಮುಖಗಳು

ಮುಚ್ಚಿದ ಅಂಗಡಿಗಳು, ಮೇಲ್ತರದ
ಹೆಸರಚ್ಚೊತ್ತಿದ್ದರೂ ಬಿಳುಚಾದ ಪರದೆ,
ರಾಜ ರಾಣಿಯರ ಅನ್ವರ್ಥನಾಮತೊಟ್ಟು
ಕಪ್ಪಾದ ಉಡುಪುಟ್ಟು ಆಡುತ್ತಿರುವ ಮಕ್ಕಳು
ಒಂದಾಣೆ ಎರಡಾಣೆಯ ನಾಣ್ಯಗಳು,
ಕೊಕೋವಾ ಟ್ವಿಸ್ಟ ಚಾಕಲೇಟಿನ
ಆ ಟಿನ್ ಜಾಹೀರಾತುಗಳು, ದಿನವಿಡೀ
ಬಾಗಿಲು ತೆರೆದುನಿಂತ ಪಬ್ಬುಗಳು

ಕರುಣೆ ಕಾಣದ ಹಳ್ಳಿಗಾಡುಗಳು:
ಹೂಬಿಟ್ಟ ಹುಲ್ಲು , ಹೊಲಗಳು
ಧೂಳುಗಟ್ಟಿದ ಜಾಗ, ಹೆಸರುಗಳು
ಗುಂಯ್ಗುಡುವ ಕರಾಳ ದಿನದ ನೆರಳು;
ಓಲಾಡುವ ಭತ್ತದ ಮೌನರೋಧನೆ
ದೊಡ್ಡ ಬಂಗಲೆಯ ಮೂಲೆಯಲಿ
ಸೇವಕನಿಗಾಗಿ ತುಂಬ ಚಿಕ್ಕ ಕೋಣೆ,
ಲಿಮೋಸಿನ್ ಹಿಂದೇಳುವ ಆ ಧೂಳು;

ಅದೆಂಥಾ ಪರಿಶುದ್ದ ಮುಗ್ಧತೆ, ಈಗ
ಆದಿ ಅನಂತದ ಆಚೆಗೂ ಕೂಡ
ತನ್ನ ತಾನೇ ಗತಕಾಲಕ್ಕೆ ಸರಿಸಿದಂತೆ
ವಿದಾಯವಿಲ್ಲದೇ – ಪುರುಷರು
ಭೂತಾಯಿ ಮಡಿಲ ಸಿಂಗರಿಸಿದಾಗ
ಕೆಲವೇ ದಿನಗಳಲ್ಲಿ ಮುರಿದುಬಿದ್ದ
ಅದೆಷ್ಟೋ ಸಾವಿರ ಮದುವೆಗಳು
ಮತ್ತೆ ಮರಳಿ ಬಾರದ ಮುಗ್ಧರು