ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

Senecio (Baldgreis) (1922) painting in high resolution by Paul Klee. Original from the Kunstmuseum Basel Museum. Digitally enhanced by rawpixel.

ನನ್ನೊಳಗಿನವ..

ಚಂಪೋ

ನನ್ನೊಳಗೂ ಒಬ್ಬನಿದ್ದಾನೆ
ಸುಮ್ಮನೆ ಎಲ್ಲೋ ಮೂಲೆಯಲ್ಲಿ ಕುಳಿತು
ಮುಗುಳ್ನಗುತ್ತ ನೋಡುವುದೇ ಅವನ ಕೆಲಸ
ನಾ ನಕ್ಕರೂ ಅತ್ತರೂ ಬಿದ್ದರೂ ಎದ್ದರೂ
ಅವನ ಮುಗುಳ್ನಗು ಮಾತ್ರ ಮಾಸದು…

ಮೇಲಿಂದ ಮೇಲೆ ಬೀಳುವ ಪೆಟ್ಟುಗಳಿಗೆ
ಅವನದೇ ಶೈಲಿಯಲ್ಲಿ ವಿಮರ್ಶಿಸಿ ಹೊರದಬ್ಬಿ
ಮತ್ತದೇ ಮುಗುಳ್ನಗೆಯ ಮುಖ! ಅಬ್ಬಾ..!
ಯಾರಿವನು? ಭಾವಗಳ ಹಂಗಿಲ್ಲದವ!

ಯಾವ ವಿಷಯವೇ ಇರಲಿ, ಇವನ ಪ್ರತಿಕ್ರಿಯೆ
ಮುಗುಳ್ನಗೆ ಮಾತ್ರ, ನಿರ್ಲಿಪ್ತತೆ ನಾಚುವಂತೆ
ಒಂದೊಮ್ಮೆ ರಾಗ ಹಿಡಿದರೆ ಸಾಕವನಿಗೆ
ಕಣ್ಣು ಮುಚ್ಚಿ ಎಲ್ಲೆಲ್ಲೊ ತೇಲಾಡಿಬರುವ!

ನಾದವೆಂದರೆ ಅವನಿಗೇನೊ ಒಲವು!
‘ನಾ’ ಎಂದಾಗಲೆಲ್ಲ ನಕ್ಕುಬಿಡುವ, ಅದೇಕೋ?
ಹೊರಗಿನ ಯಾವ ಮಾಸವೂ ಮಣಿಸದವನಿಗೆ
ಬಿಸಿಲು ಮಳೆ ಹಸಿರ ಕಂಡು ಕುಣಿದುಬಿಡುವ!

ಯಾವಾಗಲೋ ಅವನು ಬಾಯಿ ಬಿಚ್ಚಿದಾಗ
ಪ್ರಶ್ನೆಗಳ ಸುರಿಮಳೆ, ಎಲ್ಲಕ್ಕೂ ಸೋಜಿಗ!
ತಾನೇ ಮತ್ತೆ ಉತ್ತರಿಸುವ ಬಲ್ಲವನಂತೆ
ಉತ್ತರಕ್ಕೆ ಕಾಯದೇ ಏನೇನೊ ಬಡಬಡಿಸುವ!

ಅವನಿಗೂ ನನಗೂ ಏನೋ ನಂಟು
ಹೌದು, ನನ್ನ ಚನ್ನಾಗಿ ಅರ್ಥೈಸಿಕೊಂಡಿರುವ
ಆದರೂ ಅದೇಕೋ ಚಡಪಡಿಕೆ ಅವನಿಗೆ
ಒಮ್ಮೊಮ್ಮೆ ಉಸಿರುಗಟ್ಟಿದಂತಾಡುವ!

ಮೊನ್ನೆ ನಡೆದ ವಾದದಲ್ಲಿ ಸೋತುಬಿಟ್ಟ
ಇಂದೇಕೋ ಶಾಂತವಾಗಿದ್ದಾನೆ,
ಬಿರುಗಾಳಿಗೆ ನಾ ತಯಾರಿರಬೇಕಿನ್ನು
ಅದನ್ನೂ ಅವ ನಗುತ್ತಲೇ ಎಬ್ಬಿಸುವ!

  • ಚಂಪೋ

ಚಿತ್ರ ಕೃಪೆ : ಪಬ್ಲಿಕ್ ಡೊಮೇನ್ ಸೆನೆಸಿಯೋ ೧೯೨೨ ವರ್ಣ ಚಿತ್ರ digitally enhanced