- ಗಟ್ಟಿಯವರಿಗೆ ನುಡಿ ನಮನ - ಫೆಬ್ರುವರಿ 26, 2024
- ಎರಡು ದಡ - ಅಕ್ಟೋಬರ್ 22, 2022
- ಅಶ್ರುತಗಾನ - ನವೆಂಬರ್ 3, 2021
ಹೊರಟುಬಿಟ್ಟರು ಇವರು ಮೂಲ ನೆಲೆಯಿಂದ
ಒಸರಾಗಿ,ಹೊಳೆಯಾಗಿ,ನದಿಯಾಗಿ ಹರಿವಂತೆ ಮುಖವಾಡಗಳ ಕಳಚುತ್ತ,ತನ್ನ ವಠಾರ ದಾಟಿ
ಗಡಿನಾಡ ದಾಟಿ,ಕಲ್ಲು ಮುಳ್ಳುಗಳ ಕೊರಕಲು ಹಾದಿ ದಾಟಿ
ಜೋಡಿಸುತ ಕಿರುದಾರಿ ಹೆದ್ದಾರಿಗೆ.ಹಾಗೆ
ಹೆದ್ದಾರಿಯಲಿ ನಡೆದರೂ
ಅಕ್ಕ ಪಕ್ಕದ ಅನಾಮಿಕ ಮರ,ಸ್ವರ,ನೀರವವ ಧ್ಯಾನಿಸುತ
ಮುನ್ನಡೆದರು ಈ ಜ್ಞಾನದಾಹಿ
ಮಹಾ ಪಥಿಕನಾಗಿ.ನಡೆದು ಹೋದರು
ಒಂಟಿ ಸಲಗವಾಗಿ.
ಪರಮ ಕುತೂಹಲಿ ಇವರು
ಸ್ವೀಕರಿಸುತ್ತಾ ಹೋದರೆಲ್ಲವನ್ನೂ
ಹೋದ ಜಾಗವನೆಲ್ಲ ತನ್ನದೇ ನೆಲೆಯಾಗಿಸುತ
ಕಂಡದ್ದು,ಕೇಳಿದ್ದು,ಓದಿದ್ದು,ಅನುಭವಿಸಿದ್ದು..
ಮುಖಾಮುಖಿಯಾಗಿ ಎಲ್ಲದಕ್ಕೂ
ತನ್ನದೇ ಭಾಷೆಗೆ ರೂಪಾಂತರಿಸುತ್ತ ಎಲ್ಲವನ್ನೂ.
ಬದಲಾದ ಈ ಎಲ್ಲ ಅಸಂಖ್ಯ ರೂಪಗಳು
ಒಳರೂಪ,ಹೊರರೂಪಗಳ ಸಮನ್ವಯದ ಸಖ್ಯದಲಿ
ಚಲಿಸುತ್ತ,ತನ್ನ ಸೀಮೆಯ ತಾನೆ ಮೀರುತ್ತ
ಹೊಸ ಸೀಮೆಯನ್ನೆಲ್ಲ ಆವರಿಸಿಕೊಳ್ಳುತ್ತ
ಹೆಕ್ಕಿಕೊಂಡರು
ಧೂಳೊಳಡಗಿದ ಪುಟ್ಟ ಮಣಿ,ಇದ್ದಿಲ ಚೂರು
ಹೆಸರಿರದ,ಉಸಿರಿರದ,ವಸ್ತುಗಳನೆತ್ತಿ
ಉಜ್ಜಿ,ಉಸಿರೂಡಿ,ಹೊಳಪಾಗಿಸುತ ,ಹೆಣೆದು ಮಾಡಿದರು ಸೊಬಗಿನಕ್ಷಯ ಹಾರ.
ಸುದೀರ್ಘ ಪಯಣದ ಕೊನೆಗೆ
ಹಿಂದಿರುಗಿ ನೋಡಿದರೆ
ಇವರದೇ ಹೆಜ್ಜೆಗುರುತು.
ತೃಪ್ತಿ,ಅತೃಪ್ತಿಯ ನಡುವೆ ಜೋಕಾಲಿಯಾಡುವ ಇವರು
ಕೆಲವೊಮ್ಮೆ ಸಿಡಿವ ಜ್ವಾಲಾಮುಖಿ
ಮತ್ತೊಮ್ಮೆ ತಣ್ಣಗಿನ ಮಂಜುಗಡ್ಡೆ.
ಅಶಾಂತ ಚಿತ್ತದ ತಹತಹದ ನಡುವೆಯೂ
ಕೊನೆಗೂ ಉಳಿದಿರುವ ನಿರ್ಮಲ ಚಿತ್ತ.
ಎಲ್ಲ ಇದ್ದೂ ಇವರು ಅನಿಕೇತನ
ಆಗಿಸುತ ನಿಂತ ನೆಲೆಯೇ ಕೇತನ.
ಹೆಚ್ಚಿನ ಬರಹಗಳಿಗಾಗಿ
ಹಣತೆ – ನಸುಕು ಕವಿಗೋಷ್ಠಿ
ತಿರುಮಲೇಶ್ ಮೇಷ್ಟ್ರಿಗೆ
ತಿರುಮಲೇಶ್- ೮೦:ವಿಶೇಷ ಸಂಚಿಕೆ