ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವಾಸಾ ಎಂಬ ಹಡಗಿನ ಕತೆ

ವಿಜಯ್ ದಾರಿಹೋಕ
ಇತ್ತೀಚಿನ ಬರಹಗಳು: ವಿಜಯ್ ದಾರಿಹೋಕ (ಎಲ್ಲವನ್ನು ಓದಿ)

ಇದು ನಡೆದದ್ದು ಹದಿನೇಳನೇ ಶತಮಾನದ ಮೊದಲ ಭಾಗದಲ್ಲಿ. ಗುಸ್ತಾವ್ ಅಡೋಲ್ಫ್ ಎನ್ನುವ ಅರಸ ಸ್ವೀಡನ್ ದೇಶವನ್ನು ಯುರೋಪಿನ ಅತ್ಯಂತ ಪ್ರಭಾವಶಾಲಿ ಮಿಲಿಟರಿ ಶಕ್ತಿಯನ್ನಾಗಿ ಮಾರ್ಪಡಿಸಿದ ಕಾಲವದಾಗಿತ್ತು. ಬಾಲ್ಟಿಕ್ ಸಾಗರದಿಂದ ಸುತ್ತುವರೆದ ಸ್ವೀಡನ್ ತನ್ನ ಸುತ್ತ ಮುತ್ತಲ ಪೋಲಂಡ್, ಲಿಥುವೇನಿಯಾ, ಹಾಗೂ ಕೆಲ ದ್ವೀಪ ರಾಷ್ಟಗಳ ಜತೆ ಅವ್ಯಾಹತ ಯುದ್ಧ ಸಾರಿತ್ತು. ಸಾಗರದ ಮೂಲಕ ನೌಕಾಯುದ್ಧ ಆಗಿನ ಕಾಲದ ಪ್ರಮುಖ ಯುದ್ಧ ನೀತಿಯಾಗಿತ್ತು. 

ಹೀಗಿರುವಾಗ ಇತ್ತೀಚಿನ ಕೆಲ ಯುದ್ಧಗಳಲ್ಲಿ ತನ್ನ ಕಡೆಯ ಅನೇಕ ನೌಕೆಗಳು ಶತ್ರುಗಳ ಆಕ್ರಮಣದ ವೇಳೆ ಭಾರೀ ಪ್ರಮಾಣದಲ್ಲಿ ನಾಶವಾಗಿದ್ದು ನೌಕದಳಕ್ಕಾದ ಹಿನ್ನಡೆ ಅರಸನ ತೀವ್ರ ಚಿಂತೆಗೆ ಕಾರಣವಾಗಿತ್ತು. ಅಲ್ಲದೆ ಚಿಕ್ಕ ಚಿಕ್ಕ ನೌಕೆಗಳಿಂದ ಭಾರೀ ಪ್ರಮಾಣದ ಶಸ್ತ್ರಸ್ತ್ರಗಳನ್ನು ಸಾಗಿಸುವದು ಕೂಡ ಕಠಿಣವಾಗಿತ್ತು.  ಆ ಪರಿಸ್ಥಿತಿಯಲ್ಲಿ ಒಂದು ಬಲಿಷ್ಟ ಬೃಹತ್ ಹಡಗು ತೀರಾ ಅವಶ್ಯ ಅಂತ ಅರಸನಿಗೆ ಮನದಟ್ಟಾಗಿದ್ದು ಸಹಜ.

ಇಸವಿ ಹದಿನಾರ ನೂರಾ ಇಪ್ಪತ್ತೈದು ಜನವರಿಯಲ್ಲಿ ಹೆನ್ರಿಕ್ ಎಂಬ ಡಚ್ ಹಡಗು ತಯಾರಿಕಾ ತಜ್ಞ ಹಾಗೂ ಅವನ ವ್ಯಾಪಾರಿ ಜೊತೆಗಾರ ಸ್ವೀಡನ್ ನ ಅರಸನೊಂದಿಗೆ ಒಂದು ಒಡಂಬಡಿಕೆಗೆ ಹಸ್ತಾಕ್ಷರ ಹಾಕುತ್ತಾರೆ. ವಸಂತ ಋತು ಕಳೆದು ಚಳಿಗಾಲದ ಹಿಮ ಶುರುವಾಗುವ ಹೊತ್ತಿಗೆ ಒಂದು ಐತಿಹಾಸಿಕ ಹಡಗಿನ ನಿರ್ಮಾಣ ಭರದಿಂದ ಸಾಗತೊಡಗಿತು. ಆ ಹಡಗಿನ ಹೆಸರು ವಾಸಾ.

ಸ್ವೀಡನ್ನಿನ ದೊಡ್ಡ ಎಸ್ಟೇಟ್ ಗಳಿಂದ , ರಿಗಾ ದ್ವೀಪದಿಂದ ತಯಾರಿಕೆಗೆ ಬೇಕಾದ ಬೃಹತ್ ಮರದ ದಿಮ್ಮಿಗಳನ್ನು ತರಿಸಲಾಯಿತು. ಚಲನೆ ಹಾಗೂ ಸಂಗ್ರಹಕ್ಕೆ ಅನುಕೂಲವಾಗುವಂತೆ ನಾಲಕ್ಕು ಅಂತಸ್ತಿನ ನಿರ್ಮಾಣ ಸಾಗುತ್ತಿತ್ತು. ಹಡಗಿನ ಕೆಳಕ್ಕೆ ನೀರನ್ನು ಸೀಳಲು ಸಹಕರಿಸುವಂತ ಕೀಲನ್ನು ಅಳವಡಿಸಲಾಗಿತ್ತು. ಈ ಕೀಲ್ ನಿಂದ ಅತ್ಯಂತ ಮೇಲ್ಬಾಗದ ಹಡಗಿನ ಎತ್ತರ ಸುಮಾರು ಐವತ್ತು ಅಡಿಗಳಷ್ಟು. ಉದ್ದ ಬರೋಬ್ಬರಿ ಅರವತ್ತೊಂಬತ್ತು ಅಡಿಗಳು. ಈ ನಡುವೆ ಪೊಲಂಡ್ ನಲ್ಲಿ ಯುದ್ಧಮಗ್ನ ಅರಸನಿಗೆ ನೌಕಾ ದಳ ದ ಒಬ್ಬ ಸೇನಾ ಪತಿಯ ಮೂಲದ ಹಡಗು ನಿರ್ಮಾಣ ದ ಬಗ್ಗೆ ನಿಯಮಿತ ಮಾಹಿತಿ ದೊರಕುತ್ತಿತ್ತು.

ಹೆನ್ರಿಕ್ ವಿನ್ಯಾಸಕಾರ, ತಜ್ಞ ಈ ಮುಂಚೆ ಸ್ವೀಡಿಷ್ ಅರಸು ಮನೆತನಕ್ಕೆ ಅನೇಕ ಯಶಸ್ವಿ ಹಡಗುಗಳನ್ನು ನಿರ್ಮಿಸಿಕೊಟ್ಟಿದ್ದನಾದರೂ ವಾಸಾ ಹಡಗು ತನ್ನ ಗಾತ್ರ ಹಾಗೂ ಶೇಖರಣಾ ಅಗತ್ಯಗಳಿಂದಾಗಿ ಎಲ್ಲದಕ್ಕಿಂತ ವಿಭಿನ್ನವಾಗಿತ್ತು.  

ಅತ್ತ ಅರಸನ ತವಕಕ್ಕೆ ಎಲ್ಲೆ ಇರಲಿಲ್ಲ.  ಅದೇ ವರ್ಷದ ಕೊನೆಯಲ್ಲಿ ಹಡಗು ತಯಾರಿಕಾ ತಜ್ಞ ಹೆನ್ರಿಕ್ ಅಸ್ವಸ್ಥನಾಗುತ್ತಾನೆ ಹಾಗೂ ಮರು ವರ್ಷದ ಬೇಸಗೆ ಬರುತ್ತಿದ್ದಂತೆ ಇನ್ನೋರ್ವ ಹಡಗು ತಜ್ಞನಿಗೇ ತಯಾರಿಕಾ ಕಾರ್ಯದ ಉಳಿದ ಜವಾಬ್ದಾರಿಯನ್ನು ವಹಿಸಿಕೊಡುತ್ತಾನೆ. ಮತ್ತೆ ಹಡಗು ಕಟ್ಟುವ ಕೆಲಸ ಮುಂದುವರೆಯುತ್ತದೆ. ಈ ನಡುವೆ ಹದಿನಾರು ನೂರಾ ಇಪ್ಪತ್ತೇಳರ ವಸಂತ ಋತುವಿನ ವೇಳೆಗೆ ಅಸ್ವಸ್ಥ ಹೆನ್ರಿಕ್ ತೀರಿಕೊಳುತ್ತಾನೆ. 

ಇತ್ತ ಹಡಗಿನ ನಿರ್ಮಾಣ ಕೊನೆಗೆ ಹಡಗಿನ ಮೇಲಿನ ತೆಳುವಾದ ಆದರೆ ಬಲಿಷ್ಟ ವಿಶೇಷ ಬಟ್ಟೆಯನ್ನು ಹಾಯಿ ಪಟಕ್ಕೆಕಟ್ಟುವ ಹಂತಕ್ಕೇ ಬಂದು ಮುಟ್ಟಿತ್ತು. ಅದನ್ನು ಸ್ವೀಡನ್ ತಯಾರಿಕೆ ಮಾಡುತ್ತಿರಲ್ಲಿಲ್ಲವಾದ್ದರಿಂದ ಹಾಲೆಂಡ್ ನಿಂದ ಆಮದು ಕೊಳ್ಳಲಾಯಿತು. ಸತತ ಎರಡು ವರುಷಗಳಿಗಿಂತ ಹೆಚ್ಚು ನೂರಾರು ಕರ್ಮಿಗಳಿಂದ ನಿರ್ಮಿತ ಹಡಗು ತಯಾರಾಗಿತ್ತು. ಅದ್ಭುತವಾಗಿ ಕಾಣುವ ಹಡುಗಿನಲ್ಲಿ ನೂರಿಪ್ಪತ್ತು ಟನ್ ಭಾರದ ನಿಯಂತ್ರಣವಿತ್ತು. ಜತೆಗೆ ಅರಸನ ಸೂಚನೆಯ ಮೇರೆಗೆ ಸ್ವಲ್ಪ ಜಾಸ್ತಿಯೇ ಅನ್ನಿಸುವ ಇಪ್ಪತ್ನಾಲ್ಕು ಪೌಂಡಿನ ಎಪ್ಪತೆರಡು ಕಂಚಿನ ಸಿಡಿ ಮದ್ದುಗಳನ್ನು ಇರಿಸಲಾಯಿತು. ಅಷ್ಟೆ ಅಲ್ಲದೆ ಹತ್ತು ಚಿಕ್ಕ ನೌಕೆಗಳನ್ನೂ, ನೂರಾರು ಕೆತ್ತನೆಗಳೂ ಕೂಡ ಇದ್ದವು. ಒಟ್ಟಾರೆಯಾಗಿ ಹಡಗಿನ ತೂಕ ಬರೋಬ್ಬರಿ ಸಾವಿರದ ಎರಡು ನೂರು ಟನ್ ಗಳಷ್ಟಾಗಿತ್ತು. ಅಂತೂ ಅರಸನ ಮಹತ್ವಾಕಾಂಕ್ಷೆಯ, ಆ ಕಾಲದಲ್ಲಿ ಜಗತ್ತಿನಲ್ಲೇ ಅತೀ ಹೆಚ್ಚಿನ ಯುದ್ಧ ಸುಸಜ್ಜಿತ ಹಡಗು ‘ವಾಸಾ’ದ ಉದಯವಾಗಿತ್ತು..

ಆದಷ್ಟು ಬೇಗ ಜಾಲ ಪ್ರಯಾಣ ಆರಂಭಿಸಿ ಎಂದು ಪೋಲ್ಯಾಂಡ್ ನಿಂದ ಯುದ್ಧ ನಿರತ ಅರಸನ ಪತ್ರಗಳ ಸಾಲು ಸಾಲೇ ಬರ ತೊಡಗಿದವು.  ಇಸವಿ ಹದಿನಾರುನೂರ ಇಪ್ಪತ್ತೆಂಟು. ಆ ದಿನ ವಾಸಾ ಹಡಗನ್ನು ಸ್ಟಾಕ್ ಹೋಮ್ ನ ನೌಕತಾಣ ದಲ್ಲಿ ಪರೀಕ್ಷಿಸುವ ತಯಾರಿ ನಡೆಯಿತು.. ಅರಸನ ನೌಕಾ ದಳದ ಆಡ್ಮಿರಲ್ ಮತ್ತು ಹಡಗು ತಜ್ಞರ ಕ್ಯಾಪ್ಟನ್ ರ ಸಮ್ಮುಖದಲ್ಲಿ ಪ್ರದರ್ಶನ (ಡೆಮೋನ್‌ಸ್ಟ್ರೇಷನ್) ಆರಂಭವಾಯಿತು.

ಕ್ಯಾಪ್ಟನ್ ತನ್ನ ಮೂವತ್ತು ಜನ ಸಿಬ್ಬಂದಿಯನ್ನು ಹಡಗಿನ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಹಿಂದೆ ಮುಂದೆ ಓಡುವಂತೆ ಹೇಳುತ್ತಾನೆ. ಆಗ ಹಡಗು ಸ್ವಲ್ಪ ಜಾತಿಯೇ ಎನ್ನಿಸುವಷ್ಟು ಓರೆಯಾಗಿ ವಾಲುವಂತೆ ತೋರುತ್ತದೆ. ಹೀಗೆ ಮೂರು ರೌಂಡ್ ಹಡಗನ್ನು ತೇಲಿಸುವ ಹೊತ್ತಿಗೆ, ಕಾಪ್ಟನ್ ಗೆ ಸಣ್ಣನೆ ನಡುಕ ಶುರುವಾಗುತ್ತೆ. ಆಡ್ಮಿರಲ್ ಕೂಡಲೇ ಡೆಮೋನ್‌ಸ್ಟ್ರೇಷನ್ ನಿಲ್ಲಿಸುತ್ತಾನೆ. ಅರಸರೇ ಈ ಸಮಯದಲ್ಲಿ ನೀವು ಸ್ವರಾಜ್ಯದಲ್ಲಿದ್ದಿದ್ದರೆ…. ಅಂತ ಹಲುಬಿದ್ದು ಅಲ್ಲಿದ್ದವರು ಅಸ್ಪಷ್ಟವಾಗಿ ಕೇಳಿಸಿಕೊಳ್ಳುತ್ತಾರೆ. 

ಇತ್ತ ಅರಸನ ಇನ್ನೊಂದು ಪತ್ರ ವಿಳಂಬದ ಬಗ್ಗೆ ಅಸಹನೆಯನ್ನು ಹೊತ್ತು ತರುತ್ತದೆ. ಆಡ್ಮಿರಲ್ ಗಂಭೀರವಾಗಿ “ಎಲ್ಲ ಸರಿ, ಹಡಗನ್ನು ಬಾಲ್ಟಿಕ್ ಸಮುದ್ರ ಪ್ರಯಾಣಕ್ಕೆ ಅಣಿಗೊಳಿಸಿ” ಅಂತ ಹೇಳಿ ಬಿರಬಿರನೆ ಅಲ್ಲಿಂದ ಕಾಲು ಕಿತ್ತುತ್ತಾನೆ.  ಹತ್ತು ಆಗೋಸ್ಟ್ ಹದಿನಾರ್ ನೂರಾ ಇಪ್ಪಂತೆಂಟು. ಸ್ಟಾಕ್ ಹೋಂ ನ ಹಾರ್ಬರ್ ನಿಂದ ವಾಸಾ ಯುದ್ಧ ಹಡುಗು ತನ್ನ ಮೊದಲ ಪ್ರಯಾಣಕ್ಕೆ ಸಿದ್ಧವಾಗಿತ್ತು. ಈ ಭವ್ಯ ಐತಿಹಾಸಿಕ ದಿನದಂದು ಸಿಬ್ಬಂದಿವರ್ಗ ತಮ್ಮ ಕುಟುಂಬ ವರ್ಗದವರನ್ನು ಕರೆಸಿದ್ದಾರೆ. ಅಷ್ಟೇ ಅಲ್ಲದೆ ಪುರದ ಜನರೂ,ಕೆಲವು ವಿದೇಶೀ ಪ್ರತಿನಿಧಿಗಳು ರವಿವಾರದ ದಿನದಂದು ಆ ಐತಿಹಾಸಿಕ ಕ್ಷಣ ಕ್ಕಾಗಿ ನೆರೆದಿದ್ದರು.ಬೆಳಗ್ಗೆಯೆ ಹೊರಡ ಬೇಕಿದ್ದ ಹಡಗು, ಸಿಡಿಮದ್ದುಗಳು ಮತ್ತು ಪ್ರಯಾಣಕ್ಕೆ ಬೇಕಾದ ಕೊನೆ ಕ್ಷಣದ ಹೇರಿಕೆಯಲ್ಲಿ ಮಧ್ಯಾಹ್ನದ ವರೆಗೂ ವಿಳಂಬವಾಗತೊಡಗಿತು. ವಾಸಾ ಹಡಗು ಮೊದಲು ಪೋಲಂಡ್ ಗೆ ಹೋರಾಡ ಬೇಕೋ ಅಥವಾ ಜರ್ಮನಿಯಲ್ಲಿ ನಡೆವ ಇನ್ನೊಂದು ಯುದ್ಧದತ್ತ ಧಾವಿಸಬೇಕೋ ಎನ್ನುವ ಸ್ಪಷ್ಟತೆ ಇರದಿದ್ದರೂ ಮೊದಲು ನೀವು ಮುನ್ನಡೆಯಿರಿ ಎತ್ತ ಹೋಗಬೇಕೆನ್ನುವದನ್ನ ದಾರಿಯಲ್ಲಿ ನಿಖರವಾಗಿ ಹೇಳುತ್ತೇವೆ ಎನ್ನುವ ಸೂಚನೆ ಬಂತು. 

ಸಂಜೆ ನಾಲಕ್ಕು ಐದು ಗಂಟೆಯ ಸಮಯ. ಅರಮನೆಯ ಬಳಿಯ ದಡದಲ್ಲಿ ಕಟ್ಟಿದ್ದ ಹಗ್ಗವನ್ನು ಸಡಿಲಿಸಲಾಯಿತು. ನೆರೆದ ಮಕ್ಕಳ, ಮಹಿಳೆಯರ ಹರ್ಷದ ಕೇಕೆ ಮುಗಿಲು ಮುಟ್ಟಿತು. ತೋಪನ್ನು ಸಿಡಿಸಿ ಸೆಲ್ಯುಟ್ ನ್ನು ನೀಡಲಾಯಿತು.ಸೇನೆಗೆ ತಕ್ಕ ಸಂಗೀತವನ್ನು ನುಡಿಸಲಾಯಿತು. .ಕೆಲವು ಗಜಗಳ ಅಂತರಲ್ಲಿರುವ ಸ್ಲುಸ್ಸೇನ್ ಅನ್ನುವ ಪ್ರದೇಶದ ಅರೆಗೆ ದಪ್ಪನೆ ಹಗ್ಗದಿಂದ ನೀರಿನ ಮೇಲೆ ಎಳೆಯುತ್ತಿದ್ದಂತೆ ದಕ್ಷಿಣದಿಂದ ಬೀಸುತ್ತಿದ್ದ ಗಾಳಿಗೆ ತಕ್ಕಂತೆ ಹಡಗಿನ ಹಾಯಿ ಪಟವನ್ನು ಅಳವಡಿಸಲಾಯಿತು. ಹಗ್ಗವನ್ನು ಪೂರ್ತಿ ಬಿಡಿಸುತ್ತಿದ್ದಂತೇ ವಾಸಾ ಅನ್ನುವ ಐತಿಹಾಸಿಕ ಯುದ್ಧ ಹಡಗು ಸಾಗಲು ಆರಂಬಿಸಿತು.  ಚಿಕ್ಕ ಪುಟ್ಟ ಗಾಳಿಯ ಪ್ರವಾಹಕ್ಕೆ ಹಡಗು ಸ್ವಲ್ಪ ಆಚೀಚೆ ಹೋಯ್ದಾಡುವಂತೆ ಅನ್ನಿಸಿದ್ದರೂ ತನ್ನಿಂತಾನೇ ನಿಯಂತ್ರಣ ಗೊಂಡು ಮುಂದೆ ಸಾಗತೊಡಗಿತು. ಮೂಲಸ್ಥಾನದಿಂದ ಒಂದೂವರೆ ಕಿಲೋ ಮೀಟರ್ ಕೂಡ ಸಾಗಿರಲಿಲ್ಲ ಆ ಹೊತ್ತಿಗೆ ಅದ್ಯಾವುದೊ ದಿಕ್ಕಿನಿಂದ ಇತಿಹಾಸ ದಾಖಲಿಸುವ ಶಕ್ತಿಯುಳ್ಳ ಒಂದು ದೊಡ್ಡ ಗಾಳಿಯ ಮಾರುತ ವಾಸಾ ಹಡುಗಿನತ್ತ ತೇಲಿ ಬಂತು. ಆ ಹೊಡೆತಕ್ಕೆ ಹಡಗು ತುಸು ಜಾಸ್ತಿಯೇ ಬಾಗಿದ್ದರಿಂದ ಹಾಗೂ ಆ ಭಾರೀ ತೂಕದ ಸರಿ ಸಮಾನ ನೀರು ಒಳಕ್ಕೆ ನುಗ್ಗಲು ಆರಂಬಿಸಿತು, ಏನಾಗ್ತಿದೆ ಅಂತ ನೋಡುವಷ್ಟರಲ್ಲಿ ಕೆಲವರು ನೀರಿಗೆ ಹಾರಿದ್ದರು, ಇನ್ನೂ ಕೆಲವರು ಮೇಲಕ್ಕೆ ಹತ್ತಲು ತೊಡಗಿ ಏಣಿಯೂ ವಕ್ರವಾಗಿ ಹತ್ತಲು ಕಷ್ಟ ಪಡಬೇಕಾಯ್ತು. ದೂರದಲ್ಲಿ ಟಾಟಾ ಮಾಡುತ್ತಿದ್ದವರು ಏನೋ ಆಗಬಾರದ್ದು ಆಗ್ತಿದೆಯಾ ಅಂತೆನ್ನಿಸಿ ದೊಡ್ಡದಾಗಿ ಕಿರುಚ ತೊಡಗಿದರು. ಕೆಲವೇ ನಿಮಿಷಗಳಲ್ಲಿ ಮೂವತ್ತೆರಡು ಮೀಟರುಗಳಷ್ಟು ಹಡಗಿನ ಭಾಗ ನೀರಲ್ಲಿ ಮುಳುಗತೊಡಗಿತು. ನೂರಾರು ಪ್ರಯಾಣಿಕರಲ್ಲಿ ಕೇವಲ್ ಮೂವತ್ತು ಜನರು ಈಜಿ ದಡ ಸೇರಿಕೊಂಡರೆ ಉಳಿದವೆರೆಲ್ಲರೂ ಪೂರ್ತಿ ಮುಳುಗಿದ ಹಡಗಿನಲ್ಲಿ ಸಿಲುಕಿ ಮ್ಱುತ್ಯುವಶವಾಗಿ ಹೋದರು.  ಆ ರಾತ್ರಿ ಪೂರ್ತಿ ನಗರದಾದ ತುಂಬಾ ತೀವ್ರ ದಿಗ್ಭ್ರಮೆ, ಕೋಪ, ಸಂತಾಪಗಳು ಊಳಿಡತೊಡಗಿದವು.