ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಆಗಲಾದರೂ ನುಸುಳಿ

ಬೆಂಶ್ರೀ ರವೀಂದ್ರ
ಇತ್ತೀಚಿನ ಬರಹಗಳು: ಬೆಂಶ್ರೀ ರವೀಂದ್ರ (ಎಲ್ಲವನ್ನು ಓದಿ)

ನನಗೆ ಯಾವಾಗಲೊ ಸತ್ಯದ ಸಾಕ್ಷಾತ್ಕಾರವಾಗಿದೆ
ನಿನ್ನ ಮನಸ್ಸಿನಲ್ಲಿ ನಾನಿಲ್ಲ
ಬೇರೆ ಯಾವ​ಳೋ ಅವಿತಿದ್ದಾಳೆ
ನನಗೆ ಕಾಣದಂತೆ, ಕೇಳಿದರೆ
ಮುಖ ಬೆಂದ ಬಾಳೆಹಣ್ಣಾಗುತ್ತದೆ.

ಈ ಗಂಡಸರೆ ಹೀಗೆ,
ಗುಟ್ಟು ಬಿಟ್ಟು ಕೊಡುವುದಿಲ್ಲ
ನನ್ನ ಜೀವನದಲ್ಲಿ
ನೀನೊಬ್ಬಳೆ ಹೆಣ್ಣು ಅನ್ನುತ್ತಾನೆ
ನಿನ್ನ ಮುಖವೆಷ್ಟು ಚಂದ
ಹುಡುಗಿ ನೀ ಜಕ್ಕಣನ ಶಿಲ್ಪ
ಅನ್ನಪೂರ್ಣೆ ಪರಿಪೂರ್ಣೆ ಅನ್ನುತ್ತಾನೆ
ನಿನ್ನ ಆಲೋಚನೆಗಳೆ ನನ್ನ ಗೈಡ್
ಮಾತುಗಳೆಷ್ಟು ಲಾಜಿಕಲ್ ಆಗಿವೆ
ಬಹಳ ಪ್ರಾಕ್ಟಿಕಲ್ ಹುಡುಗಿ
ಅನ್ನುತ್ತಾ ಕತ್ತು ಬಳಸಿ ತುಟಿ ಒತ್ತುತ್ತಾನೆ
ಕಂಬಳಿ ಉಜ್ಜಿದಂತೆ ಅನಿಸುತ್ತದೆ
ಪುಸಲಾವಣೆಯ ಪುಂಗಿ ಊದುತ್ತಾನೆ
ಅಮಾಯಕಳಿಗೆಂಬಂತೆ
ಮಾಯಾಪರದೆ ಹೊಸೆಯುತ್ತಾನೆ

ನನ್ನ ಮಾತು ಮಾತಿಗೆ
ಪಾತಾಳಗರಡಿಯನಿಳಿಸಿ ಹುಡುಕುತ್ತಾನೆ
ಮಾತಿನ ಗರಡಿಯ ಸರದಾರನವ
ಸುಮ್ನೆ ಕೇಳ್ದೆ ಪುಟ್ಟಿ ಆ ವಿಚಾರ,
ಯಾವುದೋ ಕಾಲದ ವಿಷಯ ನನಗ್ಯಾಕೆ
ನನ್ಗೆ ಗೊತ್ತಿಲ್ವಾ ನೀನೀಗ ನನ್ನವಳು
ನನ್ನವಳಾದ ಮೇಲಿನದಷ್ಟೆ
ನನಗೆ ಸಂಬಂಧ ಅನ್ನುತ್ತಾನೆ
ಅವನ ಕಣ್ಣುಗಳು, ಏರಿಳಿವ ಧ್ವನಿಯಲೆಗಳು
ಬಣ್ಣ ಕಲಸಿದ ಮುಖ, ಅವನ ಮಾತಿಗೆ ನಿಕಷ

ನನಗೆ ಗೊತ್ತು
ಅವನ ಕವನಗಳಲ್ಲಿ ನಾನಿಲ್ಲ
ರೂಪಕ ಉಪಮೆಗಳಿಗೆ ನಾನು ಫಿಟ್ ಆಗುವುದಿಲ್ಲ , ಚಿತ್ರದ ಬಣ್ಣಗಳು ಹೊಂದುವುದಿಲ್ಲ

ಪಕ್ಕದಲ್ಲಿ ನಾನಿರುವಾಗ
ಕಳೆದುಕೊಂಡ ಕಥೆಗಳನ್ನೆ ಹೇಳುತ್ತಾನೆ.
ಅವನ‌ ಕವನದಕ್ಷರದ ಗೂಢಭಾವಗಳು
ನನ್ನ ಎದೆಯಲ್ಲಿ ಬಿಚ್ಚಿಕೊಳ್ಳುತ್ತವೆ
ಕವನಿಸಿದ ನವಿರು ರೊಮ್ಯಾಂಟಿಕ್ ಭಾವಗಳು ನನ್ನೊಡನೆ ನುಡಿವಾಗ ಮಕಾಡೆ ಮಲಗುತ್ತವೆ

ದಾಟಿ ಬಂದಿದ್ದೇವೆ ಎಷ್ಟೋ ದೂರ,
ಗಡಿಯಾರದ ಮುಳ್ಳುಗಳು ಹಿಂದೆ ಸರಿಯುವುದಿಲ್ಲ ನಿನ್ನಿನ ರವಿಯು ಇಂದಿಲ್ಲ ಗೆಳೆಯ

ನಿನ್ನ ಕನವರಿಕೆಗಳಿಗೆ ಹಲುಬುವೆ
ನಿನ್ನ ನೇವರಿಕೆಗಳು ಹೇವರಿಕೆಗಳಾಗುತ್ತಿವೆ
ಗೋರಿಯೊಳಗೆ ಸಂಸಾರ ಮಾಡಲಾಗುವುದಿಲ್ಲ ಹುಡುಗ
ನಿನ್ನ ತೆಕ್ಕೆಯೊಳಗೆ ಬಂದಾಗಲೆ
ನನ್ನ ಸ್ಲೇಟು ಕ್ಲೀನಾಯಿತು
ಕಳೆದಿದ್ದನೊರೆಸಿ ನಿನ್ನ ಚಿತ್ರವ ಬರೆದೆ.

“ನನ್ನೊಳಗೆ ಅವಳಿದ್ದು ನಿನ್ನೊಳಗೆ ಅವನಿರಲು ಸುರತ ರಸಾಭಾಸವಲ್ಲವೆ
ಹ್ಞು..ಅದಕೂ ಇದಕೂ ಸಂಬಂಧವಿಲ್ಲ
ಬೆಸೆದು ಬೆಸೆಗೊಳ್ಳುವುದೆ ಬದುಕು”
ಅನ್ನುವುದು ನಿನ್ನೊಂದು ಕವನದ ಸಾಲುಗಳು

ಹೋಗಲಿ ಬಿಡು; ತೆರೆದುಕೋ
ಮುಚ್ಚಿದಷ್ಟು ಹಳೆಯ ವಾಸನೆ ಕೊಳೆಯುತ್ತದೆ
ಕನಸುಗಳ ಹುತ್ತ ಕಟ್ಟಬೇಡ , ಹಾವು ಸೇರುತ್ತದೆ
ನನಸುಗಳತ್ತ ಚಿತ್ತಕಟ್ಟು ,ಬಾವು ಒಣಗುತ್ತದೆ
ಪಾರದರ್ಶಕವಾಗಿ ಬಿಡು ನನ್ನಂತೆ
ಕೈಗೆಟಕುವುದನ್ನು ಮನಬಿಚ್ಚಿ ಅಪ್ಪಿಕೋ
ಮಣ್ಣವಾಸನೆಗೆ
ಮೂಗಿನ ಹೊರಳೆಗಳ ಅರಳಿಸಿಬಿಡು
ಆಗಲಾದರೂ ನಾನು ನಿನ್ನೊಳಗೆ ನುಸುಳಿ
ಹಳೆಯ ಗಾಳಿಯ ತೊಡೆದು
ನಿನ್ನ ಪಡೆಯುವೆನೊ ಅಥವಾ
ಗಾಳಿಯ ಸುಳಿಗೆ ಸಿಕ್ಕಿ
ತೂರಿ ಹೋಗುವೆನೋ ನೋಡೋಣ