- ಪಾತ್ರದೊಳಗಿನ ಕಲೆಗಳು - ಅಕ್ಟೋಬರ್ 28, 2024
- ಸಿದ್ಧಾಂತಗಳು ಬೆಳಕನ್ನು ಬಂಧಿಸಬಲ್ಲವೇ? - ಸೆಪ್ಟೆಂಬರ್ 4, 2022
- ಪಾತರಗಿತ್ತಿ ಪರಿಣಾಮ! - ಆಗಸ್ಟ್ 21, 2022
ಇರುವೆ ನಡಿಗೆ- 6
“ಅನು ಪುಟ್ಟೂ, ಗಮನವಿಟ್ಟು ಕೇಳು. ಗಗನದಲ್ಲಿ ನಕ್ಷತ್ರ, ಗ್ರಹ, ಉಪಗ್ರಹ ಇತ್ಯಾದಿ ಆಕಾಶಕಾಯಗಳನ್ನು ಬಿಟ್ಟರೆ, ಉಳಿದ ಅಷ್ಟೂ ಜಾಗ, ನಿರ್ವಾತ ಪ್ರದೇಶ. ಲಕ್ಷ ಲಕ್ಷಗಟ್ಟಲೆ ಕಿಲೋಮೀಟರ್ ವಿಸ್ತಾರ ಈ ಗಗನದ್ದು.”
ನೀಲಗಗನದ ಬಗ್ಗೆ ಹೇಳತೊಡಗಿದರೆ ಅರಳು ನೇತ್ರದಿಂದ ಅನು ಪುಟ್ಟು ಆಲಿಸುತ್ತಾ, ಕುತೂಹಲದ ಚಿಲುಮೆಯಾದಳು.
“ಮಾಮಾ, ಈ ಪ್ರಪಂಚದ ವಿಸ್ತಾರ ಇಷ್ಟು ಅಂತೆಲ್ಲ ಲೆಕ್ಕ ಹಾಕುವುದು ಹೇಗೆ!, ನನಗೆ ನನ್ನ ಮನೆಯಿಂದ ಶಾಲೆಗೆ ಮೂರು ಕಿಲೋಮೀಟರ್ ಅಂತ ಗೊತ್ತು. ಅದನ್ನು ಅಳೆಯಲು ಕೂಡಾ ಮೀಟರ್ ಅಥವಾ ಅಡಿಕೋಲು ಇದೆ. ಆಕಾಶದಲ್ಲಿ ನಿರ್ವಾತಪ್ರದೇಶ ಅಲ್ವಾ, ಈ ದೂರವನ್ನು ಅಳೆಯುವುದು ಹೇಗೆ ಮಾಮಾ?.”
” ಅನು, ಎಷ್ಟು ಚಂದ ಹೇಳಿದಿ. ಮೀಟರ್ ಒಂದು ಸಲಕರಣೆ ಮತ್ತು ಮಾನಕ ತಾನೇ. ಹಾಗೆಯೇ ಆಕಾಶದರ್ಶನಕ್ಕೆ ದೂರದರ್ಶಕ ಉಪಯೋಗಿಸುತ್ತಾರೆ. ಬೆಳಕು ನಕ್ಷತ್ರ ದಿಂದ ಹೊರಟು ನಮ್ಮ ಭೂಮಿಯ ದೂರದರ್ಶಕಕ್ಕೆ ತಲಪಲು ಎಷ್ಟು ಕಾಲ ಬೇಕು, ಎಂದು ಲೆಕ್ಕ ಹಾಕಲು ಬರುತ್ತದೆ. ಹಾಗಾಗಿ, ಪ್ರಪಂಚದ ಅಗಾಧತೆಯಲ್ಲಿ, ದೂರಗಣಿಕೆಗೆ ಬೆಳಕಿನ ಕಿರಣವನ್ನೇ ಒಂದು ಟೂಲ್ ಆಗಿ ಉಪಯೋಗಿಸುತ್ತಾರೆ. ಅಂದಹಾಗೇ ನಿನಗೊಂದು ವಿಷಯ ಗೊತ್ತಾ?. ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಎಕ್ಸ್ ರೇ ದೂರದರ್ಶಕದ ಹೆಸರು ‘ ಚಂದ್ರ ಎಕ್ಸ್ ರೇ ಅಬ್ಸರ್ವೇಟರಿ” ಅಂತ.”
” ಮಾಮಾ!, ನಿನ್ನೆ ಒಂದು ನ್ಯೂಸ್ ಓದಿದೆ. ನಾಸಾ ಸುಮಾರು ಇಪ್ಪತ್ತೆರಡು ‘ಬ್ಲಾಕ್ ಹೋಲ್’ ಗಳನ್ನು ಕಂಡುಹಿಡಿದು ಅವುಗಳ ವಿವರ ಪ್ರಕಟಿಸಿದೆ,ಅಂತ. ಅದೇ ನಾಸಾ ಅಲ್ವಾ ಮಾಮಾ, ನೀನು ಹೇಳ್ತಿರೋದು?.”
” ಹೌದು ಪುಟ್ಟು!. ಎಷ್ಟೊಂದು ಕುತೂಹಲ ನಿನಗೆ!. ನಾನು ಈ ನ್ಯೂಸ್ ಓದೇ ಇಲ್ಲ!. ನಂಗೊತ್ತು! ನಿನ್ನ ಮುಂದಿನ ಪ್ರಶ್ನೆ ಈ ಬ್ಲಾಕ್ ಹೋಲ್ ಅಂದರೇನು? ಅಂತ. ಅದಕ್ಕೆ ಮೊದಲು, ಈ ದೂರದರ್ಶಕಕ್ಕೆ ನಾಸಾ, ಚಂದ್ರ” ಅಂತ ಅಪ್ಪಟ ಭಾರತೀಯ ಹೆಸರಿಡಲು ಕಾರಣವೇನು ಅಂತ!.”
” ಹ್ಞಾ ಮಾಮಾ, ನನ್ನ ಕ್ಲಾಸ್ ನಲ್ಲಿ ಚಂದ್ರಶೇಖರ ಅಂತ ಒಬ್ಬ ಬ್ರಿಲ್ಲಿಯೆಂಟ್ ಹುಡುಗ ಇದ್ದಾನೆ. ನಮ್ಮ ಫಿಸಿಕ್ಸ್ ಟೀಚರ್ ಯಾವಾಗಲೂ, ಈತ ಹೆಸರಾಂತ ವಿಜ್ಞಾನಿ ಸುಬ್ರಹ್ಮಣ್ಯನ್ ಚಂದ್ರಶೇಖರ್ ಥರಾನೇ ಆಗ್ತಾನೆ ನೋಡಿ ಅಂತಾರೆ. ನೀವು ಹೇಳೋ ‘ಚಂದ್ರ’ ಅವರೇನಾ? “
” ಹ್ಞಾ ಪುಟ್ಟು, ಅವರೇ ಚಂದ್ರಶೇಖರ್.
ಅದಿರಲಿ, ಈ ಬ್ರಿಲ್ಲಿಯೆಂಟ್ ಅಂತೆಲ್ಲ ಅನ್ತೀವಲ್ವಾ, ಅದನ್ನು ನಾವು ಭಾರತದ ಪರೀಕ್ಷೆಗಳಲ್ಲಿ ಅಳೆಯುವುದು, ಜ್ಞಾಪಕ ಶಕ್ತಿ ಮತ್ತು ಪ್ರಶ್ನೆಗೆ ಉತ್ತರಿಸುವ ವೇಗದ ಮೇಲೆ. ಆಲ್ಬರ್ಟ್ ಐನ್ಸ್ಟೈನ್ ಗೆ ಇವೆರಡೂ ಉತ್ತಮವಾಗಿರಲಿಲ್ಲ. ಆದರೆ ಅತ್ಯಂತ ಆಳವಾಗಿ ಚಿಂತಿಸುವ ಶಕ್ತಿ ಆತನಲ್ಲಿತ್ತು. ನಮ್ಮ ಹೆಮ್ಮೆಯ ಗಣಿತಶಾಸ್ತ್ರಜ್ಞ, ಶ್ರೀನಿವಾಸನ್ ರಾಮಾನುಜನ್ ಕೂಡಾ, ಗಣಿತ ಬಿಟ್ಟು ಉಳಿದ ವಿಷಯಗಳಲ್ಲಿ ತುಂಬಾ ಕಡಿಮೆ ಅಂಕ ಗಳಿಸುತ್ತಿದ್ದರಂತೆ. ಹಾಗಾಗಿ, ನಾವು ಬುದ್ಧಿಶಕ್ತಿಯನ್ನು, ಜ್ಞಾಪಕಶಕ್ತಿ ಮತ್ತು ಉತ್ತರಿಸುವ ವೇಗದಿಂದ ಅಳೆಯಬಾರದು. ನೀನು ಇಷ್ಟೊಂದು ಗಹನವಾದ ಪ್ರಶ್ನೆ ಕೇಳುತ್ತಿರುವೆಯಲ್ಲ, ಅದೂ ನಿನ್ನ ಬುದ್ದಿಶಕ್ತಿಯ ಆಳವೇ. ನಾನು ನಿನಗೆ ಕಥೆ ಹೇಳಹೊರಟಿರುವುದು, ಈ ಚಂದ್ರಶೇಖರ್ ಬಗೆಗೇ. ಆ ಕಥೆಗಿಂತ ಮೊದಲು, ನಮ್ಮ ಸೂರ್ಯ ಎಂಬ ನಕ್ಷತ್ರದ ಹುಟ್ಟಿನ ಬಗ್ಗೆ ಹೇಳುವೆ.
ಅಗಾಧ ವಿಸ್ತಾರದ ಬಾಹ್ಯಾಕಾಶದಲ್ಲಿ ಒಂದು ದೊಡ್ಡ ಹೈಡ್ರೋಜನ್ ಅನಿಲದ ಮೋಡವನ್ನು ಕಲ್ಪಿಸಿಕೋ. ಈ ಮೋಡ ಅಂತಿಂಥಾ ಮೋಡವಲ್ಲ, ಇದರ ಗಾತ್ರ ಹತ್ತಾರು ಮಿಲಿಯನ್ ಕಿಲೋಮೀಟರ್ ಅಂತ ಇಟ್ಟುಕೋ.”
” ಮಾಮ, ನಮ್ಮ ಭೂಮಿಯ ತ್ರಿಜ್ಯವೇ 6371 ಕಿಲೋಮೀಟರ್. ಹಾಗಿದ್ದರೆ, ನೀನು ಹೇಳ್ತಿರೋ ಮೋಡದ ಗಾತ್ರ ನಮ್ಮ ಭೂಮಿಗಿಂತ ಸಾವಿರಾರು ಪಟ್ಟು ದೊಡ್ದಲ್ವಾ?”
” ಹೌದು ಅನು ಪುಟ್ಟು,. ಆ ಮೋಡದಲ್ಲಿ ಹೈಡ್ರೋಜನ್ ಅಣುಗಳು ಒಂದೇ ಸಾಂದ್ರತೆಯಲ್ಲಿ, ಅಚ್ಚುಕಟ್ಟಾಗಿ ಹೊಂದಿಕೊಂಡಿವೆ ಅಂದುಕೊ. ನಿನ್ನ ಶಾಲೆಯಲ್ಲಿ ಮಾರ್ಚಫಾಸ್ಟ್ ಮಾಡುವಾಗ ಪ್ರತೀ ವಿದ್ಯಾರ್ಥಿಯೂ ಒಂದೇ ದೂರ, ಒಂದೇ ಸಮಯದಲ್ಲಿ ಕೈಬೀಸಿ ನಡೆಯುವ ಹಾಗೆ. ಎಲ್ಲವೂ ಸಮಾನವಾಗಿದ್ದಾಗ ಯಾವುದೋ ಒಂದು ಕ್ಷಣದಲ್ಲಿ, ಆ ಮೋಡದೊಳಗೆ ಎಲ್ಲೋ ಒಂದು ಕಡೆ ಅಚಾನಕ್ ಆಗಿ ಟರ್ಬ್ಯುಲೆನ್ಸ್ ಆಗಿ, ನೂರಾರು ಅಣುಗಳು ಒಟ್ಟಾದರೆ?. ಹಾಗೆ ಒಟ್ಟಾದ ಅಣುಗಳು ಕೇಂದ್ರವಾಗಿ, ತಮ್ಮ ಸುತ್ತಮುತ್ತಲಿನ ಅಣುಗಳನ್ನು ತಮ್ಮತ್ತ ಆಕರ್ಷಿಸುತ್ತವೆ ಅಲ್ವಾ.”
” ಹ್ಞಾ ಮಾಮ, ಹೀಗೆ ದ್ರವ್ಯರಾಶಿ ಒಂದಕ್ಕೊಂದು ಆಕರ್ಷಿಸುವುದಕ್ಕೇ ಗುರುತ್ವಾಕರ್ಷಣ ಶಕ್ತಿ ಅಂತಾರಲ್ವಾ ಮಾಮ?. ನ್ಯೂಟನ್ ನ ತಲೆ ಮೇಲೆ ಸೇಬಿನಹಣ್ಣು ಬಿದ್ದದ್ದು, ಅದಕ್ಕೆ ಕಾರಣ ಭೂಮಿಯ ಗುರುತ್ವಾಕರ್ಷಣ ಶಕ್ತಿ ಅಂತ ನನ್ನ ಐದನೇ ತರಗತಿಯ ಪಠ್ಯದಲ್ಲಿ ಇತ್ತು.”
” ಹೌದು. ಅದೇ ಗುರುತ್ವಾಕರ್ಷಣ ಶಕ್ತಿ. ತನ್ನ ಕೇಂದ್ರದತ್ತ ಸುತ್ತಮುತ್ತಲಿನ ಎಲ್ಲಾ ದ್ರವ್ಯರಾಶಿಯನ್ನು ಸೆಳೆಯುವ ಶಕ್ತಿ. ಈ ಶಕ್ತಿ ಎರಡು ವಿಷಯಗಳ ಮೇಲೆ ಅವಲಂಬಿಸಿದೆ. ದ್ರವ್ಯರಾಶಿ ಹೆಚ್ಚಿದ್ದಷ್ಟು ಆಕರ್ಷಣೆ ಹೆಚ್ಚು, ಕಡಿಮೆಯಿದ್ದರೆ ಆಕರ್ಷಣೆ ಕಡಿಮೆ. ಹಾಗೆಯೇ, ಆಕರ್ಷಣೆಗೊಳಗಾಗುವ ಎರಡು ದ್ರವ್ಯರಾಶಿ ಹತ್ತಿರವಾದಷ್ಟು, ಆಕರ್ಷಣೆ ಹೆಚ್ಚು, ದೂರವಾಗಿದ್ದರೆ, ಆಕರ್ಷಣೆ ಕಡಿಮೆ.
ಈಗ ಈ ಹೈಡ್ರೋಜನ್ ಅನಿಲಮೋಡದಲ್ಲಿ ಒಂದು ಕೇಂದ್ರ ಸೃಷ್ಟಿಯಾಯಿತಲ್ವಾ, ಆ ಕೇಂದ್ರದತ್ತ ಎಲ್ಲಾ ಅಣುಗಳೂ ಆಕರ್ಷಣೆಗೊಂಡು, ಚದುರಿದ ರೂಪದ ಅನಿಲದ ಮೋಡ, ಅನಿಲದ ಗೋಲವಾಗಿ ರೂಪತಳೆಯುತ್ತದೆ.
ಈ ಗುರುತ್ವಾಕರ್ಷಣ ಶಕ್ತಿಯಿಂದ ಅನಿಲ ಗೋಲದ ಗಾತ್ರ ಚಿಕ್ಕದಾಗುತ್ತಾ ಹೋಗುತ್ತದೆ. ಅನಿಲಗೋಲದ ಕೇಂದ್ರದಲ್ಲಿ ಅತ್ಯಂತ ಹೆಚ್ಚಿನ ಒತ್ತಡ ಕೇಂದ್ರಿತವಾಗುತ್ತದೆ.”
” ಮಾಮಾ, ಗುರುತ್ವಾಕರ್ಷಣ ಶಕ್ತಿಯಿಂದ ಅನಿಲಗೋಲ ಚಿಕ್ಕದಾಗುತ್ತದಲ್ವಾ, ಹಾಗೆಯೇ ಮುಂದುವರೆದರೆ, ಅದು ಎಷ್ಟು ಚಿಕ್ಕದಾಗಬಹುದು. ಒಳಮುಖವಾದ ಗುರುತ್ವಾಕರ್ಷಣ ಶಕ್ತಿಯನ್ನು ವಿರೋಧಿಸುವ ಶಕ್ತಿ ಇಲ್ವಾ?. “
” ಪುಟ್ಟು, ಎಷ್ಟು ಕ್ರಿಯೇಟಿವ್ ನೀನು!. ಅದನ್ನೇ ನಾನು ಹೇಳಹೊರಟಿರುವುದು. ಹೀಗೆ ಚಿಕ್ಕದಾಗುತ್ತಾ ಹೋದಂತೆ ಕೇಂದ್ರದಲ್ಲಿ ಒತ್ತಡ ಹೆಚ್ಚುತ್ತದೆ. ಜತೆಗೇ ಉಷ್ಣತೆಯೂ. ಹೈಡ್ರೋಜನ್ ಪರಮಾಣುಗಳು ಒತ್ತಡದಿಂದ ಎಷ್ಟು ಹತ್ತಿರ ಬರುತ್ತವೆ ಎಂದರೆ, ಅಲ್ಲೊಂದು ಅದ್ಭುತ ಕ್ರಿಯೆ ಸೃಷ್ಟಿಯಾಗುತ್ತದೆ. ಆ ಕ್ರಿಯೆಯ ಹೆಸರು ನ್ಯೂಕ್ಲಿಯರ್ ಫ್ಯೂಷನ್.”
” ಮಾಮಾ, ಡಿಸ್ಕವರಿ ಚಾನಲ್ ನಲ್ಲಿ ನ್ಯೂಕ್ಲಿಯರ್ ರಿಯಾಕ್ಟರ್ ಬಗ್ಗೆ ಒಂದು ಸಾಕ್ಷ್ಯ ಚಿತ್ರ ನೋಡಿದ್ದೆ. ಎರಡು ಹೈಡ್ರೋಜನ್ ಪರಮಾಣುಗಳನ್ನು ಅತ್ಯಂತ ಒತ್ತಡ ಮತ್ತು ಉಷ್ಣತೆ ಉಪಯೋಗಿಸಿ ಸಮ್ಮಿಳನ ಮಾಡಿದರೆ, ಹೀಲಿಯಂ ಪರಮಾಣುವಿನ ಜನನ ವಾಗುತ್ತೆ. ಹಾಗೆ ಉತ್ಪತ್ತಿಯಾದ ಹಿಲಿಯಂ ಪರಮಾಣುವಿನ ದ್ರವ್ಯರಾಶಿ ಎರಡು ಹೈಡ್ರೋಜನ್ ಪರಮಾಣುಗಳ ದ್ರವ್ಯರಾಶಿಗಳ ಮೊತ್ತಕ್ಕಿಂತ ಸ್ವಲ್ಪ ಕಡಿಮೆ. ಈ ಉಳಿದ ದ್ರವ್ಯರಾಶಿಯ ಭಾಗ ಚೈತನ್ಯವಾಗಿ ಬದಲಾಗುತ್ತದೆ ಐನ್ಸ್ಟೈನ್ ಸಮೀಕರಣವನ್ನು ಉಪಯೋಗಿಸಿ ಅದನ್ನು ಲೆಕ್ಕ ಹಾಕಬಹುದು ಅಂತ ಅದರಲ್ಲಿ ವಿವರಿಸಿದ್ದರು. ಈ ವಿದ್ಯಮಾನವನ್ನು ಉಪಯೋಗಿಸಿ ನ್ಯೂಕ್ಲಿಯರ್ ರಿಯಾಕ್ಟರ್ ಮಾಡಿದರೆ, ಅದನ್ನು ನ್ಯೂಕ್ಲಿಯರ್ ಫ್ಯೂಷನ್ ರಿಯಾಕ್ಟರ್ ಅಂತ ಹೇಳುತ್ತಾರೆ. ಅದರಲ್ಲಿ ಉತ್ಪತ್ತಿಯಾದ ಉಷ್ಣಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ರೂಪಾಂತರಿಸಿ, ಮನೆ ಮನೆಗಳಿಗೆ, ಕಾರ್ಖಾನೆಗಳಿಗೆ ಸರಬರಾಜು ಮಾಡಬಹುದು ಅಂತ.”
” ಪರ್ಫೆಕ್ಟ್ ಪುಟ್ಟು! ಹಾಗಿದ್ದರೆ ನಿಂಗೆ ಡಿಸ್ಕವರಿ ಚಾನಲ್ ಒಳಗೂ ಒಬ್ಬ ಮಾಮ ಇದ್ದಾನೆ ಅಲ್ವಾ!. ನಕ್ಷತ್ರದ ಒಳಗೆ ಹಾಗೊಂದು ಬೃಹದ್ಗಾತ್ರದ ನ್ಯೂಕ್ಲಿಯರ್ ಫ್ಯುಷನ್ ರಿಯಾಕ್ಟರ್ ಹೀಗೆ ತಯಾರಾಗ್ತದೆ. ಈ ಪರಮಾಣು ರಿಯಾಕ್ಷನ್ ನಿಂದಾದ ಉತ್ಪತ್ತಿಯಾದ ಚೈತನ್ಯದಿಂದಾಗಿ ಆ ಅನಿಲಕೇಂದ್ರದಲ್ಲಿ ಉಷ್ಣತೆ ಅತ್ಯಂತ ಹೆಚ್ಚಾಗುತ್ತದೆ. ನಿನಗೆ ಗೊತ್ತಲ್ವಾ, ಉಷ್ಣತೆ ಹೆಚ್ಚಾದರೆ ಅನಿಲ ಎಕ್ಸ್ಪಾಂಡ್ ( ವ್ಯಾಕೋಚನ) ಆಗುತ್ತೆ ಅಂತ. ಈ ಹೊರಮುಖೀ ಶಕ್ತಿ, ಗುರುತ್ವಾಕರ್ಷಣ ಶಕ್ತಿಯನ್ನು ವಿರೋಧಿಸುತ್ತದೆ. ಯಾವಾಗ ಈ ಎರಡೂ ಬಲಗಳು ಸಮಸಮವಾಗುತ್ತದೋ, ಆವಾಗ, ಆ ಅನಿಲದಗೋಲದ ಸಂಕೋಚನ ನಿಂತು ಬಿಡುತ್ತದೆ ಮತ್ತು ಆ ಅನಿಲಗೋಳದ ವ್ಯವಸ್ಥೆ ಸಮತೋಲನವನ್ನು ಹೊಂದುತ್ತದೆ. ಈ ಸಮತೋಲಿತ ವ್ಯವಸ್ಥೆಯಿಂದ, ಬೆಳಕು ಮತ್ತಿತರ ವಿಕಿರಣಗಳು ಹೊರಬಂದು ಆಗಸವನ್ನು ಬೆಳಗುತ್ತದೆ. “
“ಮಾಮಾ, ಹಾಗಿದ್ದರೆ ಈ ಸಮತೋಲನ ಸಾಧಿಸಲು, ಒಳಮುಖೀ ಗುರುತ್ವಾಕರ್ಷಣ ಶಕ್ತಿ ಮತ್ತು ನ್ಯೂಕ್ಲಿಯರ್ ಫ್ಯುಷನ್ ನಿಂದಾದ ಉಷ್ಣತೆಯ ಕಾರಣದ ಹೊರಮುಖೀ ಬಲಗಳು ಒಂದಕ್ಕೊಂದು ವಿರುದ್ಧವಾಗಿ ಸಮಸಮವಾದಾಗ ನಕ್ಷತ್ರ ಸ್ಟೇಬಲ್ ಆಗುತ್ತೆ ಅಂತಾಯ್ತಲ್ವಾ. ಯಾವಾಗಲೂ ಒಂದು ವ್ಯವಸ್ಥೆ ಸಮತೋಲನ ಕಾಣಲು ಎರಡು ವಿರುದ್ಧ ಬಲಗಳು ಅಗತ್ಯ ಅಲ್ವಾ ಮಾಮಾ. ಟಗ್ ಆಫ್ ವಾರ್ ನಲ್ಲಿ ಎರಡೂ ತಂಡಗಳು ಸಮಬಲವಾಗಿ ವಿರುದ್ಧ ದಿಕ್ಕಿಗೆ ಹಗ್ಗ ಎಳೆದಾಗ ಅದು ನಿಂತಲ್ಲಿಯೇ ನಿಂತಿರುತ್ತಲ್ವಾ ಮಾಮಾ?
ಹಾಗಿದ್ದರೆ ನಮ್ಮ ಸೂರ್ಯ ಎಂದೆಂದಿಗೂ ಬೆಳಗುತ್ತಲೇ ಇರುವನೇ?”
” ಪುಟ್ಟು ನಿನ್ನ ಯೋಚನೆ ಸರಿಯಾದ ದಿಕ್ಕಿನಲ್ಲಿಯೇ ಹರಿಯುತ್ತಿದೆ. ಆದರೆ ಸೂರ್ಯನಿಗೂ ಅಂತ್ಯವಿದೆ. ಅನಿಲದ ಮೋಡದ ಸ್ಥಿತಿಯಿಂದ, ನಕ್ಷತ್ರ ದ ಸ್ಥಿತಿ ತಲಪಲು ಸೂರ್ಯನಿಗೆ ಸುಮಾರು ೫೦ ಮಿಲಿಯನ್ ವರ್ಷಗಳು ಹಿಡಿದವು ಅಂತ ನಾಸಾ ದ ವೆಬ್ ಪೇಜ್ ಹೇಳುತ್ತೆ. ಹಾಗೆಯೇ ಸೂರ್ಯನ ಒಟ್ಟೂ ಆಯುಸ್ಸು, ಹತ್ತುಸಾವಿರ ಮಿಲಿಯನ್ ವರ್ಷ!.
ಸೂರ್ಯನ ಕೇಂದ್ರದಲ್ಲಿ ಹೈಡ್ರೋಜನ್ ಪರಮಾಣುಗಳ ಸಂಯೋಗದಿಂದ ಹೀಲಿಯಂ ಪರಮಾಣು ಉತ್ಪತ್ತಿ ಆಗುತ್ತೆ ಅಂದೆವಲ್ವಾ. ಹೀಗೇ ಕಾಲಕ್ರಮೇಣ, ಅಲ್ಲಿ ಹೈಡ್ರೋಜನ್ ಮುಗಿಯುತ್ರಾ ಬಂದು ಸೂರ್ಯ ನ ಕೇಂದ್ರ ಹೀಲಿಯಂ ನಿಂದ ಸಾಂದ್ರವಾಗುತ್ತದಲ್ವಾ. ಆ ಸಮಯದಲ್ಲಿ, ನ್ಯೂಕ್ಲಿಯರ್ ಫ್ಯುಷನ್ ಕೂಡಾ ಕಡಿಮೆಯಾಗಿ, ಗುರುತ್ವಾಕರ್ಷಣ ಶಕ್ತಿ ಪುನಃ ಮೇಲುಗೈ ಸಾಧಿಸುತ್ತೆ. ನಕ್ಷತ್ರ ಪುನಃ ತನ್ನ ಸಮತೋಲಿತ ಗಾತ್ರದಿಂದ ಸಣ್ಣದಾಗುತ್ತಾ ಹೋಗುತ್ತೆ. ಅದು ಮುಂದೆ ಇನ್ನೊಂದು ಸಮತೋಲನ ಕಂಡುಕೊಳ್ಳಲು ಸಾಧ್ಯವೇ?
ಈ ಪ್ರಶ್ನೆ ಗೆ ಉತ್ತರ ಹುಡುಕಿದವರೇ ಚಂದ್ರಶೇಖರ್. “
” ಮಾಮಾ, ಅವರ ಸಂಶೋಧನೆಯನ್ನು ಗುರುತಿಸಿ, ನಾಸಾ, ತನ್ನ ದೂರದರ್ಶಕಕ್ಕೆ ‘ಚಂದ್ರ ‘ ಅಂತ ಹೆಸರಿಟ್ಟರಲ್ವಾ. ಅವರಿಗೆ ೧೯೮೩ ರಲ್ಲಿ ನಾಬೆಲ್ ಪುರಸ್ಕಾರ ಸಿಕ್ಕಿತಲ್ವಾ. ಮತ್ತೆ, ಅವರಿಗೆ ತುಂಬಾ ಅವಮಾನ, ಮಾಡಿದ್ದರು ಅಂತ ನೀವು ಹೇಳಿದಿರಿ?”.
” ಹೌದು. ಅವರು ಸಂಶೋಧನೆ ಮಾಡಿದ್ದು ೧೯೩೩ ರಲ್ಲಿ, ನಾಬೆಲ್ ಪ್ರಶಸ್ತಿ ಅವರಿಗೆ ಸುಮಾರು ಅರ್ಧ ಶತಮಾನದ ನಂತರ ದೊರೆತದ್ದು. ಈ ನಡುವಿನದ್ದು ದೊಡ್ಡ ಕಥೆ. ಅವರ ಆ ಸಂಶೋಧನೆ ಮತ್ತು ಅವರ ಕತೆಯನ್ನು ನಾಳೆ ವಿವರಿಸುವೆ, ಆಯ್ತಾ ಪುಟ್ಟೂ?”
“ಆಯ್ತು ಮಾದೇವ ಮಾಮ, ಈವತ್ತು ತುಂಬಾ ವಿಷಯ ತಿಳಿಯಿತು. ನಾಳೆಗಾಗಿ ಕಾಯುವೆ ಮಾಮ.”
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ