- ಗಜಲ್ - ಫೆಬ್ರುವರಿ 27, 2024
- ಗಜಲ್ - ಜನವರಿ 19, 2023
- ಬನ್ನಿ,ಮತ್ತೆ ಬನ್ನಿ-ರೂಮಿ ಕವಿತೆಗಳು - ಸೆಪ್ಟೆಂಬರ್ 17, 2022
ಕಾವ್ಯದ ವಸ್ತು- ಆಶಯಗಳಲ್ಲಿ, ಸಂವೇದನೆಗಳಲ್ಲಿ, ಪ್ರತಿಮೆ- ಪ್ರತೀಕ, ನಿರೂಪಣೆಯಲ್ಲಿ- ಹೀಗೆ ತಮ್ಮ ಕಾವ್ಯ – ಕಾರಣದಲ್ಲಿ ನಿರಂತರ ಪ್ರಯೋಗ ಮಾಡುತ್ತ ಬಂದಿರುವವರು ಕನ್ನಡದ ಮಹತ್ವದ ಕವಿಗಳಲ್ಲಿ ಒಬ್ಬರಾದ ಡಾ ಕೆ ವಿ ತಿರುಮಲೇಶ್ ಅವರು. ಇದಕ್ಕೆ ಅವರ ಇತ್ತೀಚಿನ ಕವನ ಸಂಕಲನ ‘ ಅರಬ್ಬಿ ‘ಯಲ್ಲೂ ಸಾಕಷ್ಟು ನಿದರ್ಶನಗಳಿವೆ. ಸುಮಾರು ಎರಡು ನೂರಾ ಐವತ್ತು ಕವಿತೆಗಳುಳ್ಳ ಈ ಬೃಹತ್ ಸಂಕಲನದಲ್ಲಿ ಅವರ ಕಾವ್ಯದ, ಕಾಳಜಿಗಳ ವಿವಿಧ ಆಯಾಮಗಳು ನಮಗೆ ಸಿಗುತ್ತವೆ. ‘ಊರಿಗೆ ಬಂದಾಗ’ ಕವಿತೆಯನ್ನು ಈ ಕೃತಿಯಿಂದ ಆರಿಸಿಕೊಂಡಿದ್ದೇನೆ.
‘ ಊರಿಗೆ ಬಂದಾಗ‘ ಒಂದು ವಿಶಿಷ್ಟ ಕವಿತೆ. ತಾನು ಹುಟ್ಟಿ ಬೆಳೆದ ಊರಿಂದ ಹೊರಹೋಗಿ ಬದುಕನ್ನು ಕಟ್ಟಿಕೊಂಡ ಪ್ರತಿಯೊಬ್ಬ ವ್ಯಕ್ತಿ ಎದುರಿಸುವ ಅಥವಾ ಅನುಭವಿಸುವ ಸಂಗತಿಗಳನ್ನು ಕಟ್ಟಿಕೊಡುವ ಕವಿತೆ ಇದು. ಕವಿತೆಯ ಶೀರ್ಷಿಕೆ ‘ಊರಿಗೆ ಬಂದಾಗ’ವನ್ನು ಗಮನಿಸುವ ಮೂಲಕ ನಮ್ಮ ಚರ್ಚೆಯನ್ನು ಆರಂಭಿಸಬಹುದು.ನಾವು ಸಾಮಾನ್ಯವಾಗಿ ಒಂದು ಊರಿನಿಂದ ಇನ್ನೊಂದಕ್ಕೆ ‘ಹೋಗುವುದು’ ಎನ್ನುತ್ತೇವೆ. ಅಲ್ಲಿ ಆದ ಸಂಗತಿಯನ್ನು ವಿವರಿಸಲು ‘ಊರಿಗೆ ಹೋದಾಗ’ ಎಂದು ಬಳಸುತ್ತೇವೆ. ಹಾಗಿರುವಾಗ ಇಲ್ಲಿ “ಬಂದಾಗ” ಎಂಬ ಬಳಕೆ ಏಕೆ? ಅಂದರೆ ಇದು ಊರಿನ ದೃಷ್ಟಿಕೋನದಿಂದ ಉಪಯೋಗಿಸಿದ ಶಬ್ದವೇ? ಹೊರಗೆ ‘ಹೋದವನು’ (ಮರಳಿ) ‘ಬಂದಾಗ’ ಎನ್ನುವುದೇ? ಹೀಗೆ ಯೋಚಿಸಿದಾಗ ಕೊಂಚ ತೆಳುವಾಗಿಯಾದರೂ ಇದು prodigal son ಎಂಬ ಬೈಬಲ್ಲಿನ ಕತೆಯನ್ನು ನೆನಪಿಸಿತು. ಆ ಕತೆಯನ್ನು ಇಲ್ಲಿ ಊರಿಗೆ ಮರಳುವ ಮಟ್ಟಿಗೆ ಮಾತ್ರ ಸೀಮಿತಗೊಳಿಸಿಕೊಳ್ಳಬೇಕು.
ಹೀಗೆ ಊರಿಗೆ ಬಂದಾಗ ಕಾಣುವುದು, ಮರಳಿ ಅನುಭವಕ್ಕೆ ನಿಲುಕುವುದು ಏನು?
ಅದೇ ಊರು ಅದೇ ಜನ ನನ್ನ ಜನ
ಎಂದು ಆರಂಭವಾಗುತ್ತದೆ ಕವಿತೆ. ‘ಅದೇ ಜನ’ ಅವರು ‘ನನ್ನವರು’ ಎಂಬ ಪ್ರೀತಿ, ಅಭಿಮಾನವೂ ಇಲ್ಲಿ ದನಿಸಿದೆ.
ಕೆಲವರಿಲ್ಲ ಕೆಲವರಿದ್ದಾರೆ ಎಂದು ಊರಿನಲ್ಲಿ ಆದ ಸಾವು ನೋವನ್ನು ತಣ್ಣಗೆ ಹೇಳುವ ಕವಿತೆ ಹೊಸಬರೂ ಗುರುತು ಹಿಡಿಯುತ್ತಾರೆ ಎನ್ನುವ ಮೂಲಕ ಈ ಹೊರಗಿಂದ ಹೋದ ಊರ ಮನುಷ್ಯನನ್ನು ಊರು ಮತ್ತೆ ತನ್ನ ತೆಕ್ಕೆಗೆ ಸೆಳೆಯುವುದನ್ನು ಸೂಚಿಸುತ್ತಾರೆ.
ಸಂಬಂಧಗಳು ಸುತ್ತುತ್ತವೆ ಬೇರು ಬಿಳಲು ಮೂಲಾಧಾರ’
ಇವನು ಇಂಥವನು, ಇವನು ಗೊತ್ತಲ್ವಾ ಇಂಥವರ ಮಗ, ಮೊಮ್ಮಗ, ಅಳಿಯ ಹಿಂದೆಲ್ಲ ಸಂಬಂಧಗಳು ಅನಾವರಣಗೊಳ್ಳುತ್ತವೆ ಅಲ್ಲವೇ? ಮುಂದಿನ ಸಾಲು ಇನ್ನೊಂದು ಆಯಾಮವನ್ನು ಜೋಡಿಸುತ್ತದೆ-
ಇಲ್ಲದವರೂ ಇರುತ್ತಾರೆ ಇದ್ದವರ ನುಡಿಯಲ್ಲಿ
ಇಲ್ಲದವರು ಅಂದರೆ ತೀರಿ ಹೋದವರು ಇದ್ದವರ/ ಉಳಿದವರ ಮಾತಿನ ಮೂಲಕ ಜೀವಂತವಾಗುವ ಚಿತ್ರ ಇಲ್ಲಿದೆ. ಇನ್ನೊಂದು ಆಯಾಮವನ್ನು ಕೂಡ ಇಲ್ಲಿ ಗಮನಿಸಬಹುದು. ಮೂಲಾಧಾರ ಎಂಬ ಹಿಂದಿನ ಸಾಲಿನ ಪದವನ್ನು ಜೋಡಿಸಿಕೊಂಡು,
ಮೂಲಾಧಾರ ಇಲ್ಲದವರೂ ಎಂದರೆ ಬದುಕಿನ ಆಧಾರವೇ ಇಲ್ಲದವರು ಕೂಡ ಉಳ್ಳವರ ಸ್ಥಿತಿವಂತರ ನುಡಿಗಳಲ್ಲಿ ಇರುತ್ತಾರೆ; ಆ ಮೂಲಕ ಊರು, ಊರಿಗೆ ಬಂದವನಿಗೆ ಸಜೀವವಾಗುತ್ತದೆ.
ಊರು ತಲುಪಿದವರ ಸಾಮಾನ್ಯ ಅನುಭವ ‘ಊರು ಹಾಗೇ ಇದೆ, ಅಂಥದೇನು ಬದಲಾಗಿಲ್ಲ’ ಎನಿಸುವುದು. ಇದನ್ನೇ ಮುಂದೆ ಕಟ್ಟಿಕೊಡುತ್ತಾರೆ ತಿರುಮಲೇಶ್.
ಎಲ್ಲ ಬದಲಾವಣೆಯಲ್ಲೂ ಏನೂ ಬದಲಾಗಿಲ್ಲ’
ಹಾಗಿದ್ದರೆ ಆಗಿಲ್ಲವೇ ಎಂದರೆ ಆಗಿದೆ.
ಎತ್ತಿನ ಗಾಡಿಗಳು ಮಾಯವಾಗಿ ಸ್ವಯಂ ಚಾಲಿತ ವಾಹನ ಬಂದಿದ್ದು..
ಮುಂದಿನ ಸಾಲು
ಹುಲ್ಲುಛಾವಣಿ ಮನೆಗಳ ಬದಲು ತಾರಸಿ ಕಟ್ಟಡಗಳೆದ್ದಿವೆ
ಹುಲ್ಲು ಛಾವಣಿ ಇದ್ದಾಗ ಮನೆ ಎನಿಸಿಕೊಂಡಿದ್ದು ತಾರಸಿ ಆದಾಗ ಕಟ್ಟಡ ಆಯಿತು! ಹೋಂ ಗೆ ಹೌಸ್ ಗೆ ಅಥವಾ ಬಿಲ್ಡಿಂಗ್ ಗೆ ಇರುವ ವ್ಯತ್ಯಾಸವನ್ನು ತುಂಬಾ ಸೂಕ್ಷ್ಮವಾಗಿ ದಾಟಿಸಿಬಿಡುತ್ತಾರೆ ತಿರುಮಲೇಶ್.
ವಿಸ್ತಾರವಾದ ಅಡ್ಕಗಳು ಅಲ್ಲಿ ಮೇಯುವ ದನಗಳು
ಈಗ ಕೇವಲ ನೆನಪು.
ನೆನಪಲ್ಲಷ್ಟೇ ಮತ್ತೆ ಮತ್ತೆ ಆ ಮೆತ್ತನೆ ನೆಯ್ಮುಳಿಯ ಮೇಲೆ ಹೊರಳಬಲ್ಲೆ ನಾನು
ಅಡ್ಕ ವಿಶಾಲವಾದ ಗೋಮಾಳ. ಉತ್ತರ ಕನ್ನಡದಲ್ಲಿ ಬೇಣ/ ಬ್ಯಾಣ ಎನ್ನುತ್ತೇವೆ. ಮಳೆಗಾಲದಲ್ಲಿ ಕರಡ ಎಂದು( ನಮ್ಮೂರಿನಲ್ಲಿ) ಕರೆಯಲ್ಪಡುವ ಹುಲ್ಲು ಇಲ್ಲಿ ಬೆಳೆಯುತ್ತದೆ. ಹುಲ್ಲು ತುಸುವೇ ಚಿಗುರಿದಾಗಿನ ದೃಶ್ಯ ನಯನ ಮನೋಹರ. ಇಡೀ ಬೇಣಕ್ಕೆ ಹಸಿರಿನ ಹೊದಿಕೆ ಹಾಕಿದಂತಿರುತ್ತದೆ. ಆ ನಯವಾದ ಹುಲ್ಲ ಹಾಸಿಗೆಯ ಮೇಲೆ ನಾನು ನೆನಪಿನಲ್ಲಿ ಮಾತ್ರ ಹೊರಳ ಬಲ್ಲೆ ಎನ್ನುವ ಮಾತಿನ ಮೂಲಕ ಹಿಂದಿನ ಕಾಲಕ್ಕೆ -ಬಾಲ್ಯ, ಯೌವನದ ದಿನಗಳಿಗೆ ಎನ್ನಲೂಬಹುದು-ಒಯ್ಯುತ್ತಾರೆ ತಿರುಮಲೇಶ್.
ಮುಂದಿನ ಸಾಲಿನಲ್ಲಿ ಹೇಳುತ್ತಾರೆ
ಈಗ ಮುಳಿಯೇ ಇಲ್ಲ
ಇಂದಿನ ಹುಲ್ಲು ಇಲ್ಲದ, ಅಡ್ಕಗಳು ಗೋಮಾಳಗಳು ಕಾಣೆಯಾದ,ಈ ಎಲ್ಲವನ್ನೂ ರಿಯಲ್ ಎಸ್ಟೇಟ್ಗಳು, ಕಾರ್ಖಾನೆಗಳು, ಗಣಿಗಾರಿಕೆ ನುಂಗುತ್ತಿರುವ ದಾರುಣ ಪರಿಸ್ಥಿತಿಯನ್ನು ಹೇಳದೆಯೇ ಹೇಳುತ್ತಾರೆ.
ಹೀಗೆ ಒಟ್ಟಾರೆ ಊರಿನ ಭೌಗೋಳಿಕ ಸ್ಥಿತಿಯನ್ನು ಹೇಳಿದ ಕವಿತೆ ಮುಂದೆ ಮನುಷ್ಯ ಮನುಷ್ಯರ ನಡುವಿನ ಸಂಬಂಧದ ಮಾತನಾಡುತ್ತದೆ. ಪರಸ್ಪರರ ನಂಟನ್ನು ಮತ್ತೆ ನವೀಕರಿಸಿಕೊಳ್ಳುವ ರೀತಿಯನ್ನು ಕಟ್ಟಿಕೊಡುತ್ತದೆ. ಈ ಸಾಲುಗಳನ್ನು ನೋಡಿ:
ಹೊಲಿಸೋದಕ್ಕೇನು ಇರದಿದ್ದರೂ
ದರ್ಜಿಯ ಬಳಿ ಕೂತು
ತಲೆಗೂದಲು ಬೆಳೆಯದಿದ್ದರೂ
ಕ್ಷೌರಿಕನ ಕಂಡು ಮಾತಾಡಿಸಿ
ಹಸಿವೆಯೇನೂ ಆಗಿರದಿದ್ದರೂ
ಹೋಟೆಲಿನ ಗೋಳಿಬಜೆ ತಿಂದು
ಈ ಸಾಲುಗಳ ಆಪ್ತತೆ, ಆರ್ದ್ರತೆ ಅನುಭವವೇದ್ಯ.
ವ್ಯಕ್ತಿಯಾಗಿ ತಿರುಮಲೇಶ್ ದೇವರ ಅಸ್ತಿತ್ವವನ್ನು ಅಷ್ಟಾಗಿ ನಂಬಿದವರಲ್ಲ. ಇದನ್ನು ಬೇರೆ ಬೇರೆ ಕಡೆಗಳಲ್ಲಿ ಅವರು ದಾಖಲಿಸಿದ್ದಾರೆ ಕೂಡ. ಆದರೆ ಊರ ದೇವಸ್ಥಾನಕ್ಕೆ ಹೋಗುತ್ತಾರೆ ಕವಿ, ಕವಿತೆಯಲ್ಲಿ. ಊರಿನ ದೇಗುಲ ಬರಿಯ ದೇವ-ಸ್ಥಾನವಲ್ಲ. ಅದರೊಂದಿಗೆ ವ್ಯಕ್ತಿಗೆ ಇರುವುದು ಕರುಳಬಳ್ಳಿಯ ಸಂಬಂಧ.ನಂಬಿಕೆಯ ಪ್ರಶ್ನೆ ಅಲ್ಲಿ ವರ್ಜ್ಯ.
ಶರ್ಟಿನ ಹಾಗೆ ನನ್ನ ನಂಬಿಕೆಗಳನ್ನೂ ತೆಗೆದಿರಿಸಿದೆ
ಊರ ದೇವಳಕ್ಕೆ ಹೋಗಿ ಗುಂಡಕ್ಕೆ ತಲೆಬಾಗಿದೆ
ದೇವರಿಗೂ ಪೂಜಾರಿಗೂ ಸಲ್ಲಿಸಬೇಕಾದ್ದು ಸಲ್ಲಿಸಿದೆ
ದಕ್ಷಿಣಕನ್ನಡದ, ಕೇರಳದ ಹೆಚ್ಚಿನ ದೇವಸ್ಥಾನಗಳಲ್ಲಿ ಪುರುಷರು ಶರ್ಟ್ ಹಾಕಿಕೊಂಡು ದೇವಸ್ಥಾನಕ್ಕೆ ಹೋಗುವಂತಿಲ್ಲ.
ಹಾಗಾಗಿ ಶರ್ಟನ್ನು ತೆಗೆದಿಟ್ಟು, ಅದರಂತೆಯೇ ನನ್ನ ನಂಬಿಕೆಯನ್ನು ಕೂಡ ತೆಗೆದಿರಿಸಿದೆ ಎನ್ನುತ್ತಾರೆ ಕವಿ.
ದೇವರು ಎಂಬ ದೊಡ್ಡ ಗ್ರಂಥವನ್ನೇ ಬರೆದು ದೇವರಿಲ್ಲವೆಂದು ಪ್ರತಿಪಾದಿಸಿದ ಹಿರಿಯ ಲೇಖಕ ಪ್ರೊ.ಎ ಎನ್ ಮೂರ್ತಿರಾಯರು ತಮ್ಮ ‘ಅಕ್ಕಿಹೆಬ್ಬಾಳು’ ಪ್ರಬಂಧದಲ್ಲಿ ಬರೆದಿದ್ದು ನೆನಪಾಯಿತು. ತಮ್ಮೂರಿನ ದೇವಳದ ಗರ್ಭಗುಡಿಯೊಳಗಿರುವ ದೇವರು ‘ನರಸಿಂಹ’
‘ದೇವರನ್ನೇ ನಂಬದ ತಮಗೂ ಎಷ್ಟು ಪ್ರಿಯನೆಂದು ಯಾರು ತಾನೆ ಬಲ್ಲರು?! ಎನ್ನುತ್ತಾರೆ ಅವರು. ಲಂಕೇಶ್ ಕೂಡ ಊರಿಂದ ಬಂದ ನಾಲ್ಕಾರು ತರುಣರ ಜೊತೆ ಮಾತನಾಡುತ್ತಿದ್ದಾಗ, ಮಾತಿನ ಮಧ್ಯೆ ಅವರು ಊರಿನ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುತ್ತಿದ್ದಾರೆ ಎಂದುದನ್ನು ಕೇಳಿ ತಾವಾಗಿ ಒಂದಿಷ್ಟು ಹಣವನ್ನು ಕೊಟ್ಟು ಕಳಿಸಿದ್ದರು. ‘ಲಂಕೇಶ್ ಪತ್ರಿಕೆ’ಯಲ್ಲಿ ಈ ಬಗ್ಗೆ ಟಿಪ್ಪಣಿ ಮಾಡಿದ್ದನ್ನು ಓದಿದ್ದೆ. ದೇವರನ್ನು ನಂಬುವ, ಬಿಡುವ ತಾತ್ವಿಕತೆ ಬೇರೆ; ಊರ ದೇವಾಲಯದ ಜೊತೆಗಿನ ಒಡಲ ಸಂಬಂಧ ಬೇರೆ ಎಂಬುದನ್ನು ತಿರುಮಲೇಶ್ ಕೂಡ ಇಲ್ಲಿ ಹೇಳುತ್ತಿದ್ದಾರೆಯೇ?
ಕೊಳದ ಬದಿ ವಿಶ್ರಮಿಸಿ ಅದರ ತಿಳಿ ನೀರಲ್ಲಿ
ಮೋಡ ಹಾಯುವುದು ನೋಡಿದೆ ತಂಗಾಳಿಯೆಬ್ಬಿಸಿದ
ಕಿರುತೆರೆಗಳು ತಮ್ಮಷ್ಟಕ್ಕೇ ಸಾಗುತ್ತವೆ
ಒಂದು ಸಹಜವಾದ ಚಿತ್ರವನ್ನು ಕೊಡುತ್ತಾ ಅಲ್ಲಿಯೂ ಒಂದು ಒಳನೋಟವನ್ನು ನೀಡುತ್ತಾರೆ ಇಲ್ಲಿ- ಮೋಡಗಳು ಸರಿಯುತ್ತವೆ… ಅವುಗಳ ಬಿಂಬವನ್ನು ನಾವು ಕಾಣುತ್ತೇವೆ, ಗ್ರಹಿಸುತ್ತೇವೆ.
ತಂಗಾಳಿಯಿಂದ ಉಂಟಾದ ಕಿರುತೆರೆಗಳು ತಮ್ಮಷ್ಟಕ್ಕೆ, ನಮ್ಮ ಹಂಗಿಲ್ಲದೆ ಸಾಗುತ್ತವೆ ಸರಿಯುತ್ತವೆ…
ಹೀಗೆ ಕಾಲ ಸರಿದಾಗ ಆಗುವ ಪಲ್ಲಟ ಎಂಥದ್ದು? ಮುಂದಿನ ಸಾಲುಗಳಲ್ಲಿ-
ಪೂರ್ತಿ ಹಣ್ಣಾದ ವೃದ್ಧೆಯೊಬ್ಬಳು ಅವಳು
*ನನ್ನ ಅಮ್ಮನಂತೆಯೆ ಇದ್ದಳು- *ಮೊದಲು ಹಸಿ ಸೆಗಣಿ ಹೆಕ್ಕಿ*
ಬೆರಣಿ ತಟ್ಟುತ್ತಿದ್ದವಳು ಈಗ ಕೈಲಾಗುತ್ತಿಲ್ಲ ಎಂದಳು
ಈಗವಳ ಮಗಳು ಅದೇ ಕೆಲಸ ಮಾಡುವಳು
ವರ್ಷಗಳ ಹಿಂದೆ ಅವಳೂ ಮೃಗನಯನೆಯಾಗಿದ್ದಳು
ಈಗವಳ ಕಣ್ಣುಗಳ ಸುತ್ತ ಕಪ್ಪಾಗಿದೆ
ಎಷ್ಟೆಲ್ಲವನ್ನು ಅಡಕಗೊಳಿಸಿದ ಸಾಲುಗಳು ಇವು!
ಪೂರ್ತಿ ಹಣ್ಣು ಮುದುಕಿ ಅಮ್ಮನಂತೆ ಕಾಣುವುದು, ಅವಳು ತನ್ನ ಮಾಮೂಲಿ ದಿನಚರಿಯಲ್ಲಿ ಕಳೆದುಹೋಗುತ್ತಾ ಈಗ ಅಶಕ್ತಳಾಗಿರುವುದು, ಅವಳ ಮಗಳ ಮೂಲಕ ಅದೇ ಜೀವನ ಚಕ್ರ ಮುಂದುವರಿದಿರುವುದು…
ಜೊತೆಗೆ ಆಗ ಮೃಗನಯನೆಯಾಗಿದ್ದ ( ಕವಿಯಲ್ಲಿ ಒಂದು ಸಣ್ಣ ಕ್ರಶ್ಅನ್ನು ಉಂಟುಮಾಡಿರಬಹುದಾದ) ಆ ಹೆಣ್ಣು ಈಗ ಕಾಲನ ಆಘಾತದಲ್ಲಿ ಕಳೆಗುಂದಿರುವುದು…
ಕವಿತೆ ವಾಸ್ತವಕ್ಕೆ ಬರುತ್ತದೆ.
ಎಲ್ಲರೂ ಕೇಳುತ್ತಾರೆ ಮಡದಿ ಮಕ್ಕಳ ಬಗ್ಗೆ,ಸಂಬಳ ಮನೆ ,ನಿವೃತ್ತಿಯ ಬಗ್ಗೆ. ಜೊತೆಗೆ ಕಕ್ಕುಲಾತಿಯಿಂದ ಹುಟ್ಟಿದ ಪ್ರಶ್ನೆ-
ಇಲ್ಲೇ ಇರುತ್ತೀಯಾ ವಾಪಸು ಹೋಗುತ್ತೀಯಾ ಮತ್ತೆ ಬರುತ್ತೀಯಾ
ಈ ಪ್ರಶ್ನೆಗಳಲ್ಲಿ ಇಲ್ಲಿಯೇ ಇರು, ಇದ್ದುಬಿಡು ಎಂಬ ; ಹೋಗಲೇಬೇಕಿದ್ದರೆ ಮತ್ತೆ ಬಾ ಎಂಬ ಧ್ವನಿಯನ್ನು ಗಮನಿಸಿ.
ಕವಿಗೆ ಗಂಟಲು ಕಟ್ಟುತ್ತದೆ. ಕೇಳುತ್ತಾರೆ-
ನನ್ನ ಭಾವನಾವಲಯದ ಜೀವಿಗಳೆ
*ಏನು ಉತ್ತರಿಸಲಿ*
ಈ ಎರಡು ಸಾಲುಗಳನ್ನು ಜೋಡಿಸಿರುವ ಕ್ರಮವನ್ನು ಗಮನಿಸಿ. ನಡುವಿನ ಅಂತರವನ್ನು, ಆ ಮೂಲಕ ಕವಿ ನೀಡುವ pauseಅನ್ನು ಗಮನಿಸಬೇಕು.
ಎಲ್ಲಾ ಗೆದ್ದು ಬರುವೆನೆಂದು ನಿಷ್ಕ್ರಮಿಸಿದವನು ನಾನು
ಪ್ರತಿಸಲ ಬರುವಾಗಲೂ ಬರಿಗೈಲಿ ಬರುತಿದ್ದೇನಲ್ಲ
ಒಂದು ಮಟ್ಟಕ್ಕೆ ಬದುಕನ್ನು ಕಟ್ಟಿಕೊಂಡ ಹಲವರ ಎದೆಗುದಿ ಇದು. ಊರಿಂದ ಬರುವಾಗ ದೊಡ್ಡ ದೊಡ್ಡ ಕನಸುಗಳನ್ನು ಹೊತ್ತು ಬರುತ್ತೇವೆ. ಅದರಲ್ಲಿ ಬಹಳಷ್ಟು ದುಡಿದು, ಏನೋ ದೊಡ್ಡದನ್ನು ಸಾಧಿಸಿ ಊರಿಗೂ ಏನಾದರೂ ಮಾಡುವ ಆಶಯ, ಸಂಕಲ್ಪ ಕೂಡ ಇರುತ್ತದೆ. ಆದರೆ ಹೆಚ್ಚಿನವರಿಗೆ ಅದು ಸಾಧ್ಯವಾಗುವುದಿಲ್ಲ. ಹಾಗಿದ್ದೂ ಊರು ತೋರಿಸುವ, ನೆಪ ಬೇಡದ ಅಕ್ಕರೆಗೆ ಏನೆಂದು ಉತ್ತರಿಸುವುದು?
ಈಗ ಕವಿತೆಯ ಕೊನೆಯ ಸಾಲುಗಳು-
*ಕ್ಷಮಿಸಿದಂತೆಯೆ ನನ್ನ ಉತ್ತರಗಳ*
ಕ್ಷಮಿಸಲಾರಿರ ನನ್ನ ನಿರುತ್ತರಗಳ?
ಉತ್ತರಿಸುವುದು ಕಷ್ಟ. ಹಾಗೂ ಉತ್ತರಿಸಿದಾಗ ಊರಿನ ಜನ ಅದನ್ನು ಅರ್ಥ ಮಾಡಿಕೊಂಡಿದ್ದಾರೆ, ಕ್ಷಮಿಸಿದ್ದಾರೆ.
ಆದರೆ ಮಾತು ಹೇಳಲು ಸಾಧ್ಯವಾಗುವುದು ಕೆಲವನ್ನು ಮಾತ್ರ. ಮಾತಿನಾಚಿಗಿನ ‘ನಿರುತ್ತರಗಳನ್ನು ನೀವು ಕ್ಷಮಿಸಲಾರಿರ?’ ಎಂದು ಕವಿತೆಯನ್ನು ಮುಕ್ತಾಯಗೊಳಿಸುತ್ತಾರೆ ಕವಿ. ದಟ್ಟವಾದ ವಿಷಣ್ಣತೆಯಲ್ಲಿ ನಮ್ಮನ್ನು ಅದ್ದುವ ಮಾತುಗಳಿವು.
ಬುದ್ಧಿ ಭಾವಗಳು ಪರಸ್ಪರ ಕೈ ಕೈ ಹಿಡಿದು ನಡೆಯುವ ಕವಿತೆ ತಿರುಮಲೇಶರದು.
ಎಷ್ಟೋ ಕಡೆ ಇಲ್ಲಿ ಭಾವಕ್ಕಿಂತ ಬುದ್ಧಿಯ ಕೈ ಮೇಲಾಯಿತೇನೋ ಅನ್ನಿಸುವುದುಂಟು.ಈ ಕವಿತೆ ಅವರ ಭಾವವಲಯದಿಂದ ನಮ್ಮ ಭಾವವಲಯವನ್ನು ಪ್ರವೇಶಿಸಿ ಒಳಗನ್ನು ಅಲುಗಿಸುವ ಕವಿತೆ.
ಊರಿನೊಡನೆಯ ಅನುಬಂಧದ ವಿವಿಧ ಮುಖಗಳನ್ನು, ಸಂದರ್ಭಗಳನ್ನು ಆಪ್ತವಾಗಿ, ಆರ್ದ್ರವಾಗಿ ಕಟ್ಟಿಕೊಡುವ ಈ ಕವಿತೆಯಲ್ಲಿ ನಿದಾನವಾಗಿ ಏಳುತ್ತ ಹೋಗುವ ವಿಷಾದದ ಅಲೆ ಕೊನೆಯಲ್ಲಿ ಅತ್ಯಂತ ದಟ್ಟವಾಗಿ ಆವರಿಸುವುದು, ಅನುರಣಿಸುವುದು, ಕವಿತೆಯನ್ನು ಸಾರ್ಥಕವಾಗಿಸಿದೆ; ಸ್ಮರಣೀಯವಾಗಿಸಿದೆ.
ಊರು ಬಿಟ್ಟು ಬದುಕುತ್ತಿರುವವರ ಊರಿಗೆ ಬಂದಾಗಿನ ತಳಮಳವನ್ನು ನಿರುತ್ತರಗಳನ್ನು ಅತ್ಯಂತ ಸಮರ್ಥವಾಗಿ ಕಟ್ಟಿಕೊಟ್ಟಿದ್ದಕ್ಕಾಗಿ ತಿರುಮಲೇಶರಿಗೆ ಧನ್ಯವಾದಗಳು. ಇಂಥ ಸಾರ್ಥಕ ಕವಿತೆಗಳು ಅವರಿಂದ ಇನ್ನಷ್ಟು ಮತ್ತಷ್ಟು ಮೂಡಿಬರಲಿ, ನಮ್ಮ ಅಂತಃಕರಣವನ್ನು ಮಿಡಿಯುತ್ತಿರಲಿ ಎಂದು ಹಾರೈಸುತ್ತೇನೆ.
ಹೆಚ್ಚಿನ ಬರಹಗಳಿಗಾಗಿ
ಹಣತೆ – ನಸುಕು ಕವಿಗೋಷ್ಠಿ
ತಿರುಮಲೇಶ್ ಮೇಷ್ಟ್ರಿಗೆ
ತಿರುಮಲೇಶ್- ೮೦:ವಿಶೇಷ ಸಂಚಿಕೆ