- ರೋಆಲ್ಡ್ಡಾಲ್ ನ “ಸ್ಕಿನ್” ಮತ್ತು ಶೈಮ್ ಸೂಚಿನ್ - ಸೆಪ್ಟೆಂಬರ್ 27, 2022
- ರಿಕ್ಷಾ ಪುರಾಣ - ಫೆಬ್ರುವರಿ 5, 2022
- ವಾಘಾ ಗಡಿಯಲ್ಲಿ ಒಂದು ಮಧ್ಯಾಹ್ನ - ನವೆಂಬರ್ 28, 2021
ಕಾಪಿ ಎಂದಾಕ್ಷಣ ನನಗೆ ನೆನಪಾಗುವುದು ನಮ್ಮ ಅಜ್ಜನ ಮನೆಯಲ್ಲಿ ದೊಡ್ಡಮ್ಮ ಕಾಪಿ ಕುಡಿಯುತ್ತಿದ್ದ ಕಂಚಿನ ತಂಬಿಗೆ. ಮನೆಯಲ್ಲಿ ಐದಾರು ಹಸುಗಳಿದ್ದು ಗಟ್ಟಿ ಹಾಲಿಗೇನೂ ಬರವಿರಲಿಲ್ಲ ಮನೆಗೆ ತಾಗಿಕೊಂಡೇ ಇದ್ದಂತಹ ದೊಡ್ಡಪ್ಪನ ಹೋಟೆಲಿಗೆ ಹೋಗಲು ಮನೆಯೊಳಗಿಂದಲೇ ದಾರಿಯಿತ್ತು. ಬೆಳೃಂಬೆಳಗ್ಗೆ ಫಮಫಮ ಕಾಫಿ-ಟೀ ಮನೆಗೆ ಸರಬರಾಜಾಗುತ್ತಿತ್ತು ಬಿಸಿ ಬಿಸಿ ಪೂರಿ ಬನ್ಸು ಟೇಬಲ್ಲಿನ ಮೇಲೆ ಬಂದು ಕೂರುತ್ತಿದ್ದವು ನಮಗೆ ಮಕ್ಕಳಿಗೆ ಯಾರೂ ಕಾಫಿ-ಟೀ ಕೇಳುತ್ತಿರಲಿಲ್ಲ ಬೇಕಾದ ಹಾಗೆ ಪೂರಿ ಬನ್ಸು ತಿನ್ನಬಹುದು ಅಷ್ಟೇ.
ನಮ್ಮ ಮನೆಯಲ್ಲಿ ಮಕ್ಕಳಿಗೆ ಕಾಫಿ ಸಿಗುತ್ತಿದ್ದುದು ಸಂಜೆಯ ಹೊತ್ತು ಮಾತ್ರ. ಶಾಲೆಯಿಂದ ಬಂದ ಕೂಡಲೇ ಕೈಕಾಲು ತೊಳೆದು ಅಜ್ಜಿ ಮಾಡಿಟ್ಟಿದ್ದ ತಿಂಡಿಯನ್ನು ತಿಂದಮೇಲೆ ಅರ್ಧ ಲೋಟ ಕಾಪಿ ಸಿಗುತ್ತಿತ್ತು. ಅದಕ್ಕೆ ಕಾಪಿ ಎಂಬ ಹೆಸರು ಮಾತ್ರ .ಲಕ್ಷ್ಮಿ ಕಾಫಿ ಪುಡಿಯನ್ನು ಅರ್ಧ ಹಾಲು ಅರ್ಧ ನೀರು ಬೆರೆಸಿ ಕುದಿಸಿ ಸೋಸಿದ ಕಾಪಿ, ಬಾಯಾರಿಕೆ ನೀಗಲು ಸೈ.
ಬಹುಶಃ ನಾನು ಮೊದಲ ಬಾರಿಗೆ ಫಿಲ್ಟರ್ ಕಾಫಿ ಕುಡಿದುದು ನನ್ನ ಸ್ನೇಹಿತೆಯ ಮನೆಯಲ್ಲಿ. ಭಾನುವಾರ ಮಧ್ಯಾಹ್ನ ಮಾಡಲು ಕೆಲಸವಿಲ್ಲದೆ ಅವಳ ಮನೆಗೆ ಹೋಗಿ ಮಾವಿನಮರದ ತೋಟದಲ್ಲಿ ಮರ ಹತ್ತಿಕುಣಿದು ಸಂಜೆತನಕ ಅಲ್ಲಿದ್ದರೆ ಭಾನುವಾರದ ಸ್ಪೆಷಲ್ ಎಂದು ಫಿಲ್ಟರ್ ಕಾಪಿ ಮಾಡಿರುತ್ತಿದ್ದರು .ಅವರೆಲ್ಲರ ಜೊತೆಗೆ ನನಗೂ ಒಂದು ಪಾಲು .ಮನೆಗೆ ಬಂದು ಆಹಾ ಕಾಪಿ ಎಷ್ಟು ರುಚಿಯಾಗಿತ್ತು ಅವರ ಮನೆಯಲ್ಲಿ ಎಂದರೆ ನಮಗಾಗಿ ಇಡೀ ದಿನ ದುಡಿದು ರುಚಿರುಚಿಯಾಗಿ ತಿಂಡಿ ಅಡುಗೆ ಮಾಡುತ್ತಿದ್ದ ನನ್ನ ಅಜ್ಜಿಗೆ ಸಿಟ್ಟು ಬರುತ್ತಿತ್ತು ನಿನಗೆ ಬೇರೆಯವರು ಮಾಡಿದ್ದೆಲ್ಲ ರುಚಿಯಾಗಿರುತ್ತದೆ ಮನೆಯಲ್ಲಿ ಮಾಡಿದ್ದು ಹಿಡಿಸುವುದಿಲ್ಲ ಅಲ್ಲವೇ ಎಂದು. ಎರಡು ವರ್ಷದ ಮಗುವಿದ್ದಾಗಲೇ ತಾಯಿಯನ್ನು ಕಳೆದುಕೊಂಡ ನನ್ನನ್ನು ಮತ್ತು ಅಣ್ಣನನ್ನು ಸಾಕಿ ಸಲಹಿದ ದೇವತೆಯರು ನಮ್ಮ ಅಜ್ಜಿ ಮತ್ತು ನಮ್ಮ ತಂದೆಯವರು.
ಆಮೇಲೆ ನಾನು ಕಾಲೇಜಿಗೆ ಹೋಗುವ ಹಂತದಲ್ಲಿ ಕಾಪಿ ಎಂದರೆ ಇನ್ಸ್ಟಂಟ್ ಬ್ರೂ ಕಾಫಿ ಮಾತ್ರ ಎನ್ನುವ ಭಾವನೆ ನಮ್ಮಂತಹ ಹರೆಯದ ಹುಡುಗರ ಮನಸ್ಸಿನಲ್ಲಿ. ನಮ್ಮೂರು ಉಡುಪಿಯಲ್ಲಿ ಅಂದಿನ ಪ್ರಖ್ಯಾತ ಹೋಟೆಲ್ ಡಯಾನಾಕ್ಕೆ ಹೋದಾಗೆಲ್ಲ ನಾನು ಕೋಲ್ಡ ಕಾಪಿ ವಿತ್ ಐಸ್ ಕ್ರೀಮನ್ನು ಸೇವಿಸದೆ ಬಂದುದೆ ಇಲ್ಲ .
ಮುಂದೆ ಎಷ್ಟೋ ವರ್ಷಗಳು ಮಕ್ಕಳು ಮರಿ ಸಂಸಾರ ತಾಪತ್ರಯಗಳ ನಡುವೆ ನಾನು ಕಾಪಿಯನ್ನು ಮರೆತೇಬಿಟ್ಟೆ .
೨೦೦೧ರಲ್ಲಿ ನಾವು ಬೆಂಗಳೂರಿಗೆ ವರ್ಗವಾಗಿ ಬಂದಾಗ ನಮ್ಮ ಮನೆಯ ಮುಂದಿದ್ದವರು ತೆಲುಗಿನವರು. ಅವರೊಂದಿಗೆ ನನ್ನ ಸ್ನೇಹ ಶುರುವಾಗಿದ್ದು ಕಾಫಿಯ ಜೊತೆಗೆ .ಇಬ್ಬರ ಮಕ್ಕಳೂ ಗಂಡಂದಿರೂ ಶಾಲೆ ಆಫೀಸ್ಸೆಂದು ಓಡಿದ ಮೇಲೆ ೧೦:೦೦ ಗಂಟೆಗೆ ಆಕೆ ಫ್ರೆಶ್ ಆಗಿ ಡಿಕಾಕ್ಷನ್ ಹಾಕುತ್ತಿದ್ದರು ಗಟ್ಟಿ ಹಾಲು ಹೊಸದಾಗಿ ಕಾಯಿಸಿ ಬೆರೆಸಿ ಬಿಸಿಬಿಸಿಯಾಗಿ ನನ್ನ ಕೈಗೆ ಇಟ್ಟರೆ ಕಾಪಿಯ ಜೊತೆಗೆ ಹರಟೆಯೂ ಸೇರಿ ಆಹಾ ಎಂತಹ ಸ್ವರ್ಗ. ಅಂತಹ ಸ್ಟ್ರಾಂಗ್ ಕಾಪಿ ಅಭ್ಯಾಸವಿಲ್ಲದೆ ನಾನು ಒಮ್ಮೆಮ್ಮೆ ಸ್ವಲ್ಪ ಹಾಲು ಹೆಚ್ಚಿಗೆ ಹಾಕಿಕೊಳ್ಳುತ್ತಿದ್ದೆ.
ಆಮೇಲೆ ನಾವು ಹೋಗಿದ್ದು ಕಾಪಿಯ ಸ್ವರ್ಗವಾದ ಚೆನ್ನೈಗೆ.ನನಗೆ ನಿಜವಾಗಿಯೂ ಕಾಪಿಯ ರುಚಿ ಹತ್ತಿ ದ್ದು ಇಲ್ಲಿಯೇ . ಅಡ್ಯಾರ್ ಆನಂದ ಭವನದ ಯಾವ ಔಟಲೆಟ್ಟಿಗೆ ಬೇಕಾದರೂ ಹೋಗಿ ನಿಮಗೆ ಒಂದು ಪರಿಪೂರ್ಣ ಕಾಪಿ ಸಿಗುವುದು ಖಂಡಿತ. ಆ ಕಾಪಿ ಮಾಡುವವರಿಗೆ ಅಲ್ಲಿ ಒಂದು ವಿಶಿಷ್ಟ ಸ್ಥಾನ . ಲೋಟದಲ್ಲಿ ಡಿಕಾಕ್ಷನ್ ಹಾಕಿ ಬಿಸಿಯಾದ ಹಾಲು ಹಾಕಿ ಮೇಲಿನಿಂದ ಸೌಟು ತುಂಬಾ ಬುರುಗಿನಂತೆ ಕಾಣುವ ಕೆನೆಯನ್ನು ಹಾಕಿ ಸೊರ್ರೆಂದು ಮೇಲೆ ಕೆಳಗೆ ಮಾಡುವವರು ಮಾಂತ್ರಿಕ ರಂತೆ ಕಾಣುತ್ತಿದ್ದರು.
ಸದಾ ಚಹಾವನ್ನು ಕುಡಿಯುವ ನಮ್ಮನೆಯವರಿಗೆ ನನ್ನ ಕಾಪಿಯ ಶೋಕಿ ಯಾವತ್ತಿಗೂ ಅರ್ಥವಾಗದ ಒಂದು ಒಗಟು. ನಾವೆಲ್ಲಾ ಹೊರಗಡೆ ಒಳ್ಳೆಯ ಊಟಕ್ಕೆ ಹೋದಾಗ ಅವರು ಕುಲ್ಫಿಯೋ ಇನ್ನೇನೋ ಹುಡುಕುತ್ತಿದ್ದರೆ ನಾನು ಏನಾದರೂ ಸ್ಪೆಷಲ್ ಕಾಪಿ ಇದೆಯೆನೋ ಎಂದು ಹುಡುಕುತ್ತಿದ್ದೆ .ಗಂಡನ ಜೊತೆ, ಮಗಳ ಜೊತೆ ಹೊರಗೆ ಹೋಗಿ ತಿರುಗಾಡಿ ಮನೆಗೆ ಬಂದ ಮೇಲೆ ಒಂದು ಕಾಪಿಯನ್ನು ಕೊಡಿಸಲಿಲ್ಲ ಎಂದು ದೂರುತ್ತಿದ್ದ ದಿನಗಳೂ ಇದ್ದವು.
ದಿನಗಳು ನಿಲ್ಲುತ್ತವೆಯೇ ಕಾಲ ಬದಲಾಗುತ್ತಲೇ ಹೋಯಿತು ಮಕ್ಕಳು ದೊಡ್ಡವರಾದರು ನಮ್ಮ ದೇಶದಲ್ಲಿ ಬ್ಯಾರಿಸ್ಟ,ಸ್ಟಾರ್ ಬಕ್ಸ ಎಂದೆಲ್ಲಾ ಕಾಪಿಯ ಅಂಗಡಿಗಳು ಬಂದವು . ಕ್ಯಾಪುಚಿನೋ, ಮೋಕ, ಎಸಪ್ರೆಸ್ಸೊ ಎಂದೆಲ್ಲಾ ಹೊಸ ರಾಗಗಳು ಕೇಳಿಬಂದವು.ಇದೆಲ್ಲಾ ಬರಿಯ ಶೋಕಿ, ದುಡ್ಡು ಮಾಡುವ ತಂತ್ರಗಳು ಎಂದು ಕೂಡ ಬಹಳ ಬೇಗನೆ ಅರ್ಥವಾಯಿತು ಸ್ಟಾರ್ ಬಕ್ಸನ ಕೋಲ್ಡ್ ಕಾಪಿಗೂ ನಾನು ಮನೆಯಲ್ಲಿ ತಯಾರಿಸಿದ ಕೋಲ್ಡ ಕಾಪಿಗೂ ರುಚಿಯಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ನನ್ನ ಮಗ ಸರ್ಟಿಫಿಕೇಟು ಕೊಟ್ಟ..
ಮೂರು ವರ್ಷಗಳ ಹಿಂದೆ ನಾವು ಮತ್ತೆ ಬೆಂಗಳೂರಿಗೆ ಬಂದೆವು.ಕಾಪಿಯ ಹುಕ್ಕಿ ಮರೆತುಹೋಗಿತ್ತು. ಮಕ್ಕಳಿಬ್ಬರೂ ಹಾಸ್ಟೆಲ್ ಸೇರಿ ಮನೆಯೆಲ್ಲ ಭಣಭಣ ,ಯಾರಿಗೆ ಬೇಕು ಕಾಪಿ? ಮಧ್ಯದಲ್ಲೊಮ್ಮೆ ಕಾಪಿತೋಟದ ಸ್ವರ್ಗ ಚಿಕ್ಕಮಗಳೂರಿಗೆ ಹೋಗಿ ಬಂದಾಗಲೂ ಕಾಪಿ ಅಷ್ಟು ರುಚಿಸಲಿಲ್ಲ. ಅದು ಕಾಫಿಯ ತಪ್ಪಲ್ಲ ,ಮನಸ್ಸು ಅದರ ಸ್ವಾದವನ್ನು ಅನುಭವಿಸಲು ಸಿದ್ಧವಿರಲಿಲ್ಲ.
ಕೋವಿಡ್ ಎಂದು ಇಬ್ಬರೂ ಮಕ್ಕಳು ಮನೆಗೆ ಬಂದರು. ಮತ್ತೆ ಜೀವನೋಲ್ಲಾಸ ಮರುಕಳಿಸಿತು .ಮಗಳು ನನ್ನಂತೆ ಕಾಪಿ ಪ್ರಿಯೆ. ಅಂತರ್ಜಾಲವನ್ನು ತಡಕಾಡಿ ಉತ್ತಮ ಕಾಫಿ ಪುಡಿ ಎಂದು ಜಯಂತಿ ಕಾಫಿ ಪುಡಿಯನ್ನು ಚಿಕ್ಕಮಗಳೂರಿನಿಂದ ತರಿಸಿದಳು. ನಾನು ಮೂಲೆಗೆ ಹಾಕಿದ್ದ ಫಿಲ್ಟರನ್ನು ತೆಗೆದು ಕಾಪಿ ಮಾಡುವ ಸಂಭ್ರಮಕ್ಕೆ ಸಜ್ಜಾದೆ. ಬೆಳ್ಳಂಬೆಳಗ್ಗೆ ಎದ್ದು ಕೈಕಾಲು ಮುಖ ತೊಳೆದು ಅಡುಗೆ ಮನೆಗೆ ಕಾಲಿಡುವಾಗ ಮನೆಯಲ್ಲಿ ಶಾಂತ ವಾತಾವರಣ. ಯಜಮಾನರು ಆಗಲೇ ತಮ್ಮ ಚಹ ಮಾಡಿಕೊಂಡು ಕುಡಿದು ವಾಕಿಂಗ್ ಹೋಗಿರುತ್ತಾರೆ .ಮಕ್ಕಳು ನಿದ್ರಾ ಲೋಕದಲ್ಲಿ. ನಾನು ಫಿಲ್ಟರಿನಲ್ಲಿ ಕಾಪಿ ಪುಡಿ ತುಂಬಿ, ನೀರು ಬಿಸಿಮಾಡಲು ಇಡುತ್ತೇನೆ.ನೀರು ಕುದಿಯುತ್ತ ಲೇ ಫಿಲ್ಟರಿಗೆ ಹಾಕಿ ಮುಚ್ಚುತ್ತೇನೆ. ಹಾಲಿನ ಚೀಲವನ್ನು ತಂದು ಹಾಲು ಕಾಯಿಸಲು ಇಡುತ್ತೇನೆ ಫೋನಿನ ಯೂಟ್ಯೂಬ್ ಚಾನೆಲ್ ನಲ್ಲಿ ಭೀಮಸೇನ ಜೋಶಿಯವರು ಇಂದು ಏನಗೆ ಶ್ರಿ ಗೋವಿಂದ ಎಂದು ಶುರು ಮಾಡಿರುತ್ತಾರೆ ಹಾಲು ಉಕ್ಕುತ್ತಲೇ ಲೋಟಕ್ಕೆ ಬಗ್ಗಿಸಿ ಮೇಲಿಂದ ಡಿಕಾಕ್ಷನ್, ಸಕ್ಕರೆ ಹಾಕಿ ಹದವಾದ ಬಣ್ಣ ಬರುವುದನ್ನು ನೋಡುತ್ತಾ ಜೋಶಿಯವರ ಗಾಯನವನ್ನು ಕೇಳುತ್ತಾ ಕಾಪಿ ಬೆರೆಸಿ ತುಟಿಯ ಬಳಿಗೆ ತೆಗೆದುಕೊಂಡು ಹೋಗಿ ಕುಡಿಯುವುದೇ ಒಂದು ರೀತಿಯ ಸುಂದರ ಅನುಭೂತಿ ..ಜಗತ್ತಿನಲ್ಲಿ ಇನ್ಶಾವುದೂ ಅಸ್ತಿತ್ವದಲ್ಲಿಯೇ ಇಲ್ಲ, ಇರುವುದೊಂದೇ ಕೈಯಲ್ಲಿರುವ ಕಾಪಿ, ಕಿವಿಗೆ ಬೀಳುತ್ತಿರುವ ಅದ್ವಿತೀಯ ಸಂಗೀತ ಮಾತ್ರ ಎಂಬಂತೆ.
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ