ನಸುಕು.ಕಾಮ್ - ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕ್ರಿಯೇಟಿವಿಟಿ ಇದ್ದೆಡೆ ಸಾಮರಸ್ಯ ಇರುತ್ತದೆ..

ಕ್ರಿಯೇಟಿವಿಟಿ ಇದ್ದೆಡೆ ಸಾಮರಸ್ಯ ಇರುತ್ತದೆ

ಬಹುಮುಖಿ ಚಿಂತಕ ನರಹಳ್ಳಿ ಬಾಲಸುಬ್ರಹ್ಮಣ್ಯ

ಎಲ್ಲಿ ಕ್ರಿಯೇಟಿವಿಟಿ ಇರುವುದಿಲ್ಲವೋ ಅಲ್ಲಿ ಹಿಂಸೆ  ತಾಂಡವವಾಡುತ್ತದೆ. ಸಾಮರಸ್ಯ ನೆಲೆಸಬೇಕಾದರೆ ಸೃಜನಶೀಲತೆಯನ್ನು ಪ್ರೋತ್ಸಾಹಿಸಬೇಕು’ ಎಂದು ಬಹುಮುಖಿ ಚಿಂತಕ ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು. ಅವರು ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್ ಮತ್ತು  ಜೈನ್ ಡೀಮ್ಡ್ ಟು ಬಿ ಬಿ ಯೂನಿವರ್ಸಿಟಿಯ ಭಾಷಾ ವಿಭಾಗವು ಹಮ್ಮಿಕೊಂಡ ಮೂರುದಿನಗಳ ವಿ. ಕೃ. ಗೋಕಾಕರ ಕವಿತೆಗಳ ಅನುವಾದ ಕಮ್ಮಟ (ನಾನು ಕನಸಿಗ)ದ ಮುಖ್ಯ ಅತಿಥಿಯಾಗಿ ಮಾತನಾಡಿದರು.

`ವಿ. ಕೃ. ಗೋಕಾಕ್ ಕೇವಲ ಕನ್ನಡ ಮಾತ್ರವಲ್ಲ ಜಗತ್ತು ಕಂಡ ಪ್ರತಿಭಾವಂತ ಲೇಖಕರಲ್ಲಿ ಒಬ್ಬರು. ಅಂಥವರನ್ನು ಹೊಸ ಜನಾಂಗಕ್ಕೆ ಪರಿಚಯಿಸುವ ಕೆಲಸ ಸ್ತುತ್ಯಾರ್ಹ’ ಎಂದರು. `ಅನುವಾದ ಕೇವಲ ಟ್ರಾನ್ಸಲೇಷನ್ ಅಲ್ಲ ಟ್ರಾನ್ಸ್ಕ್ರಿಯೇಷನ್’ ಎಂದು ವಿವರಿಸಿದರು. `ಯಾವುದೇ ಒಂದು ಶೈಕ್ಷಣಿಕ ಸಂಸ್ಥೆಗೆ ಹೆಸರು ಬರುವುದು ಕೇವಲ ಇನ್ ಫ್ರಾಸ್ಟçಕ್ಛರ್ ನಿಂದ ಅಲ್ಲ; ಅಲ್ಲಿರುವ ಅಧ್ಯಾಪಕರಿಂದ,  ನಾನು  ಸ್ಟಾನ್ ಫರ್ಡ್ ಯೂನಿವರ್ಸಿಟಿಗೆ ಹೋದಾಗ ಅಲ್ಲಿ ೩೨ ಜನ ನೊಬಲ್ ಪ್ರಶಸ್ತಿ ಪಡೆದವರಿದ್ದರು. ಜೈನ್ ಸಂಸ್ಥೆ ಅಂಥದಕ್ಕೆ ಮಾದರಿಯಾಗಲಿ ಎಂದು ಹಾರೈಸಿದರು. ಓದುವ ಹವ್ಯಾಸದ ಬಗೆಗೆ ವಿಷಯ ಪ್ರಸ್ತಾಪಿಸಿದ ಅವರು `ಪಶ್ಚಿಮದಲ್ಲಿ ಈ ಹೊತ್ತಿಗೂ ಪಠ್ಯದಾಚೆಗೂ ಪುಸ್ತಕಗಳನ್ನು ಓದುವ ಸಂಸ್ಕೃತಿ ಇದೆ. ಅಮೆರಿಕದಲ್ಲಿ ಏಳುವರ್ಷದ ನನ್ನ ಮೊಮ್ಮಗಳು ಒಂದು ವರ್ಷದಲ್ಲಿ ೧೩೦೦ ಪುಸ್ತಕಗಳನ್ನು ಓದಿದ್ದಾಳೆ. ಅದನ್ನು ಅಲ್ಲಿಯ ಶಿಕ್ಷಕರು ಪ್ರಶ್ನೆ ಕೇಳಿ ಪರೀಕ್ಷಿಸಿ ಋಜುವಾತುಪಡಿಸಿದ್ದಾರೆ. ನಮ್ಮಲ್ಲಿ ಮಕ್ಕಳು ಬಿಡಿ, ಅನೇಕ ಅಧ್ಯಾಪಕರೂ  ಕೂಡ ಓದುವುದನ್ನು ನಿಲ್ಲಿಸಿಬಿಟ್ಟಿದ್ದಾರೆ ಎಂದು ವಿಷಾಧಿಸಿದರು.

ಹಿರಿಯ ವಿದ್ವಾಂಸರಾದ ಪಿ. ವಿ. ನಾರಾಯಣ ಅವರು ಶ್ರೀಮತಿ ಉಮಾರಾಜಣ್ಣ ಅವರು ಅನುವಾದಿಸಿದ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ Vinayaka Krishna Gokak- A Glint of Lightಮತ್ತು ನರಹಳ್ಳಿ ಬಾಲಸುಬ್ರಹ್ಮಣ್ಯ ಮತ್ತು ಪಿ. ಚಂದ್ರಿಕಾ ಅವರು ಸಂಪಾದಿಸಿರುವ `ನಾನು ಪಯಣಿಗ’ ಕೃತಿಗಳನ್ನು ಬಿಡುಗಡೆ ಮಾಡಿದರು. ಜೈನ್‌ನ ಭಾಷಾ ವಿಭಾಗದ ಮುಖ್ಯಸ್ಥರಾದ ಡಾ. ರಜನಿ ಜಯರಾಮ್ ಅವರು ಮಾತನಾಡಿ `ಕವಿ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ವ್ಯಕ್ತಿ ಮಾತ್ರವಲ್ಲ; ಬದಲಿಗೆ ಸಮಾಜವನ್ನು ಅಸಾಮಾನ್ಯ ಪ್ರತಿಭೆಯಿಂದ ಒಂದು ಸಮಾಜ ಹೇಗಿತ್ತು, ಹೇಗಿದೆ ಮತ್ತು ಹೇಗಿರುತ್ತದೆ ಎನ್ನುವುದನ್ನು ಚಿತ್ರಿಸುತ್ತಾನೆ. ಹೀಗಾಗಿ ಕವಿಯ ಮನಸ್ಸೆಂಬುದು ಸುಸ್ಥಿರವಾದದ್ದು. ಯಾರೊಬ್ಬ ಕವಿ ಮಾತನಾಡುತ್ತಾನೆಂದರೆ ಅವನು ಹೃದಯದಿಂದ ಮಾತನಾಡುತ್ತಿದ್ದಾನೆಯೇ ಹೊರತು ನಾಲಿಗೆಯಿಂದಲ್ಲ ಎನ್ನುವುದು ನಮ್ಮ ಗಮನಕ್ಕೆ ಬರುತ್ತದೆ. ಹೀಗಾಗಿ ಅದು ಸಾರ್ವಕಾಲಿಕ, ಸಾರ್ವದೇಶಿಕ ನ್ಯಾಯವಾಗಿರುತ್ತದೆ. ಕವಿ ಭಾವನೆಗಳನ್ನು ಭೂತ, ವರ್ತಮಾನ ಮತ್ತು ಭವಿಷತ್ತುಗಳಲ್ಲಿ ವ್ಯಕ್ತಪಡಿಸುತ್ತಾನೆ ಎನ್ನುವುದು ನಿಜ ಎಂದು ವಿವರಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅಭಿನವ ರವಿಕುಮಾರ್ `ಜಗತ್ತಿನಲ್ಲಿ ಅನೇಕ ರಾಜಮಹಾರಾಜರು ಆಗಿಹೊಗಿದ್ದಾರೆ. ಆದರೆ ಜನಮಾನಸ ಅವರನ್ನು ಮರೆಯುತ್ತದೆ.  ಕವಿ, ಕಲಾವಿದರನ್ನಲ್ಲ. ಜಗತ್ತಿನಲ್ಲಿ ಶೇಕ್ಸ್ಪಿಯರ್ ಹೆಸರು ಕೇಳದ ಜನರಿಲ್ಲ. ವಾಲ್ಮೀಕಿ, ಕಾಳಿದಾಸ, ಕುವೆಂಪು, ಬೇಂದ್ರೆ ಹೆಸರುಗಳು ಯಾವತ್ತಿಗೂ ಉಳಿಯುತ್ತದೆ. ಇದು ಸಾಹಿತ್ಯದ ಅನನ್ಯತೆಯನ್ನು ತೋರಿಸುತ್ತದೆ’ ಎಂದರು. ಮುಂದುವರೆದ ಅವರು `ಈ ಹೊತ್ತು ಶಿಕ್ಷಣದಲ್ಲಿ ಭಾಷಾ ಶಿಕ್ಷಣವು ಮೂಲೆಗುಂಪಾಗುತ್ತಿದೆ. ಸಮಾಜದಲ್ಲಿ ವಾಣಿಜ್ಯೀಕರಣ, ಜನಪ್ರಿಯೆತೆ, ಲೋಭತನ ಹೆಚ್ಚುತ್ತಿದೆ. ಈ ಹೊತ್ತಿನಲ್ಲಿ  ಭಾಷಾಕಲಿಕೆಯ ಕಡೆಗೆ ಯುವ ಜನಾಂಗವನ್ನು, ಪೋಷಕರನ್ನು ಕರೆತರುವ ಕೆಲಸವನ್ನು ಅಧ್ಯಾಪಕರು ಮಾಡಬೇಕಿದೆ ಮತ್ತು ಭಾಷಾ ಬಾಂದವ್ಯವನ್ನು ಹೆಚ್ಚಿಸಬೇಕಿದೆ’ ಎಂದರು.

ಕಾರ್ಯಶಿಬಿರದ ಉದ್ದೇಶದ ಬಗೆಗೆ ವಿವರಿಸುತ್ತಾ `ಭಾರತೀಯ ಸಾಹಿತ್ಯದ ಅಪರೂಪದ ಕವಿಗಳಲ್ಲಿ ಒಬ್ಬರಾದ ವಿ. ಕೃ. ಗೋಕಾಕರು ತಮ್ಮ ಪ್ರಯೋಗಶೀಲ ಪ್ರಯತ್ನದಿಂದ ಹೆಸರಾದವರು. ಪರಂಪರೆ ಹಾಗೂ ಆಧುನಿಕತೆಗಳನ್ನು ಬೆಸೆಯುವ ಮೂಲಕ ಸಮನ್ವಯ ಸಾಧಿಸಿದವರು. ವಿಶ್ವಾಮಿತ್ರ ಪ್ರತಿಭೆಯ ಅವರ ಕೆಲವು ಕವಿತೆಗಳನ್ನು ಕನ್ನಡದಿಂದ ಇಂಗ್ಲೀಷ್‌ಗೆ, ಇಂಗ್ಲಿಷ್‌ನಿಂದ ಕನ್ನಡ, ಹಿಂದಿ, ತಮಿಳು, ಮರಾಠಿ, ಅರೆಬಿಕ್, ತುಳು, ಸ್ವಾಹಿಲಿ ಮುಂತಾದ ಭಾಷೆಗಳಿಗೆ ಅನುವಾದಿಸುವ ಪ್ರಯತ್ನ ಈ ಕಮ್ಮಟದ ಮುಖ್ಯ ಉದ್ದೇಶ. ಈ ಕಾರ್ಯಶಿಬಿರಕ್ಕೆ ನಿರ್ದೇಶಕರಾಗಿ ಬಂದಿರುವ ಎಂ. ಸಿ. ಪ್ರಕಾಶ್  ಎಂಟು ಭಾಷೆಗಳಲ್ಲಿ ಪರಿಶ್ರಮವಿರುವವರು. ಅವರ ವಿದ್ವತ್ತಿನ ಪ್ರಯೋಜನವನ್ನು ನಾವೆಲ್ಲ ಪಡೆದುಕೊಳ್ಳಬೇಕಿದೆ’ ಎಂದರು.

ಆರಂಭದಲ್ಲಿ ಗೋಕಾಕರ ನಾನು ಕವಿತೆ ಕವಿತೆಯನ್ನು ಶಿವಕುಮಾರ್ ಓದಿದರು. ವಿದ್ವಾನ್ ರಾಮಚಂದ್ರ ವಂದಿಸಿದರು. ಕಾರ್ಯಕ್ರಮದಲ್ಲಿ ರೇಖಾ ಸಕ್ಸೆನಾ, ಮೇಖಲಾ, ಗೀತಾ ಮಧುಸೂದನ್, ಶ್ರೀನಿವಾಸಯ್ಯ,  ಯಶಸ್ವಿನಿ, ಉಮಾ ಮುಗಳಿ, ರಾಜಕುಮಾರ್ ಬಡಿಗೇರ್, ಶ್ರೀಲಕ್ಷ್ಮಿ, ಡಿ. ಸಿ., ಭವರ್ ಸಿಂಗ್, ಪ್ರಕಾಶ್ ಕಾಂಬಳೆ ಮುಂತಾದವರು ಸಂಪನ್ಮೂಲ ಸಹಾಯಕರಾಗಿ ಭಾಗವಹಿಸಿದ್ದರು.