- ಸಾಧಕರು ಸಾಮ್ರಾಜ್ಯ ಕಟ್ಟಬಾರದು- ವೈಲ್ಡ್ ವೈಲ್ಡ್ ಕಂಟ್ರಿ - ನವೆಂಬರ್ 5, 2022
- ವ್ಹಾ ರಿಷಭ್ ವ್ಹಾ – ಕಾಂತಾರಕೆ ವ್ಹಾ ವ್ಹಾ - ಅಕ್ಟೋಬರ್ 8, 2022
- ಚೇರ್ಮನ್ ಅವರ ಕುರಿತ ಪುಸ್ತಕ ಮತ್ತು ನಾನು - ಆಗಸ್ಟ್ 22, 2022
ನಾವು ಯಾವುದನ್ನು ನಮ್ಮ ಬಹುದೊಡ್ಡ ಶಕ್ತಿ ಅಂದುಕೊಂಡಿರುತ್ತೇವೆಯೋ ಅದು ಕಾಲ ನಂತರ ಮಿತಿ ಆಗಬಹುದು.ಆದ್ದರಿಂದ ವ್ಯಕ್ತಿ ತಾನು ಹೊಂದಿರುವ ದೌರ್ಬಲ್ಯಗಳಿಂದ ಹೊರ ಬಂದು, ಕಟ್ಟುಪಾಡುಗಳನ್ನು ಮುರಿದು ಧರ್ಮದ ಪರ ನಿಲ್ಲಬೇಕೆಂಬುದು ಮಹಾಕಾವ್ಯ ಮಹಾಭಾರತದ ಆಶಯ ಎಂಬುದನ್ನು ಭೀಷ್ಮನ ಪಾತ್ರ ನೆನಪಿಸಿಕೊಡುತ್ತದೆ.
_ಪ್ರೊ.ಸಿದ್ದು ಯಾಪಲಪರವಿ, ಕಾರಟಗಿ
ಮಹಾಭಾರತದ ಹಿರಿಯ ಪಾತ್ರ ಕುರು ವಂಶದ ಹಿರಿಯ ಜೀವಿ ಗಂಗಾಪುತ್ರ ಭೀಷ್ಮ ಜಾಗತಿಕ ಮಹಾಕಾವ್ಯ ಕಂಡ ವಿಶಿಷ್ಟ ವ್ಯಕ್ತಿತ್ವ.
ಮಹಾಭಾರತದ ಪ್ರತಿಯೊಂದು ಪಾತ್ರಗಳು ಮನುಷ್ಯನ ಗುಣಧರ್ಮದ ಸಂಕೇತಗಳು.
ತ್ಯಾಗ,ಸಹನೆ,ಚಾರಿತ್ರ್ಯ,ಕರ್ತವ್ಯ ಪಾಲನೆ,ಶೌರ್ಯ,ಹಿರಿತನದ ನಿರ್ವಹಣೆ, ಉನ್ನತ ಸ್ಥಾನದಲ್ಲಿ ಇದ್ದರೂ ಅಧಿಕಾರ ಚಲಾಯಿಸಲಾಗದ ಅಸಹಾಯಕತೆ…
ಹೀಗೆ ಹತ್ತಾರು ಮೌಲಿಕ ಗುಣಗಳ ಮಹಾಪರ್ವತವೇ ಗಂಗಾಪುತ್ರ ಭೀಷ್ಮ ಪಿತಾಮಹ.
ಮಹಾಭಾರತದಲ್ಲಿ ಎರಡು ಬಗೆಯ ಸಂಘರ್ಷಗಳಿವೆ.
ಧರ್ಮ ಮತ್ತು ಅಧರ್ಮ; ದೇವ ಮಾನವರು ಮತ್ತು ಸಹಜ ಗುಣಧರ್ಮದ ಮನುಷ್ಯರು.
ಹತ್ತಾರು ವರಗಳ ಪಡೆದು ಜನಿಸಿದ ಪಿತಾಮಹ ಸಾಯುವತನಕ ಕಷ್ಟಗಳನ್ನು ಎದುರಿಸುವ ಸಹನಾ ಮೂರ್ತಿ.
ಅಪರಿಮಿತ ಸಹನೆಯೂ ದೌರ್ಬಲ್ಯ ಅನಿಸುವಷ್ಟು!
ವಚನ ಪರಿಪಾಲನೆ ಮತ್ತು ಶಾಪಗ್ರಸ್ಥ ಬದುಕು ಆ ಕಾಲದ ಸಂಘರ್ಷವಾಗಿತ್ತು.
ಕುರು ವಂಶದ ಮಹಾರಾಜನಾಗುವ ಅವಕಾಶವನ್ನು ತಂದೆಯ ಸ್ತ್ರೀ ವ್ಯಾಮೋಹದಿಂದ ತ್ಯಜಿಸುವ ಸಂದರ್ಭದ ‘ಭೀಷ್ಮ ಪ್ರತಿಜ್ಞೆ’ ಭಾರತೀಯರ ನುಡಿಗಟ್ಟಾಯಿತು.
ಸತ್ಯವತಿಯ ಮನದಾಸೆ ಈಡೇರಿಸಿ ತಂದೆಯ ಮುದಿ ಪ್ರೇಮ ಹುಚ್ಚನ್ನು ಸಂರಕ್ಷಿಸಲು ಭೀಷ್ಮ ಬ್ರಹ್ಮಚಾರಿಯಾಗಿ ಉಳಿಯುವ ಪ್ರತಿಜ್ಞೆ ಮಾಡುತ್ತಾನೆ.
ಆ ಕಾಲದಲ್ಲಿ ಪ್ರತಿಯೊಂದು ಆಚರಣೆಗಳ ಪಾಲನೆ ಬಹಿರಂಗವಾಗಿ ಇರುತ್ತಿತ್ತು.
ಕ್ಷತ್ರಿಯರ ಹತ್ತಾರು ಮದುವೆಗಳು, ಮುಕ್ತ ಕಾಮದಿಂದ ಕೂಡಿದ ನಿಯೋಗ, ಗಂಭೀರ ಹೋರಾಟಗಳು, ಋಷಿಗಳು ನೀಡುವ ಶಾಪಗಳು ಎಲ್ಲವೂ ಸಾರ್ವತ್ರಿಕ ದಾಖಲೆಗಳಾಗುತ್ತಿದ್ದವು.
ತನ್ನ ಇಡೀ ಬದುಕನ್ನು ಕುರು ಸಾಮ್ರಾಜ್ಯದ ರಕ್ಷಣೆಯ ಪ್ರತಿಜ್ಞೆಯಿಂದ ಕೌರವರು ಕೊಡುವ ನೂರಾರು ಯಾತನೆಗಳನ್ನು ಭೀಷ್ಮ ಸಾಯುವ ತನಕ ಎದುರಿಸುತ್ತಾನೆ.
ರಾಜ ನೀತಿ, ರಾಜ ಶಾಸನಗಳ ಕಾರಣದಿಂದ ಒಮ್ಮೊಮ್ಮೆ ಅಸಹಾಯಕವಾಗುವುದು ಸಹಜ.
ಕಡು ಪುತ್ರ ವ್ಯಾಮೋಹಿ ದೃತರಾಷ್ಟ್ರ ಕೇವಲ ದೈಹಿಕವಾಗಿ ಅಂಧನಾಗಿರದೆ, ಮಗನ ಕುರುಡು ಪ್ರೇಮ ಅವನ ರಾಜ ನಿಷ್ಠೆಯ ಮಾನ ಹರಾಜು ಹಾಕುತ್ತದೆ ಎಂಬುದನ್ನು ಕವಿ ನಿರೂಪಿಸುತ್ತಾನೆ.
ಮಗನ ವ್ಯಾಮೋಹದಿಂದ ಅವನು ಹಿಡಿಯುವ ಅಧರ್ಮ ಮಾರ್ಗವನ್ನು ಕಂಡು ಕಾಣದಂತೆ ಸುಮ್ಮನಿರುತ್ತಾನೆ.
ಆದರೆ ಇಡೀ ಕಾವ್ಯದಲ್ಲಿ ಎರಡು ಮಹತ್ವದ ನಿರ್ಣಯ ತೆಗೆದುಕೊಂಡು ಭೀಷ್ಮ ನಮಗೆ ಅದ್ಭುತ decision maker ಆಗಿ ಕಂಗೊಳಿಸುತ್ತಾನೆ.
ಶಕುನಿಯ ಕುಟಿಲ ನೀತಿ ಮತ್ತು ಕುತಂತ್ರದಿಂದ ದೃತರಾಷ್ಟ್ರ ಮತ್ತು ದುರ್ಯೋಧನ ಅಧರ್ಮ ನೀತಿ ಅನುಸರಿಸಿ ಹಾಳಾಗುವುದನ್ನು ಭೀಷ್ಮ ಅರ್ಥ ಮಾಡಿಕೊಳ್ಳುತ್ತಾನೆ.
ಕೌರವ ಪುತ್ರರನ್ನು ವ್ಯಾಮೋಹದ ಕಾರಣದಿಂದ ಗುರುಕುಲ ಶಿಕ್ಷಣ ಕೊಡಲು ದೃತರಾಷ್ಟ್ರ ನಿರಾಕರಿಸುತ್ತಾನೆ.
ಮಕ್ಕಳಿಗೆ ಸಂಸ್ಕಾರ ನೀಡುವಾಗ ಗುರುಕುಲ ಆಶ್ರಮ ಪಾಲಿಸುವ ಕಟ್ಟು ಪಾಡುಗಳಿಂದ ತನ್ನ ಮಕ್ಕಳು ಐಷಾರಾಮಿ ಬದುಕಿನಿಂದ ವಂಚಿತರಾಗುತ್ತಾರೆ ಎಂಬ ಅಜ್ಞಾನದ ಆತಂಕ ಮೂರ್ಖ ರಾಜನನ್ನು ಕಾಡುತ್ತದೆ.
ಗುಣಮಟ್ಟದ ಶಿಕ್ಷಣ ರಾಜನಾಗುವವನಿಗೆ ಅಗತ್ಯವೆಂದು ಗೊತ್ತಿದ್ದರೂ ದುರ್ಯೋಧನನ ಮೇಲಿನ ಕುರುಡು ಪ್ರೀತಿ ಅವನ ಅಂತರಂಗದ ಕತ್ತಲೆಗೆ ಕಾರಣವಾಗುತ್ತದೆ.
ಶಕುನಿ ಕುತಂತ್ರದಿಂದ ಭೀಮನಿಗೆ ದುರ್ಯೋಧನ ವಿಷ ಪ್ರಾಷನ ಮಾಡಿ ಕೊಲ್ಲುವ ಪ್ರಯತ್ನ ಬಹಿರಂಗವಾದ ಮೇಲೆ ಭೀಷ್ಮ ಕಠಿಣನಾಗುತ್ತಾನೆ.
ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ನಿರ್ಣಯ ಮಾಡುತ್ತಾನೆ.
‘ದೃತರಾಷ್ಟ್ರನ ಮಕ್ಕಳಿಗೆ ಗುರುಕುಲ ಶಿಕ್ಷಣ ನೀಡಲು ಒಪ್ಪಿಸುವುದು ಮತ್ತು ಶಕುನಿಯನ್ನು ಗಾಂಧಾರ ರಾಜ್ಯಕ್ಕೆ ಮರಳಿ ಕಳಿಸುವುದು.’
ಒಮ್ಮೆ ಪಗಡೆಯ ದಾಳಗಳ ಪುಡಿ ಪುಡಿ ಮಾಡಿ ನಯವಾಗಿ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿ ಗಾಂಧಾರಕ್ಕೆ ಮರಳಿ ಹೋಗಲು ಶಕುನಿಗೆ ಕಟುವಾಗಿ ಹೇಳಿದ ಮೇಲೂ ಅವನು ಹೋಗುವುದಿಲ್ಲ.
ದೃತರಾಷ್ಟ್ರ ಮತ್ತು ದುರ್ಯೋಧನರು ಶಕುನಿಯ ಕುತಂತ್ರದ ಸಲಹೆಗಳ ದಾಸರಾಗಿರುತ್ತಾರೆ.
ಅವನನ್ನು ಅವರಿಂದ ಬೇರ್ಪಡಿಸುವುದು ಸರಳವಲ್ಲ ಎಂದು ಗೊತ್ತಾಗುತ್ತದೆ.
ವಯಸ್ಸು ಮತ್ತು ಸಾಮರ್ಥ್ಯದಲ್ಲಿ ದೃತರಾಷ್ಟ್ರ ತನಗಿಂತಲೂ ಚಿಕ್ಕವನಾದರೂ ‘ಮಹಾರಾಜ’ ಎಂಬ ಅಧಿಕಾರ ಮತ್ತು ಪದವಿ ಅವನ ಮಾತುಗಳ ಆಲಿಸುವುದು ಭೀಷ್ಮನಿಗೆ ಅನಿವಾರ್ಯವಾಗುತ್ತದೆ.
ಅದನ್ನು ಮನಗಂಡ ಭೀಷ್ಮ ಶಕುನಿಯನ್ನು ಹೊರ ಹಾಕುವ ದೃಶ್ಯ ಅನನ್ಯ.
ಅವನ ವಸ್ತುಗಳನ್ನು ಗಂಟು ಮೂಟೆ ಕಟ್ಟಿ ರಥದಲ್ಲಿ ಹಾಕಿ ಹೊರ ಹಾಕುವ ನಿರ್ಣಯ ಮಾಡುತ್ತಾನೆ.
ಅರಮನೆ ಹೊರಗೆ ನಿಲ್ಲಿಸಿಕೊಂಡು ದೃತರಾಷ್ಟ್ರ ಮತ್ತು ಗಾಂಧಾರಿ ಭೇಟಿಗೆ ಒಂದಿನಿತು ಅವಕಾಶ ಕೊಡದೆ ಬೆದರಿಸಿ ಓಡಿಸುವ ದೃಶ್ಯವನ್ನು ಕವಿ ವ್ಯಾಸ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾನೆ.
ಭೀಷ್ಮನ ನಿರ್ಣಯದ ಪರಿ ಓದುಗರಿಗೆ ಖುಷಿ ಕೊಡುತ್ತದೆ. ಉನ್ನತ ಅಧಿಕಾರದಲ್ಲಿ ಇರುವ ವ್ಯಕ್ತಿಗಳು ತೆಗೆದುಕೊಳ್ಳಬಹುದಾದ ಗಟ್ಟಿ ನಿರ್ಣಯಕ್ಕೆ ಮಾರ್ಗಸೂಚಿ ಎನಿಸುತ್ತದೆ.
ಈ ರೀತಿಯ ಗಟ್ಟಿ ನಿರ್ಣಯವನ್ನು ಕಪಟಿ ಶಕುನಿ ನಿರೀಕ್ಷೆ ಮಾಡಿರುವುದಿಲ್ಲ.
ಮುಂದೆ ಇಂತಹ ಅನಿರೀಕ್ಷಿತ ನಿರ್ಣಯಗಳ ಹೊಡೆತಗಳನ್ನು ಕೊಡಲು ಶಕುನಿ ಸಂಕಲ್ಪ ಮಾಡಲು ಈ ಸಂದರ್ಭ ಉದ್ರೇಕಿಸುತ್ತದೆ.
ಇದೇ ಪ್ರಸಂಗದಲ್ಲಿ ದುರ್ಯೋಧನ ಮಾಡಿದ ತಪ್ಪಿಗೆ ರಾಜಸಭೆ ಕರೆದು ಶಿಕ್ಷೆ ನಿರ್ಣಯಿಸಲು ದೃತರಾಷ್ಟ್ರನಿಗೆ ಆದೇಶ ನೀಡುತ್ತಾನೆ.
ಅಂಧ ರಾಜ ಭೀಷ್ಮನ ನಿರ್ಣಯ ಕೇಳಿ ತತ್ತರಿಸಿ ಬೆವತು ಹೋಗುತ್ತಾನೆ. ತನ್ನ ಮಗನ ಪಾಪ ಕೃತ್ಯಕ್ಕೆ ತಾನೇ ಶಿಕ್ಷೆ ಘೋಷಣೆ ಮಾಡುವ ದೃಶ್ಯ ಊಹಿಸಿಕೊಂಡು ನರಳುತ್ತಾನೆ.
ದೃತರಾಷ್ಟ್ರನ ದೌರ್ಬಲ್ಯ ಮತ್ತು ಭೀತಿಯನ್ನು ಅರಿತ ಭೀಷ್ಮ ಕೌರವ ಪುತ್ರರನ್ನು ದ್ರೋಣಾಚಾರ್ಯರ ಆಶ್ರಮಕ್ಕೆ ಶಿಕ್ಷಣ ಪಡೆಯಲು ಕಳಿಸಲು ಒಪ್ಪಿಕೊಳ್ಳುವ ಪರ್ಯಾಯ ಶಿಕ್ಷೆ ನೀಡುತ್ತಾನೆ.
ಯುವರಾಜರಿಗೆ ಈ ಶಿಕ್ಷಣದ ಅವಶ್ಯಕತೆ ಇರುವುದು ಗೊತ್ತಿದ್ದರೂ ಶಿಕ್ಷಣ ಪಡೆಯುವಾಗ ನೀಡುವ ಕಠಿಣ ಕ್ರಮಗಳ ಕಾರಣದಿಂದ ಮತ್ತು ಮಗನ ಅಗಲಿಕೆಯ ಯಾತನೆ ಎದುರಿಸಲಾಗದೇ ದೃತರಾಷ್ಟ್ರ ಈ ಶಿಕ್ಷಣವನ್ನು ತಳ್ಳಿ ಹಾಕಿರುತ್ತಾನೆ.
ಆದರೆ ಈಗ ವಿಷಪ್ರಾಷನ ಮಾಡಿದ ತಪ್ಪಿಗೆ ನೀಡುವ ಕಠಿಣ ಶಿಕ್ಷೆಗಿಂತ ಗುರುಕುಲದ ಶಿಕ್ಷಣವೇ ಉತ್ತಮವೆನಿಸಿ ದೃತರಾಷ್ಟ್ರ ಒಪ್ಪಿಕೊಳ್ಳುತ್ತಾನೆ; ಒಪ್ಪಲೇಬೇಕಾದ ಅನಿವಾರ್ಯತೆಯನ್ನು ಭೀಷ್ಮ ಸೃಷ್ಟಿ ಮಾಡುತ್ತಾನೆ.
ಕೇವಲ ಈ ಎರಡು ದೃಶ್ಯಗಳಲ್ಲಿ ಮಾತ್ರ ಭೀಷ್ಮನ ಗಟ್ಟಿ ನಿರ್ಣಯಗಳ ಅನುಷ್ಠಾನ ಅನುಕರಣೀಯ ಎನಿಸಿ ಖುಷಿಯಾಗುತ್ತದೆ.
ಮನೆಯ ಯಜಮಾನರು, ದೇಶ ಆಳುವ ನಾಯಕರು ಹೊಂದಿರಬಹುದಾದ ಸಾಮರ್ಥ್ಯವನ್ನು ಈ ದೃಶ್ಯ ನಿರೂಪಿಸುತ್ತದೆ.
ಆದರೆ ಮುಂದೆ ಅಂತಹ ವಿಶೇಷ ನಿರ್ಣಯ ತೆಗೆದುಕೊಳ್ಳುವ ಅವಕಾಶವನ್ನು ದೃತರಾಷ್ಟ್ರ ಕಿತ್ತುಕೊಳ್ಳುತ್ತಾನೆ. ಇದರಿಂದ ಮಗನ ಅಂಧಕಾರದ ಕತ್ತಲೆಯಲ್ಲಿ ವಿನಾಶವಾಗುತ್ತಾನೆ.
ದೃತರಾಷ್ಟ್ರನ ಪುತ್ರ ವ್ಯಾಮೋಹದಿಂದ ಅನೇಕ ಬಾರಿ ಅಂತಹ ಅಪಮಾನವನ್ನು ಸಾಯುವತನಕ ಭೀಷ್ಮ ಎದುರಿಸುತ್ತಲೇ ಹೋಗುತ್ತಾನೆ.
ವ್ಯಾಮೋಹಿ ದೃತರಾಷ್ಟ್ರ ಮಗನಿಗಾಗಿ ಸಂವಿಧಾನ ಉಲ್ಲಂಘನೆ ಮಾಡುತ್ತಲೇ ಹೋಗುತ್ತಾನೆ; ಭೀಷ್ಮ ಸಹಿಸುತ್ತಲೇ ಹೋಗುತ್ತಾನೆ.
ಕೇವಲ ಒಂದೆರಡು ಬಾರಿ ಗಟ್ಟಿ ನಿರ್ಣಯ ತೆಗೆದುಕೊಂಡ ಭೀಷ್ಮ ಬರು ಬರುತ್ತ ಗಟ್ಟಿ ನಿರ್ಣಯಗಳಿಗಿಂತ ತನ್ನ ಪ್ರತಿಜ್ಞೆ ಮತ್ತು ಕುರು ಸಾಮ್ರಾಜ್ಯ ರಕ್ಷಣೆಯ ನಿಷ್ಠೆ ಮಹತ್ವದ್ದೆಂದು ಭಾವಿಸಿ ತಪ್ಪುಗಳನ್ನು ಸಹಿಸಿಕೊಳ್ಳುತ್ತ ಸಾಗುತ್ತಾನೆ.
ಅಂತರಂಗದಲ್ಲಿ ಪಾಂಡವರ ಶ್ರೇಯಸ್ಸಿಗಾಗಿ ಪ್ರಾರ್ಥಿಸುತ್ತಾನೆಯಾದರೂ ಬಹಿರಂಗ ಬೆಂಬಲ ಅಸಾಧ್ಯವಾಗುತ್ತದೆ.
ದೃತರಾಷ್ಟ್ರನ ಜೊತೆಗೆ ಶಕುನಿ, ದುರ್ಯೋಧನ, ಕರ್ಣ,ದ್ರೋಣಾಚಾರ್ಯ ಸೇರಿಕೊಂಡ ಮೇಲೆ ಭೀಷ್ಮನ ಸಾಮರ್ಥ್ಯ ಕುಂಠಿತವಾಗುತ್ತದೆ.
ದ್ರೌಪದಿ ವಸ್ತ್ರಾಪಹರಣದ ಮೌನ ಭೀಷ್ಮನ ಪಾಲಿನ ಬಹುದೊಡ್ಡ ಅಳಿಸಲಾಗದ ಕಳಂಕ.
ಸೂಕ್ಷ್ಮಗ್ರಾಹಿ ಸ್ತ್ರೀ ಪರ ನಿಲುವು-
ಭೀಷ್ಮನ ಬದುಕು ಆರಂಭವಾಗುವುದೇ ಅಪ್ಪಟ ಸ್ತ್ರೀವಾದಿ ನಿಲುವಿನಿಂದ. ತಾಯಿ ಸತ್ಯವತಿಯ ಮಾತು ಉಳಿಸಲು ಬ್ರಹ್ಮಚರ್ಯ ಪ್ರತಿಜ್ಞೆ ಮಾಡುವುದರ ಮೂಲಕ ಹೆಣ್ಣಿನ ಆಶೋತ್ತರಗಳಿಗೆ ದನಿಯಾಗುತ್ತಾನೆ.
ನಂತರ ಕುಂತಿ ಅರಮನೆ ಬಿಟ್ಟು ಹೋಗದಂತೆ ತಡೆದು ಪಾಂಡುವಿನ ಮಕ್ಕಳಿಗೆ ದ್ರೋಣರಿಂದ ಉತ್ತಮ ಶಿಕ್ಷಣ ಕೊಡಿಸುತ್ತಾನೆ.
ಆದರೆ ಆ ಗಟ್ಟಿತನ ಶಾಶ್ವತವಾಗಿ ಉಳಿಯದಿರಲು ಅವನು ಪ್ರತಿಜ್ಞೆಗೆ ಜೋತು ಬಿದ್ದು ಅಧರ್ಮಿಗಳ ಪರವಹಿಸುತ್ತ ಕಳಂಕಿತನಾಗುತ್ತಾನೆ.
ದ್ರೌಪದಿ ವಸ್ತ್ರಾಪಹರಣ ತಡೆಯಲಾಗದಿದ್ದ ಕಾರಣಕ್ಕಾಗಿ ಕುರುಕ್ಷೇತ್ರ ಯುದ್ಧಕ್ಕೆ ನಾಂದಿಯಾಗುತ್ತದೆ.
ಆ ಯುದ್ಧದಲ್ಲಿ ಕೌರವರಿಗೆ ಜಯ ಸಿಗಬಾರದು, ಹಾಗೆ ಜಯ ಸಿಕ್ಕರೆ ಅದು ಅಧರ್ಮದ ವಿಜಯವಾಗುತ್ತದೆ ಎಂಬ ಅರಿವಿನಿಂದ ಭೀಷ್ಮ ಕರ್ಣನ ಸಾಮರ್ಥ್ಯ ಗೊತ್ತಿದ್ದರೂ ಅವನನ್ನು ಸೂತ ಪುತ್ರನೆಂದು ಮೂದಲಿಸಿ ಅವಮಾನ ಮಾಡಿ ಯುದ್ಧದಿಂದ ದೂರ ಉಳಿಯುವಂತೆ ನೋಡಿಕೊಳ್ಳುತ್ತಾನೆ.
ಕರ್ಣನ ಶೌರ್ಯ ಗೊತ್ತಿದ್ದರೂ ಉದ್ದೇಶಪೂರ್ವಕವಾಗಿ ಪದೇ ಪದೇ ಅವಮಾನಿಸಿ ಕೆಣಕುತ್ತಾನೆ.
ಆದರೆ ಮುಕ್ತವಾಗಿ ಕೌರವರ ಅಧರ್ಮ ನೀತಿಯನ್ನು ಖಂಡಿಸುವ ಸಾಮರ್ಥ್ಯ ಕಳೆದುಕೊಳ್ಳುವುದು ಅವನ ಮಿತಿ ಮತ್ತು ದುರಂತ.
ಕೊನೆಯತನಕ ತನ್ನ ತಪ್ಪುಗಳನ್ನು ವಿವೇಚನೆಗೆ ಒಳಪಡಿಸದೆ ‘ಪ್ರತಿಜ್ಞೆ’ ಎಂಬ ಅನರ್ಥ ಹಳಸಲು ಸಿದ್ಧಾಂತದಿಂದ ಅಧರ್ಮೀಯರ ಪರ ನಿಂತ ದುರಂತ ಧೀರ.
ಕೊನೆಗೆ ಶ್ರೀ ಕೃಷ್ಣನೊಡನೆ ಕುರುಕ್ಷೇತ್ರ ಯುದ್ಧ ಭೂಮಿಯಲ್ಲಿ ಸಂವಾದ ಮಾಡುವಾಗ ತನ್ನ ತಪ್ಪಿನ ಅರಿವಾಗುತ್ತದೆ.
ಪ್ರತಿಜ್ಞೆ ಮತ್ತು ಸಂವಿಧಾನಕ್ಕಿಂತ ಧರ್ಮ ದೊಡ್ಡದು ಎಂಬ ಸತ್ಯವನ್ನು ಅರ್ಥ ಮಾಡಿಕೊಳ್ಳುತ್ತಾನೆ ಆದರೆ ಆಗ ಕಾಲ ಮಿಂಚಿ ಹೋಗಿರುತ್ತದೆ.
ಕುಂತಿ ಮತ್ತು ದ್ರೌಪದಿಯ ಪಾಲಿಗೆ ರಣ ಹೇಡಿ,ಅಸಹಾಯಕ ಮನೆಯ ಯಜಮಾನಂತೆ ಕಾಣುತ್ತಾನೆ.
ಕವಿ ವ್ಯಾಸ ಮನೆಯ ಯಜಮಾನ ಹೇಗೆ ಇರಬೇಕು ಎಂಬುದನ್ನು ಅಪರೋಕ್ಷವಾಗಿ ಭೀಷ್ಮನ ಪಾತ್ರದ ಮೂಲಕ ಎಚ್ಚರಿಸುತ್ತಾನೆ.
ಮನೆಯ ಯಜಮಾನರಿಗೆ ಭೀಷ್ಮನ ಶೌರ್ಯ ಹೊಂದಿದ್ದರೆ ಸಾಲದು, ಸಕಾಲಿಕ ಮತ್ತು ಸತ್ಯದ ಪರ ನಿಲ್ಲುವ ವಿವೇಚನೆಯೂ ಇರಬೇಕು.
ಇಚ್ಛಾಮರಣಿ ಭೀಷ್ಮ ತನ್ನ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳ ಬಯಸಿದಾಗ ಸಾವು ಕೈ ಮಾಡಿ ಕರೆದಂತಾಗುತ್ತದೆ.
ನಾವು ಯಾವುದನ್ನು ನಮ್ಮ ಬಹುದೊಡ್ಡ ಶಕ್ತಿ ಅಂದುಕೊಂಡಿರುತ್ತೇವೆಯೋ ಅದು ಕಾಲ ನಂತರ ಮಿತಿ ಆಗಬಹುದು.
ಆದ್ದರಿಂದ ವ್ಯಕ್ತಿ ತಾನು ಹೊಂದಿರುವ ದೌರ್ಬಲ್ಯಗಳಿಂದ ಹೊರ ಬಂದು, ಕಟ್ಟುಪಾಡುಗಳನ್ನು ಮುರಿದು ಧರ್ಮದ ಪರ ನಿಲ್ಲಬೇಕೆಂಬುದು ಮಹಾಕಾವ್ಯ ಮಹಾಭಾರತದ ಆಶಯ ಎಂಬುದನ್ನು ಭೀಷ್ಮನ ಪಾತ್ರ ನೆನಪಿಸಿಕೊಡುತ್ತದೆ.
ಚಿತ್ರ ಕೃಪೆ: allaboutwales
ಹೆಚ್ಚಿನ ಬರಹಗಳಿಗಾಗಿ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ
ಬೇಲಿಯೇ ಎದ್ದು…..