ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಜೈಲು ಗೋಡೆಯ ಒಂದು ಕಿಂಡಿಯ ಕೂಗು – ದ್ಯಾವ್ರೇ

ಶ್ರೀ ತಲಗೇರಿ
ಇತ್ತೀಚಿನ ಬರಹಗಳು: ಶ್ರೀ ತಲಗೇರಿ (ಎಲ್ಲವನ್ನು ಓದಿ)

ಕೆಲವೊಮ್ಮೆ ಕೆಲವು ಸಿನೆಮಾಗಳನ್ನು ತಾರ್ಕಿಕ ದೃಷ್ಟಿಯಿಂದ ನೋಡುವುದಕ್ಕೆ ಸಾಧ್ಯವಾಗುವುದಿಲ್ಲ. ಒಂದು ವೇಳೆ ಬಲವಂತವಾಗಿ ನೋಡಿದಲ್ಲಿ ಆ ಸಿನೆಮಾಗಳು ನೋಡುಗನ ಎದೆಗೆ ದಾಟಿಸಬೇಕಾದ ಸಂಗತಿಗಳನ್ನು ದಾಟಿಸುವುದೇ ಇಲ್ಲ. ಅದು ಸಿನೆಮಾದ ಸೋಲು ಅನ್ನುವುದಕ್ಕಿಂತ ದೃಷ್ಟಿಕೋನದ ವೈಫಲ್ಯ ಅಂದರೆ ಹೆಚ್ಚು ನ್ಯಾಯ ಕೊಟ್ಟಂತಾಗಬಹುದೇನೋ. ಒಂದು ಸಿನೆಮಾ ಅಂದ ಮೇಲೆ ಒಂದು ಕತೆಯಿರಬೇಕು, ಅದನ್ನು ಪೋಷಿಸಲಿಕ್ಕೆ ಪಾತ್ರವರ್ಗವಿರಬೇಕು ಹಾಗೂ ಅವುಗಳನ್ನು ಕಟ್ಟುವ ಕೆಲಸ ಸರಿಯಾಗಿ ಆಗಬೇಕು. ಹೌದು, ಆದರೆ ಕೆಲವೊಮ್ಮೆ ಈ ಪಾತ್ರಗಳನ್ನೂ ಮೀರಿ ಕತೆ ಬೆಳೆಯುತ್ತದಲ್ಲಾ, ಈ ಎಲ್ಲಾ ಪಾತ್ರಗಳ ಸಂಭಾಷಣೆಯ ಜೊತೆಜೊತೆಗೆ ಹೇಳದ ಒಂದು ಮೌನವಿರುತ್ತದಲ್ಲಾ, ಹೇಳುವುದರ ಆಚೆಗೆ ಉಳಿದ ಹೇಳಲಾಗದ್ದನ್ನು ಕೇಳಲಿ ಅನ್ನುವ ತುಡಿತವಿರುತ್ತದಲ್ಲಾ ಅವುಗಳನ್ನು ಗುರುತಿಸುವಲ್ಲಿ ವಿಫಲವಾದಲ್ಲಿ ಬಹುಶಃ ಕೆಲವು ಚಿತ್ರಗಳು ನಮ್ಮನ್ನು ತಲುಪುವುದೇ ಇಲ್ಲ. ಹೇಳಬಹುದಾದದ್ದನ್ನು ಹಲವು ಚಿತ್ರಗಳಲ್ಲಿ ಆರಾಮಾಗಿ ಹೇಳಿಬಿಡಬಹುದು. ಆದರೆ ಹೇಳಲಾಗದ್ದನ್ನು ಹೇಳುವುದಕ್ಕಂತಲೇ ಕೆಲವು ಚಿತ್ರಗಳ ಅಗತ್ಯವಿರುತ್ತದೆ. ಅದರ ರೂಪವೂ ಬೇರೆ, ಧ್ವನಿಯೂ ಬೇರೆ. ಅಂಥ ಚಿತ್ರಗಳ ಸಾಲಿಗೆ ಸೇರುವ ಚಿತ್ರ ಕನ್ನಡದ ‘ದ್ಯಾವ್ರೇ’.

ದ್ಯಾವ್ರೇ – ಹತಾಶ ಬದುಕಿನ ಒಂದು ಆರ್ತನಾದ, ಅಸಹಾಯಕ ಸ್ಥಿತಿಯ ಒಂದು ಕೂಗು, ಕೆಲವೊಮ್ಮೆ ಆತ್ಮೀಯತೆಯ ಹಾಗೂ ಕೃತಜ್ಞತೆಯ ಸ್ಮರಣೆ. ಬದುಕಿನ ಎಲ್ಲಾ ಆಗುಹೋಗುಗಳಿಗೂ ‘ದೇವ್ರೇ’ ಅನ್ನುವ ಕಟ್ಟಕಡೆಯ ಒಂದು ನಿಟ್ಟುಸಿರು ಇದ್ದೇ ಇರುತ್ತದೆ. ಪ್ರತಿಯೊಂದಕ್ಕೂ ಅದು ಕೊಡು ಇದು ಕೊಡು ಅನ್ನುವಾಗಲೆಲ್ಲಾ ಈ ‘ದೇವ್ರೇ’ ಪದ ಸಾಮಾನ್ಯವಾಗಿ ನಮ್ಮಲ್ಲಿ ಓಡಾಡಿಕೊಂಡಿರುವಂಥದ್ದು. ಆದರೆ ಇದು ಬರೀ ನಾವು ಹೇಳುವ ‘ದೇವ್ರೇ’ ಪದದ ಕತೆಯಲ್ಲ. ಪ್ರತಿಯೊಬ್ಬರ ‘ದೇವ್ರೇ’ ಅನ್ನುವ ಕೂಗಿಗೂ ಅದರದ್ದೇ ಆದ ಕತೆಯಿರುತ್ತದೆ. ಕೆಲವಷ್ಟು ದುರಾಸೆಯದ್ದಾದರೆ ಇನ್ನು ಕೆಲವಷ್ಟು ಜೊತೆಯಾಗಿರು ಅನ್ನುವ ಮನವಿ. ಕೆಲವು ನನ್ನನ್ನೇ ಕೇಂದ್ರವಾಗಿರಿಸಿಕೊಂಡರೆ ಇನ್ನು ಕೆಲವು ‘ನಮ್ಮನ್ನು’. ಕೆಲವು ನಮ್ಮನ್ನೇ ಕೇಂದ್ರವಾಗಿರಿಸಿಕೊಂಡರೆ ಇನ್ನು ಕೆಲವು ಇಡೀ ‘ಜಗತ್ತನ್ನು’.. ಹೀಗೆ ನಮ್ಮ ಬೇಡಿಕೆಗಳ ಸರಮಾಲೆಯ ಮೊದಲ ಪದ ಅಥವಾ ಕೊನೆಯ ಪದ ದೇವ್ರೇ ಅಂತ ಒಮ್ಮೊಮ್ಮೆ, ಸರಮಾಲೆ ಬೇಡ ಸಾನ್ನಿಧ್ಯ ಕೊಡು ಅನ್ನುವ ಶರಣಾಗತಿಯ ಮೊದಲ ಅಥವಾ ಕೊನೆಯ ಪದ ಕೂಡಾ ‘ದೇವ್ರೇ’ ಆಗಿರಬಹುದು. ಆದರೆ ಈ ಸಿನೆಮಾ ಹೇಳುವುದು ಬೇರೆ ಒಂದು ಪುಟ್ಟ ಲೋಕದ ಕುರಿತು. ಆದರೆ ಆ ಲೋಕದಲ್ಲಿ ಕಳೆಯುವವರಿಗೆ ಬಹುಶಃ ಅದು ಒಂದು ಸುದೀರ್ಘ ಭಾಗ. ಹೌದು, ಇದು ಒಂದೇ ಒಂದು ಕಿಂಡಿಯಿರುವ ಜೈಲಿನ ಗೋಡೆಗಳ, ಅಲ್ಲಿನ ಕೈದಿಗಳ ಕತೆ. ಹಲವರಿಗೆ ಆಯಸ್ಸಿನ ಬಹುಪಾಲು ಇಲ್ಲಿಯೇ ಕಳೆದುಹೋಗುತ್ತದೆ. ಇನ್ನು ಕೆಲವರಿಗೆ ಅಲ್ಲೂ ಐಷಾರಾಮಿ ಬದುಕೇ ಸಿಗುತ್ತದೆ; ಅದರ ಮಾತು ಬಿಡಿ! ಈ ಸಿನೆಮಾ ಒಂದಷ್ಟು ಕೈದಿಗಳ ಕತೆಯನ್ನು ಒಟ್ಟಿಗೆ ನೇಯ್ದು ತಯಾರು ಮಾಡಿದಂಥದ್ದು ಅನ್ನಬಹುದು.

ಈ ಸಿನೆಮಾ ಸ್ವಲ್ಪ ಹಿಂದಿನ ಕಾಲಘಟ್ಟವನ್ನು ಮನಸ್ಸಲ್ಲಿಟ್ಟುಕೊಂಡು ತಯಾರಾದಂಥದ್ದು. ಇಲ್ಲಿ ಕೈದಿಗಳ ನಿತ್ಯದ ಬದುಕು ಅಥವಾ ಅವರು ಅನುಭವಿಸುವ ಕಷ್ಟಗಳ ಕುರಿತಾಗಿ ಎಲ್ಲೂ ಚಿತ್ರಣವಿಲ್ಲ. ಹಾಗೇ ಅವರ ಮನಸ್ಸಿನ ತೊಳಲಾಟಗಳನ್ನು ಮೃದುವಾಗಿ ಸೆರೆಹಿಡಿಯುವ ಪ್ರಯತ್ನಗಳೂ ಇಲ್ಲ. ಈ ಸಿನೆಮಾ ಈ ಕೈದಿಗಳ ಬದುಕನ್ನು ತೋರಿಸುವುದಕ್ಕೆ ಹಿಡಿಯುವ ಸೂತ್ರ ಬೇರೆಯದು. ಜೊತೆಗೆ ಇದು ಹೇಳಹೊರಟಿರುವುದು ಬರೀ ಜೈಲಿನ ಕತೆಯಲ್ಲ, ಅದರಾಚೆಯದು ಕೂಡಾ. ಇಲ್ಲಿ ಎಲ್ಲಾ ಅಂಶವನ್ನೂ ವಿವರವಾಗಿ ಕಟ್ಟಿಕೊಟ್ಟಿಲ್ಲ, ಆದರೆ ಹೇಳಬೇಕಾದುದನ್ನು ವಿಶಿಷ್ಟವಾಗಿ ಹೇಳಿದ್ದಾರೆ. ಮೇಲ್ನೋಟಕ್ಕೆ ಅತ್ಯಂತ ಬೇಜವಾಬ್ದಾರಿಯ ಜೈಲರ್, ತರಲೆ ಮಾಡ್ಕೊಂಡು ಸುಖವಾಗಿಯೇ ಇರುವಂತೆ ಕಾಣುವ ಕೈದಿಗಳು, ಹಾಗೂ ‘ಹಿಂಗೆಲ್ಲಾ ಹಾಡು ಹೇಳಬಹುದಾ’ ಅಂತ ಅನ್ನಿಸೋ ಥರದ ಪದೇ ಪದೇ ಬರುವ ಹಾಡುಗಳು. ಹಾಗಾದರೆ ಒಂದು ಎಡವಟ್ಟು ಸಿನೆಮಾದ ಸಾಲಿಗೆ ಇದೂ ಸೇರಬೇಕಾಗಿತ್ತಲ್ಲವಾ, ಆದರೆ ಯಾಕೆ ಹಾಗೆ ಅನಿಸದೇ ಪ್ರತಿ ಸಲ‌ ನೋಡಿದಾಗಲೂ, ಆ ಹೆಸರನ್ನು ಕೇಳಿದಾಗಲೂ ಏನೋ ಒಂದು ತುಮುಲ ಹುಟ್ಟುತ್ತದಲ್ಲಾ ಅಂತ ಯೋಚಿಸಿದಾಗ ಚೂರು ಅರ್ಥವಾಗಿದ್ದೆಂದರೆ ಇದು, ಈ ಎಲ್ಲಾ ಋಣಾತ್ಮಕ ಅಥವಾ ವಾಣಿಜ್ಯಿಕ ಅಂಶಗಳನ್ನು ಮೀರಿ ಬೆಳೆವ ಪರಿ. ಒಂದು ಗಹನವಾದ ವಿಷಯವನ್ನು ಹೇಳುವಾಗ ಒಮ್ಮೊಮ್ಮೆ ತಿಳಿಹಾಸ್ಯವನ್ನೂ ಬಳಸಬಹುದು ಅನ್ನುವುದನ್ನು ಇಲ್ಲಿ ಬಳಸಿಕೊಂಡಿದ್ದಾರೆ.

ವ್ಯವಸ್ಥೆಯಿಂದ ಬೇಸತ್ತ ಜೈಲರ್ ಒಬ್ಬ ಏನೇನೋ ಮಾತಾಡ್ತಾನೆ. ಅಸಂಬದ್ಧ ಮಾತುಗಳು ಅಂತ ಚಿತ್ರ ನೋಡುವ ಹಲವರಿಗೆ ಅನಿಸುವುದು ಸಹಜವೇ. ಆದರೆ, ಅಲ್ಲಿನ ಸೂಕ್ಷ್ಮಗಳನ್ನು ಅವಲೋಕಿಸಿದರೆ ಆ ಮಾತುಗಳೆಲ್ಲವೂ ಚಿತ್ರದ ಕತೆಗೆ ಪೂರಕವೇ. ಪೋಲೀಸ್ ಅಂದಾಗ ನಮ್ಮಲ್ಲಿ ಈಗಲೂ ಅದೇನೋ ಒಂದು ಅಂತರವಂತೂ ಇದ್ದೇ ಇದೆ. ಆದರೆ ಆಗಾಗ, ಅಲ್ಲಲ್ಲಿ ಮನಕಲಕುವ ಭಿನ್ನ ಕತೆಗಳನ್ನೂ ಕೇಳುತ್ತೇವೆ. ಅದನ್ನೇ ಇಲ್ಲಿ, ಒಬ್ಬ ಜೈಲರ್ ದಿನನಿತ್ಯ ನಡೆಸಬಹುದಾದ ಮಾನವೀಯತೆ ಮತ್ತು ಅಪರಾಧ ಲೋಕದ ಸಂಘರ್ಷವನ್ನು ಅತ್ಯಂತ ಸರಳವಾಗಿ ಸೆರೆಹಿಡಿಯಲಾಗಿದೆ. ಮನುಷ್ಯನ ಮನೋಭೂಮಿಕೆ ವಿಲಕ್ಷಣವಾದದ್ದು. ಒಮ್ಮೊಮ್ಮೆ ಭಾವಪರವಶನಾದಾಗ, ಸ್ತಿಮಿತ ಕಳೆದುಕೊಂಡಾಗ, ಪರಿಸ್ಥಿತಿಯ ಪ್ರಭಾವಕ್ಕೆ ಒಳಗಾದಾಗ ಹಾಗೂ ಕೆಲವೊಮ್ಮೆ ಪರಿಸರದಲ್ಲಿನ‌ ಉಪಸ್ಥಿತಿಯೂ ಒಬ್ಬ ವ್ಯಕ್ತಿಯನ್ನು ಆರೋಪಿಯನ್ನಾಗಿ ಮಾಡಬಹುದು. ಸಾಕ್ಷ್ಯಾಧಾರಗಳ ಆಧಾರದ ಮೇಲೆ ಅಪರಾಧಿಯೂ ಆಗಿಬಿಡಬಹುದು. ಆದರೆ, ಇಲ್ಲಿ ಹೇಳಹೊರಟಿರುವುದು ಯಾರೂ ಪೂರ್ತಿ ಒಳ್ಳೆಯವರೂ ಆಗಿರುವುದಿಲ್ಲ; ಹಾಗೇ ಪೂರ್ತಿ ಕೆಟ್ಟವರೂ ಆಗಿರುವುದಿಲ್ಲ. ಎಲ್ಲೋ ಒಳಗೆ ಮನುಷ್ಯ ಇನ್ನೊಬ್ಬ ಮನುಷ್ಯನ ಕುರಿತಾಗಿ ಯೋಚಿಸುತ್ತಾನೆ, ಆದರೆ ಆ ಯೋಚನೆಯನ್ನು ಉದ್ದೀಪಿಸುವ ಕಾರಣವೊಂದು ಬೇಕು ಅನ್ನುವುದು ಸತ್ಯ ಕೂಡಾ. ಎಲ್ಲಾ ವ್ಯವಸ್ಥೆಯಲ್ಲೂ ಒಳ್ಳೆಯದು ಮತ್ತು ಕೆಟ್ಟದ್ದು ಜೊತೆಯಾಗಿಯೇ ಇರುತ್ತದೆ ಅನ್ನುವುದಕ್ಕೆ ಇಲ್ಲಿ ಜೈಲರ್ ಮತ್ತು ಆತನ ಸಹಪಾಠಿ‌ ಉದಾಹರಣೆಗಳಾಗುತ್ತಾರೆ.

ಯಾರು ಕತೆ ಹೇಳ್ತೇನೆ ಅಂತ ಬರ್ತಾರೋ ಅವರ ಹತ್ತಿರ ಕತೆ ಇರೋದಿಲ್ಲ, ಯಾರು ಬಾಯಿ ಮುಚ್ಕೊಂಡು ಕೂತಿರ್ತಾರೋ ಅವರ ಹತ್ತಿರವೇ ಕತೆ ಇರೋದು ಅನ್ನುವುದು ಮಾತು ಬೆಳ್ಳಿ ಮೌನ ಬಂಗಾರಕ್ಕೆ ಪುಷ್ಟಿ ಕೊಡುವ ಮಾತು. ಮೌನದಲ್ಲೇ ಅಲ್ವಾ ಸಾವಿರ ಕತೆಗಳಿರುವುದು? ಅದೆಷ್ಟೇ ಹೇಳಿದರೂ ಮತ್ತೂ ಚೂರು ಉಳಿದುಹೋಗುವುದೂ ಇದೇ ಮೌನದಲ್ಲೇ ಅಲ್ವಾ? ಇದರೊಟ್ಟಿಗೆ, ದೀರ್ಘಕಾಲ ಜೈಲಲ್ಲಿದ್ದು ಕೆಲವರು ಸ್ವಾತಂತ್ರ್ಯದ ಗಾಳಿಗಾಗಿ ಹಂಬಲಿಸಿದರೆ, ಇನ್ನು ಕೆಲವರು ಅಲ್ಲೇ ಹೊಸ ಬದುಕನ್ನು ಆರಂಭಿಸಿರುತ್ತಾರೆ. ವಿಚಿತ್ರ ಅನಿಸಬಹುದು, ಆದರೂ ಸಾಧ್ಯತೆಗಳೇ ಇಲ್ಲ ಅನ್ನುವ ಹಾಗೂ ಇಲ್ಲ‌. ಹಾಗೆ ದೀರ್ಘಕಾಲದಿಂದ ಜೈಲಲ್ಲಿದ್ದು ಆಯಸ್ಸಿನ ಬಹುಪಾಲು ಭಾಗ ಕಳೆದ ಕೈದಿಯೊಬ್ಬ ಬಿಡುಗಡೆಯಾದಾಗ, ಬದಲಾದ ಹೊರಗಿನ ಪ್ರಪಂಚದ ಅರಿವೇ ಇಲ್ಲದ ಆತ ಮೊದಲ ಬಾರಿ ಜೈಲಿನ ಹೊರಗೆ ಕಾಲಿಟ್ಟಾಗ ಉಸಿರುಗಟ್ಟಿಸುವ ವಾತಾವರಣದಲ್ಲಿರುವಂತೆ ಒದ್ದಾಡುವ ಚಿತ್ರಣ ಆಧುನಿಕತೆಯ ಭೀಕರತೆಯನ್ನು ತೆರೆದಿಡುತ್ತದೆ. ಹೊಸಗಾಳಿ ಹೊಸಬದುಕನ್ನು ಕಟ್ಟಿಕೊಡದೇ ಹೋದಾಗ ಜೈಲೇ ವಾಸಿ ಅನ್ನುವ ಒಂದು ಯೋಚನೆಯ ಎಳೆ ಬಂದರೆ, ಅದೆಂಥ ಸಂದಿಗ್ಧತೆ! ಇನ್ನು ಕೆಲವರು ಹೊರಗೆ ಬಂದರೂ ಅವರ ಹಳೆಯ ವೃತ್ತದಿಂದ ಹೊರಬರಲಾರದೇ ಒದ್ದಾಡುತ್ತಾರೆ. ಸಮಾಜ ಹೊಸದಾಗಿ ಸ್ವೀಕರಿಸಲು ತಯಾರಾಗದೇ ಹೋಗಬಹುದು. ಮತ್ತೆ ಮತ್ತೆ ಆ ವ್ಯವಸ್ಥೆಯೊಳಗೇ ವ್ಯವಸ್ಥಿತವಾಗಿ ಬೀಳಬಹುದು.

ಹುಟ್ಟು ಅನ್ನುವುದು ಕೇವಲ ಈ ಭೂಮಿಗೆ ಬಂದ ಕ್ಷಣ ಮಾತ್ರವಲ್ಲ. ವ್ಯಕ್ತಿತ್ವ ಬದಲಾದ ಕ್ಷಣವೂ ಮರುಹುಟ್ಟು ಅನ್ನುವುದನ್ನು ಚಿತ್ರ ಹೇಳುತ್ತದೆ. ಮುಂದುವರೆದು, ಬದುಕೋ ಆಸೆ ಹುಟ್ಟಿದವನೊಬ್ಬ ಕಣ್ಣೆದುರೇ ಸಾಯುವ ವೈರುಧ್ಯವನ್ನೂ ಕಟ್ಟಿಕೊಡುತ್ತದೆ. ಇವೆಲ್ಲವುಗಳಿಗೂ ಸಾಕ್ಷಿಯಾಗುವ ಜೈಲರಿನ ಮೂಲಕ ಇಡೀ ಕತೆ ಇದೆ. ಮನುಷ್ಯನ ಯೋಚನೆಗಳು, ಯೋಜನೆಗಳು ಒಂದಾಗಿದ್ದರೆ, ಅವುಗಳನ್ನೂ ಮೀರಿ ಘಟಿಸಬಹುದಾದ ಹಲವು ಸಂಗತಿಗಳ ಆಯಾಮವೂ ಈ ಚಿತ್ರದಲ್ಲಿದೆ. ಹಾಡುಗಳು ಕೇವಲ ರಂಜಿಸುವುದಕ್ಕೆ ಬಂದುಹೋಗದೇ ಕತೆಯ ಭಾಗವಾಗಿ, ಇನ್ನೂ ಕೆಲವು ಸಲ ಕತೆಯನ್ನೇ ಹೇಳುವ ಪಾತ್ರವಾಗಿ ಕಾಣಿಸಿಕೊಂಡಿವೆ. ಕನ್ನಡದ ಮಟ್ಟಿಗೆ ಈ ಹಾಡುಗಳ ಸಾಹಿತ್ಯವೂ ಹೊಸತು. ಒಂದಷ್ಟು ತತ್ವಜ್ಞಾನವನ್ನೂ ಒಳಗೊಂಡ ಸಾಲುಗಳಿವೆ ಬಹುತೇಕ‌ ಎಲ್ಲಾ ಹಾಡುಗಳಲ್ಲಿ.

ದಟ್ಟ ವಿವರಗಳಿಲ್ಲದೇ, ಒಂದರ್ಥದಲ್ಲಿ ಯಾವ ಸೂಕ್ಷ್ಮವನ್ನೂ ನೇರವಾಗಿ ತೋರಿಸದೇ, ಒರಟು ಒರಟಾಗಿ, ಚೂರು ಅಸಹಜವಾಗಿ, ಆದಷ್ಟು ಗಂಭೀರವಾಗದೇ, ತರಲೆ ತರಲೆಯಾಗಿ, ಅರ್ಥವಿಲ್ಲದ ಹಾಗೆ ಹೇಳಿದರೂ ಇವೆಲ್ಲವನ್ನೂ ಹೇಳಿದ ಚಿತ್ರ ಇದು! ಇದು ಇಲ್ಲಿ ಹೇಳಿದ ಕತೆಗಿಂತ ಹೇಳದೇ ಹೋದ ಕತೆಗಳ‌ ಕುರಿತಾಗಿಯೇ ಹೆಚ್ಚು ಹೇಳುತ್ತದೆ. ಒಂದು ವಿಕ್ಷಿಪ್ತ ಮೌನದೊಂದಿಗೆ ಜೈಲರ್ ನಮ್ಮೊಳಗಿನ ಮಾನವೀಯತೆಯ ಅಭಿವ್ಯಕ್ತಿಯಾಗಿಯೂ, ಇನ್ನೊಂದು ಅವಕಾಶವನ್ನು ಕೊಡುವ ‘ದ್ಯಾವ್ರೇ’ ಆಗಿಯೂ ಉಳಿದುಹೋಗುತ್ತಾರೆ. ಕೊನೆಗೂ ನಮ್ಮೆಲ್ಲರಲ್ಲೂ ಹುಟ್ಟಬಹುದಾದ ಒಂದೇ ಒಂದು ಉದ್ಗಾರ ‘ದ್ಯಾವ್ರೇ’.