- ಸಮಾಧಿ ಸಡಗರ - ಜನವರಿ 22, 2022
- ನಿಬ್ಬು ಮುರಿದು ಹಾರಿತು - ಸೆಪ್ಟೆಂಬರ್ 25, 2021
- ಮತ್ತೆ ಬಂತು ಆಷಾಢ - ಜುಲೈ 21, 2021
ಇನ್ನು ಚೆಂಡು ತಿರುಗುವುದಿಲ್ಲ
ರಭಸದಲಿ ಮಿಂಚಂತೆ
ಕಂಡೂ ಕಾಣದಂತೆ ಮುನ್ನುಗ್ಗುವುದಿಲ್ಲ
ಕಾಲೇ ಮಂತ್ರವಾದಂತೆ; ಕಾಲ ನಿಂತಂತೆ
ಜಗ ಮಂತ್ರಮುಗ್ಧವಾದಂತೆ
ಹುಂಕಾರ ಮುಗಿಲು ಮುಟ್ಟುವುದಿಲ್ಲ
ಜರ್ಸಿಯ ಬಿಚ್ಚೆಸೆದು
ಎದೆಗುದ್ದಿ ಎದೆಗುದಿಗೆ ತಂಪೆರೆದು
ಆಕಾಶಕೆ ಮೊಗಮಾಡಿದ
ಹೇಷಾರವ ಇನ್ನು ಕೇಳುವುದಿಲ್ಲ
ಕೇಳಿಸಿದ್ದೊಂದೆ ದೀರ್ಘವಾದ ಸಿಳ್ಳೆ ನಿಟ್ಟುಸಿರು, ಆಟ ಮುಗಿಯಿತು
ದೇವರ ಕೈಗೋಲು ದೇವರಿಗೆ ಸೇರಿತು.
ಅವ ಡಿಗೋ ಮರಡೋನ
ಬ್ಯೂನಸ್ ಐರಿಸಿನ ಮುರುಕು ಧೂಳು ಜೋಪಡಿಯಿಂದೆದ್ದ ಸುಂಟರಗಾಳಿ
ಕಣ್ಣಲ್ಲಿ ಕಾಲ್ಚೆಂಡನಿಟ್ಟು;ಗಿರಗಿರನೆ ತಿರುತಿರುಗಿ
ಮಿಂಚಿ ಮಿರಮಿರನೆ ಹಿಗ್ಗಿ ಹಿಗ್ಗುತ್ತ ಖಿನ್ನತೆಯಲಿ ಕುಗ್ಗಿ ಭಗ್ನವಾದ ಕನಸು
ಅವನಾಡಿಸಿದಂತವನ ಚೆಂಡು
ಅವನಾತ್ಮವೇ ಆಗಿ
ಮಾಂತ್ರಿಕ ಸ್ಪರ್ಶದಲಿ ಪುಳಕಿತವಾಗಿ
ಅರ್ಜಂಟೀನಾದ ಆತ್ಮಾಭಿಮಾನವಾಗಿ
ಗೋಲುಗಂಬದ ಗೆರೆ ಮೀರಿ ನುಗ್ಗಿತ್ತು ಗುಂಡಿನಂತೆ ಹಲವು ಗುಂಡಿಗೆಗಳನೊಡೆದು
ಬಂಗಾರಕಾಲ ಬಂಡಾಯಗಾರ
ರೋದಿಸಿದ ದ್ವೇಷಿಸಿದ ಸೆಟೆಗೊಂಡ
ತಂತ್ರ ಕುತಂತ್ರಗಳಲಿ ಬೆಸೆದ
ಅಹಂಕಾರದ ತುದಿಯಲಿ ತೇಲಾಡಿದ
ಉದ್ದೀಪನದ ಮದ್ದಲ್ಲಿ ಮಣ್ಣಾದ.
ಏನಾದರೇನಂತೆ ಮರಡೋನ
ಚೆಂಡು ಪ್ರೀತಿಸಿದ ಮನುಜ
ನಮಗಿತ್ತ ಮೋಡಿಯ ಸಂತಸ
ವರ್ಣರಂಜಿತ ಮಾಂತ್ರಿಕ
ಹತ್ತು ಅಂಕಿಯ ಅಂಗಿಯ ಧರಿಸಿ
ಮುಗಿಲಿಗೆ ಹತ್ತಿದವ ; ಹತ್ತಿರದವ
ಸ್ವೀಕರಿಸೋಣ ಅವನ ಅವನಂತೆ
ಆಕಾಶದಲಿ ಮುಂದೊಮ್ಮೆ ಪೀಲೆ
ಅವನೊಡನೆ ಆಡುವನಂತೆ ಚೆಂಡು
ಆಗ ನಾವೆಲ್ಲ
ಗ್ಯಾಲರಿಯಲಿ ಕುಂತು ಸಿಳ್ಳೆ ಹಾಕುವ.
ಹೆಚ್ಚಿನ ಬರಹಗಳಿಗಾಗಿ
ಗಣೇಶನ ಕೈಯಲ್ಲಿಯ ಲಾಡು
ಮಹಾಸಾಗರವಾದಳು
ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ..