- ಚಾಚಾ ನೆಹರು ಮತ್ತು ನಮ್ಮ ಮಕ್ಕಳು - ನವೆಂಬರ್ 14, 2023
- ಮಾನವತಾವಾದಿಯ ಹೆಜ್ಜೆಗಳು……. - ಏಪ್ರಿಲ್ 14, 2021
- ಯುಗಾದಿ – ಎರಡು ಹಾದಿ… - ಏಪ್ರಿಲ್ 13, 2021
ಜೋರು ಮಳೆ – ಅದಕ್ಷ ಆಡಳಿತ – ಅಪಕ್ವ ಮನಸ್ಥಿತಿ
ಪೋಲೀಸ್ ಅಧಿಕಾರಿಯೊಬ್ಬರನ್ನು ಕೃಷಿ ಮಂತ್ರಿ ಮಾಡಿ ತಮ್ಮ ಬೆನ್ನಿಗೆ ತಾವೇ ಹೊಡೆಸಿಕೊಳ್ಳುತ್ತಿರುವವರು ಯಾರು ?
ವಿವೇಕಾನಂದ ಎಚ್. ಕೆ. ಅವರು ಬರೆದ ಪ್ರಸ್ತುತ ಸಮಸ್ಯೆಗಳ ಬಗ್ಗೆ ಕಾಳಜಿಪೂರ್ವ ಲೇಖನ..
ಜೋರು ಮಳೆ ಬಂದಾಗ ಮಾತ್ರ ನಿಜವಾಗಿಯೂ ಎಲ್ಲೆಲ್ಲಿ ಹಳ್ಳ ಕೊಳ್ಳಗಳು ಇವೆ ಮತ್ತು ಸಣ್ಣ ಪುಟ್ಟ ಕಿಂಡಿಗಳು ಇವೆ ಮತ್ತು ಅದು ಯಾವ ರೀತಿ ಅನಾಹುತ ಉಂಟುಮಾಡುತ್ತವೆ ಎಂಬುದು ಬಯಲಾಗತೊಡಗುತ್ತದೆ. ಆಗ ಅದನ್ನು ತಡೆಯಲು ಕಷ್ಟವಾಗುತ್ತದೆ. ಅನಾಹುತ ಆದ ನಂತರ ಪಶ್ಚಾತ್ತಾಪ ಪಡಬೇಕಾಗುತ್ತದೆ.
ಇದಕ್ಕೆ ಸಂಪೂರ್ಣ ಹೋಲಿಕೆ ಸರ್ಕಾರದ ಈಗಿನ ಆಡಳಿತ ವ್ಯವಸ್ಥೆಗೆ ಕನ್ನಡಿ ಹಿಡಿದಂತೆ ಇದೆ. ಅತಿಯಾದ ಒತ್ತಡ ಹೆಚ್ಚಾದಂತೆ ವ್ಯವಸ್ಥೆ ಕುಸಿಯತೊಡಗಿದೆ. ಕಣ್ಣ ಮುಂದೆಯೇ ಜನ ಅಸಹಾಯಕರಾಗಿ ಪ್ರಾಣ ಬಿಡುತ್ತಿರುವ ಹೃದಯವಿದ್ರಾವಕ ದೃಶ್ಯಗಳನ್ನು ನೇರ ಪ್ರಸಾರದಲ್ಲಿ ನೋಡುವ ದೌರ್ಭಾಗ್ಯ ನಮ್ಮದು.
ಪ್ರಜಾಪ್ರಭುತ್ವ ವ್ಯವಸ್ಥೆಯ ಇನ್ನೊಂದು ಮುಖ ಈಗ ಸ್ಪಷ್ಟವಾಗಿ ಅನಾವರಣಗೊಳ್ಳುತ್ತಿದೆ. ಒಬ್ಬ ರಾಜಕೀಯ ನಾಯಕನ ವಿರುದ್ಧ ಬಲ ಪ್ರದರ್ಶನದ ಮೂಲಕ ಮತ್ತೊಂದು ರಾಜಕೀಯ ಪಕ್ಷ ಸೇರಿ, ಸವಾಲೆಸೆದು ಗಣಿ ಹಣದ ಬೆಂಬಲದಿಂದ ಚುನಾವಣೆ ಗೆದ್ದು ಇದೀಗ ಈ ಬೃಹತ್ ರಾಜ್ಯದ ಆರೋಗ್ಯ ಮಂತ್ರಿಯಾಗುವುದು ದೊಡ್ಡ ಸಾಧನೆ ನಿಜ, ಆದರೆ ಅವರಿಗೆ ಈ ರಾಜ್ಯದ ಜನರ ಆರೋಗ್ಯದ ಜವಾಬ್ದಾರಿ ನೀಡಿ ಮೂರ್ಖರಾಗಿದ್ದು ಯಾರು ? ಪಾಪ ಅಡುಗೆಯ ಬಗ್ಗೆ ಏನೂ ಅರಿಯದ ವ್ಯಕ್ತಿಗೆ ಬಿರಿಯಾನಿ ಮಾಡಲು ಹೇಳಿ ಅಪಹಾಸ್ಯಕ್ಕೆ ಒಳಗಾಗಿರುವುದು ಯಾರು ?
ಪೋಲೀಸ್ ಅಧಿಕಾರಿಯೊಬ್ಬರನ್ನು ಕೃಷಿ ಮಂತ್ರಿ ಮಾಡಿ ತಮ್ಮ ಬೆನ್ನಿಗೆ ತಾವೇ ಹೊಡೆಸಿಕೊಳ್ಳುತ್ತಿರುವವರು ಯಾರು ?
Of course, ಇದು ಕೇವಲ ಈಗಿನ ಸರ್ಕಾರದ ವಿರುದ್ದದ ಟೀಕೆ ಮಾತ್ರವಲ್ಲ. ಹಿಂದಿನ ಸರ್ಕಾರಗಳ ಸ್ಥಿತಿಯು ಇದಕ್ಕಿಂತ ಭಿನ್ನವಲ್ಲ.
ಸೀಟು, ಓಟು, ಕುರ್ಚಿ ಇಷ್ಟೇ ರಾಜಕೀಯ ಅರ್ಹತೆಯಾದರೆ, ಅದನ್ನು ಪಡೆಯಲು ಹಣ ಜಾತಿ ಭರವಸೆ ಇಷ್ಟೇ ಸಾಧನಗಳಾದರೆ ಪರಿಸ್ಥಿತಿ ಇದಕ್ಕಿಂತ ಇನ್ನೇನಾಗಿರಲು ಸಾಧ್ಯ.
ಸುಮಾರು 7 ಕೋಟಿ ಜನಸಂಖ್ಯೆಯ, 192000 ಚದರ ಕಿಲೋಮೀಟರ್ ವಿಸ್ತೀರ್ಣದ, ಅಪಾರ ಪ್ರಾಕೃತಿಕ ಸಂಪನ್ಮೂಲಗಳನ್ನು ಹೊಂದಿರುವ ಕರ್ನಾಟಕದ ಮಂಡಲ, ತಾಲ್ಲೂಕು, ಜಿಲ್ಲಾ ಪಂಚಾಯತ್ ಸದಸ್ಯರು, ಶಾಸಕರು, ಸಂಸದರು, ಮಂತ್ರಿಗಳು, ಅವರ ಅರ್ಹತೆ, ಯೋಗ್ಯತೆ, ಅನುಭವ, ಪ್ರಾಮಾಣಿಕತೆಯನ್ನು ಒಮ್ಮೆ ಅವಲೋಕಿಸಿ ನೋಡಿ. ಆಗ ನಿಮಗೆ ಈ ಅವ್ಯವಸ್ಥೆ ಯಾವ ಆಶ್ಚರ್ಯವನ್ನು ಉಂಟುಮಾಡುವುದಿಲ್ಲ. ಎಲ್ಲವೂ ಸಹಜ ಮತ್ತು ಸರಿಯಾಗಿಯೇ ಇದೆ ಎನಿಸುತ್ತದೆ. ಬೇವು ಬಿತ್ತಿ ಮಾವು ಬೆಳೆಯಲು ಸಾಧ್ಯವಿಲ್ಲ.
ಹಾಗೆಂದು ಈ ರಾಜ್ಯದಲ್ಲಿ ಅರ್ಹರೇ ಇಲ್ಲವೆಂದಲ್ಲ. ಖಂಡಿತ ಈ ಸಮಸ್ಯೆಗಳಿಗೆ ಇನ್ನೂ ಉತ್ತಮವಾಗಿ ಸ್ಪಂದಿಸುವ ಜನರಿದ್ದಾರೆ. ಆದರೆ ಈ ವ್ಯವಸ್ಥೆಯಲ್ಲಿ ಅವರಿಗೆ ಅಧಿಕಾರ ಸಿಗುವ ಸಾಧ್ಯತೆಯೇ ಇಲ್ಲ. ದುಷ್ಟ ಭ್ರಷ್ಟ ಮಾರ್ಗಗಳಿಂದ ಮಾತ್ರ ಅಧಿಕಾರ ಪಡೆಯಲು ಸಾಧ್ಯ ಎಂಬಂತೆ ಇದನ್ನು ನಿರ್ಮಿಸಲಾಗಿದೆ. ಈಗ ನೋವಿನಿಂದ ನರಳಾಡಿದರೆ ಪ್ರಯೋಜನವಿಲ್ಲ.
ಆದರೆ ಈಗಲೂ ಕಾಲ ಮಿಂಚಿಲ್ಲ. ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು, ದೂರವಾಣಿ ತಂತ್ರಜ್ಞಾನ ಎಲ್ಲವನ್ನೂ ಬಳಸಿಕೊಂಡು ಜನರ ಮನಃ ಪರಿವರ್ತನೆ ಮಾಡುವ ಎಲ್ಲಾ ಸಾಧ್ಯತೆಗಳು ಇವೆ. ಹಣ ಖರ್ಚು ಮಾಡಿ ದೊಡ್ಡ ಸಂಘಟನೆ ಮಾಡುವ ಅವಶ್ಯಕತೆ ಇಲ್ಲ. ಜನರಲ್ಲಿ ಯೋಚಿಸುವ ಶಕ್ತಿಯನ್ನು ಬೆಳೆಸಿದರೆ ಸಹಜವಾಗಿ ಒಳ್ಳೆಯದು ಮತ್ತು ಕೆಟ್ಟದ್ದರ ಅಂತರ ಅವರಿಗೆ ಅರಿವಾದರೆ ತನ್ನಿಂದ ತಾನೇ ಬದಲಾವಣೆಯ ಪರ್ವ ಪ್ರಾರಂಭವಾಗುತ್ತದೆ. ಆಗ ನೀವು ಎಷ್ಟೇ ಸುಳ್ಳುಗಳನ್ನು – ಭ್ರಮೆಗಳನ್ನು ಹುಟ್ಟು ಹಾಕಿದರು, ಎಂತಹ ಸಂಘಟನೆಯನ್ನು ಕಟ್ಟಿ ಪ್ರತಿ ಮನೆಗಳನ್ನು ಪ್ರವೇಶಿಸಿ ಪ್ರಚಾರ ಮಾಡಿದರು ಜನರು ಮರುಳಾಗುವುದಿಲ್ಲ.
ಅವ್ಯವಸ್ಥೆಯ ವಿರುದ್ಧ ಒಂದು ಸಾಮೂಹಿಕ ಪ್ರಜ್ಞೆ ಜಾಗೃತವಾದರೆ ಅದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಆದರೆ ಕೆಲವು ಕೊರತೆಗಳು ಸಹ ಇಲ್ಲಿ ಅಡಕವಾಗಿವೆ.
ಬಡತನದ ಕಾರಣದಿಂದಾಗಿ ಎಲ್ಲಾ ಸಿದ್ದಾಂತಗಳಿಗಿಂತ ಹೊಟ್ಟೆ ಬಟ್ಟೆಯೇ ಎಷ್ಟೋ ಜನಕ್ಕೆ ಮುಖ್ಯವಾಗುತ್ತದೆ. ಅಜ್ಞಾನದ ಪರಿಣಾಮವಾಗಿ ಮೌಢ್ಯಗಳು ಅವರನ್ನು ಆವರಿಸಿ ವೈಚಾರಿಕ ಚಿಂತನೆ ಅವರ ಮನಸ್ಸುಗಳನ್ನು ಪ್ರವೇಶಿಸಲು ಕಷ್ಟವಾಗುತ್ತಿದೆ. ನಮ್ಮ ನಾಯಕರುಗಳ ಹಣ ಅಧಿಕಾರ ಪ್ರಚಾರದ ದುರಾಸೆ ಹಾಗೂ ದಕ್ಷತೆ ಮತ್ತು ಪ್ರಾಮಾಣಿಕತೆಯ ಕೊರತೆ ಜನರಲ್ಲಿ ಎಲ್ಲರೂ ಕಳ್ಳರೇ ಎಂಬ ಸಿನಿಕತನ ಆವರಿಸಿದೆ.
ಇದನ್ನು ಅರಿತ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು ಜನರ ಭಾವನೆಗಳ ಜೊತೆ ಆಟವಾಡುತ್ತಿವೆ.
ಅದರ ಪರಿಣಾಮವೇ ಇಂದಿನ ಅರಾಜಕತೆ. ಕೋವಿಡ್ 19 ತರಹದ ಅನೇಕ ಪ್ರಾಕೃತಿಕ ಮತ್ತು ಯುದ್ಧದ ರೀತಿಯ ವಿಕೋಪಗಳನ್ನು ಈ ದೇಶ ಸಾಕಷ್ಟು ಸಾರಿ ಅನುಭವಿಸಿದೆ. ಅದರಿಂದ ಚೇತರಿಸಿಕೊಂಡಿದೆ. ಆದರೆ ಈ ಬಾರಿ ಅದನ್ನು ಸಮರ್ಪಕವಾಗಿ ನಿರ್ವಹಿಸಲು ಎಲ್ಲಾ ಸಾಧ್ಯತೆಗಳು ಇದ್ದರೂ ಕೇವಲ ನಮ್ಮ ಜನ ಪ್ರತಿನಿಧಿಗಳ ಅದಕ್ಷತೆ ಮತ್ತು ಅಪ್ರಮಾಣಿಕತೆಯಿಂದ ಕಷ್ಟಗಳು ಬೃಹತ್ ಆಗಿ ಬೆಳೆಯುತ್ತಿವೆ. ಬಹುಶಃ ಈ ವರ್ಷದ ಅಂತ್ಯದ ವೇಳೆಗೆ ಇದು ಇನ್ನೂ ಗಂಭೀರ ಸ್ವರೂಪ ಪಡೆಯಬಹುದು.
ಆದ್ದರಿಂದ ಒಂದು ಒಳ್ಳೆಯ ಚಿಂತನೆಯ ಕಡೆ ಜನರ ಮನಸ್ಸುಗಳನ್ನು ಸೆಳೆಯಲು ಇದು ಸುಸಮಯ. ಆದರೆ ಅದನ್ನು ಮಾಡಲು ನಾವು ಶುದ್ದ ಮತ್ತು ಪ್ರಾಮಾಣಿಕ ವ್ಯಕ್ತಿತ್ವ ರೂಪಿಸಿಕೊಳ್ಳುವುದು ಬಹುಮುಖ್ಯ. ನಾವೇ ಅಪ್ರಮಾಣಿಕರಾಗಿ, ಮನಸ್ಸಿನಲ್ಲಿ ಸ್ವಾರ್ಥ ತುಂಬಿಕೊಂಡು ಸಂಕುಚಿತ ದೃಷ್ಟಿಕೋನದಿಂದ ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದರೆ ಎಂದಿನಂತೆ ವಿಫಲವಾಗುವ ಸಾಧ್ಯತೆಗಳೇ ಹೆಚ್ಚು.
ನಿರಾಶರಾಗುವುದು ಬೇಡ. ಭಯಭೀತರಾಗುವುದು ಬೇಡ. ನಮ್ಮ ಕಣ್ಣ ಮುಂದೆಯೇ ವ್ಯವಸ್ಥೆ ಕುಸಿಯುತ್ತಿರುವಾಗ ಜನಾಭಿಪ್ರಾಯವನ್ನು ಒಳ್ಳೆಯ ದಿಕ್ಕಿನತ್ತ, ಪರ್ಯಾಯ ಮಾರ್ಗಗಳತ್ತ ಯೋಚಿಸುವಂತೆ ಪ್ರೇರೇಪಿಸುವ, ಅದರಲ್ಲಿ ಯೋಧರಾಗುವ ಜವಾಬ್ದಾರಿ ನಾವು ನಿರ್ವಹಿಸಬೇಕಿದೆ. ಒಮ್ಮೆ ಈ ಪ್ರಕ್ರಿಯೆ ಪ್ರಾರಂಭಿವಾದರೆ ಇಂದಿನ ಸಮೂಹ ಸಂಪರ್ಕ ಕ್ರಾಂತಿಯ ಸಂದರ್ಭದಲ್ಲಿ ಅದು ಬಹುದೊಡ್ಡ ಜಾಗೃತಿಯ ಆಂದೋಲನವಾಗಿ ಪರಿವರ್ತನೆ ಆಗುತ್ತದೆ. ನಮ್ಮೆಲ್ಲರ ಕನಸಿನ ಭವಿಷ್ಯದ ಮಕ್ಕಳ ಸಾಮಾಜಿಕ ಬದಲಾವಣೆ ಇದರಿಂದ ಖಂಡಿತ ಸಾಧ್ಯವಿದೆ.
ಬಡತನ ಮತ್ತು ಅನಾರೋಗ್ಯ ನಮ್ಮ ಮನೆಗಳನ್ನು ಪ್ರವೇಶಿಸುವ ಮುನ್ನ
ನಾವು ನಿಂತ ನೆಲೆಯಿಂದಲೇ ಇದನ್ನು ಮಾಡಲು ಪ್ರಯತ್ನಿಸೋಣ. ನಮ್ಮದೇ ಕುಟುಂಬದ ಜನ ಬೀದಿ ಹೆಣವಾಗುವ ಮುನ್ನ ಎಚ್ಚೆತ್ತುಕೊಳ್ಳೋಣ.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ