- ಡಾ ಸ ಜ ನಾ ಹೇಳಿದ ಸುಳ್ಳು - ಡಿಸಂಬರ್ 31, 2020
ಓರ್ವ ಹಳ್ಳಿಯಿಂದ ಬಂದ ವಿದ್ಯಾರ್ಥಿ ಡಾ- ಸ ಜ ನಾಗಲೋಟಿಮಠ ಅವರ ಬಳಿ ಹೋಗಿ ತಾನು ಒಂದು ಡಿಗ್ರಿ ಮಾಡಲಿಕ್ಕೆ ಬೆಳಗಾವಿಗೆ ಬಂದಿದ್ದೇನೆ , ಆದರೆ ನನಗೆ ಆ ಕಾಲೇಜಿನಲ್ಲಿ ಪ್ರವೇಶಕ್ಕೆ ಹೋದರೆ ನನ್ನನ್ನು ತಾತ್ಸಾರ ಮಾಡಿ ಹೊರಗೆ ಕಳಿಸುತ್ತಿದ್ದಾರೆ , ಆದ್ದರಿಂದ ತಾವೇನಾದರೂ ಸಹಾಯ ಮಾಡಬಹುದೋ ಎಂದು ಬಂದಿದ್ದೇನೆ ಎಂದನಂತೆ.
ಆತನೋ ಬಹಳ ಬುದ್ದಿವಂತ ಇರಲಿಲ್ಲ ಆದರೆ ಕಲಿಯಬೇಕೆಂಬ ಹಠ ಮಾತ್ರ ಬಲವಾಗಿತ್ತು.
ಅದಕ್ಕೆ ಅವರು ಒಂದು ಶಿಫಾರಸು ಪಾತ್ರ ಬರೆದು ಅದನ್ನು ಲಕೋಟೆಯಲ್ಲಿ ಹಾಕಿ ಭದ್ರವಾಗಿ ಅಂಟು ಹಾಕಿ ಮುಚ್ಚಿ ಆತನಿಗೆ ಅದನ್ನು ಕಾಲೇಜಿನ ಪ್ರಾಂಶುಪಾಲರಿಗೆ ಹಸ್ತಾಂತರ ಮಾಡಲಿಕ್ಕೆ ಹೇಳಿದರಂತೆ.
ಸುಮಾರು ೩ ವರ್ಷದ ನಂತರ ಆ ವಿದ್ಯಾರ್ಥಿ ಖುಷಿಯಿಂದ ಫೆಡೆ ತಂದುಕೊಟ್ಟು ಕಾಲಿಗೆ ನಮಸ್ಕರಿಸಿ ಹೇಳಿದನಂತೆ ” ಸರ, ನಿಮ್ಮ ಪತ್ರ ನನ್ನ ಜೀವನದ ದಿಕ್ಕನ್ನೇ ಬದಲಾಯಿಸಿತು” ಡಾ ಸ ಜ ನಾ ಅವರಿಗೆ ಆ ಘಟನೆಯ ಬಗ್ಗೆ ನೆನಪೇ ಇರಲಿಲ್ಲ. ಏಕೆಂದರೆ ಅನೇಕರು ಅವರ ಭೆಟ್ಟಿಗೆ ಬರುತ್ತಿದ್ದರು. ಅವರು ಆ ಪಾತ್ರದಲ್ಲಿ ಪ್ರಾಂಶುಪಾಲರಿಗೆ ” ಈ ವಿದ್ಯಾರ್ಥಿ ಬಹಳ ಜಾಣ , ಮೊದಲ ರಾಂಕ್ ಪಡೆಯುವ ಹುಡುಗ ಹಾಗು ತಮ್ಮ ಕಾಲೇಜಿಗೆ ಕೀರ್ತಿ ತರುವ ಯೋಗ್ಯತೆ ಹೊಂದಿದ್ದಾನೆ ” ಎಂದು ಸುಳ್ಳು ಬರೆದಿದ್ದರು.
ಆ ಪತ್ರವನ್ನು ಒಡೆದು ಆ ವಿದ್ಯಾರ್ಥಿಯ ಮುಂದೆಯೇ ಓದಿದ ಪ್ರಾಂಶುಪಾಲರು ಖುಷಿಯಿಂದ ಆತನಿಗೆ ಧಾಖಲಾತಿ ನೀಡಿ ಆತನಿಗೆ ಅನೇಕ ರೀತಿಯ ಸಹಾಯ ಮಾಡಿದರು. ಈ ವಿದ್ಯಾರ್ಥಿಗೊ ತಳಮಳ ಪ್ರಾರಂಭವಾಗಿತ್ತು. ಆತನೋ ಓದಿನಲ್ಲಿ ಅಷ್ಟೊಂದು ಜಾಣನಿರಲಿಲ್ಲ. ಆದರೆ ಆ ಶಿಫಾರಸು ಪತ್ರದಲ್ಲಿ ತನ್ನ ಬಗ್ಗೆ ಸುಳ್ಳೇ ಜಾಣ , ರಾಂಕ್ ಪಡೆಯುವ ಎಂದು ಹೇಳಿದ್ದರು. ಅದಕ್ಕಾತ ಶ್ರದ್ದೆಯಿಂದ ದಿನಾಲು ಕಷ್ಟ ಪಟ್ಟು ಓದತೊಡಗಿದ. ಹಗಲು ರಾತ್ರಿ ಎನ್ನದೆ ಓದಿದ, ಗುರುಗಳಲ್ಲಿ ಹೆಚ್ಚಿನ ಮಾಹಿತಿ ಕಲೆ ಹಾಕಿದ, ಗ್ರಂಥಾಲಯಕ್ಕೆ ಹೋಗಿ ಎಲ್ಲ ಬೇಕಾದ ಪುಸ್ತಕ ಪಡೆದು ಬಿಟ್ಟು ಬಿಡದೆ ಓದಿದ.
ಆ ಡಿಗ್ರಿಯ ಕೊನೆಯ ಪರೀಕ್ಷೆ ಬರೆದು ತಿಂಗಳ ನಂತರ ಫಲಿತಾಂಶ ಬಂದಾಗ ಆತನಿಗೆ ಆಶ್ಚರ್ಯ ಕಾಡಿತ್ತು. ಆತ ಕಾಲೇಜಿಗೆ ಮೊದಲನೆಯ ರಾಂಕ್ ಅಷ್ಟೇ ಅಲ್ಲ , ರಾಜ್ಯಕ್ಕೆ ಎರಡನೆಯ ರಾಂಕ್ ಬಂದಿದ್ದ.
ಕಾಲೇಜಿನ ಪ್ರಾಂಶುಪಾಲರು ಆತನಿಗೆ ” ನೀನು ನಮ್ಮ ಕಾಲೀಜಿಗೆ ಕೀರ್ತಿ ತಂದೆ , ಡಾ ನಾಗಲೋಟಿಮಠ ಅವರು ತಮ್ಮ ಪತ್ರದಲ್ಲಿ ಬರೆದದ್ದು ಎಷ್ಟು ನಿಜ ” ಎಂದರಂತೆ.
ಅದನ್ನೆಲ್ಲಾ ಆತ ಡಾ ಸ ಜ ನಾ ಅವರಿಗೆ ಹೇಳಿ ಖುಷಿಯಿಂದ ಮತ್ತೆ ಕಾಲಿಗೆ ನಮಸ್ಕರಿಸಿ ಹೊರಟ .
ಒಂದು ವರ್ತಮಾನ ಪತ್ರಿಕೆಯಲ್ಲಿ ಡಾ ಸ ಜ ನಾ ಅವರ ಸಂದರ್ಶನ ಪ್ರಕಟವಾಗಿತ್ತು. ಅದರಲ್ಲಿ ಒಂದು ಪ್ರಶ್ನೆ ” ನೀವು ಎಂದಾದರೂ ಸುಳ್ಳು ಹೇಳಿದ್ದಿರೋ ಅಥವಾ ಹೇಳುವಿರೋ ?” ಎಂದಾಗಿತ್ತು. ಅದಕ್ಕೆ ಅವರು ” ನನ್ನ ಸುಳ್ಳಿನಿಂದ ಯಾರಿಗಾದರೂ ಸಹಾಯವಾಗುತ್ತಿದ್ದರೆ ನಾನು ಸುಳ್ಳು ಹೇಳುವೆ ” ಎಂದು ಉತ್ತರ ನೀಡಿದ್ದರು.
ಇಂತಹ ಸುಳ್ಳನ್ನು ಸತ್ಯವಾಗಿ ಪರಿವರ್ತನೆ ಮಾಡಿದ ಅಂತಹ ವಿದ್ಯಾರ್ಥಿ ಸಿಗುವುದು ಸಹ ದುರ್ಲಭವೆ.
ಡಾ. ಉಮೇಶ ನಾಗಲೋಟಿಮಠ
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ