ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ತಪಸ್ಸು

ರಾಧಿಕಾ. ವಿ. ಗುಜ್ಜರ್
ಇತ್ತೀಚಿನ ಬರಹಗಳು: ರಾಧಿಕಾ. ವಿ. ಗುಜ್ಜರ್ (ಎಲ್ಲವನ್ನು ಓದಿ)

(ಕಾಲ 1942-43 ಹಾಗೂ ಸ್ಥಳ : ಹರಿಹರ. ಹರಿಹರದ ಅಂದಿನ ಸಾಮಾಜಿಕ ಬದುಕಿನ ಚಿತ್ರಣವನ್ನು ಮನಸ್ಸಿನಲ್ಲಿಟ್ಟುಕೊಂಡು ಬರೆದ ಕಾಲ್ಪನಿಕ ಕಥೆ.)


ತನ್ನ ತಾತನ ವಠಾರದಲ್ಲಿ ಬಾಡಿಗೆಗೆ ಇದ್ದ ರಘುರಾಮರ ಕೋಣೆಯ ತೊಟ್ಟಿಗೆ, ವರ್ತನೆ ಹಿಡಿದು, ನೀರು ತುಂಬುವ ಕೆಲಸ ಮಾಡುತ್ತಿದ್ದ 7 ವರ್ಷದ ಬಾಲಕ ಶ್ಯಾಮನನ್ನು, ಬೆಳಿಗ್ಗೆಯಷ್ಟೇ ರಘುರಾಮರು ಮಾತನಾಡಿಸಿದ್ದರು. ಸಂಜೆಗೆ ಅವನ ತಾಯಿಯನ್ನು ಕರೆದು ಕೊಂಡು ಬರಲು ತಿಳಿಸಿದ್ದರು. ರಘುರಾಮ ಅವರು ಈಚೆಗೆ ಅಂದರೆ, ಹೋದ ವರ್ಷ 1941 ರ ಚೈತ್ರದಲ್ಲಿ ಆರಂಭವಾದ ಕಿರ್ಲೋಸ್ಕರ್ ಕಂಪನಿಯಲ್ಲಿ ಗುಮಾಸ್ತರಾಗಿ ಕೆಲಸಕ್ಕೆ ಸೇರಿದ್ದರು. ಸಾಂಗ್ಲಿಯಿಂದ ಬಂದವರಾದ್ದರಿಂದ ಶುದ್ಧ ಕನ್ನಡ ಮಾತನಾಡಲು ಬರುತ್ತಿರಲಿಲ್ಲ. ಹೇಳಬೇಕೆಂದರೆ, ಕಂಪನಿಯಲ್ಲಿನ ಅರ್ಧಕ್ಕೂ ಹೆಚ್ಚು ಜನ, ಬೆಳಗಾವಿ, ಸಾಂಗ್ಲಿ, ಕಿರ್ಲೋಸ್ಕರ್ ವಾಡಿ, ಮೀರಜ್ ನ ಕಡೆಯವರಾಗಿದ್ದ ಕಾರಣ, ಕನ್ನಡ ಬರದ ಅಥವಾ ಶುದ್ಧ ಕನ್ನಡ ಬರದ ಜನರೇ ಹೆಚ್ಚಾಗಿದ್ದರು. 
   ಶ್ಯಾಮನ ತಾತ ಪಿಲ್ಲೋಜಿ ರಾಯರು ವಕೀಲರು. ಊರಲ್ಲಿ ಒಳ್ಳೆಯ ಹೆಸರಿದ್ದ ಹಿರಿಯರು. ಜೋಳ, ಹತ್ತಿ ಹಾಗೂ ಋತುಗಳಿಗನುಗುಣವಾಗಿ ಕಾಳುಗಳು, ಎಳ್ಳು, ಶೇಂಗಾ ಮತ್ತಿತರ ಬೆಳೆಗಳ ಬೆಳೆವ, 60 ಎಕರೆಗೂ ಮಿಕ್ಕಿ ಹೊಲವಿತ್ತು. ಪಿಲ್ಲೋಜಿ ರಾಯರು ಹಾಗೂ ಅವರ ತಮ್ಮ, ಊರಲ್ಲಿ ಸಾಕಷ್ಟು ಮನೆಗಳು, ಉಗ್ರಾಣ ಹಾಗೂ 2 ವಠಾರಗಳನ್ನು ಬಾಡಿಗೆಗೆ ಬಿಟ್ಟಿದ್ದರು. ಅವರ ವಠಾರದ 4 ಕೊಠಡಿಗಳನ್ನು, ಹೊಸ ಕಂಪನಿ ಆರಂಭವಾದ ಕೂಡಲೇ ಗುಮಾಸ್ತರ ಕೆಲಸಕ್ಕೆ ಆಯ್ಕೆಯಾಗಿ ಬಂದ ಯುವಕರಾದ ರಘುರಾಮ, ಬಾಳು ಶಿರೋಳಿಕರ್, ಪಾಂಡುರಂಗ ಹಾಗೂ ಬಬಲೇಶ್ವರ ಅವರು ಬಾಡಿಗೆಗೆ ಹಿಡಿದಿದ್ದರು. ಪರಸ್ಥಳದಲ್ಲಿ ವಕೀಲರ ಮನೆಯೆಂಬ ರಕ್ಷೆ ಮತ್ತು ಮೇಲಾಗಿ ಪಿಲ್ಲೋಜಿ ರಾಯರು ಮರಾಠಿ ಬಲ್ಲವರಾಗಿದ್ದರು.
    ಬಾಲಕ ಶ್ಯಾಮನ ತಂದೆ ಅದ್ಯಾವುದೋ ಆವೇಶದಲ್ಲಿ, ತಾನು ಏನನ್ನಾದರೂ ಸಾಧಿಸಬೇಕು ಎಂಬ ಹಿರಿಯ ಆಶಯ ಹೊತ್ತು, ಅಧ್ಯಾತ್ಮದ ಗುಂಗು ಹಚ್ಚಿಕೊಂಡು ಹಿಮಾಲಯಕ್ಕೆ ಹೊರಟುಹೋಗಿದ್ದರು. ಈಗ್ಗೆ 3 ವರ್ಷದ ಹಿಂದೆ ಹೆಂಡತಿ ಸಾವಿತ್ರಿಯನ್ನು ಹಾಗೂ 3 ಚಿಕ್ಕ ಮಕ್ಕಳನ್ನು ನಡು ನೀರಲ್ಲಿ ಕೈಬಿಟ್ಟಿದ್ದರು. ಸಾವಿತ್ರಿ ವಕೀಲ ತಂದೆಯ ಮಗಳಾದರೂ, ಅವರ ಮನೆಯ ಕಾಂಪೌಂಡ್ ನಲ್ಲೇ ಇದ್ದ, ಹಿಂದಿನ ಒಂದು ಪುಟ್ಟ ಕೊಠಡಿಯಂತಹ ಮನೆಯಲ್ಲಿ ವಾಸವಿದ್ದು, ತನ್ನ ಮತ್ತು ಮಕ್ಕಳ ಪೋಷಣೆ ಮಾಡುತ್ತಿದ್ದಳು. ಶಾವಿಗೆ ಮಾಡುವುದರಲ್ಲಿ ಎತ್ತಿದ ಕೈ ಆಕೆಯದು. ಅದೇ ಆಕೆಯ ಜೀವನದ ಅನ್ನದೆಳೆಯಾಗಿತ್ತು.
   ಆದರೆ ಇದ್ದಕ್ಕಿದ್ದಂತೆ 2 ತಿಂಗಳ ಹಿಂದೆ, ಒಂದು ಅತ್ಯಂತ ದೊಡ್ಡ ಆಘಾತ ಈ ಮನೆಗೆ ಬಂದೆರಗಿತ್ತು. ದೇವರ ಕೋಣೆಯಲ್ಲಿ ಪೂಜೆಗೆ ಕುಳಿತ ಪಿಲ್ಲೋಜಿ ರಾಯರು, ಕೈಯಲ್ಲಿ ಶಿವ ಸಾಲಿಗ್ರಾಮ ಹಿಡಿದು ನೀರು ತೊಟ್ಟಿಕ್ಕುತ್ತಿದ್ದಂತೆಯೇ ಹಿಂದಿನ ಗೋಡೆಗೆ ಒರಗಿ ಶಿವೈಕ್ಯರಾಗಿದ್ದರು. ಶರಣನ ಸಾವು. ದೇವರ ಮುಡಿಯಿಂದ ಹೂವು ಕಳಚಿದಂತೆ, ಪ್ರಶಾಂತವಾಗಿ ದೇಹ ತೊರೆದಿದ್ದರು.
    ತಂದೆಯ ದೇಹಾಂತ್ಯದ ನಂತರ ಚಿಕ್ಕಪ್ಪನಿಂದ ಹೊಲದ ಇಳುವರಿಯ ಒಂದು ಕಾಳನ್ನೂ ಸಾವಿತ್ರಿ ಬಯಸಲಿಲ್ಲ. ಅವರೂ ಸಹಾ, ಅಣ್ಣನ ಮಗಳು, ಸಂಸಾರದ ನೊಗ ಹೊತ್ತ ಒಂಟಿ ಹೆಣ್ಣೆಂದು, ಎಂದೂ “ಒಂದು ಸೇರು ತಗೋ ಮಗಳೆ” ಎಂದು ಬಾಯಿ ಬಿಡಲಿಲ್ಲ. ಕೈ ಎತ್ತಿ ಕೊಡುವುದಿನ್ನೆಲ್ಲಿಯ ಮಾತು. ತಂದೆಯ ವಾತ್ಸಲ್ಯದ ಭದ್ರ ಗೂಟಕ್ಕಿದ್ದ ಆಕೆಯ ಬದುಕ ಜೋಳಿಗೆ ಅಭದ್ರವಾಗಿತ್ತು.
   ಸಾವಿತ್ರಿ ಹಾಗೂ ಬಾಲಕ ಶ್ಯಾಮ ಅಲ್ಲಿ ಇಲ್ಲಿ ಕೆಲಸ ಕೇಳುತ್ತಲೇ ಇದ್ದರು. ಶ್ಯಾಮನ ನಂತರದ ಉಳಿದ ಇಬ್ಬರೂ ಮಕ್ಕಳು ಸಣ್ಣವರಿದ್ದರು. ಇವರ ಸ್ವಾಭಿಮಾನ ಅರಿತಿದ್ದ ರಘುರಾಮ ಅವರು ಶ್ಯಾಮನನ್ನು ತಮ್ಮ ಹಾಗೂ ತಮ್ಮ ಸಹೋದ್ಯೋಗಿಗಳ ಕೊಠಡಿಯ ತೊಟ್ಟಿಗೆ ನಲ್ಲಿಯಿಂದ ನೀರು ತುಂಬುವ ಕೆಲಸಕ್ಕೆ ಹಚ್ಚಿದ್ದರು. ನೀರು ಬೆಳಿಗ್ಗೆ 9ಕ್ಕೆ ಬರುತ್ತಿತ್ತು. 7 ಗಂಟೆಗೆಲ್ಲ ಕಂಪನಿಯ ಮೊದಲ ಸೈರನ್ ಆಗುತ್ತಿದ್ದ ಕಾರಣ, ಇವರೆಲ್ಲ 6.50 ರೊಳಗೆ ಮನೆ ಬಿಟ್ಟು ಕೆಲಸಕ್ಕೆ ಹಾಜರಾತಿ ಸಹಿ ಮಾಡಬೇಕಿತ್ತು. ಶ್ಯಾಮನ ನೀರು ತುಂಬುವ ಕೆಲಸ, ಈ ನಾಲ್ಕೂ ಜನರಿಗೆ ದೊಡ್ಡ ನಿರಾಳತೆ ನೀಡಿತ್ತು. ಇಲ್ಲವಾದರೆ ನೀರಿನ ಎಲ್ಲ ಅವಶ್ಯಕತೆಗಳಿಗೂ ಈ ನಾಲ್ಕು ಸಹೋದ್ಯೋಗಿಗಳು ಮತ್ತೆ ಹೊಳೆಯ ದಾರಿ ಹಿಡಿಯಬೇಕಿತ್ತು.
   ರಘುರಾಮ ಅವರ ಮೇಲಧಿಕಾರಿಯಾದ ಜೋಷಿಯವರು ಧಾರವಾಡದ ಹತ್ತಿರದ ವೀರಾಪುರದವರಾಗಿದ್ದರು. ಮನೆಯಲ್ಲಿ ಪತ್ನಿ ಹಾಗೂ ಮೂರು ಮಕ್ಕಳ ಸಂಸಾರವಿತ್ತು. ನಾಲ್ಕನೆಯ ಮಗುವಿಗೆ ಈಗ 7 ತಿಂಗಳ ಗರ್ಭಿಣಿಯಿದ್ದ ಅವರ ಪತ್ನಿ, ಒಬ್ಬರೇ ಎಲ್ಲ ಕೆಲಸ ಮಾಡಿಕೊಳ್ಳಲು ಸುಸ್ತಾಗುತ್ತಿದ್ದರು. ಕಂಪನಿಯ ಕ್ವಾಟ್ರಸ್ ನ ದೊಡ್ಡ ಬಂಗಲೆಯಲ್ಲಿ ಅವರ ವಾಸವಿತ್ತು. ಕಿರಿಯ ಸಹಾಯಕರು ಹಾಗೂ ಊರ ಮಧ್ಯ ಕೊಠಡಿಯಲ್ಲಿ ವಾಸವಿದ್ದ ರಘುರಾಮರಿಗೆ, ಅವರು ಅಡಿಗೆ ಸಹಾಯಕ್ಕೆ ಹಾಗೂ ಬಾಣಂತನದ ನಂತರ ಪತ್ನಿ ಹಾಗೂ ಮಗುವಿನ ಆರೈಕೆಗೆ ಒಬ್ಬ ಒಳ್ಳೆಯ ಹೆಣ್ಣು ಮಗಳು ಕೆಲಸಕ್ಕೆ ಬೇಕೆಂದು ಹೇಳಿಕೊಂಡಿದ್ದರು. 
     ಸಂಜೆ ಶ್ಯಾಮ ತನ್ನ ಅಮ್ಮ ಸಾವಿತ್ರಿಯನ್ನು ರಘುರಾಮ ಅವರ ಭೇಟಿಗೆ ಕರೆದುಕೊಂಡು ಹೊರಟ. ಕೊಠಡಿಯಲ್ಲಿ ರಾತ್ರಿಯ ಅಡಿಗೆಯ ತಯಾರಿಯಲ್ಲಿದ್ದ ರಘುರಾಮ, ನಗುತ್ತಾ ಇಬ್ಬರನ್ನೂ ಚಾಪೆಯ ಮೇಲೆ ಕುಳಿತುಕೊಳ್ಳಲು ಸೂಚಿಸಿ, ಕೈತೊಳೆದು ಬಂದು ಸಾವಿತ್ರಿಗೆ ಮಾತನಾಡಿದರು. ತಮ್ಮ ಹಿರಿಯ ಅಧಿಕಾರಿಯ ಮನೆಯ ತಾಪತ್ರಯ ತಿಳಿಸಿದ ಅವರು, “ಅಡುಗೆ ಹಾಗೂ ಮನೆಯ ಸಣ್ಣ -ಪುಟ್ಟ ಕೆಲಸಕ್ಕೆ ತುರ್ತಾಗಿ ಹೆಣ್ಣು ಮಗಳೊಬ್ಬಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಾಗಿ ಹೇಳಿದರು. ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ, ನಿಮ್ಮ ಅಗತ್ಯ – ಅನುಕೂಲ ರೀತ್ಯಾ ಸಂಬಳ ಕೊಡುತ್ತಾರೆ. ನಿಮ್ಮ ಬಗ್ಗೆ ಅವರಿಗೆ ಈಗಾಗಲೇ ಹೇಳಿದ್ದೇನೆ. ನಾಳೆ ಬೆಳಿಗ್ಗೆ ನಾನು ಫ್ಯಾಕ್ಟರಿಗೆ ಹೋಗುವಾಗ ಜೊತೆಯಲ್ಲಿ ಬಂದರೆ ಮನೆ ತೋರಿಸುತ್ತೇನೆ” ಎಂದರು. ಮರುದಿನ ಬೆಳಿಗ್ಗೆ 6.45 ಗಂಟೆಗೆ ಬರುವುದಾಗಿ ತಿಳಿಸಿದ ಸಾವಿತ್ರಿ ನೇರವಾಗಿ ಪಕ್ಕದ ಬೀದಿಯಲ್ಲಿದ್ದ ಗೋಪಾಲಯ್ಯನ ಮನೆಗೆ ಹೊರಟಳು. 
   ಗೊಲ್ಲರ ಗೋಪಾಲಯ್ಯ, ಈಚೆಗೆ ವರ್ಷದಿಂದ ಫ್ಯಾಕ್ಟರಿಯ ಕ್ವಾಟ್ರಸ್ ಮನೆಗಳ ಹಾಲು ಪೂರೈಕೆಗೆಂದೇ ಸಾಕಿದ್ದ ಸೀಮೆ ಹಸುಗಳ ಆರೈಕೆ ಹಾಗೂ ಕರೆದ ಹಾಲನ್ನು ದಿನವೂ ಕ್ವಾಟ್ರಸ್ ಮನೆಗಳಿಗೆ ಮತ್ತು ಕಂಪನಿ ಕ್ಯಾಂಟೀನ್ ಗೆ ಹಾಕುವ ಕೆಲಸ ಮಾಡುತ್ತಿದ್ದ. ಸಾವಿತ್ರಿಯು ಜೋಶಿ ಸಾಹೇಬರು ಎಂದು ಹೆಸರು ಹೇಳಿ, ಕೆಲಸಕ್ಕೆ ವಿಚಾರಿಸಿದ ವಿಷಯ ತಿಳಿಸುತ್ತಿದ್ದಂತೆಯೇ ಆತ ಮುಖವರಳಿಸಿ, ” ಸಾವಿತ್ರಮ್ಮ ಜೋಶಿ ಆಯ್ಯನವರು ಬಹಳ ಒಳ್ಳೆ ಜನ. ಅವರ ತಂದೆ – ತಾಯಿ ವಯಸ್ಸಾದವರು. ಅವರ ಹಿರಿಯಣ್ಣ, ಇಬ್ಬರನ್ನೂ ಮನೆ ಬಿಟ್ಟು ಎಲ್ಲೂ ಕಳಿಸಲ್ಲ. ಊರಲ್ಲಿ ವ್ಯವಸಾಯದ ಕೆಲಸ ಬಿಟ್ಟು ಬರಲು ಅವರೂ ಸಹಾ ಒಪ್ಪಲ್ಲ. ಜೋಶಿ ಆಯ್ಯನ ಮನೆಯಾಕೆಗೆ ತಾಯಿ ಇಲ್ಲ. ಅವರ ಕಡೆಯಿಂದ ಯಾರೂ ಸಹಾಯಕ್ಕಿಲ್ಲ. ಮೊದಲ 3 ಮಕ್ಕಳೂ ಊರಲ್ಲಿಯೇ, ಜೋಶಿ ಆಯ್ಯನ ಅಮ್ಮನ ನಿಗರಾಣಿಯಲ್ಲಿ ಹುಟ್ಟಿರೋದು. ಈಗ ಪಾಪ ಇಲ್ಲಿ ಬಂದು ಕಷ್ಟ ಆಗಿದೆ. ಕೆಲಸಕ್ಕೆ ಒಪ್ಪಿಕೊ. ನಿನಗೂ ಆಸರೆ, ಅವರಿಗೂ ನೀನು ಒಳ್ಳೆಯ ಕೈ ಸಿಕ್ಕಂತೆ ಆಗುತ್ತದೆ. ಬೆಳಿಗ್ಗೆ ಹಾಲು ಹಾಕಲು ಹೋದಾಗ ನಾನೂ ಒಂದು ಮಾತು ಜೋಶಿ ಆಯ್ಯನವರಿಗೆ ಹೇಳ್ತೀನಿ. ಮತ್ತೇನೂ ಯೋಚನೆ ಮಾಡಬೇಡ” ಎಂದು ಒಂದೇ ಉಸಿರಿಗೆ ಸೈ ಎಂದಿದ್ದ. ಸಾವಿತ್ರಿಗೆ ಬೇಸಿಗೆಯ ಪ್ರಯಾಣದಲ್ಲಿ ಅರವಟ್ಟಿಗೆ ಕಂಡಷ್ಟು ಸಮಾಧಾನವಾಗಿತ್ತು.
    ಬೆಳಿಗ್ಗೆ ಬೇಗ ಹೊರಡಬೇಕು ಎಂದು ಯೋಚಿಸುತ್ತಾ, ಮನೆ ತಲುಪಿ, ತಾಯಿಗೆ ಒಂದು ಮಾತು ಹೇಳುವ ಎಂದು ಇಣುಕಿ ನೋಡಿದಳು. ಅಲ್ಲೇ ಮನೆಯ ಮಧ್ಯದ ಕೋಣೆಯಲ್ಲಿ ಎಂದಿನಂತೆ ಲಾಟೀನಿನ ಬೆಳಕಲ್ಲಿ ಒಣಗಿದ ಬಟ್ಟೆ ಮಡಿಸುತ್ತಾ ಇದ್ದ ಅಮ್ಮನಿಗೆ ವಿಷಯ ತಿಳಿಸಲು, ಆಕೆಗೂ ನಿರಾಳವಾಯಿತು. ಮನೆಯಲ್ಲಿ ಅಷ್ಟು ಸುಖ -ಸಮೃದ್ಧಿ ಇದ್ದರೂ ಮಗಳು ಸ್ವಾಭಿಮಾನಿಯಾಗಿ ನಿಂತಿದ್ದು, ಆಕೆಗೆ ಸಂತೋಷವೂ ಹಾಗೂ ಒಂದು ರೀತಿಯಲ್ಲಿ ಹೆಮ್ಮೆಯ ವಿಷಯವೂ ಆಗಿತ್ತು. ಮಗಳಿಗೆ ದಿನವೂ ಕೆಲಸಕ್ಕೆ ಹೋಗುವಾಗ ತನ್ನ ಚಪ್ಪಲಿ ಮೆಟ್ಟಿಕೊಂಡು ಹೋಗಲು ಆದೇಶಿಸಿದರು. ಅಲ್ಲದೇ, ನೆನಪಿನಿಂದ ಮಗಳಿಗೆ, ಹೋಗುವ ದಾರಿಯಲ್ಲಿ ಬರುವ ಇಂಗ್ಲಿಷ್ ಬಿಳಿ ಜನರ ಮಿಲಿಟರಿ ಕ್ಯಾಂಪ್ ಹಾಗೂ ಸೂಳೆಗೇರಿಯ ಬಗ್ಗೆ ತಿಳಿಸಲು ಮರೆಯಲಿಲ್ಲ. ಏಕೆಂದರೆ, ಒಮ್ಮೆ ಫ್ಯಾಕ್ಟರಿ ಮುಗಿದು ಜನ ವಾಪಸ್ ಹೋಗಿ, ಇಳಿ ಮಧ್ಯಾಹ್ನ 4 ಗಂಟೆ ಆಯಿತೆಂದರೆ, ಆ ಇಡಿಯ ರಸ್ತೆ ಹಾಗೂ ಸುತ್ತಲಿನ ಸ್ಥಳ ಕೆಂಪೇರುತ್ತಿತ್ತು. ಊರಿನವರಷ್ಟೇ ಅಲ್ಲದೇ, ಬಿಳಿಯರ ಆಣೆ ಕಾಸಿನ ಆಸೆಗೆ, ಸುತ್ತ ಮುತ್ತಲಿನ ಎಲ್ಲಾ ಸ್ಥಳದ, ಹಳ್ಳಿಗಳ ಮೈನಾ, ನವಿಲು ಅಷ್ಟೇ ಅಲ್ಲದೇ ಗುಬ್ಬಿ, ಗೊರವಂಕಗಳಂತಹ ಸುಪನಾತಿಯರು, ಬಿಳಿಯರೇ ಹಾಕಿ ಕೊಟ್ಟ ಅಲ್ಲಿಯ ಶೆಡ್ಡುಗಳಲ್ಲಿ ಬೀಡು ಬಿಟ್ಟಿದ್ದರು.
   ಈ ವಿಷಯವನ್ನು ಕೇಳಿ ತಿಳಿದಿದ್ದ ಸಾವಿತ್ರಿಗೆ, ತಾಯಿ ಹೇಳಿದ ಮಾತು ಎಚ್ಚರಿಕೆಯಿಂದ ಓಡಾಡು ಎಂಬ ಸಂಜ್ಞೆಯಂತೆ ಭಾಸವಾಯಿತು. ಸರಿ ಎಂದು ಹೇಳಿ, ತಾಯಿಗೆ ಕಾಲಿಗೆರಗಿ ಮನೆಯ ಕಡೆ ಹೊರಟವಳ ಮನಸ್ಸು ಚದುರಂಗದ ಹಾಸಾಯಿತು.



   ಬಹಳ ಒಳ್ಳೆಯ ದರ್ಜಿ ಮನೆತನವೆಂದು ಮದುವೆ ಮಾಡಿಕೊಟ್ಟ 8 ವರ್ಷಕ್ಕೇ, ಪತಿರಾಯ ಅಧ್ಯಾತ್ಮದ ಮೊಂಡು ಕತ್ತಿ ಹಿಡಿದು, ಗೆಲ್ಲುವೆನೆಂದು ಗುರಿಯಿಲ್ಲದ ದಂಡಯಾತ್ರೆಗೆ ತೆರಳಿದ್ದ. ಆತ ಗೆದ್ದರೂ, ಸೋತರೂ ಸಾವಿತ್ರಿಗೆ ತನ್ನ ತಾಳಿ ಹಾಗೂ 3 ಮಕ್ಕಳ ಪಾಲನೆ – ಪೋಷಣೆಯ ಅರಸೊತ್ತಿಗೆ ಖಾಯಂ ಆಗಿತ್ತು. ಮನೆಯ ಗಂಡಸರು ದರ್ಜಿ ಕಸುಬಿನವರಾದರೆ, ಹೆಂಗಸರು ಶಾವಿಗೆ ಮಾಡುವ ಗೃಹೋದ್ಯೋಗ ಕಂಡುಕೊಂಡಿದ್ದರು.
   ಯಾವಾಗ ಪತಿ ಹಿಮಾಲಯ ಹತ್ತಲು ಹೋದನೋ, ಮನೆಯಲ್ಲಿ ಅತ್ತೆ ಹಾಗೂ ಓರಗಿತ್ತಿಯರ ಬಾಯಿ, ಸಾವಿತ್ರಿಯನ್ನು ಇಂಚು ಇಂಚಾಗಿ ಅವಮಾನದ ಪಾತಾಳಕ್ಕೆ ಇಳಿಸಲು ಶುರು ಮಾಡಿತ್ತು. ಎಲ್ಲರೂ ಈಕೆಯನ್ನು ಬೇಜವಾಬ್ದಾರಿ ಹುಡುಗಿ ಎಂದು ಹಳಿದು, ಗಂಡನ ಲಗಾಮು ಹಿಡಿಯದ ಪೆದ್ದಿ ಎಂದು ತೀರ್ಮಾನಿಸಿಯಾಗಿತ್ತು. ಈಗಿನ್ನೂ 30 ವರ್ಷವೂ ತುಂಬದ ಸಾವಿತ್ರಿಯ ಸಂಕಟ ನೋಡಲಾರದೆ, ತಂದೆ ಪಿಲ್ಲೋಜಿ ರಾಯರು ಮಗಳನ್ನು ಮನೆಗೆ ಕರೆ ತಂದಿದ್ದರು. ಆಕೆಯ ಸ್ವಾಭಿಮಾನಕ್ಕೆ ಮೆಚ್ಚಿ, ತಮ್ಮ ಮನೆಯ ಹಿಂದಿನ ಕೊಠಡಿಯನ್ನು ಆಕೆಯ ವಾಸಕ್ಕೆ ಅಣಿ ಮಾಡಿ, ನಿಗಾ ಇಟ್ಟು ನೋಡಿಕೊಳ್ಳುತ್ತಿದ್ದರು. ಸಾವಿತ್ರಿಯೂ ಮೊದಮೊದಲು ಬಹಳ ಗೊಂದಲದಲ್ಲಿ ಇದ್ದವಳು, ತಂದೆ -ತಾಯಿಯ ಬೆಂಬಲದಿಂದ ಸ್ಥಿರ ನಿಂತು ದುಡಿಯಲು ದಾರಿ ಮಾಡಿಕೊಂಡಿದ್ದಳು. ಶಾವಿಗೆಯ ತಯಾರಿ ಆಕೆಯ ಕೈಹಿಡಿದಿತ್ತು. ತಾಯಿಯ ಕಾಳು-ಕಡ್ಡಿ, ಹಾಲು-ಹೈನು ಸಹಾಯ ಇದ್ದೇ ಇತ್ತು. ಆದರೆ ತಂದೆಯವರ ನಿಧನದ ನಂತರ, ಆಕೆಯ ಆಸರೆಯ ಕೊಡೆಗೆ ತೂತಾಗಿತ್ತು.



   ಬೆಳಿಗ್ಗೆ 6.45 ಕ್ಕೆ ಸರಿಯಾಗಿ ಮನೆ ಕೆಲಸ ಪೂರೈಸಿ, ತಾಯಿಗೆ ಹೇಳಿ, ಚಪ್ಪಲಿ ಧರಿಸಿ, ರಘುರಾಮ ಅವರ ಬಾಗಿಲ ಬಳಿ ಬಂದು ತಾನು ಬಂದಿರುವುದಾಗಿ ತಿಳಿಸಿದಳು. ಕೊಠಡಿಯಲ್ಲಿ ವಾಸವಿದ್ದ ನಾಲ್ಕೂ ಜನ ಸಹೋದ್ಯೋಗಿಗಳು ಹೊರಡುತ್ತಿದ್ದಂತೆಯೇ, ಆಕೆಯೂ ಅವರನ್ನು ಹಿಂಬಾಲಿಸಿ ಕ್ವಾಟ್ರಸ್ ಕಡೆ ಹೊರಟಳು. ಪಾಪ, ತನ್ನ ಮನೆ, ಊರ ಗುಡಿ ಹಾಗೂ ಹೊಳೆಯ ಮೆಟ್ಟಿಲು ಬಿಟ್ಟು ಮುಂದೆ ಓಡಾಡಿದವಳಲ್ಲ ಆಕೆ. ಜೋಷಿ ಸಾಹೇಬರು ಇನ್ನೂ ಮನೆಯಲ್ಲೇ ಇದ್ದ ಕಾರಣ, ಸಾವಿತ್ರಿ ಒಳ ಮನೆಗೆ ಹೋಗಿ ನಿಂತು ಮಾತಾಡಿದಳು. ಸಾಹೇಬರ ಪತ್ನಿಯ ಮನಸ್ಸಿಗೆ ಸಮಾಧಾನವಾಗಿತ್ತು. ಈಕೆಯ ಅಡಿಗೆಯ ಜ್ಞಾನ ಮತ್ತು ಸಂಬಳದ ಹಣ ಒಪ್ಪಿಗೆಯಾಗಿ ಕೆಲಸ ನಿಗದಿಯಾಯಿತು. ಪ್ರತೀ ಸೋಮವಾರ ಬಟವಾಡೆ ನೀಡಲು ಸಾವಿತ್ರಿ ಕೇಳಿಕೊಂಡಳು. ಏಕೆಂದರೆ ಪ್ರತೀ ಮಂಗಳವಾರ ಊರ ಸಂತೆ ಇರುತ್ತಿತ್ತು.
   ಇಷ್ಟು ಮಾತುಕತೆಯಾಡಿ, ಸಾಹೇಬರು ಹಾಗೂ ನಾಲ್ಕು ಯುವಕರೂ ಒಟ್ಟಿಗೇ ಕಂಪನಿಗೆ ಹೊರಟರು. ಸಾಹೇಬರ ಪತ್ನಿ ಜಯಶ್ರೀ ಬಹಳ ಪ್ರಸನ್ನ ಭಾವದ ಗೃಹಿಣಿ. ತುಂಬಿದ ನಗು ಮುಖ. ಆಕೆ, “ಬೆಳಿಗ್ಗೆ ಗೊಲ್ಲರ ಗೋಪಾಲ, ಸಾಹೇಬರಲ್ಲಿ ನಿನ್ನ ಹಾಗೂ ನಿನ್ನ ದಿವಂಗತ ತಂದೆಯವರ ಬಗ್ಗೆ ಎಲ್ಲ ಹೇಳಿದ್ದಾನೆ” ಎಂದರು. “ಕಷ್ಟಜೀವಿ ಹೆಣ್ಣು ಮಗಳು ಸಾಹೇಬ್ರೆ, ಜೊತೆಗೆ ಮಕ್ಕಳಿಗೂ ಓದಲು ದಾರಿ ಮಾಡಿಕೊಡಿ” ಎಂದು ವಿನಂತಿಸಿದ ಬಗ್ಗೆಯೂ ತಿಳಿಸಿ, “ಚನ್ನಾಗಿ ಕೆಲಸ ಮಾಡಿಕೊಂಡು ಹೋಗು, ಕೈಲಾದ ಸಹಾಯ ಮಾಡುವೆ” ಎಂದು ಅಭಯ ನೀಡಿದರು. ಸಾವಿತ್ರಿಗೆ ತನ್ನ ಜೀವನೋಪಾಯಕ್ಕೆ ಹೀಗೆ ಒಂದು ಭದ್ರ ನೆಲೆ ಸಿಗಬಹುದೆಂಬ ಕಲ್ಪನೆಯೂ ಇರಲಿಲ್ಲ. ಆಕೆಗೆ ಈಗ ಚನ್ನಾಗಿ ಕೆಲಸ ಮಾಡಿ ತೋರಿಸಿ, ಸಂಬಳ ತಂದು ತನ್ನ ಜೀವನ ಕಟ್ಟುವ ಗುರಿ ಹಾಗೂ ದಾರಿ ಸಿಕ್ಕಿತ್ತು.
   ದಿನವೂ ಬೆಳಿಗ್ಗೆ 8 – 8.30 ಗೆ ಹೊರಟು, ಕೆಲಸ ಮುಗಿಸಿ 11 -11.30 ಯೊಳಗೆ ಮನೆ ಸೇರುತ್ತಿದ್ದಳು. ಬಟವಾಡೆ ಹಣದಿಂದ ಸಂತೆಯಲ್ಲಿ ಮನೆಯ ಅವಶ್ಯಕ ಸಾಮಗ್ರಿ ತಂದು ಜೀವನವನ್ನು ತುಸು ನೆಮ್ಮದಿಯಾಗಿ ಕಳೆಯುತ್ತಿದ್ದಳು. ಜೋಷಿ ಸಾಹೇಬರ ಶಿಫಾರಸ್ಸಿನಿಂದ ಈಗ ಆಕೆಗೆ ಇನ್ನೊಂದು ಮನೆಯ ಕೆಲಸ ಸಿಕ್ಕಿತ್ತು. ಅವರೂ ಸಹಾ 5 ಮಕ್ಕಳು ಮತ್ತು ಗಂಡ – ಹೆಂಡತಿ ಸಂಸಾರ. ಬದುಕು ಸ್ಥಿರವಾಗಿ, ಸಹ್ಯವಾಗಿತ್ತು. 1 ಗಂಟೆ ಮಧ್ಯಾಹ್ನದ ಹೊತ್ತಿಗೆ, ಸ್ವಲ್ಪ ತಡವಾಗಿ, 2 ಮನೆಗಳ ಕೆಲಸ ಮುಗಿಸಿ ವಾಪಸ್ಸಾಗುತ್ತಿದ್ದಳು. ದಾರಿಯಲ್ಲಿ ಬಿಳಿಯರ ಮಿಲಿಟರಿ ಕ್ಯಾಂಪ್ ನ ಕಾಂಪೌಂಡ್ ಶುರುವಾದ ಕೂಡಲೇ ಸರ ಸರ ನಡೆದು ದಾಟಿ ಬಂದು ಬಿಡುತ್ತಿದ್ದಳು. ಹಾಗೇನಾದರೂ ಒಂದೊಮ್ಮೆ ಗೇಟು ತೆರೆದಿದ್ದು, ಯಾರಾದರೂ ಬಿಳಿಯರ ಸೈನ್ಯದವ ಕೇಳಿದರೂ, ಇಲ್ಲೇ ಕಂಪನಿ ಕ್ವಾಟ್ರಸ್ ಮನೆಗಳಿಗೆ ಅಡಿಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ ತನ್ನ ಪಾಡಿಗೆ ತಾನು ಬಂದು ಬಿಡುತ್ತಿದ್ದಳು.
   ಹೀಗೆ 7-8 ವಾರಗಳು ಕಳೆದಿತ್ತೇನೋ, ಒಂದು ಸಂಜೆ ಮನೆಯ ಹತ್ತಿರ ಬಂದ ರಘುರಾಮ ಅವರು, ಜೋಷಿ ಸಾಹೇಬರ ಪತ್ನಿಗೆ ಹೆರಿಗೆಯಾದ ಬಗ್ಗೆ ತಿಳಿಸಿ, ಬೆಳಿಗ್ಗೆ ಬೇಗ ಹೋಗಲು ತಿಳಿಸಿದರು. ಅಂದಿನಿಂದ ಸಾವಿತ್ರಿಗೆ ಮಗು – ಬಾಣಂತಿಗೆ ನೀರು ಹಾಕುವ ಕೆಲಸವೂ ಸೇರಿ ಸಂಬಳ ಹೆಚ್ಚಿ, ಮಧ್ಯಾಹ್ನ ಮನೆಗೆ ಹೋಗುವ ಸಮಯ 2 ಗಂಟೆ ಮೀರಲು ಶುರುವಾಯಿತು.
   ಅದೊಂದು ಶನಿವಾರ ಮಧ್ಯಾಹ್ನ ಸ್ವಲ್ಪ ತಡವಾದ ಕಾರಣ 3.15 ರ ಹೊತ್ತಿಗೆ ಸರ ಸರ ಹೊರಟವಳ ಹಿಂದೆ, ಹೆಜ್ಜೆ ಸದ್ದು ಕೇಳಲು ಶುರುವಾಯಿತು. ತಿರುಗಿ ನೋಡಿದಾಗ, ಬಿಳಿಯನೊಬ್ಬ, ದೊಡ್ಡ ಕರಿ ನಿಕ್ಕರ್ ಹಾಗೂ ತೋಳಿಲ್ಲದ ಅಂಗಿಯಂತಹ ಬಟ್ಟೆ ತೊಟ್ಟು ಇವಳ ಹಿಂದೆ ಬರುತ್ತಿರುವುದು ಕಂಡಿತು. ಆತ ಮಾತನಾಡದೆ ಸುಮ್ಮನೆ ನಡೆಯುತ್ತಿದ್ದ ಕಾರಣ, ತನ್ನಷ್ಟಕ್ಕೇ ತಾನು ಈಕೆಯೂ ಮುಂದೆ ನಡೆದಳು. ಮಿಲಿಟರಿ ಕ್ಯಾಂಪಿನ ಕಾಂಪೌಂಡ್ ನ, ಅದೊಂದು ದೊಡ್ಡ ಗೇಟ್ ಎದುರು ಬರುತ್ತಿದ್ದಂತೆಯೇ ಹಿಂಬಾಲಿಸುತ್ತಿದ್ದ ಆತ, ಸಾವಿತ್ರಿಯನ್ನು ಗೇಟಿನ ಒಳಗೆ ಎಳೆದುಕೊಳ್ಳಲು ರಭಸದಿಂದ ಕೈ ಹಿಡಿದು ಜಗ್ಗಿದ. ಇದನ್ನು ಎದುರು ನೋಡದ ಸಾವಿತ್ರಿ, ಇದ್ದಕ್ಕಿದ್ದಂತೆ ನಡೆದ ಆಘಾತವನ್ನು ಅರಿತುಕೊಳ್ಳುವಷ್ಟರಲ್ಲಿ ಆತ ಆಕೆಯನ್ನು ಕಾಂಪೌಂಡ್ ಒಳಗಿದ್ದ ದೊಡ್ಡ ಕಟ್ಟೆಯಂತಹ ಸ್ಥಳಕ್ಕೆ ಬಲವಾಗಿ ಎಳೆದುಕೊಂಡು ಬಂದಿದ್ದ. ಎಚ್ಚೆತ್ತ ಸಾವಿತ್ರಿ ಗೇಟಿನ ಕಡೆಗೆ ಓಡಲು ತಿರುಗುವುದನ್ನು ಗಮನಿಸಿ, ಗಾರ್ಡ್ ಗೆ ಗೇಟ್ ಮುಚ್ಚಲು ಆದೇಶಿಸಿದ. ಶನಿವಾರ ಸಂಜೆಯ ಮೇಲೆ, ಮರುದಿನ ಭಾನುವಾರದ ರಜೆಯಿರುತ್ತಿದ್ದ ಕಾರಣ ಎಲ್ಲ ಮಿಲಿಟರಿ ಬಿಳಿಯರು ಮದ್ಯ ಕುಡಿದಿರುತ್ತಿದ್ದರು. ಬೀದಿಯಲ್ಲಂತೂ ಅವರ ಹಾಗೂ ಸೂಳೆಗೇರಿಯ ಹೆಣ್ಣುಗಳ ಓಕುಳಿಯ ದೃಶ್ಯಗಳಿರುತ್ತಿದ್ದವು. ಸಾವಿತ್ರಿಗೆ ಜೀವ ಬಾಯಿಗೆ ಬಂದು, ಕಲ್ಲಾಗಿ ಹೋಗಿದ್ದಳು. ಸುತ್ತಲಿದ್ದ ದೃಶ್ಯಗಳು ತಿರುಗಲು ಆರಂಭಿಸಿದ್ದವು. ಕೈಯಲ್ಲಿದ್ದ ಕೈಚೀಲವನ್ನು ಗಟ್ಟಿ ಎದೆಗೊತ್ತಿ ಹಿಡಿದು ಹೊರಗೆ ಹೋಗಲು ಬಿಡಿ ಎಂದು ದೈನ್ಯದಿಂದ ಬೇಡುತ್ತಾ ಅಳಲು ಶುರು ಮಾಡಿದಳು. ಸುತ್ತಲೂ ಆಗಲೇ ಕಟ್ಟಾಳಿನಂತಹ 5 -6 ಜನ ಬಿಳಿಯರು ಸೇರಿದ್ದರು. ಎಲ್ಲರೂ ಈಕೆಯನ್ನು ಅಡಿಯಿಂದ ಮುಡಿಯವರೆಗೆ ಉಪ್ಪು, ಖಾರ, ಮಸಾಲೆ ಹಚ್ಚಿ ಹುರಿದು ತಿನ್ನುವಂತೆ ನೋಡುತ್ತಿದ್ದರು. ಸಾವಿತ್ರಿ ತನ್ನ ಇಲ್ಲಿಯವರೆಗಿನ ಬದುಕಲ್ಲಿ ಎಂದೂ ಸಹಾ ಇಂತಹ ಹಸಿದ ಗಂಡು ನೋಟವನ್ನು, ಬೇಟೆಯ ಕಣ್ಣನ್ನು ಕಂಡಿರಲಿಲ್ಲ. ಅಕ್ಷರಶಃ ಬಲಿಯ ಜಿಂಕೆಯಂತಾಗಿದ್ದಳು. ಮಂಜಿನ ನೀರಲ್ಲಿ ಬೆತ್ತಲೆ ನಿಂತಂತೆ ಥರಗುಟ್ಟುತ್ತಿದ್ದಳು. ಖಂಡೋಬಾ… ಖಂಡೋಬಾ… ಎಂದು ದೇವರ ನಾಮಸ್ಮರಣೆ ತಾನಾಗೇ ಆಕೆಯಿಂದ ಉಲಿಯಲ್ಪಟ್ಟು, ಸುತ್ತಲಿನ ವಾತಾವರಣದ ಸಮೀಕರಣವನ್ನು ತೆರೆದ ಕಣ್ಣುಗಳು ದಾಖಲಿಸುತ್ತಿದ್ದವು. 
   ಅಷ್ಟರಲ್ಲಿ ಗೇಟಿನ ಮುಂದೆ ಕುದುರೆಯ ದೊಡ್ಡ ಸಾರೋಟಿನಂತಹ ಗಾಡಿಯೊಂದು ಬರಲು, ಗೇಟು ತೆರೆಯಿತು. ಒಳಗೆ ಗಾಡಿ ಬರುತ್ತಿದ್ದಂತೆಯೇ ಅದರಲ್ಲಿ ಕುಳಿತಿದ್ದ ಮಧ್ಯ ವಯಸ್ಕ ಬಿಳಿಯ ಅಧಿಕಾರಿಯೊಬ್ಬನ ನೋಟ ಈಕೆಯ ಮೇಲೆ ಬಿತ್ತು. ಕಟ್ಟೆಯ ಬಳಿ ಬಂದು ನಿಂತ ಗಾಡಿಯಿಂದ, ಕಟ್ಟೆಗೆ ಇಳಿದ ಆತ ಸಾವಿತ್ರಿಯ ಬಳಿ ಬಂದು ಏನು ಬೇಕು ಎಂದು ಕೇಳಲು, ಈಕೆ ಅಳುತ್ತಾ ಮನೆಗೆ ಹೋಗಬೇಕು ಎಂದು ಕೈ ಮುಗಿದಳು. ಆಶ್ಚರ್ಯಚಕಿತನಾದ ಆತ ಅಲ್ಲೇ ಇದ್ದ ಗೇಟಿನ ಗಾರ್ಡ್ ಗೆ, “ಯಾಕೆ ಈಕೆ ಹೀಗೆ ಅಳುತ್ತಿದ್ದಾಳೆ? ಈಕೆಯನ್ನು ಯಾರು ಕರೆ ತಂದಿದ್ದು? ” ಎಂದು ಕೇಳಿದರು. ಈಕೆಯನ್ನು ಎಳೆದು ತಂದಿದ್ದ ಕರಿ ನಿಕ್ಕರ್ ಧರಿಸಿದ್ದ ಬಿಳಿಯ, “ಈಕೆ ರಂಡಿ” ಎಂದು ಹೇಳಿದ ಅಷ್ಟೇ…. ಮರುಕ್ಷಣ, ಆತನ ಕಪಾಳಕ್ಕೆ ರಪ್ಪೆಂದು ಹಲ್ಲುದುರುವಂತೆ ಒಂದು ಹೊಡೆತ ಬಿದ್ದಿತ್ತು. ಎಡಗಿವಿ, ದವಡೆಯೊಳಗೆ ಜಜ್ಜಿ ತೂರಿಕೊಂಡಂತಾಗಿ ಬವಳಿ ಕಣ್ಮುಚ್ಚಿದ.

ಅಲ್ಲಿದ್ದವರೆಲ್ಲ ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿರುವಾಗಲೇ, ಸಾವಿತ್ರಿ ತೆರೆದ ದೊಡ್ಡ ಬೆಂಕಿಗಣ್ಣಲ್ಲಿ ಅಬ್ಬರಿಸುತ್ತಾ …
“ನಾನು ಚಂಡಿ ಕಣೋ…”ನಾನು ಮೂರು ಮಕ್ಕಳ ತಾಯಿ..”ನಾನು ದುಡಿದು ಬದುಕೋಳು..” ನಾನು ಬದುಕೇ ಬದುಕ್ತೀನಿ..”
ಎಂದು ಕೈಚೀಲ ಕೊಡವಿ, ಕಣ್ಣೊರೆಸುತ್ತಾ ತಲೆಯ ಸೆರಗು ಸರಿ ಮಾಡಿಕೊಂಡು, ದುರ್ಗಿಯಂತೆ ಬಿರ ಬಿರನೆ ಗೇಟಿನಿಂದ ನಿರಾತಂಕ ನಡೆಯುತ್ತಾ ಹೊರ ಹೊರಟಳು.

  ನೆಲಕ್ಕೆ ಬಿದ್ದವನನ್ನು ನೋಡಿ ವ್ಯಂಗ್ಯ ನಗೆ ಬೀರಿದ ಆ ಮಧ್ಯ ವಯಸ್ಕ ಬಿಳಿಯ ಅಧಿಕಾರಿ, ಗೇಟಿನ ಕಡೆಗೆ ಅತ್ಯಂತ ಗೌರವಪೂರ್ವಕ ನೋಟದಿಂದ ನೋಡುತ್ತಾ ತನ್ನ ಟೊಪ್ಪಿಗೆ ತೆಗೆದು ಬಗಲಿಗೆ ಸಿಕ್ಕಿಸಿ ಒಳ ನಡೆದ.
   ಸಂಸಾರವೆಂಬ ಜವಾಬ್ದಾರಿಯನ್ನು ಸಂಪೂರ್ಣ ಹೊತ್ತಿದ್ದ ಸಾವಿತ್ರಿ, ಅಂದು ಒಂದೇ ಬಾರಿಗೆ ಎಂಬಂತೆ, ತನ್ನ ಭಯಗಳ ಕಟ್ಟು ಕತ್ತರಿಸಿದ್ದಳು. ತನ್ನೊಳಗಿನ ದೃಢಚಿತ್ತವನ್ನು, ಶಕ್ತಿಯನ್ನು, ಗಮ್ಯದೆಡೆಗಿನ ನಡೆಯನ್ನು, ಏಕಾಗ್ರತೆಯನ್ನು, ಚಳಿ – ಮಳೆ – ತಾಪಕ್ಕೆ ಬೆಚ್ಚದೆ ನಿಂತು ದುಡಿವ ಛಲವನ್ನು ಕಂಡುಕೊಂಡಿದ್ದಳು.
    ಒಂಟಿಯಾಗಿ ಸಂಸಾರ ರಥವನ್ನೆಳೆವ ತಾಯಿಯ ಮುಂದೆ, ಹಿಮಾಲಯವೇರುವ ತಪಸ್ಸಾಧನೆ ದೊಡ್ಡದಲ್ಲ.