ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ರಾಜೇಂದ್ರ ಬಿ. ಶೆಟ್ಟಿ
ಇತ್ತೀಚಿನ ಬರಹಗಳು: ರಾಜೇಂದ್ರ ಬಿ. ಶೆಟ್ಟಿ (ಎಲ್ಲವನ್ನು ಓದಿ)

“ಅಳು ಮಗಾ, ಒಮ್ಮೆ ಅತ್ತು ಬಿಡು. ದುಃಖವೆಲ್ಲಾ ಹೊರಗೆ ಬರಲಿ. ನೋವನ್ನು ನುಂಗಬೇಡ….”
ನನಗೆ ನಗು ಬರುತ್ತದೆ, ನಗುವುದಿಲ್ಲ. ಕೈಯಲ್ಲಿನ ಬಳೆಗಳನ್ನು ಒಂದೊಂದಾಗಿ ಒಡೆಯ ತೊಡಗಿದೆ. ಯಾರೋ ಒಳ ಬರುತ್ತಾರೆ. ತಲೆ ಎತ್ತಿದೆ. ಆತ ತನ್ನ ತಾಯಿಯ ಜೊತೆ ನಿಂತಿದ್ದಾನೆ. ಒಂದು ಕ್ಷಣ ಬಳೆ ಒಡೆಯುವುದನ್ನು ನಿಲ್ಲಿಸುತ್ತೇನೆ. ಅವರಿಬ್ಬರ ಕಣ್ಣಲ್ಲೂ ನೀರು. ನನಗೆ ನಿನ್ನ ಕನಿಕರ ಬೇಡ ಎಂದು ಹೇಳುವ ಅನಿಸುತ್ತದೆ. ಹೇಳಲಾಗದೆ, ಪುನಹ ಬಳೆಗಳನ್ನು ಒಡೆಯುತ್ತೇನೆ.
*

ಇವತ್ತು ಕಾಲೇಜು ಆರಂಭವಾಗಿದೆ. ನಮ್ಮ ಊರಲ್ಲಿ ಕಾಲೇಜು ಇಲ್ಲ. ಹಾಗಾಗಿ ಎರಡು ಮೈಲು ದೂರದ ಮುಲ್ಕಿಯಲ್ಲಿ ಕಾಲೇಜಿಗೆ ಸೇರಿದ್ದೇನೆ.
ಊಟದ ಹೊತ್ತು. ನಾವು ಹುಡುಗಿಯರೆಲ್ಲಾ ಗುಂಪಾಗಿ ಹೊರಗೆ ನಿಂತಿದ್ದೇವೆ. ಒಬ್ಬ ಹುಡುಗ ಕುಂಟುತ್ತಾ ನಡೆದುಕೊಂಡು ಬರುತ್ತಿದ್ದಾನೆ. ಆ ಹುಡುಗ, ನನ್ನ ಇನ್ನೊಂದು ಪಕ್ಕದ ಊರಿನ ಪಡುಬಿದ್ರಿಯ ಹುಡುಗನೆಂಬ ನೆನಪು.
ಇವತ್ತು ಮೊದಲ ಪಿರಿಯೆಡ್ ನಲ್ಲಿ ಪ್ರೊಫೆಸರ್ ಎಲ್ಲರ ಹೆಸರು, ಊರು, ನಮ್ಮ ಶಾಲೆಯ ಬಗ್ಗೆ ಕೇಳುತ್ತಿದ್ದರು. ಆವಾಗ, ಈ ಹುಡುಗ ಸ್ವಲ್ಪ ತಡವಾಗಿ ಕುಂಟುತ್ತಾ ಕ್ಲಾಸಿಗೆ ಬಂದಿದ್ದ. ಹಾಗಾಗಿ ಆತನ ಹೆಸರು ಮತ್ತು ಊರಿನ ನೆನಪು.

ಆ ಹುಡುಗ ನೇರವಾಗಿ ನನ್ನ ಬಳಿ ಬಂದು, “ನೀನು ರಶ್ಮಿ ಅಲ್ಲವೇ?, ನಿನ್ನ ತಾಯಿಯ ಹೆಸರೇನು?” ಎಂದು ಕೇಳಿದ. ನನಗೆ ನಾಚಿಗೆಯಿಂದ ಮುಖವೆಲ್ಲಾ ಕೆಂಪಾಯಿತು. ಯಾಕೋ ಕಾಲುಗಳು ನಡುಗತೊಡಗಿದವು.
ನನ್ನ ಪಕ್ಕದಲ್ಲಿ ನಿಂತಿದ್ದವಳು ಧೈರ್ಯವಾಗಿ, “ಏನೋ, ಕಾಲೇಜು ಆರಂಭ ಆಗುತ್ತಲೇ ಹುಡುಗಿಯರ…,” ಅನ್ನುವಾಗ, “ಕ್ಷಮಿಸಿ. ರಶ್ಮಿಯವರೆ, ನಿಮ್ಮ ಊರಲ್ಲಿ ಸೀತ ಅನ್ನುವವರ ಪರಿಚಯ ಇದೆಯೇ?”
ಆಶ್ಚರ್ಯವಾಯಿತು. “ನನ್ನ ತಾಯಿಯ ಹೆಸರು ಸೀತಾ. ನಿಮಗೆ ಅವರ ಪರಿಚಯ ಇದೆಯೇ? “
“ಅವರು ನನ್ನ ಅತ್ತೆ. ನಾನು ಆನಂದ. ಅತ್ತೆ ಹೇಗಿದ್ದಾರೆ? ನನ್ನ ಅಮ್ಮನ ಹೆಸರು ಜಲಜ. ಸೀತತ್ತೆಗೆ ಅವರ ಪರಿಚಯವಿದೆ. ಕೇಳಿ ನೋಡಿ.”
ಬೆಲ್ ಆಯಿತು. ನಾವೆಲ್ಲಾ ಕ್ಲಾಸಿಗೆ ಹೊರಟೆವು. ನನ್ನ ಗೆಳತಿಯರು, “ನೀನು ತುಂಬಾ ಲಕ್ಕಿ ಕಣೇ. ಕಾಲೇಜಿನ ಮೊದಲ ದಿನವೇ ನಿನಗೆ ಅತ್ತೆಯ ಮಗ ಸಿಕ್ಕ.”

ಸಾಯಂಕಾಲ ಅಡುಗೆಯ ಮನೆಯಲ್ಲಿ, ಅಮ್ಮ ಕೊಟ್ಟ ಕಾಫಿ ಕುಡಿಯುತ್ತಾ ಕೇಳಿದೆ, “ಅಮ್ಮಾ, ಜಲಜ ಅಂದರೆ ಯಾರು? ನನಗೆ ಅತ್ತೆ ಆಗಬೇಕಂತೆ. ಅವರ ಮಗ ನನ್ನ ಕ್ಲಾಸಿನಲ್ಲಿ ಇದ್ದಾನೆ.” ಹೊರಗೆಚಾವಡಿಯಲ್ಲಿ ಕುಳಿತು, ಆಳುಗಳಿಗೆ ನಾಳೆಯ ಕೆಲಸ ಹೇಳುತ್ತಿದ್ದ ಅಪ್ಪ ಎತ್ತರದ ದನಿಯಲ್ಲಿ, “ಆ ಹುಡುಗನ ಜೊತೆ ನೀನು ಮಾತನಾಡಿದರೆ ನಿನ್ನ ಕಾಲು ಮುರಿದು ಹಾಕುತ್ತೇನೆ. ಅತ್ತೆಯಂತೆ ಇವಳಿಗೆ…”
ಅಮ್ಮ ನನಗೆ ಸುಮ್ಮನಿರುವಂತೆ ತನ್ನ ತುಟಿಯ ಬಳಿ ಬೆರಳು ತರುತ್ತಾಳೆ. ಅಪ್ಪನಿಗೆ ಮೂಗಿನ ತುದಿಯಲ್ಲಿ ಸಿಟ್ಟು. ಇಬ್ಬರೂ ಸುಮ್ಮನಾಗುತ್ತೇವೆ.
ಸ್ವಲ್ಪ ನಂತರ, ಅಪ್ಪ ‘ಪಡ್ಡಾಯಿ’ ಗೆ ಹೋದ ನಂತರ ಅಮ್ಮ ನನಗೆ ಗೊತ್ತಿಲ್ಲದ ದೊಡ್ಡ ಕಥೆ ಹೇಳುತ್ತಾಳೆ.

“ಜಲಜಕ್ಕ ಇವರ ದೊಡ್ಡಮ್ಮನ ಮಗಳು. ಇವರ ತಂಗಿ. ಆನಂದ ಅವರ ಮೊದಲ ಮಗ. ಪಾಪ, ಹುಟ್ಟುವಾಗಲೇ ಅವನ ಎರಡು ಕಾಲುಗಳು ಉದ್ದ ಗಿಡ್ಡ. ಹಾಗಾಗಿ ಆತ ನಡೆಯುವಾಗ ತುಂಬಾ ತಡವಾಯಿತು. ಆತನಿಗೆ ಒಬ್ಬಳು ತಂಗಿಯೂ ಇರಬೇಕು. ಹೆಸರು ನೆನಪಾಗುವುದಿಲ್ಲ. ಹ್ಞಾ,,,, ಸುಮಾ ಎಂದಿರಬೇಕು. “
“ಪಪ್ಪನಿಗೇಕೆ ಅವರ ಮೇಲೆ ಸಿಟ್ಟು?”
ಅಮ್ಮ ನಗುತ್ತಾರೆ. “ಬಾವನ ಮೇಲಿನ ಸಿಟ್ಟು ತಂಗಿಯ ಮೇಲೆ ತೋರಿಸುತ್ತಾರೆ. ಅವರ ಬಾವ ಸತ್ತಾಗಲೂ ಇವರು ಅಲ್ಲಿಗೆ ಹೋಗಲಿಲ್ಲ. ಎಂತಹ ಕೋಪವೋ ಇವರಿಗೆ….”
“ಅಮ್ಮಾ, ಮೀನು ತಂದಿದ್ದೇನೆ.”
ಅಪ್ಪನ ಜೊತೆ ಪಡ್ಡಾಯಿಗೆ ಹೋದ ಆಳು ರಾತ್ರಿಯ ಊಟಕ್ಕೆ ಮೀನು ತಂದಿರಬೇಕು. ಇನ್ನು ಅಮ್ಮನಿಗೆ ಕೈ ತುಂಬಾ ಕೆಲಸ. ಪಪ್ಪ ರಾತ್ರಿ ಮನೆಗೆ ಬಂದಾಗ, ಅವರಿಗೆ ಊಟಕ್ಕೆ ಎಲ್ಲಾ ತಯಾರಿರಬೇಕು.
*
ಮರುದಿನ ಕಾಲೇಜಿನಲ್ಲಿ ನಾನು ಮುಂದಿನ ಬೆಂಚಿನಲ್ಲಿ ಕುಳಿತಿದ್ದೆ. ಮುಂದಿನ ಎರಡು ಸಾಲು ಬೆಂಚು ಹುಡುಗಿಯರಿಗಾಗಿ ಮೀಸಲು. ಆನಂದ ಒಳಗೆ ಬಂದವನೇ ಎಲ್ಲರ ಎದುರಿಗೆ ನನ್ನ ಕೈಗೆ ಒಂದು ಬುತ್ತಿ ಕೊಡುತ್ತಾ, “ಅಮ್ಮ ನಿನಗೆ ಕೊಟ್ಟದ್ದು” ಅನ್ನುತ್ತಾನೆ. ಎಲ್ಲರ ಮುಂದೆ ಕೊಟ್ಟಿದ್ದರಿಂದ ನನಗೆ ನಾಚಿಗೆ ಆಯಿತು. ನನ್ನ ಪಕ್ಕದಲ್ಲಿ ಕುಳಿತವಳು ಮೆಲ್ಲನೆ ನನಗೆ ಚಿವುಟುತ್ತಾಳೆ. “ನೀನು ಲಕ್ಕಿ ಕಣೇ. ಸೊಸೆಗೆ ಅತ್ತೆಯ ಗಿಫ್ಟ್, ಮದುವೆಗೆ ವರದಕ್ಷಿಣೆಯ ಖರ್ಚಿಲ್ಲ.”
ಮಧ್ಯಾಹ್ನ ಆನಂದ ನನ್ನ ಬಳಿ ಬರುತ್ತಾನೆ. “ಅಮ್ಮನಿಗೆ ನಿನ್ನ ಹೆಸರು ಸಹ ಜ್ಞಾಪಕ ಇದೆ. ಆಕೆಗೆ ನೀನು ನನ್ನ ಕ್ಲಾಸ್ ಮೇಟ್ ಎಂದು ಕೇಳಿ ಬಹಳ ಖುಷಿಯಾಯಿತು. ಅತ್ತೆ ಹೇಗಿದ್ದಾರೆ? ಮಾವನಿಗೆ ನಮ್ಮ ಮೆಲಿನ ಸಿಟ್ಟು ಕಡಿಮೆ ಆಗಿದೆಯೇ, ಇನ್ನೂ ಹಾಗೆ ಇದೆಯೇ?”
“ಜಲಜತ್ತೆ ಹೇಗಿದ್ದಾರೆ? ಸುಮಾ ಹೇಗಿದ್ದಾಳೆ? ಏನು ಮಾಡುತ್ತಾಳೆ?”
“ಅತ್ತೆಗೆ ಸುಮಾಳ ಹೆಸರೂ ನೆನಪಿದೆಯೇ? ವ್ಹಾ… ಆಕೆ ಈ ವರ್ಷ ಹತ್ತನೆಯ ಕ್ಲಾಸ್. ಅಮ್ಮ ರಾತ್ರಿ ನಿನಗಾಗಿ ಸಿಹಿ ತಿಂಡಿ ಮಾಡಿದ್ದು. ಅದನ್ನು ತಿಂದು, ಬುತ್ತಿ ಪಾತ್ರೆ ಹಿಂದೆ ಕೊಡು.”
ಹೀಗೇ ನಮ್ಮ ಪರಿಚಯ, ಗೆಳೆತನ ಸಾಗಿತ್ತು.
ಮಧ್ಯಾಹ್ನ ಕ್ಲಾಸಿಗೆ ಬಂದರೆ ಯಾರೋ ಬೋರ್ಡಿನಲ್ಲಿ ದೊಡ್ಡದಾಗಿ, “ಆನಂದ – ರಶ್ಮಿ” ಎಂದು ಬರೆದಿದ್ದರು. ಆನಂದ ಕುಂಟುತ್ತಾ ಹೋಗಿ ಅದನ್ನು ಒರೆಸುತ್ತಾನೆ.

*

ಒಂದು ಸೋಮವಾರ ಕಾಲೇಜಿಗೆ ಹೋಗಿದ್ದಾಗ, ಹಿಂದಿನ ದಿನ ಯಾರೋ ನಮ್ಮ ಸೀನಿಯರ್ ಹುಡುಗ ಸತ್ತನೆಂದು ರಜಾ ಘೋಷಿಸಿದ್ದರು. ಆನಂದ ಪಡುಬಿದ್ರಿಗೆ ಬಾ ಅಂದ. ನನಗೆ ಅಪ್ಪನ ಭಯ.
“ನಿನ್ನ ಅಪ್ಪನಿಗೆ ಇವತ್ತು ರಜಾ ಎಂದು ಗೊತ್ತಿಲ್ಲ. ಅಮ್ಮನೂ ನಿನ್ನನ್ನು ನೋಡಿದಂತಾಗುತ್ತದೆ. ಬಾ…” ಎಂದು ತನ್ನ ಮನೆಗೆ ಕರೆದುಕೊಂಡು ಹೋಗಿದ್ದ.
ಜಲಜತ್ತೆ ನನ್ನನ್ನು ಕಂಡು ಬಹಳ ಖುಷಿ ಪಟ್ಟರು. ಸುಮಾ ಶಾಲೆಗೆ ಹೋಗಿದ್ದಳು. ಅಮ್ಮನ ಬಗ್ಗೆ, ಅಪ್ಪನ ಬಗ್ಗೆ ವಿಚಾರಿಸಿದರು. ಅವರ ಬಾಲ್ಯದ ಬಗ್ಗೆ ಹೇಳಿದರು.
ಅಪ್ಪನಿಗೆ ಅತ್ತೆಯ ಮೇಲೆ ಎಷ್ಟೇ ಸಿಟ್ಟಿದ್ದರೂ ಅತ್ತೆ ಅವರ ವಿರುದ್ಧ ಏನೂ ಹೇಳಲಿಲ್ಲ. ಒಂದು ಮಾತು ಹೇಳಿದರು, ಆಸ್ತಿ ಪಾಲಾಗುವಾಗ ಅತ್ತೆಯ ಗಂಡ ಅಗತ್ಯ ಇಲ್ಲದ ಏನೋ ತಮಾಶೆ ಮಾತನಾಡಿದರಂತೆ. ಸಿಟ್ಟಿನ ಪ್ರತಿರೂಪದ ಅಪ್ಪ ಅದನ್ನು ಗಂಭೀರವಾಗಿ ತೆಗೆದುಕೊಂಡು, ಅವರೆಲ್ಲರ ಜೊತೆ ಮಾತು ಬಿಟ್ಟರಂತೆ. ಅಪ್ಪ ಚಿಕ್ಕಂದಿನಿಂದಲೂ ಬಹಳ ಸಿಟ್ಟಿನ ಮನುಷ್ಯನಂತೆ. ‘ಆದರೆ ಆತನ ಮನಸ್ಸು ಒಳ್ಳೆಯದು’ ಅಂದರು.
ಸಾಯಂಕಾಲ, ದಿನದಂತೆ ಕಾಲೇಜಿನಿಂದ ಮನೆ ಮುಟ್ಟುವ ಸಮಯಕ್ಕೇ ಮನೆಗೆ ಹೋದೆ. ಅಪ್ಪ ಮನೆಯಲ್ಲೇ ಇದ್ದರು.
“ಎಲ್ಲಿಗೆ ಹೋಗಿದ್ದೆ? ಇವತ್ತು ರಜಾ ಇತ್ತಲ್ಲವೇ?”
“ಪಡುಬಿದ್ರಿಗೆ ಹೋಗಿದ್ದೆ.”
ಎಲ್ಲಾ ಕೆಲಸದ ಆಳುಗಳ ಮುಂದೆಯೇ ಅಪ್ಪ ನನ್ನ ಮುಸುಡಿಗೆ ಹೊಡೆದರು. ತುಟಿಗೆ ಹಲ್ಲು ತಾಗಿ ರಕ್ತ ಬಂತು. ನೋವು, ಅಪಮಾನದಿಂದ ನಾನು ಅಲ್ಲಿಂದ ಓಡಿ ಹೋದೆ. ಅಪ್ಪನ ಬೈಗುಳು ನಡೆಯುತ್ತಲೇ ಇತ್ತು.
ಅಮ್ಮ, ಪ್ರಾಯಶಃ ಮೊದಲ ಬಾರಿಗೆ, “ಏನು ನಿಮಗೆ ಪ್ರಾಯಕ್ಕೆ ಬಂದ ಹುಡುಗಿಗೆ ಹೊಡೆಯಲು ನಾಚಿಗೆ ಆಗುವುದಿಲ್ಲವೇ? ಅವಳು ಹೋದದ್ದು ನಿಮ್ಮ ತಂಗಿಯ ಮನೆಗೆ. ಅಲ್ಲಿಗೆ ಹೋದರೆ ಏನಾಯಿತು? ಅದು ನಿಮ್ಮದೇ ಮನೆ. ಪಾಪ ಅವಳಿಗೆ ಹೊಡೆಯಲು ನಿಮಗೆ ಕೈಯಾದರೂ ಹೇಗೆ ಬಂತು…” ಅಮ್ಮನ ವಟ ವಟ ಎಲ್ಲರ ಮುಂದೆ ನಡೆದೇ ಇತ್ತು.
ಎರಡು ದಿನ ನಾನು ಕಾಲೇಜಿಗೆ ಹೋಗಲೇ ಇಲ್ಲ, ತುಟಿ ಬಾತು ಕೊಂಡಿತ್ತು.
*
ನನ್ನ ಮತ್ತು ಆನಂದನ ಓದು ಮುಗಿದು ಎರಡು ವರ್ಷವಾಗಿತ್ತು. ಆನಂದ ಎಲ್ಲೂ ಕೆಲಸಕ್ಕೆ ಸೇರಿರಲಿಲ್ಲ. ಆತನಿಗೆ ಕೆಲಸ ಸಿಗುವುದು ಕಷ್ಟದ ವಿಷಯವಾಗಿರಲಿಲ್ಲ. ತುಂಬಾ ಅಂಕಗಳಿಸಿ, ಕಾಲೇಜಿಗೆ ಮೊದಲಿಗನಾಗಿ ಪಾಸಾಗಿದ್ದ. ಬೇಸಾಯ ನೋಡಿಕೊಳ್ಳುವುದಾಗಿ ನಿರ್ಧರಿಸಿದ್ದ.

ಒಂದು ದಿನ ಅಕಸ್ಮತ್ತಾಗಿ ಜಲಜತ್ತೆ ಒಬ್ಬರೇ ರಿಕ್ಷಾದಲ್ಲಿ ಮನೆಗೆ ಬಂದರು. ಅಪ್ಪ ಮನೆಯಲ್ಲಿ ಇರಲಿಲ್ಲ. ದಿನದಂತೆ ಬೆಳಿಗ್ಗೆ ಪಡ್ಡಾಯಿಗೆ ಹೋಗಿದ್ದರು. ಅಮ್ಮನಿಗೆ ಆಶ್ಚರ್ಯ ಮತ್ತು ಸಂತೋಷ. ಅವರಿಬ್ಬರೂ ಅಡುಗೆ ಮನೆಯಲ್ಲಿ ಕುಳಿತು ಹಿಂದಿನ ದಿನಗಳನ್ನು ಜ್ಞಾಪಿಸಿಕೊಳ್ಳುತ್ತಿದ್ದರು. ನೆನಪಿದೆ, ಅಂದು ಶುಕ್ರವಾರ. ಹಾಗಾಗಿ ಅತ್ತೆ ಅಮ್ಮನಿಗೆ ಕೋಳಿ ಪಲ್ಯ ಮಾಡಲು ಬಿಡಲಿಲ್ಲ.
“ನಾನೊಂದು ಒಳ್ಳೆಯ ಕೆಲಸದ ಮೇಲೆ ಬಂದಿದ್ದೇನೆ. ಹಾಗಾಗಿ ಇವತ್ತು ಬಂದದ್ದು. ಶುಕ್ರವಾರ ಲಕ್ಷ್ಮಿಯ ದಿನ. ನನ್ನ ಮನೆಗೆ ರಶ್ಮಿ ಲಕ್ಷ್ಮಿಯಾಗಿ ಮನೆಗೆ ಬರಲಿ ಎಂದು ಅಣ್ಣನೊಡನೆ ಮಾತನಾಡಲು ಬಂದದ್ದು” ಅಂದರು ಅತ್ತೆ.
ಆನಂದ ನನಗೆ ಒಳ್ಲೆಯ ಗೆಳೆಯನಾಗಿದ್ದ ನಿಜ. ಆತನನ್ನು ನನ್ನ ಜೀವನದ ಸಂಗಾತಿಯಾಗಿ ಯೋಚಿಸಿರಲೇ ಇಲ್ಲ. ಒಮ್ಮೆಲೇ ಮಧುರ ಭಾವನೆಗಳು. ಹೌದು, ಒಳ್ಳೆಯ ಜೋಡಿಯಾಗಬಹುದು ನಾವು. ಆತನೊಡನಾಟ ಎಲ್ಲಾ ನೆನಪಾಯಿತು. ಆತ ನನ್ನನ್ನು ಪ್ರೀತಿಸುತ್ತಿದ್ದನೆ? ನನಗೆ ಗೊತ್ತಾಗಲೇ ಇಲ್ಲ. ಅಥವಾ ಅತ್ತೆಯ ಗ್ರಹಿಕೆಯೇ?
ಅತ್ತೆಯಂತೂ ನನ್ನಲ್ಲೊಂದು ಪ್ರೇಮದ ಕಿಡಿ ಹೊತ್ತಿಸಿದರು. ಅಡುಗೆ ಕೋಣೆಯಿಂದ ಪಾಯಸ ಮಾಡುವ ಪರಿಮಳ ಹಿತವಾಗಿ ಮೂಗಿಗೆ ಬಡಿಯಿತು.
ಅಪ್ಪ ಬಂದರು. ಅತ್ತೆಯನ್ನು ನೋಡಿದರು. ಮಾತನಾಡಲಿಲ್ಲ.
“ಅಣ್ಣಾ, ಹೇಗಿದ್ದೀಯಾ?”
“,,,,,,”
“ನನ್ನ ಮೇಲೂ ನಿನಗೆ ಸಿಟ್ಟೆ? ನಾನೇನು ತಪ್ಪು ಮಾಡಿದ್ದೇನೆಂದು ನಿನಗೆ ನನ್ನ ಮೇಲೆ ಸಿಟ್ಟು.”
“ನಿನ್ನ ಮೇಲಲ್ಲ, ಆ ನಿನ್ನ ಗಂಡ…..” ಅಪ್ಪ ಏನೋ ಕೆಟ್ಟ ಶಬ್ದ ಹೇಳುವವರಿದ್ದರು.
ಅಮ್ಮ, “ಸತ್ತವರನ್ನು ಯಾಕೆ ಬೈಯುತ್ತೀರಿ? ನಿಮ್ಮ ತಂಗಿ ಮನೆಗೆ ಬಂದಿದ್ದಾಳೆ. ಸ್ವಲ್ಪ ಚೆನ್ನಾಗಿ ಆಕೆಯೊಡನೆ ಮಾತನಾಡಿ.”
“ನನ್ನ ತಂಗಿ ಬಹಳ ಹಿಂದೆ ಸತ್ತು ಹೋಗಿದ್ದಾಳೆ.”
“ಶೀ, ಏನು ಮಾತನಾಡುತ್ತೀರಿ ನೀವು?”
“ಏನಣ್ಣ, ನಿನ್ನ ಮತ್ತು ನಿನ್ನ ಬಾವನದ್ದು ಏನೋ ತಪ್ಪು ತಿಳುವಳಿಕೆ. ಅವರೆಷ್ಟು ಈ ಬಗ್ಗೆ ನೊಂದುಕೊಂಡಿದ್ದರು. ನಿನ್ನ ಸಿಟ್ಟಿನ ಪರಿಚಯ ಇದ್ದ ಅವರು ನಿನ್ನ ಹತ್ತಿರ ಬರಲಿಲ್ಲ. ಅವರು ತಮಾಶೆಗೆ ಹೇಳಿದ್ದ ಮಾತನ್ನು ನೀನು ಬಹಳ ಗಂಭೀರವಾಗಿ ತೆಗೆದುಕೊಂಡಿ. ಅವರು ನಿನಗೆ ಮೋಸ ಮಾಡಲಿಲ್ಲ ತಾನೆ?”
“ಮಾತು ಸಾಕು. ಬಂದಿದ್ದಿಯಲ್ಲ, ಸೀತನ ಜೊತೆ ಲಲ್ಲೆ ಹೊಡೆದು ಹೋಗು.”
ಊಟದ ನಂತರ ಅಮ್ಮ, “ಜಲಜಕ್ಕ ಒಂದು ಒಳ್ಳೆಯ ಕೆಲಸದ ಮೇಲೆ ಬಂದಿದ್ದಾರೆ.”
“ಅದಕ್ಕೂ ನನಗೂ ಸಂಬಧ ಇಲ್ಲ.”
“ಹಾಗಲ್ಲ. ನಮ್ಮ ರಶ್ಮಿಯನ್ನು ಅವರ ಸೊಸೆಯಾಗಿ ಮಾಡಿಕೊಳ್ಳುತ್ತಾರಂತೆ.”
“ಸಾಧ್ಯವೇ ಇಲ್ಲ. ಆ ಕುಂಟನಿಗೆ ನನ್ನ ಮಗಳನ್ನು ಕೊಡುವುದೇ? ಅದಕ್ಕಿಂತ ಆಕೆಯನ್ನು ಯಾವುದಾದರೂ ಬಾವಿಗೆ ತಳ್ಳುವುದು ಒಳ್ಳೆಯದು.”
“ಏನು ಮಾತನಾಡುತ್ತೀರಿ ನೀವು?”
“ಅಣ್ಣ, ಹಿಂದಿನದೆಲ್ಲಾ ಮರೆತು ನಾವು ಒಂದಾಗೋಣ. ಯಾಕೆ ಕಾರಣ ಇಲ್ಲದ ದ್ವೇಷ? ನನ್ನ ಮಗನ ಕಾಲಿನಲ್ಲಿ ಊನ ಇರಬಹುದು, ಕುಂಟನಲ್ಲ. ಅವನಿಗೆ ಯಾವ ಕೆಟ್ಟ ಅಭ್ಯಾಸವೂ ಇಲ್ಲ. ಬೇಸಾಯ ನೋಡಿಕೊಂಡು ಇದ್ದಾನೆ. ಬೇಸಾಯದಲ್ಲಿ ಹೊಸ ಹೊಸ ಪ್ರಯೋಗ ಮಾಡುತ್ತಾನೆ. ರಶ್ಮಿ ಏನೂ ನಮಗೆ ಹೊರಗಿನವಳಲ್ಲ……”
“ನಾನು ಒಮ್ಮೆ ಹೇಳಿದರೆ ಮುಗಿಯಿತು. ಈ ಮದುವೆ ನಾನು ಬದುಕಿರುವವರೆಗೆ ಸಾಧ್ಯವಿಲ್ಲ. ಇನ್ನು ನೀನು ನಿನ್ನ ಮನೆಗೆ ಹೋಗು, ನನ್ನ ತಲೆ ಹಾಳು ಮಾಡಬೇಡ. “
ಅತ್ತೆಯ ಮುಖ ಸಪ್ಪಗಾಯಿತು. ಅಮ್ಮನ ಮತ್ತು ಅತ್ತೆಯ ಕಣ್ಣಲ್ಲಿ ನೀರು. ನನ್ನ ಹೊಸ ಕನಸು ಒಡೆದ ಪುಗ್ಗದಂತೆ ಠುಸ್ಸೆಂದಿತು.
*
ಒಳ್ಳೆಯ ಮನೆತನ ,ಒಳ್ಳೆಯ ಹುಡುಗ, ಇಂಜನಿಯರ್, ಪಣಂಬೂರಿನಲ್ಲಿ ಕೆಲಸ, ಹತ್ತಿರವೇ ಇರುತ್ತಾರೆ ಎಂದು ಅಪ್ಪ ನನ್ನನ್ನು ಹಾಗೂ ಅಮ್ಮನನ್ನು ಒಂದೂ ಮಾತು ಕೇಳದೆಯೇ ಆತನ ಜೊತೆಗೆ ನನ್ನ ಮದುವೆ ಮಾಡಿದರು. ಈ ಗಂಡಸರಿಗೆ ನಾವು ಹೆಂಗಸರೆಂದರೆ ಕಾಲಿನ ಕಸಕ್ಕೆ ಸಮಾನ. ಬಾಯಿ ಮುಚ್ಚಿಕೊಂಡು ಯಾಂತ್ರಿಕವಾಗಿ ನಾನು ಆತನ ಕೈ ಹಿಡಿದೆ.
ಆತ ಒಳ್ಳೆಯವನೇ. ನಾನೊಂದು ಯಂತ್ರವಾದೆ ಅಷ್ಟೇ.
*

ಅಪ್ಪ ಬಹಳ ನೊಂದು ಕೊಳ್ಳುತ್ತಿದ್ದಾರೆ. ಮೊದಲಿನ ಸಿಟ್ಟು ಕಾಣುತ್ತಿಲ್ಲ. ಅವರು ಒಬ್ಬರೇ ಇದ್ದಾಗ ಕಣ್ಣೀರು ಸುರಿಸುವುದು ನನಗೆ ಗೊತ್ತಾಗುತ್ತಿದೆ. ನನ್ನ ಜೀವನದ ಬಗ್ಗೆ ಪಶ್ಚತ್ತಾಪ ಪಡುತ್ತಿದ್ದಾರೆಂದು ನನಗೆ ಗೊತ್ತು.
ನನಗೆ ಮುಂದಿನ ಜೀವನದ ಬಗ್ಗೆ ಯಾವ ಹೆದರಿಕೆಯೂ ಇಲ್ಲ. ಕಲಿತಿದ್ದೇನೆ. ಎಲ್ಲಿಯಾದರೂ ಕೆಲಸ ಸಿಕ್ಕೀತು. ಅಪ್ಪ, ಅಮ್ಮನ ಆಸ್ತಿ ಬೇಕಾದಷ್ಟಿದೆ. ಕೆಲಸ ಮಾಡುವ ಅಗತ್ಯವೂ ಇಲ್ಲ. ಬೇಸಾಯ ಮಾಡಿಸಿಕೊಂಡು, ತೋಟದ ಕೆಲಸ ಆಳುಗಳಿಂದ ಮಾಡಿಸಿಕೊಂಡು ಆರಾಮವಾಗಿ ಜೀವಿಸ ಬಹುದು.
ಇನ್ನು ನಾನು ಒಂಟಿ ಎಂದು ನನಗೆ ಅನಿಸುವುದೇ ಇಲ್ಲ. ಮದುವೆ ಆಗಿದ್ದರೂ ನಾನು ಒಂಟಿಯಾಗಿದ್ದೆ. ನನ್ನ ಗಂಡ ಅನಿಸಿಕೊಂಡಿದ್ದವರು ಒಳ್ಳೆಯವರಾಗಿದ್ದರೂ ನಾನು ಅವರೊಡನೆ ಕೂಡಿದ್ದು ದೈಹಿಕವಾಗಿ ಮಾತ್ರ. ಅದೂ ನನಗಾಗಿ ಅಲ್ಲ, ಗಂಡನಿಗಾಗಿ. ಅದೂ ಬರೇ ಆರು ತಿಂಗಳು ಮಾತ್ರ. ಅದೃಷ್ಟವಶಾತ್ ಮಕ್ಕಳಾಗುವ ಯಾವ ಸೂಚನೆಯೂ ಕಾಣಲಿಲ್ಲ. ಅವರು ನನ್ನನ್ನು ಖುಷಿಯಾಗಿ ಇಡಲು ಬಹಳ ಕಷ್ಟ ಪಟ್ಟರು. ನನ್ನ ಆನಂದನ ಪ್ರೀತಿ ಅವರಿಗೆ ಗೊತ್ತಿರಲಿಲ್ಲ, ಗೊತ್ತಾಗಲೂ ಇಲ್ಲ. ಅವರೊಡನೆ ತಿರುಗಾಡಲು ಹೋದಾಗ, ಮಲಗಿದಾಗ ನನ್ನ ಮನಸ್ಸಿನಲ್ಲಿ ಇದ್ದುದು ಆನಂದ, ಅವರಲ್ಲ. ಒಂದು ವಿಧದಲ್ಲಿ ನಾನೇ ಅವರಿಗೆ ಮೋಸ ಮಾಡಿದ್ದು.
ಅಪ್ಪ, ತನ್ನ ತಪ್ಪಿಗೆ ಪಶ್ಚತ್ತಾಪ ಪಡುತ್ತಿರಬಹುದು. ತನ್ನ ನಿರ್ಣಯ, ತನ್ನ ಸಿಟ್ಟು, ತನ್ನ ಜಿದ್ದು, ತನ್ನ ಅಹಂ ತಪ್ಪಾಯಿತು ಅಂದು ಅವರಿಗೆ ಅನಿಸುತ್ತಿರಬಹುದು.
*

ತ್ರಿವೇಣಿಯವರ “ಹಣ್ಣೆಲೆ ಚಿಗುರಿದಾಗ” ಓದುತ್ತಿದ್ದೇನೆ. ಅಮ್ಮ ಅಡುಗೆಮನೆಯಲ್ಲಿ ಕುಳಿತು, ಆಗಾಗ ಸುರ್ರ್ ಸುರ್ರ್ ಅನ್ನುತ್ತಾ ಮೂಗು ಒರೆಸುತ್ತಾ ಅಳುತ್ತಿದ್ದಾಳೆ. ಅಪ್ಪ ಚಾವಡಿಯಲ್ಲಿ ಕುಳಿತು ಉದಯವಾಣಿ ಓದುತ್ತಿದ್ದಾರೆ. ಅವರು ಅದನ್ನು ಓದುತ್ತಿಲ್ಲ ಎಂದು ನನಗೆ ಚೆನ್ನಾಗಿ ಗೊತ್ತು. ಕಣ್ಣು ಮಾತ್ರ ಪತ್ರಿಕೆಯ ಮೇಲೆ ನೆಟ್ಟಿದೆ. ಮನಸ್ಸು ಎಲ್ಲೆಲ್ಲೋ ಓಡುತ್ತಿದೆಯೆಂದು ನನಗೆ ಅರ್ಥವಾಗುತ್ತದೆ.
ಇವತ್ತಿಗೆ ನನ್ನ ಗಂಡ ಸತ್ತು ಒಂದು ವರ್ಷವಾಯಿತು. ನನಗೆ ಏನೂ ಅನಿಸುತ್ತಿಲ್ಲ.
ಈ ಒಂದು ವರ್ಷದಲ್ಲಿ ಅಪ್ಪ ಮುದುಕನಾಗಿ ಬಿಟ್ಟರು. ಹತ್ತು ವರ್ಷ ಒಮ್ಮೆಲೇ ಹೆಚ್ಚಾದಂತೆ ಕಾಣುತ್ತಾರೆ. ಯಾಕೆ ನನ್ನ ಬಗ್ಗೆ ಇಷ್ಟೊಂದು ತಲೆ ಬಿಸಿ ಮಾಡಿಕೊಳ್ಳಬೇಕೆಂದು ಅರ್ಥವಾಗುತ್ತಿಲ್ಲ. ನನಗೆ ನನ್ನ ಜೀವನದ ಬಗ್ಗೆ ವಿಶ್ವಾಸ ಇದೆ. ಅಪ್ಪನೊಡನೆ ಹೀಗೆ ಮಾತನಾಡಲು, ಮೊದಲಿನಿಂದಲೂ ನನಗೆ ಹೆಚ್ಚು ಸಲುಗೆ ಇಲ್ಲ. ಅವರೆಂದರೆ ಒಂದು ರೀತಿಯ ಭಯ.
ಹೊರಗೆ ರಿಕ್ಷಾ ನಿಂತ ಸದ್ದು. ಅಂದು ಬಂದು ಹೋಗಿದ್ದ ಜಲಜತ್ತೆ ಇಂದು ಪುನಃ ಬಂದಿದ್ದಾರೆ. ಆನಂದನಿಗೆ ಮದುವೆ ಇರಬಹುದೇ. ಹೊರಗೆ ಬಂದು ನಗುತ್ತೇನೆ. ಅವರು ನನ್ನನ್ನು ನೋಡಿ ಒಂದು ಒಣ ನಗೆ ಬೀರುತ್ತಾರೆ. ಮುಖದಲ್ಲಿ ನೋವು. ಅವರ ಕೈಯಲ್ಲಿ ಲಗ್ನ ಪತ್ರಿಕೆ ಕಾಣುವುದಿಲ್ಲ.
ಅಪ್ಪ, “ಬಾ ಜಲಜ. ಹೇಗಿದ್ದೀಯಾ?” ಅನ್ನುತ್ತಾರೆ ಸೋತ ಮುಖದಲ್ಲಿ.
“ಅಣ್ಣ, ನೀನು ಹೇಗಿದ್ದೀಯಾ? ಏನಾಗಿದೆ ನಿನಗೆ? ಒಮ್ಮೆಲೇ ಮುದುಕನಾಗಿದ್ದೀಯಾ?”
ಅಪ್ಪ ಮಾತನಾಡುವುದಿಲ್ಲ.
ಮುಖ ತಿರುಗಿಸಿ ಕಣ್ಣೀರು ಒರೆಸುತ್ತಾರೆ.
“ನಾನು ಪಡ್ಡಾಯಿಗೆ ಹೋಗಿ ಬರುತ್ತೇನೆ. ನಾನು ಬರುವ ವರೆಗೆ ನಿಲ್ಲು, ಹೋಗಬೇಡ.” ಎಂದು ದುಡು ದುಡನೇ ಹೊರಗೆ ನಡೆಯುತ್ತಾರೆ.
ಅಮ್ಮ ಅತ್ತೆಯನ್ನು ಅಡುಗೆ ಮನೆಗೆ ಕರೆದುಕೊಂಡು ಹೋಗುತ್ತಾರೆ. ಇಬ್ಬರೂ ಮುಸಿ ಮುಸಿ ಅಳುವುದು ನನಗೆ ಗೊತ್ತಾಗುತ್ತದೆ. ಇನ್ನು ನನ್ನನ್ನು ಕನಿಕರದಿಂದ ನೋಡುತ್ತಾರೆ. ನಾನೂ ಅಳುವಂತೆ ಮಾಡಬಹುದು.
“ಅತ್ತೆ, ನಾನು ಸ್ವಲ್ಪ ಹೊರಗೆ ಹೋಗಿ ಬರುತ್ತೇನೆ. ಅಮ್ಮಾ, ನಾನು ನದಿಯ ಬದಿಗೆ ಹೋಗಿ ಬರುತ್ತೇನೆ. ಹಾಗೆಯೇ ತೋಟಕ್ಕೆ ಒಂದು ಸುತ್ತು ಹಾಕಿ ಬರುತ್ತೇನೆ. ಇವತ್ತು ಸಾಯಂಕಾಲ ತೆಂಗಿನ ಗಿಡಗಳಿಗೆ ನೀರು ಬಿಡಬೇಕಲ್ಲವೇ”
“ಬೇಗ ಬಾ.”
ಉತ್ತರಿಸದೆ ಹೊರ ನಡೆಯುತ್ತೇನೆ.
ನದಿಯ ಬಳಿ ಕುಳಿತು, ನೀರಿಗೆ ಕಲ್ಲು ಬಿಸಾಡುತ್ತಿದ್ದೇನೆ. ತಲೆಯಲ್ಲಿ ನೂರಾರು ಯೋಚನೆಗಳು, ಒಂದಕ್ಕೊಂದು ಸಂಬಂಧವಿಲ್ಲದ ಯೋಚನೆಗಳು.
“ಬೊಂಡ ಪರ್ಲೆ” ಅನ್ನುತ್ತಾ ಮುದುಕ ತನಿಯ ಎಳನೀರು ತರುತ್ತಾನೆ. ನದಿಯ ದಡದಲ್ಲಿ ಅವನ ಮನೆ. ಬೊಂಡ ಕುಡಿದು, “ತನಿಯಾ, ನಿಮಗೆ ನೂರು ವರ್ಷ ಆಯಿತೇ?” ಎಂದಿನಂತೆ ತಮಾಶೆ ಮಾಡುತ್ತೇನೆ.
“ಇಲ್ಲಮ್ಮ, ನಲ್ವತ್ತು ಆಗಿರಬಹುದು. ನಿಮ್ಮ ಪಪ್ಪನಿಗಿಂತ ಸ್ವಲ್ಪ ದೊಡ್ಡವನು ನಾನು.” ಅದೇ ಉತ್ತರ.
ಪುಣ್ಯಕ್ಕೆ ಪಪ್ಪನಿಗಿಂತ ಸಣ್ಣವನು ಅನ್ನಲಿಲ್ಲ. ಎಪ್ಪತ್ತು ವರ್ಷ ದಾಟಿದ್ದರೂ ಗಟ್ಟಿ ಮುಟ್ಟಾಗಿ ಇದ್ದಾನೆ ತನಿಯ. ಈಗಲೂ ತೆಂಗಿನ ಮರ ಸರ ಸರನೇ ಏರುತ್ತಾನೆ.
“ಒಂದು ಮಾತು ಹೇಳುತ್ತೇನೆ. ತಪ್ಪು ತಿಳಿಯ ಬಾರದು. ವಯಸ್ಸಿನಲ್ಲಿ ನಿಮಗಿಂತ ದೊಡ್ಡವನು ನಾನು.”
“ಹೇಳಿ.”
“ನೀವು ಇನ್ನೊಂದು ಮದುವೆ ಆಗಬಹುದಲ್ಲವೇ ಹಿಂದೆ ನಿಮ್ಮ ಜಾತಿಯಲ್ಲಿ ಹೆಂಗಸರು ಎರಡನೆಯ ಮದುವೆ ಆಗುತ್ತಿದ್ದರು.”
ಸುಮ್ಮನೆ ನಕ್ಕು ಅಲ್ಲಿಂದ ಹೊರಡುತ್ತೇನೆ.
“ನಾನು ಹಾಗೆ ಹೇಳಿದೆ ಎಂದು ಬೇಸರ ಮಾಡಿಕೊಳ್ಳಬೇಡಿ. ನಿಮ್ಮನ್ನು ನೋಡುವಾಗ ನನ್ನ ಕರುಳನ್ನು ಯಾರೋ ಹಿಚುಕಿದಂತೆ ಆಗುತ್ತದೆ” ಅನ್ನುತ್ತಾನೆ ತುಳುವಿನಲ್ಲಿ.
ನನಗೆ ಇಂತಹ ಕನಿಕರ ಬೇಡ. ಮನೆಗೆ ಹೋದರೆ, ನನ್ನನ್ನು ನೋಡಿ ಕಣ್ಣೀರು ಸುರಿಸುವ ಅಮ್ಮ, ಪಾಪ ಪ್ರಜ್ಞೆಯಿಂದ ನೊಂದು ಕೊಳ್ಳುವ ಅಪ್ಪ.
ಮನೆಗೆ ಬಂದೆ. ಅಮ್ಮನ ಮುಖದಲ್ಲಿ ಪ್ರಸನ್ನತೆ ಕಾಣುತ್ತಿದೆ. ಒಂದು ವರ್ಷದಿಂದ ಕಾಣದಂತಹ ಬದಲಾವಣೆ. ಅತ್ತೆ ಬಂದುದರಿಂದ ಹೀಗೆ ಆಗಿರಬಹುದು.
ಅಪ್ಪ ಪಡ್ಡಾಯಿಯಿಂದ ಬೇಗನೆ ಬಂದರು. ಅಮ್ಮ ಅವರಿಗೆ ಊಟಕ್ಕೆ ಬಡಿಸಿದರು. ಕೋಳಿ ಪಲ್ಯ, ಪಾಯಸ. ಈ ಔತಣ ನೋಡಿ ನನಗೆ ಸ್ವಲ್ಪ ಆಶ್ಚರ್ಯ ಆಗುತ್ತದೆ.
“ಜಲಜನಿಗೂ ಬಡಿಸು. ಇವತ್ತು ನಾವು ಒಟ್ಟಿಗೆ ಉಣ್ಣುತ್ತೇವೆ.” ಅಮ್ಮನ ಕೈಯಲ್ಲಿದ್ದ ನೀರಿನ ಲೋಟ ಕೆಳಗೆ ಜಾರುತ್ತದೆ.
ಎಂದಿನಂತೆ, “ಕೈಯಲ್ಲಿ ಬಲವಿಲ್ಲವೇ ನಿನಗೆ?” ಎಂದು ಅಪ್ಪ ಬೈಯುವುದಿಲ್ಲ.
ಅಮ್ಮನ ಕಣ್ಣಲ್ಲಿ ನೀರು, ಮುಖದಲ್ಲಿ ನಗು.
“ಜಲಜ ಹೇಗಿದ್ದೀಯಾ? ನಿನ್ನ ಮಕ್ಕಳು ಹೇಗಿದ್ದಾರೆ? ನಿನ್ನ ಮಗನಿಗೆ ನೆಂಟಸ್ತಿಕೆ ಇದೆಯೇ? ನಮ್ಮ ರಶ್ಮಿಗಿಂತ ಮೂರು ವರ್ಷ ದೊಡ್ಡವನಲ್ಲವೆ? ಈಗಲೇ ಮದುವೆ ಮಾಡು.”
“ಅವನ ನೆಂಟಸ್ತಿಕೆಯ ಬಗ್ಗೆ ಮಾತನಾಡಲೆಂದೇ ನಾನು ಇಲ್ಲಿಗೆ ಬಂದದ್ದು. ನನ್ನ ಖಾಸಾ ಅಣ್ಣ ತಮ್ಮಂದಿರು ಮುಂಬಾಯಿಯಲ್ಲಿ ಇದ್ದಾರೆ. ನೀನೇ ಹಿರಿಯ. ನೀನೇ ಮುಂದೆ ನಿಂತು ಈ ಮದುವೆ ನಡೆಸಿಕೊಡಬೇಕು, ಅಣ್ಣ.”
“ಹುಡುಗಿ ಎಲ್ಲಿಯದು?”
“ಮೊದಲು ಪಾಯಸ ಕುಡಿ, ಬಾಯಿ ಸಿಹಿ ಮಾಡಿಕೋ”
ಅಪ್ಪ ಮಂತ್ರಮುಗ್ದರಂತೆ ಪಾಯಸದ ಲೋಟ ಎತ್ತಿಕೊಳ್ಳುತ್ತಾರೆ.
ಇದು ನನ್ನ ಪಪ್ಪನೇ!
ಊಟ ಮುಗಿಯಿತು.
“ಈಗ ಹೇಳು, ಹುಡುಗಿ ಯಾರು? ನಿನ್ನ ಮಗ ಒಪ್ಪಿದ್ದಾನೆಯೇ?”
“ಹೌದು. ಆನಂದ ಒಪ್ಪಿದ್ದಾನೆ. ಆತನೆ ಆರಿಸಿದ ಹುಡುಗಿ.”
“ಯಾರವಳು?”
“ರಶ್ಮಿ.”
“ಏನೆಂದೆ? ಇದು ಸತ್ಯವೇ?”
ಮೌನ.
ಅಪ್ಪ ಹೆಗಲಲ್ಲಿ ಇದ್ದ ‘ಬೈರಾಸ’ನ್ನು ಮುಖಕ್ಕೆ ಹಿಡಿದು ಸದ್ದು ಮಾಡುತ್ತಾ ಮಕ್ಕಳಂತೆ ಗಳಗಳನೆ ಅಳುತ್ತಾರೆ. ಅತ್ತೆ ಅಪ್ಪನ ಬಳಿ ಹೋಗಿ ಅವರ ಬೆನ್ನು ಸವರುತ್ತಾರೆ.