ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ದೀಪಕ್ ‌ಬಗೈರ್ ಕೈಸೇ, ಪರವಾನೆ ಜಲ್ ರಹೀ ಹೈ…

ಮಂಜುಳಾ ಡಿ.
ಇತ್ತೀಚಿನ ಬರಹಗಳು: ಮಂಜುಳಾ ಡಿ. (ಎಲ್ಲವನ್ನು ಓದಿ)

ಜೀ ಮೆ ಆತಾ ಹೈ ತೇರೆ ದಾಮನ್ ಮೆ

ಸರ್ ಚುಪಾಕೆ ಹಮ್

ರೋತೆ ರಹೆ…ರೋತೆ ರಹೆ

ಆಂಧಿ ಸಿನೆಮಾದಲ್ಲಿ ಅಷ್ಟು ವರ್ಷಗಳ ಅಗಲಿಕೆಯ ನಂತರದ ಭೇಟಿಯ ಇಬ್ಬರ ವೇದನೆಯನ್ನು ಖುದ್ದು ಅನುಭವಿಸಿದ ಹಾಗೆ ಗಂಟಲಿನಲ್ಲಿ‌ ಪೇರಿಸಿ ಲತಾ ದೀದಿ ಹಾಡುತ್ತಿದ್ದರೆ ತುಸು ಮೋಡ ಕಟ್ಟಿದ ನಡು ರಾತ್ರಿಯ ಮೋಡದ ಮಧ್ಯದ ಚಂದ್ರನೂ ಆಲಿಸಲು ಕಾತರಿಸಿದಂತಿತ್ತು.

” ಲತಾ ದೀದಿ” ಈ ಹೆಸರು ಮೂಡಿಸುವ ತಂಪು ಮರ್ಮರ , ಸೋನೆಯೊಂದು ಮಣ್ಣಿಗೆರಚಿ ಮೂಡಿಸುವ ಕಂಪು.

ಪೆಹಲೆ ಭಿ ಯುಂ ತೋ ಬರಸೇ ಥೇ ಬಾದಲ್

ಪೆಹಲೇ ಭೀ ಯುಂ ತೋ ಭೀಗಾ ಥಾ ಆಚಲ್

ರಿಂ ಜಿಮ್ ಗಿರೇ ಸಾವನ್…

ಆಕೆಯ ಕಂಠ ಸಿರಿ ಹೊಮ್ಮಿಸಿದ ಹಾಡುಗಳಿಗೆ ಲೆಕ್ಕವೇ ಎಣೆಯೇ. ಲತಾ ದೀದಿಯ ಹಾಡುಗಳೊಂದಿಗೆ ಲೆಕ್ಕ ಹಾಕಿದರೆ ವರ್ಷಗಳಷ್ಟು ಸಮಯ ಕಳೆದಿದ್ದೇನೆ. ನನ್ನ ಎಲ್ಲದಕ್ಕೂ ಆಕೆಯ ಕಂಠ ಹಾಡುಗಳೇ ಜೊತೆ.

ಆಕೆಯ ಹಾಡುಗಳಷ್ಟೇ ಮಧುರ ಅದ್ಬುತ ಆಕೆಯ ವ್ಯಕ್ತಿತ್ವ ಮತ್ತು ಆಕೆಯ ವೈಯುಕ್ತಿಕ ಬದುಕು. ನಿಜಕ್ಕೂ ಲತಾ ದೀದಿ ಇನ್ನೂ ಹತ್ತಿರವಾದದ್ದು ನನ್ನ ಆಳಕ್ಕಿಳಿದಿದ್ದು ಆಕೆಯ ವ್ಯಕ್ತಿತ್ವ ಮತ್ತು ವೈಯುಕ್ತಿಕ ಬದುಕು ಒಂದು ಮುಖ್ಯ ಕಾರಣ.

ದೀನಾನಾಥ್ ಮಂಗೇಶ್ಕರ್ ಮತ್ತು ಶುಭಮತಿ ಇವರ ಹಿರಿಯ ಮಗಳಾಗಿ ಇಂದೋರ್ ನಲ್ಲಿ ಸೆಪ್ಟೆಂಬರ್ 28 1929 ರಂದು ಹುಟ್ಟಿದ ಲತಾ ದೀದಿಯ ಮೊದಲ ಹೆಸರು ‘ಹೇಮಾ’. ತಂದೆ ದೀನಾನಾಥ್ ಅವರ ನಾಟಕ ‘ಭಾವ ಬಂಧನ’ ದಲ್ಲಿನ ಮುಖ್ಯ ಪಾತ್ರ ‘ ಲತಿಕಾ’ ಆಧರಿಸಿ ಲತಾ ಎಂದು ಹೆಸರಿಡಲಾಗುತ್ತದೆ

ತನ್ನ ಐದನೇ ವಯಸಿಗೆ ತಂದೆಯ ಮರಾಠಿ ಸಂಗೀತ ನಾಟಕಗಳಲ್ಲಿ ಲತಾ ಅಭಿನಯ ಆರಂಭವಾಗುತ್ತದೆ. ಲಾತಾದೀದಿಯ ಹದಿಮೂರನೇ ವಯಸಿಗೇ ತಂದೆ ದೀನಾನಾಥ್ ತೀರಿಕೊಂಡಾಗ ಇಡೀ ಕುಟುಂಬ ಪೋಷಿಸುವ ಹೊಣೆ ಹದಿಮೂರರ ಬಾಲೆ ಲತಾ ಹೆಗಲಿಗೇರಿತ್ತು. ತಂದೆಯ ಸ್ನೇಹಿತ ವಿನಾಯಕ ದಾಮೋದರ್ ಅವರು ಲತಾ ಕುಟುಂಬಕ್ಕೆ ಸಹಾರೆಯಾದರು. 1942 ರಲ್ಲಿ ಮೊದಲ ಮಾರಾಠಿ ಸಿನೆಮಾದಲ್ಲಿ ಲತಾ ಹಾಡಿದರೂ ಆ ಹಾಡನ್ನು ತೆಗೆದುಹಾಕಲಾಗಿತ್ತು. 1943 ರಲ್ಲಿ ಮರಾಠಿ ಸಿನೆಮಾ ಹಾಡು ಲತಾ ಅವರ ಮೊದಲ ಹಾಡು ‘ ಮಾತಾ ಏಕ್ ಸಪೂತ್ ಕೆ ಬದಲ್ ದೇ ತೂ…’ 1945 ರಲ್ಲಿ ಇಡೀ ಕುಟುಂಬ ಮುಂಬೈಗೆ ಪಯಣಿಸಿತು. ಮೊದಲಿಗೆ ಧ್ವನಿ ತುಂಬಾ ತೆಳುವಾಗಿದೆ ಎಂಬ ಹಲವು ತಿರಸ್ಕರ ಎದುರಿಸಿದ ಲತಾಳಿಗೆ ಬೆನ್ನಿಗೆ ನಿಂತವರು ‘ ಗುಲಾಮ್ ಹೈದರ್…’

1948 ರ ಮಜಬೂರ್ ಸಿನೆಮಾದ ‘ ದಿಲ್ ಮೆರಾ ತೋಡಾ, ಕಹೀಕಾ ನ ಚೋಡಾ…’ ಹಾಡು ಸೃಷ್ಟಿಸಿದ ಅಲೆ, ನಂತರ ‘ ಆಯೆಗಾ ಆನೇವಾಲಾ’ , ‘ ಅಜೀಬ್ ದಾಸ್ತಾ ಹೈ ಯೇ…’ ‘ ಮೊಹೆ ಭೂಲ್ ಗಯೇ ಸಾವರಿಯಾ.. ಹೀಗೇ ಎಲ್ಲಾ ತಾರೆಯರ ಹಿಂದಿನ ಧ್ವನಿಯಾಗಿ ಹೊಮ್ಮಿದ ಲತಾ, 1963 ರಲ್ಲಿ ಜವಹಾರ್ ಲಾಲ್ ನೆಹರು ಉಪಸ್ಥಿತಿಯಲ್ಲಿ ಹಾಡಿದ ‘ ಹೇ ಮೇರೆ ವತನ್ ಕೆ ಲೋಗೋ…’ ಹಾಡಿಗೆ ಖುದ್ದು ಜವಹರಲಾಲ್ ಕಣ್ಣೀರಾದರು.

36 ಭಾಷೆಗಳಲ್ಲಿ 50000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಲತಾ ಪಡೆದಿರುವ ಮನ್ನಣೆಗಳ ಲೆಕ್ಕವಿಲ್ಲ.

2001 ರಲ್ಲಿ ಭಾರತರತ್ನದದಂತ ಪ್ರತಿಷ್ಠಿತ ಸ್ಥಾನವೂ ಇವರ ಮುಡಿಗೇರಿತು. ವಿದೇಶಗಳಿಂದಲೂ ಹಲವಾರು ಪ್ರಶಸ್ತಿಗಳಿಗೆ ಭಾಜನರಾದರು.

ಆದರೆ ಪ್ರತೀ ಬಾರಿ ಲತಾ ಅವರಿಗೆ ಎದುರಾಗುವ ಮತ್ತು ನೇರವಾಗಿ ಲತಾ ಉತ್ತರಿಸದ ಪ್ರಶ್ನೆ ಅವರ ಮದುವೆ ಬಗ್ಗೆ.

ಆದರೆ ಹೀಗೆ ಬದುಕಿದ ಲತಾ ಅವರ ವೈಯುಕ್ತಿಕ ಬದುಕು ಅತ್ಯುನ್ನತವೇ , ಉದ್ಘರಿಸುವಂಥದ್ದೇ, ನಮ್ಮ ಕಲ್ಪನೆಯಾಚೆಗಿನದ್ದೇ.

ನಮ್ಮಲ್ಲಿ ಮದುವೆ ಎಂದರೆ ಕೋಟಿಗಟ್ಟಲೇ ಸುರಿದು , ದೊಡ್ಡ ಚೌಲ್ಟ್ರಿ , ಸಾವಿರಾರು ರೀತಿ ಭೋಜನಗಳು ಇಂಥವೇ ಕಣ್ಮುಂದೆ ಸುಳಿಯುತ್ತವೆ. ಆದರೆ ಲೌಕಿಕ ಬದುಕಿನಾಚೆ ಮಾನಸಿಕ ಬಂಧನದಲ್ಲಿ ಸದಾ ಜೊತೆ ಸಾಗಿದ ಲತಾ- ರಾಜಾ ಸಿಂಗ್ ಬದುಕು, ರಾಜಾ ಸಿಂಗ್ ಅವರು ತಮ್ಮ ತಂದೆಗೆ ಕೊಟ್ಟ ಮಾತಿಗಾಗಿ ಇಬ್ಬರೂ ಕೊನೆಯವರೆಗೂ ಪರಸ್ಪರಿಗಾಗಿ ಮದುವೆಯಿಲ್ಲದೇ ಉಳಿದರು.

ಲತಾರ ತಮ್ಮ ಹೃದಯನಾಥ್ ಅವರ ಸ್ನೇಹಿತ ರಾಜ್ ಸಿಂಗ್ ದಂಗಾರ್ಪುರ್ ಮುಂಬೈಗೆ ಲಾ ಓದಲು ಬಂದಾಗ ಹೃದಯನಾಥ್ ರಾಜ್ ಸಿಂಗ್ ಅವರನ್ನು ತಮ್ಮ ಮನಗೆ ಟೀಗಾಗಿ ಆಹ್ವಾನಿಸುತ್ತಾರೆ. ಈ ವೇಳೆ ಲತಾ ಅವರ ಭೇಟಿಯಾಗುತ್ತದೆ. ಮೊದಲ ಭೇಟಿಯಿಂದಲೇ ಆಳವಾಗುತ್ತಾ ಸಾಗುವ ಇಬ್ಬರ ಪರಿಚಯ ಗಹನವಾಗುತ್ತಲೇ ಹೋಗುತ್ತದೆ. ಇಬ್ಬರಿಗೂ ಒಂದಾಗಬೇಕು ಎಂಬ ಬಲವಾದ ಇಚ್ಛೆ ಇತ್ತು. ಈ ವಿಷಯ ತಿಳಿದ ರಾಜ್ ಸಿಂಗ್ ಅವರ ತಂದೆ ದುಂಗಾರ್ಪುರ್ ಮಹರಾಜ ಸಾಮಾನ್ಯ ವರ್ಗದ ಮನೆಯಿಂದ ಮದುವೆಯಾಗಬಾರದು ಎಂಬುದಾಗಿ ರಾಜ್ ಇವರಿಂದ ಎಂದು ಮಾತು ಪಡೆಯುತ್ತಾರೆ.

ರಾಜ ವಂಶಸ್ಥರಾದ ರಾಜ್ ಸಿಂಗ್ ಅವರ ಸಾಧನೆಯೂ ತಿರುಗಿ ನೋಡುವಂಥದ್ದೇ. ಭಾರತೀಯ ಕ್ರಿಕೆಟ್ ನಲ್ಲಿ ಅಚ್ಚಳಿಯದ ಛಾಪು ಮೂಡಿಸಿದವರು. ರಾಜ ವಂಶಸ್ಥರಾದ ಅವರಿಗೆ ಮತ್ತೊಂದು ಮಗದೊಂದು ದಾರಿ ಹುಡುಕಿಕೊಳ್ಳೂವುದೇನೂ ದೊಡ್ಡ ವಿಷಯವಾಗರಲಿಲ್ಲ. ತಂದೆಗೆ ಮಾತು ಕೊಟ್ಟ ಕಾರಣಕ್ಕಾಗಿ ತಂದೆಗೂ ಬದ್ದರಾಗಿ ತಮ್ಮ ಮನದ ಬಲವಾದ ಇಚ್ಛೆಗೂ ದಾರಿ ಕಂಡುಕೊಂಡರು. ಈ ಒಂದು ಕಾರಣಕ್ಕಾಗಿ ಇಬ್ಬರೂ ಜೀವನ ಪೂರ್ತಿ ಒಬ್ಬರಿಗಾಗಿ ಒಬ್ಬರು ಬದುಕು ಮದುವೆಯೇ ಇಲ್ಲದೆ ಬದುಕುತ್ತಾರೆ.

ರಾಜ್ ಸಿಂಗ್ ಮತ್ತು ಲತಾ ಇವರ ಬದುಕಿನ ಹಂದರ ಬೆಸೆದ ರೀತಿ ಓದುತ್ತಿದ್ದರೆ ಒಂದು ಕಂಪು ಹರಡುತ್ತದೆ. ಲತಾ ರಾಜ್ ಸಿಂಗ್ ಅವರ ಕ್ರಿಕೇಟ್ ಜೀವನ ಪ್ರೋತ್ಸಾಹಿಸಿದರೆ, ರಾಜ್ ಸಿಂಗ್ ಲತಾ ಅವರ ಬದುಕಿನುದ್ದಕ್ಕೂ ಸಾಗುತ್ತಾರೆ. ಲತಾ ರಾಜ್ ಸಿಂಗ್ ಅವರ ಭೇಟಿಯ ದಾಖಲರ್ಹ ಗಳಿಗೆಗಳ ಬಗ್ಗೆ ರಾಜ್ ಸಿಂಗ್ ಅವರ ಬಯೋಗ್ರಫಿ ಸೊಗಸಾಗಿ ಉಲ್ಲೇಖಿಸಿದೆ.

50000 ಸಾವಿರಕ್ಕೂ ಹೆಚ್ವು ಹಾಡುಗಳು, ಹಿಂದಿ ಒಂದೇ ಭಾಷೆಯಲ್ಲಿ ಸಾವಿರಕ್ಕೂ ಹೆಚ್ಚು ಸಿನೆಮಾಗಳಿಗೆ ಹಾಡಿದ ಲತಾ ಹಲವಾರು ನಿರ್ದೇಶಕರೊಂದಿಗೆ ವರ್ಷಗಟ್ಟಲೇ ಕೆಲಸ ಮಾಡುವಾಗ ಹಲವರೊಂದಿಗೆ ಹೆಸರು ತಳುಕು ಹಾಕಿದ ಬಗ್ಗೆ ವದಂತಿಗಳೆದ್ದರೂ , ತನ್ನ ತಂದೆಗೆ ಕೊಟ್ಟ ಮಾತಿಗಾಗಿ ಬದುಕು ಪೂರ್ತಿ ಇಬ್ಬರೂ ಮದುವೆಯೇ ಇಲ್ಲದೇ ರಾಜ್ ಸಿಂಗ್ ಲತಾ ಹಾಗೇ ಒಟ್ಟಿಗ ಬದುಕಿದ ರೀತಿ ಅತ್ಯದ್ಬುತ ಎನಿಸುವುದು. ಇಂಥ ವಿಶಿಷ್ಟ ಬದುಕಿನ ರೀತಿ ಬಗ್ಗೆ ಹಲವು ಪುಸ್ತಕಗಳ ಉಲ್ಲೇಖ ಗಮನಿಸಿದಾಗ, ಇವರಿಬ್ಬರ ಮಧ್ಯದ ಬದುಕಿನ‌ ಚಿತ್ರಣ , ಭೇಟಿಯ ಕ್ಷಣಗಳು ಒಂದು ರೀತಿಯ ತನ್ಮಯತೆಗೆ ನೂಕುವುದಲ್ಲದೇ, ಇಂಥ
ಒಂದು ಸಾಧ್ಯತೆಯೇ ಒಂದು ರೀತಿಯ ಅಗಾಧ ಭಾವ ಮೂಡಿಸುವುದು.

ಒಂದು ಭಾವ ಬೆಸೆದ ಗಳಿಗೆ ಬದುಕು ಪೂರ್ತಿ ಚಿರಂತನವಾಗಿ ಸಾಗಿದ ಪರಿ ಲತಾ ಮತ್ತು ರಾಜ್ ಸಿಂಗ್ ಬಗ್ಗೆ ಇನ್ನಷ್ಟು ಮತ್ತು ಮತ್ತಷ್ಟು ಗೌರವ ಹೆಚ್ಚಿಸಿತ್ತದೆ.

ದೀಪಕ್ ಬಗೈರ್ ಕೈಸೇ

ಪರವಾನೇ ಜಲ್ ರಹೇ ಹೈ…

ಆಯೆಗಾ ಆನೇವಾಲಾ…

ಹಾಡು ಸಿಸ್ಟಮ್ ನಿಂದ ಹಿತವಾಗಿ ಹೊಮ್ಮುತ್ತಿತ್ತು. ಬೆಳದಿಂಗಳಲ್ಲಿ ತೊಯ್ದ ರಸ್ತೆ, ಮುಂಜಾವು ಮೂರು ಮುಕ್ಕಾಲು , ರಾಜ್ ಸಿಂಗ್ ನಕ್ಷತ್ರವಾಗಿ ಲತಾರನ್ನು ದಿಟ್ಟಿಸಿತ್ತಿರಬಹುದೇ ಎನಿಸಿತು.