ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನನ್ನ ಕವಿತೆಗಳಿಗೊಂದಷ್ಟು ಜಾಗ ನೀಡಿ

ಜಬೀವುಲ್ಲಾ ಎಂ. ಅಸದ್
ಇತ್ತೀಚಿನ ಬರಹಗಳು: ಜಬೀವುಲ್ಲಾ ಎಂ. ಅಸದ್ (ಎಲ್ಲವನ್ನು ಓದಿ)

ನನ್ನ ಕವಿತೆಗಳಿಗೊಂದಷ್ಟು
ಜಾಗ ನೀಡಿ
ನಿಮ್ಮ ಮನದ ಅಲಮಾರಿನಲ್ಲಿ
ಪ್ರೀತಿ ಕರುಣಿಸದಿದ್ದರೂ ಸರಿಯೇ
ಜಾಡಿಸಿ ಹೊರ ಹಾಕದಿರಿ

ಅವು ಕಂಡ ಸತ್ಯವನ್ನೇ ನುಡಿದಿವೆ
ನ್ಯಾಯದ ಪರವಾಗಿಯೇ ನಿಂತಿವೆ
ಶೋಷಣೆಯ ವಿರುದ್ಧವೇ ಸಿಡಿದೆದ್ದಿವೆ
ಪ್ರಶ್ನಿಸುತ್ತಲೇ ಗುಡುಗಿವೆ
ಉತ್ತರಿಸುತ್ತಲೇ ನಡೆದಿವೆ
ಒಲಿದಿವೆ, ಮಿತಿಮೀರಿವೆ
ತಡವರಿಸಿವೆ, ತಲ್ಲಣಿಸಿವೆ
ಅಲೆಮಾರಿ ಫಕೀರನಂತೆ
ಹೆಜ್ಜೆ ಹಾಕಿವೆ…

ಚಲಿಸುವ ಕಾಲಕ್ಕೆ ಹೆಗಲಾಗಿ
ನಾಳೆಗಳ ಭವಿಷ್ಯತ್ತಿಗೆ ಬೆಳಕಾಗಿ
ಭರವಸೆಯಲಿ ಉತ್ತು
ಕನಸುಗಳ ಬಿತ್ತು
ನಗುವಾಗ ನಕ್ಕು
ಅಳುವಾಗ ಅತ್ತು
ಸಹಕರಿಸಿವೆ…

ನೋವಿಗೆ ಮಿಡಿದು
ನಲಿವಿಗೆ ತುಡಿದು
ಭಾವಗಳಿಗೆ ಮಣಿದು
ಸದ್ದು ಮಾಡಿವೆ
ಸದ್ದಿಲ್ಲದೆ ಮಲಗಿವೆ
ಬುಸುಗುಟ್ಟಿವೆ, ಬಯಲಾಗಿವೆ
ಎಲ್ಲವೂ ಆಗಿ,
ಏನೂ ಅಲ್ಲದೆ ಉಳಿದಿವೆ
ನನ್ನ ಮನದ ಕನ್ನಡಿಯ
ಪ್ರತಿಬಿಂಬಗಳಾಗಿ
ನಿಮ್ಮವೇ ಕವಿತೆಗಳಾಗಿ…

ಅವುಗಳಿಗೊಂದಷ್ಟು
ಜಾಗ ನೀಡಿ
ನಿಮ್ಮ ಮನದ ಅಲಮಾರಿನಲ್ಲಿ