ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನನ್ನಲ್ಲೊಂದು ಕಡಲು

ರಾಮ್‌ ಕುಮಾರ್‌ ಡಿ.ಟಿ.
ಇತ್ತೀಚಿನ ಬರಹಗಳು: ರಾಮ್‌ ಕುಮಾರ್‌ ಡಿ.ಟಿ. (ಎಲ್ಲವನ್ನು ಓದಿ)

ಕಣ್ಣಿಲ್ಲದ ಕಡಲ ಅಲೆಗೆ
ದಾರಿ ತೋರಿದವರಾರು
ನಾ ಮುಂದೆ, ತಾ ಮುಂದೆಂದು
ಕಡಲ ಬಣ್ಣಿಸ ಹೊರಟ ಅಲೆಗಳಬ್ಬರ
ಬರೀ ದಡಕ್ಕೆ ಸೀಮಿತವೇ!
ನನ್ನ ಎದೆಯಲ್ಲೊಂದು ಕಡಲಿದೆ
ಆದರಲ್ಲಿರುವ ಅಲೆಗಳಿಗೆ
ದಡವ ಸೇರುವ ಹಂಗಿಲ್ಲ
ಎಲ್ಲೊ ಮುಟ್ಟುವ ತವಕವೊಂತು
ಮೊದಲೇ ಇಲ್ಲ.
ಎದೆಯ ನಾಲ್ಕು
ಗೋಡೆಗಳಿಗೂ ಹಿಡಿಯಲಾಗದ ಅಲೆಗಳವು.
ಅದೆಂತಹ ಅಲೆಗಳವು
ಅದೇ ಕಡಲು, ಅದೇ ಅಲೆಗಳು
ನನ್ನೊಳಗೆ ಹೊಕ್ಕಿದೊಡನಷ್ಟೆ
ತನ್ನ ಸತ್ವವನ್ನೇ ಪರೀಕ್ಷಿಸುವ ತವಕ!

ಅದೆಂತಹ ಅಲೆಗಳವು
ನನ್ನಲ್ಲೇಕೆ ಮನೆ ಮಾಡಿದವು
ತೋಚದೆ ಅವಕೆ ದಿಕ್ಕೆಂಬುದು
ನನ್ನಲ್ಲೇನು ಹುಡುಕುತಿವೆಯೆಂಬ ಪ್ರಶ್ನೆಗೆ
ಏನೂ ತೋಚದೆ ಕಡಲ ತೀರದಲಿ ಕುಳಿತ
ನಾನು ಮತ್ತು ನನ್ನ ಅಳಲು.
ಹೇಳಿತಾಗ ನನ್ನೊಳ
ಅಲೆಯೊಂದು …
‘ನಾನೇ ಆ ಕಡಲು
ನನ್ನನೇ ಹುಡುಕುತಿರುವ
ನನ್ನ ಕಡಲು’.